Wednesday, October 27, 2010



ದಿನಾಂಕ ೨೬-೧೦-೨೦೧೦ ರಂದು ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ{ರಿ]ಧಾರವಾಡ ಸಂಸ್ಥೆಯವರು ಬಹುಮಾನ ವಿಜೇತ ಪುಸ್ತಕಗಳ ಅವಲೋಕನ ಮತ್ತು ಕೃತಿಕಾರರಿಗೆ ಬಹುಮಾನ ಸಮ್ಮಾನ ಮಾಡಿದರು ಅದರ ಕೆಲವು ಫೋಟೊಗಳು. 


ಆಯ್ಕೆಗಾರರಾದ  ರಂಗರಾಜ ವನದುರ್ಗರವರು "ಜಂಗಮ ಪಕೀರನ ಜೋಳಿಗೆ, ಮತ್ತು ವೆಂಡರ್ ಕಣ್ಣು  ಪುಸ್ತಕಗಳನ್ನು ಅವಲೋಕಿಸಿದರು.

ಆಯ್ಕೆಗಾರರಲ್ಲಿ ಒಬ್ಬರಾದ ಜಗದೀಶ್ ಮಂಗಳೂರ್ ಮಠರವರು "ಯಜ್ಞ, ವಿಸ್ತರಣೆ, ಡಾ.ಬಸವರಾಜ ಮನ್ಸೂರ್ ಜೀವನಚರಿತ್ರೆ, ಗೋಡೆಗೆ ಬರೆದ ನವಿಲು" ಪುಸ್ತಕಗಳ ಬಗ್ಗೆ ಮಾತಾಡಿದರು.


ಮುಖ್ಯ ಅತಿಥಿಗಳಾದ ಜಯಂತ್ ಕಾಯ್ಕಿಣಿ ಸರ್ ಪುಸ್ತಕಗಳ ಬಗ್ಗೆ ಮಾತಾಡಿದ್ದು ಹೀಗೆ..... 

ಕಾರ್ಯಕ್ರಮಕ್ಕೆ ಬಂದಿದ್ದ ಧಾರವಾಡದ ಸಾಹಿತ್ಯಾಭಿಮಾನಿಗಳು.


"ವೆಂಡರ್ ಕಣ್ಣು" ಬಗ್ಗೆ ನನ್ನ ಮಾತು


"ಡಾ.ಬಸವರಾಜ ಮನ್ಸೂರ್ ಜೀವನ ಚರಿತ್ರೆ"  ಕೃತಿಕಾರ ಮಾರ್ತಾಂಡಪ್ಪ ಕತ್ತಿ 

 ತಮ್ಮ ವಿಸ್ತರಣೆ ಪುಸ್ತಕದ ಬಗ್ಗೆ ಮಾತಾಡಿದ ಶ್ರೀಧರ್ ಹೆಗೆಡೆ ಭದ್ರನ್.

ನಾಡಿನ ಖ್ಯಾತ ಕವಿಗಳಾದ ಸಿದ್ದಲಿಂಗ ಪಟ್ಟಣಸೆಟ್ಟಿಯವರು ನನಗೆ ಮಾತಾಡಿಸಲು ಸಿಕ್ಕಿದ್ದು ನನಗೆ ಮರೆಯಲಾಗದ ಅನುಭವ

ನನಗೆ ಜಯಂತ್ ಕಾಯ್ಕಿಣಿ ಸರ್ ಈ ರೀತಿ ಸಿಕ್ಕಿದ್ದು ನನ್ನ ಸುಯೋಗ. 

ಮೂವರು ಹರಟುತ್ತಿದ್ದಾಗ ನಮ್ಮನ್ನು ಕ್ಲಿಕ್ಕಿಸಿದ್ದು ಸಲೀಂ 

"ಯಜ್ಞ"  ಅನುವಾದ ಕೃತಿಗೆ ಬಹುಮಾನ ಗಳಿಸಿದ ಗೆಳೆಯ ಚಿದಾನಂದ್ ಸಾಲಿ ನನ್ನ ಕ್ಯಾಮೆರಾಗೆ ಸೆರೆಸಿಕ್ಕಿದ್ದು ಹೀಗೆ.

ಕವನ ವಿಭಾಗದಲ್ಲಿ ಪ್ರಶಸ್ಥಿ ಗಳಿಸಿದ ಗೆಳೆಯ ಆರೀಪ್ ರಾಜ  ಸಿನಿಮಾದಲ್ಲಿ ಬುದ್ದಿವಂತ ವಿಲನ್ ಪಾತ್ರದಂತೆ ಕಾಣುತ್ತಾರಲ್ಲವೇ?
 
ಸಂಜೆ  ಸೃಜನ ರಂಗಮಂದಿರದಲ್ಲಿ ಗಣ್ಯರ ಜೊತೆಗೆ ಪ್ರಶಸ್ಥಿ ವಿಜೇತರು.

ಪ್ರಶಸ್ಥಿ ಪ್ರಧಾನದಲ್ಲಿ ಜಯಂತ್ ಕಾಯ್ಕಿಣಿ, ಡಾ.ಶ್ಯಾಮಸುಂದರ್ ಬಿದರಕುಂದಿ, ಡಾ.ಕೆ.ಶರ್ಮ
 
ಕನ್ನಡ ನಾಡಿನ ಖ್ಯಾತ ಕವಿ ಚೆನ್ನವೀರಕಣವಿಯವರು ನಮ್ಮ ಕಾರ್ಯಕ್ರಮದಲ್ಲಿ
ಸಹಜ ಬೆಳಕಿನಲ್ಲಿ ಬೇಂದ್ರೆಯವರ ಫೋಟೊವನ್ನು ಸೆರೆಯಿಡಿದ ಬಾಗಲಕೋಟದ ಇಂದ್ರಕುಮಾರ್.
ಸೃಜನ ರಂಗಮಂದಿರದಲ್ಲಿ ಸಂಜೆ ಸಿಕ್ಕ ಹಿರಿಯ ಬ್ಲಾಗಿಗರಾದ ಸುನಾಥ್[ಸುಧೀಂದ್ರ ದೇಶಪಾಂಡೆ]ಸರ್

ಸಮಾರಂಭದಲ್ಲಿ ಖ್ಯಾತ ಸಾಹಿತಿಗಳು
  

ನಿನ್ನೆ ರಾತ್ರಿ ಬೆಂಗಳೂರಿಗೆ ಬಂದಾಗ ರಾತ್ರಿ ಹತ್ತು ಗಂಟೆ. ಇವತ್ತು ಬೆಳಿಗ್ಗೆ ಕೆಲವು ಫೋಟೊಗಳನ್ನು ಆಯ್ಕೆ ಮಾಡಿ ಬ್ಲಾಗಿಗೆ ಹಾಕಿದ್ದೇನೆ. ಮುಂದಿನ ಭಾರಿ ಧಾರವಾಡದ ಅನುಭವಗಳು. 

ಚಿತ್ರಗಳು.: ಮುಂಡರಗಿಯ ಸಲೀಂ,
ಬಾಗಲಕೋಟದ ಇಂದ್ರಕುಮಾರ.
 ಶಿವು.ಕೆ

Tuesday, October 19, 2010

" ವೆಂಡರ್ ಕಣ್ಣು"ಗೆ ಬಹುಮಾನ

        ಮೊನ್ನೆ ಭಾನುವಾರ ಬೆಳಿಗ್ಗೆ ಒಂಬತ್ತು ಗಂಟೆಗೆ ಎದ್ದಾಗ ಏನೋ ಒಂಥರ ಉಲ್ಲಾಸ. ಏಕೆಂದರೆ ಇದು ನಮಗೆ ಮೂರನೇ ಅಧಿಕೃತ ರಜ. ನಾವು ಅಧಿಕೃತವಾಗಿ ಮತ್ತು ನೆಮ್ಮದಿಯಾಗಿ  ನಿದ್ರಿಸಿದ್ದು ಈ ವರ್ಷದಲ್ಲಿ ಮೂರನೇ ಭಾರಿ. ಅವತ್ತು ನನ್ನ ಕನಸಿನಲ್ಲೂ ಸುಖವಾಗಿ ನಿದ್ರಿಸುತ್ತಾ ಅಕಾಶದಲ್ಲಿ ತೇಲಿಹೋಗುತ್ತಿರುವ ಚಿತ್ರಗಳೇ!. ನಾನು ಮಾತ್ರವಲ್ಲ ನನ್ನ ಹುಡುಗರು, ನನ್ನ ಎಲ್ಲಾ ವೆಂಡರ್ ಗೆಳೆಯರು, ಅವರ ಹುಡುಗರೂ ಕೂಡ ಸುಖವಾಗಿ ನಿದ್ರಿಸಿದ ದಿನವದು. ಅವತ್ತು  ಭಾನುವಾರವಾಗಿತ್ತಾದ್ದರಿಂದ ಏನು ಕೆಲಸವಿರಲಿಲ್ಲ. ಇಡೀ ದಿನ ಎಲ್ಲಿಯೂ ಹೋಗದೇ ಅರಾಮವಾಗಿ ಮನೆಯಲ್ಲಿಯೇ ಕಳೆದೆ. ಒಂಥರ ಏನು ಮಾಡದೇ ಸುಮ್ಮನಿದ್ದುಬಿಡುವುದು ಅಂತಾರಲ್ಲ ಹಾಗೆ. ಮಾನಸಿಕವಾಗಿ ತುಂಬಾ ರಿಲ್ಯಾಕ್ಸ್ ಆಗಿದ್ದ ದಿನವದು.


 ಮರುದಿನ ಮುಂಜಾನೆ ನಾಲ್ಕು ಖುಷಿಯಿಂದಲೇ ಹೋದೆ.  ನನ್ನ ಒಂಬತ್ತು ಹುಡುಗರಲ್ಲಿ ಇಬ್ಬರು ತಿರುಪತಿಗೆ ಹೋಗಿಬಿಟ್ಟಿದ್ದಾರೆ, ಫೋನ್ ಮಾಡಿದರೆ ಒಬ್ಬನದು ಸ್ವಿಚ್ ಆಪ್ ಮತ್ತೊಬ್ಬ ದರ್ಶನಕ್ಕಾಗಿ ನಿಂತಿದ್ದೇವೆ ಅಂತ ಹೇಳಬೇಕೆ!  ಇನ್ನೊಬ್ಬ ಅಕ್ಕನ ಮಗನ ನಾಮಕರಣಕ್ಕೆ ಅಂತ ಚಕ್ಕರ್. ಮಗದೊಬ್ಬನ ಮೊಬೈಲ್ ಸ್ವಿಚ್ ಆಪ್.  ಆಗ ತಾನೆ ಹೊಸದಾಗಿ ಸೇರಿದ್ದ ಹುಡುಗ ಜೊತೆಗಿದ್ದರೂ ಅವನಿಗೆ ಯಾವ ರೂಟಿನ ಪೇಪರುಗಳು ಗೊತ್ತಿಲ್ಲ. ಆತ ಇದ್ದರೂ ಒಂದೇ ಇಲ್ಲದಿದ್ದರೂ ಒಂದೆ.  ಸಪ್ಲಿಮೆಂಟರಿಗಳನ್ನು ಹಾಕಿ ಸಿದ್ದಗೊಳಿಸಲು ಸಹಕರಿಸಿದನಷ್ಟೆ.  ಉಳಿದ ಐದು ಹುಡುಗರು ಬಂದಿದ್ದರಿಂದ ಏಳುರೂಟುಗಳಲ್ಲಿ ಎರಡು ರೂಟುಗಳಿಗೆ ನಾನು ಹೋಗಲೇಬೇಕಿತ್ತು.   ಇದರ ನಡುವೆ ಟೈಮ್ಸ್ ಆಪ್ ಇಂಡಿಯ ಭಾನುವಾರದ ಸಪ್ಲಿಮೆಂಟರಿಗಳು ಸೋಮವಾರ ಬಂದು ಪೇಪರುಗಳು ದಪ್ಪವಾಗಿ ಊದಿಕೊಂಡಿದ್ದವು.  ಇಷ್ಟೆಲ್ಲಾ ಟೆನ್ಷನ್ನು ಗಳ ನಡುವೆ ಉರಿಯುವ ಬೆಂಕಿಗೆ ಉಪ್ಪುಕಾರ ಹಾಕುವಂತೆ ಕನ್ನಡ ಪ್ರಭ ಮತ್ತು ಇಂಡಿಯನ್ ಎಕ್ಸ್‍ಪ್ರೆಸ್ ಪೇಪರುಗಳ ಪ್ರಿಂಟಿಂಗ್‍ನಲ್ಲಿ ತೊಂದರೆಯಾಗಿ ಆರುವರೆಯಾದರೂ ಬಂದಿರಲಿಲ್ಲ. ಕಾಲೇಜಿಗೆ ಹೋಗುವ ಹುಡುಗರೆಲ್ಲಾ "ಅಣ್ಣ ಅದು ಬಂದಮೇಲೆ ನೀವೇ ಹಾಕಿಕೊಂಡು ಬಿಡಿ" ಎನ್ನುತ್ತಿದ್ದಾರೆ. ಇಂಥ ಸಮಯದಲ್ಲಿ ನನ್ನ ಸ್ಥಿತಿ ಹೇಗಿರಬಹುದು.  ನೆನ್ನೆಯಲ್ಲಾ ಖುಷಿಯಿಂದ ಆಕಾಶದಲ್ಲಿ ತೇಲಾಡುತ್ತಿದ್ದವನನ್ನು ನೇರವಾಗಿ ನೆಲಕ್ಕೆ ಬಿಸಾಡಿದಂತೆ ಆಗಿತ್ತು.  ನಮ್ಮ ಎಲ್ಲಾ ವೆಂಡರುಗಳ ಸ್ಥಿತಿ ಹೀಗಾದರೆ, ನಮ್ಮ ಬೀಟ್ ಹುಡುಗರ ಪ್ರಕಾರ ವರ್ಷಕ್ಕೆ ಒಂದು ಹಬ್ಬ ರಜ ಅದರ ಜೊತೆಗೆ ಮತ್ತೊಂದು ದಿನ ರಜ ತೆಗೆದುಕೊಂಡು ಊರಿಗೆ ಹೋದರೆ ತಪ್ಪೇನು? ಎನ್ನುವುದು ಅವರ ಮಾತು.  ಎಂದಿನಂತೆ ರಸ್ತೆಯಲ್ಲಿ ವಾಕಿಂಗ್ ಮಾಡುವ ಜನರ ಕಣ್ಣಿಗೆ ಮತ್ತೊಂದು ಮುಂಜಾನೆ ಸಂತೆ. ಬಿಟ್ಟಿ ಸಿನಿಮಾ. ಇದೆಲ್ಲರಿಂದ ಹೊರಗೆ ಬಂದು ನನ್ನ ಪಾತ್ರ ಬದಲಾಗಿ ಒಬ್ಬ ಛಾಯಾಗ್ರಾಹಕನಾಗಿ ಅಥವ ಬರಹನಾಗಿಬಿಟ್ಟರೆ ನನಗೂ ಮತ್ತು ನಿಮಗೆಲ್ಲರಿಗೂ ಮತ್ತೊಂದು "ವೆಂಡರ್ ಕಣ್ಣು"ವಿನ ಕತೆ. 

ಕೊನೆಗೂ ಎಲ್ಲಾ ಕೆಲಸ ಮುಗಿಸಿ ಮನೆಗೆ ಬಂದಾಗ ಬೆಳಿಗ್ಗೆ ಒಂಬತ್ತು ಗಂಟೆ. ಸೋಮವಾರ ಕೆಲವು ಆಫೀಸುಗಳಿಗೆ ಹೋಗಬೇಕಾಗಿದ್ದರಿಂದ ಬೇಗ ಸಿದ್ದನಾಗಿ ಹೊರಟೆ.  ಮನೆಗೆ ಬಂದಾಗ ಮಧ್ಯಾಹ್ನ ಎರಡು ಗಂಟೆಯಾಗಿತ್ತು. ಕೈಕಾಲು ಮುಖ ತೊಳೆದು ಊಟಕ್ಕೆ ಕುಳಿತುಕೊಳ್ಳುವಷ್ಟರಲ್ಲಿ ಬಂತು ಪೋಸ್ಟ್.  ತೆಗೆದು ಓದಿದೆ ನನ್ನ ಕಣ್ಣನ್ನು ನಾನೇ ನಂಬಲಾಗಲಿಲ್ಲ. ನನ್ನ "ವೆಂಡರ್ ಕಣ್ಣು" ಪುಸ್ತಕಕ್ಕೆ ಲಲಿತ ಪ್ರಬಂಧ ವಿಭಾಗದಲ್ಲಿ ಡಾ.ದ.ರಾ.ಬೆಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್[ರಿ],ಧಾರವಾಡದ ಸಂಸ್ಥೆಯಿಂದ ಬಹುಮಾನ ಬಂದಿತ್ತು. "ನನ್ನ ವೆಂಡರ್ ಕಣ್ಣು ಪುಸ್ತಕಕ್ಕೆ ಬಹುಮಾನ ಬಂದಿದೆ" ನಾನು ಜೋರಾಗಿ ಹೇಳಿದಾಗ ನನ್ನ ಕೈಯಿಂದ ಪತ್ರವನ್ನು ಕಿತ್ತುಕೊಂಡು ನಿದಾನವಾಗಿ ಓದಿದಳು ಹೇಮಶ್ರೀ. ನಮ್ಮಿಬ್ಬರ ಆನಂದಕ್ಕೆ ಪಾರವೇ ಇಲ್ಲ. ಮತ್ತೆ ಅಕಾಶ ಹಾರಿ ಮೋಡಗಳ ನಡುವೆ ತೇಲುತ್ತಿದ್ದೆ. ಊಟ ಬೇಕಿಲ್ಲವಾಗಿತ್ತು.


ಇದಕ್ಕೆಲ್ಲಾ ಕಾರಣ ಮತ್ತದೇ ನನ್ನ ಮುಂಜಾನೆ ಚುಮುಚುಮು ಬೆಳಕಿನ ಮುಂಜಾನೆ ಸಂತೆ. ಅದರಲ್ಲಿನ ಬೀಟ್ ಹುಡುಗರು. ಇವರೊಂಥರ ನೀರಿದ್ದಂತೆ. ಯಾವ ಆಕಾರಕ್ಕೆ ಬೇಕಾದರೂ ಒಗ್ಗಿಕೊಳ್ಳುತ್ತಾರೆ. ಓಲೈಸಿಬಿಟ್ಟರೆ ಮುದ್ದಿನ ಅರಗಿಣಿಗಳು, ಶಿಸ್ತಿನ ಸಿಪಾಯಿಗಳು. ಕೋಪದಿಂದ ಬೈದರೇ....ಚಕ್ಕರ್ ಮೇಲೆ ಚಕ್ಕರುಗಳು...ಲಾಂಗ್ ಲೀವುಗಳು...ಮೊಬೈಲ್ ಸ್ವಿಚ್ ಆಪ್‍ಗಳು...ನಾಟ್ ರೀಚಬಲ್ಲುಗಳು...........ಆದರೂ.......


                    ಚಳಿ ಗಾಳಿ ಮಳೆ ಎನ್ನದೇ....
                   ತಣ್ಣನೆ ಮುಂಜಾವಿನಲ್ಲಿ....
                   ಬೆಚ್ಚನೇ ಬೆಳಗು ತರುವ....
                   ಅಸಂಖ್ಯಾತ, ಅನಾಮಿಕ....
                   ದಿನಪತ್ರಿಕೆ ಹಂಚುವ....
                   ಹುಡುಗರಿಗೆ.....

 ವೆಂಡರ್ ಕಣ್ಣು ಪುಸ್ತಕಕ್ಕೆ ಬಂದ ಬಹುಮಾನ ಅರ್ಪಣೆ.


ಮತ್ತೊಂದು ರೀತಿಯಲ್ಲಿ ಹೇಳಬೇಕೆಂದರೆ ಇವರೊಂಥರ ಪ್ಲಾಸ್ಟರ್ ಆಪ್ ಪ್ಯಾರಿಸ್ ಇದ್ದಂತೆ. ಬೇಕಾದ ಆಕಾರದಲ್ಲಿ ಅಚ್ಚಾಗುವ ಮೂಲ ದ್ರವ್ಯಗಳು. ಇದನ್ನೆಲ್ಲಾ ಬರಹದ ಮೂಲಕ ಹೊರಹಾಕಲು ಒಂದು ಮಾಧ್ಯಮ ಬೇಕಿತ್ತು ಮೊದಲಾದರೆ ಪೆನ್ನು ಪೇಪರ್ ಹಿಡಿದು  ನಿದಾನವಾಗಿ ಬರೆಯುವಾಗ ಈ ವೇಗವಿರಲಿಲ್ಲ. ಅದ್ಯಾವಾಗ ಜಿ.ಎನ್.ಮೋಹನ್ ನನಗೆ ತಗುಲಿಕೊಂಡರೋ ನನ್ನಲ್ಲಿ ಕಂಫ್ಯೂಟರಿನಲ್ಲಿ ಬರೆಯುವ ಉಮೇದು ಹತ್ತಿಸಿ ಬರೆದಿದ್ದನ್ನು ತೋರಿಸಲು ಬ್ಲಾಗ್ ಲೋಕವೆನ್ನುವ ವೇದಿಕೆಯ ನಡುವೆ ನಿಲ್ಲಿಸಿ ಮುಂದೆ ನೀನುಂಟು ನಿನ್ನ ಬ್ಲಾಗ್ ಬಳಗವುಂಟು ಅಂತೇಳಿ ನಡೆದೇ ಬಿಟ್ಟರು. 


ಅಮೇಲೆ ನಡೆದಿದ್ದೆಲ್ಲಾ ಇತಿಹಾಸ. ಬ್ಲಾಗ್ ನನಗೊಂದು ಹೊಸಲೋಕವನ್ನು ತೋರಿಸಿತು. ಇಲ್ಲಿ ಬರೆದಿದ್ದನ್ನು ಪ್ರೀತಿಯಿಂದ ಓದುವವರು ಇದ್ದಾರೆ. ತಪ್ಪುಗಳನ್ನು ತಿದ್ದಿ ಬೆನ್ನುತಟ್ಟುವ ಹಿರಿಯರಿದ್ದಾರೆ. ಬರಹದ ಜೊತೆಗೆ ಭಾವನೆಗಳನ್ನು ಹಂಚಿಕೊಳ್ಳುವ ಸಮಾನ ಮನಸ್ಕರಿದ್ದಾರೆ. ಬೇರೆಲ್ಲಾ ಮಾದ್ಯಮಗಳು  ಹದಗೆಟ್ಟುಹೋಗಿ ಒಳಗೊಂದು ಹೊರಗೊಂದು ಅಂತಿರುವ ಕಾಲದಲ್ಲಿ ನಮ್ಮ ಬ್ಲಾಗ್ ಲೋಕ ಪರಿಶುಧ್ಧವಾಗಿದೆ. ಅದಕ್ಕೇ ಸಾಕ್ಷಿಯಾಗಿ ಪೇಪರ್ ಹುಡುಗ ವಿಶ್ವನಾಥನ ಅಪಘಾತ ಪರಿಸ್ಥಿತಿಯಲ್ಲಿ ಸ್ಪಂದಿಸಿದ ರೀತಿ,  ನಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಲ್ಲಿ ನಮ್ಮದೇ ಮನೆಯ ಕಾರ್ಯಕ್ರಮ, ಪುಸ್ತಕವೆನ್ನುವಷ್ಟರ ಮಟ್ಟಿಗೆ ಅಪ್ಪಿಕೊಂಡು ಯಶಸ್ವಿಗೊಳಿಸಿದ್ದು, ಬ್ಲಾಗ್ ವನಕ್ಕೆ ಹೋಗಿ ಗಿಡನೆಟ್ಟಿದ್ದು...ಹೀಗೆ ಅನೇಕ ಉದಾಹರಣೆಗಳು. ಇಂಥ ಪರಿಸರದಲ್ಲಿ ನನ್ನ ಬರಹಕ್ಕೆ ಮೊದಲು ಒಂದು ಚೌಕಟ್ಟು ಹಾಕಿಕೊಟ್ಟು ಒಂದೇ ವಿಷಯದ ಬಗ್ಗೆ ಬರಿ ಅಂತ ಒಂದು ಕಡೆ ಕೂರಿಸಿ   ಪ್ರೋತ್ಸಾಹಿಸಿದವರು ಹಿರಿಯರಾದ ನಾಗೇಶ್ ಹೆಗೆಡೆ. ಅವರನ್ನು ಈ ಕ್ಷಣದಲ್ಲಿ ನಾನು ನೆನೆಯಲೇಬೇಕು. ಬಹುಮಾನ ಬಂದ ತಕ್ಷಣ "ನನ್ನ ಪುಸ್ತಕಕ್ಕೆ ಬಹುಮಾನ ಬಂದಷ್ಟು ಖುಷಿಯಾಯ್ತು" ಎಂದ ಹಾಲ್ದೊಡ್ಡೇರಿ ಸುಧೀಂದ್ರ ಸರ್, "ನೀನಿನ್ನು ಅರಾಮವಾಗಿ ಕೂರುವಂತಿಲ್ಲ" ಎಂದ ಶೇಷಾಶಾಸ್ತ್ರಿಗಳು,  ದೂರದ ಕುವೈಟಿನಿಂದ ಪೋನ್ ವಿಶ್ ಮಾಡಿದ ಗೆಳೆಯ ಡಾ.ಅಜಾದ್, ಸುಗುಣಕ್ಕ, ಮಹೇಶ್ ಸರ್, ಡಾ.ಕೃಷ್ಣಮೂರ್ತಿ, ಪರಂಜಪೆ, ಎಂ ವಿಶ್ವನಾಥ್, ಮಲ್ಲಿಕಾರ್ಜುನ್, ಶಿವಶಂಕರ್ ಎಳವತ್ತಿ..... ಇನ್ನಿತರರು ತಮ್ಮದೇ ಪುಸ್ತಕಕ್ಕೆ ಬಹುಮಾನ ಬಂದಷ್ಟು ಖುಷಿ ಪಟ್ಟಿದ್ದಾರೆ. ಇದಲ್ಲದೇ ದೂರದೂರಿನಲ್ಲಿರುವ ವನಿತಾ, ರಂಜಿತ, ಚೇತನ ಭಟ್, ಪೂರ್ಣಿಮ ಭಟ್, ಮಾನಸ ಮಾತ್ರವಲ್ಲದೇ ವಸುದೇಶ್, ಶಿವಪ್ರಕಾಶ್, ಶಶಿಅಕ್ಕ, ವಿಕಾಶ್ ಹೆಗಡೆ, ಸುಶ್ರುತ, ಸುಮನ್ ವೆಂಕಟ್, ಪ್ರಕಾಶ್ ಹೆಗಡೆ, ಚಂದ್ರುಸರ್, ಮಹೇಶ್ ಕಲ್ಲರೆ, ಪ್ರಗತಿ ಹೆಗಡೆ, ವಿಜಯಶ್ರೀ, ಚಿನ್ಮಯ್, ಬಾಲಸುಬ್ರಮಣ್ಯ ಶಾಸ್ತ್ರಿ, ವಿನಯ್, ನಾಗರಾಜ್, ಶ್ಯಾಮಲ ಮೇಡಮ್, ಶ್ರೀನಿಧಿ, ದಿವ್ಯ, ದೊಡ್ಡಮನಿ ಮಂಜು,..................ಇನ್ನೂ ಎಷ್ಟೋ ಬ್ಲಾಗ್ ಗೆಳೆಯರು ನನಗಿಂತ ಮೊದಲೇ ತಿಳಿದು ವಿಷ್ ಮಾಡುತ್ತಾ ಸಂತೋಷ ಪಟ್ಟಿದ್ದಾರೆ. "ವೆಂಡರ್ ಕಣ್ಣು" ಬರೆದಿದ್ದು ನಾನು ಎನ್ನುವ ನೆಪವಾದರೂ ಅದರಲ್ಲಿನ ಎಲ್ಲಾ ಘಟನೆಗಳು, ಪಾತ್ರಗಳು, ಅದರಲ್ಲಿ ನೋವು ನಲಿವುಗಳನ್ನು ನಮ್ಮ ಬ್ಲಾಗ್ ಗೆಳೆಯರು ತುಂಬು ಹೃದಯದಿಂದ ಅನುಭವಿಸಿದ್ದಾರೆ. ಪ್ರೋತ್ಸಾಹಿಸಿದ್ದಾರೆ.  ಬ್ಲಾಗ್ ಬಳಗ ಪ್ರೋತ್ಸಾಹಿಸದಿದ್ದಲ್ಲಿ ಇಂಥ ವೆಂಡರ್ ಕಣ್ಣು ರೂಪುಗೊಳ್ಳುತ್ತಿರಲಿಲ್ಲ.  ಇಂಥ ಸಮಯದಲ್ಲಿ ಬ್ಲಾಗ್ ಬರಹದ ಪುಸ್ತಕವಾದ "ವೆಂಡರ್ ಕಣ್ಣು"ಗೆ ಸಿಕ್ಕ ಬಹುಮಾನ ಎಲ್ಲಾ ಬ್ಲಾಗಿಗರಿಗೂ ಸಲ್ಲುತ್ತದೆ." ಬ್ಲಾಗ್ ಬರಹಕ್ಕೂ ಬಹುಮಾನ ಬಂತ?" ಈ ಪ್ರಶ್ನೆ ಮೂಡಿ ನನ್ನೊಳಗೆ ಅಚ್ಚರಿ ಮೂಡಿಸಿದಂತೆ ನನ್ನ ಇತರ ಬ್ಲಾಗ್ ಗೆಳೆಯರಲ್ಲೂ ಇದೇ ಪ್ರಶ್ನೆಯ ಜೊತೆಗೊಂದು ಆಶ್ಚರ್ಯ, ಅದರಾಚೆಗೊಂದು ಆಸೆಯೂ ಮೂಡುತ್ತಿದೆ.  ಹೀಗೆ  ನಮ್ಮ ಎಲ್ಲಾ ಬ್ಲಾಗ್ ಗೆಳೆಯರು  ತಮ್ಮದೇ ಪುಸ್ತಕಕ್ಕೆ ಬಹುಮಾನ ಬಂದಷ್ಟು ಸಂತೋಷ ಪಡುತ್ತಿರುವುದರಿಂದ ಈ ಬಹುಮಾನವನ್ನು ನಮ್ಮ ದಿನಪತ್ರಿಕೆ ಹುಡುಗರ ಜೊತೆಗೆ ಬ್ಲಾಗ್ ಲೋಕದ ಗೆಳೆಯರಿಗೂ ಅರ್ಪಿಸುತ್ತಿದ್ದೇನೆ.

ಪ್ರೀತಿಯಿಂದ..
ಶಿವು.ಕೆ.

Sunday, October 10, 2010

ಚೆನ್ನಾಗಿರುವವರನ್ನು ಕಂಡರೆ ದೇವರಿಗೂ ಹೊಟ್ಟೆ ಕಿಚ್ಚಂತೆ!

 

         ಮಹಡಿ ಮನೆಯ ಕಿಟಕಿಯಲ್ಲಿ ನಾನು ಇಣುಕಿದಾಗ ಹಾಲ್‍ನ ಬಲಬದಿಯ ಆಡುಗೆ ಮನೆಯ ಬಾಗಿಲಿನಲ್ಲಿ ಅವರ ನೆರಳು ಕಾಣಿಸಿದ್ದು ನೋಡಿ ನನಗೆ ಸಮಾಧಾನವಾಗಿತ್ತು. "ಸಾರ್" ಅಂತ ಜೋರಾಗಿ ಕೂಗಿದೆ. ಆವರಿಗೆ ಗೊತ್ತಾಗಲಿಲ್ಲ. ಕಾಲಿಂಗ್ ಬೆಲ್ ಒತ್ತಿದೆ, ತಿರುಗಿ ನೋಡಲಿಲ್ಲ.  ಬಾಗಿಲು ಬಡಿದೆ.  ಹೂಹೂಂ...ಆತ ತಿರುಗಿ ನೋಡಲಿಲ್ಲ.  ಇದ್ಯಾಕೋ ಸರಿಬರಲಿಲ್ಲವೆಂದು ಮತ್ತೆ ನಾಲ್ಕೈದು ಬಾರಿ ಬೆಲ್ ಮಾಡಿದೆ. ಬಾಗಿಲು ತಟ್ಟಿದೆ..."ಸಾರ್, ಸಾರ್," ಜೋರಾಗಿ ಕೂಗಿದೆ. ನನ್ನ ಕೂಗಿಗೆ ಕೆಳಗಿನ ಮನೆಯವರು ಕೇಳಿಸಿಕೊಂಡು ಮಾತಾಡಿದರೇ ಹೊರತು ಆತನಿರಲಿ, ಆತನ ನೆರಳೂ ಕೂಡ ನನ್ನ ಕೂಗಿಗೆ ಓಗೊಡಲಿಲ್ಲ.   

ಒಳಗಿನಿಂದ ಲಾಕ್ ಮಾಡಿದ ಬಾಗಿಲ ಹೊರಗೆ ನಿಂತು ಕೂಗಿ,ಬಾಗಿಲು ತಟ್ಟಿ, ಬೆಲ್ ಮಾಡಿದರೂ ಒಳಗೆ ಹಾಲ್‍ನ ಬಲಬದಿಯಲ್ಲಿ ಕೇವಲ ಐದು ಆಡಿ ದೂರದಲ್ಲಿ ನಿಂತಿರುವ ವ್ಯಕ್ತಿಯೊಬ್ಬ ತಿರುಗಿ ನೋಡದಿದ್ದಲ್ಲಿ ಯಾರಿಗೇ ಆದರೂ ಸಿಟ್ಟು ಬರದಿರುತ್ತದೆಯೇ? ನೀವು ಹತ್ತುನಿಮಿಷ ಅಲ್ಲಿಯೇ ನಿಂತು ಕೂಗಿದರೂ ಆ ವ್ಯಕ್ತಿ ತಿರುಗಿನೋಡದಿದ್ದಲ್ಲಿ ಖಂಡಿತವಾಗಿ ನಿಮ್ಮ ಸಿಟ್ಟು ನೆತ್ತಿಗೇರಿಬಿಡುತ್ತಿತ್ತೇನೋ.  ಆದ್ರೆ ನಾನು ಸಿಟ್ಟು ಮಾಡಿಕೊಳ್ಳುವಂತಿಲ್ಲ. ಏಕೆಂದರೆ ಆವರಿಗೆ ಕಿವಿ ಕೇಳುವುದಿಲ್ಲ. ಆವರು ತಿರುಗುವವರೆಗೆ ನಾನು ಕೂಗಿ, ಕಿರುಚಿ, ಬಾಗಿಲು ಬಡಿದು....ಇನ್ನೈದು ನಿಮಿಷ ಕಳೆದರೂ ಆತ ನನ್ನ ಕಡೆಗೆ ನೋಡಲು ಏನಾದರೂ ಮಾಡುತ್ತಿರಬೇಕು.." ಮತ್ತೆರಡು ನಿಮಿಷ ಕಳೆಯಿತು. ನಿದಾನವಾಗಿ ಅಡುಗೆ ಮನೆಯ ಬಾಗಿಲಿಗೆ ನೇತುಹಾಕಿದ್ದ ಸಣ್ಣ ಕರವಸ್ತ್ರದಲ್ಲಿ  ಆ ನೆರಳು ಕೈವರೆಸಿಕೊಂಡು ಹಾಲ್‍ನೆಡೆಗೆ ಬರುತ್ತಿರುವುದು ಕಾಣಿಸಿತು. ಸದ್ಯ ನಾನು ಇಷ್ಟು ಹೊತ್ತು ಕಾದಿದ್ದಕ್ಕೂ ಸಾರ್ಥಕವಾಯಿತು ಅಂದುಕೊಂಡೆ. ಹಾಲ್‍ಗೆ ಬರುತ್ತಿದ್ದಂತೆ ಕೈಯಾಡಿಸಿದೆ.  ಆತ ನನ್ನನ್ನು ನೋಡುತ್ತಿದ್ದರೂ ಏನೂ ಪ್ರತಿಕ್ರಿಯಿಸುತ್ತಿಲ್ಲ.  ನನಗ್ಯಾಕೋ ಇವತ್ತು ಗಿಟ್ಟುವ ಕೆಲಸವಲ್ಲ ಎನಿಸಿ ಬೇಸರವಾಗತೊಡಗಿತ್ತು. ಆತ ಮತ್ತೆರಡು ಹೆಜ್ಜೆ ಬಾಗಿಲ ಕಡೆಗೆ ಬಂದರಲ್ಲ!   ನಾನು ಕಿಟಕಿಯಾಚೆ ಕೈಯಾಡಿಸುತ್ತಿರುವುದು ಆವರಿಗೆ ಕಾಣಿಸಿತು.
 ಯಾರೋ ಬಂದಿರಬಹುದು ಅನ್ನಿಸಿತೇನೋ, ಕಿಟಕಿಯ ಬಳಿಬಂದು ಕನ್ನಡಕವನ್ನು ಸರಿಮಾಡಿಕೊಳ್ಳುತ್ತಾ ನನ್ನನ್ನು ನೋಡಿ ನಾನೇ ಎಂದು ನಿದಾನವಾಗಿ ಖಚಿತಪಡಿಸಿಕೊಂಡು ಬಾಗಿಲು ತೆರೆದು  

"ಶಿವುನಾ, ಬನ್ನಿ ಬನ್ನಿ, ಇವತ್ತು ತಾರೀಖು ಎರಡು ಅಲ್ವಾ...ನಾನು ಮರೆತೇಬಿಟ್ಟಿದ್ದೆ  ಸಾರಿ"  ಎಂದರು.
 "ನಾನು ಬಂದು ಹತ್ತು ನಿಮಿಷವಾಯ್ತು," ಅಂತ ಹೇಳಿ ಬಾಗಿಲಾಚೆ ನಿಂತು ನಾನು ಮಾಡಿದ ಎಲ್ಲಾ ಕೂಗಾಟ, ಕಾಲಿಂಗ್ ಬೆಲ್, ಇತ್ಯಾದಿಗಳನ್ನೆಲ್ಲ ಜೋರಾಗಿ ವಿವರಿಸಿದೆ.
 
 "ಹೌದಾ...ನನಗೆ ಗೊತ್ತಾಗೊಲ್ಲಪ್ಪ, ವಯಸ್ಸು ಆಗಲೇ ಎಪ್ಪತ್ತನಾಲ್ಕು ದಾಟಿದೆ.  ಕನ್ನಡಕ ಹಾಕಿಕೊಳ್ಳದಿದ್ದರೆ ಪಕ್ಕದವರು ಕಾಣುವುದಿಲ್ಲ,  ನನಗೆ ಕಿವಿಕೇಳುವುದಿಲ್ಲವೆನ್ನುವುದು ನಿನಗೇ ಗೊತ್ತು." ಎನ್ನುತ್ತಾ ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುತ್ತಾ ನನಗಾಗಿ ದಿನಪತ್ರಿಕೆ ಹಣತರಲು ಒಳಗೆ ಹೋದರು. ಅವರು ಒಳಗೆ ಹೋದರೆಂದರೆ ಮುಗಿಯಿತು. ನೆನಪಿನ ಶಕ್ತಿ ಕಡಿಮೆಯಾಗಿರುವುದರಿಂದ ಇಟ್ಟಿರುವ ಹಣವನ್ನು ಹುಡುಕಿ ತಡಕಿ, ನನಗೆ ತಂದುಕೊಡಲು ಕಡಿಮೆಯೆಂದರೂ ಹತ್ತು ನಿಮಿಷಬೇಕು.

 ಅವರ ಸೋಫಾ ಮೇಲೆ ಕುಳಿತುಕೊಳ್ಳುತ್ತಿದ್ದ ಹಾಗೆ ಹಳೆಯ ನೆನಪುಗಳು ಮರುಕಳಿಸಿದವು.  ಹದಿನೈದು ವರ್ಷಗಳ ಹಿಂದೆ ನಾನು ಹೀಗೆ ಅವರ ಮನೆಗೆ ತಿಂಗಳ ಮೊದಲ ಒಂದನೇ ಅಥವ ಎರಡನೇ ತಾರೀಖು ಸರಿಯಾಗಿ ದಿನಪತ್ರಿಕೆಯ ಹಣವಸೂಲಿಗೆ ಹೋಗುತ್ತಿದ್ದೆ.  ನನ್ನ ನಿರೀಕ್ಷೆಯಲ್ಲಿಯೇ ಇದ್ದರೇನೋ ಎಂಬಂತೆ ವಯಸ್ಸಾದ ದಂಪತಿ ಒಳಗೆ ಕರೆದು ಕೂಡಿಸಿ ಪ್ರೀತಿಯಿಂದ ಮಾತಾಡಿ ನನ್ನ ಬಗ್ಗೆಯೆಲ್ಲಾ ವಿಚಾರಿಸಿಕೊಂಡು ಅವರ ವಿಚಾರಗಳನ್ನು ಹೇಳುತ್ತಾ ಸಂತೋಷಪಡುತ್ತಿದ್ದರು. ಕೆಲವೊಮ್ಮೆ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಬಂದಿದ್ದಾಗ ನನ್ನನ್ನು ಒಳಗೆ ಕರೆದು ಕೂಡಿಸಿ ಹಣಕೊಡುವಾಗ ನನಗೊಂಥರ  ಸಂಕೋಚವಾಗುತ್ತಿತ್ತು.  ಅವರದು ತುಂಬು ಕುಟುಂಬದ ಸಂಸಾರ. ದಿನಕಳೆದಂತೆ ಅವರಿಗೆ ನಿವೃತ್ತಿಯಾಯಿತು.  ವಯಸ್ಸಾದಂತೆ ರೋಗಗಳು ಹೆಚ್ಚಾಗುತ್ತವಲ್ಲ,  ನಿದಾನವಾಗಿ ಇವರಿಗೆ ಕಿವಿ ಕೇಳದಂತಾಗತೊಡಗಿತ್ತು.  ಹತ್ತು ಬಾರಿ ಕೂಗಿದರೆ ಒಮ್ಮೆ ತಿರುಗಿನೋಡುವ ಸ್ಥಿತಿಗೆ ಬಂದಿದ್ದರು ಆತ. ಆದರೂ ಕಳೆದ ಹತ್ತು ವರ್ಷಗಳಿಂದ ಆತ  ಓದುತ್ತಿದ್ದುದ್ದು ಶಿವು ತಂದುಕೊಡುವ ಡೆಕ್ಕನ್ ಹೆರಾಲ್ಡ್ ಪೇಪರ್ ಮಾತ್ರ!  ನಮ್ಮ ಜೀವನ ಪರ್ಯಾಂತ ಶಿವುನೇ ನಮಗೆ ಪೇಪರ್ ತಂದುಕೊಡಬೇಕು!  ಹಾಗಂತ ದಂಪತಿಗಳಿಬ್ಬರೂ ತಮಾಷೆ ಮಾಡುವುದರ ಜೊತೆಗೆ ತುಂಬು ಪ್ರೀತಿಯಿಂದ ನನ್ನ ಬಳಿಯೇ ಹೇಳುತ್ತಿದ್ದರು. 

 ನನ್ನಂಥ ಸಾವಿರಾರು ವೆಂಡರುಗಳು ಇಂಥ ಗ್ರಾಹಕರ ದೆಸೆಯಿಂದಲೇ ಇವತ್ತು ಹೊಟ್ಟೆತುಂಬ ಉಂಡು...ನೆಮ್ಮದಿಯಾಗಿ ಮಲಗಿ ಕಣ್ತುಂಬ ನಿದ್ರಿಸುವುದು!

         ಮತ್ತೆ ಮೂರು ವರ್ಷ ಕಳೆಯಿತು. ಚೆನ್ನಾಗಿರುವವರನ್ನು ಕಂಡರೆ ದೇವರಿಗೂ ಹೊಟ್ಟೆ ಕಿಚ್ಚಂತೆ ಅನ್ನುವ ಹಾಗೆ ಒಂದು ದಿನ ಇದ್ದಕ್ಕಿದ್ದ ಹಾಗೆ ಅವರ ಶ್ರೀಮತಿಗೆ ಬೆನ್ನು ಮೂಳೆಯ ತೊಂದರೆಯಿಂದಾಗಿ ಸೊಂಟ ಬಿದ್ದುಹೋಯಿತು. ಚುರುಕಾಗಿ ಮನೆತುಂಬಾ ಓಡಾಡಿಕೊಂಡಿದ್ದ ಆಕೆ ವಯಸ್ಸು ಅರವತ್ತೆಂಟರ ಸನಿಹದ ಇಳಿವಯಸ್ಸಿನಲ್ಲಿ ಇನ್ನುಳಿದ ಬದುಕಲ್ಲಿ ಊಟ, ತಿಂಡಿ, ಒಂದು ಎರಡು ಎಲ್ಲಾ ಹಾಸಿಗೆಯಲ್ಲೇ ಅಂತಾದರೆ ಆಕೆಯ ಸ್ಥಿತಿ ಹೇಗಿರಬಹುದು!.  ಕಿವಿಕೇಳದ ಕಣ್ಣು ಮಂಜಾದ ತನಗಿಂತ ನಾಲ್ಕು ವರ್ಷ ದೊಡ್ಡವರಾದ ಗಂಡನನ್ನು ಈಕೆಯೇ ನೋಡಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಆಕೆಗೆ ಹೀಗೆ ಸೊಂಟ ಬಿದ್ದು ಹೋದರೆ ಗತಿಯೇನು!  ಮುಂದೆ ಆತ ಯಾವ ಸ್ಥಿತಿಯಲ್ಲಿದ್ದರೋ ಅದೇ ಸ್ಥಿತಿಯಲ್ಲಿ ಹೆಂಡತಿಯನ್ನು ನೋಡಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿತ್ತು. ಇವರಿಗಿದ್ದ ಮೂರು ಮಕ್ಕಳಲ್ಲಿ ಒಬ್ಬಳು ಅಮೇರಿಕಾದಲ್ಲಿ ಸೆಟ್ಲ್ ಆಗಿದ್ದರೆ, ಮತ್ತೊಬ್ಬಳು ದೆಹಲಿಯಲ್ಲಿ ಕೆಲಸದ ನಿಮಿತ್ತ ನೆಲೆಸಿಬಿಟ್ಟಿದ್ದಳು. ಮಗ ತಮಿಳುನಾಡಿನಲ್ಲಿ. ಇಂಥ ಸ್ಥಿತಿಯಲ್ಲಿ ವಾಪಸ್ಸು ಇವರ ಬಳಿಗೆ ಬರಲಾಗದ ಮಟ್ಟಿಗೆ ಮಕ್ಕಳು ಅವರವರ ಜೀವನದಲ್ಲಿ ಸೆಟ್ಲ್ ಆಗಿಬಿಟ್ಟಿದ್ದರು.  ಬಂದರೂ ಆಗೊಮ್ಮೆ ಹೀಗೊಮ್ಮೆ ಬರುವಂತ ಅತಿಥಿಗಳು. ಇಲ್ಲೆ ಇವರನ್ನು ನೋಡಿಕೊಳ್ಳಲು ಉಳಿದರೆ ನಮ್ಮ ಕೆಲಸ, ಮಕ್ಕಳು, ಜೀವನದ ಗತಿಯೇನು ಎನ್ನುವ ಪ್ರಶ್ನೆಗಳೊಳಗೆ ಸಿಲುಕಿ ಅವರವರ ಬದುಕು ಅವರಿಗೆ ಎನ್ನುವಂತಾಗಿತ್ತು.  ಬದುಕಿನಲ್ಲಿ ಜಿಗುಪ್ಸೆ, ವಿಷಾಧ, ಆತಂಕಗಳು ಬಂದರೆ ಬೇಗನೇ ಮಾಯವಾಗಿಬಿಡಬೇಕು. ಅದು ಬಿಟ್ಟು ಇನ್ನುಳಿದ ಜೀವನದುದ್ದಕ್ಕೂ ಜೊತೆಗೆ ಅಂಟಿಕೊಂಡುಬಿಟ್ಟರೇ.....ಸೊಂಟವಿಲ್ಲದ ಆಕೆಯ ಸ್ಥಿತಿ ಹಾಗಾಗಿ ಆರುತಿಂಗಳೊಳಗೆ ದೇವರ ಪಾದ ಸೇರಿಕೊಂಡು ಬಿಟ್ಟರು.

 ಇನ್ನು ಮುಂದೆ ಕಣ್ಣು ಸರಿಯಾಗಿ ಕಾಣದ, ಕಿವಿಕೇಳದ, ಬಿಪಿ ಮತ್ತು ಶುಗರ್ ಕಾಯಿಲೆ ಮೈತುಂಬಿಕೊಂಡ, ಎಪ್ಪತ್ತನಾಲ್ಕ ವಯಸ್ಸಿನ ಹಿರಿಯಜ್ಜನೇ ಆ ಮನೆಗೆ ರಾಜ, ರಾಣಿ, ಸೇವಕ, ಸೈನಿಕ. ಇಂಥ ಪರಿಸ್ಥಿತಿಯಲ್ಲೂ ಅವರ ಅಚಾರ ವಿಚಾರಗಳು ವ್ಯತ್ಯಾಸವಾಗಿಲ್ಲ. ನಿತ್ಯ ಬೆಳಿಗ್ಗೆ ಆರು-ಆರುವರೆಗೆ ಎದ್ದು ಬಾಲ್ಕನಿಯಲ್ಲಿ ನಮ್ಮ ಹುಡುಗ ಹಾಕುವ ಡೆಕ್ಕನ್ ಹೆರಾಲ್ಡ್ ಪೇಪರಿಗಾಗಿ ಕಾಯುತ್ತಿರುತ್ತಾರೆ.  ಪೇಪರ್ ಕೈಗೆ ಸಿಕ್ಕಮೇಲೆ ಎಂಟುಗಂಟೆಯವರೆಗೆ ದಪ್ಪಕನ್ನಡದ ಹಿಂದಿನ ಮಬ್ಬು ಕಣ್ಣಿನಲ್ಲೇ ಓದುತ್ತಾರೆ. ಆಮೇಲೆ ಒಂಬತ್ತುವರೆಗೆ ಸ್ನಾನ, ಮಡಿ, ಶಿವನಪೂಜೆ.  ಆ ಸಮಯದಲ್ಲಿ ಯಾರು ಹೋದರೂ ಬಾಗಿಲು ತಟ್ಟಿದರೂ ಬಾಗಿಲು ತೆಗೆಯುವುದಿಲ್ಲ.  ನಾನೇ ಅನೇಕ ಬಾರಿ ಹಣವಸೂಲಿಗೆ ಅಂತ ಎಂಟು ಗಂಟೆ ದಾಟಿದ ಮೇಲೆ ಹೋಗಿ ಬಾಗಿಲು ತಟ್ಟಿ ವಾಪಸ್ಸು ಬಂದಿದ್ದೇನೆ.  ಒಬ್ಬಂಟಿಯಾದ ಮೇಲೆ ಅಡುಗೆ ಮಾಡಿಕೊಳ್ಳುತ್ತಾರೆ. ನಂತರ ಬೇರೆ ಪುಸ್ತಕದ ಓದು...ಸಣ್ಣ ನಿದ್ರೆ. ಕಣ್ಣು ಸ್ವಲ್ಪ ಕಾಣಿಸಿದರೂ ಕಿವಿ ಕೇಳಿಸುವುದಿಲ್ಲವಾದ್ದರಿಂದ ಟಿ.ವಿ ನೋಡುವುದಿಲ್ಲ. ಸಂಜೆ ಮತ್ತೆ ಪೂಜೆ, ಸಣ್ಣ ಮಟ್ಟಿನ ಊಟ...ನಿದ್ರೆ...ಹೀಗೆ ಜೀವನ ಸಾಗಿತ್ತು.
 
 ಆತ ನನ್ನ ವೆಂಡರ್ ಕಣ್ಣು ಪುಸ್ತಕವನ್ನು ಓದಿದ್ದಾರೆ. ಎರಡನೆ ಪುಸ್ತಕ "ಗುಬ್ಬಿ ಎಂಜಲು"ನ್ನು ಬಿಡುಗಡೆಯಾದ ಒಂದು ವಾರಕ್ಕೆ ಕೊಟ್ಟುಬಂದಿದ್ದೆ.  ಅವರು ಎರಡೇ ದಿನದಲ್ಲಿ ಓದಿ ಮುಗಿಸಿ ನನಗೆ ಫೋನ್ ಮಾಡಿ ಹೇಳಿದ್ದು ಹೀಗೆ,
"ಶಿವು, ನಿನ್ನ ಗುಬ್ಬಿ ಎಂಜಲು ಓದುತ್ತಿದ್ದೆ. ನಾವು ಮದುವೆಯ ನಂತರ ಹೊಸಮನೆಯಲ್ಲಿ ಸಂಸಾರ ನಡೆಸುತ್ತಿದ್ದ ಆ ದಿನಗಳು ನೆನಪಾದವು. ಅದನ್ನು ನನ್ನ ಶ್ರೀಮತಿಯೊಂದಿಗೆ ಹಂಚಿಕೊಳ್ಳೋಣವೆಂದರೆ ಅವಳೇ ಇಲ್ಲ" ಎಂದು ಭಾವುಕತೆಯಿಂದ ಹೇಳಿದಾಗ ನನಗೂ ಕಣ್ಣು ತುಂಬಿಬಂದಿತ್ತು.

ಇನ್ನೂ ಏನೇನೋ ಅಲೋಚನೆಗಳು ಬರುತ್ತಿದ್ದವು ಅಷ್ಟರಲ್ಲಿ ಆವರು ನನಗೆ ಕೊಡಬೇಕಾದ ಒಂದು ತಿಂಗಳ ದಿನಪತ್ರಿಕೆ ಹಣ ಹಿಡಿದುಕೊಂಡು ಬಂದರಲ್ಲ, ನಾನು ಅವರದೇ ಬದುಕಿನ ನೆನಪಿನ ಲೋಕದಿಂದ ಹೊರಬಂದೆ.
 "ಶಿವು ತಡವಾಯ್ತು, ಹಣ ಎಲ್ಲಿಟ್ಟಿರುತ್ತೇನೆ ಅನ್ನೋದ ನೆನಪಾಗೋಲ್ಲ." ನನಗೆ ಹಣಕೊಡುತ್ತಾ ಹಾಗೆ ನಿದಾನವಾಗಿ ಸೋಪಾ ಮೇಲೆ ಕುಳಿತರು.
 ಸ್ವಲ್ಪ ತಡೆದು "ನೋಡು ಶಿವು, ಕೆಲವೊಂದು ವಿಚಾರವನ್ನು ನಿನ್ನಲ್ಲಿ ಹೇಳಬೇಕಿದೆ.  ಎರಡು ತಿಂಗಳ ಹಿಂದೆ ನಾನು ನಮ್ಮ ಮನೆಯ ಮೆಟ್ಟಿಲಿಳಿಯುವಾಗ ಕೆಳಗೆ ಜಾರಿಬಿದ್ದೆ ಅಷ್ಟೆ. ಪ್ರಜ್ಞೆತಪ್ಪಿತ್ತು.  ಒಂದು ದಿನದ ನಂತರ ನನಗೆ ಪ್ರಜ್ಞೆ ಬಂದಾಗ ಆಸ್ಪತ್ರೆಯ ಬೆಡ್ ಮೇಲಿದ್ದೆ.  ನನ್ನ ಕೆಳಗಿನ ಮನೆಯವರು ಆಸ್ಪತ್ರೆಗೆ ಸೇರಿಸಿದ್ದರು.  ಅಷ್ಟರಲ್ಲಿ ನನ್ನ ದೆಹಲಿಯ ಮಗಳು ಬಂದು ನನ್ನನ್ನು ಮಾತಾಡಿಸಿ ಏನು ಆಗೋಲ್ಲ ನಾನಿದ್ದೇನೆ ಅಂತ ದೈರ್ಯ ಹೇಳಿದಳು.  ಮತ್ತೆ ಯಾರೋ ಬಂದು ನನಗೆ ಅನಾಸ್ತೇಶಿಯ ಇಂಜೆಕ್ಷನ್ ಕೊಟ್ಟು ಅಪರೇಷನ್ ಮಾಡಿದರಂತೆ. ನನಗೆ ಪ್ರಜ್ಞೆ ಬಂದಾಗ ನನ್ನ ಉಸಿರಾಟದಲ್ಲಿ ಏನೋ ವ್ಯತ್ಯಾಸವಾದಂತೆ ಅನ್ನಿಸುತ್ತಿತ್ತಾದರೂ ಗೊತ್ತಾಗಲಿಲ್ಲ.   ಅಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಹೊತ್ತಿಗೆ ಗೊತ್ತಾಗಿತ್ತು  ಕೃತಕ ಉಸಿರಾಟಕ್ಕಾಗಿ ನನಗೆ ಫೇಸ್ ಮೇಕರ್ ಹಾಕಿದ್ದಾರೆಂದು.  ಕೆಲವು ದಿನಗಳಲ್ಲಿ ನನ್ನ ಮಗಳು ದೆಹಲಿಗೆ ಅವಳ ಜೀವನಕ್ಕಾಗಿ ಹೊರಟೇಬಿಟ್ಟಳು.  ಅಮೇರಿಕಾದಿಂದ ಮತ್ತೊಬ್ಬ ಮಗಳು ಅಳಿಯ ಮಕ್ಕಳು ಎಲ್ಲಾ ಬಂದು ನನ್ನನ್ನು ನೋಡಿಕೊಂಡು ಒಂದು ವಾರವಿದ್ದು ವಾಪಸ್ಸು ಹೊರಟು ಹೋದರು.  ಇನ್ನು  ನನ್ನ ಮಗನಂತೂ ನನ್ನಿಂದ ಕಿತ್ತುಕೊಳ್ಳಲು ಬರುತ್ತಾನೆ ಹೊರತು,  ಇಂಥ ಸಮಯದಲ್ಲೂ ನನ್ನ ಸಹಾಯಕ್ಕೆ ಬರಲಿಲ್ಲ.  ಕೆಲವೇ ದಿನಗಳಲ್ಲಿ ನಾನು ಮತ್ತೆ ಎಂದಿನಂತೆ ಈ ಮನೆಗೆ ನಾನೇ ರಾಜ ರಾಣಿ, ಸೈನಿಕ ಸೇವಕ ಎಲ್ಲಾ ಆಗಿಬಿಟ್ಟೆ." ಹೇಳುತ್ತಾ ಮಾತು ನಿಲ್ಲಿಸಿದರು.
 ಸ್ವಲ್ಪ ಸುಧಾರಿಸಿಕೊಳ್ಳುತ್ತಾ, "ಅದಾದ ಮೇಲೆ ನನಗೆ ಆಡಿಗೆ ಮಾಡಿಕೊಳ್ಳಲು ಆಗಲಿಲ್ಲ.  ಸದ್ಯ ಕೆಳಗಿನ ಮನೆಯ ಬಾಡಿಗೆಯವರು ಒಳ್ಳೆಯವರು.  ನೀನು ಹಾಕಿದ ಡೆಕ್ಕನ್ ಹೆರಾಲ್ಡ್ ಓದಿದ ಮೇಲೆ ಎತಾ ಸ್ಥಿತಿ ಸ್ನಾನ ಶಿವನ ಪೂಜೆ ಮುಗಿಸಿದ ಮೇಲೆ ಅವರು ಮೇಲೆ ಬಂದು ನನ್ನನ್ನು ನಿದಾನವಾಗಿ ಕೆಳಗೆ ಕರೆದುಕೊಂಡು ಹೋಗಿ ತಿಂಡಿ ಕೊಡುತ್ತಾರೆ.  ಅಮೇಲೆ  ಅಲ್ಲೇ ನಿದ್ರೆ ಮಾಡುತ್ತೇನೆ. ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ಅವರು ನನ್ನನ್ನು ಎಚ್ಚರಗೊಳಿಸಿ ಚಪಾತಿ ಅನ್ನ ಸಾಂಬರು ಇತ್ಯಾದಿ ಊಟಕೊಡುತ್ತಾರೆ. ಊಟ ಮಾಡಿದ ಮೇಲೆ ನಿದಾನವಾಗಿ ಮೇಲೆ ಬಂದುಬಿಡುತ್ತೇನೆ.  ಸಂಜೆ ಒಂದು ಕಾಫಿ ಕಳಿಸುತ್ತಾರೆ.  ರಾತ್ರಿ ಎಂಟುಗಂಟೆಗೆ ಚಪಾತಿಯನ್ನು ಚೂರು ಚೂರು ಮಾಡಿ ಒಂದು ಲೋಟ ಹಾಲಿಗೆ ಹಾಕಿ ನೆನಸಿ ಜೊತೆಗೊಂದು ಬಾಳೆಹಣ್ಣು ಕೆಲಸದವಳ ಕೈಲಿ ಮೇಲೆ ಕಳಿಸುತ್ತಾರೆ. ಅದನ್ನು ತಿಂದು ಮಲಗಿಬಿಡುತ್ತೇನೆ"  ಎಂದರು. 

 "ನೋಡು ಶಿವು ಇಲ್ಲಿ ಗಟ್ಟಿಯಾಗಿದೆಯಲ್ಲಾ, ಅದೇ ಜಾಗದಲ್ಲಿ ಫೇಸ್ ಮೇಕರ್ ಹಾಕಿದ್ದಾರೆ. ನಿನ್ನೆಯಲ್ಲಾ ನೋವು ಹೆಚ್ಚಾಗಿ ಇಲ್ಲಿ ಉಬ್ಬಿಕೊಂಡು ಇಡೀ ದಿನ ಒದ್ದಾಡಿಬಿಟ್ಟೆ. ಇವತ್ತು ಸ್ವಲ್ಪ ಪರ್ವಾಗಿಲ್ಲ.   ಅಂತ ನನ್ನ ಕೈಯನ್ನು ಅವರ ಎದೆಯ ಎಡಭಾಗಕ್ಕೆ ಮುಟ್ಟಿಸಿಕೊಂಡರು. ಮೂರುತಿಂಗಳಿಗೊಮ್ಮೆ ದೆಹಲಿಯಲ್ಲಿರುವ ಮಗಳು ಮತ್ತು ಅಳಿಯ ಬಂದು ನೋಡಿಕೊಂಡು ಹೋಗುತ್ತಾರೆ. ಮಗನಂತೂ ಹತ್ತಿರದ ತಮಿಳುನಾಡಿನಲ್ಲಿದ್ದರೂ ಒಮ್ಮೆಯೂ ಬರುವುದಿಲ್ಲ. ನನ್ನ ಮೇಲೆ ತುಂಬಾ ಪ್ರೀತಿಯಿರುವ ಅಮೆರಿಕಾದ ಮೊದಲ ಮಗಳು ಎರಡು ದಿನಕ್ಕೊಮ್ಮೆ ಫೋನ್ ಮಾಡುತ್ತಾಳೆ, ನನ್ನ ದುರಾದೃಷ್ಟಕ್ಕೆ ಅವಳ ಮಾತನ್ನು ಕೇಳಿಸಿಕೊಳ್ಳಲು ನನಗೆ ಕಿವಿಯೇ ಇಲ್ಲ" ಎಂದು  ಭಾವುಕರಾಗಿ ಕಣ್ಣೀರಾದಾಗ ನನ್ನ ಕಣ್ಣು ತುಂಬಿಬಂದಿತ್ತು.
 "ಆಯಸ್ಸು ಕರಗುವ ಸಮಯದಲ್ಲಿ ಮನಸ್ಸಿಗಾಗುವ ಕೊರಗನ್ನು ಮರೆಯಲು ಪೂಜೆ, ಪುಸ್ತಕಗಳು,  ನಿನ್ನ ಡೆಕ್ಕನ್ ಹೆರಾಲ್ಡ್  ಪೇಪರ್........ಅಷ್ಟಕ್ಕೆ ಮಾತು ನಿಲ್ಲಿಸಿ, "ಸರಿಯಪ್ಪ ನೀನು ಹೋಗಿಬಾ, ಆದ್ರೆ ನೀವು ಮಾತ್ರ ನನಗೆ ಡೆಕ್ಕನ್ ಹೆರಾಲ್ಡ್ ಹಾಕುವುದನ್ನು ತಪ್ಪಿಸಬೇಡ....ಎಂದು ಹೇಳುತ್ತಾ ಮತ್ತೆ ನಿದಾನವಾಗಿ ಪೂಜೆಗೆ ಒಳಗೆ ಹೋದರು.

 ನಾನು ನಿದಾನವಾಗಿ ಮೆಟ್ಟಿಲಿಳಿಯುತ್ತಿದ್ದೆ.  ಹಳ್ಳಿಯಲ್ಲಿ ವಯಸ್ಸಾದವರ ಕೊನೆದಿನಗಳನ್ನು  ಮನಮುಟ್ಟುವಂತೆ ಚಿತ್ರಿಸಿರುವ ಕಾಡುಬೆಳದಿಂಗಳು ಸಿನಿಮಾ ನೆನಪಾಗಿತ್ತು.  ಹಳ್ಳಿಯಷ್ಟೇ ಏಕೆ ಇಂಥ ಮೆಟ್ರೋಪಾಲಿಟನ್ ನಾಡಿನಲ್ಲಿರುವ ಹಿರಿಯರಿಗೆ ಕೊನೆದಿನಗಳಲ್ಲಿ ಬೆಳದಿಂಗಳು ತೋರಿಸುವವರು ಯಾರು? ಎನ್ನುವ ಪ್ರಶ್ನೆ ನನ್ನಲ್ಲಿ ಕಾಡತೊಡಗಿತ್ತು.

[ವೆಂಡರ್ ಮತ್ತು ಗ್ರಾಹಕರ ಕಥೆಗಳು ಮುಗಿಯಿತು ಎಂದುಕೊಳ್ಳುತ್ತಿದ್ದ ಹಾಗೆ ಇಂಥ ಘಟನೆಗಳು ಇನ್ನಷ್ಟು ಮತ್ತಷ್ಟು ವೆಂಡರ್ ಲೇಖನಗಳನ್ನು ಬರೆಯಲು ಪ್ರೇರೇಪಿಸುತ್ತಿವೆ....ಬಹುಶಃ ಇವೆಲ್ಲಾ ಮುಗಿಯದ ಕತೆಗಳಾ?  ಬ್ಲಾಗ್ ಗೆಳೆಯರಾದ ನೀವೇ ಉತ್ತರಿಸಬೇಕು]

ಲೇಖನ: ಶಿವು.ಕೆ


Sunday, October 3, 2010

ಫೋಟೊಗ್ರಫಿ ವಿಶ್ವಕಪ್.....ಮಿಸ್ ಮಾಡಿಕೊಳ್ಳಬೇಡಿ.




  ಇದೇನಿದೂ ಫೋಟೊಗ್ರಫಿಯಲ್ಲಿ ವಿಶ್ವಕಪ್? ಅಂತ ಈ ಕ್ಷಣ ನಿಮಗನ್ನಿಸಿರಬಹುದು.  ನಿಮಗೆಲ್ಲರಿಗೂ ಪುಟ್‍ಬಾಲ್ ವಿಶ್ವಕಪ್ [ಫಿಪಾ], ಟೆನಿಸ್‍ನಲ್ಲಿ [ಡೇವಿಸ್ ಕಪ್], ಟೇಬಲ್ ಟೆನ್ನಿಸಿನಲ್ಲಿ ವಿಶ್ವಕಪ್, ಕ್ರಿಕೆಟ್ಟಿನಲ್ಲಂತೂ ಒಂದು ದಿನದ ಪಂದ್ಯಾವಳಿಯ ವಿಶ್ವಕಪ್ ಅಲ್ಲದೇ, ೨೦-೨೦ ವಿಶ್ವಕಪ್ ಕೂಡ ನಡೆಯುವುದು ಪುಟ್ಟ ಮಕ್ಕಳಿಗೂ ಗೊತ್ತು.  ಹಾಗಾದರೆ ಈ ಫೋಟೊಗ್ರಫಿ ವಿಶ್ವಕಪ್ ಅಂದರೇನು? ಅದು ಹೇಗಿರುತ್ತದೆ? ತಿಳಿದುಕೊಳ್ಳುವ ಕುತೂಹಲವೇ!  ಬನ್ನಿ ತಿಳಿದುಕೊಳ್ಳೋಣ.



  ಬೆಂಗಳೂರಿನಲ್ಲಿ ಫೋಟೊಗ್ರಫಿಯ ವಿಶ್ವಕಪ್ ನಡೆಯುತ್ತದೆ ಎನ್ನುವ ವಿಚಾರವೇ ನನಗೆ ಒಂಥರ ಥ್ರಿಲ್ ಅನ್ನಿಸಿತ್ತು.  ನಾನು ಒಬ್ಬ ಛಾಯಾಗ್ರಾಹಕನಾಗಿ ವಿದೇಶಗಳಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಫೋಟೊಗ್ರಫಿ ವಿಶ್ವಕಪ್ ಸ್ಪರ್ಧೆಗಳನ್ನು ಓದಿ ತಿಳಿದುಕೊಳ್ಳುತ್ತಿದ್ದೆ. ೨೦೦೬ರಲ್ಲಿ ಯುರೋಪಿನ ಲಕ್ಸಂಬರ್ಗ್‍ನಲ್ಲಿ ನಡೆದ ಪಿಕ್ಟೋರಿಯಲ್ ವಿಶ್ವಕಪ್  ಫೋಟೊಗ್ರಫಿಯಲ್ಲಿ ನಮ್ಮ ಭಾರತಕ್ಕೆ ಚಿನ್ನದ ಪದಕ ಲಭಿಸಿತ್ತು. ಅಲ್ಲಿ ಭಾಗವಹಿಸಿದ್ದ ಹತ್ತು ಚಿತ್ರಗಳಲ್ಲಿ ನನ್ನ "ಮೀನಿನ ಬಲೆ ಎಸೆಯುವ" ಚಿತ್ರವೂ ಸ್ಪರ್ಧಿಸಿದ್ದು ನನಗೆ ಮರೆಯಲಾಗದ ಅನುಭವ.

 
          "ಇಂಟರ್‌ನ್ಯಾಷನಲ್ ಫೆಡರೇಷನ್ ಅಫ್ ಫೋಟೊಗ್ರಫಿಕ್ ಆರ್ಟ್" [ಫೆಡರೇಷನ್ ಇಂಟರ್‌ನ್ಯಾಷನಲ್ ಡಿ ಲ ಆರ್ಟ್ ಫೋಟೊಗ್ರಫಿಕ್"] ಸಂಸ್ಥೆಯವರು ಎರಡು ವರ್ಷಕ್ಕೊಮ್ಮೆ ಫೋಟೊಗ್ರಫಿ ವಿಶ್ವಕಪ್ಪನ್ನು ವಿವಿದ ದೇಶಗಳಲ್ಲಿ ನಡೆಸುತ್ತಾರೆ. ಇದರ ಮುಖ್ಯ ಕಛೇರಿ ಈಗ ಪ್ಯಾರಿಸ್‍ನಲ್ಲಿದೆ. ವಿಶ್ವದ ಫೋಟೊಗ್ರಫಿಯ ಅಭಿವೃದ್ಧಿ ಮತ್ತು ಬೆಳವಣಿಗೆಗಾಗಿ ಯುನೆಸ್ಕೋದಿಂದ ಅಧಿಕೃತವಾಗಿ ಮನ್ನಣೆ ಪಡೆದುಕೊಂಡ ಏಕೈಕ ಫೋಟೊಗ್ರಫಿ ಆರ್ಗನೈಸೇಷನ್ ಇದು.   ವಿಶ್ವದ ಐದು ಖಂಡಗಳ ೮೫ಕ್ಕೂ ಹೆಚ್ಚು ರಾಷ್ಟ್ರಗಳ ಫೋಟೊಗ್ರಫಿ ಸಂಸ್ಥೆಗಳು ಸದಸ್ಯತ್ವವನ್ನು ಹೊಂದಿವೆ. ಮತ್ತು ಹತ್ತು ಲಕ್ಷಕ್ಕೂ ಹೆಚ್ಚು ಛಾಯಾಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ.

 ವಿಶ್ವಕಪ್ ಅತಿಥ್ಯವನ್ನು ವಹಿಸಿಕೊಂಡ ದೇಶಕ್ಕೆ ನಾವು ಸ್ಪರ್ಧೆಗಾಗಿ ಫೋಟೋಗಳನ್ನು ಕಳಿಸಬೇಕಲ್ಲವೇ?  ಅದು ಹೇಗೆ ಕಳುಹಿಸಬಹುದು ಎನ್ನುವುದರ ಎಲ್ಲಾ ಹಂತಗಳನ್ನು ತಿಳಿದುಕೊಳ್ಳೋಣ.



 ೨೦೧೦ರಲ್ಲಿ ನಮ್ಮ ಭಾರತ ದೇಶಕ್ಕೆ ನೇಚರ್ ವಿಭಾಗದಲ್ಲಿ ವಿಶ್ವಕಪ್ ಫೋಟೊಗ್ರಫಿ ಸ್ಪರ್ಧೆಯನ್ನು ನಡೆಸುವ ಅವಕಾಶ ಸಿಕ್ಕಿದೆ. ಅದರ ಸಂಪೂರ್ಣ ಜವಾಬ್ದಾರಿ ಮತ್ತು ನಿರ್ವಹಣೆಯನ್ನು ಪ್ರತಿಷ್ಠಿತ ಬೆಂಗಳೂರಿನ ಯೂತ್ ಫೋಟೊಗ್ರಫಿಕ್ ಸೊಸೈಟಿ ವಹಿಸಿಕೊಂಡಿದೆ.  ಮೊದಲಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಛಾಯಾಗ್ರಾಹಕರು  ತಾವು ಕ್ಲಿಕ್ಕಿಸಿದ ಅತ್ಯುತ್ತಮ ನೇಚರ್ ವಿಭಾಗದ ಛಾಯಾಚಿತ್ರಗಳನ್ನು[ಒಬ್ಬರು ಎಷ್ಟು ಚಿತ್ರಗಳನ್ನಾದರೂ ಕಳಿಸಬಹುದು ಆದ್ರೆ ಅತ್ಯುತ್ತಮವಾಗಿರಲೇಬೇಕು] ಈ ಸ್ಪರ್ಧೆಯಲ್ಲಿ ನಮ್ಮ ದೇಶದ ಹೆಸರಿನಲ್ಲಿ ಭಾಗವಹಿಸುವ ಫೋಟೊಗ್ರಫಿ ಸಂಸ್ಥೆಗೆ ಕಳಿಸಬೇಕು. ಹೀಗೆ  ದೇಶದಾದ್ಯಂತ  ಫಿಯಪ್ ಸದಸ್ಯತ್ಯ ಹೊಂದಿರುವ ಫೋಟೊಗ್ರಫಿ[೨೫ಕ್ಕೂ ಹೆಚ್ಚು ಸಂಸ್ಥೆಗಳಿವೆ]ಸಂಸ್ಥೆಗಳ ಎಲ್ಲಾ ಸದಸ್ಯರೂ ಹೀಗೆ ತಮ್ಮ ಅತ್ಯುತ್ತಮ ನೇಚರ್ ವಿಭಾಗದ ಛಾಯಾಚಿತ್ರಗಳನ್ನು ಕಳಿಸುತ್ತಾರೆ.  ದೇಶದ ಎಲ್ಲಾ ಸದಸ್ಯತ್ವ ಹೊಂದಿದ ಒಂದೊಂದು ಸಂಸ್ಥೆಯಿಂದಲೂ ನೂರಾರು ಚಿತ್ರಗಳು ಸೇರಿ ನಮ್ಮ ದೇಶವನ್ನು ಪ್ರತಿನಿಧಿಸುವ ಸಂಸ್ಥೆಗೆ ಸಾವಿರಾರು ಛಾಯಾಚಿತ್ರಗಳು ಬರುತ್ತವೆ.  ಅಷ್ಟು ಚಿತ್ರಗಳಲ್ಲಿ ಒಂದು ದೇಶವನ್ನು ಪ್ರತಿನಿಧಿಸಲು ಹತ್ತು ಚಿತ್ರಗಳಿಗೆ ಮಾತ್ರ ಅವಕಾಶ ಮತ್ತು ಒಬ್ಬ ಛಾಯಾಗ್ರಾಹಕನ ಒಂದು ಚಿತ್ರ ಮಾತ್ರ ಆಯ್ಕೆಯಾಗಲು ಸಾಧ್ಯ. ಇವೆಲ್ಲಾ ಚಿತ್ರಗಳಲ್ಲಿ ನಮ್ಮ ದೇಶಕ್ಕೆ ವಿಶ್ವಕಪ್ ಗೆದ್ದು ಕೊಡುವ ಹತ್ತು ಅತ್ಯುತ್ತಮ ಚಿತ್ರಗಳನ್ನು ಆರಿಸುವ ಜವಾಬ್ದಾರಿ ಈಗ ಆ ಸಂಸ್ಥೆಯ ಮೇಲಿರುತ್ತದೆ. ನಮ್ಮ ಶಾಲಾ-ಕಾಲೇಜು, ಗ್ರಾಮೀಣ ಮತ್ತು ನಗರ ಮಟ್ಟದಲ್ಲಿ ಪ್ರತಿನಿಧಿಸಿದ ನಮ್ಮ ಕ್ರಿಕೆಟ್ ಪ್ರತಿಭೆಗಳನ್ನು ರಾಜ್ಯಮಟ್ಟದಲ್ಲಿ ಆಯ್ಕೆ ಮಾಡಿ ಅದರೊಳಗೆ ರಾಷ್ಟ್ರಮಟ್ಟಕ್ಕೆ ನಮ್ಮ ಸಚಿನ್, ದ್ರ್‍ಆವಿಡ್, ಸೆಹ್ವಾಗ್, ದೋನಿ.................ಹನ್ನೊಂದು ಜನರು ಮಾತ್ರ ಆಯ್ಕೆಯಾದಂತೆ ಇಲ್ಲಿಯೂ ಅದೇ ರೀತಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.  ವಿಶ್ವಕಪ್‍ನಲ್ಲಿ ನಿಮ್ಮ ಒಂದು ಚಿತ್ರವೂ ಸ್ಪರ್ಧೆಗೆ ಆಯ್ಕೆಯಾಗಬೇಕಾದರೆ ಅದರಲ್ಲಿ ನಿಮ್ಮ ಸಾಧನೆ, ಶ್ರಮ ಎಂಥದಿರಬೇಕೆನ್ನುವುದು ನಿಮ್ಮ ಊಹೆಗೆ ಬಿಟ್ಟಿದ್ದು.

 ಯ್ಕೆಯಾಗುವ ಚಿತ್ರಗಳೆಲ್ಲಾ ಅತ್ಯುತ್ತಮವೆಂದುಕೊಂಡರೂ ತಂಡರೂಪದಲ್ಲಿ ಪದಕ ಗೆಲ್ಲಬೇಕಲ್ಲವೇ!  ಕ್ರಿಕೆಟ್ಟಿನಲ್ಲಿ ಅತ್ಯುತ್ತಮ ನಾಯಕ ದೋನಿ ಇದ್ದರೆ ಸಾಲದು. ಪಂದ್ಯ ಗೆಲ್ಲಲೂ ಅತ್ಯುತ್ತಮ ೫ ಬ್ಯಾಟ್ಸ್‍ಮೆನ್‍ಗಳು, ಮೂವರು ವೇಗದ ಮತ್ತು ೧-೨ ಸ್ಪಿನ್ ಬೌಲರುಗಳು, ಉತ್ತಮ ಮತ್ತು ಅನುಭವವುಳ್ಳ ವಿಕೆಟ್ ಕೀಪರುಗಳು, ಅವರೊಳಗೆ ಪ್ರತಿಭಾನ್ವಿತ ಫೀಲ್ಡರುಗಳು, ಆಲ್‍ರೌಂಡರುಗಳೆಲ್ಲಾ ಇದ್ದಲ್ಲಿ ಒಂದು ಪ್ರತಿಭಾನ್ವಿತ ಸಮತೋಲನದ ತಂಡವೆನಿಸಿಕೊಳ್ಳುವಂತೆ  ಈ ಫೋಟೊಗ್ರಫಿ ಸ್ಪರ್ಧೆಯಲ್ಲೂ  ಇದೇ ರೀತಿಯಲ್ಲಿ ಸಮತೋಲನ ಹೊಂದಿದ ಹತ್ತು ಚಿತ್ರಗಳಿರಬೇಕಾಗುತ್ತದೆ.  ಸೆಹ್ವಾಗ್ ನೂರು ಬಾಲಿನಲ್ಲಿ ಇನ್ನೂರು ಹೊಡೆದಾಗ ನಾವು ಮೆಚ್ಚಿ ಕೊಂಡಾಡಿದಂತೆ, ಇಲ್ಲಿ ಒಂದು ಛಾಯಾಚಿತ್ರವೂ ತನ್ನನ್ನು ಕ್ಲಿಕ್ಕಿಸಿದ ಛಾಯಾಗ್ರಾಹಕನ ಹಲವು ವರ್ಷಗಳ ಸಾಧನೆ, ಪ್ರತಿಭೆ, ಕ್ಲಿಕ್ಕಿಸುವ ಸಮಯದಲ್ಲಿನ ತ್ವರಿತ ತಾಂತ್ರಿಕತೆ, ಆ ಸಮಯದಲ್ಲಿ ಆತನ ಮನಸ್ಥಿತಿ, ಎದುರಿಸಿದ ಗಂಭೀರ ಅಪಾಯಗಳು, ಆತನ ಕಾಯುವಿಕೆಯ ತನ್ಮಯತೆ, ಇತ್ಯಾದಿಗಳನ್ನು ಕ್ಷಣಮಾತ್ರದಲ್ಲಿ ತೀರ್ಪುಗಾರರ ಮನಸ್ಸಿನಲ್ಲಿ ಮೂಡಿಸಬೇಕು.

 ಇದರ ನಂತರದ ಹಂತವೇ ಕೋಹರೆನ್ಸ್ ಇದನ್ನು ಕನ್ನಡದಲ್ಲಿ ಸಮತೋಲನ, ವಿವಿಧ್ಯತೆಯಲ್ಲಿ ಏಕತೆ ಎನ್ನುತ್ತಾರೆ. ಅದು ಹೇಗೆ ಎಂದು ತಿಳಿದುಕೊಳ್ಳೋಣ.  ನೇಚರ್ ವಿಭಾಗದಲ್ಲಿ ಲ್ಯಾಂಡ್‍ಸ್ಕೇಪ್, ಪಕ್ಷಿಗಳು, ಕಾಡುಪ್ರಾಣಿಗಳು, ಕೀಟಲೋಕ, ಸಸ್ಯಗಳು,...........ಹೀಗೆ ಹತ್ತಾರು ವಿಭಾಗಗಳಿವೆ. ಇಷ್ಟು ವಿಭಾಗಗಳಲ್ಲಿ ನಾವು ಸ್ಪರ್ಧೆಗೆ ಕಳಿಸಲು ಒಂದು ವಿಭಾಗವನ್ನು ಮಾತ್ರ ಆಯ್ಕೆಮಾಡಿಕೊಳ್ಳಬೇಕು.  ಉದಾಹರಣೆಗೆ  ಕಾಡುಪ್ರಾಣಿಗಳ ಚಿತ್ರಗಳನ್ನು ಆಯ್ಕೆ ಮಾಡಿಕೊಂಡರೆ ಹತ್ತು ಚಿತ್ರಗಳು ಕಾಡುಪ್ರಾಣಿಗಳದೇ ಆಗಿರಬೇಕು. ಅದರಲ್ಲಿ ಚಿಟ್ಟೆಗಳ, ಪಕ್ಷಿಗಳ, ಪ್ರಕೃತಿಯ ಚಿತ್ರಗಳು ಇರುವಂತಿಲ್ಲ. ಬೇಕಾದರೆ ಹುಲಿ, ಚಿರತೆ, ಸಿಂಹ, ತೋಳ, ಕಾಡುಬೆಕ್ಕು, ಕಾಡುನಾಯಿ,...........ಹೀಗೆ ಹತ್ತು ಬಗೆಯವು ಇದ್ದರೂ ಅವೆಲ್ಲಾ ಕಾಡುಪ್ರಾಣಿಗಳೇ ಆಗಿರಬೇಕು.  ಹಾಗೆ ಹದ್ದು, ಗಿಡುಗ, ಮೈನಾ, ರಣಹದ್ದು, ಕಿಂಗ್‍ಫಿಷರ್, ಹಾರ್ನಬಿಲ್...........ಹತ್ತು ವೈವಿಧ್ಯಮಯ ಪಕ್ಷಿಗಳಿದ್ದರೂ ಅವುಗಳ ನಡುವೆ ಪ್ರಾಣಿಗಳ, ಕೀಟಗಳ ಚಿತ್ರಗಳು ಸೇರಿರಬಾರದು.  ಒಂದು ಹದ್ದು ತಾನು ಹಿಡಿದು ತಂದ ಹಾವನ್ನು ಬಾಯಲ್ಲಿ ಕಚ್ಚಿಕೊಂಡು ಕುಳಿತಿದ್ದರೇ ಉಳಿದ ಎಲ್ಲಾ ಒಂಬತ್ತು ಚಿತ್ರಗಳಲ್ಲಿರುವ ವಿವಿಧ ಹಕ್ಕಿಗಳೂ ಕೂಡ ತಮ್ಮ ಬಾಯಲ್ಲಿ ತಮಗಿಷ್ಟವಾದ ಆಹಾರವನ್ನು ಹಿಡಿದು ತಂದ ಚಿತ್ರಗಳಿರಬೇಕು.  ಮತ್ತೆ ಎಲ್ಲಾ ಚಿತ್ರಗಳ ಹಿನ್ನೆಲೆ ಬಣ್ಣಗಳು ಒಂದೇ ತೆರನಾಗಿದ್ದಲ್ಲಿ ತಂಡದ  ಅಂಕ ಹೆಚ್ಚಾಗುತ್ತದೆ. ಮತ್ತೆ ಕ್ಲಿಕ್ಕಿಸುವಾಗಿನ ತಾಂತ್ರಿಕತೆ ಒಂದೇ ಆಗಿದ್ದಲ್ಲಿ ಅದೂ ತಂಡದ ಅಂಕಗಳು ಹೆಚ್ಚಿಸುವಲ್ಲಿ ಸಹಾಯಮಾಡುತ್ತವೆ.  ಹೀಗೆ "ಚಲನೆಯಲ್ಲಿರುವ ಎರಡು ಪಕ್ಷಿಗಳು" "ಕಾಡುಪ್ರಾಣಿಯ ಬಾಯಲ್ಲಿ ಬೇಟೆ" "ಚಿಟ್ಟೆಗಳ ಪ್ರಪಂಚ"  ಹಿಮ ಆವರಿಸಿದ ಬೆಟ್ಟಗುಡ್ಡಗಳು, ಹೀಗೇ ನೂರಾರು ವಿಭಾಗದಲ್ಲಿ ಫೋಟೊಗಳನ್ನು ಕಳಿಸಬಹುದು.  ಇದೆಲ್ಲವೂ ಪ್ರಿಂಟ್ ವಿಭಾಗದ ಸ್ಪರ್ಧೆಯಾಯಿತು.


 ಮುಂದುವರಿದ ತಂತ್ರಜ್ಞಾನದ ನಿಟ್ಟಿನಲ್ಲಿ ಹೊಸದಾಗಿ ಸೇರಿಕೊಂಡ ಮತ್ತೊಂದು ವಿಭಾಗವೆಂದರೆ ಪ್ರೊಜೆಕ್ಟೆಡ್ ಇಮೇಜ್ ವಿಭಾಗ. ಇದರಲ್ಲಿ ಛಾಯಾಚಿತ್ರಗಳನ್ನು ಸಿಡಿಗಳಲ್ಲಿ ಸಾಪ್ಟ್ ಕಾಪಿಯಾಗಿ ಕಳಿಸಬೇಕು. ಇದಕ್ಕೂ ಪ್ರಿಂಟ್ ವಿಭಾಗದ ನಿಯಮಗಳೇ ಅನ್ವಯವಾದರೂ ಇದರಲ್ಲಿ ಇಪ್ಪತ್ತು ಚಿತ್ರಗಳು ಸ್ಪರ್ಧೆಗೆ ಭಾಗವಹಿಸುವುದಕ್ಕೆ ಅವಕಾಶ.  ಹಾಗೆ ಒಬ್ಬ ಛಾಯಾಗ್ರಾಹಕನಿಗೆ ಎರಡು ಚಿತ್ರಗಳನ್ನು ಸ್ಪರ್ಧೆಗೆ ಕೊಡಲು ಅವಕಾಶ.


 ಇಂಥ ಒಂದು ವಿಶ್ವಕಪ್ ಸ್ಪರ್ಧೆಯನ್ನು ಫೆಡರೇಷನ್ ಅಪ್ ಇಂಡಿಯನ್ ಫೋಟೊಗ್ರಫಿ ಸಂಸ್ಥೆಯ ವತಿಯಿಂದ ನಮ್ಮ ಬೆಂಗಳೂರಿನ ಪ್ರತಿಷ್ಟಿತ ಫೋಟೊಗ್ರಫಿ ಸಂಸ್ಥೆಯಾದ "ಯೂತ್ ಫೋಟೊಗ್ರಫಿ ಸೊಸೈಟಿ"ಗೆ ನಡೆಸುವ ಅವಕಾಶ ಸಿಕ್ಕಿತ್ತು. ವಿಶ್ವದಾದ್ಯಂತ ೩೨ ದೇಶಗಳ ೫೭೦ ಛಾಯಾಗ್ರಾಹಕರ ೮೫೦ಕ್ಕೂ ಹೆಚ್ಚು ಪ್ರಿಂಟ್ ಮತ್ತು ಸಾಪ್ಟ್‍ಕಾಪಿಯಲ್ಲಿನ ಛಾಯಾಚಿತ್ರಗಳು ಫೈನಲ್ ಅಂತಕ್ಕೆ ಆಯ್ಕೆಯಾಗಿದ್ದವು.


 ಈ ಸ್ಪರ್ಧೆಗೆ ತೀರ್ಪುಗಾರರಾಗಿ ಸೌತ್ ಆಫ್ರಿಕಾದಿಂದ ಜಿಲ್ ಸ್ನೀಸ್ಬೆ ಇಎಸ್‍ಎಫ್‍ಐಎಪಿ,  ಪ್ರಾನ್ಸಿನಿಂದ ಜಾಕಿ ಮಾರ್ಟಿನ್ ಇಎಫ್‍ಐಅಪಿ, ಇಟಲಿಯಿಂದ ರೆಕಾರ್ಡೋ ಬುಸಿ ಎಮ್‍ಎಫ್‍ಐಎಪಿ, ನಮ್ಮ ಭಾರತ ದೇಶದಿಂದ ಬೆಂಗಳೂರಿನ ಖ್ಯಾತ ಛಾಯಾಗ್ರಾಹಕರಾದ ಬಿ.ಶ್ರೀನಿವಾಸ ಎಮ್‍ಎಫ್‍ಐಎಪಿ, ಟಿ.ಎನ್.ಎ.ಪೆರುಮಾಳ್ ಎಮ್‍ಎಫ್‍ಐಎಪಿ. ಆಯ್ಕೆಯಾಗಿದ್ದರು. ಸೆಪ್ಟಂಬರ್ ೧೦ ಮತ್ತು ೧೧ರಂದು ಬೆಂಗಳೂರ್‍ರಿನ ತಾಜ್ ವೆಸ್ಟೆಂಡ್ ಹೋಟಲಿನಲ್ಲಿ ಸ್ಪರ್ಧೆಯ ತೀರ್ಪುಗಾರಿಕೆ ನಡೆಯಿತು.  


 ಪ್ರಿಂಟ್ ವಿಭಾಗದಲ್ಲಿ ಇಟಲಿ ಕೂದಲೆಳೆಯ ಅಂತರದಲ್ಲಿ ವಿಶ್ವಕಪ್ ಗೆದ್ದರೆ, ನಮ್ಮ ಭಾರತ ಚಿನ್ನದ ಪದಕ, ಪ್ರಾನ್ಸಿಗೆ ಬೆಳ್ಳಿ ಪದಕ, ಸ್ಕಾಟ್‍ಲೆಂಡಿಗೆ ಕಂಚು ಲಭಿಸಿತು. ನಂತರ ಉಳಿದ ಆರು ಸ್ಥಾನಗಳನ್ನು ಸೌತ್ ಆಫ್ರಿಕ, ಐರ್‌ಲ್ಯಾಂಡ್, ಟರ್ಕಿ, ಸ್ಯಾನ್ ಮೆರಿನೋ, ಬೆಲ್ಜಿಯಂ, ಆಸ್ಟ್ರಿಯ ಪಡೆದವು.

 ಇನ್ನೂ ಪ್ರೊಜೆಕ್ಟೆಡ್ ಇಮೇಜ್ ವಿಭಾಗದಲ್ಲಿ ಭಾರತ ವಿಶ್ವಕಪ್ ಗಳಿಸಿದರೆ, ಚಿನ್ನದ ಪದಕವನ್ನು ಇಟಲಿ ಗೆದ್ದಿತು. ಇಲ್ಲೂ ಕೂಡ ಕೂದಲೆಳೆಯ ಅಂತರ ಉತ್ತಮ ಸ್ಪರ್ಧೆ ಏರ್ಪಟ್ಟಿತ್ತು.  ಮೂರನೆ ಸ್ಥಾನದಲ್ಲಿ ಸೌತ್ ಅಫ್ರಿಕಾಗೆ ಬೆಳ್ಳಿ ಪದಕ, ನಾಲ್ಕನೇ ಸ್ಥಾನದ ಪ್ರಾನ್ಸಿಗೆ ಕಂಚು ಲಭಿಸಿತು. ಉಳಿದ ಆರು ಸ್ಥಾನಗಳು ಕ್ರಮವಾಗಿ ಸ್ಕಾಟ್‍ಲ್ಯಾಂಡ್, ಆಷ್ಟ್ರೀಯ, ಜರ್ಮನಿ, ಐರ್‌ಲ್ಯಾಂಡ್, ಟರ್ಕಿ, ಮತ್ತು ಹತ್ತನೇ ಸ್ಥಾನವನ್ನು ಫಿನ್‍ಲ್ಯಾಂಡ್ ಮತ್ತು ನೆದರ್‌ಲ್ಯಾಂಡ್ ಹಂಚಿಕೊಂಡವು. ನೇಚರ್ ಫೋಟೊಗ್ರಫಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಭಾರತ ಬೇರೆ ದೇಶಗಳನ್ನು ಮೀರಿಸಿ ವಿಶ್ವಕಪ್ ಮತ್ತು ಪದಕಗಳನ್ನು ಗೆಲ್ಲುತ್ತಿದೆ!  ನಮ್ಮ ದೇಶದಿಂದಲೂ ಉತ್ತಮ ನೇಚರ್ ಛಾಯಾಗ್ರಾಹಕರು ಬಹುಮಾನ ಗಳಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ.

 ವೈಯಕ್ತಿಕ ವಿಭಾಗದಲ್ಲಿ ಪ್ರಾನ್ಸಿನ ಆಲ್ಬರ್ಟ್ ಫರ್ನಾಂಡ್ ತಮ್ಮ ಚಿತ್ರವಾದ "ಡ್ಯಾನ್ಸಿಂಗ್ ಬರ್ಡ್ಸ್" ಚಿತ್ರಕ್ಕೆ ಚಿನ್ನದ ಪದಕ,  ಬೈಲೋರಷ್ಯಾದ ಸಾಯಿರಿಯಾ ಗ್ರೇಜ್ ತಮ್ಮ "ಹಾರೆ" ಎನ್ನುವ ಕಾಡು ಪ್ರಾಣಿಯ ಚಿತ್ರಕ್ಕೆ ಹಾಗು ಭಾರತದ ಬಾಬಿ ನೋಬಿಸ್ ತಮ್ಮ "ಬೇಟೆಯೊಂದಿಗೆ ಚಿರತೆ" ಚಿತ್ರಕ್ಕೆ ಬೆಳ್ಳಿಯ ಪದಕ, ಭಾರತದ ಮಂದಣ್ಣ ಕೆ.ಎ. ಬೈಲೋರಷ್ಯಾದ ಸಿಯಾಗೆಜ್ ಪ್ಲೆಕೆವಿಚ್, ಸೆರ್ಬಿಯಾದ ಲಾಡನೋವಿಕ್ ಡಾರಿಂಕ ಕಂಚಿನ ಪದಕಗಳನ್ನು ಪಡೆದರು.

 ಪ್ರೊಜೆಕ್ಟೆಡ್ ಇಮೇಜ್ ವಿಭಾಗದಲ್ಲಿ ಇಟಲಿಯ ಬಿಯಾಂಚೇಡಿ ಪ್ಲಾವಿಯೋ ತಮ್ಮ ಚಿತ್ರ "ಅಲ್ಬೆನೆಲ್ಲಾ" ಕ್ಕೆ ಚಿನ್ನದ ಪದಕ,  ಪ್ರಾನ್ಸಿನ ಮ್ಯಾಗ್ನಾಲ್ಡೋ ಅಲಿಸ್ಟೇರ್ ತಮ್ಮ ಚಿತ್ರ "ಲಿಂಕ್ ಡಿ ಯುರೋಪ್" ಚಿತ್ರಕ್ಕೆ ಬೆಳ್ಳಿಪದಕ, ಬೋಸ್ನಿಯಾ ಅರ್ಜೆಗೋವಿನಾದ ಸ್ಲಿಜೀವ್ ಹುಸೇನ್ ತಮ್ಮ ಚಿತ್ರ "ಒನ್ ಇಸ್ ಎಕ್ಸಸೀವ್" ಚಿತ್ರಕ್ಕೆ ಕಂಚಿನ ಪದಕ ಪಡೆದರು.


  ಇದಲ್ಲದೇ ಕೆಲವು ವೈಯಕ್ತಿಕ ಪ್ರಶಸ್ತಿಗಳ ವಿವರ ಹೀಗಿವೆ.

 ಅತ್ಯುತ್ತಮ ಕಾಡುಪ್ರಾಣಿ ಚಿತ್ರ: "ಲೆಟ್ ಮಿ ಟ್ರೈ"  ಶ್ರೀಲಂಕಾದ  ಬಂಡುಗುಣರತ್ನೆ


ಅತ್ಯುತ್ತಮ ಪಕ್ಷಿ ಚಿತ್ರ   :  "ಮರಬು"   ಇಟಲಿಯ ಬಾರ್ತಲೋನಿ ರಾಬರ್ಟೋ



 ಅತ್ಯುತ್ತಮ ಲ್ಯಾಂಡ್‍ಸ್ಕೇಪ್ ಚಿತ್ರ: "ರಸ್"   ಸೌತ್ ಅಫ್ರಿಕಾದ ಕೋಬಸ್ ಪಿಟ್ಜಿಯೇಟರ್



  ಅತ್ಯುತ್ತಮ ಮ್ಯಾಕ್ರೋ ಕೀಟ ಚಿತ್ರ : "ಹುಳು" ಟರ್ಕಿಯ ಕಾಕಿರ್ ಮೆಹಮತ್


 ಅತ್ಯುತ್ತಮ ವಾತಾವರಣದ ಭಾವನೆಯನ್ನು ಮೂಡಿಸುವ ಕಾಡಿನ ಚಿತ್ರ: "ಚಳಿಗಾಲದ ಬೆಳಕು" ಚಿತ್ರಕ್ಕಾಗಿ ಫಿನ್‍ಲ್ಯಾಂಡಿನ ಇಲ್ಕಾ ಇಸ್ಕನೆನ್ ಪ್ರಶಸ್ತಿ ಪಡೆದರು.







 ೨೦೧೦ರ ಮರ್ಸಿಡೀಸ್ ಬೆಂಜ್ ವಿಶ್ವಕಪನ್ನು ಇಟಲಿ ದೇಶ ಗೆದ್ದಿತು.


 ಎಲ್ಲಾ ವಿಭಾಗದಲ್ಲೂ ಉತ್ತಮ ಅಂಕಗಳಿಸಿ ಸಮಗ್ರ ಪ್ರದರ್ಶನವನ್ನು ತೋರಿದ ಇಟಲಿ ೨೦೧೦ನೇ ಮರ್ಸಿಡೀಸ್ ಬೆಂಜ್ ಪೋಟೊಗ್ರಫಿ ವಿಶ್ವಕಪನ್ನು ಗೆದ್ದುಕೊಂಡಿತು.




 ವಿಶ್ವಕಪ್ ಫೋಟೊಗ್ರಫಿಯ ಉದ್ಘಾಟನೆ ಕಾರ್ಯಕ್ರಮ ಇದೇ ಆಕ್ಟೋಬರ್ ಏಳರಂದು ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದೆ. ಬಹುಮಾನ ವಿಜೇತ ಚಿತ್ರಗಳಲ್ಲದೇ ಆಯ್ಕೆಯಾದ ಛಾಯಾಚಿತ್ರಗಳ ಪ್ರದರ್ಶನವೂ ಆಕ್ಟೋಬರ್ ಏಳರಿಂದ ಹನ್ನೊಂದರವರೆಗೆ ನಡೆಯಲಿದೆ. ವನ್ಯ ಜೀವಿ ಆಸಕ್ತರೂ ಮತ್ತು ಛಾಯಾಭಿಮಾನಿಗಳಿಗೆಲ್ಲಾ ಅತ್ಯುತ್ತಮ ಚಿತ್ರಗಳನ್ನು ನೋಡುವ ಅವಕಾಶ. ಯಶಸ್ವಿಯಾಗಿ ಫೋಟೊಗ್ರಫಿ ವಿಶ್ವಕಪ್ ಕಾರ್ಯಕ್ರಮವನ್ನು ನಡೆಸುತ್ತಿರುವುದರಿಂದ ನಮ್ಮ ಬೆಂಗಳೂರಿನ ಯೂತ್ ಫೋಟೊಗ್ರಫಿ ಸಂಸ್ಥೆಗೆ ಮತ್ತೊಂದು ಹಿರಿಮೆಯ ಗರಿ.

[ಇವತ್ತು  ವಿಜಯಕರ್ನಾಟಕದ ಸಾಪ್ತಾಹಿಕ ಲವವಲಿಕೆಯ ಎರಡನೇ ಪುಟದಲ್ಲಿ ಈ ಲೇಖನ ಪ್ರಕಟವಾಗಿದೆ. ಅದಕ್ಕೆ ಮತ್ತಷ್ಟು ಚಿತ್ರಗಳನ್ನು ನನ್ನ ಬ್ಲಾಗಿನಲ್ಲಿ ಹಾಕಿ ಪ್ರಕಟಿಸಿದ್ದೇನೆ..]


ಚಿತ್ರಗಳು ಮತ್ತು ಲೇಖನ
ಶಿವು.ಕೆ.