Friday, March 25, 2011

ಮೂರುಮುಕ್ಕಾಲು ಅಕ್ಷರಗಳ ಹೆಸರಿನ ಈ ಊರಿನ ಸಾಧನೆ ನಿಮಗೆ ಗೊತ್ತೆ.?


            ನಾನು ಮತ್ತು ಮಲ್ಲಿಕಾರ್ಜುನ್ ಮೊದಲ ಭಾರಿಗೆ ಕಾನ್ಸೂರಿನಲ್ಲಿ ಬಸ್ಸಿಳಿದಾಗ ಮುಂಜಾನೆ ೫-೩೦.  ಕತ್ತಲು  ಏನು ಕಾಣುತ್ತಿಲ್ಲ. ಜನವರಿ ತಿಂಗಳಾದ್ದರಿಂದ  ಹಿಮದಿಂದ ಕೂಡಿದ ಚಳಿ. ೬-೩೦ರವರೆಗೆ ಫೋಟೋಗ್ರಫಿ ದೃಷ್ಠಿಯಿಂದ ಇಷ್ಟಪಟ್ಟು, ವೈಯಕ್ತಿಕವಾಗಿ ಕಷ್ಟಪಟ್ಟು ಅದನ್ನು ಅನುಭವಿಸುತ್ತಿದ್ದೆವು.  ನಾಗೇಂದ್ರ ಜೊತೆಗೆ ನಾಲ್ಕು ಕಿಲೋಮೀಟರ್ ದೂರ ಪಕ್ಕಾ ಮಣ್ಣಿನ ಪುಟ್ಟ ರಸ್ತೆಯಲ್ಲಿ ಮುತ್ಮುರ್ಡು ಅನ್ನುವ  ಎಂಟೇ ಮನೆ ಇರುವ ಊರು ತಲುಪುವ ಹೊತ್ತಿಗೆ ೭ ಗಂಟೆ.  ಡಿಲಕ್ಸ್ ಬಸ್ಸು ಸಿಗದೇ ಸರ್ಕಾರಿ ಆರ್ಡಿನರಿ ಎಕ್ಸ್‌ಪ್ರೆಸ್ಸಿನ  ಕೊನೆ  ಸೀಟಿನಲ್ಲಿ ರಾತ್ರಿ ಪ್ರಯಾಣ, ಮತ್ತು ಈ ಮಣ್ಣಿನ ರಸ್ತೆಗಳು  ನಮ್ಮ  ಮೂಳೆಗಳ ಜಾಗ ಬದಲಿಸಿದ್ದವು.

ಮುತ್ಮರ್ಡುಗೆ ಹೋಗುವ ಏರಿಳಿತದ ಮಣ್ಣಿನ ದಾರಿ

 ನಂತರ ನಾಗೇಂದ್ರ ಮನೆಯಲ್ಲಿ ಬಿಸಿಬಿಸಿ ಸ್ನಾನಮಾಡಿ "ತುಪ್ಪ ಮತ್ತು ಜೋನಿಬೆಲ್ಲದ ಜೊತೆಗೆ ತೆಳ್ಳೇವು"  ತಿನ್ನುವಲ್ಲಿ ಪ್ರಾರಂಭವಾಗಿ ಅಲ್ಲಿದ್ದ ಮೂರು ದಿನದಲ್ಲಿ ನಮ್ಮ ಫೋಟೋಗ್ರಫಿ, ಊರಿನ ಜನರ ಒಡನಾಟ ಮಕ್ಕಳೊಂದಿಗೆ ಮಕ್ಕಳಾಗಿದ್ದು,  ದೊರತ ಮುಗ್ದ ಪ್ರೀತಿ, ಮರುವರ್ಷ  ಮಲ್ಲಿಕಾರ್ಜುನ್ ಕುಟುಂಬ ಸಮೇತರಾಗಿ ಹೊರಟು ನಿಂತಾಗ ನಾನು ಹೇಮಾಶ್ರೀಯನ್ನು ಕರೆದುಕೊಂಡು ಹೋಗಿದ್ದು ಇದ್ದ ಮೂರುದಿನ  ಮಜ ಅನುಭವ, ಇತ್ಯಾದಿಗಳನ್ನು  ಚೆನ್ನಾಗಿ ಅನುಭವಿಸಿದರೂ  ಅದನ್ನು ಬರೆಯದೇ  ಮೂರುಮುಕ್ಕಾಲು ಅಕ್ಷರಗಳ ಮುತ್ಮುರ್ಡು ಎಂಬ ಊರು, ಊರಿನ ಜನರ ಸಾಧನೆ ಬಗ್ಗೆ ಕಿರು ಪರಿಚಯ ಮಾಡಿಕೊಡಲೆತ್ನಿಸುತ್ತೇನೆ.

ದಟ್ಟ ಕಾಡಿನ ನಡುವೆ ಕಾಣುವ ಹೆಂಚಿನ ಮನೆಗಳೇ ಮುತ್ಮರ್ಡು ಎನ್ನುವ ಊರು.
            
 ಮೊದಲಿಗೆ ಅರವತ್ತು ವರ್ಷಗಳ ಹಿಂದೆ ಕೇವಲ ಮೂರು ಮನೆಗಳಿದ್ದ  ಈ ಊರಿನ  ಫೋಟೋವನ್ನು ಮನಸ್ಸಿನಲ್ಲೇ ಕ್ಲಿಕ್ಕಿಸಿಕೊಳ್ಳಿ.   ಆಗ ವಿದ್ಯುತ್  ಇರಲಿಲ್ಲ[ಈಗ ಇದ್ದರೂ  ಇಲ್ಲದಂತಿದೆ]. ಸೀಮೆಯೆಣ್ಣೆ, ಅಥವ  ಎಳ್ಳೆಣ್ಣೆ ದೀಪಗಳೇ  ರಾತ್ರಿಯ  ಕತ್ತಲು ನಿವಾರಿಸುವ  ಬೆಳಕುಗಳು.  ಆಗ  ಓದು ಬರಹ ಬರದ ಹೆಬ್ಬೆಟ್ಟು ಸಹಿಯ ಈ ಊರಿನ  "ಗಣೇಶ್ ಹೆಗಡೆ" ಎಂಬುವರು  ದೂರದ  ಶರಾವತಿ ವಿದ್ಯುತ್ ಕಾರ್ಯಗಾರಕ್ಕೆ  ಹೋಗಿ,  ಅಲ್ಲಿನ  ವಿದ್ಯುತ್ ಉತ್ಪಾದಿಸುವ ದೊಡ್ಡ ದೊಡ್ಡ ಟರ್ಬೈನುಗಳನ್ನು ನೋಡಿದರಂತೆ.  ಮತ್ತೆ  ಮತ್ತೆ  ಹೋಗಿ  ಅವುಗಳನ್ನು ಚೆನ್ನಾಗಿ ಅಧ್ಯಾಯನ ಮಾಡಿ, ನಂತರ ಸಿರಸಿಯ  ಮರಗೆಲಸದವರ ಬಳಿ  ತಮಗೇ ಬೇಕಾದ ಹಾಗೆ  ಆಡಿಕೆ ಮರದ ತುಂಡುಗಳಿಂದ  ಚಿಕ್ಕ ಚಿಕ್ಕ ಟರ್ಬೈನುಗಳನ್ನು ಮಾಡಿಸಿಕೊಂಡರಂತೆ.  ಊರಿನ ಪಕ್ಕದ ಬೆಟ್ಟದಲ್ಲಿ  ಹರಿಯುತ್ತಿದ್ದ  ನೀರಿನ ಝರಿಗೆ  ಒಂದು ದೊಡ್ಡ ಕೊಳವೆಯನ್ನು  ಹೊಂದಿಸಿ,  ಕೆಳಮುಖದಲ್ಲಿ  ಕೊಳವೆಯ ಮುಖಾಂತರ  ವೇಗವಾಗಿ  ಈ ಮರದ ಟರ್ಬೈನುಗಳ ಮೇಲೆ ನೀರು ಬೀಳುವಂತೇ ಮಾಡಿ ಅದರಿಂದ  ವಿದ್ಯುತ್ಚಕ್ತಿ ಉತ್ಪಾದಿಸುತ್ತಿದ್ದರಂತೆ.  ಅದನ್ನು ತಮ್ಮ  ಮನೆಯ  ಸಂಪೂರ್ಣ ಬೆಳಕಿಗೆ, ತೋಟದ ಕೆಲಸಕ್ಕೆ, ಹೀಗೆ  ಇಪ್ಪತ್ತು ವರ್ಷಗಳವರೆಗೆ   ಉಪಯೋಗಿಸುತ್ತಿದ್ದರಂತೆ. ಇಷ್ಟೇ ಅಲ್ಲದೇ  ಕಾಡಿನಲ್ಲಿ ಸಿಗುವ ಗಿಡಮೂಲಿಕೆ ಗಿಡಗಳಿಂದ ಮದ್ದು ಮಾಡುವುದನ್ನು ಕಲಿತು ಸುತ್ತಮುತ್ತಲಿನ ಊರಿನ ಜನರಿಗೆ ಉಚಿತವಾಗಿ ಚಿಕಿತ್ಸೆ ಮಾಡುವುದು  ಹೀಗೆ  ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರಂತೆ.

ಐವತ್ತು ವರ್ಷಗಳ ಹಿಂದೆಯೇ ಹರಿಯುವ ನೀರಿನಿಂದ ಜಲವಿದ್ಯುತ್ ಉತ್ಪಾದಿಸಿ ಮನೆ ಬಳಕೆಗೆ ಬಳಸಿಕೊಂಡ ಗಜಾನನ ಹೆಗಡೆ ದಂಟಕಲ್

 ಈಗ ಎಂಟು ಮನೆಗಳಿವೆ.  ಈ ಬೆರಳೆಣಿಕೆಯ ಮನೆಯಲ್ಲಿರುವ  ಪುಟ್ಟ ಮಕ್ಕಳಿಗೆ ಒಂದು ಸ್ಕೂಲು. ಗಾಂಧಿ ಜನ್ಮ ಶತಾಬ್ಧಿ ವತಿಯಿಂದ ಈ ಊರಿಗೆ ಸ್ಕೂಲು ಬಂದಿದೆ.  ಊರಿನಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಪುಟ್ಟ ಗುಡ್ಡದ ಮೇಲಿರುವ ಈ ಸ್ಕೂಲು ಕೂಡ ವಿಶೇಷವಾದುದ್ದೇ.   ವಿಕಾಶ, ಜಯಂತ, ಅಶ್ವಿನಿ, ಮಧುರ, ಭರತ, ಸ್ವಾತಿ, ........ಇಷ್ಟೇ ಜನ  ಆ ಶಾಲೆಯ ವಿದ್ಯಾರ್ಥಿಗಳು. 

 ಮುತ್ಮರ್ಡು ಪಾಠಶಾಲೆ

ಈ ಸ್ಕೂಲಿನ ಸ್ಥಾಪಕರಾದ ಸುಬ್ರಾಯ ಹೆಗಡೆ

ಜಯಂತ ದೊಡ್ಡಬಿನ್ನೆತ್ತಿ[ಯುಕೆಜಿ]ಆದರೆ ಆಶ್ವಿನಿ ಚಿಕ್ಕ ಬಿನ್ನೆತ್ತಿ[ಎಲ್‌ಕೆಜಿ]. ವಿಕಾಶ ಎರಡನೇ ತರಗತಿಯಾದರೇ, ಭರತ ನಾಲ್ಕನೇ ತರಗತಿ. ಸ್ವಾತಿ ಹಾಗೂ ಮಧುರ ಐದನೇ ತರಗತಿ.  ಈ ಆರು ಜನಕ್ಕೆ  ಒಬ್ಬ  ಉಪದ್ಯಾಯರು  ಹಾಗೂ  ಬಿಸಿಊಟಕ್ಕಾಗಿ ಒಬ್ಬರು ಆಡಿಗೆಯವರು ಕೇಳುವುದಕ್ಕೆ  ತುಂಬಾ ಚೆನ್ನಾಗಿದೆಯಲ್ಲವೇ...ನಾವು  ಈ ಶಾಲೆ ನೋಡಲು ಹೋದಾಗ  ಈ ಆರು ಜನ  ಜನರು ಒಂದೇ ಮಣೆಯಲ್ಲಿ ಕುಳಿತು ಓದುತ್ತಿದ್ದರು.

ಎಲ್‍ಕೆಜಿಯಿಂದ....ಆರನೇ ತರಗತಿ....ಒಂದೇ ಕೊಟಡಿಯಲ್ಲಿ ಅದರಲ್ಲೂ ಒಂದೇ ಬೆಂಚಿನಲ್ಲಿ ಕುಳಿತಿದ್ದಾರೆ
ಹೀಗೆ ಒಟ್ಟಿಗೆ ಕೂರುವುದರಿಂದ ಚಿಕ್ಕಬಿನ್ನೆತ್ತಿ[ಎಲ್‍ಕೆಜಿ]ಆಶ್ವಿನಿ ಸೇರಿದಂತೆ ಉಳಿದವರು   ಐದನೇ ತರಗತಿ ಪಾಠ ಕೇಳಬಹುದು...ಹಾಗೇ  ಸ್ವಾತಿ ಮತ್ತು ಮಧುರ ಇಬ್ಬರೂ  ಒಂದನೇ, ಎರಡನೇ,[ಮೂರನೇ ತರಗತಿಗೆ ಮಕ್ಕಳೇ ಇಲ್ಲ]ನಾಲ್ಕನೇ ತರಗತಿಯ ಪಾಠಗಳನ್ನು ಕೇಳಬಹುದು...ಇಂಥ  ಆವಕಾಶ  ಎಲ್ಲಾದರೂ ಉಂಟೇ....ಇದನ್ನೆಲ್ಲಾ  ನೋಡಿ  ನಮಗಂತೂ ಅಚ್ಚರಿ..

ಮುತ್ಮರ್ಡು ಊರಿನ ಮಕ್ಕಳು..ಆಶ್ವಿನಿ, ಜಯಂತ, ವಿಕಾಸ, ಸುಹಾಸ, ಭರತ,  ಆಶ್ವಿನಿ ಅಣ್ಣ...ನಡುವೆ ಇರುವವನು ಮಲ್ಲಿಕಾರ್ಜುನ್ ಮಗ "ಓಂ" ಅವನೊಬ್ಬ ಮಾತ್ರ ಮುತ್ಮರ್ಡು ಊರಿನವನಲ್ಲ.

ಈ ಮಕ್ಕಳು  ಪ್ರತಿದಿನ ಸಂಜೆ ಮನೆಗೆ ಬರುವಾಗ  ಕಾಡುಕೋಣದಂತ  ವನ್ಯಜೀವಿಗಳು ಎದುರಾಗುತ್ತವೆ.  ಅವುಗಳು  ಎದುರಾದಾಗ ಅವುಗಳ ತಂಟೆಗೆ ಹೋಗದೆ  ಸುಮ್ಮನೇ ನಿಂತು ಬಿಟ್ಟರೇ  ತಮ್ಮ ಪಾಡಿಗೆ ಅವು ಹೊರಟು ಹೋಗುತ್ತವೆ ಎನ್ನುವ ಪಾಠವನ್ನು  ಎಲ್ಲರ ಮನೆಯಲ್ಲೂ ಹೇಳಿಕೊಟ್ಟಿರುವುದರಿಂದ  ಈ ಮಕ್ಕಳು ಕಾಡುಪ್ರಾಣಿಗಳ ಜೊತೆ ಹೊಂದಿಕೊಂಡುಬಿಟ್ಟಿವೆ.

    ಮುಂದಿನ ವರ್ಷಗಳಲ್ಲಿ  ಈಗಿರುವ ಮಕ್ಕಳು ಪಾಸಾಗಿ ಮುಂದಿನ ತರಗತಿ ಹೋಗಿಬಿಟ್ಟರೇ ಆ ಶಾಲೆಗೆ ಮಕ್ಕಳೇ ಇರುವುದಿಲ್ಲ  ಈಗ  ಊರಿನ ಯುವಕರೆಲ್ಲಾ ದುಡಿಮೆಗಾಗಿ ನಾಡಿಗೆ ಬರುತ್ತಿರುವುದರಿಂದ  ಮುಂದಿನ ವರ್ಷಗಳಲ್ಲಿ  ಅಲ್ಲಿರುವವರು  ವಯಸ್ಸಾದ ಹಿರಿಯರು ಮಾತ್ರ.  ಆಗ ಈ ಸ್ಕೂಲಿನ ಗತಿ  ಏನಾಗುತ್ತದೋ ನೋಡಬೇಕು.   ಕಾನ್ಸೂರು..ಸಿರಸಿ  ಈ ಊರಿಗೆ ತುಂಬಾ ದೂರವಿರುವುದರಿಂದ  ಊರಿನ ಜನ ಅದಕ್ಕೆ ತಕ್ಕಂತೆ  ಹೊಂದಿಕೊಂಡುಬಿಟ್ಟಿದ್ದಾರೆ.  ಊರಿನಲ್ಲಿ  ಮದುವೆ, ಮುಂಜಿ...ಇತ್ಯಾದಿ ಏನೇ ದೊಡ್ಡ ಕಾರ್ಯಕ್ರಮಗಳಾಗಲಿ, ಹೊರಗಿನವರ ಸಹಾಯವಿಲ್ಲದೇ  ಇಡೀ ಊರಿನ  ಎಂಟು ಮನೆಗಳವರು ತಮ್ಮದೇ ಮನೆಯ ಕಾರ್ಯಕ್ರಮವೆನ್ನುವಂತೆ ಆತ್ಮೀಯವಾಗಿ ಒಂದಾಗುವುದರಿಂದ  ತುಂಬಾ ಚೆನ್ನಾಗಿ ನಡೆಯುತ್ತವೆ

ಊರಿನ ಹಿರಿಯರೆಲ್ಲಾ  ಆಡಿಕೆ ಕೃಷಿಯನ್ನು ಹೆಚ್ಚಾಗಿ  ಅವಲಂಬಿಸಿರುವುದರಿಂದ  ಇಡೀ ಮನೆಯ ಜನಕ್ಕೆ  ದಿನದ ೨೪ ಗಂಟೆಯೂ ಕೆಲಸ. ಕೆಲವರಿಗೆ ಓದು ಬರಹ ಬರದಿದ್ದರೂ  ಇನ್ನೊಬ್ಬರ ಮೇಲೆ ಅವಲಂಬಿಸದೇ ಬದುಕುವುದನ್ನು ಕಲಿತಿರುವುದರಿಂದ  ಇಲ್ಲಿರುವ ಪ್ರತಿಯೊಂದು ವಸ್ತುವನ್ನು ಉಪಯೋಗದ ವಸ್ತುವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.  ಊದಾ: ಹಸುಗಳಿಂದ ಹಾಲು ಮೊಸರು  ಮತ್ತು ಅವುಗಳ ಸಗಣಿಯಿಂದ  ಪ್ರತಿಯೊಂದು ಮನೆಯವರು ತಮ್ಮ ಮನೆಗೆ ಬೇಕಾದ ಗೋಬರ್ ಗ್ಯಾಸ್  ಮಾಡಿಕೊಂಡು  ಆಡಿಗೆ ಅನಿಲವನ್ನು  ತಾವೆ ಸ್ವತಃ ತಯಾರಿಸಿಕೊಳ್ಳುತ್ತಾರೆ.  ಇನ್ನೂ  ತಮಗೆ ಬೇಕಾದ ತರಕಾರಿಗಳು, ಹೂ ಹಣ್ಣುಗಳನ್ನು ತಮ್ಮ ಮನೆಯ ಅಂಗಳದಲ್ಲೇ ಬೆಳೆಯುತ್ತಾರೆ.  ಹಿರಿಯರು ಮತ್ತು ಮನೆಯ ಹೆಣ್ಣುಮಕ್ಕಳು ತಮಗೆ ಬೇಕಾದ ಔಷದೀಯ ಗಿಡಗಳನ್ನು ತಮ್ಮ  ತೋಟ, ಅಂಗಳದಲ್ಲಿಯೇ ಬೆಳೆಸುವುದರಿಂದ ಮಕ್ಕಳಿಂದ ಹಿರಿಯರಾದಿಯಾಗಿ ಯಾರಿಗೂ ಖಾಯಿಲೆಯ ಸಮಸ್ಯೆಯಿಲ್ಲ.  ಬಂದರೂ  ವೈದ್ಯರ ಸಹಾಯವಿಲ್ಲದ  ಮನೆಮದ್ದು ಮಾಡುವುದರಲ್ಲಿ  ಆನುಭವವುಳ್ಳವರಾಗಿದ್ದಾರೆ. ಪರಿಶುದ್ಧಗಾಳಿ,  ಸದಾ ಹಸಿರಾಗಿರುವ  ಇಂಥ ವಾತಾವರಣದಲ್ಲಿ ಬೆಳೆಯುವವರಿಗೆ ರೋಗವೆಲ್ಲಿ ಬರುತ್ತದೇ ಹೇಳಿ...!

     ರಾತ್ರಿ ಹನ್ನೊಂದು ಗಂಟೆಗೆ ನಿಮಗೆ ನಿದ್ದೆ ಬರದಿದ್ದಲ್ಲಿ  ಎದ್ದು ಒಮ್ಮೆ  ಮಂದಬೆಳಕಿನತ್ತ  ಕಣ್ಣು ಹಾಯಿಸಿ  ಆತ  ಅಲ್ಲೇನೋ ಆಡಿಕೆ ಕೆಲಸ ಮಾಡುತ್ತಿರುತ್ತಾರೆ.  ಮತ್ತೆ  ಬೆಳಿಗ್ಗೆ  ಐದುಗಂಟೆಗೆ  ನಿಮಗೆ ಎಚ್ಚರವಾಗಿಬಿಟ್ಟಿರೇ  ಮತ್ತದೇ ಮಬ್ಬುಗತ್ತಲ  ಚಳಿಯ ಮುಂಜಾವಿನಲ್ಲಿ  ಈತ  ಹಸುವಿನ  ಕೊಟ್ಟಿಗೆಯಲ್ಲಿ  ಸಗಣಿ ತೆಗೆಯುವುದು..ಹಾಲುಕರೆಯುವುದು ಏನೋ ಮಾಡುತ್ತಿರುತ್ತಾರೆ.  ಎದ್ದು ಎಷ್ಟೋ ಹೊತ್ತಾಗಿರಬಹುದು ಅಂತ ಅವರನ್ನು ನೋಡಿದರೆ  ಅನ್ನಿಸುತ್ತದೆ.  ಇವೆಲ್ಲಾ ಕೆಲಸ ಮುಗಿಸಿ,  ಯೋಗ, ಪ್ರಾಣಾಯಾಮ, ಸ್ನಾನ  ಸಂದ್ಯಾ ವಂದನೆ, ದೇವರ ಪೂಜೆ ಮುಗಿಸುವ ಹೊತ್ತಿಗೆ  ಬೆಳಿಗ್ಗೆ ಏಳುಗಂಟೆ...ಬಿಸಿಬಿಸಿ  ನೀರು ದೋಸೆ ತಿಂದು, ಕಸಾಯ ಕುಡಿದು  ತೋಟಕ್ಕೆ ಹೊರಟರೆಂದರೇ...ಮತ್ತೆ ಬರುವುದು  ಮದ್ಯಾಹ್ನದ ಊಟದ ಹೊತ್ತಿಗೆ.  ಮತ್ತೆ ತೋಟದ ಕೆಲಸ ಸಂಜೆ ಮಕ್ಕಳೊಂದಿಗೆ ಆಟ...ರಾತ್ರಿ ಮತ್ತೆ  ಮೊಮ್ಮಕ್ಕಳಿಗೆ  ಉಪನಿಷತ್, ದೇವರ ಪೂಜ ಮಂತ್ರಗಳನ್ನು ಹೇಳಿಕೊಡುತ್ತಾರೆ. ಪೂಜಾ ವಿಧಾನಗಳನ್ನು ಕಲಿಸುತ್ತಾರೆ. ರಾತ್ರಿ ಒಟ್ಟಿಗೆ ಊಟ....ನಂತರ  ತಾವೇ ಬೆಳೆದ ಆಡಿಕೆ, ಎಲೆ ಸೇವನೆ,...ಜೊತೆಯಲ್ಲೇ ಮೊಮ್ಮಕ್ಕಳ ಜೊತೆ  ಆಟ...ಮಾಯಾ ಮಂತ್ರದ ಕತೆಗಳು, ಹೀಗೆ  ಅವರು  ಮತ್ತೆ  ಮಲಗುವ ಹೊತ್ತಿಗೆ  ರಾತ್ರಿ ಹನ್ನೆರಡು ದಾಟಿರುತ್ತದೆ.  ಯುವಕರು  ನಾಚಿಸುವಂತೆ ಸದಾ  ಒಂದಲ್ಲ  ಒಂದು ಕೆಲಸವನ್ನು ಮಾಡುತ್ತಿರುವ  ಇವರು ನೋಡುವವರ ಕಣ್ಣಿಗೆ ಯಾವಾಗ ನಿದ್ರೆ ಮಾಡುತ್ತಾರಪ್ಪ  ಅನ್ನಿಸದೇ ಇರದು.  ಇಷ್ಟಕ್ಕೂ  ಇವರು ವಯಸ್ಸು ಕೇವಲ  ೭೩.  ಹೆಸರು ಗಜಾನನ ಹೆಗಡೆ. ನಾಗೇಂದ್ರ ಅವರ ತಂದೆ.

ಮಕ್ಕಳೊಂದಿಗೆ ಕ್ರಿಕೆಟ್ ಆಡುತ್ತಿರುವ  ನಾಗೇಂದ್ರ ತಂದೆ ಗಜಾನನ ಹೆಗಡೆ                                 
    ಅವರೆಂದು  ತಮ್ಮ  ಮಕ್ಕಳಿಗಾಗಲಿ, ಮೊಮ್ಮಕ್ಕಳಿಗಾಗಲಿ,  ಹೀಗೆ ಮಾಡಿ, ಹಾಗೆ ಮಾಡಿ ಅಂತ ಹೇಳಿದವರಲ್ಲ......ಎಲ್ಲರೂ ಸ್ವತಂತ್ರವಾಗಿ ಅವರಿಷ್ಟಬಂದದ್ದು  ಮಾಡಿಕೊಂಡು  ಚೆನ್ನಾಗಿರಲಿ  ಅಂತ ಬಯಸಿದವರು. ಅವರು  ಏನಾದರೂ  ಪ್ರತಿಯೊಬ್ಬರಿಗೂ ಹೀಗೆ ಮಾಡಿ ಹಾಗೆ ಮಾಡಿ  ಅಂತ ಹೇಳಿದ್ದರೇ ನಾವು ಮಾಡುತ್ತಿರಲಿಲ್ಲವೇನೋ....ಹಾಗೇ ಹೇಳುವ ಬದಲು  ತಾವೆ  ಮಾಡುತ್ತಿರುವುದರಿಂದ  ಅವರನ್ನು  ನಮಗರಿವಿಲ್ಲದಂತೆ ನಾವು ಅನುಸರಿಸುತ್ತಿದ್ದೇವೆ" ಎಂದು  ತಮ್ಮ ಕರ್ಮಯೋಗಿ ಅಪ್ಪ ಗಜಾನನ ಹೆಗಡೆ ಬಗ್ಗೆ ಅಭಿಪ್ರಾಯ ಪಟ್ಟರು ನಾಗೇಂದ್ರ.

ಸಂಜೆಯಾಯಿತೆಂದರೆ ಊರಿನ ಹೆಣ್ಣುಮಕ್ಕಳು, ಮತ್ತು ಪುಟ್ಟ ಮಕ್ಕಳು  ಎಲ್ಲರೂ  ಒಟ್ಟಾಗಿ ಆ ಮನೆಯಲ್ಲಿ  ಸಂಗೀತ ಅಭ್ಯಾಸ ಮಾಡುತ್ತಿರುತ್ತಾರೆ...ಎಲ್ಲರೂ ಎಷ್ಟು ಉತ್ಸಾಹದಿಂದ ಹಾಡುತ್ತಾರೆಂದರೇ ಅವರಿಗೆ ಹೇಳಿಕೊಡುವ ಗುರುವನ್ನು ನೋಡುವ ಮನಸ್ಸಾಗದೇ ಇರದು. ಇಷ್ಟಕ್ಕೂ  ಅವರಿಗೆ ಇಷ್ಟು ಸೊಗಸಾಗಿ ಸಂಗೀತ ಹೇಳಿಕೊಡುವವರು ಮಹಾದೇವಿ ಸುಬ್ರಾಯ ಹೆಗಡೆ ಅನ್ನುವ  ಹಿರಿಯಜ್ಜಿ. ಹಾರ್ಮೊನಿಯಂ ನುಡಿಸುತ್ತಾ  ಹೇಳಿಕೊಡುವ  ಅವರ ವಯಸ್ಸು  ಈಗ ಕೇವಲ ೮೦ ಮಾತ್ರ.

ಸಂಗೀತಗಾರ್ತಿ ಮಹಾದೇವಿ ಸುಬ್ರಾಯ ಹೆಗಡೆ...

ಮುತ್ಮರ್ಡು ಅನ್ನುವ ಊರಿನ ಹಿಂಬಾಗವೇ  ಒಂದು  ಸೊಗಸಾದ  ಪುಟ್ಟ ಹೊಳೆಯಿದೆ.  ಆ  ಹೊಳೆಯಲ್ಲಿ  ಗಂಟೆ ಗಟ್ಟಲೇ  ನೀರಮೇಲೆ  ತೇಲುವ ವ್ಯಕ್ತಿಯನ್ನು ನೀವು ನೋಡಿದರೇ  ನಿಮಗೆ ಆಶ್ಚರ್ಯವಾಗುವುದು ಖಂಡಿತ.  ಯಾಕೆಂದರೇ ಅವರ  ವಯಸ್ಸು ಈಗ ಕೇವಲ  ೮೦ ವರ್ಷ ಮಾತ್ರ.  ಈ  ಸಾಧನೆಯನ್ನು  ಚಿಕ್ಕಂದಿನಿಂದ ಮಾಡಿಕೊಂಡು ಬಂದಿರುವವರು ಇದೇ ಊರಿನ  ನರಸಿಂಹ ಹೆಗಡೆ.

 ನೀರಿನ ಮೇಲೆ ತೇಲುವ ನರಸಿಂಹ ಹೆಗಡೆ....

ಆ  ಊರಿನ ಆಷ್ಟು ಜನ ಆರೋಗ್ಯವಾಗಿರಲು ಏನಾದರೂ ಒಂದು ಗುಟ್ಟು ಇರಲೇ ಬೇಕಲ್ಲ. ಇಲ್ಲೊಬ್ಬ  ಮಂಜುನಾಥ ಎಸ್ ಹೆಗಡೆ ಎನ್ನುವ  ಗಿಡಮೂಲಿಕೆ ತಜ್ಞರಿದ್ದಾರೆ.  ಊರಿನಲ್ಲಿರುವ ಯಾರಿಗೆ ಆಗಲಿ ಸಣ್ಣ ಪುಟ್ಟ ಕಾಯಿಲೆಗಳಿಗೆ  ಇವರೇ ವೈದ್ಯರು.   ಇವರಿಗೆ ತಿಳಿದಿರುವ  ಗಿಡಮೂಲಿಕೆಗಳಿಂದಾಗಿ  ಎಲ್ಲ ರೋಗಕ್ಕೂ ಮದ್ದುಂಟು.  ಇವರ  ಸಹವಾಸದಿಂದಾಗಿ  ಹಳ್ಳಿಯ  ಎಲ್ಲರಿಗೂ  ಯಾವ ಗಿಡಮೂಲಿಕೆಯಿಂದ  ಯಾವ ರೋಗ ವಾಸಿಮಾಡಬಹುದು  ಅನ್ನುವುದು  ಚೆನ್ನಾಗಿ ಕರಗತವಾಗಿಬಿಟ್ಟಿದೆ.  ಇನ್ನೂ  ಔಷದಕ್ಕಾಗಿ  ಸಿರಸಿಗೆ ಏಕೆ ಹೋಗಬೇಕು ಹೇಳಿ. 

ಮಂಜುನಾಥ್ ಹೆಗಡೆ..ಸಕಲಕಲವಲ್ಲಭ

ಮತ್ತೆ  ಈ  ಮಂಜುನಾಥ ಎಸ್ ಹೆಗಡೆ  ಜ್ಯೋತಿಷ್ಯ ಹೇಳುತ್ತಾರೆ.   ಸೊಗಸಾಗಿ  ಚಿತ್ರಬಿಡಿಸುತ್ತಾರೆ. ಮತ್ತೆ  ಮಣ್ಣಿನಲ್ಲಿ  ಕಲಾಕೃತಿ ಮಾಡುವುದರಲ್ಲಿ  ಇವರು ಸಿದ್ಧಹಸ್ತರು. ಗಣಪತಿ ಹಬ್ಬಕ್ಕೆ  ಊರಿನ ಎಲ್ಲರಿಗೂ  ಇವರೇ ಮಣ್ಣಿನ ಗಣಪತಿಯನ್ನು ಮಾಡಿ ಅದಕ್ಕೆ  ಸೊಗಸಾಗಿ ಬಣ್ಣವನ್ನು  ಹಾಕುತ್ತಾರೆ. ಮತ್ತು ಆ ಕಲೆಯನ್ನು ಊರಿನ ಜನರಿಗೂ ಕಲಿಸಿದ್ದಾರೆ.  ನಾಗೇಂದ್ರರ ತಂದೆ, ನಾಗೇಂದ್ರ, ಮಗ ಸುಹಾಸ್  ಇವರೆಲ್ಲಾ  ತಾವೇ ಮಣ್ಣಿನಿಂದ  ಗಣಪತಿಯನ್ನು ಮಾಡುವುದನ್ನು ಕಲಿತಿದ್ದು  ಇವರಿಂದಲೇ  ಅಂತೆ.  ನಾಗೇಂದ್ರ ಮನೆಯಲ್ಲಿ ಇಟ್ಟಿದ್ದ ಗಣಪತಿಯನ್ನು  ಸುಹಾಸ್ ಮತ್ತು ನಾಗೇಂದ್ರ ಸೇರಿ ಮಾಡಿದ್ದಂತೆ.  ಅದು ನಮ್ಮ  ಬೆಂಗಳೂರಿನಲ್ಲಿ ಮಾರಾಟಕ್ಕಿಂತ ಗಣೇಶ ವಿಗ್ರಹಗಳನ್ನು ನಾಚಿಸುವಂತಿತ್ತು.  ಅದೇ  ಹಾಗಿರಬೇಕಾದರೇ  ಇವರಿಗೆ ಕಲಿಸಿದ ಗುರುವಾದ ಮಂಜುನಾಥ ಎಸ್ ಹೆಗಡೆ ಕೈಚಳಕ ಹೇಗಿರಬಹುದು...ಅಲ್ವಾ....ಜೊತೆಗೆ ಇವರು ಪೌರಾಣಿಕ ನಾಟಕಗಳನ್ನು ಬರೆದಿದ್ದಾರೆ, ನಟಿಸುತ್ತಾರೆ, ನಿರ್ದೇಶನ ಮಾಡುತ್ತಾರೆ...ಹೀಗೆ ಇವರೊಬ್ಬರು ಸಕಲಕಲವಲ್ಲಭರೆಂದೇ ಹೇಳಬಹುದು..

        ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಊರಿನ ಮತ್ತು ಊರಿನಲ್ಲಿರುವ ಸಾಧಕರ ಇನ್ನು ಇದೆ.  ಅದು ಮುಂದಿನ ಭಾಗದಲ್ಲಿ

ಚಿತ್ರಗಳು: 
ನಾಗೇಂದ್ರ ಮುತ್ಮರ್ಡು, 
ಶಿವು.ಕೆ,  ಮಲ್ಲಿಕಾರ್ಜುನ್. ಡಿ.ಜಿ
ಲೇಖನ:   ಶಿವು.ಕೆ

34 comments:

ಸಾಗರದಾಚೆಯ ಇಂಚರ said...

ಶಿವೂ ಸರ್
ನಾನು ಆ ಊರಿಗೆ ಹೋಗಿದ್ದೆ,
ಮಲೆನಾಡಿನ ಹಳ್ಳಿಗಳ ಸೌಂದರ್ಯವೇ ಅಂತಾದ್ದು
ಜನರಲ್ಲಿ ಅದೆಷ್ಟೋ ಸುಪ್ತ ಪ್ರತಿಭೆಗಳು ಹಾಗೆಯೇ ಉಳಿದಿವೆ
ಹೊರಗೆ ತೆಗೆಯುವ ಕೆಲಸ ಮಾಡಬೇಕಷ್ಟೆ
ನಿಮ್ಮ ಬರಹ ತುಂಬಾ ಆಪ್ತವಾಗಿದೆ

shivu.k said...

ಗುರುಮೂರ್ತಿ ಹೆಗಡೆ ಸರ್,

ನಾನು ತುಂಬಾ ಇಷ್ಟಪಡುವ ಸ್ಥಳಗಳಲ್ಲಿ ಇದು ಒಂದು. ನಮಗೆ ನಮ್ಮ ಆಧುನಿಕ ಮಾಲುಗಳು ಮತ್ತು ಕಾಂಪ್ಲೆಕ್ಸುಗಳು, ಮಲ್ಟಿಪ್ಲೆಕ್ಸುಗಳು ಅದೆಷ್ಟೇ ಚೆನ್ನಾಗಿದ್ದರೂ ಕೆಲವೊಮ್ಮೆ ಬೇಸರ ತರಿಸಿಬಿಡುತ್ತವೆ..ಆದ್ರೆ ಈ ಊರು ನಾನು ಮೂರು ಭಾರಿ ಹೋಗಿದ್ದರೂ ಒಮ್ಮೆ ಬೇಸರ ತರಿಸಲಿಲ್ಲ. ಅದಕ್ಕಿಂತ ಮೊದಲು ಅಲ್ಲಿಂದ ವಾಪಸ್ ಬರಲು ಮನಸ್ಸಾಗುತ್ತಿರಲಿಲ್ಲ..ಅಷ್ಟು ಇಷ್ಟವಾಗುತ್ತಿತ್ತು..ಅಲ್ಲಿನ ಪ್ರತಿಭೆಗಳಿಗೆ ಸುಪ್ತ ಸಾಧನೆಗಳಿಗೆ ಮತ್ತು ಅದರಿಂದ ಸಿಗುವ ನೆಮ್ಮದಿಗೆ ಮಾರುಹೋಗಿದ್ದೇನೆ. ಅದನ್ನು ಚಿಕ್ಕದಾಗಿ ಪರಿಚಯಿಸುವ ಪ್ರಯತ್ನವನ್ನು ಮಾಡಿದ್ದೇನೆ..ಮೊದಲ ಪ್ರತಿಕ್ರಿಯೆಗೆ ಧನ್ಯವಾದಗಳು.

ದಿನಕರ ಮೊಗೇರ said...

tumbaa tumbaa thanks.......

oLLeya manetanada bagge, staLada parichaya maaDisikoTTiddakke tumbaa tumbaa dhanyavaada....

shivu.k said...

ದಿನಕರ್ ಸರ್,

ನನಗೂ ಈ ಹಳ್ಳಿಯ ಸಾಧನೆಯನ್ನು ಪರಿಚಯಿಸುತ್ತಾ..ನಾವು ಸಾಗುತ್ತಿರುವ ದಾರಿಯನ್ನು ಅವಲೋಕಿಸಿಕೊಳ್ಳಬೇಕೆನ್ನುವುದು ನನ್ನ ಆಸೆ..ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಸುಧೇಶ್ ಶೆಟ್ಟಿ said...

ರೋಚಕವಾಗಿತ್ತು ಈ ಲೇಖನ ಶಿವಣ್ಣ... ಇ೦ತಹ ಒ೦ದು ಹಳ್ಳಿ ಇದೆಯಾ ಅನ್ನುವಷ್ಟು ಆಶ್ಚರ್ಯ ಆಯಿತು ಓದಿ....

ಮು೦ದಿನ ಭಾಗಕ್ಕೆ ಕಾಯುತ್ತಾ....

ಸುಧೇಶ್ ಶೆಟ್ಟಿ said...

ಯಾಕೋ ಸೂಪರ್ ಮೂನ್ ಕೆಳಗೊ೦ದು ವಾಕು ಬರಹ ಕಾಣಿಸುತ್ತಲೇ ಇಲ್ಲ :(

shivu.k said...

ಸುಧೇಶ್,

ಇದು ಖಂಡಿತ ರೋಚಕವಲ್ಲ...ಸತ್ಯ ಮತ್ತು ನಿತ್ಯ ಸಂಗತಿ..ಇಂಥ ಸಾವಿರಾರು ಹಳ್ಳಿಗಳು ಈಗಲೂ ನೆಮ್ಮದಿಯಿಂದ ಬದುಕುತ್ತಿವೆ..ಮುಂದಿನ ಭಾಗದಲ್ಲಿ ಮತ್ತಷ್ಟು ನಾನು ಅನುಕರಿಸುಬೇಕೆನ್ನುವಂತ ಸಾಧಕರ ವಿಚಾರವಿದೆ...
ಧನ್ಯವಾದಗಳು.

shivu.k said...

ಅಂದಹಾಗೆ ಸುಧೇಶ್,

ಸೂಪರ್ ಮೂನ್ ವಿಚಾರವನ್ನು ಸದ್ಯ ಡಿಲೀಟ್ ಮಾಡಿದ್ದೇನೆ. ಅದನ್ನು ಮುಂದೆ ಎಂದಾದರೂ ಹಾಕುತ್ತೇನೆ..

Prashanth Arasikere said...

hello shivu,

Nimma lekana odi tumba kushi ayhtu innu intha stala galu idya antha acharya ayhtu,hagu avru hege antha stala dalli hondukondu idare..allva..hatsoff..

PARAANJAPE K.N. said...

ಕಾನನಗರ್ಭದಲ್ಲಿ ಅಡಗಿ ಕುಳಿತಿರುವ ಪುಟ್ಟ ಊರಿನ ಬಗ್ಗೆ, ಅಲ್ಲಿನ ಜನರ ಬಗ್ಗೆ ಆಪ್ತ ಶೈಲಿಯಲ್ಲಿ ಬರೆದಿದ್ದೀರಿ.ಉತ್ತಮ ಬರಹ. ಒ೦ದು ಕಡೆ "ಕರ್ಮಯೋಗಿ" ಎ೦ದಾಗಿರಬೇಕಾ ದಲ್ಲಿ "ಕರ್ಮಹೋಗಿ" ಎ೦ದು ತಪ್ಪು ಮುದ್ರಣವಾಗಿದೆ. ದಯವಿಟ್ಟು ಸರಿಪಡಿಸಿ.

sunaath said...

ಮೂರೂಮುಕ್ಕಾಲು ಅಕ್ಷರಗಳ ಈ ಊರು, ಈ ಊರ ಜನರು fantastic. ಪರಿಚಯ ಮಾಡಿಕೊಟ್ಟದ್ದಕ್ಕಾಗಿ ಧನ್ಯವಾದಗಳು.

ಅಪ್ಪ-ಅಮ್ಮ(Appa-Amma) said...

ಶಿವು,

ಈಗೀನ ’ಆಧುನಿಕ’ ಯುಗದಲ್ಲೂ ಇಂತಹ ಅದ್ಭುತ ಇರುವ ಹಳ್ಳಿಯ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು..

ಅ ಊರಿನ ಮುಗ್ಧತೆ ಹಾಗೇ ಇರಲಿ..

ಮನಸು said...

ಕಾಡಿನೊಳಗೆ ಅಡಗಿದ್ದ ಊರಿನ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಮಲೆನಾಡ ಸಿರಿಯೇ ಹಾಗೆ.... ಮನಸ್ಸನ್ನು ಸಂತೋಷಗೊಳಿಸುತ್ತೆ

Dr.D.T.Krishna Murthy. said...

shivu;ಸುಂದರ ಊರನ್ನು,ಅದರ ಮುಗ್ಧ ಜನಗಳನ್ನೂ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.

ಸುಮ said...

ಮಲೆನಾಡಿನ ಹಳ್ಳಿಗಳು ಇರುತ್ತಿದ್ದದೇ ಹಾಗೆ .... ಅಲ್ಲಿ ಏನೂ ಇಲ್ಲದೆಯೂ ಎಲ್ಲವನ್ನು ಹೊಂದಿರುವ ಪರಿಪೂರ್ಣತೆ ಕಾಣಿಸತ್ತಿತ್ತು. ಆದರೀಗ ಇಂತಹ ಹಳ್ಳಿಗಳೇ ನಶಿಸುತ್ತಿವೆ. ಇದ್ದ ನಾಲ್ಕಾರು ಮನೆಗಳ ಮಕ್ಕಳೆಲ್ಲರೂ ಪೇಟೆ ಸೇರಿರುತ್ತಾರೆ ....ಹಳ್ಳಿಗಳಲ್ಲಿ ಬರೀ ನಡುವಯಸ್ಸಿನವರು ಮತ್ತು ವೃದ್ದರಷ್ಟೇ ಕಾಣಿಸುತ್ತಾರೆ. ಇನ್ನೊಂದಿಷ್ಟು ವರ್ಷಗಳ ನಂತರ ಇಂತಹ ಹಳ್ಳಿಗಳೇ ಮಾಯವಾಗಿಬಿಡಬಹುದೇನೋ ಎನ್ನಿಸುತ್ತಿದೆ.

ಸವಿಗನಸು said...

ಮಲೆನಾಡಿನ ಹಳ್ಳಿಯ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ....
ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

ಗಿರೀಶ್.ಎಸ್ said...

aa urina gajanana hegde,subraya hegde,mahadevi thaayi,narasimha hegde,majnath hegde ivarella nijavaaglu great..

shivu.k said...

ಪ್ರಶಾಂತ್,

ಇನ್ನೂ ಇಂಥ ನೂರಾರು ಸ್ಥಳಗಳಿವೆ..ಅವರ ಬದುಕನ್ನು ನಾವು ಮೆಚ್ಚಲೇಬೇಕು...
ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಪರಂಜಪೆ ಸರ್,
ಈ ಲೇಖನವನ್ನು ಒಂದು ವರ್ಷದ ಹಿಂದೆಯೇ ಬರೆದಿದ್ದೆ. ಪತ್ರಿಕೆಗೆ ಕಳಿಸಿದ್ದೆ. ಆದ್ರೆ ಯಾವ ಪತ್ರಿಕೆಯೂ ಪ್ರಕಟಿಸಲಿಲ್ಲವಾದ್ದರಿಂದ ಈಗ ಬ್ಲಾಗಿಗೆ ಹಾಕುತ್ತಿದ್ದೇನೆ..ನೀವು ಗುರುತಿಸಿದ ತಪ್ಪನ್ನು ಸರಿಮಾಡಿದ್ದೇನೆ..
ಧನ್ಯವಾದಗಳು.

shivu.k said...

ಸುನಾಥ್ ಸರ್,

ಈ ಊರಿನ ಸಾಧನೆ ಇನ್ನೂ ಇದೆ...ಮುಂದಿನ ಭಾಗಕ್ಕೂ ಬನ್ನಿ...ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಅಪ್ಪ-ಅಮ್ಮ ಬ್ಲಾಗಿನವರೆ,

ಖಂಡಿತ ಇಂಥ ಹಳ್ಳಿಗಳಲ್ಲಿನ ಮುಗ್ದತೆ ಉಳಿದುಕೊಳ್ಳಲೇಬೇಕು. ಅದರಿಂದ ಅವರ ಬದುಕು ಮತ್ತಷ್ಟು ನೆಮ್ಮದಿ ಕಾಣಬೇಕೆನ್ನುವುದು ನನ್ನ ಆಶಯ..
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಸುಗುಣಕ್ಕ,

ಮಲೆನಾಡಿನ, ಅಥವ ಕಾಡಿನ ಇಂಥ ಊರುಗಳ ಬಗ್ಗೆ ನನಗೆ ಸಹಜವಾಗಿ ಕುತೂಹಲವಿದ್ದೇ ಇದೆ...ಇನ್ನೂ ಕೆಲವು ಊರುಗಳನ್ನು ಪರಿಚಯಿಸುವ ಆಸೆಯಿದೆ..ಮುಂದಿನ ಭಾಗಕ್ಕೂ ಬನ್ನಿ..

shivu.k said...

ಡಾಕ್ಟರ್ ಕೃಷ್ಣಮೂರ್ತಿ ಸರ್,

ಇಂಥ ಊರುಗಳ ಪರಿಚಯದಲ್ಲಿ ನನ್ನ ಹೆಗ್ಗಳಿಕೆಯೇನು ಇಲ್ಲ. ಅದಕ್ಕೆ ಬದಲಾಗಿ ಇಂಥವನ್ನು ಪರಿಚಯಿಸುವುದರ ಜೊತೆಗೆ ನಾನು ಅನುಕರಿಸಿಬೇಕಾದ ಅನೇಕ ಸಂಗತಿ ಹೇಳುವ ಒಂದು ಸಣ್ಣ ಪ್ರಯತ್ನ...ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಸುಮಾ ಮೇಡಮ್,

ಏನೂ ಇಲ್ಲದೆಯೂ ಬದುಕಬಹುದು ಎನ್ನುವ ವಿಚಾರಕ್ಕಾಗಿ ನಾನು ನಮ್ಮ SSY ಕಾರ್ಯಕ್ರಮದಲ್ಲಿ ಹೋಗಿ ಅನುಭವ ಪಡೆದುಕೊಳ್ಳುತ್ತಿದ್ದೆ. ಆದ್ರೆ ಈ ಹಳ್ಳಿಯವರು ಅಲ್ಲಿಯೇ ಜೀವನ ಪೂರ್ತಿ ನೆಮ್ಮದಿಯಾಗಿ ಬದುಕುತ್ತಾರಲ್ಲ...ಅದು ನಮಗೆ ಅಚ್ಚರಿಯಾಗುವುದರ ಜೊತೆಗೆ ಆದುನಿಕತೆಯತ್ತ ಮುಖ ಮಾಡಿರುವ ನಮ್ಮನ್ನು ಅತ್ತ ತಿರುಗುವಂತೆ ಮಾಡುತ್ತಿದೆ...
ಪ್ರತಿಕ್ರಿಯೆಗೆ ಧನ್ಯವಾದಗಳು.

ಕ್ಷಣ... ಚಿಂತನೆ... said...

ಶಿವು ಸರ್‍,
ಮಲೆನಾಡಿನ ಹಳ್ಳಿಯ ಪುಟ್ಟ ಪರಿಚಯ ಮತ್ತು ಅಲ್ಲಿನ ಜನ ಜೀವನ ಸೊಗಸಾಗಿ ಬರೆದಿದ್ದೀರಿ. ಇಲ್ಲಿ ಸಿಟಿಯಲ್ಲಿ ನಾವೆಲ್ಲ ಅದೇನೆ ಸವಲತ್ತುಗಳಿದ್ದರೂ ಅದಿಲ್ಲ, ಇದಿಲ್ಲ ಎನ್ನುತ್ತಿರುತ್ತೇವೆ. ಹಳ್ಳಿಗಳಲ್ಲಿನ ಜನರ ಜೀವನವನ್ನು ಒಮ್ಮೆ ಅವಲೋಕಿಸಿದರೆ, ನಾವೆಷ್ಟೋ ಅನುಕೂಲವುಳ್ಳವರು ಎನಿಸದಿರದು. ಬರಹ ಚೆನ್ನಾಗಿದೆ.
ಧನ್ಯವಾದಗಳು.

b.saleem said...

ಶಿವು ಸರ್,
ಒಂದೆ ಊರಿನಲ್ಲಿ ಇಷ್ಟು ಜನ ಸಾಧಕರಿರುವುದು ತುಂಬಾ ಆಶ್ಚರ್ಯ.ಅಂತಹ ಮಹನಿಯರಿಗೆ ಅಭಿನಂದನೆಗಳು. ಪರಿಚಯಿಸಿದ ನಿಮಗೂ ಧನ್ಯವಾದಗಳು.
ಅಂದ ಹಾಗೆ ನಾಗೇಂದ್ರ್ ಅವರನ್ನು ಈ ಸಾಧಕರಲ್ಲಿ ಸೇರಿಸಿ.

V.R.BHAT said...

ಉತ್ತರ ಕನ್ನಡದೆಡೆಗೆ ಸರಕಾರೀ ಶಾಲೆಗಳಲ್ಲಿ ಕಲಿಸುವ ಶಿಕ್ಷಕರು ಬೆಂಗಳೂರಿನ ಖಾಸಗೀ ಶಾಲೆಗಳಲ್ಲೂ ಸಿಗದಂತಹ ಉತ್ತಮ ಮಟ್ಟದವರಾಗಿರುತ್ತಾರೆ. ಅಲ್ಲಿ ಕಲಿಸುವಿಕೆ ಕೇವಲ ಹಣಕ್ಕಾಗಿ ಇರುವುದಲ್ಲ, ತಮ್ಮ ಕಲಿಸುವಿಕೆಯಿಂದ ಹಲವು ಪ್ರತಿಭೆಗಳು ಅರಳಲಿ ಎಂಬ ನೈಜ ಅನಿಸಿಕೆ ಆಕಾಂಕ್ಷೆ ಅವರಿಗಿರುತ್ತದೆ. ಲೇಖನದಲ್ಲಿ ಗ್ರಾಮೀಣ ಪ್ರತಿಭೆಗಳು, ಅವುರುಗಳ ಕೈಂಕರ್ಯಗಳು ಇದನ್ನೆಲ್ಲಾ ವಿವರಿಸಿದ್ದೀರಿ, ಇಷ್ಟವಾಯಿತು

ಜಲನಯನ said...

ಶಿವು ನಾಗರೀಕತೆಯ ಕೃತಕಗಳ ಸೋಂಕು ತಗಲದ ಬಲು ತಾಜಾ ಮಣ್ಣಿನ ವಾಸನೆಯ, ಕಪಟವರಿಯದ ಮನುಜರ ನಿಜ ಮಾನವೀಯತೆ ಮೆರೆವ ನಿಸರ್ಗ ತಾಯಿ ತನ್ನ ತವರಲ್ಲಿ ಮನಬಿಚ್ಚಿ ಮುನ್ನಡೆವ ಪರಿಸರದ ಮಲೆನಾಡ ಇಂತಹ ಹಳ್ಳಿಗಳ ಸೊಬಗನ್ನು ಸುಂದರ ಚಿತ್ರಗಳ ಮುಖೇನ ಬಹಳ ಮನೋಹರ ವ್ಯಕ್ತಿತ್ವಗಳ ಸುತ್ತ ಹೆಣೆದ ನಿಮ್ಮ ಈ ಚಾರಣ-ಚಿತ್ರಣ ಲೇಖನ ಇಷ್ಟವಾಯ್ತು... ಅಂದಹಾಗೆ ಕ್ರಿಕೆಟ್ ಅಲ್ಲಿಗೂ ತನ್ನ ತಂತುಕಾಲನ್ನು (tentacles ಗೆ ನಾನು ಕಂಡುಹಿಡಿದ ಕನ್ನಡ ಪದ ಹಹಹಹ) ಪಸರಿಸಿದೆ ಅಲ್ವಾ...ಹಹಹಹ

shivu.k said...

ಮಹೇಶ್ ಸರ್,

ಮಲೆನಾಡಿನ ವಿಚಾರವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.

shivu.k said...

ಗಿರೀಶ್ ಎಸ್,

ಆ ಊರಿನಲ್ಲಿ ನೀವು ಹೇಳಿದ ಹೆಸರನವರು ಸೇರಿದಂತೆ ಇನ್ನೂ ಗ್ರೇಟ್ ಅನ್ನುವವರು ಇದ್ದಾರೆ ಅದನ್ನು ಮುಂದಿನ ಭಾಗಿ ಹಾಕುತ್ತೇನೆ..ಖಂಡಿತ ಬನ್ನಿ.

shivu.k said...

ಕ್ಷಣ ಚಿಂತನೆ ಚಂದ್ರು ಸರ್,

ಈ ಮಲೆನಾಡಿನ ಪುಟ್ಟ ಹಳ್ಳಿಯ ವಿಚಾರ ಮತ್ತು ಸಾಧನೆ ಇನ್ನೂ ಇದೆ ಸರ್. ಆದನ್ನೆಲ್ಲಾ ನಾವು ಅನುಕರಿಸಲೇಬೇಕೆನ್ನುವಷ್ಟರ ಮಟ್ಟಿಗೆ ಅವರು ನೆಮ್ಮದಿಯಾಗಿದ್ದಾರೆ. ಅದನ್ನೆಲ್ಲಾ ಮುಂದಿನ ಭಾಗದಲ್ಲಿ ಬರೆಯುತ್ತೇನೆ. ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಸಲೀಂ,

ಆ ಪುಟ್ಟ ಊರಿನಲ್ಲಿ ಸಾಧಕರು ಇನ್ನೂ ಇದ್ದಾರೆ. ನಾಗೇಂದ್ರನ ಪರಿಚಯ ಮುಂದಿನ ಭಾಗಗಳಲ್ಲಿ ಪರಿಚಯಿಸುತ್ತೇನೆ..
ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ವಿ.ಅರ್.ಭಟ್ ಸರ್,

ನಿಮ್ಮ ಮಾತು ಸರಿ. ಇಲ್ಲಿನ ಶಿಕ್ಷಣ ಗುಣಮಟ್ಟಕ್ಕಿಂತ ಅಲ್ಲಿನ ಗುಣಮಟ್ಟ ತುಂಬಾ ಚೆನ್ನಾಗಿದೆ. ಇಲ್ಲಿ ಸಂಬಳಕ್ಕಾಗಿ ವಿಧ್ಯೆ ಕಲಿಸಿದರೆ, ಅಲ್ಲಿ ಕಲಿಸಬೇಕೆನ್ನುವ ಉತ್ಕಟ ಮನಸ್ಸಿನಿಂದ ಮಕ್ಕಳಿಗೆ ಪಾಠ ಹೇಳಿಕೊಡುತ್ತಾರೆ. ಅಲ್ಲಿ ಕಲಿತ ಅನೇಕ ಮಕ್ಕಳೇ ಅಲ್ಲವೇ ಇವತ್ತು ಇಂಜಿನಿಯರಿಂಗ್, ಸಾಪ್ಟ್ ವೇರ್, ಬ್ಲಾಗಿನಲ್ಲಿ ಬರಹಗಾರರು, ವಿದೇಶದಲ್ಲಿ ಉತ್ತಮ ಉದ್ಯೋಗದಲ್ಲಿರುವವರು..ಆಗಿರುವುದು...
ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಅಜಾದ್,
ಅಲ್ಲಿನ ವಾತಾವರಣ ನಿಜಕ್ಕೂ ತಾಜ ಮಣ್ಣಿನ ವಾಸನೆಯೇ ಸರಿ. ಅಲ್ಲಿನ ಪ್ರಕೃತಿ ಸೌಂದರ್ಯ, ನೆಮ್ಮದಿಗೆ ಮರುಳಾಗದವರು ಯಾರು? ಅಲ್ಲಿನ ವಿಚಾರದ ಬಗ್ಗೆ ಮತ್ತಷ್ಟು ಬರೆಯುತ್ತೇನೆ...ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.