ಏರ್ ಷೋ ಬಗ್ಗೆ ಎಲ್ಲಾ ಟಿವಿ ಚಾನಲ್ಲುಗಳು, ದಿನಪತ್ರಿಕೆಗಳಲ್ಲಿ ತರಾವರಿ ಸುದ್ಧಿಗಳು ವೈವಿಧ್ಯಮಯ ಚಿತ್ರಚಿತ್ತಾರಗಳು ಪ್ರಕಟವಾಗುತ್ತಿದ್ದದ್ದು ನೋಡಿ ನಾನು ಏರ್ ಷೋ ಬಗ್ಗೆಯಾಗಲಿ ಅಥವ ಚಿತ್ರಗಳನ್ನಾಗಲಿ ಬ್ಲಾಗಿಗೆ ಹಾಕುವ ಅವಶ್ಯಕತೆಯಿಲ್ಲವೆಂದು ಸುಮ್ಮನಾಗಿದ್ದೆ. ಯಾವಾಗ ಹೇಮಾ
ಆಹಾ! ಅಕಾಶವೆಂಬ ತಂಪು
ನೀಲಾಕಾಶವೆಂಬ ಎಣ್ಣೆ ಬಾಣಲಿಯೊಳಗೆ
ಜೀಲೇಬಿ ಹಾಕುತ್ತಿರುವ
ಯೂರೋ ಟೈಪೂನೂ ಪ್ಲೇನು.......
ಆ ಫೋಟೊವನ್ನು ನೋಡಿ ಅಚ್ಚರಿಗೊಂಡು ಹೇಳಿದಾಗ ಅರೆರೆ! ಹೌದಲ್ವಾ...ಅನ್ನಿಸಿತ್ತು. ಮತ್ತೆ ಪತ್ರಿಕೆಯಲ್ಲಿ ಎಲ್ಲೂ ಪ್ರಕಟವಾಗದ ಮತ್ತು ಸ್ಪರ್ಧಾತ್ಮಕವಾಗಿ ಕ್ಲಿಕ್ಕಿಸಿದ ಚಿತ್ರಗಳ ಬಗ್ಗೆ ಬ್ಲಾಗಿನಲ್ಲಿ ಬರೆದು ಹಾಕಬಾರದೇಕೆ ಅನ್ನಿಸಿದರ ಪರಿಣಾಮ ಈ ಲೇಖನ.
ಎಣ್ಣೆಯಲ್ಲಿ ಜಿಲೇಬಿ ಹಾಕುವಂತೆ ನೀಲಾಕಾಶಕ್ಕೆ ಹೊಗೆಯಿಂದ ಜಿಲೇಬಿ ಹಾಕುತ್ತಿರುವ ಯೂರೋ ಟೈಪೂನ್ ವಿಮಾನ
ಪ್ರತಿಭಾರಿಯ ಏರ್ ಷೋನಲ್ಲಿ ಅದೇ ವಿಮಾನಗಳಿರುತ್ತವೆ ಹಾರಾಡುತ್ತವೆ ಅಂದುಕೊಳ್ಳುತ್ತಾ ಈ ಭಾರಿ ಏರ್ ಷೋಗೆ ಹೋಗೋದು ಬೇಡವೆಂದುಕೊಂಡಿದ್ದ ನನಗೆ ದೂರದ ದಾವಣಗೆರೆಯಿಂದ ಗೆಳೆಯ ಹೇಮಚಂದ್ರ ಜೈನ್ ಫೋನ್ ಮಾಡಿ ಏರ್ ಷೋ ಫೋಟೋ ತೆಗೆಯಲು ಬರುತ್ತಿದ್ದೇನೆ. ನಿಮ್ಮ ಸಹಾಯ ಬೇಕು ಎಂದಾಗ ಇಲ್ಲವೆನ್ನಲಾಗಲಿಲ್ಲ. ಒಂಬತ್ತನೇ ತಾರೀಖು ಬೆಳಿಗ್ಗೆ ಹತ್ತು ಗಂಟೆಗೆ ಯಲಹಂಕದಿಂದ ಹತ್ತು ಕಿಲೋಮೀಟರ್ ದೂರದ ಭಾರತೀಯ ವಾಯುಸೇನ ವಿಮಾನ ನಿಲ್ದಾಣದ ಕಾಂಪೌಂಡ್ ಆಚೆಬದಿಯಲ್ಲಿದ್ದ ಆ ಕೆರೆ ದಂಡೆಯ ಮೇಲೆ ನಿಂತಿದ್ದೆವು. ಮೊದಲ ದಿನ ಜನರಿನ್ನೂ ಸೇರಿರಲಿಲ್ಲವಾದ್ದರಿಂದ ಪೋಲೀಸರ ಕಾಟವೂ ಇರಲಿಲ್ಲ. ಆಗಲೇ ಬಿಸಿಲು ಜೋರಾಗಿದ್ದರೂ ಬೆಳಗಿನ ಸೆಷನ್ ಏರೋಪ್ಲೇನುಗಳ ಹಾರಾಟದ ಫೋಟೋಗಳನ್ನು ತೆಗೆಯುವಲ್ಲಿ ನಾವಿಬ್ಬರೂ ತಲ್ಲೀನರಾದೆವು. ನಿದಾನವಾಗಿ ಅಲ್ಲಿಗೆ ಐಸ್ಕ್ರೀಮ್, ಚುರುಮುರಿ, ಕಡ್ಲೆಬೀಜ, ಇತ್ಯಾದಿಗಳು ಬರತೊಡಗಿದವು. ಜೊತೆಗೆ ಜನರೂ ಕೂಡ ಸೇರತೊಡಗಿದರು.
ಆಕಾಶ ನೋಡಲು ಕೊಡೆಹಿಡಿದು ಬಂದಿದ್ದ ಪುಟ್ಟ ಬಾಲಕ
ಇದೇ ಮೊದಲ ಭಾರಿಗೆ ಜೆಕ್ ಗಣರಾಜ್ಯದ ನಾಲ್ಕು ರೆಡ್ ಬುಲ್ ವಿಮಾನಗಳು ತಮ್ಮ ಪ್ರದರ್ಶನವನ್ನು ಪ್ರಾರಂಭಿಸಿದವಲ್ಲ...ನಾವು ನಮ್ಮ ಉದ್ದದ ಲೆನ್ಸ್ ಮೂಲಕ ಫೋಟೊ ತೆಗೆಯುತ್ತಿರುವಾಗ ನಮ್ಮ ಪಕ್ಕ ನಿಂತಿದ್ದ ಹಳ್ಳಿಯ ಸ್ಕೂಲ್ ಹುಡುಗರು ನಮ್ಮ ಕ್ಯಾಮೆರಾದ ಪುಟ್ಟಪರಧೆಯನ್ನು ಕುತೂಹಲದಿಂದ ನೋಡುತ್ತಿದ್ದರು.
"ಅಲ್ಲಿನೋಡೋ ಆ ಪ್ಲೇನ್ ಎಷ್ಟು ಜೆನ್ನಾಗಿ ಹೊಗೆಯಿಂದಲೇ ಡ್ರಾಯಿಂಗ್ ಮಾಡ್ತು ಅಲ್ವಾ",
"ಹೌದು ಕಣ್ಲಾ, ಅದು ಇಲಿಜೆಟ್ಟು. ಮೂಗಿಲಿ ತರ ಮೂಗು ಉದ್ದ ಮಾಡಿಕೊಂಡು ಹೋಯ್ತದೆ ನೋಡು"
ಅದಾದ ನಂತರ ಸುಖೋಯ್ ೩೦ ಜೆಟ್ ಪ್ಲೇನ್ ಆಕಾಶದೆತ್ತರಕ್ಕೆ ಹಾರಿತಲ್ಲಾ ಅದನ್ನು ಕಂಡ ಈ ಹುಡುಗರು,
"ಹೇ ಈ ಪ್ಲೇನು ಹೊಗೆ ಬಿಡೋಲ್ದು ಒಂಥರ ಒಳ್ಳೆ ಮನುಷ್ಯಿದ್ದಾಗೆ" ಅಂದ.
ಆತನ ಮಾತನ್ನು ಕೇಳಿಸಿಕೊಂಡ ನಾನು "ಇಲ್ಲಕಣೋ ಈ ಭಾರಿ ಅದು ಹೊಗೆಬಿಡುತ್ತಿಲ್ಲ ಕಳೆದ ವರ್ಷವೆಲ್ಲಾ ಹೊಗೆ ಬಿಡುತ್ತಿತ್ತು" ಅಂದೆ
" ಹೌದಾ ಸರ್, ಮೊದಲು ಸಿಗರೇಟ್ ಅಬ್ಯಾಸವಾಗಿ ಹೊಗೆ ಬಿಡುತ್ತಿತ್ತೇನೋ ಈಗ ನಿಕೋಟಿನ್ ಮಾತ್ರೆ ನುಂಗಿ ಸಿಗರೇಟು ಸೇದೋದು ಬಿಟ್ಟಿರಬೇಕು ಅದಕ್ಕೆ ಈಗ ಹೊಗೆ ಬರೊಲ್ಲ" ಅಂದ.
ಅವುಗಳ ಪ್ರದರ್ಶನವಾದ ನಂತರ ಬಂದಿದ್ದು ಸೂರ್ಯಕಿರಣಗಳು.
"ಈ ಪ್ಲೇನುಗಳು ಟಿವಿ ಸೀರಿಯಲ್ಲಿನ ಗ್ಲಾಮರ್ ಹೆಂಗಸರಿದ್ದಂತೆ. ಒಟ್ಟಿಗೆ ಹೋಗುತ್ತವೆ ಹಾರಾಡುತ್ತಿರುತ್ತವೆ, ನಮ್ಮ ಟಿವಿ ಸೀರಿಯಲ್ಲಿನ ಹೆಂಗಸರ ಮನಸ್ಸು ಯಾವಾಗ ಚಂಚಲವಾಗಿ ಎಲ್ಲರನ್ನೂ ದೂರಮಾಡಿಬಿಡುತ್ತಾರೋ ಹಾಗೇ ಇವು ಕೂಡ ಇದ್ದಕ್ಕಿದ್ದಂತೆ ದೂರವಾಗಿ ಎಲ್ಲೆಲ್ಲೋ ಹೋಗಿಬಿಡುತ್ತವೆ ಮತ್ತೆ ಅವುಗಳಲ್ಲಿ ಲವ್ ಉಂಟಾಗಿ ಆಕಾಶದಲ್ಲಿ ಹೊಗೆಬಿಟ್ಟು ಲವ್ ಬರೆಯುತ್ತವೆ ಒಟ್ಟಾರೆ ಅವುಗಳ ಚಂಚಲ ಮನಸ್ಸು ಹೇಗಿರುತ್ತೋ ಹೇಳಲಿಕ್ಕೆ ಬರೋಲ್ಲ" ಮತ್ತೊಬ್ಬ ಹಳ್ಳಿ ಅಜ್ಜ ಈ ಮಾತನ್ನು ಹೇಳಿದಾಗ ಅಲ್ಲಿನ ವಾತಾವರಣವೆಲ್ಲಾ ನಗೆಗಡಲಿನಲ್ಲಿ ತೇಲಿತ್ತು. ಮತ್ತೆ ನಾವು ಇಡೀ ದಿನ ಬಿಸಿಲಿನಲ್ಲಿ ಬೆಂದು ಫೋಟೊಗ್ರಫಿ ಮಾಡಿಕೊಂಡು ಮನೆಗೆ ಬಂದೆವು. ಮರುದಿನ ನಮ್ಮ ಜೊತೆಗೆ ಮುಂಡರಗಿಯ ಸಲೀಂ ಸೇರಿಕೊಂಡರು.
ನಮ್ಮ ಸೂರ್ಯಕಿರಣ ವಿಮಾನಗಳು ಆಕಾಶವನ್ನು ಪ್ರೇಮಿಸಿದ್ದು ಹೀಗೆ.
ಎರಡನೇ ದಿನ ಅದೇ ಜಾಗಕ್ಕೆ ಹೋದರೆ ಅಲ್ಲಿ ಅಕಾಶವನ್ನು ನೋಡಲಿಕ್ಕೆ ಒಬ್ಬನೂ ಇಲ್ಲ. ಈ ಕೆರದಂಡೆಯ ಮೇಲೆ ನಿಲ್ಲುವ ಜನಗಳಿಂದ ತುಂಬಾ ತೊಂದರೆಯಾಗುತ್ತದೆ ಅಂತ ಮೇಲಧಿಕಾರಿಗಳಿಂದ ದೂರು ಬಂದು ಅಲ್ಲಿ ಯಾರನ್ನು ಬಿಡಬಾರದೆಂದು ಹೆಜ್ಜೆಗೊಬ್ಬರಂತೆ ಪೋಲೀಸರನ್ನು ನೇಮಿಸಿಬಿಟ್ಟಿದ್ದರು. ನಮ್ಮ ದೊಡ್ಡ ಲೆನ್ಸು ಕ್ಯಾಮೆರಗಳನ್ನು ತೋರಿಸಿ ನಮಗೆ ಇಲ್ಲಿಯೇ ಫೋಟೊಗ್ರಫಿ ಮಾಡಲಿಕ್ಕೆ ಹೇಳಿದ್ದಾರೆ ಎಂದು ಸುಳ್ಳುಹೇಳಿ ಸಲೀಂ ಬಳಿಯಿರುವ ಪ್ರೆಸ್ ಕಾರ್ಡನ್ನು ಅಲ್ಲಿನ ಇನ್ಸ್ಪೆಕ್ಟರಿಗೆ ತೋರಿಸಿದ ಮೇಲೆ ಕೊನೆಗೆ ಒಪ್ಪಿ ನಮ್ಮನ್ನು ಬೇರೆ ದಾರಿಯಿಂದ ಆ ಕೆರೆ ಬದಿಗೆ ಹೋಗಲು ಹೇಳಿದರು. ನಾವು ಖುಶಿಯಿಂದ ಹೊರಟೆವಲ್ಲ ಅದು ಒಂಥರ ಕಡಿದಾದ ದಾರಿ ಕೆಳಗೆ ಒಂದರಿಂದ ಎರಡು ಅಡಿಯಷ್ಟು ಕೊಚ್ಚೆ ನೀರು ಉದ್ದಕ್ಕೂ ಇತ್ತು. ಅದನ್ನು ದಾಟದೇ ನಿನ್ನೆ ನಾವು ನಿಂತಿದ್ದ ಜಾಗವನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲ. ಕ್ಯಾಮೆರಾ ಬ್ಯಾಗುಗಳನ್ನು ಬೆನ್ನಿಗೇರಿಸಿಕೊಂಡು ಮಂಡಿಯವರೆಗೆ ಪ್ಯಾಂಟುಗಳನ್ನು ಮಡಿಚಿಕೊಂಡು ಶೂ ಕಾಲಿನೊಳಗೆ ಆ ಕೊಚ್ಚೆನೀರಿನೊಳಗೆ ನಡೆದು ನಮ್ಮ ಜಾಗ ತಲುಪುವಷ್ಟರಲ್ಲಿ ನಮಗಂತೂ ಸಾಕುಬೇಕಾಗಿತ್ತು.
ಮಧ್ಯಾಹ್ನದ ಉರಿಬಿಸಿಲಲ್ಲಿ ಫೋಟೊಗ್ರಫಿ ಮಾಡುವಾಗ ಸುಸ್ತಾಗಿ ಅದೇ ಕೆರೆ ದಂಡೆಯಲ್ಲಿ ನನಗರಿವಿಲ್ಲದಂತೆ ನಿದ್ರೆ ಹೋದಾಗ ಅವರ ಕ್ಯಾಮೆರಾದಲ್ಲಿ ಹೀಗೆ ನನ್ನ ಫೋಟೊ ತೆಗೆದಿದ್ದರು ಮುಂಡರಗಿಯಂದ ಬಂದಿದ್ದ ಮತ್ತೊಬ್ಬ ಫೋಟೊಗ್ರಫಿ ಗೆಳೆಯ ಸಲೀಂ
ಇಷ್ಟಾದರೂ ಎರಡನೆ ದಿನ ನಮ್ಮ ಫೋಟೊಗ್ರಫಿ ಮೊದಲ ದಿನಕ್ಕಿಂತ ಏನು ವಿಶೇಷವೆನಿಸಲಿಲ್ಲ. ಸಂಜೆ ಮನೆಗೆ ಬಂದಾಗ ಕೊಚ್ಚೆ ನೀರಿನಲ್ಲಿ ನಡೆದಾಡಿದ ಪರಿಣಾಮ ಕಾಲುಗಳಲ್ಲಿ ನವೆಯುಂಟಾಗಿ ಕೆರೆತ ಪ್ರಾರಂಭವಾಗಿತ್ತು. . ಅವತ್ತು ರಾತ್ರಿ ಹೇಮಚಂದ್ರ ಜೈನ್ ದಾವಣಗೆರೆ ಹೊರಟರು.
ಮರುದಿನ ಅಂದರೆ ಮೂರನೆ ನನ್ನ ಅದೃಷ್ಟ ಕುಲಾಯಿಸಿತೆಂದೇ ಹೇಳಬೇಕು. ಏಕೆಂದರೆ ನಮ್ಮ ಪ್ರಖ್ಯಾತ ಛಾಯಾಗ್ರಾಹಕರಾದ ಸಿ.ಅರ್.ಸತ್ಯನಾರಾಯಣರವರು ಅವರ ಆತ್ಮೀಯ ಗೆಳಯರೊಬ್ಬರಿಂದ ಐದು ವಿವಿಐಪಿ ಪಾಸುಗಳನ್ನು ಹೇಗೋ ಗಿಟ್ಟಿಸಿಕೊಂಡಿದ್ದರು.. ಎರಡು ಕಾರುಗಳಲ್ಲಿ ಅವರು ಸೇರಿದಂತೆ ನಾನು ದೇವೆಂದ್ರ, ಶೈಲೇಶ್, ಮಾರ್ಟಿನ್ ಹೊರಟೆವು. ಈ ಪಾಸು ಸುಲಭವಾಗಿ ಸಿಗುವುದಿಲ್ಲ ಸಿಕ್ಕರೆ ಅದರಿಂದ ಸಿಗುವ ರಾಜಯೋಗದ ಅನುಭವವೇ ಬೇರೆ. ಇಂಥ ಪಾಸುಗಳನ್ನು ಹೊಂದಿದವರ ಕಾರುಗಳಿಗೆ ವಿಶೇಷ ಪಾರ್ಕಿಂಗ್ ಉಂಟು. ಅಲ್ಲಿ ನಮ್ಮನ್ನು ರಾಜಮರ್ಯಾದೆಯಿಂದ ಕರೆದೊಯ್ದು ಸೆಕ್ಯುರಿಟಿ ಚೆಕ್ ಎಲ್ಲಾ ಆದ ಮೇಲೆ ಏರ್ ಶೋ ಪ್ರದರ್ಶನಕ್ಕೆ ಒಳಗೆ ಹೋಗಲು ನಮಗಾಗಿ ವಿಶೇಷ ಬಸ್ಸುಗಳ ವ್ಯವಸ್ಥೆಯಾಗಿತ್ತು. ಅದು ಸುರಂಗಮಾರ್ಗದಲ್ಲಿ ಒಳಗೆ ಹೋದಮೇಲೆ ಮತ್ತೆ ಅಲ್ಲಿ ಮುಖ್ಯವಾದ ತಪಾಸಣೆ. ಅಲ್ಲಿ ನಮ್ಮ ಐಡಿಂಟಿಟಿ ಕಾರ್ಡನ್ನು ಈ ಪಾಸ್ ಜೊತೆಗೆ ಕಡ್ಡಾಯವಾಗಿ ತೋರಿಸಬೇಕು. ಅವರನ್ನು ದಾಟಿ ಒಳಗೆ ಹೋಗುತ್ತಿದ್ದಂತೆ ಪಾಸುಕೊಟ್ಟಿದ್ದವರು ನಮಗಾಗಿ ಕಳಿಸಿದ್ದ ಬೆಂಜ್ ಕಾರು ಕಾಯುತ್ತಿತ್ತು. ಎಸ್ ಕ್ಲಾಸಿನ ಬೆಂಜ್ ಕಾರಿನಲ್ಲಿ ಮೊದಲ ಭಾರಿ ಕುಳಿತುಕೊಳ್ಳುತ್ತಿರುವುದಕ್ಕೆ ನಮಗೆಲ್ಲಾ ಅತೀವ ಆನಂದವಾಗಿತ್ತು. ಅಲ್ಲಿಂದ ಒಂದುವರೆ ಕಿಲೋಮೀಟರ್ ಸಾಗಿ ಮುಖ್ಯ ಪ್ರದರ್ಶನದ ಜಾಗಕ್ಕೆ ಬಂದೆವು ಅಲ್ಲಿ ಮತ್ತೊಂದು ತಪಾಸಣೆ. ಅವರನ್ನು ದಾಟಿದ ನಂತರ ನಾವು ಪ್ರದರ್ಶನಕ್ಕೆ ಎಷ್ಟು ಹತ್ತಿರವಿದ್ದೆವೆಂದರೆ ನಮ್ಮ ಮುಂದೆಯೇ ರನ್ವೇನಲ್ಲಿ ವಿಮಾನಗಳು ಏರುತ್ತಿದ್ದವು ಮತ್ತು ಇಳಿಯುತ್ತಿದ್ದವು..
ನಮ್ಮ ಫೋಟೊಗ್ರಫಿ ತಂಡ ಸಿ.ಅರ್ ಸತ್ಯನಾರಾಯಣ, ನಾನು, ದೇವೆಂದ್ರ, ಶೈಲೇಶ್, ಮಾರ್ಟಿನ್ ಮತ್ತು ಎಸ್. ಮಲ್ಲಿಕಾರ್ಜುನ್.
ನಮ್ಮ ಮುಂದೆಯೇ ಸಾಲಾಗಿ ಎಲ್ಲಾ ವಿಮಾನಗಳನ್ನು ನಿಲ್ಲಿಸಿದ್ದರು. ವಿಮಾನಗಳು ತಮ್ಮ ಎಲ್ಲಾ ಹಾರಾಟ, ಏರುವುದು, ಇಳಿಯುವುದು, ಲಗಾಟಿ ಹೊಡೆಯುವುದು, ತಲೆಕೆಳಗು, ಉಲ್ಟಾಪಲ್ಟಾ.......ಇತ್ಯಾದಿ ಪ್ರದರ್ಶನಗಳನ್ನು ಇದೇ ಜಾಗದಲ್ಲಿ ಮಾಡುತ್ತಿದ್ದವು. ಅವು ಇಲ್ಲೇ ಮಾಡಲು ಕಾರಣವೇನೆಂದರೆ ದೇಶವಿದೇಶಗಳಿಂದ ಬಂದಿದ್ದ ವ್ಯಾಪಾರಿಗಳು, ಅಧಿಕಾರಿಗಳು, ಸಚಿವರು, ರಾಜತಾಂತ್ರಿಕವರ್ಗದವರು ಒಟ್ಟಾರೆ ವಿವಿಐಪಿ ಅನ್ನುವವರೆಲ್ಲಾ ನಮ್ಮ ಎಡಪಕ್ಕದ ಕಟ್ಟಡಗಳಲ್ಲಿ ಕುಳಿತು ಈ ಪ್ರದರ್ಶನವನ್ನು ನೋಡುತ್ತಿದ್ದರಿಂದ ಅವರನ್ನು ಮೆಚ್ಚಿಸಲು ಅದ್ಬುತ ಪ್ರದರ್ಶನವನ್ನು ತೋರಿಸುತ್ತಿದ್ದ ವಿಮಾನಗಳು ನಮ್ಮ ಕ್ಯಾಮೆರಾಗಳಲ್ಲಿ ಸುಲಭವಾಗಿ ಸೆರೆಯಾದವು.
ಮಧ್ಯಾಹ್ನ ಊಟವಾದನಂತರ ನಾನು ಏನಾದರೂ ಸ್ವಲ್ಪ ವಿಭಿನ್ನವಾದ ಫೋಟೊಗ್ರಫಿ ಮಾಡಬೇಕೆಂದು ತೀರ್ಮಾನಿಸಿಕೊಂಡೆ. ಆಗ ಕಂಡಿತು ನನಗೆ ಅಲ್ಲಲ್ಲಿ ಎತ್ತರದಲ್ಲಿ ಕಾಣುತ್ತಿದ್ದ ಬಾವುಟಗಳು. ಅವುಗಳ ಹಿನ್ನೆಲೆಯನ್ನು ಮಾಡಿಕೊಂಡು ಫೋಟೊಗ್ರಫಿ ಮಾಡಿದರೆ ಹೇಗೆ ಅನ್ನಿಸಿತು. ನೆಲ್ಲಿಕಾಯಿಗೂ ಸಮುದ್ರದ ಉಪ್ಪಿಗೂ ಎಲ್ಲಿಯ ಸಂಭಂದ ಅಂದುಕೊಂಡರೂ ಅವೆರಡೂ ಕೂಡಿದರೇ ಎಂಥ ಅದ್ಭುತವಲ್ಲವೇ! ಹಾಗೆ ನಾನು ಕೂಡ ಅಲ್ಲಿ ಹಾರಾಡುವ ವಿಮಾನ ಯಾವುದೆಂದು ಮೊದಲು ತಿಳಿಯಬೇಕು. ಆನಂತರ ಅದಕ್ಕೆ ಸಂಭಂದಿಸಿದ ಬಾವುಟ, ಚಿಹ್ನೆ, ಗೋಪುರ ಇತ್ಯಾದಿಗಳನ್ನು ಹುಡುಕಿಕೊಂಡು ಇದರ ಹಿನ್ನೆಲೆಯಲ್ಲಿ ಅದೇ ದೇಶದ ವಿಮಾನಗಳ ಹಾರಾಟದ ಫೋಟೊಗ್ರಫಿ ಮಾಡಬೇಕೆಂದು ಪ್ಲಾನ್ ಮಾಡಿದೆನಲ್ಲಾ...ತಲೆಗೆ ಈ ಯೋಚನೆ ಬಂದ ತಕ್ಷಣ ನನ್ನ ಫೋಟೊಗ್ರಫಿ ಗೆಳೆಯರ ಗುಂಪಿನಿಂದ ಮಾಯವಾಗಿಬಿಟ್ಟಿದ್ದೆ.
ಅಲ್ಲಿಂದ ಏಕೆ ಮಾಯವಾದೆನೆಂದರೆ ಹೀಗೊಂದು ಹೊಸ ರೀತಿಯ ಫೋಟೋಗ್ರಫಿಯ ಉಪಾಯವನ್ನು ಅವರಿಗೆ ಹೇಳಿದೆನೆಂದುಕೊಳ್ಳಿ. ಇಂಥ ಸುಡು ಬಿಸಿಲಲ್ಲಿ ಭಾರವಾದ ಕ್ಯಾಮೆರ ಲಗ್ಗೇಜುಗಳನ್ನು ಹೊತ್ತು ನಿಂತುಕೊಂಡು ಆಕಾಶದಲ್ಲಿ ದೂರದಲ್ಲೆಲ್ಲೋ ಹಾರಾಡುತ್ತಾ ಕ್ಷಣಮಾತ್ರದಲ್ಲಿ ಕಣ್ಮರೆಯಾಗುವ ವಿಮಾನಗಳನ್ನು ನಮ್ಮ ಕ್ಯಾಮೆರಾಗಳಲ್ಲಿ ಸೆರೆಯಿಡಿಯುವುದೇ ದೊಡ್ಡ ಸಾಹಸ. ಅದರಲ್ಲೂ ನಾವು ಕ್ಲಿಕ್ಕಿಸಿದ ನೂರಾರು ಫೋಟೊಗಳಲ್ಲಿ ವಿಮಾನಗಳ ವೇಗದ ಚಲನೆಗೆ ನಮ್ಮ ಕ್ಯಾಮೆರಗಳು ಕ್ಷಣಮಾತ್ರದಲ್ಲಿ ಫೋಕಸ್ ಮಾಡಿ ಶಾರ್ಪ್ ಆಗಿ ಫೋಟೊಗ್ರಫಿ ತೆಗೆದರೆ ಅದೇ ನಮ್ಮ ದೊಡ್ಡ ಸಾಧನೆ. ಅಂತದ್ದರಲ್ಲಿ ಮೇಲೆ ವಿವಿಧ ದೇಶಗಳ ಬಾವುಟಗಳನ್ನು ಹುಡುಕಿ ಕ್ಷಣಮಾತ್ರದಲ್ಲಿ ಕಂಡು ಕಣ್ಮರೆಯಾಗುವ ಆ ದೇಶದ ವಿಮಾನಗಳನ್ನು ಇವುಗಳ ಹಿನ್ನೆಲೆಯಲ್ಲಿ ಫೋಟೊಗ್ರಫಿ ಮಾಡುವುದೆಂದರೆ ಅಸಾಧ್ಯವೆಂದುಕೊಂಡು ನನ್ನ ಯೋಜನೆಯನ್ನು ಹುಚ್ಚುತನವೆಂದುಬಿಟ್ಟರೆ! ಅದಕ್ಕೆ ಅಲ್ಲಿಂದ ತಪ್ಪಿಸಿಕೊಂಡಿದ್ದೆ.
ಸಂಜೆ ಫೋಟೊಗ್ರಫಿಯೆಲ್ಲಾ ಮುಗಿದ ಮೇಲೆ ಎಲ್ಲರೂ ಮತ್ತೆ ಸೇರಿದೆವು. ನಮ್ಮ ಸಿ.ಅರ್ ಸತ್ಯನಾರಾಯಣರವರು ಪಾಸ್ ಕೊಟ್ಟ ಗೆಳೆಯರಿಗೆ ಫೋನ್ ಮಾಡಿದರು. ನಮ್ಮ ಫೋನಿಗೆ ಕಾಯುತ್ತಿರುವಂತೆ ಬೆಂಜ್ ಕಾರಿನ ಡ್ರೈವರ್ ನಮಗಾಗಿ ಕಾಯುತ್ತಿದ್ದ. ನಾವೆಲ್ಲಾ ಮತ್ತೊಮ್ಮೆ ಬೆಂಜ್ ಕಾರಿನ ಸೀಟುಗಳನ್ನು ಅಲಂಕರಿಸಿದೆವು. ಏರ್ ಷೋ ನಡೆಯುವ ಸ್ಥಳದಿಂದ ಮುಖ್ಯದ್ವಾರಕ್ಕೆ ಒಂದುವರೆ ಕಿಲೋಮೀಟರ್.
"ಈ ಒಂದುವರೆ ಕಿಲೋಮೀಟರ್ ಟ್ರಾಫಿಕ್ ಜಾಮ್ ಆಗಿ ನಮ್ಮ ಕಾರು ನಿದಾನವಾಗಿ ಹೋಗುವಂತಾಗಲಿ’ ಅಂದರು ದೇವೇಂದ್ರ.
"ಯಾಕಪ್ಪ ಬೇಗ ಮನೆಗೆ ಹೋಗಬೇಕು ಅನ್ನುವ ಆಸೆಯಿಲ್ವಾ" ಮಾರ್ಟಿನ್ ಕೇಳಿದರು.
"ಟ್ರಾಫಿಕ್ ಜಾಮ್ ಆದ್ರೆ ಈ ಕಾರಿನಲ್ಲಿ ಜಾಸ್ತಿ ಹೊತ್ತು ಕೂರಬಹುದಲ್ವಾ" ನಗುತ್ತಾ ಹೇಳಿದರು ದೇವೇಂದ್ರ.
ಅವರ ಮಾತನ್ನು ಕೇಳಿ ಎಲ್ಲರೂ ಜೋರಾಗಿ ನಕ್ಕೆವು. ಖುಷಿಯಿಂದ್ ಆ ಡ್ರೈವರಿಗೆ ಟಿಪ್ಸ್ ಕೊಟ್ಟು ನಮ್ಮ ಮನೆ ಕಡೆಗೆ ಹೊರಟಾಗ ಸಂಜೆ ಆರುಗಂಟೆ.
---------------------------------------------------
---------------------------------------------------
--------------------------------------------------
ಮತ್ತೆ ಈಗ ಯಾವ ವಿಮಾನ ಈಗ ಹಾರಾಟ ಪ್ರಾರಂಭಿಸುತ್ತದೆ, ಆ ದೇಶಕ್ಕೆ ಸಂಭಂದಪಟ್ಟ ಬಾವುಟ ಇತ್ಯಾದಿಗಳು ಎಲ್ಲಿರುತ್ತವೆ, ಆ ವಿಮಾನದ ಹಾರಾಟ ಪ್ರದರ್ಶನ ಎಷ್ಟು ಹೊತ್ತು ಇರುತ್ತದೆ, ಅಷ್ಟರೊಳಗೆ ಆಕಾಶದ ಯಾವ ದಿಕ್ಕಿನಲ್ಲಿ ಇವೆರಡನ್ನು ಸೇರಿಸಿ ಫೋಟೊಗ್ರಫಿ ಮಾಡಬೇಕು ಎಷ್ಟು ವೇಗವಾಗಿ ಮಾಡಬೇಕು? ತಾಂತ್ರಿಕವಾಗಿ ಹೇಗೆ ಕ್ಯಾಮೆರ ಮತ್ತು ಲೆನ್ಸುಗಳನ್ನು ಬಳಸಬೇಕು ಇತ್ಯಾದಿ ವಿಚಾರ್ಅಗಳನ್ನು ಇಲ್ಲಿ ಬರೆದರೆ ಈ ಲೇಖನ ಮಾರುದ್ದವಾಗುತ್ತದೆ. ಅದೆಲ್ಲಾ ತರಲೇ ತಾಪತ್ರಯ ನನಗಿರಲಿ. ಅದರ ಬದಲಾಗಿ ಮಿಂಚಿನಂತೆ ಕಣ್ಮುಂದೆ ಹಾರಿ ಮಾಯವಾಗುವ ವೈವಿಧ್ಯಮಯ ವಿಮಾನಗಳು ಮಾತ್ರ ನಿಮಗಿರಲಿ ಅಂದುಕೊಂಡು ನೀವು ಅವುಗಳ ಫೋಟೊಗಳನ್ನು ಮಾತ್ರ ಹಾಕಿದ್ದೇನೆ ನೋಡಿ ಆನಂದಿಸಿ. ಖುಷಿಯಾದರೆ ನಿಮ್ಮ ಪ್ರತಿಕ್ರಿಯೆ ತಿಳಿಸಿ.
ಸೂರ್ಯ ಕಿರಣಗಳು ನೆಲದಿಂದ ಟೇಕ್ ಅಪ್ ಆಗುವಾಗ ಈ ಪುಟ್ಟ ಬಾಲಕ ಕುತೂಹಲದಿಂದ ನೋಡುವ ಪರಿಯನ್ನು ನೋಡಿದರೆ ಮುಂದೆ ಈತ ಪೈಲಟ್ ಆಗಬಹುದೇ?
ನನಗೆ ಇದು ತುಂಬಾ ಇಷ್ಟದ ಫೋಟೊ. ಸೂರ್ಯಕಿರಣಗಳು ಆಕಾಶದಲ್ಲಿ ಬಣ್ಣದ ಚಿತ್ತಾರವನ್ನು ಬಿಡಿಸಿ ಕೆಳಮುಖವಾಗಿ ಇಳಿಯುವಾಗ ನಮ್ಮ ದೇಶದ ಬಾವುಟವನ್ನು ಉತ್ಸಾಹದಿಂದ ಹಾರಿಸುತ್ತಿದ್ದಾರೆ.
ಆಕಾಶದಲ್ಲಿ ಬಣ್ಣದ ಚಿತ್ತಾರ ಬಿಡಿಸಿದ ಸೂರ್ಯಕಿರಣಗಳು ನಮ್ಮ ಮತ್ತೊಂದು ಯುದ್ದ ವಿಮಾನದಲ್ಲಿರುವ ನಮ್ಮ ದೇಶದ ಧ್ವಜದ ಹಿನ್ನೆಲೆಯಲ್ಲಿ
ಇದು "ಯೋರೋ ಟೈಫೂನ್ ಯುದ್ದವಿಮಾನ" ಇದನ್ನು ಯುರೋಪಿನ ಐದು ರಾಷ್ಟ್ರಗಳಾದ ಸ್ಪೈನ್, ಜರ್ಮನಿ, ಇಟಲಿ, ಆಷ್ಟ್ರೀಯ, ಪ್ರಾನ್ಸ್, ಮತ್ತು ಏಷ್ಯಾದ ಸೌದಿ ಆರೇಬಿಯ ಒಟ್ಟಾಗಿ ಸೇರಿ ನಿರ್ಮಿಸಿದ ಯುದ್ದ ವಿಮಾನ. ನನಗೆ ಮೂರು ರಾಷ್ಟ್ರಗಳ ಬಾವುಟಗಳು ಹಿನ್ನೆಲೆಯಲ್ಲಿ ಮಾತ್ರ ಫೋಟೊಗ್ರಫಿ ಮಾಡಲು ಸಾಧ್ಯವಿತ್ತು ಉಳಿದ ಮೂರು ಮತ್ತೊಂದು ಬದಿಯಲ್ಲಿದ್ದವು.
ಬೆಳಿಗ್ಗೆ ರೆಡ್ ಬುಲ್ ವಿಮಾನಗಳು ಅದರದೇ ದೊಡ್ಡ ಕೊಡೆಯ ಹಿನ್ನೆಯಲ್ಲಿ ಸೆರೆ ಸಿಕ್ಕಿದ್ದು ಹೀಗೆ.
ರೆಡ್ ಬುಲ್ ನಾಲ್ಕು ವಿಮಾನ ತಲೆಕೆಳಕಾಗಿ ಹಾರುವಾಗ ಛತ್ರಿಯಾಕಾರದ ಅವರ ದೇಶದ ದೊಡ್ಡ ಛತ್ರಿಯ ಹಿನ್ನೆಲೆಯಲ್ಲಿ ಸಂಜೆಗೆ ಸಿಕ್ಕ ಫೋಟೊ
ತಲೆಕೆಳಗಾಗಿ ವೇಗವಾಗಿ ಇಳಿಯುತ್ತಿರುವ ಸ್ವೀಡನ್ ದೇಶದ ಗ್ರೀಫಿನ್ ಯುದ್ದ ವಿಮಾನ ಅದೇ ದೇಶದ ದ್ವಜದ ಹಿನ್ನೆಲೆಯಲ್ಲಿ
ನಮ್ಮ ಹೆಮ್ಮೆಯ ಲಘು ಯುದ್ದ ವಿಮಾನ "ತೇಜಸ್" ನಮ್ಮ ದೇಶದ ಯುದ್ದ ವಿಮಾನದ ಬಾವುಟದ ಹಿನ್ನೆಲೆಯಲ್ಲಿ
ನಾಲ್ಕು ದಿಕ್ಕಿಗೆ ಒಂದೇ ಕ್ಷಣದಲ್ಲಿ ಹಾರಿದ ಜೆಕೋಸ್ಲೋವಾಕಿಯಾದ ರೆಡ್ ಬುಲ್ ವಿಮಾನಗಳು
ಸೂರ್ಯಕಿರಣಗಳು ಆಕಾಶದಲ್ಲಿ ಬರೆದ ತಿರುಪತಿ ತಿಮ್ಮಪ್ಪನ ಮೂರು ನಾಮ
ಚಿತ್ರಗಳು ಮತ್ತು ಲೇಖನ
ಶಿವು.ಕೆ
54 comments:
ಶಿವು ಸರ್,
ನಿಮ್ಮ ಅನುಭವವನ್ನು ನಮ್ಮೊಡನೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು, ಫೋಟೋಗಳಂತೂ ಸೂಪರ್ ...
ಶಿವು ಸರ್,
ನಿಮ್ಮ ಅನುಭವವನ್ನು ನಮ್ಮೊಡನೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು, ಫೋಟೋಗಳಂತೂ ಸೂಪರ್ ...
ಆಶೋಕ್ ಸರ್,
ಏರ್ ಷೋ ಫೋಟೊಗ್ರಫಿ ಮತ್ತು ಲೇಖನವನ್ನು ಓದಿ ಮೊದಲು ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.
wow..no words..
ಚುಕ್ಕಿ ಚಿತ್ತಾರ..
ಥ್ಯಾಂಕ್ಸ್...
woh..superb :)
ರಸದೌತಣ ದಂತೆ ಇತ್ತು ಚಿತ್ರಗಳು....ಸೂಪರ್ ಶಿವು....
ಶಿವು,
ನಿಮ್ಮ ಶ್ರೀಮತಿಯವರ ಕಲ್ಪನೆ ಹಾಗು ಕಾವ್ಯಸಾಮರ್ಥ್ಯಕ್ಕೆ ನನ್ನ ಮೊದಲ ಸಲಾಮು. ನಿಜವಾಗಿಯೂ ಜಿಲೇಬಿ ತರಹದ ಧೂಮಲೀಲೆ. ಸೊಗಸಾದ ಚುಟುಕು ಕವನ. ಅವರಿಗೆ ನನ್ನ ಅಭಿನಂದನೆಗಳನ್ನು ತಿಳಿಸಿ.
ಎರಡನೆಯದಾಗಿ ನೀವು ತೆಗೆದ ಸೊಗಸಾದ ಫೋಟೋಗಳು. ಅವುಗಳಿಗಾಗಿ ಧನ್ಯವಾದಗಳು.
ಶಿವು,
ಅದ್ಭುತ ಛಾಯಾಚಿತ್ರಗಳು, ಅದಕ್ಕಿಂತಲೂ ಅಧ್ಭುತವಾದ ಬರವಣಿಗೆ. ನಿಮ್ಮ ಸಾಹಸಕ್ಕೆ ತುಂಬು ಹೃದಯದ ಮೆಚ್ಚುಗೆ. ಆಯಾ ರಾಷ್ಟ್ರಗಳ ಧ್ವಜದೊಂದಿಗೇ ಆಯಾ ರಾಷ್ಟ್ರಗಳ ವಿಮಾನದ ಫೋಟೋ ತೆಗೆಯುವ ನಿಮ್ಮ ಕಲ್ಪನೆಯನ್ನು ಸಾಕಾರ ಮಾಡಿದ್ದೀರಿ. ನಾನು ಕೆಲಸ ಮಾಡಿದ ಸೂರ್ಯ ಕಿರಣ್ ವಿಮಾನ, ಮುಖ್ಯ ವ್ಯವಸ್ಥೆಯೊಂದರ ವಿನ್ಯಾಸದಲ್ಲಿ ಭಾಗಿಯಾಗಿದ್ದ ತೇಜಸ್ ವಿಮಾನಗಳ ಚಿತ್ರಗಳನ್ನು ನೋಡಿ ಕಣ್ಣು ತುಂಬಿ ಬಂತು, ಅಕ್ಷರಶಃ.
ಮತ್ತೊಮ್ಮೆ ಹಾರ್ದಿಕ ಅಭಿನಂದನೆಗಳು,
- ಪ್ರೊ.ಸುಧೀಂದ್ರ ಹಾಲ್ದೊಡ್ಡೇರಿ
ಮಾಜಿ ವಿಜ್ಞಾನಿ, ಡಿ.ಆರ್.ಡಿ.ಓ.
ಸುಮ ಮೇಡಮ್,
ಥ್ಯಾಂಕ್ಸ್.
ಸವಿಗನಸು ಮಹೇಶ್ ಸರ್,
ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.. ಸ್ವಲ್ಪ ಹೊತ್ತಿನ ಹಿಂದೆ ಬೆಂಗಳೂರಿಗೆ ಬಂದಿರುವ ಸುಗುಣಕ್ಕ ಜೊತೆ ನಾನು ಮತ್ತು ಹೇಮಾಶ್ರೀಯವರು ಮಾತಾಡಿದೆವು ತುಂಬಾ ಖುಷಿಯಾಯ್ತು...ಮುಂದಿನ ಆಗಸ್ಟಿಗೆ ಬೆಂಗಳೂರಿಗೆ ಬಂದಾಗ ಖಂಡಿತ ಸಿಗೋಣ...
ಸುನಾಥ್ ಸರ್,
ಹಾಗೆ ನೋಡಿದರೆ ಈ ಫೋಟೊಗಳನ್ನು ಸುಮ್ಮನೇ ಹಾಗೆ ತೆಗೆದಿಟ್ಟುಬಿಟ್ಟಿದ್ದೆ. ಒಮ್ಮೆ ಹೇಮಾಶ್ರೀ ಏರ್ ಷೋ ಫೋಟೊಗಳನ್ನು ನೋಡಬೇಕೆಂದಾಗ ಕಂಪ್ಯೂಟರಿನಲ್ಲಿ ತೋರಿಸಿದೆನಲ್ಲ. ತಕ್ಷಣ ಆ ಫೋಟೊ ನೋಡಿ ಕಟ್ಟಿದ ಈ ಸಣ್ಣ ಪದ್ಯ ಮತ್ತೆ ನನಗೆ ಈ ಲೇಖನವನ್ನು ಬರೆಯಲು ಸ್ಫೂರ್ತಿ ನೀಡಿತು. ಅದರ ಪಲಿತಾಂಶವೇ ಈ ಲೇಖನ.ನಿಮ್ಮ ಅಭಿನಂದನೆಗಳನ್ನು ಅವಳಿಗೆ ತಿಳಿಸುತ್ತೇನೆ..
ಧನ್ಯವಾದಗಳು.
ಶಿವಣ್ಣ......
ಚಂದದ ಚಿತ್ರಗಳು.......
ಒಳ್ಳೆಯ ಬರಹ...
ಸುಧೀಂದ್ರ ಸರ್,
ಮೊದಲಿಗೆ ನನ್ನ ಫೋಟೊಗ್ರಫಿ ಮತ್ತು ಚುರುಕಿನ ಬರವಣಿಗೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ನಮಗೆ ಇಂಥ ಫೋಟೋಗ್ರಫಿ ಮಾಡಬೇಕೆನ್ನಿಸುವುದರಲ್ಲಿ ನಮ್ಮ ಕಣ್ಣಿಗೆ ಕಾಣದ ನಿಮ್ಮ ಶ್ರಮವಿದೆ. ನಿಮ್ಮೆಲ್ಲರ ಸಂಶೋದನೆಯಿಂದಾಗಿ ಈಗ ನಮ್ಮ ಕಣ್ಮುಂದೆ ಹಾರಾಡುವ ಇವುಗಳನ್ನು ನಾವು ನೋಡುತ್ತಿದ್ದೇವೆ ಮತ್ತು ಫೋಟೊಗ್ರಫಿ ಎನ್ನುವ ಮಾಧ್ಯಮದ ಮೂಲಕ ಸೆರೆಯಿಡಿಯಲು ಅವಕಾಶವಾಗುತ್ತಿದೆ.
ನೀವು ಏರ್ ಷೋ ಪ್ರಾರಂಭವಾಗುವ ಮೊದಲು ನಮ್ಮ ಲಘು ಯುದ್ಧ ವಿಮಾನ "ತೇಜಸ್ ಬಗ್ಗೆ ಅಷ್ಟು ವಿವರವಾಗಿ ನಮ್ಮ ದೇಶಕ್ಕೆ ಸೇರ್ಪಡೆಯಾಗುವ ವಿಚಾರವನ್ನು ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ವಿಜಯಕರ್ನಾಟಕದಲ್ಲಿ ಬರೆದಾಗಲೇ ನನಗನ್ನಿಸಿತ್ತು ಇದರಲ್ಲಿ ನಿಮ್ಮ ಶ್ರಮವಿರಬಹುದು ಅಂತ. ಮತ್ತೆ ನಿಮ್ಮ ಮೊದಲಿನ ಶ್ರಮದ ಸೂರ್ಯಕಿರಣ ವಿಮಾನಗಳು ನನ್ನ ಮೆಚ್ಚಿನವು. ಆವುಗಳನ್ನು 2005ರ ಏರ್ ಷೋದಿಂದ ಫೋಟೊಗ್ರಫಿ ಮಾಡುತ್ತಿದ್ದೇನೆ.ಮೂರು-ಮೂರು ವಿಮಾನಗಳು ಒಟ್ಟಿಗೆ ಹಾರುವುದು, ಎಲ್ಲೋ ಒಂದು ಕಡೆ ಒಟ್ಟಿಗೆ ಸೇರುವುದು, ನಂತರ ಅವುಗಳ ತರಾವರಿ ಚಿತ್ತಾರ ಆಕಾಶದಲ್ಲಿ ಮಾಡುವುದು, ಕೆಳಗೆ ನಿಂತು ನೋಡುವ ನಮಗೆಲ್ಲಾ ವಿಸ್ಮಯ. ನೂರನೇ ಒಂದು ಸೆಕೆಂಡು ವ್ಯತ್ಯಾಸವಾದರು ಆಪಘಾತ ಕಟ್ಟಿಟ್ಟ ಬುತ್ತಿ. ಅಂತದ್ದರಲ್ಲಿ ಆಕಾಶದಲ್ಲಿ ಅವುಗಳ ಒಟ್ಟಾರೆ ನಿಯಂತ್ರಣ ಹೇಗೆ ಅವುಗಳ ಲೀಡರ್ ಯಾರು? ಆತ ಹೇಗೆ ಉಳಿದ ಎಂಟು ವಿಮಾನಗಳಿಗೆ ಆಜ್ಞೆ ಯಾವ ಕ್ಷಣದಲ್ಲಿ ನೀಡುತ್ತಾನೆ. ನೀಡುವ ಒಂದು ಕ್ಷಣ ವ್ಯತ್ಯಾಸವಾದರೂ ಏನಾಗಬಹುದು ಅದನ್ನು ಪಡೆದುಕೊಂಡ ಇತರ ವಿಮಾನಗಳ ಚಾಲಕರು ಹೇಗೆ ಕ್ಷಣಮಾತ್ರದಲ್ಲಿ ಪ್ರತಿಕ್ರಿಯಿಸುತ್ತಾರೆ ಇದಕ್ಕೆ ಕಂಪ್ಯೂಟರ್ ಮತ್ತು ಮನುಷ್ಯನ ಮೆದುಳಿನ ಏರಿಳಿತಗಳೇನು ಇತ್ಯಾದಿ ವಿಚಾರಗಳ ಬಗ್ಗೆ ನನಗಂತೂ ತುಂಬಾ ಕುತೂಹಲವಿದೆ.
ಸರ್, ನೀವು ಈ ವಿಚಾರದ ಬಗ್ಗೆ ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ಬರೆಯಬಲ್ಲಿರಿ ಅಂತ ನನ್ನ ನಂಬಿಕೆ. ಸಾಧ್ಯವಾದರೆ ವಿಜಯಕರ್ನಾಟಕದ ನಿಮ್ಮ ಕಾಲಂನಲ್ಲಿ ಬರೆದರೆ ಲಕ್ಷಾಂತರ ಜನರಿಗೆ ಈ ವಿಚಾರ ತಲುಪಬಹುದು.
ದಯವಿಟ್ಟು ಬರೆಯಲು ಪ್ರಯತ್ನಿಸಿ ಸರ್...
ನೀವು ಕೆಲಸ ಮಾಡಿದ ಸೂರ್ಯಕಿರಣ ಮತ್ತು ಲಘು ಯುದ್ಧ ವಿಮಾನ "ತೇಜಸ್" ಎರಡನ್ನೂ ಆಕಾಶದಲ್ಲಿ ಹಾರಾಡುವಾಗ ಅವುಗಳ ಎಲ್ಲ ವಿವರಗಳು ಕಾಣುವಂತೆ ಕ್ಲೋಸ್ ಅಪ್ ಫೋಟೊಗ್ರಫಿ ಮಾಡಿದ್ದೇನೆ. ಅವುಗಳನ್ನು ನಿಮಗಾಗಿ ಒಂದೆರಡು ದಿನಗಳಲ್ಲಿ ಕಳಿಸುತ್ತೇನೆ..
ಪ್ರೀತಿಯಿಂದ..
ಶಿವು.ಕೆ
ಪ್ರವೀಣ್,
ಚೆಂದದ ಚಿತ್ರಗಳು ಮತ್ತು ಬರಹವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.
ನಿಮ್ಮ ಅನುಭವ ಮಾಹಿತಿಪೂರ್ಣ. ಅಪರೂಪದ ಚಿತ್ರಗಳು ಮನ ಸೂರೆಗೊಂಡವು. ಥ್ಯಾಂಕ್ಸ್.
ಸಕತ್ ಫೋಟೋಸ್
ಗುಬ್ಬಚ್ಚಿ ಸತೀಶ್ ಸರ್,
ಅನುಭವ ಮತ್ತು ಫೋಟೊಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.
ಜ್ಯೋತಿ ಮೇಡಮ್,
ಥ್ಯಾಂಕ್ಸ್.
hi shivu,
Hum tumba chennagide nimma hosa anveshane madi tegede photo ..superb..
ಶಿವಣ್ಣ,
ಅದ್ಭುತವಾದ ಚಿತ್ರಗಳು. ಮುಂದಿನ ಏರ್ ಶೋ ಗೆ ನನ್ನನ್ನು ಕರೆಯಲು ಮರೆಯಬೇಡಿ..!
ನಾನೂ ಬರ್ತೇನೆ :)
ಪ್ರಶಾಂತ್ ಅರಸಿಕೆರೆ,
ನನ್ನ ಹೊಸ ಅನ್ವೇಶಣೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ಅಂದಹಾಗೆ ನೀವು ಮನೆಗೆ ಬಂದರೆ ನಿಮ್ಮ ಫೋಟೊ ಲ್ಯಾಮಿನೇಷನ್ ರೆಡಿಯಾಗಿದೆ. ತೆಗೆದುಕೊಂಡು ಹೋಗಬಹುದು.
ಅನಿಲ್,
ಏರೋಷೋ ನಾನು ಕರೆಯಬೇಕಂತಿಲ್ಲ. ಆದು ಯಾವಾಗ ಪ್ರಾರಂಭವಾಗುತ್ತದೆ ಎನ್ನುವ ವಿಚಾರ ವಾರ-ಹದಿನೈದು ದಿನಕ್ಕೆ ಪತ್ರಿಕೆಗಳು ಟಿವಿಗಳಲ್ಲಿ ಬಂದೇ ಬರುತ್ತದೆ. ಆಗ ನಿಮಗೆ ಅದರ ಬಗ್ಗೆ ಕುತೂಹಲ ಮತ್ತು ಆಸಕ್ತಿ ಇರಬೇಕಷ್ಟೆ. ಮುಂದಿನ ಏರೋಷೋ ದಿನಾಂಕ ಈಗಾಗಲೇ ಆನೌನ್ಸ್ ಆಗಿದೆ 2013ರ ಫೆಬ್ರವರಿ 8 ರಿಂದ 12ರವರೆಗೆ. ಹೆಚ್ಚೆಂದರೆ ಒಂದು ವಾರ ಮುಂದೆ ಹೋಗಬಹುದು ಅಷ್ಟೆ. ಈಗಲೇ ನೋಟ್ ಮಾಡಿಕೊಳ್ಳಿ. ಮತ್ತು ಆಸಕ್ತಿ ಕುತೂಹಲವನ್ನು ಉಳಿಸಿಕೊಳ್ಳಿ. all the best.
shivanna,
photos are superb...aaya deshada vimanagalannu aa deshada dhwajada jothege tegediruva chithragalu super agive...
ಗಿರೀಶ್ ಎಸ್,
ನನ್ನ ಪ್ರಯತ್ನಗಳು ನಿಮಗೆ ಮೆಚ್ಚಿಗೆಯಾಗಿದ್ದಕ್ಕೆ ಥ್ಯಾಂಕ್ಸ್. ನೀವೆಲ್ಲಾ ನೋಡಿ ಆನಂದಿಸಲೆಂದು ಬ್ಲಾಗಿನಲ್ಲಿ ಹಾಕಿದ್ದೇನೆ..
ಹೀಗೆ ಬರುತ್ತಿರಿ..
Beautiful :)
nice photography and excellent write up!
ವಾಹ್ ಶಿವೂ ತುಂಬಾ ಖುಷಿಯಾಯಿತು. ಒಳ್ಳೆ ಅನುಭವ ಹಂಚಿಕೊಂಡಿದ್ದೀರಿ , ಚಿತ್ರಗಳು ಮೋಹಕವಾಗಿವೆ. ದೇಶಗಳ ದ್ವಜದ ಜೊತೆಗೆ ವಿಮಾನದ ಚಿತ್ರ ಕಲ್ಪನೆ ಚೆನ್ನಾಗಿದೆ. ಮತ್ತೆ ನಿರೂಪಣೆ ನವಿರಾದ ಹಾಸ್ಯದಿಂದ ಕೂಡಿದೆ . ನಿಮ್ಮ ಪ್ರತಿಭೆ ಚೆನ್ನಾಗಿ ಅನಾವರಣಗೊಂಡಿದೆ ಧನ್ಯವಾದಗಳು ಶಿವೂ.
wonderful photos sir..
very very nice...
ವನಿತಾ,
ಥ್ಯಾಂಕ್ಸ್.
ಡಾ.ಕೃಷ್ಣಮೂರ್ತಿ ಸರ್,
ಲೇಖನ ಮತ್ತು ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.
ಶಿವು ಸರ್,
ಎರಷೊ ಲೇಖನ ಮತ್ತು ಫೊಟೊಗಳು ಸುಂದರವಗಿವೆ. ಅಲ್ಲದೆ ಈ ಲೇಖನದಲ್ಲಿ ನಾನು ಇರೊದ್ರಿಂದ ಇನ್ನು ಹೆಚ್ಚು ಖುಷಿ ಆಗಿದೆ ಮತ್ತು ಅದೊಂದು ಸುಂದರ ನೆನಪು ಕೂಡಾ.
ಇಡಿ ಲೇಖನವನ್ನ ಒದಿದ್ರೆ ನಿವು ಸ್ವಲ್ಪ ಶಾರ್ಟ ಆಗಿ ಬರದಿದಿರಿ ಅನ್ಸುತ್ತೆ ಯಾಕಂದ್ರೆ ಎರಡನೆ ದಿನ ನಾನು ನಿಮ್ಮ ಜೊತೆ ಬಂದಾಗ ಬಸ್ಸನಲ್ಲಿ ಪ್ರೊ.ಸುಧೀಂದ್ರ ಹಾಲ್ದೊಡ್ಡೇರಿ ಸಿಕ್ಕಿದ್ದ, ಕೆರೆದಂಡೆಯಲ್ಲಿ ೨ ಬಾಟಲ್ ನೀರ, ೨ ಕೊಡೆ ಮಾತ್ರ ಇದ್ದಿದ್ದು, ಸಿಕ್ಕಾಪಟ್ಟೆ ಹಸಿವು ಬಿಸಿಲು ಬೆರೆ,ಇವನ್ನೆಲ್ಲ ಸಹಸಿಕೊಂಡು ಫೋಟೊಗ್ರಾಫಿ ಮಾಡಿದ್ದು ಅದೊಂದು ವಿಚಿತ್ರ ಅದ್ಭುತ್ ಅನುಭವ. ಇಂತಹದ್ರಲ್ಲಿ ಸೂರ್ಯಕಿರಣ ಬರುತ್ತೆ ಅನ್ನೊ ನಿರಿಕ್ಷೆಯಲ್ಲಿ ಸ್ವಲ್ಪ ಕೂತು ರೆಸ್ಟ ಮಾಡ್ತಿದ್ವಿ ನಿವು ಸ್ವಲ್ಪ ನಿದ್ದೆನೆ ಮಾಡ್ಬಿಟ್ರಿ ಅದು ಕೊಚ್ಚೆ ನೀರಿನ ಪಕ್ಕದಲ್ಲಿ, ಆಯಾಸ ಆಗಿತ್ತು ಅನ್ಸುತ್ತೆ. ಹೇಮಚಂದ್ರ ಜೈನ ಜೊತೆಗೆ ಮಾತಾಡ್ತಾ ಟೈಮ ಆಗಿದ್ದೆ ಗೊತ್ತಾಗಲಿಲ್ಲ ಆದ್ರು ಸೂರ್ಯಕಿರಣ ಬರಲೆ ಇಲ್ಲ.
ಇವೆಲ್ಲ ಕಷ್ಟ ಅನುಭವಿಸಿದ್ರಿಂದ ನಿಮಗೆ ಬೆಂಜ್ ಕಾರ್ ಇಷ್ಟ ಆಗಿತ್ತು ಅನ್ಸುತ್ತೆ. ಆದ್ರೆ ಕೆರೆ ದಂಡೆ ಕೋಡೊ ಖುಷಿ ಬೆಂಜ್ ಕಾರ್ ಕೊಡಲ್ಲ ಸರ್
good photos and as usual good writeup
ಶಿವು,
ಅತ್ಯುತ್ತಮ ಪೋಟೋಗಳು.
ದ್ವಜದ ಹಿನ್ನಲೆಯ ಪೋಟೋಗಳ ಯೋಚನೆ ಚೆನ್ನಾಗಿದೆ..
ಚಿತ್ರಗಳು ಚೆನ್ನಾಗಿ ಬಂದಿವೆ. ನೋಡಿ ಸಂತೋಷವಾಯಿತು.
As always nice photos...
sundaravaada chitragalige sogasaada anubhava niruupane.
ಶಿವು ಸರ್,
ಏರ್ ಷೋ ಫೋಟೊಗ್ರಫಿ ಮತ್ತು ಲೇಖನ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
Chandru
ನಿಮ್ಮ ಫೋಟೋಗ್ರಫಿ ಸಾಹಸಗಳು ಅದ್ಬುತ.ಅಪರೂಪದ ಚಾಯಾಚಿತ್ರಗಳನ್ನು ನಮ್ಮ ಜೊತೆ ಹಂಚಿಕೊಂಡದ್ದಕ್ಕೆ ಧನ್ಯವಾದಗಳು.
ಬಾಲು ಸರ್,
ಇದಂತೂ ಹೊಸ ಪ್ರಯತ್ನ. ಅದರಲ್ಲಿ ಯಶಸ್ವಿಯಾಗಿದ್ದೇನೆ ಅಂದುಕೊಂಡಿದ್ದೇನೆ. ಮತ್ತೆ ಈ ರೀತಿ ಹೊಸ ಪ್ರಯೋಗಗಳಿಗೆ ತೊಡಗಿಸಿಕೊಳ್ಳುವುದು ಒಂಥರ ನನ್ನ ಹುಚ್ಚಾಟವೇ ಸರಿ..ಆದನ್ನೆಲ್ಲಾ ಮೆಚ್ಚಿ ಪ್ರೋತ್ಸಾಹಿಸುವ ನಿಮ್ಮ ಬ್ಲಾಗ್ ಗೆಳೆಯರನ್ನು ಪಡೆದಿರುವ ನಾನೇ ಧನ್ಯ...ಹೀಗೆ ಬರುತ್ತಿರಿ..
ದಿನಕರ್ ಸರ್,
ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.
ಉಮೇಶ್ ದೇಸಾಯ್ ಸರ್,
ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..
ಅಪ್ಪ-ಅಮ್ಮ ಬ್ಲಾಗಿನವರೆ,
ದ್ವಜದ ಹಿನ್ನೆಲೆಯಲ್ಲಿ ಫೋಟೊಗ್ರಫಿ ಒಂಥರ ಕಷ್ಟಸಾಧ್ಯ. ಅದರಲ್ಲಿ ಯಶಸ್ವಿಯಾಗಿರುವ ಫೋಟೊಗಳನ್ನು ನೀವು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.
ಮಾಲಾ ಮೇಡಮ್,
ಥ್ಯಾಂಕ್ಸ್.
ರವಿಕಾಂತ್ ಸರ್,
ಥ್ಯಾಂಕ್ಸ್.
ಕಲರವ,
ಚಿತ್ರಗಳ ಜೊತೆಗೆ ನಿರೂಪಣೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.
ಚಂದ್ರು ಸರ್,
ಏರ್ ಷೋ ಫೋಟೊಗ್ರಫಿಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.
ನಾಗರಾಜ್ ಭಟ್ ಸರ್,
ಇದು ನನ್ನ ಸಾಹಸವೆಂದು ಮೆಚ್ಚಿದ್ದೀರಿ. ಈ ಮೆಚ್ಚುಗೆ ನನಗೆ ಇನ್ನಷ್ಟು ಪ್ರಯತ್ನಗಳಿಗೆ ಪ್ರೋತ್ಸಾಹ ನೀಡಿದಂತೆ. ಹೀಗೆ ಬರುತ್ತಿರಿ..
ಸಲೀಂ,
ನೀವು ಎರಡನೇ ದಿನದ ಏರ್ ಷೋಗೆ ನಮ್ಮ ಜೊತೆಯಾಗಿದ್ದು ನಮಗೆ ಖುಷಿಕೊಟ್ಟಿತ್ತು. ಮತ್ತೆ ಆ ಕೊಚ್ಚೆ ಅನುಭವವೂ ಮತ್ತು ಮರುದಿನದ ಬೆಂಜ್ ಕಾರಿನ ಎರಡು ನನಗೆ ವಿಭಿನ್ನವೆನಿಸಿದ್ದರಿಂದ ಎರಡೂ ಕೂಡ ಇಷ್ಟವಾಗುತ್ತವೆ. ನಮ್ಮ ಬಳಿ ಇದ್ದ ನೀರು ಖಾಲಿಯಾಗಿ ಆ ಬಿಸಿಲಿಗೆ ನಿದ್ರೆ ಬಂದಾಗ ನನ್ನ ಫೋಟೊ ಚೆನ್ನಾಗಿ ತೆಗೆದಿದ್ದೀರಿ..ಅವತ್ತು ನಮಗೆ ಹಾಲ್ದೊಡ್ಡೇರಿ ಸುಧೀಂದ್ರ ಸಿಕ್ಕಿದ್ದು ಕೂಡ ಒಂಥರ ಬೋನಸ್ ಅಲ್ಲವೇ...ಮತ್ತೆ ಇಡೀ ಲೇಖನವನ್ನು ಪೂರ್ತಿಯಾಗಿ ಬರೆದರೆ ಉದ್ದವಾಗಿ ಓದುಗರಿಗೆ ಬೋರ್ ಆಗಿಬಿಡಬಹುದೆಂದು ವೇಗವಾಗಿ ಮತ್ತು ಚಿಕ್ಕದಾಗಿ ಬರೆಯಲು ಪ್ರಯತ್ನಿಸಿದ್ದೇನೆ. ನೀವು ಅಷ್ಟು ದೂರದಿಂದ ಬಂದಿದ್ದಕಾದರೂ ಅವತ್ತು ಸೂರ್ಯಕಿರಣ ಪ್ರದರ್ಶನವಾಗದಿರುವುದು ಸ್ವಲ್ಪ ನನಗೂ ಬೇಸರ ತರಿಸಿತ್ತು. ಇರಲಿ ಮುಂದಿನ ಏರೋಷೋಗೆ ಖಂಡಿತ ಬನ್ನಿ..
ಧನ್ಯವಾದಗಳು.
ಶಿವು ನಿಮ್ಮ ಅನುಭವವನ್ನು ನಮ್ಮೊಂದಿಗಿಟ್ಟಿದ್ದೀರಿ ಅಂತೆಯೇ ಹೇಮ ಈ ಲೇಖನದ ಸ್ಪೂರ್ತಿ ಎಂದು ಭಾವಿಸುತ್ತೇನೆ. ತುಂಬಾನೇ ಚೆನ್ನಾಗಿದೆ ಲೇಖನ ಮತ್ತು ಚಿತ್ರಗಳು
ಸುಗುಣಕ್ಕ,
ಖಂಡಿತ ಈ ಚಿತ್ರಲೇಖನಕ್ಕೆ ಹೇಮಾನೇ ಸ್ಪೂರ್ತಿ..ಚಿತ್ರಗಳನ್ನು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.
ಶಿವು ಸರ್,
ಲೇಖನ ಚೆನ್ನಾಗಿದೆ!
ಆದರೆ ನಿಮ್ಮ ಈ ಬಾವುಟಗಳ ಹಿನ್ನೆಲೆಯಲ್ಲಿ ವಿಮಾನುಗಳ ಕೆಲವು ಫೋಟೊಗಳನ್ನು ನೋಡಿದರೆ ಸ್ವಲ್ಪ ಫೋಟೋಶಾಪ್ ಮಾಡಿದ ಹಾಗೆ ಕಾಣುತ್ತಿದೆ.
ಯೋರೋ ಟೈಫೂನ್ ಯುದ್ದವಿಮಾನ, ಗ್ರೀಫಿನ್ ಯುದ್ದ ವಿಮಾನ ಹಾಗು ರೆಡ್ ಬುಲ್ ವಿಮಾನಗಳ ಫೋಟೊಗಳು ನನ್ನನ್ನು convince ಮಾಡುತ್ತಿಲ್ಲ!
ಈ ಫೋಟೊಗಳಲ್ಲಿ ವಿಮಾನುಗಳ exposure ಹಾಗು ಬಾವುಟಗಳ exposure ಬೇರೆ-ಬೇರೆಯಾಗಿವೆ!
ದಯವಿಟ್ಟು ನನ್ನ ಅನಿಸಿಕೆ ನಿಜವೇ ಎಂದು ತಿಳಿಸಿ.
ನಿಮ್ಮವ,
ಸತ್ಯ
Great experience ansutte...
photos sooper... :)
Post a Comment