Friday, October 28, 2011

ಆತ್ಮೀಯ ಬ್ಲಾಗ್ ಗೆಳೆಯರೆ,

ಆತ್ಮೀಯ ಬ್ಲಾಗ್ ಗೆಳೆಯರೆ,

ನನ್ನ ಫೋಟೊಗ್ರಫಿ ಲೇಖನ ಹತ್ತು ಬರಹಕ್ಕೆ ಬಂದ ಪ್ರತಿಕ್ರಿಯೆಗಳ ಬಗ್ಗೆ ನಿಮಗೆ ಕೆಲವೊಂದು ಸ್ಪಷ್ಟವಾದ ವಿಚಾರಗಳನ್ನು ತಿಳಿಸಬೇಕಿದೆ.

ಮೊದಲಿಗೆ ನಾನು ಲೇಖನದ ವಿಚಾರವಾಗಿ ಅನೇಕ ಊರುಗಳ ಹೆಸರುಗಳನ್ನು ಬರೆದು ಅಲ್ಲಿರುವವರಿಗೆ ಇಂಗ್ಲೀಷ್ ಬರುವುದಿಲ್ಲವೆಂದು ಬರೆದಿರುವ ಪ್ರತಿಕ್ರಿಯೆಯ ಬಗ್ಗೆ. ನಾನು ಅನೇಕ ಊರುಗಳ ಹೆಸರನ್ನು ಬರೆದು ಅಲ್ಲಿರುವವರಿಗೆ ಇಂಗ್ಲೀಷ್ ಬರುವುದಿಲ್ಲವೆಂದು ಬರೆದಿದ್ದರ ಹಿಂದೆ ಯಾರನ್ನು ಅವಮಾನಿಸಬೇಕು ಅಂತ ಆಗಲಿ ಖಂಡಿತ ಇಲ್ಲ. ಅದು ಆತುರದಲ್ಲಿ ಬರೆದ ಒಂದು ಪ್ರತಿಕ್ರಿಯೆ. ಹಾಗೆ ಬರೆದಿದ್ದಕ್ಕಾಗಿ ನಾನು ಹೆಸರಿಸಿದ ಊರಿನ ಪ್ರತಿಯೊಬ್ಬರ ಬಳಿ ಈ ಮೂಲಕ ಕ್ಷಮೆಯಾಚಿಸುತ್ತೇನೆ.

ಇದು ನಾನು ಆತುರದಲ್ಲಿ ಬರೆದ ಪ್ರತಿಕ್ರಿಯೆ ಎನ್ನುವುದು ಇದನ್ನು ಓದುತ್ತಾ ಹೋದಂತೆ ನಿಮ್ಮ ಅರಿವಿಗೆ ಬರುತ್ತದೆ.

ನಾನು ಕಳೆದ ನಾಲ್ಕು ವರ್ಷಗಳಿಂದ ಬ್ಲಾಗ್ ಬರೆಯುತ್ತಿದ್ದೇನೆ. ನಾನು ಬರೆಯುವ ಲೇಖನಗಳು ನನ್ನ ಖುಷಿಗೆ ಸಂತೋಷಕ್ಕೆ. ಅದಕ್ಕೆ ಬಜ್ ನಲ್ಲಿ ಬ್ಲಾಗಿನಲ್ಲಿ ಹಾಕಿ ನಿಮ್ಮೊಂದಿಗೆ ಹಂಚಿಕೊಂಡಾಗ ಸಿಗುವ ಪ್ರತಿಕ್ರಿಯೆಗಳಿಂದಾಗಿ ಮತ್ತಷ್ಟು ಬರೆಯಲು ಸ್ಪೂರ್ತಿ ಸಿಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದೇ ರೀತಿ ಫೋಟೊಗ್ರಫಿ ಲೇಖನಗಳನ್ನು ನನ್ನ ಖುಷಿಗಾಗಿಯೇ ಬರೆಯುತ್ತಿದ್ದೇನೆ ಅಷ್ಟೆ.

ಹಾಗೆ ಈ "ಕಲಾತ್ಮಕ ಫೋಟೊಗ್ರಫಿ ಓದುವುದು ಹೇಗೆ" ಲೇಖನವನ್ನು ನಾನು ಕಲಿತ ಪುಟ್ಟ ಫೋಟೊಗ್ರಫಿ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಲುವಾಗಿ ಮಾತ್ರವೇ ಬ್ಲಾಗಿಗೆ ಮತ್ತು ಬಜ್‍ಗೆ ಹಾಕಿದ್ದು. ಎಂದಿನಂತೆ ನನ್ನ ಬ್ಲಾಗ್ ಗೆಳೆಯರು ಅದನ್ನು ಓದಿದರು. ಹೆಬ್ಬಾರರು, ನನ್ನ ಲೇಖನಕ್ಕೆ ಒಂದು ಕಾಮೆಂಟು ಹಾಕಿದರು. ಮಾನವ ಕಟ್ಟಿದ ಮನೆ ಇತ್ಯಾದಿಗಳಿದ್ದಲ್ಲಿ ಅದು ಲ್ಯಾಂಡ್ ಸ್ಕೇಪ್ ಆಗೊಲ್ಲವೆಂದು ಪ್ರತಿಕ್ರಿಯಿಸಿದರು. ಇಲ್ಲಿ ಒಂದು ವಿಷಯವನ್ನು ಸ್ಪಷ್ಟಪಡಿಸಬೇಕು. ಈ ಲೇಖನ ಪೂರ್ತಿಯಾಗಿ ಪಿಕ್ಟೋರಿಯಲ್ ಫೋಟೊಗ್ರಫಿಗೆ ಸಂಭಂದಿಸಿದ್ದು. ಮತ್ತೆ ನನ್ನ ಅನುಭವಕ್ಕೆ ಸಂಭಂದಿಸಿದ್ದು ಮಾತ್ರ. ಅವರು ಅಷ್ಟಕ್ಕೆ ಸೀಮಿತವಾದ ವಿಚಾರವನ್ನು ತೆರೆದಿಟ್ಟಿದ್ದರೆ ಅದಕ್ಕೆ ತಕ್ಕಂತೆ ಪ್ರತಿಕ್ರಿಯೆಯನ್ನು ನೀಡಿದ್ದರೆ ಇಷ್ಟೆಲ್ಲಾ ಅವಾಂತರಗಳಾಗುತ್ತಿರಲಿಲ್ಲ. ನನ್ನ ಲೇಖನ ಅದ್ಬುತವಾಗಿದೆಯೆಂದು ನಾನೆಲ್ಲಿಯೂ ಹೇಳುವುದಿಲ್ಲ. ಅದರಲ್ಲಿರುವ ವಿಚಾರ ಚರ್ಚೆಗೆ ಒಳಪಟ್ಟರೆ ನಾನು ಸೇರಿದಂತೆ ಅನೇಕರಿಗೆ ಹೊಸತನ್ನು ತಿಳಿದುಕೊಳ್ಳುವ ಅವಕಾಶ ಅಂತ ಪ್ರತಿಭಾರಿಯೂ ಅಂದುಕೊಳ್ಳುತ್ತೇನೆ. ಹೀಗಿರುವಾಗ ಅವರು ಪಿಕ್ಟೋರಿಯಲ್ ವಿಚಾರವಾಗಿ ತಿಳಿಸದೆ ಲ್ಯಾಂಡ್ ಸ್ಕೇಪ್ ಬಗ್ಗೆ ತಿಳಿಸಿ ನಾನು ಹೇಳಿದ್ದು ಲ್ಯಾಂಡ್ ಸ್ಕೇಪ್ ಅಲ್ಲವೆಂದು ಪ್ರತಿಕ್ರಿಯೆ ನೀಡಿದರು. ಹಾಗೆ ಕಂಪೋಜಿಷನ್ ವಿಚಾರವಾಗಿಯೂ ಕೂಡ. ಆಗ ಅವರ ಪ್ರತಿಕ್ರಿಯೆಗೆ ನಾನು ಅವರದೇ ಅನುಭವವವನ್ನು ನೆನಪಿಸಿ ಉತ್ತರ ನೀಡಿ ನಿಮ್ಮ ಅನುಭವವನ್ನು ಕೂಡ ಹಂಚಿಕೊಳ್ಳಿ ಅದಕ್ಕಾಗಿ ನೀವು ಇತ್ತೀಚೆಗೆ ತೆಗೆದ ಫೋಟೊಗಳನ್ನು ಹಾಕಿ ಹಂಚಿಕೊಳ್ಳಿ, ಮತ್ತೆ ಎಲ್ಲರೂ ಇಂಗ್ಲೀಷಿನಲ್ಲಿ ಬರೆಯುತ್ತಾರೆ. ನನಗೆ ಸುಲಭವಾಗಿ ಬರೆಯಲು ಗೊತ್ತಿರುವುದು ಕನ್ನಡ ಮಾತ್ರ, ನೀವು ಬರೆದ ಟಿಪ್ಸುಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಮೂರು ಸಲ ಓದಬೇಕಾಯ್ತು. ಹಾಗೆ ನನ್ನಂತೆ ನೂರಾರು ಸಾವಿರಾರು ಛಾಯಾಗ್ರಾಹಕರಿಗೆ ಇಂಗ್ಲೀಷ್ ಬರುವುದಿಲ್ಲ ಅವರೊಂದಿಗೆ ಈ ವಿಚಾರವನ್ನು ಹಂಚಿಕೊಳ್ಳಲಿಕ್ಕಾಗಿ ಬರೆಯುತ್ತಿದ್ದೇನೆ ಅಂತ ಹೇಳಿ ಕೆಲವು ಊರುಗಳ ಹೆಸರುಗಳನ್ನು ಬರೆದುಬಿಟ್ಟೆ. ಆ ಕ್ಷಣದಲ್ಲಿ ನನ್ನ ನೆನಪಿಗೆ ಬಂದಿದ್ದು ನನ್ನ ಗೆಳೆಯರ ಊರುಗಳು ಆದ್ದರಿಂದ ಆತುರದಲ್ಲಿ ಬರೆದುಬಿಟ್ಟೆನೇ ವಿನ: ಅದರ ಹಿಂದೆ ಯಾವ ಕೆಟ್ಟ ಉದ್ದೇಶವಾಗಲಿ ಅಥವ ಯಾರನ್ನಾದರೂ ಅವಮಾನಿಸಬೇಕೆಂದಾಗಲಿ ಅಲ್ಲ. ಹಳ್ಳಿಯಲ್ಲೇ ಇದ್ದು ಚೆನ್ನಾಗಿ ಓದಿ ಒಳ್ಳೆಯ ಸಾಪ್ಟ್ ವೇರು, ವಿಜ್ಞಾನಿಗಳು, ದೊಡ್ಡ ದೊಡ್ಡ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದುಕೊಂಡು ಹವ್ಯಾಸವಾಗಿ ಫೋಟೊಗ್ರಫಿ ಮಾಡುತ್ತಿರುವವರು, ಚೆನ್ನಾಗಿ ಓದಿ ಹಳ್ಳಿಯಲ್ಲೇ ಕೃಷಿಯನ್ನು ಮಾಡುತ್ತಾ ಅತ್ಯುತ್ತಮ ಇಂಗ್ಲೀಷ್ ಲೇಖನಗಳನ್ನು ಬರೆಯುತ್ತಾ ಫೋಟೊಗ್ರಫಿ ಮಾಡುತ್ತಿರುವವರ ಮೇಲೆ ನನಗೆ ತುಂಬಾ ಗೌರವವಿದೆ. ನಮ್ಮ ಬದುಕಿಗೆ ಅವರೆಲ್ಲಾ ಮಾದರಿಯಾಗಿದ್ದಾರೆ. ಈ ಕಾರಣಕ್ಕೆ ಕಳೆದ ವರ್ಷ ಮುತ್ಮರ್ಡು ಊರು ಮತ್ತು ಊರಿನ ಹಿರಿಯ ಸಾಧಕರ ಬಗ್ಗೆ ನನ್ನ ಬ್ಲಾಗಿನಲ್ಲಿ ಲೇಖನವನ್ನು ಬರೆದಿದ್ದೇನೆ. ಆದ್ರೆ ಸತ್ಯ ಸಂಗತಿಯೆಂದರೆ ಈಗಲೂ ನಮ್ಮ ಬೆಂಗಳೂರಿನಲ್ಲಿಯೇ ಇಂಗ್ಲೀಷ್ ಬರದ ನೂರಾರು ಛಾಯಾಗ್ರಾಹಕರಿದ್ದಾರೆ, ಅದೇ ರೀತಿ ಕರ್ನಾಟಕದಾದ್ಯಂತ ಇರುವ ಸಾವಿರಾರು ಛಾಯಾಗ್ರಾಹಕರಲ್ಲಿ ನಾಲ್ಕು ಜನರಿಗೆ ಇಂಗ್ಲೀಷ್ ಬಂದರೆ ಇನ್ನೂ ನಲವತ್ತು ಜನರಿಗೆ ಇಂಗ್ಲೀಷ್ ಬರುವುದಿಲ್ಲವೆನ್ನುವುದು ಸತ್ಯಸಂಗತಿ. ನಾನು ಈ ಗುಂಪಿನಲ್ಲಿ ಒಬ್ಬನಾಗಿದ್ದು ಆ ಕ್ಷಣದಲ್ಲಿ ನನ್ನ ಅಲೋಚನೆಯೂ ಅದೇ ಆಗಿದ್ದರಿಂದ ಹಾಗೆ ಉತ್ತರಿಸಿದ್ದು ಬಿಟ್ಟರೆ ಇದರ ಹಿಂದೆ ಇನ್ಯಾವ ಕೆಟ್ಟ ಉದ್ದೇಶವು ಇರಲಿಲ್ಲ. ಇದೇ ಸಮಯಕ್ಕೆ ಹೆಬ್ಬಾರರು ತಮ್ಮ ಫೋಟೊಗ್ರಫಿ ಅನುಭವವನ್ನು ಹಂಚಿಕೊಳ್ಳುವ ಬದಲು "ಹಳ್ಳಿಜನರಿಗೆ ಇಂಗ್ಲೀಷ್ ಬರುವುದಿಲ್ಲವೆಂದು ಏಕೆ ಅಂದುಕೊಳ್ಳುತ್ತಿ" ನಿನಗೊಬ್ಬನಿಗೆ ಅರ್ಥವಾಯಿತಲ್ಲ ಅಷ್ಟು ಸಾಕು" ಅಂತ ವಿಷಯವನ್ನು ತಿರುಗಿಸಿದರಲ್ಲ. ಅಲ್ಲಿಗೆ ಇಡೀ ಫೋಟೊಗ್ರಫಿ ಲೇಖನದ ಅಭಿಪ್ರಾಯಗಳಿಗೆ ತಿರುವುಗಳು ಬಂದುಬಿಟ್ಟಿತ್ತು. ನಾನು ಹೆಸರಿಸಿದ್ದ ಊರುಗಳಲ್ಲಿರುವ ಗೆಳೆಯರಿಗೆ ಸಹಜವಾಗಿ ಈ ವಿಚಾರವಾಗಿ ಅಸಮಧಾನ ಶುರುವಾಗಿತ್ತು. ಒಬ್ಬರು ನಾನು ಬರೆದಿದ್ದು ತಪ್ಪು ಎಂದು ಇಂಗ್ಲೀಷಿನಲ್ಲಿ ಕಾಮೆಂಟ್ ಹಾಕಿದರು. ಅನೇಕರು ಬೇಸರ ಮಾಡಿಕೊಂಡಿದ್ದರು. ಅಷ್ಟರಲ್ಲಿ ಹೆಬ್ಬಾರ್ ಶಿಷ್ಯನೊಬ್ಬ ಅದೆಲ್ಲಿದ್ದನೋ ಬ್ಲಾಗಿಗೆ ಬಂದು ತುಂಬಾ ಕೆಟ್ಟದಾಗಿ ಪೇಜುಗಟ್ಟಲೆ ಕಾಮೆಂಟು ಹಾಕಿದ್ದ. ಅವನು ಏನು ಕೇಳುತಿದ್ದಾನೆ ಅಂತ ಅರ್ಥವಾಗಲಿಲ್ಲ. ಹೆಬ್ಬಾರರಿಗೆ ಅವಮಾನವಾಗಿದೆ ಅಂತ ಬೇರೆ ಹೇಳಿದ್ದ. ಹಾಗೆ ನೋಡಿದರೆ ಅವನು ನನಗೆ ತುಂಬಾ ಗೊತ್ತಿರುವವನೇ. ಬಹುಶಃ ಅವನ ಪ್ರತಿಕ್ರಿಯೆಯಲ್ಲಿನ ವಿಚಾರಗಳನ್ನು ನೋಡಿದಾಗ ಫೋಟೊಗ್ರಫಿ ಸಾಧನೆಯ ವೃತ್ತಿಮತ್ಸರವನ್ನಿಟ್ಟುಕೊಂಡಿದ್ದಾನೆಂದು ತಿಳಿಯಿತು. "ಶಿವು ನನ್ನನ್ನು ಪಿಕ್ಟೋರಿಯಲ್ ಫೋಟೊಗ್ರಫಿಗೆ ಎಲ್ಲಿಗೂ ಕರೆದುಕೊಂಡು ಹೋಗುವುದಿಲ್ಲ" ನನ್ನ ಇತರ ಫೋಟೊಗ್ರಫಿ ಗೆಳೆಯರ ಬಳಿ ಹೇಳಿದ್ದು ನೆನಪಾಗಿ ಅದರ ದ್ವೇಷ ಹೀಗೆ ಹೊರಬಂದಿರಬಹುದು ಅಂದುಕೊಂಡು ಅವನ ಎಲ್ಲಾ ಪ್ರಶ್ನೆಗಳಿಗೂ ಸಮಾಧಾನವಾಗಿಯೇ ಪ್ರತಿಕ್ರಿಯಿಸಿದ್ದೆ. ಇದಾದ ನಂತರ ಹೆಬ್ಬಾರರಿಗೆ ಮೇಲ್ ಮಾಡಿ ನೋಡಿ ಎಂಥ ಕಾಮೆಂಟುಗಳನ್ನು ಹಾಕುತ್ತಿದ್ದಾನೆ ಅಂತ ಕೇಳಿದಾಗ "ಅವನಿಗೆ ಹೇಳಿದ್ದೇನೆ ಈ ವಿಷಯವನ್ನು ಇಲ್ಲಿಗೆ ಬಿಡಿ" ಅಂತ ನನಗೆ ರಿಪ್ಲೆ ಮಾಡಿದರು. ನಾನು ಸುಮ್ಮನಾದೆ. ಅಲ್ಲಿಗೆ ಎಲ್ಲಾ ಮುಗಿಯಿತು ಅಂದುಕೊಳ್ಳುವಷ್ಟರಲ್ಲಿ ಮತ್ತೆ ಹೊಸದೊಂದು ಕಾಮೆಂಟು ಹಾಕಿದ್ದ. ಎರಡನೆ ಭಾರಿ ಹಾಕಿದ ಕಾಮೆಂಟಿನಲ್ಲಿ ಅವನು ಏನು ಬರೆದಿದ್ದಾನೆ ಅಂತ ಅರ್ಥವಾಗಲಿಲ್ಲ. ಅವನು ಫೋಟೊಗ್ರಫಿ ಬಗ್ಗೆ ಮಾತಾಡುತ್ತಿದ್ದಾನೋ, ಅಥವ ನನ್ನ ವಿಚಾರವನ್ನು ಹೇಳುತ್ತಿದ್ದಾನೋ ಗೊತ್ತಾಗಲಿಲ್ಲ ಆದ್ರೆ ಇಡೀ ಪ್ರತಿಕ್ರಿಯೆಯಲ್ಲಿ ಅಸೂಯೆ ಅವರಿಸಿತ್ತು. ಹೆಬ್ಬಾರ್ ಪ್ರತಿಕ್ರಿಯೆ ಪಡೆದೆ ಇದೆಲ್ಲವನ್ನು ಬರೆದಿದ್ದು ಅಂತ ಬೇರೆ ಹೇಳಿದ್ದ. ತಕ್ಷಣ ಹೆಬ್ಬಾರರಿಗೆ ಮತ್ತೊಂದು ಮೇಲ್ ಮಾಡಿ ಇದೆಲ್ಲ ಏನ್ ಸಾರ್? ಅಂದೆ. ಅದಕ್ಕೆ ಅವರು ಉತ್ತರಿಸದೇ ಸುಮ್ಮನಾದರು. ಆಗ ಎಲ್ಲಾ ಗೊತ್ತಾಯಿತು. ಇದೆಲ್ಲಾ ಪಕ್ಕಾ ವ್ಯವಸ್ಥಿತವಾಗಿರುವ ವಿಚಾರವೆಂದು. ಎರಡು ದಿನ ಅವನು ಬರೆದ ಅಸೂಯೆಯನ್ನು ನಮ್ಮ ಬ್ಲಾಗ್ ಗೆಳೆಯರು ಓದಿದರು. ಇವರ ಉದ್ದೇಶವೂ ಅದೇ ಆಗಿತ್ತು ಅನ್ನಿಸುತ್ತೆ. ಯಾಕೋ ತುಂಬಾ ಅವಮಾನವಾದಂತೆ ಆಯಿತು. ಒಂದು ಫೋಟೊಗ್ರಫಿ ಲೇಖನದ ವಿಚಾರ ಅರೋಗ್ಯಪೂರ್ಣ ಚರ್ಚೆಯಾಗುವುದು ಹೀಗೆ ದಾರಿ ತಪ್ಪಿ ನನಗೆ ಈ ಮಟ್ಟಿನ ಅವಮಾನವಾಗುವುದಕ್ಕೆ ಅದಕ್ಕೆ ಮೊದಲು ನನ್ನಿಂದಾದ ತಪ್ಪಿಗೆ ಕಾರಣ ನೀವು, ನನ್ನನ್ನು ಸುಮ್ಮನಿರಿಸಿ ನಿಮ್ಮ ಶಿಷ್ಯ ಬರೆದ ಎರಡನೇ ಪ್ರತಿಕ್ರಿಯೆಯನ್ನು ನೋಡುತ್ತಾ ಎಂಜಾಯ್ ಮಾಡಿದ್ರಿ" ಇದರಿಂದ ನನಗೆ ಅವಮಾನವಾಗಿದೆ. ನನ್ನ ಬರಹ ಮತ್ತು ಲೇಖನಗಳು ಪರೋಕ್ಷವಾಗಿ ಕಳಪೆ ಎನ್ನುವಂತೆ ಮಾತುಗಳು, ಅದಕ್ಕಾಗಿ ನನ್ನೆಲ್ಲಾ ಬಜ್ ಮತ್ತು ಬ್ಲಾಗ್ ಲೇಖನಗಳನ್ನು ಡಿಲಿಟ್ ಮಾಡುತ್ತಿದ್ದೇನೆ. ಇದರಿಂದ ನಿಮಗೆ ತೃಪ್ತಿಯಾದರೆ ಸಾಕು. ನನ್ನೊಳಗೆ ಆತ್ಮಾವಲೋಕನವಾಗಿ ಮತ್ತೆ ನನ್ನ ಬರವಣಿಗೆ ಚೆನ್ನಾಗಿದೆಯೆನಿಸುವವರೆಗೆ ನಾನು ಇಲ್ಲಿ ಬರೆಯುವುದಿಲ್ಲ." ಅಂತ ಒಂದು ದೀರ್ಘವಾದ್ ಪತ್ರವನ್ನು ಬರೆದು ಅವರಿಗೆ ಮೇಲ್ ಮಾಡಿ ನನ್ನಲ್ಲಾ ಬಜ್ ಮತ್ತು ಬ್ಲಾಗಿನ ಒಂದು ವರ್ಷದ ಲೇಖನಗಳನ್ನು ಡಿಲಿಟ್ ಮಾಡಿದ್ದೆ. ಅವರಿಂದ ಇನ್ನೂ ಉತ್ತರ ಬರಲಿಲ್ಲ.

ಮೂರು ದಿನ ಕಳೆಯಿತು. ಯಾವುದೇ ಕಾರಣಕ್ಕೆ ಗೆಳೆಯರೊಬ್ಬರಿಗೆ ಫೋನ್ ಮಾಡಿ ಸಹಜವಾಗಿ ಮಾತಾಡುವಾಗ ಪ್ರತಿಕ್ರಿಯೆಯಲ್ಲಿ ಬರೆದ ಊರುಗಳ ವಿಚಾರವಾಗಿ ತುಂಬಾ ಜನರು ಬೇಜಾರು ಮಾಡಿಕೊಂಡಿದ್ದಾರೆ ಅಂದಾಗ ಅವರಿಗೆ ಇದೆಲ್ಲವನ್ನು ವಿವರಿಸಿ ಹೇಳಿ ಸಾರಿ ಕೇಳಿದೆ. ಅವರು ಅರ್ಥಮಾಡಿಕೊಂಡರು. ಆದರೆ ಮರುಕ್ಷಣದಲ್ಲಿ ಇದು ಎಲ್ಲರ ಮನಸ್ಸಲ್ಲಿ ಎಷ್ಟು ಗಾಢವಾಗಿ ಅವರಿಗೆ ಬೇಸರ ತಂದಿರಬಹುದು ಅಂತ ಅಂದುಕೊಂಡಾಗ ಆತುರದಲ್ಲಿ ಮಾಡಿದ ತಪ್ಪು ನನ್ನನ್ನು ಕಾಡತೊಡಗಿತು. ಇನ್ನು ಸುಮ್ಮನಿರಲಾಗಲಿಲ್ಲ. ಮತ್ತೆ ಎಲ್ಲರಿಗೂ ಫೋನ್ ಮಾಡಿ ಇದೆಲ್ಲವನ್ನು ಅರ್ಥಮಾಡಿಸಲು ಸಾಧ್ಯವಿಲ್ಲವಲ್ಲ. ಅದಕ್ಕೆ ನೇರವಾಗಿ ಎಲ್ಲಿ ಆ ಪ್ರತಿಕ್ರಿಯೆಯನ್ನು ಬರೆದಿದ್ದೆನೋ ಅಲ್ಲಿಯೇ ಕ್ಷಮೆಯಾಚಿಸುವುದು ಒಳ್ಳೆಯದು ಅಂದುಕೊಂಡು ಇದೆಲ್ಲವನ್ನು ಬರೆದಿದ್ದೇನೆ. ಇದೆಲ್ಲ ಆಗಿರುವ ಸಂಗತಿ. ಇದೆಲ್ಲವನ್ನು ಬರೆಯುವ ಮೂಲಕ ನನ್ನೊಳಗಿನ ದುಗಡವನ್ನು ಹೊರಹಾಕಿದ್ದೇನೆ. ಹಾಗೆ ಇದಿಷ್ಟನ್ನು ವಿವರಿಸದಿದ್ದಲ್ಲಿ ಮತ್ತೆ ಈ ವಿಚಾರ ಬೇರೆ ಅರ್ಥವನ್ನು ಪಡೆದುಕೊಳ್ಳುವ ಅವಕಾಶವಿರುವುದರಿಂದ ಇದೆಲ್ಲ ಬರೆಯಬೇಕಾಯಿತು. ಹಾಗೆ ಯಾರಮೇಲು ತಪ್ಪು ಹೊರಿಸುತಿಲ್ಲ. ನನ್ನೊಳಗೆ ಆಗಿರುವ ತಪ್ಪುಗಳು ಕಾಡತೊಡಗಿದರಿಂದ ಇದೆಲ್ಲವನ್ನು ಬರೆಯಬೇಕಾಯ್ತು. ಮುಂದೆ ಇದನ್ನು ಮತ್ತೆ ಮುಂದುವರಿಸಿಕೊಂಡು ಹೋಗಲು ನನಗಿಷ್ಟವಿಲ್ಲ. ಈ ಲೇಖನದಿಂದ ಯಾರಿಗಾದರೂ ಬೇಸರವಾದಲ್ಲಿ ಅದಕ್ಕೂ ಮೊದಲೇ ಕ್ಷಮೆ ಕೇಳಿಬಿಡುತ್ತೇನೆ.

ಪ್ರೀತಿಯಿಂದ..

ಶಿವು.ಕೆ

Thursday, October 13, 2011

ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ


   
     ಛಾಯಾಸಕ್ತರೇ ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ

    ನೆನ್ನೆಯಿಂದ ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ  ಛಾಯಾ ವಿಶಿಷ್ಟ ಎನ್ನುವ ಅದ್ಬುತ ಛಾಯಚಿತ್ರ ಪ್ರದರ್ಶನ ಪ್ರಾರಂಭವಾಗಿದೆ.  ಇದು ಅಂತಿಂತ ಛಾಯಾಚಿತ್ರಗಳ ಪ್ರದರ್ಶನವಲ್ಲ. ಕಲಾತ್ಮಕ ಛಾಯಾಗ್ರಾಹಣದಲ್ಲಿ ಮಾಸ್ಟರ್ ಮತ್ತು ಫಿಲೋಶಿಫ್ ಪಡೆದ ಕರ್ನಾಟಕದ ಎಂಟು ಜನ ಸಾಧಕರ ಛಾಯಾಚಿತ್ರಗಳನ್ನು ನೋಡುವ ಅವಕಾಶ.  ಈ ಕಲಾತ್ಮಕ ಛಾಯಾಗ್ರಹಣದಲ್ಲಿ  ಲಂಡನ್ನಿನ "ರಾಯಲ್ ಫೋಟೊಗ್ರಫಿ ಸೊಸೈಟಿ" ಯವರು ARPS ಮತ್ತು FRPS ಎನ್ನುವ ಎರಡು ಅತ್ಯುನ್ನತ ಮನ್ನಣೆಗಳನ್ನು ನೀಡುತ್ತಾರೆ.  ಅದೇ ರೀತಿ ಪ್ಯಾರಿಸ್ಸಿನ "ಫೆಡರೇಷನ್ ಇಂಟರ್ ನ್ಯಾಷನಲ್ ಡಿ ಲ ಅರ್ಟ್ ಫೋಟೊಗ್ರಫಿಕ್" AFIAP, EFIAP, MFIAP ಎನ್ನುವ ಮನ್ನಣೆಯಗಳನ್ನು ನೀಡುತ್ತಾರೆ.  ಮತ್ತೊಂದು "ಅಮೇರಿಕನ್ ಫೋಟೊಗ್ರಫಿಕ್ ಅಷೋಷಿಯೇಷನ್"  ನೀಡುವ ಸ್ಟಾರ್ ರೇಟಿಂಗ್ ಮನ್ನಣೆ.   ಈ ಮೂರು ಸಂಸ್ಥೆಗಳು ಫೋಟೊಗ್ರಫಿ ಕ್ಷೇತ್ರದಲ್ಲಿ ವಿಶ್ವವಿಖ್ಯಾತವೆನಿಸುವ ಅತ್ಯುನ್ನತ ವಿಶ್ವವಿದ್ಯಾಲಯಗಳು ಇದ್ದಂತೆ. 

          ಲಂಡನ್ನಿನ ರಾಯಲ್ ಫೋಟೊಗ್ರಫಿ ಸೊಸೈಟಿಯವರ "FRPS ಅಥವ "fellowship Rayal photography society"  ಹಾಗೂ ಪ್ಯಾರಿಸ್ಸಿನ "ಫೆಡರೇಷನ್ ಇಂಟರ್ ನ್ಯಾಷನಲ್ ಡಿ ಲ ಅರ್ಟ್ ಫೋಟೊಗ್ರಫಿಕ್"  MFIAP ಅಥವ Master of Federation International De la Art photographic" ಇವೆರಡು ಕಲಾ ಛಾಯಾಗ್ರಹಣ ಕ್ಷೇತ್ರದ ಅತ್ಯುಚ್ಚ ಪ್ರಶಸ್ತಿ ಮತ್ತು ಮನ್ನಣೆಗಳು. ಇಂಥ  ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆಯುವುದು ಸುಲಭವಲ್ಲ.   FRPS ಗಳಿಸುವ ಮೊದಲು ARPS ಗಳಿಸಬೇಕು, ಹಾಗೆ MFIAP ಗಳಿಸುವ ಮೊದಲು EFIAP [Exelense of  Federation International De la Art photographic] ಮನ್ನಣೆ ಗಳಿಸಬೇಕು.  ಅದಕ್ಕೂ ಮೊದಲು AFIAP[Asociateship of  Federation International De la Art photographic] ಪಡೆಯಬೇಕು. ಇವೆಲ್ಲವನ್ನು ಗಳಿಸದೆ ನೇರವಾಗಿ FRPS ಆಗಲಿ MFIAP ಆಗಲಿ ಪಡೆಯಲು ಸಾಧ್ಯವಿಲ್ಲ.  ಶಿಕ್ಷಣ ಕ್ಷೇತ್ರ ಅಥವ ಇನ್ನಿತರ ಕ್ಷೇತ್ರಗಳಲ್ಲಿ ಪಡೆಯುವ ಡಾಕ್ಟರೇಟ್ ನಂತೆ ಈ FRPS ಮತ್ತು MFIAP. ಡಾಕ್ಟ್ರರೇಟುಗಳನ್ನು ನಮ್ಮ ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಶ್ವ ವಿದ್ಯಾಲಯಗಳು ನೀಡಿದರೆ ಮೇಲೆ ವಿವರಿಸಿದ ಫೋಟೊಗ್ರಫಿ ಮನ್ನಣೆಗಳನ್ನು ಪ್ಯಾರಿಸ್, ಲಂಡನ್, ಅಮೇರಿಕಾದ ಈ ವಿಶ್ವವಿದ್ಯಾಲಯದಂತ ಸಂಸ್ಥೆಗಳಿಂದಲೇ ಪಡೆಯಬೇಕು.  ಮತ್ತೆ ಪ್ರತಿಯೊಂದು ದೇಶಗಳಲ್ಲಿ ಸಾವಿರಾರು ಅಥವ ಅದಕ್ಕಿಂತ ಹೆಚ್ಚು ಡಾಕ್ಟರೇಟು ಪಡೆದ ಸಾಧಕರಿದ್ದಾರೆ.  ಆದ್ರೆ ನಮ್ಮ ಭಾರತದಲ್ಲಿ 1943 ರಿಂದ 2011 ರ ಸೆಪ್ಟಂಬರ್ ವರೆಗೆ ಕೇವಲ ಹದಿನೈದು ಜನರು ಮಾತ್ರ ಇಂಥ ಮನ್ನಣೆಗಳನ್ನು ಸಾಧಿಸಿದ್ದಾರೆ.  ಅಂತ ತಿಳಿದಾಗ ಇವುಗಳನ್ನು ಪಡೆಯುವುದು ಎಷ್ಟು ಕಷ್ಟ ಮತ್ತು ಅದರ ಹಿಂದೆ ಎಂಥ ಸಾಧನೆ ಶ್ರಮ ಬೇಕು ಎಂದು ಅರ್ಧೈಸುವುದು ನಿಮಗೆ ಬಿಟ್ಟಿದ್ದು.

              ಮೊದಲಿಗೆ AFIAP ಪಡೆಯಬೇಕಾದರೆ ನಾವು ಹತ್ತಾರು ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಗಳಲ್ಲಿ ನಮ್ಮ ಚಿತ್ರಗಳು ಪ್ರಶಸ್ತಿ ಗಳಿಸಬೇಕು ಅಥವ ಕನಿಷ್ಟ ಪಕ್ಷ ಪ್ರದರ್ಶನಕ್ಕೆ ಆಯ್ಕೆಯಾಗಬೇಕು.  ಇದಕ್ಕಿಂತ ಮೊದಲು ನೂರಾರು ರಾಷ್ಜ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ನಿಮ್ಮ  ಚಿತ್ರಗಳು  ಪ್ರಶಸ್ತಿ ಗಳಿಸಬೇಕು ಅಥವ ಕನಿಷ್ಟ ಪಕ್ಷ ಪ್ರದರ್ಶನಕ್ಕೆ ಆಯ್ಕೆಯಾಗಬೇಕು.   ರಾಷ್ಟ್ರಮಟ್ಟದ ಗುಣಮಟ್ಟ ತಿಳಿಯುವ ಮೊದಲು ರಾಜ್ಯ ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ನಿಮ್ಮ ಆಯ್ಕೆಯಾಗಬೇಕು.


ಹೀಗೆ ಮೇಲಿನಿಂದ ಕೆಳಮುಖವಾಗಿ ವಿವರಿಸಿರುವ ಇಷ್ಟೆಲ್ಲಾ ಹಂತಗಳಲ್ಲಿ ಸ್ಪರ್ಧಿಸಲು Pictorial, Black and white, Nature,  Photo travel, Wild life, Creative, ಹೀಗೆ ಹತ್ತಾರು ವಿಭಾಗಗಳಿವೆ. ಈ  ವಿಭಾಗದಲ್ಲಿ  ಯಾವ ರೀತಿಯ ಚಿತ್ರಗಳಿರಬೇಕು. ಅವುಗಳ ಗುಣಮಟ್ಟ ಹೇಗಿರಬೇಕು, ಈ ಗುಣಮಟ್ಟ ಎಂದರೇನು, ಅದನ್ನು ಅರಿತುಕೊಳ್ಳುವುದು ಹೇಗೆ ಇವೆಲ್ಲವುಗಳ ಹಿನ್ನೆಲೆಯನ್ನು ಒಂದು photo appriciation ಮಾಡುವುದು ಹೇಗೆ? ಇದನ್ನೇ ಕನ್ನಡದಲ್ಲಿ ಫೋಟೊವನ್ನು ಮೆಚ್ಚುವುದು ಎನ್ನುವುದಕ್ಕಿಂತ ಫೋಟೊವನ್ನು ಓದುವುದು ಹೇಗೆ  ಅದರ ವಿಧಿ ವಿಧಾನಗಳೇನು ನಿಯಮಗಳೇನು?  ಹೀಗೆ ಕೆಳಗಿನಿಂದ ಮೇಲಿನ ಅತ್ಯುಚ್ಚ ಅಂತದ ವರೆಗೆ  ಹಂತ ಹಂತವಾಗಿ ತಲುಪುವುದು ಹೇಗೆ ಎನ್ನುವ ಸಂಪೂರ್ಣ ವಿವರಪೂರ್ಣ ವಿಚಾರವನ್ನು ನನ್ನ ಮುಂದಿನ ಫೋಟೊಗ್ರಫಿ ಲೇಖನದಲ್ಲಿ ಬರೆಯುತ್ತೇನೆ.

      ಮತ್ತೆ ಈಗ ನಡೆಯುತ್ತಿರುವ ಸ್ಪರ್ಧೆಗೆ ಬರೋಣ.  ಭಾರತದಾದ್ಯಂತ MFIAP ಮನ್ನಣೆ ಮತ್ತು ಗೌರವ ಪಡೆದಿರುವ 15 ಪ್ರಖ್ಯಾತ ಛಾಯಾಗ್ರಾಹಕರಲ್ಲಿ  ನಮ್ಮ ಕರ್ನಾಟಕದವರೇ 7 ಜನರಿದ್ದಾರೆ ಎನ್ನುವುದು ಹೆಮ್ಮೆಯ ವಿಚಾರ.  ಹಾಗೆ ಭಾರದಾದ್ಯಂತ FRPS ಮನ್ನಣೆ ಮತ್ತು ಗೌರವ ಪಡೆದಿರುವ 27 ಪ್ರಖ್ಯಾತ ಛಾಯಾಗ್ರಾಹಕರಲ್ಲಿ  ನಮ್ಮ ಕರ್ನಾಟಕದವರೇ 13 ಜನರಿದ್ದಾರೆ ಎನ್ನುವುದು ಹೆಮ್ಮೆಯ ಮತ್ತು ಸಂತೋಷದ ವಿಚಾರ.  ನಿನ್ನೆ ಪ್ರಾರಂಭವಾದ ಈ "ಛಾಯಾವಿಶಿಷ್ಟ" ಎನ್ನುವ ಛಾಯಾಚಿತ್ರ ಪ್ರದರ್ಶನದಲ್ಲಿ ಪ್ರದರ್ಶಿತವಾಗುತ್ತಿರುವುದು ಈ ನಮ್ಮ ಕರ್ನಾಟಕದ 13 ಮಹಾನ್ ಛಾಯಾಗ್ರಾಹಕರ ಅದ್ಬುತ ಚಿತ್ರಗಳು.  ಇವುಗಳಲ್ಲಿ ಹೆಚ್ಚಿನವು ಡಿಸ್ಟಿಂಕ್ಷನ್ ಪಡೆಯಲು ಕಳಿಸಿದ ಚಿತ್ರಗಳೇ ಆಗಿರುವುದು ವಿಶೇಷ.  ಮತ್ತೆ ಭಾರತದ ಮೊದಲಿಗೆ 1943ರಲ್ಲಿ ARPS ಅಂತರರಾಷ್ಟ್ರೀಯ ಮನ್ನಣೆ ಪಡೆದ ಡಾ. ಜಿ.ಥಾಮಸ್ ರವರ ಆಗಿನ ನೆಗೆಟಿವ್ ಕಪ್ಪುಬಿಳುಪಿನ ಕಲಾತ್ಮಕ ಛಾಯಾಚಿತ್ರಗಳ ಪ್ರದರ್ಶನವಾಗುತ್ತಿವೆ. ಇವನ್ನು ನೋಡುವುದು ಈಗ ಅದರಲ್ಲೂ ಬೆಂಗಳೂರಿನ ಛಾಯಾಸಕ್ತರಿಗೆ ಸೌಭಾಗ್ಯವೇ ಸರಿ.

           ಇದಲ್ಲದೇ 1943 ರಿಂದ 2011 ರ ವರೆಗೆ ಕರ್ನಾಟಕದ 115 ಛಾಯಾಗ್ರಾಹಕರು ARPS, AFIAP, EFIAP, MFIAP ಮನ್ನಣೆ ಮತ್ತು ಗೌರವವನ್ನು ಗಳಿಸಿದ್ದಾರೆ.  ಅವರೆಲ್ಲರ ಹೆಸರುಗಳನ್ನು ಈ ಪ್ರದರ್ಶನದಲ್ಲಿ ಹಾಕಿದ್ದಾರೆ.  ಅದನ್ನು ನಿಮಗಾಗಿ ಇಲ್ಲಿ ಕೊಡುತ್ತಿದ್ದೇನೆ.
     
  
              
        ದಿನಾಂಕ 13-10-2011 ರಿಂದ 17-10-2011 ರವರೆಗೆ ನಡೆಯುವ ಈ ಅದ್ಬುತ ಛಾಯಾಚಿತ್ರ ಪ್ರದರ್ಶನವನ್ನು ಮಿಸ್ ಮಾಡಿಕೊಳ್ಳಬೇಡಿ. ಮತ್ತೊಂದು ವಿಷಯ.: ದಿನಾಂಕ 15-10-2011 ರಂದು ಸಂಜೆ 5 ಗಂಟೆಗೆ ಈ ಪ್ರಖ್ಯಾತರು ತಮ್ಮ ಫೋಟೊಗ್ರಫಿ ಬದುಕಿನ ಅನುಭವಗಳನ್ನು ಹಂಚಿಕೊಳ್ಳುವ ಸಂವಾದವಿದೆ. ಅದನ್ನಂತೂ ಮಿಸ್ ಮಾಡಿಕೊಳ್ಳಲೇಬೇಡಿ

ಶಿವು.ಕೆ

Friday, October 7, 2011

ಈ ರೀತಿ ಶರಣಾದ ಪ್ರೀತಿ

    ಇದು ಪ್ರಕಾಶ್ ಹೆಗಡೆಯವರು ಬರೆದ "ರೀತಿ" ಕಥೆಯ ಮುಂದುವರಿದ ಭಾಗ ನನಗಿಂತ ಮೊದಲು ಪ್ರಕಾಶ್ ಹೆಗಡೆಯವರು, ಅಜಾದ್, ದಿನಕರ್ ಸರ್, ಪ್ರವೀಣ್, ಬಾಲು ಸರ್, ಬದರಿನಾಥ ಪಾಲವಳ್ಳಿ, ಸುಗುಣಕ್ಕ ಮತ್ತು ಸೀತರಾಂ ಸರ್ ಬರೆದಿದ್ದಾರೆ. ಅದರ ಮುಂದಿನ ಭಾಗ ನಾನು ಬರೆದಿದ್ದೀನೆ. ನೀವೆಲ್ಲ ಒಮ್ಮೆ ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ..
      

         ಪುಟ್ಟಣ್ಣಿ ತನ್ನ ಇಷ್ಟುದಿನದ ಬದುಕಿನಲ್ಲಿ ಎಂದೂ ಅಷ್ಟು ಗಟ್ಟಿಯಾಗಿ ಆತನ ಸುಕ್ಕುಗಟ್ಟಿದ್ದ ಕೈಗಳನ್ನು ಹಿಡಿದಿರಲಿಲ್ಲ. ಹಾಗಂತ ಅವಳ ಕೈಗಳೇನು ಯುವತಿಯ ಅಂಗೈನಂತೆ ಸುಕೋಮಲವಾಗಿರಲಿಲ್ಲ. ಅವಳ ಕೈಗಳು ಅವನಷ್ಟೇ ಸುಕ್ಕುಗಟ್ಟಿದ್ದವು.  ಕಿಟ್ಟಾಣಿ ಸುಕ್ಕುಗಟ್ಟಿದ್ದ ತನ್ನ ಕೈಯಲ್ಲಿ ಅವಳ ಅಂಗೈಯನ್ನು ಹಿಡಿದಿದ್ದರೂ ಅದರಲ್ಲಿ ಸುಕ್ಕಿರಲಿಲ್ಲ. ಬದಲಾಗಿ ಆಗ ತಾನೆ ಹೊಸದಾಗಿ ಮದುವೆಯಾದ ಗಂಡು ಹೆಣ್ಣು ಸಪ್ತಪದಿ ತುಳಿದ ಮೇಲೆ ಅವಳ ಸೆರಗನ್ನು ಅವನ ಹೆಗಲ ಮೇಲಿನ ವಸ್ತ್ರಕ್ಕೆ ಗಂಟುಹಾಕಿ ಅವನ ಎಡಗೈ ಅಸ್ತದಿಂದ ಅವಳ ಬಲಗೈ ಅಸ್ತವನ್ನು ಹಿಡಿಸಿದಾಗ ಮೊದಲ ಭಾರಿಗೆ ಉಂಟಾಗುತ್ತದಲ್ಲ ಕಂಪರ್ಟ್ ಎನ್ನುವ ಅನುಭೂತಿ ಅದೇ ಇವತ್ತು ಅವಳಿಗೆ ಆಗಿತ್ತು. ಅವನ ಮಿದುವಾದ ಹಿಡಿತದಲ್ಲಿ ವಾತ್ಸಲ್ಯಮಯ ಅಪ್ಪನಿರಬಹುದಾ, ಮಮತೆಯ ಅಮ್ಮನಿರಬಹುದಾ, ಪುಟ್ಟ ಮಕ್ಕಳ ಅಂಗಾಲಿನಷ್ಟೇ ಮಿತವೆನಿಸುವ ಮುಗ್ದ ಮಗ ಅಥವ ಮಗಳಿರಬಹುದಾ, ಬದುಕಿಗೆ ದಾರಿ ತೋರುವ ಗುರುವಿರಬಹುದಾ, ಕೇಳಿದ್ದೆಲ್ಲಾ ಕೊಡುವ ದೇವರಿರಬಹುದಾ, ಇವೆಲ್ಲ ಭಾವಗಳ ಜೊತೆಗೆ ಕಾಮವನ್ನು ಪ್ರೇಮಮಯವನ್ನಾಗಿಸುವ ಗಂಡನಿರಬಹುದಾ? ನಿರೀಕ್ಷೆಯಿಲ್ಲದ ನಿಶ್ಕಲ್ಮಶ ಮನಸ್ಸಿನ ಜೀವದ ಗೆಳೆಯನಿರಬಹುದಾ? ಆ ಕ್ಷಣ ಅವಳೆಷ್ಟು ಯೋಚಿಸಿದರೂ ಉತ್ತರ ಸಿಗಲಿಲ್ಲ.

       ಮೊದಲ ಭಾರಿಗೆ ಬದುಕಿನಲ್ಲಿ ಇಷ್ಟು ಗಾಢವಾದ ದಟ್ಟ ಅನುಭವವನ್ನು ಕೊಡುತ್ತಿರುವ ಆತನ ಅಂಗೈ ಹಿಡಿತವನ್ನು ಅನುಭವಿಸುತ್ತಿರುವ ನಾನು ಉತ್ತರವನ್ನೇಕೆ ಹುಡುಕಲು ಪ್ರಯತ್ನಿಸುತ್ತಿರುವೆ, ನಾನೆಂತ ದಡ್ಡಿ, ಕೆಲವೊಮ್ಮೆ ಇಂಥವಕ್ಕೆ ಅರ್ಥ ಹುಡುಕಲು ಪ್ರಯತ್ನಿಸಬಾರದು ಅನುಭವಿಸಿಬಿಡಬೇಕು ಅಂದುಕೊಂಡು ಎಲ್ಲವನ್ನು ಮರೆತು ಮಗುವಿನಂತೆ ಆತನ ಜೊತೆ ನಿದಾನವಾಗಿ ಹೆಜ್ಜೆ ಹಾಕತೊಡಗಿದಳು. ಅವರಿಬ್ಬರ ಹೆಜ್ಜೆಗಳು ಮುಂದೆ ಸಾಗಿದಂತೆ ಅವಳ ನೆನಪುಗಳ ಸುರುಳಿ ಹಿಂದಕ್ಕೆ ಓಡಲಾರಂಭಿಸಿತ್ತು.

    ಅವರಿಬ್ಬರ ಹೆಜ್ಜೆಗಳು ಅದ್ಯಾಕೋ ವೇಗವಾಗಿರಲಿಲ್ಲ ಮತ್ತು ಒತ್ತಡವಂತೂ ಇರಲೇ ಇಲ್ಲ. ಏಕೆಂದರೆ ಅವರಿಬ್ಬರೂ ನವದಂಪತಿಗಳಾಗಿರಲಿಲ್ಲ. ಮದ್ಯವಯಸ್ಕರಂತೂ ಆಗಿರಲೇ ಇಲ್ಲ. ಈ ಮದ್ಯ ವಯಸ್ಕ ದಂಪತಿಗಳ ಬದುಕೇ ಹಾಗೆ. ಮಗ ಅಥವ ಮಗಳನ್ನು ಒಳ್ಳೆ ಸ್ಕೂಲಿಗೆ ಸೇರಿಸಬೇಕು, ಮಕ್ಕಳನ್ನು ಮದುವೆ ಮಾಡಬೇಕು, ಎದುರು ಮನೆಯ ಗೆಳತಿ ಕಾಂಜಿವರಂ ಸೀರೆ ಉಟ್ಟಿದ್ದಾಳೆ ನಾನು ಕೊನೇ ಪಕ್ಷ ಕ್ರೇಪ್ ಸಿಲ್ಕ್ ಸೀರೆಯನ್ನಾದರೂ ಉಡಬೇಕು,  ಆತ ಸ್ಕೋಡ ತಗೊಂಡಿದ್ದಾನೆ ನಾನು ಕೊನೇ ಪಕ್ಷ ಮಾರುತಿ ಆಲ್ಟೋ ಕಾರಿನಲ್ಲಿ ಅವನ ಮುಂದೆ ಸಾಗಬೇಕು, ಅವನು ಮನೆ ಕಟ್ಟಿಸಿಬಿಟ್ಟಿದ್ದಾನೆ ನಾನು ಸೈಟಾನ್ನಾದರೂ ಕೊಳ್ಳಬೇಕು...ಹೀಗೆ. ಆದ್ರೆ ಆಗ ತಾನೆ ಮದುವೆಯಾದ ನವ ದಂಪತಿಗಳಿಗೆ ಪ್ರಪಂಚದ ಪರಿವೇ ಇಲ್ಲ. ಯಾವುದರ ಬಗ್ಗೆಯೂ ಚಿಂತೆಯಿಲ್ಲ. ಅವರಿಬ್ಬರೂ ಮೈಮರೆತು ಕುಳಿತರೆ, ನಿಂತರೆ, ನಡೆದರೆ, ಸಾಗಿದರೆ....ಹೀಗೇ ಏನಾದರಾಗಲಿ, ಪ್ರತಿಕ್ಷಣವೂ ವರ್ಣಿಸಲಾಗದ ಆನಂದ. ಅವರ ಕಣ್ಣಿಗೆ ಪ್ರಪಂಚ ಕಾಣುವುದಿಲ್ಲ. ಕಾಣುವುದೆಲ್ಲಾ ಅವರಿಬ್ಬರ ಬದುಕು ಮಾತ್ರ. ಹಾಗೆ ವಯಸ್ಸಾದ ದಂಪತಿಗಳಿಗೂ ಒಂಥರ ಹೀಗೇನೇ. ಎಲ್ಲಾ ಜವಾಬ್ದಾರಿಗಳನ್ನು ಮುಗಿಸಿ, ಒಬ್ಬರಿಗೊಬ್ಬರು ಹೆಗಲ ಮೇಲೆ ಕೈಗಳನ್ನು ಹಾಕಿಕೊಂಡು ಪ್ರಪಂಚವನ್ನು ಮರೆತು ಅನುಭವದ ದಾರಿಯಲ್ಲಿ ಸಾಗುತ್ತಿರುತ್ತಾರೆ. ಇಲ್ಲಿಯೂ  ಹಾಗೆ ಅರವತ್ತು ದಾಟಿದ ಪುಟ್ಟಣ್ಣಿ ಮತ್ತು ಕಿಟ್ಟಾಣಿ ಸಾಗುತ್ತಿದ್ದಾರೆ ಅಂದುಕೊಂಡಿದ್ದರೆ ಕಿಟ್ಟಾಣಿ ಪ್ರಕಾರ ಹೌದು. ಅವನು ಬದುಕಿನ ಪ್ರತಿಕ್ಷಣ ಅನುಭವಿಸುತ್ತಾ ಇದ್ದವನು ಈಗಲೂ ಆಕೆಯ ಹಸ್ತದ ಹಿತವಾದ ಬಿಸಿಯನ್ನು ಅನುಭವಿಸುತ್ತಾ ಪ್ರಪಂಚವನ್ನೇ ಮರೆತು ತನ್ನದೇ ಲೋಕದಲ್ಲಿ ತೇಲುತ್ತಿದ್ದಾನೆ. ಆದ್ರೆ ಪುಟ್ಟಾಣಿ ವಿಚಾರದಲ್ಲಿ ಆಗಿಲ್ಲ. ಏಕೆಂದರೆ ಅವಳು ಈ ಕ್ಷಣವನ್ನು ಪೂರ್ತಿಯಾಗಿ ಅನುಭವಿಸದೇ ತನ್ನ ಯೌವ್ವನದ ನೆನಪಿನಲ್ಲಿ ಹಿಂದಕ್ಕೆ ಓಡುತ್ತಿದ್ದಾಳೆ.

        ಅಪ್ಪನ ಇಷ್ಟದಂತೆ ಮದುವೆ, ನಾವಿಬ್ಬರೂ ಮೊದಲ ರಾತ್ರಿ ಒಬ್ಬರ ಮನಸ್ಸನ್ನು ಮತ್ತೊಬ್ಬರು ಅರಿತುಕೊಳ್ಳಲು ಪ್ರಯತ್ನಿಸಿದ್ದು ಆತನ ಹಳೆಯ ಪ್ರೇಮದ ಬಗ್ಗೆ ನನಗೆ ಮೂಡಿದ ಅಸಮದಾನ, ಅದೆಷ್ಟೋ ರಾಗಿಣಿ, ಜಯಂತುಗಳಿಂದ ಬಂದರು ಅವರಿಂದ ಉಂಟಾದ ಸಂಶಯಗಳು, ಗೆಳೆಯ ಗೆಳೆತಿಯರ ಬಗ್ಗೆ ಮೂಡಿದ ಸಂಶಯಗಳು.... ಒಂದಾ ಎರಡಾ,... ಮುಂದೆ ನಮ್ಮಿಬ್ಬರಲ್ಲಿ ಪುಟ್ಟ ವಿಚಾರಗಳಿಗೆ ಉಂಟಾದ ಹಟಗಳು, ಹೀಗೋಯಿಸಂಗಳು,...ಇವು ನಮ್ಮ ಬದುಕನ್ನೇ ನುಂಗಿ ನೀರು ಕುಡಿದಿದ್ದವು. ಇದರಲ್ಲಿ ತಪ್ಪು ಯಾರದು? ನನ್ನದ ಅಥವ ಕಿಟ್ಟಾಣಿದಾ! ಉತ್ತರ ಹುಡುಕಲು ಪ್ರಯತ್ನಿಸುತ್ತಿರುವಾಗಲೇ ನಮಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳಾದವು. ಅವರ ಬೆಳವಣಿಗೆ, ಓದು, ಮದುವೆ....ಇವೆಲ್ಲದರ ನಡುವೆ ತಪ್ಪು ಯಾರದೂ ಅಂತ ಕಂಡುಕೊಳ್ಳುವ ಪ್ರಯತ್ನದಲ್ಲಿ ನಮ್ಮ ವಯಸ್ಸು ಅರವತ್ತು ದಾಟಿಬಿಟ್ಟೆವಲ್ಲ!  ಉತ್ತರ ಸಿಕ್ಕಿತಾ ಅಂದುಕೊಂಡರೆ ಇಲ್ಲ.

       ನಿತ್ಯ ಸಣ್ಣ ಸಣ್ಣದಕ್ಕೂ ಒಬ್ಬರಿಗೊಬ್ಬರೂ ಮುನಿಸಿಕೊಳ್ಳುತ್ತಿದ್ದನ್ನು ಬೆಳೆದ ಮಕ್ಕಳು ಗಮನಿಸಿದ್ದಾರೆ. ಅವರಿಬ್ಬರಿಗೂ ಅವರಿಷ್ಟಪಟ್ಟಂತೆ ಮದುವೆಯಾಗಿದೆ.  ಈಗಿನ ಮಕ್ಕಳ ರೀತಿಯೇ ಬೇರೆ.  ಬದುಕಿನ ಪ್ರತಿಕ್ಷಣವನ್ನು ಅನಂದಿಸುತ್ತಾರೆ. ಅವರ ಆನಂದದ ನಡುವೆ ನಮ್ಮನ್ನು ಗಮನಿಸಿದ್ದಾರೆ. ನಾವು ಏನನ್ನೋ ಕಳೆದುಕೊಂಡಿದ್ದೇವೆ ಅಂತ ಅವರಿಗನ್ನಿಸುವ ಹೊತ್ತಿಗೆ ನನಗೆ ಅರವತ್ತು ಚಿಟ್ಟಾಣಿಗೆ ಅರವತ್ತೈದು. ಒಂದು ವಾರ ನಮ್ಮನ್ನೆಲ್ಲಾ ಮರೆತು ಸುತ್ತಾಡಿಕೊಂಡು ಖುಷಿಯಾಗಿ ಬನ್ನಿ ಅಂತ ಒಂದು ಪ್ರವಾಸದ ಪ್ಯಾಕೇಜ್ ಮಾಡಿ ಕಳಿಸಿದ್ದಾರೆ. ಈ ಪ್ರವಾಸವಾದರೂ ಎಂಥದ್ದು ನಮ್ಮ ವಯಸ್ಸಿಗೆ ತಕ್ಕಂತೆ ದೇವಸ್ಥಾನ ತೀರ್ಥಕ್ಷೇತ್ರಗಳೊಂದು ಇಲ್ಲ. ಮೊದಲೆರಡು ದಿನ ರಿಸಾರ್ಟು, ನಂತರ ಕೆಮ್ಮಣ್ಣುಗುಂಡಿಯಂತ ಗಿರಿಧಾಮದಲ್ಲಿ ರೆಲ್ಯಾಕ್ಸು, ಅಲ್ಲಿಂದ ಮುಂದಕ್ಕೆ ನೇರವಾಗಿ ಪ್ರಖ್ಯಾತ ಜೋಗ್ ಫಾಲ್ಸ್. ನನ್ನ ತುಂಟ ಮಗಳಂತೂ "ಅಮ್ಮ ಇದು ನಿಮ್ಮಿಬ್ಬರಿಗೂ ಛಾನ್ಸ್ ಎರಡನೇ ಹನಿಮೂನ್ ಮುಗಿಸಿಕೊಂಡು ಬನ್ನಿ" ಅಂತ ಕಣ್ ಹೊಡೆದು ಕಳಿಸಿದ್ದು ಯಾಕೆಂದು ಈಗ ಅರ್ಥವಾಗುತ್ತಿದೆ.

  ತಾವು ಉಳಿದುಕೊಂಡಿದ್ದ ರಿಸಾರ್ಟ್‍ನಿಂದ ಜೋಗ್ ಫಾಲ್ಸ್ ಒಂದು ಕಿಲೋಮೀಟರ್ ಇದ್ದಿದ್ದರಿಂದ ಇಬ್ಬರು ಕೈ ಕೈ ಹಿಡಿದು ನಡೆದುಕೊಂಡು ಹೋಗುತ್ತಿದ್ದಾರೆ.  ಅರ್ಧ ಕಿಲೋಮೀಟರ್ ದಾರಿ ಸಾಗಿರಬೇಕು ತನ್ನದೇ ಹಳೆಯ ನೆನಪುಗಳಲ್ಲಿ ಮುಳುಗಿ ಹೋಗಿದ್ದ ಪುಟ್ಟಾಣಿ ಸಣ್ಣದೊಂದು ಕಲ್ಲನ್ನು ಎಡವಿ ಮುಗ್ಗರಿಸಿ ಬೀಳಬೇಕೆನ್ನುವಷ್ಟರಲ್ಲಿ ಗಟ್ಟಿಯಾಗಿ ಹಿಡಿದುಕೊಂಡ ಕಿಟ್ಟಾಣಿ ಅವಳನ್ನೊಮ್ಮೆ ನೋಡಿ " ಯಾವ ಲೋಕದಲ್ಲಿದ್ದೀಯ" ಕೇಳಿದ.  ಅವಳು ಉತ್ತರಿಸಲಿಲ್ಲ ಅವನನ್ನೊಮ್ಮೆ ನೋಡಿ ನಕ್ಕಳಷ್ಟೇ. ಮುಂದೆ ಇಬ್ಬರ ನಡುವೆ ಮಾತಿರಲಿಲ್ಲ. ನಡುವೆ ಒಮ್ಮೆ ಕಿಟ್ಟಾಣಿಯ ಮುಖವನ್ನೊಮ್ಮೆ ಪುಟ್ಟಾಣಿ ತಿರುಗಿ ನೋಡಿದಳಲ್ಲ!  ಅರೆರೆ ಇವತ್ತು ಇವರ ಮುಖ ತುಂಬಾ ಚೆನ್ನಾಗಿ ಕಾಣುತ್ತಿದೆಯಲ್ಲ!  ಮುಖದಲ್ಲಿ ವಯಸ್ಸಾಗಿರುವುದು ಕಾಣುತ್ತಿದ್ದರೂ ನನ್ನ ಗಂಡನೆನ್ನುವ ಕಾರಣಕ್ಕೆ ತುಂಬಾ ಇಷ್ಟವಾಗುತ್ತಿದೆಯಲ್ಲಾ! ಈ ಇಷ್ಟಕ್ಕೆ ಕಾರಣವೇನು?  ಮದುವೆಯಾದ ಹೊಸತರಲ್ಲಿ, ಮೊದಲ ರಾತ್ರಿಯಲ್ಲಿ ನಂತರದ ದಿನಗಳಲ್ಲಿ ಯುವ ಸುರಸುಂದರಾಂಗನಾಗಿದ್ದರೂ ಅವತ್ತಿಗಿಂತ ಇವತ್ತಿನ ಅವರ ತೃಪ್ತಿ ತುಂಬಿದ ಮುಖ ತುಂಬಾ ಅಪ್ಯಾಯಮಾನವಾಗುತ್ತಿದೆಯಲ್ಲ! ಮತ್ತೆ ಮತ್ತೆ ನೋಡಬೇಕೆನಿಸುತ್ತಿದೆಯಲ್ಲ!  ಈ ರೀತಿ ಕದ್ದು ಮುಚ್ಚಿ ನೋಡುವುದರಲ್ಲಿ ಅದೊಂತದೋ ವರ್ಣಿಸಲಾಗದ ಖುಷಿಯಿದೆ. ಸಿಹಿಯನ್ನು ಸ್ವಲ್ಪ ಸ್ವಲ್ಪ ತಿಂದಷ್ಟು ರುಚಿ ಹೆಚ್ಚು. ಹಾಗೆ ಸ್ವಲ್ಪ ಸ್ವಲ್ಪವೇ ಆತನ ಮುಖವನ್ನು ಕಿರುಗಣ್ಣಿನಿಂದ ನೋಡುವುದರಲ್ಲಿ ವರ್ಣಿಸಲಾಗದ ಖುಷಿ ಮನಸ್ಸಿಗೆ. ಹಾಗೆ ದಾರಿಯುದ್ದಕ್ಕೂ ಅವನಿಗರಿವಿಲ್ಲದಂತೆ ಕಿರುಗಣ್ಣಿನಲ್ಲೇ ನೋಡುತ್ತಾ ಸಾಗಿದಳು. ಜೋಗ್ ಫಾಲ್ಸ್ ಬಂದೇ ಬಿಡ್ತು.

   ಅದೆಷ್ಟೋ ವರ್ಷಗಳ ನಂತರ ಜೋಗ್ ಫಾಲ್ಸ್ ಇವತ್ತು ಈ ಕ್ಷಣದಲ್ಲಿ ಅವರಿಗೆ ತುಂಬಾ ಚೆನ್ನಾಗಿ ಕಾಣುತ್ತಿದೆ.  "ಅರೆರೆ ಅಲ್ಲಿ ನೋಡ್ರಿ, ಜೋಗ್ ಫಾಲ್ಸ್ ನಡುವೆ ಕಾಮನ ಮೂಡಿದೆ" ವಾಹ್! ಸೂಪರ್ ಅಲ್ಲೇ ಮಗುವಿನಂತೆ ಕುಣಿದಾಡಿದಳು ಪುಟ್ಟಾಣಿ. ಜೋಗ್ ಫಾಲ್ಸ್ ಮುಂದೆ ಕಾಮನಬಿಲ್ಲು ಯಾವಾಗಲೂ ಬರುವುದಿಲ್ಲ. ಮತ್ತು ಎಲ್ಲರಿಗೂ ಕಾಣಿಸಿಕೊಳ್ಳುವುದಿಲ್ಲ.  ಅಪರೂಪಕ್ಕೆ ಕಾಣಿಸುವ ಅದನ್ನು ನೋಡುವವರೇ ಅದೃಷ್ಟವಂತರು. ಅಂತ ಅದೃಷ್ಟ ನಮಗಿದೆಯಲ್ಲ ಅವರಿಬ್ಬರೂ ಕುಣಿದಾಡಿದರು.

     "ಪುಟ್ಟಾಣಿ, ನಿನಗೊಂದು ವಿಶೇಷವನ್ನು ತೋರಿಸಲೇನೋ" ಹೇಳಿದ ಕಿಟ್ಟಾಣಿ ಪ್ರೀತಿಯಿಂದ.

      ಕಾಮನಬಿಲ್ಲನ್ನು ಮೈಮರೆತು ಕಣ್ತುಂಬಿಕೊಳ್ಳುತ್ತಿದ್ದ ಪುಟ್ಟಾಣಿ ಆತನ ಮಾತು ಕೇಳಿ ಅವನತ್ತ ತಿರುಗಿದಳು.

      " ಇಲ್ಲಿ ನೋಡೋ" ಅಂತ ಪ್ರೀತಿಯಿಂದ ಕರೆದು, "ನಿನಗೆ ಇದೇ ಕಾಮನಬಿಲ್ಲನ್ನು ನನ್ನ ಕಣ್ಣಲ್ಲಿ ತೋರಿಸುತ್ತೇನೆ"

      "ಹೌದಾ, ಹೇಗೆ ತೋರಿಸ್ತೀರಿ"

      ಆದ್ರೆ ಒಂದು ಷರತ್ತು.  ನೀನು ನನ್ನ ಕಣ್ಣಲ್ಲಿ ಕಣ್ಣಿಟ್ಟು ಒಂದು ಕ್ಷಣವೂ ಮಿಟುಕಿಸದೇ ನೋಡಬೇಕು.

      "ಒಹ್! ಖಂಡಿತ. ಆದ್ರೆ ನೀವು ಕಣ್ಣು ಮಿಟುಕಿಸುವುದಿಲ್ಲವೇ?

       "ಇಲ್ಲ ಇಲ್ಲ ನಿನಗೆ ಕಾಮನಬಿಲ್ಲು ತೋರಿಸಲಿಕ್ಕಾಗಿ ನಾನು ಒಮ್ಮೆಯೂ ಕಣ್ಣು ಮಿಟುಕಿಸುವುದಿಲ್ಲ

       ಇದೇ ಮಾತಾ? ನೀವು ಮಿಟುಕಿಸಿ ಸೋತರೇ?

       ಸೋತರೆ ನೀನು ಏನು ಕೇಳಿದರೂ ಕೊಡಿಸುತ್ತೇನೆ, ನೀನು ಸೋತರೆ?

       ನಾನು ಒಮ್ಮೆಯೂ ಕಣ್ಣು ಮಿಟುಕಿಸದೇ ನಿಮ್ಮ ಕಣ್ಣನ್ನೇ ನೋಡುತ್ತೇನೆ. ನಾನು ಮಿಟುಕಿಸಿದಲ್ಲಿ ನೀವು ಕೇಳಿದ್ದನ್ನು ಕೊಡುತ್ತೇನೆ. ಕಿಟ್ಟಾಣಿ ಒಂದು ಕಲ್ಲುಬೆಂಚಿನ ಮೇಲೆ ಕಾಮನ ಬಿಲ್ಲಿಗೆ ಅಭಿಮುಖವಾಗಿ ಖುಳಿತ.

       ಆಯ್ತು ಈಗ ಪ್ರಾರಂಭಿಸೋಣವಾ? ಕೇಳಿದ ಕಿಟ್ಟಾಣಿ. ಆಯ್ತು ಎಂದಳು.

       ಕಣ್ಣು ನಿದಾನವಾಗಿ ತೆರೆದ. ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡತೊಡಗಿದಳು ಪುಟ್ಟಾಣಿ.

        ಐದು ಸೆಕೆಂಡುಗಳಾಯಿತು. ಜೋಗ್ ಫಾಲ್ಸ್ ಜಲಪಾತದ ಮುಂದೆ ಸೃಷ್ಟಿಯಾಗಿದ್ದ ಕಾಮನಬಿಲ್ಲು ಅವನ ಕಣ್ಣಿನಲ್ಲಿ ನಿದಾನವಾಗಿ ಅಸ್ಪಸ್ಟವಾಗಿ ಅವಳಿಗೆ ಕಾಣತೊಡಗಿತು.  ಹತ್ತು ಸೆಕೆಂಡುಗಳು ಕಳೆದವು. ಈಗ ಸ್ಪಷ್ಟವಾಗಿ ತುಂಬಾ ಚೆನ್ನಾಗಿ ಕಾಣುತ್ತಿದೆ ಕಾಮನಬಿಲ್ಲು. ಇಬ್ಬರಲ್ಲೂ ಗೆಲ್ಲಬೇಕೆನ್ನುವ ಚಲದಲ್ಲಿ ಒಮ್ಮೆಯೂ ಮಿಟುಕಿಸಲಿಲ್ಲ. ಅವಳ ದೃಷ್ಟಿ ಅವನ ದೃಷ್ಟಿಗೆ ಮತ್ತಷ್ಟು ನೇರವಾಯಿತು. ಇಬ್ಬರಲ್ಲಿ ಒಬ್ಬರೂ ಒಮ್ಮೆಯೂ ಮಿಟುಕಿಸುತ್ತಿಲ್ಲ. ಇನ್ನತ್ತು ಸೆಕೆಂಡುಗಳು ಕಳೆದವು. ನಿದಾನವಾಗಿ ಸ್ಪರ್ಧೆಯನ್ನು ಮರೆತ ಅವರಿಬ್ಬರ ಕಣ್ಣುಗಳು ನಿದಾನವಾಗಿ ಒಂದಾಗುತ್ತಿವೆ.  ಈಗ ಪುಟ್ಟಣ್ಣಿಯ ಕಣ್ಣುಗಳಲ್ಲಿ ಅದೆಂತದೋ ವರ್ಣಿಸಲಾಗದ ಪ್ರೀತಿ ಮತ್ತು ಮಮತೆ ತುಂಬಿದ ಭಾವುಕತೆ ತುಂಬಿ ತುಳುಕುತ್ತಿರುವುದು ಅವನಿಗೆ ಅರಿವಾಗುತ್ತಿದೆ. ಜೊತೆಗೆ ತಾನು ಬದುಕಿನ ಇಷ್ಟು ವರ್ಷಗಳು ಅಹಂನಿಂದ ಅನುಭವಿಸಿದ ನೋವುಗಳು ಕಿಟ್ಟಾಣಿಗೆ ಕೊಟ್ಟ ಮಾನಸಿಕ ತೊಂದರೆಗಳೆಲ್ಲಾ ನೆನಪಾಗಿ ಮಾಡಿದ ತಪ್ಪುಗಳಿಗೆ ಪ್ರಾಯಶ್ಚಿತ್ತವೆನ್ನುವ ಅವಳ ಕಣ್ಣು ತುಂಬಿಕೊಳ್ಳುತ್ತಿವೆ.  ಅವನ ಕಣ್ಣುಗಳಲ್ಲಿ ಮೂಡಿದ ಕಾಮನಬಿಲ್ಲು ನಿದಾನ ಪ್ರೀತಿಯ ಸಂಕೇತವಾಗಿ, ಪ್ರೀತಿಯಾಗಿ ಕಾಣುತ್ತಿದೆ. ಅವಳಿಗೆ ಕಿಟ್ಟಾಣಿಯ ಕಣ್ಣುಗಳನ್ನೇ ನೋಡುತ್ತಿದ್ದರೆ, ಮನಸ್ಸಿನಲ್ಲಿ ವರ್ಣಿಸಲಾಗದ ಭಾವ ತುಂಬಿಹೋಗುತ್ತಿದೆ.  ಇನ್ನು ತಡೆಯಲಾಗುತ್ತಿಲ್ಲ ಆಹಂಕಾರವೆಲ್ಲಾ ನೀರಿನಂತೆ ಕರಗಿಹೋಗುತ್ತಿವೆ. ಪಶ್ಚಾತಾಪ ಮನದಲ್ಲಿ ತುಂಬಿಕೊಳ್ಳುತ್ತಿದೆ. ಮತ್ತೈದು ಸೆಕೆಂಡು ಕಳೆಯಿತಷ್ಟೆ ಅವಳಿಗರಿವಿಲ್ಲದಂತೆ ಮನತುಂಬಿ  ಕಣ್ಣುಗಳಲ್ಲಿ ಆನಂದ ಭಾಸ್ಪ ಉಕ್ಕಿ ಬಂದೇ ಬಿಟ್ಟಿತ್ತು.  ಅದನ್ನು ನೋಡುತ್ತಿದ್ದ ಚಿಟ್ಟಾಣಿಯ ಕಣ್ಣುಗಳಲ್ಲಿ ಆನಂದ ಬಾಷ್ಪ. ಅದ್ಯಾವ ಕ್ಷಣದಲ್ಲಿ ಕಿಟ್ಟಾಣಿಯ ಎದೆಗೆ ಅವಚಿಕೊಂಡಳೋ, ಅಷ್ಟೇ ವೇಗವಾಗಿ ಪುಟ್ಟಾಣ್ಣಿಯನ್ನು ಮಗುವಿನಂತೆ ತನ್ನ ತೋಳ ತೆಕ್ಕೆಯೊಳಗೆ ಸೆಳೆದುಕೊಂಡುಬಿಟ್ಟಿದ್ದಾನೆ.  ಅವರಿಲ್ಲದಂತೆ ಈ ರೀತಿ ಒಬ್ಬರಿಗೊಬ್ಬರು ಶರಣಾಗಿಬಿಟ್ಟಿದ್ದರು. ಅಕ್ಕಪಕ್ಕದಲ್ಲಿ, ಅದರಾಚೆಗೆ ಹತ್ತಾರು ಜನರು ನೂರಾರು ಜನರು, ಎದುರಿಗೆ ಕಾಣುತ್ತಿರುವ ಜೋಗ್ ಫಾಲ್ಸ್, ಅದರೊಳಗೆ ಮೂಡಿಬಂದ ಕಾಮನಬಿಲ್ಲು ಅದರ ಮೇಲಿನ ಆಕಾಶ, ಕೆಳಗಿನ ಭೂಮಿ ಇದ್ಯಾವುದರ ಪರಿವೆ ಇಲ್ಲ. ಅದೆಷ್ಟು ಹೊತ್ತು ಹಾಗೆ ಗಾಡ ಆಲಿಂಗನದಲ್ಲಿ ಒಬ್ಬರಿಗೊಬ್ಬರು ಶರಣಾಗಿಬಿಟ್ಟಿದ್ದರು. ಇತ್ತ ಜೋಗ್ ಪಾಲ್ಸ್‍ನ ರಾಜ ರಾಣಿ, ರಾಕೆಟ್ ರೋರರ್, ಮತ್ತು ಕಾಮನಬಿಲ್ಲು ಇವರಿಬ್ಬರಲ್ಲಿ ಗೆದ್ದವರಾರು ಅಂತ ಮಾತಾಡುತ್ತಿದ್ದರೆ ಇತ್ತ ಪುಟ್ಟಾಣಿಯ ಬಲಗೈ  ಕಿಟ್ಟಾಣಿಯ ಸೊಂಟವನ್ನು ಬಳಸಿದರೆ ಕಿಟ್ಟಾಣಿಯ ಎರಡೈ ಆಕೆಯ ಹೆಗಲನ್ನು ಬಳಸಿತ್ತು. ಇವರ ಕಣ್ಣಳತೆ ದಾರಿಯ ಕೊನೆಯಲ್ಲಿ ಇವರನ್ನೇ ನೋಡಿ ಆಶೀರ್ವಾದಿಸಿದ ಸೂರ್ಯ ನಿದಾನ ಅಸ್ತಂಗತನಾಗುತ್ತಿದ್ದ.




ಶಿವು.ಕೆ
 
         

Tuesday, October 4, 2011

ಇವರು "ಸಮೂಹ ಸನ್ನಿ"ಗೊಳಗಾದರೆ ಪತ್ರಿಕೋದ್ಯಮ ಇರುತ್ತದೆಯೇ?

 
    ಕೇಂದ್ರ ಸರ್ಕಾರವನ್ನು ನಡುಗಿಸಿ, ವಿಶ್ವದ ಗಮನವನ್ನೇ ಸೆಳೆದ ಅಣ್ಣಾ ಅಜಾರೆ ಭ್ರಷ್ಟಾಚಾರ ವಿರುದ್ದದ ಉಪವಾಸ ಸತ್ಯಗ್ರಹ ನಮಗೆಲ್ಲಾ ಗೊತ್ತೇ ಇದೆ. ಪ್ರತಿಯೊಬ್ಬ ನಾಗರೀಕನಲ್ಲೂ ಭ್ರಷ್ಟಾಚಾರವನ್ನು ಹೋಗಲಾಡಿಸಲು ಹೋರಾಟ ಮಾಡಬೇಕೆನ್ನುವ ಸಂಚಲನವನ್ನೇ ಉಂಟು ಮಾಡಿದ ಆರೋಗ್ಯಕರ ಸಮೂಹ ಸನ್ನಿ ಎನ್ನಬಹುದು.  ಇಂಥ ಅರೋಗ್ಯಕರ ಸಮೂಹ ಸನ್ನಿ ನಮಗೆ ಬೇಕಿತ್ತು.

   ಇಂಥದ್ದೇ ಒಂದು ಸಮೂಹ ಸನ್ನಿ ನಮ್ಮ ಪೇಪರ್ ಹಾಕುವ ಹುಡುಗರಲ್ಲಿ ನೆಗಟೀವ್ ಆಗಿ ಆಗಿಬಿಟ್ಟರೆ  ಏನಾಗಬಹುದು? ಅಂತ ಒಮ್ಮೆ ಪ್ರಶ್ನಿಸಿಕೊಂಡೆ. ನಿಜಕ್ಕೂ ಒಂದು ಕ್ಷಣ ಹೃದಯ ಬಡಿತ ನಿಂತಂತೆ ಆಗಿ ಆತಂಕ ದಿಗಿಲುಗಳು ಒಟ್ಟಿಗೆ ಮೈಮನಸ್ಸುಗಳನ್ನು ಆವರಿಸಿಕೊಂಡವು.  ಇದೇನಿದು ಪೇಪರ್ ಹಾಕುವ ಹುಡುಗರ ಮನಸ್ಸು ಬದಲಾದರೇ ಹೃದಯಬಡಿತ ನಿಲ್ಲುವಂತದ್ದು, ದಿಗಿಲು, ಆತಂಕ ಪಡುವಂತದ್ದು ಏನಾಗಿಬಿಡುತ್ತದೆ ಅಂತ ನಿಮ್ಮಲ್ಲಿ ಪ್ರಶ್ನೆ ಮೂಡಬಹುದು.  ವಿವರಿಸಿಬಿಡುತ್ತೇನೆ ಬಿಡಿ..

    ಎಲ್ಲೋ ಪುಟ್ಟ ಗುಡಿಸಲಿನಲ್ಲಿ ಮಲಗಿದ್ದ ಒಬ್ಬ ಹದಿನೆಂಟು ವರ್ಷದ ಪೇಪರ್ ಹಾಕುವ ಹುಡುಗನಿಗೆ ಒಂದು ಅಲೋಚನೆ ಬರುತ್ತದೆ.  ಅದನ್ನು ತನ್ನ ಇತರ ಪೇಪರ್ ಹಾಕುವ ಹುಡುಗರಿಗೆ ಹೇಳುತ್ತಾನೆ. ಅದು ಒಬ್ಬರಿಂದ ಒಬ್ಬರಿಗೆ ಎಸ್ ಎಂ ಎಸ್  ತರ ಸಾಗಿ ಹತ್ತು..ನೂರು...ಸಾವಿರ...ಕೊನೆಗೆ ಭಾರತದಾದ್ಯಂತ ಮುಂಜಾನೆ ದಿನಪತ್ರಿಕೆ ಹಂಚುವ ಎಲ್ಲಾ ಹುಡುಗರ ಮನಸ್ಸಿನಲ್ಲಿಯೂ ಆದೇ ಅಲೋಚನೆ ಗಟ್ಟಿಯಾಗಿಬಿಡುತ್ತದೆ.  ನಿಮಗೆ ಗೊತ್ತಿರಲಿ, ನಮ್ಮ ಭಾರತದಾದ್ಯಂತ ಪೇಪರ್ ಹಾಕುವ ಹುಡುಗರೆಲ್ಲರ ವಯಸ್ಸು ಹದಿನೈದರಿಂದ ಇಪ್ಪತ್ತೈದು. ಈ ಪೇಪರ್ ಹಾಕುವ ಕೆಲಸವನ್ನು ಹಣವಂತರ ಮಕ್ಕಳು ಮಾಡುವುದಿಲ್ಲ. ಸೋಕಿಗೆ ಅಥವ ವ್ಯಾಯಾಮಕ್ಕೆ ಆಗುತ್ತೆ ಅಂದುಕೊಂಡು ಬರುವವರು ಹೆಚ್ಚೆಂದರೆ ಒಂದು ವಾರ್‍ಅ-ಹದಿನೈದು ದಿನವಷ್ಟೆ. ಅಷ್ಟರಲ್ಲಿ ಬೇಸರವಾಗಿ ಮನೆಯಲ್ಲಿ ಸುಖನಿದ್ರೆ ಮಾಡುತ್ತಾರೆ. ಇನ್ನೂ ಮೇಲ್ಮದ್ಯಮ, ಮದ್ಯಮ ವರ್ಗದ ಹುಡುಗರು ಇತ್ತ ಸುಳಿಯುವುದಿಲ್ಲ. ಸುಳಿದರೂ ಅವರ ಕತೆ ಶ್ರೀಮಂತ ಹುಡುಗರ ಕತೆಯೇ!  ಇಲ್ಲಿ ಅವರ ತಂದೆ ತಾಯಿಗಳಿಗೆ ಗೌರವ ಅಂತಸ್ಥು, ಪಕ್ಕದ ಮನೆಯವರು, ಸಂಭಂದಿಕರು ಏನಂದುಕೊಳ್ಳುತ್ತಾರೋ ಎನ್ನುವ ಕಾರಣಕ್ಕೆ ಅವರ ಮಕ್ಕಳನ್ನು ಈ ಕೆಲಸಕ್ಕೆ ಕಳಿಸುವುದಿಲ್ಲ. ಇನ್ನೂ ಕೆಳ ಮದ್ಯಮವರ್ಗದವರು ಸ್ವಲ್ಲ ಜನ ಬರುತ್ತಾರಾದರೂ ಅವರು ತಾತ್ಕಾಲಿಕ ಅಷ್ಟೆ. ಇಂಥ ಕೆಲಸಕ್ಕೆ ಬಡತನದಲ್ಲಿರುವವರು, ಸ್ಲಮ್‍ನಲ್ಲಿರುವ ಹುಡುಗರು, ಮನೆಯಲ್ಲಿ ಕಷ್ಟವಿರುವವರು. ಇವರೇ ಮುಂಜಾನೆ ದಿನಪತ್ರಿಕೆ ಸಂತೆಯ ಜೀವಾಳ. ಈ ಹುಡುಗರ ಮನಸ್ಥಿತಿಯನ್ನು ಎಂಥದ್ದು ಅಂದರೆ ಇವರೊಮ್ಮೆ ಮನಸ್ಸು ಮಾಡಿದರೆ ಕಿತ್ತು ಹೋದ ಕಚಡ ಮಾಸ್ ಸಿನಿಮವನ್ನು ಸೂಪರ್ ಹಿಟ್ ಮಾಡಿಬಿಡಬಲ್ಲರು. ತುಂಬಾ ಚೆನ್ನಾಗಿರುವ ಮಾಸ್ ಚಿತ್ರವನ್ನು ಪ್ಲಾಪ್ ಮಾಡಿ ಡಬ್ಬದೊಳಗೆ ಹಾಕಿಬಿಡುವಂತೆ ಮಾಡುವವರು.  ಪಾದರಸಕ್ಕಿಂತ ವೇಗವಾಗಿ ಸದಾ ಚಂಚಲತೆಯನ್ನು ಹೊಂದಿರುವ, ಇವರು "ಇದರಿಂದೇನು ಲಾಭವಿಲ್ಲ,  ಇಷ್ಟು ವರ್ಷ ನಮ್ಮ ಮುಂಜಾನೆ ಸಕ್ಕರೆ ನಿದ್ರೆಗಳನ್ನು ಹಾಳುಮಾಡಿಕೊಂಡು ಪೇಪರ್ ಹಾಕುವ ಕೆಲಸಕ್ಕೆ ನಿಂತೆವಲ್ಲ, ಇದನ್ನು ಮನೆ ಮನೆಗೆ ಹಾಕಿ ಯಾರನ್ನು ಉದ್ದಾರ ಮಾಡಬೇಕಾಗಿದೆ?  ನಾಳೆಯಿಂದ ಯಾರು ಪೇಪರ್ ಹಾಕುವ ಕೆಲಸಕ್ಕೆ ಹೋಗುವುದು ಬೇಡ ಅಂತ ತೀರ್ಮಾನಿಸಿ ಅಣ್ಣಾ ಅಜಾರೆಯಷ್ಟೇ ದೊಡ್ಡ ಸಂಚಲನ ಉಂಟು ಮಾಡಿದ ಸಮೂಹ ಸನ್ನಿಗೊಳಗಾಗಿಬಿಟ್ಟರೆ ಮುಂದೇನಾಗಬಹುದು..


    ಮೊದಲು ಕೆಲಸ ಕಳೆದುಕೊಳ್ಳುವುದು ನಮ್ಮಂಥ ನೂರಾರು ಸಾವಿರಾರು ವೆಂಡರುಗಳು. ಒಬ್ಬ ವೆಂಡರ್ ಹೆಚ್ಚೆಂದರೆ ೨೦೦ ದಿನಪತ್ರಿಕೆಯನ್ನು ಮುಂಜಾನೆ ಮನೆಮನೆಗಳಿಗೆ ವಿತರಿಸಬಹುದು ಅದಕ್ಕಿಂತ ಹೆಚ್ಚು ಸಾಧ್ಯವೇ ಇಲ್ಲ.  ಹಾಗೆ ಆದಲ್ಲಿ ಒಬ್ಬ ವೆಂಡರ್ ಆದಾಯ ನೂರರಲ್ಲಿ ೯೦% ಮಾಯವಾಗಿ  ೧೦% ಗಿಳಿಯುತ್ತದೆ.
  ನಂಬರ್ ಒನ್ ಎಂದು ಮೀಸೆ ತಿರುಗಿಸುವ ಟೈಮ್ಸ್ ಆಫ್ ಇಂಡಿಯ ಸರ್ಕುಲೇಷನ್ ಐದು ಲಕ್ಷ ನಲವತ್ತು ಸಾವಿರದಿಂದ ಐವತ್ತನಾಲ್ಕು ಸಾವಿರಕ್ಕೆ ಇಳಿಯುತ್ತದೆ.
  ಡೆಕ್ಕನ್ ಹೆರಾಲ್ಡ್ ಒಂದು ಲಕ್ಷದಿಂದ ಹತ್ತು ಸಾವಿರಕ್ಕೆ, ಹಿಂದೂ ದಿನಪತ್ರಿಕೆ ಅರವತ್ತು ಸಾವಿರದಿಂದ ಆರುಸಾವಿರಕ್ಕೆ, ಇಂಡಿಯನ್ ಎಕ್ಸ್ ಪ್ರೆಸ್ ನಲವತ್ತು ಸಾವಿರದಿಂದ ನಾಲ್ಕು ಸಾವಿರಕ್ಕೆ, ಡೆಕ್ಕನ್ ಕ್ರಾನಿಕಲ್ ಇಪ್ಪತ್ತು ಸಾವಿರದಿಂದ ಎರಡು ಸಾವಿರಕ್ಕೆ, ಡಿ ಎನ್ ಎ ಪತ್ರಿಕೆ ಹದಿನೆಂಟು ಸಾವಿರದಿಂದ ಸಾವಿರದ ಎಂಟು ನೂರಕ್ಕೆ ಇಳಿಯುತ್ತದೆ. ಮತ್ತೆ ಕನ್ನಡ ದಿನಪತ್ರಿಕೆಗಳಲ್ಲಿ ಎರಡು ಲಕ್ಷವಿರುವ ವಿಜಯ ಕರ್ನಾಟಕ ಇಪ್ಪತ್ತು ಸಾವಿರಕ್ಕೆ ಒಂದುಲಕ್ಷ ನಲವತ್ತು ಸಾವಿರವಿರುವ ಪ್ರಜಾವಾಣಿ ಹದಿನಾಲ್ಕು ಲಕ್ಷಕ್ಕೆ, ಅರವತ್ತು ಸಾವಿರವಿರುವ ಕನ್ನಡಪ್ರಭ ಆರುಸಾವಿರಕ್ಕೆ, ಮುವತ್ತು ಸಾವಿರವಿರುವ ಉದಯವಾಣಿ ಮೂರು ಸಾವಿರಕ್ಕೆ, ಹದಿನೆಂಟು ಸಾವಿರವಿರುವ ಸಂಯುಕ್ತ ಕರ್ನಾಟಕ ಸಾವಿರದ ಎಂಟುನೂರಕ್ಕೆ, ಇದು ಬಿಟ್ಟು ಹೊಸದಿಗಂತ, ವ್ಯಾಪಾರಿ ದಿನಪತ್ರಿಕೆಗಳಾದ ಎಕನಾಮಿಕ್ಸ್ ಟೈಮ್ಸ್, ಬುಸಿನೆಸ್ ಲೈನ್, ಬುಸಿನೆಸ್ ಸ್ಟಾಂಡರ್ಡ್, ಇತ್ಯಾದಿಗಳು ನೂರು ಇನ್ನೂರು ಲೆಕ್ಕಕ್ಕೆ ಇಳಿದುಬಿಡುತ್ತವೆ. ಇದು ಬೃಹತ್ ಬೆಂಗಳೂರಿನ ಲೆಕ್ಕಚಾರ. ಇತರೆ ನಗರಗಳು, ಇತರೆ ರಾಜ್ಯಗಳು, ಪೂರ್ತಿ ಭಾರತದ ಮುಂಜಾನೆ ದಿನಪತ್ರಿಕೆ ವಿತರಣೆ ಲೆಕ್ಕಾಚಾರ ಕೇವಲ ೧೦% ಗೆ ಇಳಿದುಬಿಡುತ್ತದೆ.

      ನೂರು ರೂಪಾಯಿಯನ್ನು ನೋಡುತ್ತಿದ್ದ ನನ್ನಂತ ವೆಂಡರ್ ಹತ್ತು ರೂಪಾಯಿಗೆ ಎಷ್ಟು ದಿನ ಇಂಥ ವ್ಯಾಪಾರ ಮಾಡಿಯಾನು? ವಿಧಿಯಿಲ್ಲದೇ ಅವನು ಬೇರೆ ಉದ್ಯೋಗ, ಅಥವ  ವ್ಯಾಪರವನ್ನೋ ಹುಡುಕಿಕೊಳ್ಳುತ್ತಾನೆ.  ಅಲ್ಲಿಗೆ ಮೇಲೆ ವಿವರಿಸಿದ ಹತ್ತು ಪರಸೆಂಟ್ ಕೂಡ ಇಲ್ಲವಾಗುತ್ತದೆ.

       ಯಾರು ಇದ್ದರೆಷ್ಟು ಬಿಟ್ಟರೆಷ್ಟು ಅಂದುಕೊಂಡ ಪತ್ರಿಕಾ ಕಛೇರಿಗಳು ತಾವೆ ವಿತರಣೆ ಮಾಡುತ್ತೇವೆ ಅಂತ ಮುಂದೆ ನಿಂತರೆ ಅವರಿಗೆ ಮನೆಮನೆಗೆ ತಲುಪಿಸಲು ಅವರ ವರದಿಗಾರರನ್ನು ಬಿಡುತ್ತಾರಾ, ಎಸಿ ರೂಮಿನಲ್ಲಿ ಕುಳಿತ ಡೆಸ್ಕ್ ಆಪರೇಟರುಗಳಿಗೆ ಸೈಕಲ್ ಕೊಟ್ಟು ಮನೆಮನೆಗೆ ಕಳಿಸುತ್ತಾರಾ? ಈಗಿನ ವರದಿಗಾರರು ಮತ್ತು ಡೆಸ್ಕ್ ಆಪರೇಟರುಗಳು ಆಕಾಶದಿಂದ ಇಳಿದುಬಂದ ರಾಜಕುಮಾರರಂತೆ ವರ್ತಿಸುವ ಇಂದಿನ ಕಾಲದಲ್ಲಿ ಅವರನ್ನು ಮನೆಮನೆಗೆ ಪೇಪರ್ ಹಂಚುವ ಕೆಲಸಕ್ಕೆ ಹಚ್ಚಿಬಿಟ್ಟರೆ ಅವರ ಅಹಂಗೆ ಕುಂದು ಬಂದಂತಾಗಿ ಅವರು ಖಂಡಿತ ಕೆಲಸ ಬಿಡುತ್ತಾರೆ. ಇದೆಲ್ಲವನ್ನು ಬಿಟ್ಟು ಮಾರುಕಟ್ಟೆ ವಿಭಾಗದ ಪ್ರತಿನಿಧಿಗಳಿಗೆ ಸೈಕಲ್ಲು, ಮೋಟರ್ ಸೈಕಲ್ ಕೊಟ್ಟು ಮನೆಮನೆಗೆ ಪೇಪರ್ ಹಾಕಲು ಕಳಿಸಿದರೂ ಇವರ ಅರ್ಹತೆಯೂ ವೆಂಡರಿನಷ್ಟೆ. ಮತ್ತೆ ಈಗಾಗಲೇ ಐದು ಆರಂಕಿ ಪಗಾರದ ರುಚಿಯನ್ನು ನೋಡಿರುವ ಇವರೆಲ್ಲಾ ಐನೂರು ಸಾವಿರಕ್ಕೆ ಕೆಲಸ ಮಾಡುತ್ತಾರಾ? ಅಲ್ಲಿಗೆ ಇದು ಕಾರ್ಯಸಾಧುವಲ್ಲವೆಂದಾಯಿತು.

      ಈ ಪತ್ರಿಕೆ ಕಛೇರಿಯವರು ಮೊಂಡುಬಿದ್ದು ವೆಂಡರುಗಳು ಬೇಡ, ಪೇಪರ್ ಹಾಕುವ ಹುಡುಗರೂ ಬೇಡ ಅಂತ ಅಜೆಂಡ ಹೊರಡಿಸಿ, ಈ ದಿನಪತ್ರಿಕೆ ವಿತರಣೆ ಕೆಲಸಕ್ಕೆ ಹೊಸದಾಗಿ ನೂರಾರು ಜನರನ್ನು ನೇಮಿಸಿಕೊಂಡರೂ ಪ್ರತಿಯೊಬ್ಬನೂ ಹೆಚ್ಚೆಂದರೆ ಇನ್ನೂರು ಪೇಪರುಗಳನ್ನು ಮನೆಮನೆಗೆ ತಲುಪಿಸಬಹುದು....ಅಲ್ಲಿಗೆ ಅವನ ಕತೆಯೂ ವೆಂಡರ್‌‍ಗಿಂತ ವ್ಯತ್ಯಾಸವೇನು ಇಲ್ಲ. ಮತ್ತೆ ಅವನ ಕೆಲಸಕ್ಕೆ ವೆಂಡರಿಗೆ ಸಿಗುವ ೧೦% ಅಧಾಯವನ್ನೆ ಸಂಬಳವಾಗಿ ಕೊಟ್ಟರೆ ಅವನಿಗೆ ಅದು ಸಾಲದಾಗಿ ಒಂದೇ ತಿಂಗಳಿಗೆ ಕೆಲಸ ಬಿಟ್ಟು ಓಡುತ್ತಾನೆ. ಅಥವ ಅವರ ಸಂಬಳವನ್ನು ೧೦% ಗೆ ೯೦% ಸೇರಿಸಿ ಕೊಟ್ಟರೆ ಪತ್ರಿಕೆ ಕಂಪನಿಗಳು ಒಂದೇ ತಿಂಗಳಿಗೆ ಬಾಗಿಲು ಮುಚ್ಚಿಕೊಂಡು ಒಳಗೆ ಮಲಗಬೇಕಾಗುತ್ತದೆ.

      ಮತ್ತೇನು ಮಾಡಬಹುದು ಅಂತ ಬೇರ್‍ಎ ದಿಕ್ಕಿನಲ್ಲಿ ಅಲೋಚಿಸಿದಾಗ ಹೀಗೆ ಹೊಸದಾಗಿ ನೇಮಕ ಮಾಡಿಕೊಂಡ ನೂರಾರು ಜನರನ್ನೇ ಮನೆಮನೆಗಳಿಗೆ ವಿತರಿಸುವ ಬದಲು ನೂರು ಇನ್ನೂರು ಪತ್ರಿಕೆಗಳನ್ನು ನೇರವಾಗಿ ಎಲ್ಲಾ ಏರಿಯಗಳಲ್ಲಿರುವ ದೊಡ್ಡ-ಪುಟ್ಟ ಅಂಗಡಿಗಳಿಗೆ ಕೊಟ್ಟರೆ ಅವರು ಭರ್ಜರಿ ವ್ಯಾಪರ ಮಾಡಬಹುದು ಅಂದುಕೊಂಡರೆ ಅದು ಸುಳ್ಳೇ ಸುಳ್ಳು. ನಿಮಗೆ ಮತ್ತೊಂದು ವಿಚಾರ ಗೊತ್ತಿರಲಿ, ಬೆಂಗಳೂರಿನಲ್ಲಿ ಪ್ರಿಂಟ್ ಆಗುವ ಎಲ್ಲಾ ದಿನಪತ್ರಿಕೆಗಳ ಕೇವಲ ೧% ಮಾತ್ರ ಅಂಗಡಿಗಳಲ್ಲಿ ಸೇಲ್ ಆಗುತ್ತವೆ. ಎಷ್ಟೇ ಶ್ರಮವಹಿಸಿ ಚಾಣಕ್ಷತೆ ಮೆರೆದರೂ ಇದು ೫% ದಾಟುವುದಿಲ್ಲ. ಏಕೆ ದಾಟುವುದಿಲ್ಲವೆನ್ನುವುದಕ್ಕೆ ಕಾರಣಗಳನ್ನು ಕೊಡುತ್ತೇನೆ.  ಬೆಂಗಳೂರಿನ ಒಂದು ಏರಿಯದಲ್ಲಿ ನೂರು ಮೀಟರ್ ರಸ್ತೆಯ ಆ ಬದಿ ಈ ಬದಿ ಎರಡು ಅಂಗಡಿಗಳಿದ್ದರೂ ಆ ನೂರು ಮೀಟರ್ ಸುತ್ತಳತೆಯಲ್ಲಿರುವ ಒಂದು ಸಾವಿರ ಮನೆಗಳಲ್ಲಿ ಕೇವಲ ನಲವತ್ತು-ಐವತ್ತು ಮನೆಯವರು ಮಾತ್ರ ಮನೆಯಿಂದ ಹೊರಗೆ ವಾಕಿಂಗ್ ಅಂತ ಬಂದು ಪೇಪರ್ ಕೊಳ್ಳುತ್ತಾರೆ. ಅಲ್ಲಿಗೆ ೫೦ ಪೇಪರ್ ಮಾತ್ರ ಖರ್ಚಾಯಿತು.  ಉಳಿದ ಮನೆಯವರಿಗೆ ಪೇಪರ್ ಓದುವ ಆಸಕ್ತಿಯಿಲ್ಲ ಇಲ್ಲವಾ ಅಂದುಕೊಂಡರೆ ಅವರಲ್ಲಿ ಕಡಿಮೆಯೆಂದರೂ ಇನ್ನೂ ಏಳುನೂರು ಮನೆಗಳವರಿಗೆ ಪೇಪರ್ ಬೇಕಿದೆ. ಆದ್ರೆ  ನಮ್ಮ ಬೆಂಗಳೂರು ಇವರಿಗೆಲ್ಲಾ ಅದೆಂತ ಅರಾಮದಾಯಕ ಜೀವನವನ್ನು ಒದಗಿಸಿಕೊಟ್ಟಿದೆಯೆಂದರೆ ಅವರು ಕುಳಿತಲ್ಲೆ ಮಲಗಿದಲ್ಲೇ ಬೇಕಾದರೆ ವೆಂಡರುಗಳ ಜೊತೆ ಪೇಪರ್ ಹುಡುಗರ ಜೊತೆ ಫೋನಿನಲ್ಲೇ ಅರ್ಧಗಂಟೆ ಮಾತಾಡುತ್ತಾರೆ ಹೊರತು, ಮನೆಯಿಂದ ಹೊರಬಂದು ಮೆಟ್ಟಿಲಿಳಿದು ಪೇಪರ್ ಅಂಗಡಿಯಲ್ಲಿ ಪೇಪರ್ ಕೊಳ್ಳುವುದಿಲ್ಲ. ಇದೆಲ್ಲಾ ನಮ್ಮ ಬೆಂಗಳೂರು ಇವರಿಗೆ ಕರುಣಿಸಿರುವ ಮಾರ್ವಾಡಿ ಬದುಕಿನ ಗಿಪ್ಟ್. ಇದೇ ಲೆಕ್ಕಾಚಾರದಲ್ಲಿ ಈಗ ನೂರು ಮೀಟರ್ ಅಂತರದಲ್ಲಿರುವ ಸಾವಿರ ಮನೆಗಳಲ್ಲಿ ವೆಂಡರುಗಳು-ಪೇಪರ್ ಹುಡುಗರ ಮೂಲಕ ಏಳುನೂರಕ್ಕೂ ಹೆಚ್ಚು ಮನೆಗಳಿಗೆ,  ನೂರು ಮನೆಗಳಿರುವ ಅಪಾರ್ಟ್‍ಮೆಂಟಿನಲ್ಲಿ ೯೫ ಮನೆಗಳ ಬಾಗಿಲಿಗೆ, ಮೆಟ್ಟಿಲ ಮೇಲೆ, ಬಾಲ್ಕನಿಗಳ ಮೇಲೆ, ಪೇಪರುಗಳು ಸುರಕ್ಷಿತವಾಗಿ ತಲುಪುತ್ತಿವೆ ಎನ್ನುವ ವಿಚಾರ ನಿಮ್ಮ ಮನಸ್ಸಿನಲ್ಲಿರಲಿ. ನಾನಿಲ್ಲಿ ವಿವರಿಸಿದ ವಿಚಾರಗಳು ಬೆಂಗಳೂರಿಗೆ ಸೀಮಿತವಾದರೂ ಇತರೆ ನಗರಗಳು ಹಾಗೂ ನಮ್ಮ ಭಾರತದಾದ್ಯಂತ ಒಂದರಡು % ಹೆಚ್ಚು ಕಡಿಮೆಯಾದರೂ ದೊಡ್ಡ ಬದಲಾವಣೆಯೇನಿಲ್ಲ.

     ಮತ್ತೊಂದು ವಿಚಾರ್‍ಅವಿದೆ. ಅದು ಜಾಹಿರಾತಿಗೆ ಸಂಭಂದಿಸಿದ್ದು.  ನೀವ್ಯಾರು ಬೇಕಾಗಿಲ್ಲ. ನೀವಿಲ್ಲದಿದ್ದಲ್ಲಿ ನಮ್ಮ ಪತ್ರಿಕೆ ನಿಂತುಹೋಗುವುದಿಲ್ಲ ನಮಗೆ ಜಾಹಿರಾತಿನ ಅದಾಯವಿದೆ. ಅದರಿಂದ ನಾವು ಪತ್ರಿಕೆಯನ್ನು ನಡೆಸುತ್ತೇವೆ ಬೇಕಾದರೆ  ಪತ್ರಿಕೆಯನ್ನು ಉಚಿತವಾಗಿ ಹಂಚುತ್ತೇವೆ ಅಂತ ಶೂರ ಧೀರ ಏಕಾಂಗಿ ವೀರರಂತೆ ಮುನ್ನುಗ್ಗಿದರೂ ಹಾಗೆ ಉಚಿತವಾಗಿ ಮನೆಮನೆಗೆ ತಲುಪಿಸಲು ನೂರಾರು ಸಾವಿರಾರು ಕೆಲಸಗಾರರು ಬೇಕಾಗುತ್ತದೆ.  ಮತ್ತೆ ಅವರೆಲ್ಲಾ ವೆಂಡರುಗಳು ಮತ್ತು ಪೇಪರ್ ಬಾಯ್‍ಗಳಾಗುವುದಕ್ಕೆ ಆಗುವುದಿಲ್ಲ. ಈ ರೀತಿ ಉಚಿತವಾಗಿ ಹಂಚಿದರೂ ಈಗಿನ ಜಾಹಿರಾತು ತುಂಬಿದ ಪೇಪರುಗಳನ್ನು ಮತ್ತೆ ಹತ್ತು % ಮಾತ್ರ ಹಂಚಲು ಸಾಧ್ಯ. ಇನ್ನೂ ನಾಲ್ಕರಷ್ಟು ಹೆಚ್ಚು ಕೆಲಸಗಾರರನ್ನು ನೇಮಿಸಿ ಮನೆಮನೆಗೆ ಹಂಚುತ್ತೇವೆ. ಅಂತ ಶುರುಮಾಡಿದರೇ ಅದು ಖಂಡಿತ ಚೆನ್ನಾಗಿ ನಡೆಯುತ್ತದೆ.  ಆಹಾ! ಎಲ್ಲಾ ಪತ್ರಿಕೆಗಳು ಉಚಿತವಾಗಿ ಸಿಗುತ್ತಿವೆಯಲ್ಲಾ ಅಂತ ಗ್ರಾಹಕರು ಪುಲ್ ಖುಷ್!  ಆದ್ರೆ ಉಚಿತವಾಗಿ ಹಂಚುವವನು ಉಪ್ಪುಕಾರ ತಿನ್ನುವ, ನವರಸಗಳ ಮನುಷ್ಯರೇ ತಾನೆ!  ಒಂದು ತಿಂಗಳು ತುಂಬಾ ಖುಷಿಯಾಗಿ ತಾವು ಪಡೆಯುವ ಸಂಬಳಕ್ಕೆ ತಕ್ಕಂತೆ ಉಚಿತವಾಗಿ ಮನೆಮನೆಗೆ ಪೇಪರ್ ತಲುಪಿಸುತ್ತಾರೆ.  ಮುಂದಿನ ತಿಂಗಳಿಗೆ ಅವರ ತಲೆ ತಿರುಗುತ್ತದೆ. ಮನೆಮನೆಗೆ ಉಚಿತವಾಗಿ ಏಕೆ ಕೊಡಬೇಕು. ಅದರ ಬದಲು ತೂಕಕ್ಕೆ ಹಾಕಿದರೆ ಸಕ್ಕತ್ ಹಣಬರುತ್ತದಲ್ಲಾ....ಸರಿಯಾಗಿ ಹಾಕಬೇಕು ಎನ್ನುವುದಕ್ಕೆ ಮನೆಯವರೇನು ಹಣಕೊಡುವುದಿಲ್ಲವಲ್ಲ. ಒಂದೆರಡು ದಿನ ತಪ್ಪಿಸಿದರಾಯಿತು..ಅಂದುಕೊಂಡು ಒಂದೆರಡು ದಿನ ತಪ್ಪಿಸಿ ತೂಕಕ್ಕೆ ಹಾಕುತ್ತಾರೆ. ಈ ಸುಲಭದ ಹಣ ಯಾವಾಗ ಕೈತುಂಬ ಸಿಗಲು ಪ್ರಾರಂಭವಾಗುತ್ತದೋ...ಅಲ್ಲಿಗೆ ಅದು ಒಂದು ವಾರ, ತಿಂಗಳು.ಹುಚ್ಚುಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಅಂತ ಈ ಕೆಲಸಗಾರರೆಲ್ಲಾ ಚೆನ್ನಾಗಿ ಹಣ ಮಾಡುತ್ತಾರೆ....ಹೀಗೆ ಮುಂದುವರಿದು  ಪತ್ರಿಕೋದ್ಯಮದ ಮಾರುಕಟ್ಟೆ ವ್ಯವಸ್ಥೆಯೇ ಅಡ್ಡದಾರಿ ಹಿಡಿಯುತ್ತದೆ.  ಜಾಹಿರಾತು ನೀಡುವವರಿಗೆ ಸತ್ಯ ಗೊತ್ತಾಗಿ ಅವರು ಪತ್ರಿಕೆಗೆ ಕೊಡುವ ಜಾಹಿರಾತು ನಿಲ್ಲಿಸಿದರೆ ಅದನ್ನೇ ನಂಬಿಕೊಂಡು ಪತ್ರಿಕೆ ನಡೆಸುವ ಶೂರ ಧೀರರೆಲ್ಲಾ ಟುಸ್ ಪಟಾಕಿಗಳಾಗಿ ತಲೆಮೇಲೆ ಟವಲ್ ಹಾಕಿಕೊಂಡು ಮಕಾಡೆ ಮಲಗಬೇಕಾಗುತ್ತದೆ.

     ಈಗ ಹೇಳಿ ಮುಂಜಾನೆ ದಿನಪತ್ರಿಕೆಯ ನಿಜವಾದ ಹೀರೋಗಳು ಯಾರು? ಭಾರತಕ್ಕೆ ನಂಬರ್ ಒನ್ ಎಂದು ಮೀಸೆ ತಿರುವುವ ಟೈಮ್ಸ್  ಅಫ್ ಇಂಡಿಯಾನ, ಡೆಕ್ಕನ್, ಪ್ರಜಾವಾಣಿ, ಕನ್ನಡಪ್ರಭ, ಉದಯವಾಣಿಯ....ಇತ್ಯಾದಿ ಹತ್ತಾರು ಪತ್ರಿಕೆಗಳ ಮಾಲೀಕರಾ,  ತಾವು ಅದ್ಬುತ ಕಾಲಂ ಲೇಖಕರು ಎಂದು ಬೀಗುವ ಸಂಪಾದಕರಾ, ಹೊರಪ್ರಪಂಚದಲ್ಲಿರುವವರೆಲ್ಲಾ ದಡ್ಡರು, ನಾವು ಬರೆದಿದ್ದೇ ವೇದವಾಕ್ಯ ಎಂದುಕೊಂಡು ಬೈಲೈನ್ ಹಾಕಿಕೊಳ್ಳುವ ವರದಿಗಾರರು ಮತ್ತು ಡೆಸ್ಕ್ ಅಪರೇಟರುಗಳಾ? ವಾರಕ್ಕೊಂದು ಕಾಲಂ ಬರೆಯುವ ಪ್ರಖ್ಯಾತ ಲೇಖಕರಾ?  ಪುಟಗಟ್ಟಲೇ ಜಾಹಿರಾತು ಹಾಕಿಸಿ ಜನರನ್ನು ಟೆಂಪ್ಟ್ ಮಾಡುತ್ತಿರುವ ಜಾಹಿರಾತು ಕಂಪನಿಗಳಾ? ಇರುವುದರಲ್ಲೇ ಸ್ವಲ್ಪ ವಾಸಿ ಎನ್ನುವಂತೆ ವೆಂಡರುಗಳನ್ನು ಪುಸಲಾಯಿಸುತ್ತಾ, ಕಛೇರಿಯಲ್ಲಿ ಸರ್ಕುಲೇಷನ್ ಹೆಚ್ಚು ಮಾಡಬೇಕು ಅಂತ ಮಾಡುವ ತಾಕೀತನ್ನು ಸಹಿಸಿಕೊಳ್ಳುವ ಮಾರುಕಟ್ಟೆ ವಿಭಾಗದ ಪ್ರತಿನಿಧಿಗಳಾ? 

    ಜನರ ಮಾನಸಿಕ ಸ್ಥಿತಿಗತಿಗಳನ್ನು ಬದಲಾಯಿಸುವ ನಾವೇ ಹೀರೋಗಳು ಅಂತ ಭ್ರಮೆಯಲ್ಲಿರುವವರು. ಈ ಭ್ರಮೆಯಲ್ಲಿರುವುದಕ್ಕೆ ಅವರಿಗೆ ವರ್ಷಕ್ಕೊಮ್ಮೆಯಾದರೂ ಅವರಿಗೆ ವೆಂಡರ್ಸ್ ಡೇ ನೆನಪಾಗುವುದಿಲ್ಲ. ವೆಂಡರುಗಳ ಕಷ್ಟಗಳು ಮನಸ್ಸಿಗೆ ಬರುವುದಿಲ್ಲ. ಇದುವರೆಗೂ ಒಬ್ಬಸಂಪಾದಕ, ಸಹಸಂಪಾದಕನಾಗಲಿ, ವರದಿಗಾರನಾಗಲಿ, ಪ್ರಖ್ಯಾತ ಲೇಖನರಾಗಲಿ, ವಾರಕ್ಕೊಂದು ಕಾಲಂ ಬರೆಯುವ ಡೆಸ್ಕ್ ಆಪರೇಟರುಗಳಾಗಲಿ ಒಬ್ಬ ವೆಂಡರ್‍ಅನ್ನು ಸಂದರ್ಶಿಸಿಲ್ಲ. ಪೇಪರ್ ಹುಡುಗನ ಸ್ಥಿತಿ ಗತಿ ತಿಳಿದಿಲ್ಲ.


  ನಂಬರ್ ಒನ್ ಪತ್ರಿಕೆಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುವವರ ಮನೆಗೆ ಪೇಪರ್ ಹಾಕುತ್ತೇನೆ. ಆರಾಮ ಸೋಪ ಮೇಲೆ ಕುಳಿತು ಟೀಪಾಯ್ ಮೇಲೆ ಕಾಲುಚಾಚಿ ಎದುರಿನ ಗೋಡೆಯಲ್ಲಿನ ನಲವತ್ತು ಇಂಚಿನ ಟಿವಿಯನ್ನು ನೋಡುವ ಅವರಿಗೆ ನಾಲ್ಕು ಅಡಿ ಅಗಲ ಎಂಟು ಅಡಿ ಉದ್ದ ಮಲಗಿದರೆ ಕಾಲು ಚಾಚಲು ಆಗದ ನಮ್ಮ ಪೇಪರ್ ಹುಡುಗನ ಪುಟ್ಟ ಗುಡಿಸಲು ಗೊತ್ತಿಲ್ಲ. ಜಾಹಿರಾತು ಹಣಕ್ಕಾಗಿ ಗಂಡು ಹೆಣ್ಣಿನ ಅರೆಬೆತ್ತಲೆ ಫೋಟೊಗಳನ್ನು ಹಾಕುವ ನಮ್ಮ ಸಂಪಾದಕರಿಗೆ ಅರಕಲು ಕುಪ್ಪಸ, ಸೀರೆ ಹಾಕಿಕೊಂಡ ನಮ್ಮ ಸಾವಿರಾರು ಪೇಪರ್ ಹುಡುಗರ ತಾಯಂದಿರ ಸ್ಥಿತಿಯ ಕಲ್ಪನೆಯಿಲ್ಲ.

      ಈಗ ಮತ್ತೆ ಮೊದಲೆರಡು ಪ್ಯಾರಗಳನ್ನು ನೆನಪಿಸಿಕೊಳ್ಳೋಣ. ನಮ್ಮ ಭಾರತದಾಧ್ಯಂತ ಇರುವ ಇಂಥ ನೂರಾರು ಸಾವಿರಾರು, ಲಕ್ಷಾಂತರ ಪುಟ್ಟ ಪುಟ್ಟ ಮನೆ, ಗುಡಿಸಲು,...ಮುಂತಾದವುಗಳಲ್ಲಿರುವ ನಮ್ಮ ಪೇಪರ್ ಹಾಕುವ ಹುಡುಗರೆಲ್ಲಾ ನಾಳೆಯಿಂದ ಪೇಪರ್ ಹಾಕಬಾರದೆಂದು ತೀರ್ಮಾನಿಸಿ "ಸಮೂಹ ಸನ್ನಿಗೆ ಒಳಗಾಗಿಬಿಟ್ಟರೆ"........ನಮ್ಮ ಭಾರತದಲ್ಲಿ ಮುಂಜಾನೆ ದಿನಪತ್ರಿಕೆ ಉದ್ಯಮ ಮಕಾಡೆ ಮಲಗುತ್ತದೆ. ಈಗ ನಿಮ್ಮ ಎದೆ ಬಡಿತವೂ ಒಂದು ಕ್ಷಣ ನಿಂತಂತೆ ಅಯ್ತಲ್ಲವೇ....ಜನರನ್ನು ಮೆಚ್ಚಿಸುವ ಸಲುವಾಗಿ ಉಪ್ಪು ಖಾರ, ಮಸಾಲೆಗಳನ್ನು ತಮ್ಮ ಲೇಖನಗಳಲ್ಲಿ ತುರುಕುವ, ನಮ್ಮ ಪತ್ರಿಕೆಗಳ ಸಂಪಾದಕರು, ವರದಿಗಾರರು ಈ ಮುಂಜಾನೆ ಹೀರೋಗಳು ಕೈಕೊಟ್ಟರೆ.....ಆ ಮಸಾಲಯುಕ್ತ ಬಿಸಿಬಿಸಿ ಪತ್ರಿಕೆಗಳನ್ನು ತಮ್ಮ ತಮ್ಮ ಮನೆಗಳ ಟೆರಸ್ ಮೇಲೆ ಹರಡಿ ಅದರ ಮೇಲೆ ಹಪ್ಪಳ ಸಂಡಿಗೆಗಳನ್ನು ಒಣಗಿಸುತ್ತಾ, ಅದನ್ನು ಕದ್ದು ತಿನ್ನಲು ಬರುವ ಕಾಗೆ ಕೋತಿಗಳನ್ನು ಓಡಿಸುತ್ತಾ ಕೂರಬೇಕಾಗುತ್ತದೆ. ಏನಂತೀರಿ?

   ಇದುವರೆಗೂ ದಿನಪತ್ರಿಕೆ ವೆಂಡರುಗಳು ಮತ್ತು ಪೇಪರ್ ಹುಡುಗರು ಗ್ರೇಟ್, ಸೆಲೆಬ್ರಿಟಿಗಳು, ಹೀರೋಗಳು, ಅವರಿಲ್ಲದಿದ್ದರೇ ಬೆಳಗಾಗುವುದಿಲ್ಲ ಅಂತ ಹೇಳಲಿಕ್ಕೆ ನಾನು ಈ ಲೇಖನವನ್ನು ಖಂಡಿತ ಬರೆಯಲಿಲ್ಲ. ಸದ್ಯ ನಮ್ಮ ಸ್ಥಿತಿಗತಿಯನ್ನು ನೇರವಾಗಿ ವಿವರಿಸುತ್ತಿದ್ದೇನೆ ಅಷ್ಟೆ. ಹಾಗಾಂತ ಎಲ್ಲಾ ದಿನಪತ್ರಿಕೆ ಸಂಪಾದಕರು, ರಿಪೋರ್ಟರುಗಳು, ಡೆಸ್ಕ್ ಆಪರೇಟರುಗಳು ಮಾರುಕಟ್ಟೆ ಪ್ರತಿನಿಧಿಗಳು ಕೆಟ್ಟವರಲ್ಲ. ಒಳ್ಳೆಯ ಸಂಪಾದಕರು, ರೆಪೋರ್ಟರುಗಳು, ಪ್ರತಿನಿಧಿಗಳು ಇದ್ದಾರೆ. ಅವರಿಂದಲೇ ವೆಂಡರುಗಳ ಮತ್ತು ಪೇಪರ್ ಹುಡುಗರಿಗೆ ಬೆಳಗಿನ ಕೆಲಸ ಸಿಗುತ್ತಿದೆ. ಅದಕ್ಕಾಗಿ ಈ ಲೇಖನದಿಂದಾಗಿ ಬೇರೆ ಗ್ರಾಹಕರು, ಮತ್ತು ಪತ್ರಿಕೋದ್ಯಮದವರು ತಪ್ಪು ತಿಳಿಯಬಾರದಾಗಿ ವಿನಂತಿ.

       ಮತ್ತೊಂದು ವಿಚಾರವೇನೆಂದರೆ, ಈ ಲೇಖನದಲ್ಲಿರುವ ಕೆಲವು ಅಂಶಗಳನ್ನು ತುಂಬಾ ನೇರವಾಗಿ ಬರೆದಿರುವುದರಿಂದ ನನ್ನ ಪತ್ರಕರ್ತ ಗೆಳೆಯರು, ಪತ್ರಿಕೆಯಲ್ಲಿ ಕೆಲಸಮಾಡುವ ಡೆಸ್ಕ್ ಆಪರೇಟರುಗಳು, ಸಂಪಾದಕರು ಒಪ್ಪದಿರಬಹುದು. ಇಲ್ಲಿ ಇವೆರೆಲ್ಲ ಕೆಟ್ಟವರು ಅಂತ ಹೇಳಲು ಪ್ರಯತ್ನಿಸಿಲ್ಲ. ಯಾರ ಮನಸ್ಸನ್ನು ನೋಯಿಸುವ ಉದ್ದೇಶವೂ ನನಗಿಲ್ಲ.  ನಮ್ಮ  ಮುಂಜಾನೆ ಸತ್ಯದ ನೋವುಗಳನ್ನು ಹೊರಜಗತ್ತಿಗೆ ತೋರಿಸಲು ಪ್ರಯತ್ನಿಸಿದ್ದೇನೆ. ಮತ್ತೆ ಸಮೂಹ ಸನ್ನಿ ಎನ್ನುವ ಪದಕ್ಕೂ ಚಳುವಳಿಗೂ ಹೋಲಿಸಿ ಇಲ್ಲಿ ಬರೆದಿರುವುದು ತಪ್ಪು ಅಂತ ನನಗೂ ಗೊತ್ತು.  ಆದಕ್ಕಾಗಿ ಅದನ್ನು "ಆರೋಗ್ಯಕರ ಸಮೂಹ ಸನ್ನಿ" ಎಂದು ಹೇಳಿದ್ದೇನೆ. ನಾನು ಬರೆಯುವ ಸಮಯದಲ್ಲಿ ನನಗೆ ಹೊಳೆದ ಪದ ಇದೊಂದೆ. ಆ ಕಾರಣಕ್ಕೆ ಅದನ್ನೇ ಹೈಲೈಟ್ ಮಾಡಿ ಲೇಖನದ ದಿಕ್ಕು ತಪ್ಪಿಸಬಾರದಾಗಿ ವಿನಂತಿ. ಈ ಪದಕ್ಕಿಂತ ಉತ್ತಮ ಪದವಿದ್ದಲ್ಲಿ ತಿಳಿಸಿದರೆ ಸ್ವಾಗತಿಸುತ್ತೇನೆ ಮತ್ತು ನಾನು ಕಲಿತಂತಾಗುತ್ತದೆ.

     ಮತ್ತೆ ಅನಾಮಧೇಯ ನಾಮದಲ್ಲಿ ವಿತಂಡವಾದ, ಇತ್ಯಾದಿ comments ನೀಡಿದರೆ ಅದಕ್ಕೆ ಉತ್ತರಿಸದೆ  ಡಿಲಿಟ್ ಮಾಡಲಾಗುವುದು.  ಇಲ್ಲಿರುವ ವಿಚಾರಗಳಿಗಾಗಿ ನಿಮ್ಮ ಪ್ರತಿಕ್ರಿಯೆಗಳು ಆರೋಗ್ಯಕರವಾಗಿದ್ದು ಚರ್ಚೆಗೆ ಅವಕಾಶ ಮಾಡಿಕೊಟ್ಟರೆ ಎಲ್ಲರಿಂದ ಎಲ್ಲರೂ ಕಲಿಯಲು ಅವಕಾಶವಾಗುತ್ತದೆ.

ಈ ಲೇಖನ "ಸಂಪಾದಕೀಯ" ಬ್ಲಾಗಿನಲ್ಲೂ ಪ್ರಕಟವಾಗಿದೆ ಬೇಕಿದ್ದವರು ಅಲ್ಲಿಯೂ ಓದಬಹುದು.
http://sampadakeeya.blogspot.com/2011/10/blog-post.html#comments

ಚಿತ್ರಗಳು ಮತ್ತು ಲೇಖನ
ಶಿವು.ಕೆ