Wednesday, November 10, 2010

ಗಾಜಿನ ಲೋಟದ ಅರ್ಧ ಕಾಫಿ

             ಸಂಜೆ ೪ ಗಂಟೆಗೆ ಒಳಗೆ ಹೋಗಿ ೬ಕ್ಕೆ ನವರಂಗ್ ತಿಯೇಟರಿನಿಂದ ಭಟ್ಟರ ಪಂಚರ್ ಅಂಗಡಿ ಅಲ್ಲಲ್ಲ ಪಂಚರಂಗಿ ಸಿನಿಮಾವನ್ನು ನಾನು ಮತ್ತು ಹೇಮಾಶ್ರೀ ನೋಡಿ ಹೊರಬಂದಾಗ ಸಣ್ಣಗೆ ಮಳೆ.  ಸಿನಿಮಾ ಹೇಗನ್ನಿಸಿತು ಅಂತ ನಾನವಳನ್ನು ಕೇಳಿದೆ.  "ಸಿನಿಮಾ ತೀರಾ ಚಿಕ್ಕದಾಯ್ತು ಕಣ್ರಿ, ಹಾಗ್ ಹೋಗಿ ಹೀಗ್ ಬಂದಂಗೆ ಆಯ್ತು" ಅಂದಳು.  ಅವಳ ಪ್ರಕಾರ್‍ಅ ಸಿನಿಮಾ ದೊಡ್ಡದಿರಬೇಕು. ಅವಳ ಚಿಕ್ಕಂದಿನಲ್ಲಿ ಅವರ ಮನೆಯಲ್ಲಿ ಯಾರಾದರೂ ಸಿನಿಮಾಗೆ ಕರೆದುಕೊಂಡು ಹೋಗುತ್ತಾರೆಂದರೆ ಬೆಳಿಗ್ಗೆ ಎಂಟುಗಂಟೆಯಿಂದಲೇ ಸಿನಿಮಾ ದ್ಯಾನ.  ಮಕ್ಕಳೆಲ್ಲಾ ಸೇರಿ ನಾವು ಸಿನಿಮಾ ಹೋಗುತ್ತಿದ್ದೇವೆಂದು ಒಂದು ರೌಂಡ್ ಡಂಗುರ ಬಾರಿಸಿ, ಮಧ್ಯಾಹ್ನವಾಗುತ್ತಿದ್ದಂತೆ ಊಟ ಮಾಡಿ ಒಂದಷ್ಟು ಚಕ್ಕಲಿ,ಕೋಡುಬಳೆ, ನುಪ್ಪಟ್ಟು, ಬಾಳೆಹಣ್ಣು ಬುತ್ತಿ ಮಾಡಿಕೊಂಡು ಹೊರಟರೆ ಸಿನಿಮಾನೋಡಿ ಸಂಜೆ ಮನೆಗೆ ಬರುತ್ತಾ ಹೋಟಲ್ಲಿನಲ್ಲಿ ಮಸಾಲೆ ದೋಸೆ, ಕಾಫಿ...ಹೀಗೆ ಎಲ್ಲಾ ಮುಗಿಯುವ ಹೊತ್ತಿಗೆ ಕತ್ತಲಾಗಿರುತ್ತಿತ್ತು. ಅದು ಕಣ್ರಿ ಸಿನಿಮಾ ನೋಡಾಟ ಎಂದು ಆಗಾಗ ಹೇಳುತ್ತಿರುತ್ತಾಳೆ.  ಅವಳ ಮಾತು ಕೇಳಿ ನನಗೂ ಬಾಲ್ಯದ ನೆನಪಾಯಿತಾದರೂ ಬಾ ಒಂದು ಒಳ್ಳೇ ಕಾಫಿ ಕೊಡಿಸುತ್ತೇನೆ ಅಂತ ಪಕ್ಕದಲ್ಲೇ ಹೊಸದಾಗಿ ತೆರೆದುಕೊಂಡಿದ್ದ "ಹಟ್ಟಿ ಕಾಫಿ"ಗೆ ಕರೆದುಕೊಂಡು ಹೋದೆ. ಇತ್ತೀಚೆಗೆ ಯಾವುದೇ ಟ್ರೆಂಡ್ ಶುರುವಾದರೂ ಅದು ರಿವರ್ಸ್ ಆರ್ಡರಿನಲ್ಲಿ ಬಂದಂತೆ ನನಗನ್ನಿಸುತ್ತದೆ. ಏಕೆಂದರೆ ಮೊದಲೆಲ್ಲಾ ಹಳೆಯದನ್ನು ಮುಚ್ಚಿಹಾಕಿ ಹೊಸದಾಗಿ ಕೆಪೆಚಿನೋ, ಚೈನೀಸ್, ಕಾಫಿಡೇ...ಹೀಗೆ  ಅಧುನಿಕವಾದ ಟ್ರೆಂಡ್ ಬರುತ್ತಿತ್ತು.  ಕೆಲವೇ ವರ್ಷಗಳಲ್ಲಿ ಅದು ನಮ್ಮ ಜನಗಳಿಗೆ ಬೇಸರವಾಯಿತೇನೋ...ಮತ್ತೆ ನಮ್ಮ ಸಂಸ್ಕೃತಿಯ ಹಳ್ಳಿ ಮನೆ, ಹಳ್ಳಿ ತಿಂಡಿ, ತಾಯಿಮನೆ ಊಟ, ಮನೆಯೂಟ, ನಳಪಾಕ, ಹಟ್ಟಿಕಾಫಿ...ಹೀಗೆ ಶುರುವಾಗಿರುವುದು ರಿವರ್ಸ್ ಆರ್ಡರಿನಲ್ಲಿ ಅಲ್ಲವೇ....

       ನನಗೆ "ಹಟ್ಟಿ ಕಾಫಿ" ತುಂಬಾ ಇಷ್ಟ.  ಮೊದಲು ನಾನು ಕುಡಿದಿದ್ದು ಮಂತ್ರಿ ಮಾಲ್‍ನ ಸ್ಪಾರ್ ಮಾರುಕಟ್ಟೆಯಲ್ಲಿ.  ಅಂತಾ ಮಾಲಾಮಾಲ್‍ನಲ್ಲಿ ಐದು ರೂಪಾಯಿಗೆ ಕಾಫಿ ಸಿಕ್ಕಾಗ ನಾನು ಅಲ್ಲಿ ನಿಂತು ಕೂತು ಖುಷಿಯಿಂದ ಕುಡಿದಿದ್ದೆ. ಆಗ ಅದರ ರುಚಿಯನ್ನು ಮರೆಯಲಾಗಿರಲಿಲ್ಲ. ಕಾಫಿ ಅಷ್ಟು ಚೆನ್ನಾಗಿದ್ದರೂ ಪ್ರತೀ ದಿನ ಮಂತ್ರಿ ಮಾಲ್‍ಗೆ ಹೋಗಿ ಕುಡಿಯಲಾಗುವುದಿಲ್ಲವಲ್ಲ. ಅದರಲ್ಲೂ ಅರ್ಧ ಕಾಫಿ ಕುಡಿಯಲು ಮಂತ್ರಿ ಮಾಲ್‍ಗೇಕೆ ಹೋಗಬೇಕು. ರಸ್ತೆಬದಿಯ ಪುಟ್ಟ ಅಂಗಡಿಯಲ್ಲಿ ಸಿಗುವ ಕಾಫಿ ಕಪ್ಪನ್ನು ಕೈಯಲ್ಲಿಡಿದು ಸುತ್ತ ಹೋಗಿಬರುವ ಸುಂದರ ಬೆಡಗಿಯರನ್ನು ನೋಡುತ್ತಾ ಕುಡಿಯುತ್ತಿದ್ದರೇ ಅದೊಂತರ ಪುಟ್ಟ ಬೊಗಸೆಯಲ್ಲಿ ಬ್ರಹ್ಮಾಂಡ ತುಂಬಿಕೊಂಡಂತ ದೊಡ್ಡ ಸಂತೋಷ.  ಅಂತದ್ದೇ ಪುಟ್ಟ ಹಟ್ಟಿ ಕಾಫಿ ಅಂಗಡಿ ನವರಂಗ್ ಬಳಿ ತೆರೆದುಕೊಂಡಿತಲ್ಲ. ನವರಂಗ್ ಬಳಿಯ ಅಜಂತ ಕಲರ್ ಲ್ಯಾಬಿಗೆ ಫೋಟೊ ಪ್ರಿಂಟ್‍ಗಾಗಿ ಹೋದಾಗಲೆಲ್ಲಾ ಹಟ್ಟಿ ಕಾಫಿಗೆ ವಿಸಿಟ್ ಕೊಡುತ್ತಿದ್ದೆ.  ಇಷ್ಟಕ್ಕೂ ಆ ಕಾಫಿಯಲ್ಲೇನು ವಿಶೇಷ ಅಂತೀರಾ, ಹೇಳ್ತೀನಿ ಕೇಳಿ,  ಅದಕ್ಕೂ ಮೊದಲು ಬೇರೆ ಜಾಗಗಳಲ್ಲಿ ಕಾಫಿಗಳನ್ನು ಒಮ್ಮೆ ಗ್ಲಾನ್ಸ್ ಮಾಡಿಬಿಡೋಣ. 

ಬೆಂಗಳೂರೆಲ್ಲಾ ಸುತ್ತಿ ಹುಡುಕಿ ತಂದಿದ್ದು ಈ ಗಾಜಿನ ಲೋಟ. ಸದ್ಯ ನಾನು ಮನೆಯಲ್ಲಿ ಕಾಫಿ ಕುಡಿಯುತ್ತಿರುವುದು ಇದರಲ್ಲಿ.

ನೀವು ಸ್ವಲ್ಪ ಅನುಕೂಲವಾದ ಏಸಿ-ಗೀಸಿ ಇರುವ ಹೋಟಲ್ಲಿಗೆ ಹೋಗಿ ಅರಾಮವಾಗಿ ಕುಳಿತು ಕಾಫಿಗೆ ಆರ್ಡರ್ ಮಾಡಿದರೆ ಚೀನಿ ಪಿಂಗಾಣಿ ಬಟ್ಟಲುಗಳಲ್ಲಿ ಕಾಫಿ ತಂದಿಟ್ಟು ದುಬಾರಿ ಬಿಲ್ಲು ಇಟ್ಟು ಹೋಗುತ್ತಾರೆ. ಕಾಫಿ ಚೆನ್ನಾಗಿದ್ದರೂ ಅದರ ಬಟ್ಟಲು ಪಿಂಗಾಣಿಯಾದ್ದರಿಂದ ಅದೇನೋ ನಮ್ಮದಲ್ಲವೆನ್ನುವ ಭಾವನೆಯಿಂದಲೇ ಕಾಫಿ ಕುಡಿದು ಎದ್ದು ಬಂದಿರುತ್ತೇವೆ.  ತ್ರಿ ಸ್ಟಾರ್-ಫ಼ೈವ್ ಸ್ಪಾರ್ ಹೋಟಲ್ಲುಗಳಲ್ಲಿ ಹಾಲಿನಪುಡಿ-ಸಕ್ಕರೆ ರಹಿತ ಸಕ್ಕರೆ-ನೆಸ್‍ಕೆಪೆ-ಅಥವ-ದಾರ್ಜಿಲಿಂಗ್ ಟೀ ಇತ್ಯಾದಿಗಳನ್ನು ಪೊಟ್ಟಣಗಳಲ್ಲಿ ಇಟ್ಟು ಬಿಸಿನೀರನ್ನು ಒಂದು ದೊಡ್ಡ ಪಿಂಗಾಣಿಯಲ್ಲಿ ಇಟ್ಟು ಅದರ ಪಕ್ಕ ಮತ್ತದೇ ಚಿತ್ತಾರವಾದ ಪಿಂಗಾಣಿ ಬಟ್ಟಲು ಅದರ ಪಕ್ಕ ಎಲ್ಲವನ್ನು ಮಿಕ್ಸ್ ಮಾಡಿಕೊಂಡ ಮೇಲೆ ರುಬ್ಬಲು ಅಲ್ಲಲ್ಲ ತಿರುಗಿಸಲು ಚಮಚ.  ಇಷ್ಟೆಲ್ಲಾ ಮಾಡಿಕೊಂಡು ಕಾಫಿ ಕುಡಿಯುವಾಗ ನಮ್ಮ ಕಣ್ಣು  ಬೇರೆಯವರು ಯಾವ ರೀತಿ ಕಾಫಿ ಕುಡಿಯುತ್ತಿದ್ದಾರೆ ಅಂತ ಗಮನಿಸುತ್ತಾ ಆ ಚೆನ್ನಾಗಿಲ್ಲದ ಸ್ವಾದವನ್ನು ಅನುಭವಿಸದೇ ಅಲ್ಲಿಯೂ ಕೂಡ ಪರರಿಗಾಗಿ ಕಾಫಿ ಕುಡಿಯಾಟವಾಗಿಬಿಟ್ಟಿರುತ್ತದೆ.  ಹೋಗಲಿ ಇತ್ತ ನಮ್ಮ ಇರಾನಿ ಛಾಯ್ ಅಂಗಡಿಗಳಿಗೆ ಬರೋಣ. ಕೆಳಗೆ ಸೌದೆ ಉರಿ ಅದರ ಮೇಲೆ ಮದ್ಯಮ ಗಾತ್ರದ ಹಿತ್ತಾಳೆ ಪಾತ್ರೆ ಬೆಳಿಗ್ಗೆ ಹಾಲಿನ ಪುಡಿ ಹಾಕಿ ಕುದಿಸಲು ಪ್ರಾರಂಭಿಸಿದರೆ ರಾತ್ರಿ ಹತ್ತು-ಹನ್ನೊಂದು ಗಂಟೆಗೂ ನಿಮಗೆ ಕಾಫಿ-ಟೀ ಸಿಗುತ್ತದೆ. ಅಲ್ಲಿ ಸಕ್ಕರೆ ಮಿಶ್ರಿತ ಗಟ್ಟಿಹಾಲು ಜೊತೆಗೆ ನೆಸ್‍ಕೆಪೆ ಪುಡಿ ಬೆರೆಸಿ ಪ್ಲಾಸ್ಟಿಕ್ ಲೋಟಕ್ಕೆ ಹಾಕಿ ನಮ್ಮ ಕೈಗೆ ಒಂದು ಮುಗುಳ್-ನಗೆ ಸೇರಿಸಿ ಕೊಡುತ್ತಾನೆ. ಮೊದಲ ಸಿಪ್ ಓಕೆ. ಕೊನೆ ಕೊನೆಯಲ್ಲಿ ಬೇಡವೆನ್ನಿಸುವಷ್ಟರ ಮಟ್ಟಿಗೆ ಬೇಸರವಾಗಿ ಅರ್ಧ ಕುಡಿದು ಸ್ಟೈಲಾಗಿ ಹಣಕೊಟ್ಟು ಬಂದುಬಿಡುತ್ತೇವೆ.  ಹೋಗಲಿ ನಮ್ಮ ಮಲ್ಲೇಶ್ವರಂನ ಹಳ್ಳಿಮನೆಯಲ್ಲಿ ಕಾಫಿ ತುಂಬಾ ಚೆನ್ನಾಗಿರುತ್ತದೆಯೆಂದು ಅಲ್ಲಿ ಕುಡಿಯೋಣವೆಂದರೆ ಅವರು ಅತ್ತ ಪ್ಲಾಸ್ಟಿಕ್ ಲೋಟವೂ ಅಲ್ಲದ,  ಸ್ಟೈನ್‍ಲೆಸ್ ಸ್ಟೀಲಿನ ಪುಟಾಣಿ ಲೋಟವನ್ನು ಕೊಡದೇ ಪಿಂಗ್ ಪಾಂಗ್ ಪಿಂಗಾಣಿಯನ್ನು ಕೊಡದೆ ಪೇಪರ್ ಲೋಟದಲ್ಲಿ ಕೊಡುತ್ತಾರೆ. ಅದೊಂದರ ಚೆನ್ನಾಗಿದೆಯೆಂದು ನಾವು ಕಾಫಿಯನ್ನು ಅಸ್ವಾದಿಸಿದರೂ ನಮ್ಮ ಹಿರಿಯ ದಿನಪತ್ರಿಕೆಯ ವೆಂಡರ್ ಬೋರೇಗೌಡರಿಗೆ ಅದ್ಯಾಕೋ ಇಷ್ಟವಾಗುವುದಿಲ್ಲ. ಪೇಪರ್ ಲೋಟದಲ್ಲಿ ಕೊಟ್ಟ ಕಾಫಿಯನ್ನು ತಂದು ಟೇಬಲ್ಲಿನ ಮೇಲಿಟ್ಟು ಕುಡಿಯುವ ನೀರಿನ ಬಳಿಹೋಗಿ ಅಲ್ಲಿಟ್ಟಿರುವ ಉದ್ದುದ್ದದ ನೀರು ಕುಡಿಯುವ ಸ್ಟೀಲ್ ಲೋಟದ ತುಂಬ ನೀರು ಕುಡಿದು ಅದೇ ಲೋಟಕ್ಕೆ ಪೇಪರ್ ಲೋಟದ ಕಾಫಿಯನ್ನು ಬಗ್ಗಿಸಿಕೊಂಡು ನಿದಾನವಾಗಿ ಕುಡಿದರೆ ಅವರಿಗೇ ಅವರದೇ ಮನೆಯಲ್ಲಿ ಕುಡಿದಷ್ಟೇ ಆನಂದವಂತೆ. ಅವರು ಹೇಳಿದ ಮೇಲೆ ಅವರ ಮಾತು ನಮಗೆ ಯಾವ ಪರಿ ಭ್ರಮೆಯನ್ನು ಆವರಿಸಿತೆಂದರೆ ಅಷ್ಟು ದಿನ ಮನೆ ಕಾಫಿಯಂತೆ ರುಚಿಯಾಗಿದ್ದ ಅದು ನಂತರ ಕೇವಲ ಹಳ್ಳೀಮನೆ ಕಾಫಿಯಾಗಿಬಿಟ್ಟಿತ್ತು.

ಈಗ ಹಟ್ಟಿ ಕಾಫಿಗೆ ವಾಪಸ್ ಬರೋಣ.  ಅಲ್ಲಿ ಒಂದು ಕಾಫಿ ಅಂತ ನಾನು ಕೇಳಿದ ತಕ್ಷಣ ಆರು ರೂಪಾಯಿ ಕೊಡಿ  ಅನ್ನುತ್ತಾನೆ ಕ್ಯಾಶ್ ಕೌಂಟರಿನ ಹಿಂದೆ ಕುಳಿತಿರುವಾತ.  ಅರೆರೆ.....ಬೇರೆ ಕಡೆ ಕಾಫಿ ಬೆಲೆ ೮-೯-೧೦-೧೨ ಆಗಿರುವಾಗ ಇಲ್ಲಿ ಕೇವಲ ಆರು ರೂಪಾಯಿಗೆ ಸಿಗುತ್ತಲ್ಲ ಎಂದು ಮೊದಲಿಗೆ ಖುಷಿಯಾಗುತ್ತದೆ. ಈಗ ಪ್ರತಿಭಾರಿ ಕಾಫಿ ಕುಡಿಯಲು ಅಲ್ಲಿಗೆ ಹೋದಾಗಲೂ ಹೀಗೆ ಅನ್ನಿಸುವುದರಿಂದ ಖುಷಿ ಉಚಿತ.   ಟೋಪಿ ಹಾಕಿಕೊಂಡ ಮಾಣಿ ನಮ್ಮ ಕಣ್ಣ ಮುಂದೆ ಒಂದು ಗಾಜಿನ ಲೋಟವನ್ನು ಇಡುತ್ತಾನೆ.  ಅದನ್ನು ನೋಡಿದ ತಕ್ಷಣ  ಮತ್ತೆ ನನ್ನ ಬಾಲ್ಯದ ನೆನಪು ಗರಿಗೆದರುತ್ತದೆ. ಆಗೆಲ್ಲಾ ಸ್ಟೀಲ್ ಲೋಟಗಳಲ್ಲಿ ಕಾಫಿ ಕೊಡುತ್ತಿರಲಿಲ್ಲ. ಕೊಟ್ಟರೂ ದೊಡ್ಡ ದೊಡ್ಡ ಹೋಟಲ್ಲುಗಳಲ್ಲಿ ಮಾತ್ರ. ಪಿಂಗಾಣಿಯೂ ಇನ್ನೂ ಬಂದಿರಲಿಲ್ಲ. ಪ್ಲಾಸ್ಟಿಕ್ ಲೋಟ ಕಾಲಿಟ್ಟಿರಲಿಲ್ಲ.  ಆಗೆಲ್ಲಾ ಕೆಲಸಗಾರರು ಸುಲಭವಾಗಿ ಸಿಕ್ಕುತ್ತಿದ್ದರಿಂದ ಈ ಗಾಜಿನ ಲೋಟಗಳದೇ ದರ್ಭಾರು.  ನಾವು ಶ್ರೀರಾಮಪುರಂನ ಐದನೇ ಮುಖ್ಯರಸ್ತೆಯಲ್ಲಿರುವ ಮಂಗಳೂರು ಕೆಫೆಯಲ್ಲಿ ಬೈಟು ಕಾಫಿ ಎಂತ ಹೇಳಿ ಒಂದುವರೆ ರೂಪಾಯಿ ಕೊಟ್ಟರೆ ಮುಗೀತು. ಆರ್ಡರ್ ತೆಗೆದುಕೊಂಡ ಹೋಟಲ್ ಓನರ್  ಒಂದು ಬೈಟು ಕಾಫಿ..ಎಂದು ಹೇಳುತ್ತಿದ್ದ. ಮತ್ತೊಬ್ಬರು ಬಂದಾಗ ಇನ್ನೊಂದು ಬೈಟು.........ಎಂದು ರಾಗವಾಗಿ ಎಳೆಯುತ್ತಿದ್ದ.  ಹೀಗೆ ಹತ್ತಾರು ಬೈಟುಗಳ ಆರ್ಡರ್ ಬಂದರೂ ಇನ್ನೊಂದು ಬೈಟು.........ಎನ್ನುವ ಅವನ ರಾಗದಲ್ಲಿ ವ್ಯತ್ಯಾಸವಾಗುತ್ತಿರಲಿಲ್ಲ. ಅಷ್ಟರಲ್ಲಿ ಒಳಗೆ ಗಳಗಳ ಸದ್ದು. ಲೋಟಗಳನ್ನು ಜೋರು ಬರುವ ನೀರಿನಲ್ಲಿ ತೊಳೆದು ದೊಡ್ಡದಾದ ಟ್ರೇನ ಈ ತುದಿಯಿಂದ ಆ ತುದಿಗೆ ತಲೆಕೆಳಕಾಗಿ ಮಾಡಿದ ಒಂದೊಂದೇ ಲೋಟಗಳನ್ನು ತಳ್ಳುವಾಗಿನ ದೃಶ್ಯವನ್ನು ನೋಡುವಾಗಲೇ ಕಾಫಿ ಸ್ವಾದದ ಅಮಲು.  ಕೆಲವೊಮ್ಮೆ ನಾವು ಹೊರಗಿದ್ದು ಆ ದೃಶ್ಯ ಕಾಣದಿದ್ದರೂ ತೊಳದ ನಂತರದ ಟ್ರ್‍ಏನಲ್ಲಿ ಒಂದೊಂದು ಲೋಟವನ್ನು ತಳ್ಳುವಾಗಿನ ಶಬ್ದವೂ ಕೂಡ ಮುಂದೆ ಅದೇ ಲೋಟದಲ್ಲಿ ಬರುವ ಕಾಫಿಯ ರುಚಿಯಲ್ಲಿ ತೇಲುವಂತೆ ಮಾಡುತ್ತಿತ್ತು.  ಕಣ್ಣಿಗೆ ಕಾಣಿಸಿದ ಈ ದೃಶ್ಯಗಳಿಗೂ ಮತ್ತು ಕಿವಿಗೆ ಕೇಳಿಸಿದ ಸರರ್..ರ್....ಎನ್ನುವ ಗಾಜಿನ ಲೋಟದ ಶಬ್ದಕ್ಕೂ ನಾಲಗೆಗೆ ಸೋಕುವ ಕಾಫಿಯ ರುಚಿಗೂ ಅದೆಂಥ ಕನೆಕ್ಷನ್ ಇತ್ತೋ ನನಗೆ ಗೊತ್ತಿಲ್ಲ. ಇಷ್ಟೆಲ್ಲಾ ಆದ ಮೇಲೆ  ಗಾಜಿನ ಲೋಟಕ್ಕೆ ಕಾಲು ಭಾಗ ಡಿಕಾಕ್ಷನ್ ಇನ್ನುಳಿದ ಮುಕ್ಕಾಲು ಭಾಗಕ್ಕೆ ನಿದಾನವಾಗಿ ಬಿಸಿಹಾಲನ್ನು ಹಾಕುತ್ತಿದ್ದರೆ ಕೊನೆಯಲ್ಲಿ ಉಕ್ಕಿದ ನೊರೆಯನ್ನು ಬ್ಯಾಲೆನ್ಸ್ ಮಾಡುತ್ತಾ ಲೋಟದ ತುಂಬಾ ಕಾಫಿಯನ್ನು ತುಂಬಿಸುತ್ತಲೇ ನೊರೆಯ ಕಲಾಕೃತಿಯ ಗೋಪುರವನ್ನು ಮಾಡಿ ನಮ್ಮ ಕೈಗೆ ಕೊಡುತ್ತಾನಲ್ಲಾ!  ಆ ಚಳಿಗಾಲದ ಚಳಿಯಲ್ಲಿ ನಿದಾನವಾಗಿ ನೊರೆಯನ್ನು ಹೀರುತ್ತಾ..........ಕಾಫಿಯ ಮೊದಲ ಗುಟುಕು ನಾಲಗೆಗೆ ಸೋಕುವಾಗ ಆಹಾ! ಆ ಸ್ವರ್ಗ ಸುಖ!  ಇಲ್ಲಿ ಹಟ್ಟಿ ಕಾಫಿಯ ಮಾಣಿ ಕೊಡುವ ಗಾಜಿನ ಲೋಟವೂ ತನ್ನ  ಹಳೆಯ ತಾತ ಮುತ್ತಾತಂದಿರುಗಳಾದ ಪಟ್ಟಿ ಗಾಜಿನ ಲೋಟಗಳನ್ನು ನೆನಪಿಸುತ್ತದೆ.

ಹಟ್ಟಿ ಕಾಫಿ ಕುಡಿದು ಮುಗಿಸುತ್ತಿದ್ದಂತೆ ಹೇಮಾಶ್ರೀಗೂ ಆ ಲೋಟ ಇಷ್ಟವಾಗಿಬಿಟ್ಟಿತ್ತು. ಇಂಥದ್ದೇ ಗಾಜಿನ ಲೋಟವನ್ನು ಮನೆಗೆ ತನ್ನಿ ಅಂದುಬಿಟ್ಟಳು.  ಇತ್ತ ನಮ್ಮ ಮನೆಯಲ್ಲೂ ಅನೇಕ ಹೇಮಾ ತುಂಬಾ ಚೆನ್ನಾದ ಕಾಫಿ ಮಾಡಿ ಕೊಡುತ್ತಾಳೆ.  ಅಷ್ಟು ಚೆನ್ನಾದ ಕಾಫಿಗಾಗಿ ನಾವು ಹುಡುಕಿದ ಕಾಫಿಪುಡಿ ಅಂಗಡಿಗಳು ಒಂದೆರಡಲ್ಲ..ಕೊತಾಸ್, ಬಾಯರ್ಸ್,.......ಕೊನೆಗೆ ಮಲ್ಲೇಶ್ವರಂನ ಒಂಬತ್ತನೇ ಕ್ರ್‍ಆಸಿನಲ್ಲಿರುವ ನಾಯಕ್ ಕಾಫಿ ಅಂಗಡಿಯಲ್ಲಿನ ಕಾಫಿಪುಡಿಯು ನಮಗೆ ಚೆನ್ನಾಗಿ ಹೊಂದಿಕೆಯಾಗಿಬಿಟ್ಟಿತ್ತು. ಮೊದಲೆರಡು ದಿನ ಹದ ತಪ್ಪಿದರೂ ನಂತರ ಕಾಫಿ ಫಿಲ್ಟರಿಗೆ ಎಷ್ಟು ಬಿಸಿನೀರು ಮತ್ತು ಎಷ್ಟು ಕಾಫಿಪುಡಿಹಾಕಿದರೆ ಸರಿಯಾದ ಅರ್‍ಓಮದ ಫೀಲ್ ಬರುವ ಡಿಕಾಕ್ಷನ್ ಬರುತ್ತದೆ ಎನ್ನುವುದನ್ನು ಚೆನ್ನಾಗಿ ಅರಿತಿರುವುದರಿಂದ ನನಗೆ ಮನೆಯಲ್ಲಿನ ಕಾಫಿ ತುಂಬಾ ಇಷ್ಟ.  [ಟೀಯನ್ನು ನಾನು ಅವಳಿಗಿಂತ ಚೆನ್ನಾಗಿ ಮಾಡುತ್ತೇನಾದ್ದರಿಂದ ನನ್ನ ಬ್ಲಾಗ್ ಮತ್ತು ಇತರ ಗೆಳೆಯರು ಮನೆಗೆ ಬಂದಾಗ ಅದರ ರುಚಿಯನ್ನು ನೋಡಿರುತ್ತಾರೆ ಸದ್ಯ ಆ ಇಲ್ಲಿ ಟೀ ವಿಚಾರ ಬೇಡ.] ನಾನು ಆ ಗಾಜಿನ ಕಾಫಿಲೋಟಗಳಿಗಾಗಿ ನಮ್ಮ ಸುತ್ತ ಮುತ್ತ ಹತ್ತಾರು ಕಡೆ ಹುಡುಕಿದೆ ಸಿಗಲಿಲ್ಲ. ಕೇಳಿದರೆ ಸಿಟಿಯಲ್ಲಿ ಸಿಗುತ್ತದೆ ಎಂದರು.  ಒಂದು ದಿನ ಬಿಡುವು ಮಾಡಿಕೊಂಡು ಸಿಟಿಮಾರ್ಕೆಟ್, ಬಿವಿಕೆ ಆಯಂಗಾರ್ ರೋಡ್ ಎಲ್ಲಾ ಓಡಾಡಿದಾಗ ನನಗೆ ಬೇಕಾದ ಆ ಗ್ಲಾಸುಗಳು ಸಿಕ್ಕವು.  ಅದನ್ನು ನೋಡಿದ ಹೇಮಾಶ್ರೀ ಕೂಡ ತುಂಬಾ ಖುಷಿಪಟ್ಟಳು.  ಅವತ್ತಿನಿಂದ ನಮ್ಮ ಮನೆಯಲ್ಲಿ ಗಾಜಿನ ಲೋಟದಲ್ಲಿ ಕಾಫಿಯ ಸ್ವಾದ...ನಾದ....ಭಾವಾನಾತ್ಮಕ ಆನಂದ.

ಒಂದೆರಡು ದಿನಗಳಲ್ಲೇ ನನ್ನಲ್ಲಿ ಸೊಗಸಾದ ದುರಾಸೆ ಹುಟ್ಟಿಕೊಂಡಿತ್ತು. ಅದಕ್ಕೆ ಕಾರಣವೂ ಉಂಟು. ಹಟ್ಟಿ ಕಾಫಿಯಲ್ಲಿ  ಆರು ರೂಪಾಯಿಗೆ ಆ ಗಾಜಿನ ಲೋಟದ ಮುಕ್ಕಾಲು  ಭಾಗವನ್ನು ಮಾತ್ರ ಕಾಫಿ ಕೊಡುವುದು!  ನಾವು ಕೊಡುವ ಹಣಕ್ಕೆ ಅಷ್ಟು ಸಾಕು, ಅದು ಅರೋಗ್ಯಕ್ಕೂ ಒಳ್ಳೆಯದು ಎನ್ನುವುದು ಅವರ ಭಾವನೆಯಿರಬಹುದು. ಅದೇ ಭಾವನೆ ಹೇಮಾಶ್ರೀಗೂ ಬಂದುಬಿಟ್ಟಿರಬೇಕು  ಅದಕ್ಕೆ ಮನೆಯಲ್ಲೂ ಕೂಡ ಗಾಜಿನ ಲೋಟದಲ್ಲಿ ಅಷ್ಟೇ ಪ್ರಮಾಣದ ಕಾಫಿ ಕೊಡುತ್ತಾಳೆ. 

"ಇದರ ತುಂಬಾ ಕೊಡು" ಎಂದೆ. 

"ಕೊಡೊಲ್ಲಾ ಕಣ್ರಿ, ನಿಮಗೆ ಇಷ್ಟು ಸಾಕು ಸುಮ್ಮನೇ ಕುಡೀರಿ" ಅಂದಳು.

"ಅಲ್ಲಾ ಕಣೇ, ಈ ಲೋಟದಲ್ಲಿ ಕುಡಿಯುವ ಆನಂದವೇ ಬೇರೆ, ಅದಕ್ಕಾಗಿಯೇ ಅಲ್ಲವೇ ಸಿಟಿಯೆಲ್ಲಾ ಹುಡುಕಿ ತಂದಿದ್ದು., ಇದರ ತುಂಬಾ ಕಾಫಿಯನ್ನು ಹಾಕಿದಾಗ ನೋಡಲು ತುಂಬಾ ಚೆನ್ನಾಗಿರುತ್ತದೆ. ಮತ್ತೆ ಪೂರ್ತಿ ಕುಡಿದಾಗ ಸಿಗುವ ಸಂತೃಪ್ತಿಯನ್ನು ಬೇರೆ" ಅದಕ್ಕಾಗಿ ಪ್ಲೀಸ್ ನನಗೆ ಇನ್ನು ಮುಂದೆ ಲೋಟದ ತುಂಬ ಕಾಫಿ ಕೊಡು" ಎಂದೆ.

    "ನೀವು ಈ ಗಾಜಿನ ಲೋಟಗಳನ್ನು ತಂದಿದ್ದು ಈ ಕಾರಣಕ್ಕೋ? ನೋಡುವುದಕ್ಕೆ ಚೆಂದ ಕಾಣುತ್ತದೆ ಎನ್ನುವ ಮಾತ್ರಕ್ಕೆ ಲೋಟ ತುಂಬಾ ಕಾಫಿ ಕೊಡುವುದಕ್ಕಾಗುವುದಿಲ್ಲ. ಬೇಕಾದರೆ ಒಮ್ಮೆ ಪೂರ್ತಿ ಕೊಡುತ್ತೇನೆ, ಅದರ ಫೋಟೊ ತೆಗೆದು ಕಂಪ್ಯೂಟರಿಗೆ ಸ್ಕ್ರೀನ್ ಸೇವರ್ ಮಾಡಿಕೊಂಡು  ನೋಡುತ್ತಾ ಆನಂದಪಡಿ, ಬೇಡ ಅಂದೋರು ಯಾರು?  ಮತ್ತೆ ಪೂರ್ತಿ ಬೇಕು ಅಂತ ಹಟ ಮಾಡಿದ್ರೆ ಈ ಲೋಟವನ್ನು  ಬಾಕ್ಸಿಗೆ ಹಾಕಿಟ್ಟು ಮೇಲೆ ಇಟ್ಟುಬಿಡುತ್ತೇನೆ. ಅಥವ ಯಾರಿಗಾದ್ರು ಕೊಟ್ಟುಬಿಡುತ್ತೇನೆ ಅಷ್ಟೇ" ಅಂತ ಅಂದುಬಿಟ್ಟಳಲ್ಲ!

       ವಿಧಿಯಿಲ್ಲದೇ ಅತಿಯಾಸೆ ಗತಿಗೇಡು ಅಂದುಕೊಳ್ಳುತ್ತಾ ಮುಕ್ಕಾಲು ಕಾಫಿ ಕಾಲು ಭಾಗ ನೊರೆತುಂಬಿದ  ಆ ಗಾಜಿನ ಲೋಟದಲ್ಲಿ  ಕಾಫಿ ಕುಡಿಯುತ್ತಾ ಆನಂದಿಸುತ್ತಿದ್ದೇನೆ.


ಚಿತ್ರಗಳು ಮತ್ತು ಲೇಖನ.
ಶಿವು.ಕೆ

70 comments:

Mahesh said...

ಗಾಜಿನ ಲೋಟದಲ್ಲಿ ಕಾಫಿ ಪುರಾಣ ತುಂಬಾ ಚೆನ್ನಾಗಿದೆ.

PARAANJAPE K.N. said...

ನಿಮ್ಮ ಕಾಫೀ ಪುರಾಣ ಚೆನ್ನಾಗಿದೆ. ಕಾಫೀ ಪೌಡರ್ ಆಯ್ಕೆ, ಗಾಜಿನ ಲೋಟಕ್ಕೆ ಹುಡುಕಾಟ, ಹಟ್ಟಿ ಕಾಫೀಯ ರುಚಿ ಓದಿ, ಈಗಲೇ ಹೋಗಿ ಕಾಫೀ ಕುಡಿಯಬೇಕೆನಿಸಿದೆ. ಜೊತೆಗೆ ಚಿಕ್ಕಮಗಳೂರಿನ ಕಾಫೀ ಪುಡಿ ಅ೦ಗಡಿ ಮು೦ದೆ ಹಿ೦ದೆಲ್ಲ ಇರುತ್ತಿದ್ದ ಬೋರ್ಡು "ನಿಮ್ಮ ಬೀಜವನ್ನು ನಿಮ್ಮ ಮು೦ದೆಯೇ ಹುರಿದು ಪುಡಿ ಮಾಡಿ ಪ್ಯಾಕ್ ಮಾಡಿ ಕೊಡಲಾಗುವುದು" ಕೂಡ ನೆನಪಿಗೆ ಬ೦ತು.

ಮನಸಿನ ಮಾತುಗಳು said...

ಶಿವಣ್ಣ,

ಸಕ್ಕತ್ತಾಗಿ ಬರೆದಿದ್ದೀರಿ.ನೊರೆ ನೊರೆ ಕಾಫಿ ಕುಡಿದಷ್ಟೇ ಖುಷಿ ...:-)

Pradeep said...

ಹ್ಹ... ಹ್ಹ ... ಚೆನ್ನಾಗಿದೆ ಕಣ್ರೀ :)

Anonymous said...

Chennagide!

Coffee priyarige coffee kudidashte khushi aagutte!

BhaShe

Chaithrika said...

ಈಗಲೇ ಕಾಫಿ ಕುಡಿಯಬೇಕು ಅನ್ನಿಸುತ್ತಾ ಇದೆ.

ಮನಮುಕ್ತಾ said...

:):)...

shivu.k said...

Mahesh,

thanks.

sunaath said...

ಈಗಲೂ ಸಹ ಹಳ್ಳಿಗಳಲ್ಲಿರುವ ಚಹಾ ಅಂಗಡಿಗಳಲ್ಲಿ ಗ್ಲಾಸುಗಳಲ್ಲೇ ಚಹಾ ಕೊಡುತ್ತಾರೆ. ಸಿಂಗಲ್ ಚಹಾದ ಗ್ಲಾಸುಗಳು ಸಣ್ಣಗಿರುತ್ತವೆ. ಡಬಲ್ ಚಹಾ ಗ್ಲಾಸುಗಳು ದೊಡ್ಡಗಿರುತ್ತವೆ!

shivu.k said...

ಪರಂಜಪೆ ಸರ್,

ಕಾಫಿ ಪುರಾಣ ಇಷ್ಟಪಟ್ಟಿದ್ದೀರಿ. ನನಗೆ ಗಾಜಿನ ಲೋಟದ ಹುಡುಕಾಟ ತಡಕಾಟ....ಮತ್ತೆ ನಾನು ಕೂಡ ನನ್ನ ಚಿಕ್ಕಮಗಳೂರಿಗೆ ಹೋದಾಗ ಅಲ್ಲಿ ನನ್ನ ಗೆಳೆಯರ ಮನೆಯ ಕಾಫಿ ಕುಡಿದಿದ್ದೇನೆ. ಅಲ್ಲಿನ ಕಾಫಿಗೆ ಯಾವುದೂ ಹೋಲಿಕೆಯಿಲ್ಲ. ಮತ್ತೆ ಕೊನೆಗೂ ನಮ್ಮ ಮನೆಯಲ್ಲಿ ಅಂಥ ಕಾಫಿ ಮಾಡಿಕೊಂಡು ಕುಡಿಯಲು ಯಶಸ್ವಿಯಾಗಿದ್ದೇವೆ. ಇದಕ್ಕಿಂತ ಕೊಂಚ ತರಲೆಯೆನಿಸಿದ ಟೀ ವಿಚಾರವನ್ನು ಮುಂದೆ ಬರೆಯಬೇಕಿದೆ...
ಧನ್ಯವಾದಗಳು.

shivu.k said...

ದಿವ್ಯ,

ನಿನಗೆ ಹಾಗೆ ಅನ್ನಿಸಿದ್ದಕ್ಕೆ ಥ್ಯಾಂಕ್ಸ್..ಮತ್ತೆ ಮುಂದೆ ಟೀ ವಿಚಾರ ಬಲು ಮಜವಿದೆ..ಅದನ್ನು ಸಧ್ಯದಲ್ಲೇ ಬರೆಯುತ್ತೇನೆ..

ಧನ್ಯವಾದಗಳು.

shivu.k said...

ಪ್ರದೀಪ್,

ಥ್ಯಾಂಕ್ಸ್..

shivu.k said...

ಭಾಷೆ,

ನಾನು ಕಾಫಿ ಪ್ರಿಯನೇ...ಥ್ಯಾಂಕ್ಸ್.

shivu.k said...

ಚೈತ್ರಿಕಾ,

ಬೇಗನೇ ಹೋಗಿ ಈ ಚಳಿಯಲ್ಲಿ ಬಿಸಿಕಾಫಿ ಕುಡಿಯುತ್ತಾ...ಮತ್ತೊಮ್ಮೆ ಓದಿ ಆಗ ಕಾಫಿ ಮತ್ತೂ ರುಚಿಯೆನಿಸಬಹುದು..ಥ್ಯಾಂಕ್ಸ್.

shivu.k said...

ಮನಮುಕ್ತ...

ಥ್ಯಾಂಕ್ಸ್.

shivu.k said...

ಸುನಾಥ್ ಸರ್,

ನಿಮ್ಮ ಧಾರವಾಡದಲ್ಲೂ ನಾನು ಚಹ ಕುಡಿದಿದ್ದು ನೀವು ಹೇಳಿದ ಸಣ್ಣ ಗಾಜಿನ ಲೋಟದಲ್ಲೇ ಆಗ ನನಗೇ ಈ ಲೇಖನ ಬರೆಯಲೇಬೇಕಿನಿಸಿದ್ದು. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಸುಮ said...

ಕಾಫಿಪುರಾಣ ಚೆನ್ನಾಗಿದೆ.

shivu.k said...

ಸುಮಾ ಮೇಡಮ್,
ಥ್ಯಾಂಕ್ಸ್..

shravana said...

ಇಲ್ಲಿ ಮಳೆ.. ನಿಮ್ಮ ಲೇಖನ ಒಂದು ಬಿಸಿ ಬಿಸಿ ಕಾಫಿಗಾಗಿ ಖಾತರಿಸುವಂತೆ ಮಾಡಿದೆ !

Dr.D.T.Krishna Murthy. said...

ಶಿವು;ನಾವು ಮೂಲತಹ ಚಿಕ್ಕಮಗಳೂರಿನವರು.ನೀವು ಕಾಫಿಯ ಬಗ್ಗೆ ಇಷ್ಟೆಲ್ಲಾ ಹೇಳಿದ ಮೇಲೆ ನಿಮ್ಮಮನೆಗೆ ಕಾಫೀ ಕುಡಿಯೋಕೆ ಬರಬೇಕು ಅನ್ನಿಸುತ್ತಿದೆ.ಯಾವಾಗ ಬರೋಣ ಹೇಳಿ.

ಚುಕ್ಕಿಚಿತ್ತಾರ said...

nice coffee puraana...!!

umesh desai said...

ಶಿವು ಅಸಾಧ್ಯರಪ್ಪ ನೀವು ಕಾಫಿಬಗ್ಗೆ ಇಷ್ಟು ಸೊಗಸಾಗಿ ಹೇಳಬಹುದು ಮತ್ತು ಅದು ನಿಮ್ಮಿಂದ ಮಾತ್ರ ಸಾಧ್ಯ..!
ನಾ ಕಾಫಿ ದಿನಕ್ಕೆ ಎರಡು ಬಾರಿ ಕುಡಿಯುತ್ತೇನೆ..ಆಶ್ರಮದ ಹತ್ರ ಇರೋ ಎಸ್ ಎಲ್ ವಿ ಯಲ್ಲಿ ಕಾಜಿನ ಗಿಲಾಸಿನಲ್ಲಿ
ಕುಡಿದಿದ್ದು ನೆನಪು.ಡಾಕ್ಟರ್ ಜೊತೆ ನಾನೂ ಬರಲೇನು ಕಾಫಿಕುಡೀಲಿಕ್ಕೆ.....

shivu.k said...

ಶ್ರವಣ ಸರ್,

ಮಳೆಯಲ್ಲಿ ನನ್ನ ಲೇಖನವನ್ನು ಓದಿದ ಕೂಡಲೇ ಕಾಫಿ ಕುಡಿಯಬೇಕೆನ್ನುವ ಪ್ರೇರಣೆ ನೀಡಿದರೆ ನಾನು ಬರೆದ ಅನುಭವ ಲೇಖನ ಸಾರ್ಥಕವಾದಂತೆ ಎಂದು ನನ್ನ ಭಾವನೆ...ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್..

shivu.k said...

ಡಾ.ಕೃಷ್ಣಮೂರ್ತಿ ಸರ್,

ನಿಮ್ಮ ಚಿಕ್ಕಮಗಳೂರಿಗೆ ಹೋಗುವುದೆಂದರೆ ನನಗೆ ಮಹಾನ್ ಆನಂದ ಮತ್ತು ಈಗಿನ ಚಳಿಯಲ್ಲಿ ಅಲ್ಲಿನ ಬಿಸಿಕಾಫಿ ರುಚಿಯ ಅರೋಮವನ್ನು ಇಲ್ಲಿ ವಿವರಿಸಲಾಗುವುದಿಲ್ಲ. ಅದನ್ನು ಅನುಭವಿಸಿಯೇ ತೀರಬೇಕು. ನೀವು ನಮ್ಮ ಮನೆಗೆ ನಿಮ್ಮದೇ ಊರಿನ ಆರೋಮ ಸಿಗುವಂತ ಕಾಫಿಕುಡಿಯಲು ಕೂಡಲೇ ಬನ್ನಿ. ನೀವು ಬರುತ್ತೀರೆಂದರೆ ಅದಕ್ಕಿಂತ ಸೌಭಾಗ್ಯ ಬೇರೇನಿದೆ..
ಖುಷಿಯಿಂದ ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.

shivu.k said...

ಚುಕ್ಕಿ ಚಿತ್ತಾರ...

ಥ್ಯಾಂಕ್ಸ್.

shivu.k said...

ಉಮೇಶ್ ದೇಸಾಯ್ ಸರ್,

ಈ ಇಡೀ ಲೇಖನ ನೇರವಾಗಿ ಅನುಭವದಿಂದ ಬರೆದಿದ್ದು. ಅದಕ್ಕೆ ನಿಮಗೆ ಇಷ್ಟವಾಗಿರಬೇಕು. ನೀವು ಎರಡು ಭಾರಿ ಕಾಫಿ ಕುಡಿಯುತ್ತಿರಾದರೆ ನಾನು ಮೂರು ಭಾರಿ ಕುಡಿಯುತ್ತೇನೆ. ನಡುವೆ ಟೀ ಎಂಟ್ರಿ ಪಡೆಯುತ್ತದೆ. ಅಂದಹಾಗೆ ಟೀ ಬಗ್ಗೆ ಮತ್ತೊಂದು ಲೇಖನವಿದೆ. ಇದಕ್ಕಿಂತ ಕೊಂಚ ತರಲೇಯದು...
ನೀವು ಡಾ.ಕೃಷ್ಣಮೂರ್ತಿಯವರ ಜೊತೆಗೂಡಿ ಕಾಫಿ ಕುಡಿಯಲು ನಮ್ಮ ಮನೆಗೆ ಖಂಡಿತ ಬನ್ನಿ. ನೋಡೋಣ ನನ್ನ ಲೇಖನವನ್ನು ಓದಿ ಕಾಫಿಗಾಗಿ ಇನ್ನೂ ಯಾರು ಯಾರು ಬರುತ್ತಾರೋ...
ಕಾಫಿ ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

ಸಾಗರದಾಚೆಯ ಇಂಚರ said...

ಸರ್
ಕಾಫಿ ಪುರಾಣ ಎಷ್ಟು ಸೊಗಸಾಗಿ ಬರೆದಿದ್ದಿರಾ
ತುಂಬಾ ಇಷ್ಟ ಆಯಿತು ಓದೋಕೆ

ಸುಧೇಶ್ ಶೆಟ್ಟಿ said...

coffee puraaNa odhuvudhakke kushi aayithu... aadhare nanage coffee ishtavE aagalla... :)

Tea puraaNakke kaayutta iddene :P

Ittigecement said...

ಶಿವು ಸರ್...

ಕಾಫೀ ಕಥೆ ತುಂಬಾ ಚೆನ್ನಾಗಿದೆ...

ಇಲ್ಲಿ ಈಗ ಛಳಿಯಲ್ಲಿ ಬೆಚ್ಚಗೆ ಒಂದು ಗುಟುಕು ಕಾಫಿ ಬೇಕೆನಿಸಿತು..

ಜೈ ಹೋ...

shivu.k said...

ಗುರುಮೂರ್ತಿ ಹೆಗಡೆ ಸರ್,

ಕಾಫಿ ವಿಚಾರವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

shivu.k said...

ಸುಧೇಶ್,

ನನ್ನ ಕಾಫಿ ಲೇಖನವನ್ನು ಓದಿದ ಮೇಲೆ ನಿಮಗೆ ಕಾಫಿ ಇಷ್ಟವಾಗಲೇಬೇಕು..ಕುಡಿಯಲು ಪ್ರಯತ್ನಿಸಿ..

ಟೀ ಪುರಾಣ ಇಷ್ಟರಲ್ಲೇ ಬರುತ್ತದೆ...
ಧನ್ಯವಾದಗಳು.

Soumya. Bhagwat said...

nice article sir..:)ishta aytu.. :)

ಪಾಚು-ಪ್ರಪಂಚ said...

ಒಳ್ಳೇ ಟೈಮ್ ಕಣ್ರೀ ಶಿವೂ ಅವರೇ, ನಮ್ಮ ಬೆಂಗಳೂರಿನಲ್ಲಿ ಮಳೆ ಬಿಡ್ತಾನೆ ಇಲ್ಲ..ಈ ಮಧ್ಯೆ ನಿಮ್ಮ ಕಾಪೀ ಪುರಾಣ..!!
ಮಳೆ ಜೊತೆ ಕಾಫಿ...!!
ಸೊಗಸಾಗಿದೆ..:-)

Gubbachchi Sathish said...

ಪಂಚರಂಗಿಗಳು, ಕಾಫಿಗಳು...
ನಮಗೂ ಕಾಫಿ ಕುಡಿಯಬೇಕು ಅನಿಸ್ತಿದೆ.

ಚೆನ್ನಾಗಿದೆ ಕಾಫಿಯಾನ!

ಜಲನಯನ said...

ಶಿವು..ಈ ಸರ್ತಿ ಈ ಕಾಫಿ ಅದೂ ಇದೇ ತಿಂಗಳಲ್ಲಿ ನಿಮ್ಮ ಜೊತೆ ಕುಡಿಯೋದಂತೂ ಖಂಡಿತಾ..ನನಗೆ ಸಬೂಬು ಹೇಳಬೇಡಿ...ಹೂಂ..ಮನೆಗೆ ಬಂದ್ರೆ ಹೇಮಾಶ್ರೀ ಕೈ ರುಚಿಯ ಅರ್ಧ ಲೋಟ ಕಾಫೀನೂ ಓಕೆ...ಆದ್ರೆ ಹೇಮಾಶ್ರೀ ಇಷ್ಟೊಂದು ಜೋರು ಮಾಡಿದ್ರಾ..ನನಗೆ ಡೌಟು..ನೀವು ಈ ಪೋಸ್ಟ್ ಗೆ ಟಿ.ಆರ್.ಬಿ. ಜಾಸ್ತಿ ಮಾಡೋಕೆ ..ಸೇರ್ಸಿ ಏರ್ಸಿ ಬರ್ದಿಲ್ಲ ತಾನೇ...?? ಹಹಹ..ಅಂದಹಾಗೆ ಟಿ.ಆರ್.ಬಿ. (ಟೋಟಲ್ ರೆಸ್ಪಾಂಡಿಂಗ್ ಬ್ಲಾಗರ್ಸ್)...ಲೇಖನ ಮಸ್ತು..

ಶರಶ್ಚಂದ್ರ ಕಲ್ಮನೆ said...

ಕಾಫಿಯ ಹದವಾದ ಬಿಸಿ, ಹಾಗು ಅದರ ಘಮವನ್ನು ಸವಿದಷ್ಟೇ ಇಷ್ಟವಾಯಿತು ನಿಮ್ಮ ಬರಹ ಶಿವು ಸರ್ :)

Unknown said...

ಹಹಹ.. ಚೆನ್ನಾಗಿದೆ ಕಾಫಿ ಪುರಾಣ..

ನಾನು ಮೊದಲು ಬೆಂಗಳೂರಿಗೆ ಬಂದಿದ್ದಾಗ ಯಾವ್ದೋ ಹೋಟೆಲ್ ಒಂದರಲ್ಲಿ ನನ್ನ ಅತ್ತೆ ಮಗ ನನಗೆ ಕಾಫಿ ಕುಡಿಸಿದ್ದ.. ಅಲ್ಲಿ ಆಗ ಕಾಫಿಗೆ ೧೦ ರುಪಾಯಿ.. ಒಂದು ಪಿನ್ಗಾಣಿಯಲ್ಲಿ ಸಕ್ಕರೆ, ಇನ್ನೊಂದರಲ್ಲಿ ಹಾಲು, ಇನ್ನೊಂದರಲ್ಲಿ ಡಿಕಾಕ್ಷನ್ನು ಎಲ್ಲಾ ನೋಡಿ ನಾನು ತಲೆ ಕೆಡಿಸಿ ಕೊಂಡಿದ್ದೆ.. "ಹತ್ತು ರುಪಾಯಿ ಕೊಡೋದಲ್ದೆ ಕಾಫಿ ನಾವೇ ಮಾಡ್ಕೊಬೇಕ " ಅಂತ ಸರ್ವ್ ಮಾಡೋವ್ನಿಗೆ ಬೈದು ಆತನ ಕೈಲೆ ಎಲ್ಲಾ ಮಿಕ್ಸ್ ಮಾಡಿಸಿಕೊಂಡು ಕುಡಿದಿದ್ದೆ..

ಮತ್ತೆ ಮನೆಯಲ್ಲಿ ಗಾಜಿನ ಲೋಟ ನಂಗೆ ಮಾತ್ರ .. ನನ್ನ ಹೆಂಡತಿಯ ಪ್ರಕಾರ ಗಾಜಿನ ಲೋಟ ಉಪಯೋಗಿಸೋದು "ಸುರಪಾನಕ್ಕೆ" ಮಾತ್ರ!!!! ಅದಕ್ಕೆ ಆಕೆಗೆ ಪಿಂಗಾಣಿಯ ಥರೆವಾರಿ ಲೋಟಗಳು ಇಷ್ಟ.. ನಾನು ಗಾಜಿನ ಲೋಟದಲ್ಲಿ ಕಾಫಿ ಕುಡಿಯೋದನ್ನು ಆಕೆ ಅದೇನೋ ಅನುಮಾನದಿಂದ ನೋಡಿದ್ದಕ್ಕೆ (ಹಿಹಿಹಿ) ಈಗೀಗ ನಾನೂ ಪಿಂಗಾಣಿ ಲೋಟಕ್ಕೆ ಮೊರೆ ಹೋಗಿದ್ದೇನೆ..::-)



ಒಟ್ಟಿನಲ್ಲಿ ಉತ್ತಮ ಬರಹ..

balasubramanya said...

ಶಿವೂ ಕಾಕತಾಳಿಯ ಅಂದ್ರೆ ನಾನು ಕಾಫಿ ಕುಡೀತ ನಿಮ್ಮ ಕಾಫಿ ಪುರಾಣ ಓದಿ ನನ್ನ ಕಾಫಿ ಎಂಜಾಯ್ ಮಾಡಿದೆ .ಮೊದಲೇ ಕಾಫಿ ಪ್ರಿಯ ನಾನು ನಾನು ಸಹ ಈಗ ಗಾಜಿನ ಲೋಟ ಹುಡುಕಲು ಶುರುಮಾಡ್ಲಾ ಅನ್ನಿಸಿದೆ, ಸುಂದರ ಸರಾಗ ಬರಹ ಇದೆ ಶಿವೂ ರುಚಿಯಾದ ಸ್ಪೆಷಲ್ ಕಾಫಿ ಚೆನ್ನಾಗಿದೆ.

jithendra hindumane said...

ಕಾಫಿ ಪ್ರಿಯನಾದ ನನಗೆ ನಿಮ್ಮ ಕಾಫಿ ಲೇಖನ ಇಷ್ಟ ಆಯ್ತು.

ಹಳ್ಳಿ ಹುಡುಗ ತರುಣ್ said...

sir chenagide... nimma gajina lotada coffee kate keli nanu saha gajina lotadalli coffe kudibeku annistide... :)

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ said...

ತುಂಬಾ confusion ಬೇಡ ಅರ್ಧ ಕಪ್ಪು ಕಾಪಿ ಕುಡ್ಕೊ ಪೂರ್ತಿ ಕಪಿ ಯಾರಿಗೆ ಬೇಕು ಅನ್ನೋ ಪಂಚರಂಗಿ ಫಿಲಂ ಹಾಡು ನೆನಪಿಗೆ ಬಂತು ನಿಮ್ಮ ಶ್ರೀಮತಿ ಮಾತು ಕೇಳಿ ...ಚನ್ನಾಗಿದೆ ಬರಹ ಸರ್...
--

Snow White said...

:) :)

b.saleem said...

ಶಿವು ಸರ್,
ಗಾಜಿನ ಲೊಟದಲ್ಲಿ ಕಾಫಿ ಕುಡಿಯೊದು ಎಷ್ಟೋಂದು ಮಜವಾಗಿದೆ, ನಿಮ್ಮ ಮನೆಗೆ ಬಂದಾಗ ಗಾಜಿನ ಲೊಟದಲ್ಲೆ ಕಾಫಿ ಕೊಡಿ.

shivu.k said...

ಪ್ರಕಾಶ್ ಹೆಗಡೆ ಸರ್,

ಕಾಫಿಯ ವಿಚಾರ ಇಷ್ಟವಾಗಿದ್ದಕ್ಕೆ ಥ್ಯಾಂಕ್ಸ್.

shivu.k said...

ಸೌಮ್ಯ ಮೇಡಮ್,

ಥ್ಯಾಂಕ್ಸ್..

shivu.k said...

ಪಾಚು-ಪ್ರಪಂಚದ ಪ್ರಶಾಂತ್ ಭಟ್,

ಒಳ್ಳೆಯ ಮಳೆಯಲ್ಲಿ ಒಳ್ಳೆಯ ಕಾಫಿ ಕುಡಿಯಲು ನಿಜಕ್ಕೂ ಒಂಥರ ಖುಷಿ ಅಲ್ಲವೇ...ನಾನು ಇಷ್ಟಪಡುತ್ತೇನೆ..

ಥ್ಯಾಂಕ್ಸ್.

shivu.k said...

ಗುಬ್ಬಚ್ಚಿ ಸತೀಶ್,

ಕಾಫಿಗಳು...ಮಳೆಗಳು..ಲೇಖನಗಳು...ಗಾಜಿನಲೋಟಗಳು..ಒಂಥರ ಮಜವೆನಿಸುತ್ತೆ..ಅಲ್ವಾ..

ಥ್ಯಾಂಕ್ಸ್.

shivu.k said...

ಅಜಾದ್,

ನಿಮ್ಮಗಾಗಿ ನಮ್ಮ ಮನೆಯ ಕಾಫಿ ಕಾಯುತ್ತಿದೆ....ಸ್ವಾಗತ.

ಮತ್ತೆ ನಿಮಗೆ ಗೊತ್ತಿಲ್ಲ ಕಾಫಿ ಟೀ ವಿಚಾರದಲ್ಲಿ ಅವಳದ್ದು ಪಕ್ಕಾ ಲೆಕ್ಕಾಚಾರ ಒಂಥರ ರೇಶನ್ ಬೇಕಾದ್ರೆ ನೀವು ಬರುತ್ತಿರಲ್ಲ..ವಿಚಾರಿಸಬಹುದು. ಮತ್ತೆ ಇದರಲ್ಲಿ ಟಿ ಆರ್ ಬಿ ಎಚ್ಚಿಸಿಕೊಳ್ಳುವ ವಿಚಾರವಾಗಿ ನಾನು ಈಗೆಲ್ಲ ಬರೆದಿಲ್ಲ ಇದೆಲ್ಲಾ ಅನುಭವ ಅವಳಿಗೂ ಆಗಿದೆ. ಅದನ್ನೇ ನೇರವಾಗಿ ಬರೆದಿದ್ದೇನೆ. ಮತ್ತೆ ಈ ಟಿ.ಅರ್.ಬಿ. ಇತ್ಯಾದಿಗಳಲ್ಲಿ ನನಗೆ ನಂಬಿಕೆಯಿಲ್ಲ...ಸುಮ್ಮನೇ ಬರೆಯುತ್ತಾ ಹೋಗುವುದು ನನ್ನ ಪ್ಯಾಷನ್...
ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಶರತ್ ಚಂದ್ರ,

ಕಾಫಿಯ ಪುರಾಣ ಮತ್ತು ಅದರ ಸ್ವಾಧವನ್ನು enjoy ಮಾಡಿದ್ದಕ್ಕೆ ಥ್ಯಾಂಕ್ಸ್.

shivu.k said...

ರವಿಕಾಂತ್ ಸರ್,
ನಿಮ್ಮ ಕಾಫಿಯ ಅನುಭವ ಚೆನ್ನಾಗಿದೆ. ಅದನ್ನು ಬ್ಲಾಗಿನಲ್ಲಿ ಬರೆಯಿರಿ..

ಮತ್ತೆ ನೀವು ಗಾಜಿನ ಲೋಟದಲ್ಲಿ ಕಾಫಿ ಕುಡಿಯುವುದರಿಂದ ಅದರ ಮಜ ಮತ್ತು ಅನುಭವ ಎಂಥದ್ದೂ ಅಂತ ನಿಮಗೇ ಆಗಿರಬಹುದು...ನನ್ನ ಪಾರ್ಟಿಗೆ ಸೇರಿಕೊಂಡಿದ್ದಕ್ಕೆ ಥ್ಯಾಂಕ್ಸ್.

shivu.k said...

ಬಾಲು ಸರ್,

ಕಾಫಿ ಕುಡಿಯುತ್ತಾ ಈ ಲೇಖನವನ್ನು ಓದುವುದು ಅದರಲ್ಲೂ ಹೊರಗೆ ಸ್ವಲ್ಪ ಮಳೆಯಿದ್ದಲ್ಲಿ ಮತ್ತೂ ಒಂಥರ ವಿಭಿನ್ನ ಅನುಭವವಲ್ಲವೇ...ನೀವು ಆ ರೀತಿ ಖುಷಿಯನ್ನು ಅನುಭವಿಸಿದ್ದು ನಾನು ಬರೆದಿದ್ದಕ್ಕೂ ಸಾರ್ಥಕವೆನಿಸುತ್ತದೆ..
ಮತ್ತೇಕೆ ತಡ, ನೀವು ಕೂಡ ಗಾಜಿನ ಲೋಟದಲ್ಲಿ ಕಾಫಿ ಕುಡಿಯಲು ಪ್ರಯತ್ನಿಸಿನೋಡಿ ಅಮೇಲೆ ಹೇಳಿ..ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.

shivu.k said...

ಜೀತೇಂದ್ರ ಹಿಂದುಮನೆ..

ಥ್ಯಾಂಕ್ಸ್..

shivu.k said...

ಹಳ್ಳಿಹುಡುಗ ತರುಣ್,

ನನ್ನ ಗಾಜಿನ ಲೋಟದ ಕಾಫಿ ಪುರಾಣವನ್ನು ಮೆಚ್ಚಿ ಅನೇಕ ಗಾಜಿನ ಲೋಟದಲ್ಲಿ ಕುಡಿಯುತ್ತೇವೆ ಎಂದಿದ್ದಾರೆ ನೀವು ನಮ್ಮ ಸಂಘಕ್ಕೆ ಸೇರಿಬಿಡಿ. ಸಾಧ್ಯವಾದರೆ ಗಾಜಿನ ಲೋಟದ ಕ್ಲಬ್ ಮಾಡಿಬಿಡೋಣ ಏನಂತೀರಿ...

shivu.k said...

ನನ್ನ ಮನದ ಭಾವನೆಗೆ ಕನ್ನಡಿ ಹಿಡಿದಾಗ...ಶ್ರೀಕಾಂತ್.,

ನನ್ನ ಲೇಖನದಿಂದಾಗಿ ನಿಮಗೆ ಪಂಚರಂಗಿ ಹಾಡು ನೆನಪಾಗಿದ್ದಕ್ಕೆ ಥ್ಯಾಂಕ್ಸ್.. ಕಾಫಿಯನ್ನು ಮತ್ತೆ ಮತ್ತೆ ಹೀಗೆ enjoy ಮಾಡಿ...’

ಥ್ಯಾಂಕ್ಸ್.

shivu.k said...

snow white,

thanks..

shivu.k said...

ಸಲೀಂ,

ನಮ್ಮ ಮನೆಗೆ ಬೇಗನೇ ಬನ್ನಿ. ಅಜಾದ್, ವನಿತಾ,.ಪರಂಜಪೆ, ಉಮೇಶ್ ದೇಸಾಯ್....ಡಾ.ಕೃಷ್ಣಮೂರ್ತಿ..ಇನ್ನೂ ಅನೇಕರು ಗಾಜಿನ ಲೋಟದಲ್ಲೇ ಕಾಫಿ ಕುಡಿಯಲು ನಮ್ಮ ಮನೆಗೆ ಬರುತ್ತಿದ್ದಾರೆ..ನೀವು ಬಂದುಬಿಡಿ..

ಧನ್ಯವಾದಗಳು.

ಚಿನ್ಮಯ ಭಟ್ said...

ನಿಮ್ಮ ಲೇಖನ ಓದಿ,
ತುಂಬಾ ಖುಷಿ ಆಯ್ತು..
ಇವತ್ತು ಕಾಫಿಡೇ!!!!

ಹಾಗೆ ಲೇಖನ ಒದ್ತಾ,
ನಾಳೆ ಪರೀಕ್ಷೆ ನೆನ್ಪಾಯ್ತು,
ಅದ್ಕೆ ಇವತ್ತು ಕಾಪಿ ಡೇ!!!

ಬನ್ನಿ ನಮ್ಮನೆಗೂ...
http://chinmaysbhat.blogspot.com

shivu.k said...

ಚಿನ್ಮಯ್,

ಕಾಫಿ ಲೇಖನವನ್ನು ಓದಿ ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

ಬಿಡುವಿಲ್ಲದ್ದರಿಂದ ಬೇರೆಯವರ ಬ್ಲಾಗಿಗೆ ಹೋಗಲಾಗುತ್ತಿಲ್ಲ. ಬಿಡುವು ಮಾಡಿಕೊಂಡು ನಿಮ್ಮ ಬ್ಲಾಗಿಗೆ ಬರುತ್ತೇನೆ..

ಚಿತ್ರಾ said...

ಶಿವೂ,
ಕಾಫೀ ಪುರಾಣ ಬರೆದು , ಕಾಫೀ ಕುಡಿಯೋ ಆಸೆ ತಂದಿಟ್ಟು ಬಿಟ್ರಿ ನೀವು ! ಇಲ್ಲಿ ಒಳ್ಳೆ ಫಿಲ್ಟರ್ ಕಾಫಿ ಪುಡಿ ಸಿಗಲ್ಲ . ಊರಿಂದ ಬರೋವಾಗ ತಂದುಕೊಂಡರೂ ಅದು ಎಷ್ಟು ದಿನ ಅಂತ ಪೂರೈಸತ್ತೆ? ಹೀಗಾಗಿ ಕಷ್ಟ ಪಟ್ಟು ಇನ್ಸ್ಟಂಟ್ ಕಾಫೀ ರುಚಿಗೆ ಒಗ್ಗಿ ಕೊಂಡಿದೀನಿ.ಈಗ ನೋಡಿದರೆ , ನೀವು ನನ್ನ ತಲೆ ಲಿ ಫಿಲ್ಟರ್ ಕಾಫಿ ಹುಳ ಬಿಟ್ಟು ...... ಛೆ,

Anonymous said...

chumu chumu chaliyalli bisi bisi coffee lekhana chennagithu

Aravinda said...

ಚೆನ್ನಾಗಿದೆ... ಕಾಫಿ ಕುಡಿದಷ್ಟೇ ಆನಂದ ಆಯ್ತು :)

ಐದನೇ ಪ್ಯಾರಾದಲ್ಲಿ, ಏನೋ typo mistake ಅನ್ಸುತ್ತೆ...
"ಇತ್ತ ನಮ್ಮ ಮನೆಯಲ್ಲೂ ಅನೇಕ ಹೇಮಾ ತುಂಬಾ ಚೆನ್ನಾದ ಕಾಫಿ ಮಾಡಿ ಕೊಡುತ್ತಾಳೆ. "

V.R.BHAT said...

ಕಾಫೀ ಪುರಾಣ ಚೆನ್ನಾಗಿದೆ, ಅದರೊಟ್ಟಿಗೆ ಪರಾಂಜಪೆಯವರ ಹಾಸ್ಯವೂ ಚೆನ್ನಾಗಿದೆ. ಆದರೆ ಇಲ್ಲಿ ನಿಮ್ಮ ಹಿತೈಷಿಯೂ ಮತ್ತು ಬ್ಲಾಗ್ ಅನುಬಂಧಿಯೂ ಆಗಿ, ನಾನೇ ಬೇರೆ ಹಿರಿಯ ಭಾಷಾತಜ್ಞರಿಂದ ಹೇಳಿಸಿಕೊಂಡ ಪಾಠ ಏನೆಂದು ಸ್ವಲ್ಪ ಹೇಳಬೇಕಾಗಿದೆ: ಕೃತಿಗಳು ಆದಷ್ಟೂ ಕಾಗುಣಿತ, ಅಲ್ಪಪ್ರಾಣ-ಮಹಾಪ್ರಾಣ ಮತ್ತು ವ್ಯಾಕರಣ ದೋಷಗಳನ್ನು ಹೊಂದಿರದೇ ಇರಲಿ, ಗಡಿಬಿಡಿಯಲ್ಲಿ ಬರೆದು ಹಾಕಬೇಡಿ-ಎಂಬುದಾಗಿ. ಬೇರೆಯವರು ಹೇಳುವುದಕ್ಕಿಂತ ನಮಗೆ ನಾವೇ ಕಂಡು, ಹೇಳಿ ತಿದ್ದಿಕೊಂಡರೆ ತಪ್ಪಿಲ್ಲವಲ್ಲ, ಹೀಗಾಗಿ ನಿಮ್ಮಲ್ಲಿ ಒಂದು ಅರಿಕೆ: ದಯಮಾಡಿ ಮೇಲೆ ಹೇಳಿದ ದೋಷಗಳು ಆಗದಂತೇ ಪರಾಮರ್ಶಿಸಿ ಪ್ರಕಟಿಸಿ.

ಏನೋ ಈ ಮನುಷ್ಯ ಏನುಮಹಾ ತಾನೇ ಪಂಡಿತ ಎನ್ನುತ್ತಾನಲ್ಲ ಎಂದು ಕೋಪಗೊಳ್ಳದೇ ನಾವೆಲ್ಲಾ ನಾಳೆಗಳನ್ನು ಕಟ್ಟಲು ಹೊರಟ ಬರಹಗಾರರಾಗಿರುವುದರಿಂದ, ನಾನು ಅನುಭವಿಸಿದ್ದನ್ನು ನಿಮಗೆ ಇನ್ಯಾರೋ ಹೇಳುವುದು ಬೇಡವೆಂದು ನಾನೇ ಹೇಳುತ್ತಿದ್ದೇನೆ.
ಉಳಿದಂತೇ ಲೇಖನ ಚೆನ್ನಾಗಿದೆ, ಧನ್ಯವಾದಗಳು

Prasad Shetty said...

ಕಾಫಿ ಪುರಾಣ ಚೆನ್ನಾಗಿದೆ..
ನಂಗು ಸ್ವಲ್ಪ ಇದೆ ಹವ್ಯಾಸ ಇದೆ, ಎಲ್ಲಾದರು ಯಾವುದಾದರು ಕಾಫಿ ಕಪ್ ತುಂಬಾ ಇಷ್ಟ ಆದ್ರೆ ಹುಡುಕಿ ತಂದು ಮನೆಲಿ ಇಟ್ಕೊತಿನಿ, ಮತ್ತೆ ಅದರ ನೆನಪಾದಾಗೆಲ್ಲ ಅದ್ರಲ್ಲೆ ಕಾಫಿ ಕುಡಿದು ಆನಂದ ಪಡ್ತೇನೆ..

Jayalaxmi said...

ಹೇಮಾ, ಗುಡ್ ಗರ್ಲ್.:) :)
ಲೇಖನ ಎಲ್ಲೂ ಅಳಕಾಗದೆ(ತೆಳು) ಹದವಾಗ ಮೂಡಿ ಬಂದಿದೆ ಶಿವು.

shivu.k said...

ಚಿತ್ರಾ,

ಕಾಫಿ ಪುರಾಣ ಓದಿ ನಿಮಗೆ ಮತ್ತೆ ಆಸೆಯಾಗಿದೆಯೆನ್ನುವುದು ಕೇವಲ ನೆಪ ಅಲ್ವಾ...ಕಾಫಿಯನ್ನು ಬಿಡಬೇಕು ಅಥವ ಕಡಿಮೆ ಮಾಡಬೇಕೆಂದುಕೊಂಡರೂ ಸಾಧ್ಯವಾಗುವುದಿಲ್ಲ. ನನ್ನ ಲೇಖನವನ್ನು ಓದಿದ ಮೇಲೆ ನಿಮಗೆ ಮತ್ತೆ ಕಾಫಿ ಕುಡಿಯುವ ಆಸೆಬಂದಿದೆಯೆಂದ ಮೇಲೆ ಬೆಂಗಳೂರಿನಲ್ಲೋ ಅಥವ ಮಂಗಳೂರಿನಲ್ಲೋ ಗೆಳೆಯರಿದ್ದರೇ ಅವರಿಂದ ಪಾರ್ಸಲ್ ತರಿಸಿಬಿಡಿ...ಅಥವ ನಾನೇ ನಾಯಕ್ ಕಾಫಿ ಅಂಗಡಿಯಿಂದ ನಿಮಗೆ ಕಳಿಸಿಬಿಡಲೇನು....

shivu.k said...

ಅನಾಮದೇಯರೇ...

ಲೇಖನವನ್ನು ಓದಿ ಕಾಫಿ ಕುಡಿಯುವ ಆಸೆಯಾಗಿದ್ದಕ್ಕೆ ಕಾಫಿಗೊಂದು ಥ್ಯಾಂಕ್ಸ್ ಹೇಳಿ..

shivu.k said...

ಅರವಿಂದ ಸರ್,

ಲೇಖನವನ್ನು ಸ್ವಲ್ಪ ಗಡಿಬಿಡಿಯಲ್ಲಿ ಹಾಕಿದ್ದರಿಂದ ಅಕ್ಷರಗಳು ತಪ್ಪಾಗಿವೆ. ನೀವು ಅದನ್ನು ಗುರುತಿಸಿದ್ದಕ್ಕೆ ಥ್ಯಾಂಕ್ಸ್. ಲೇಖನವನ್ನು ಇಷ್ಟಪಡುವುದರ ಜೊತೆ ಹೀಗೆ ತಿದ್ದುವುದು ನಮ್ಮ ಬೆಳವಣಿಗೆಗೆ ಸಹಕಾರಿ. ಅದಕ್ಕಾಗಿ ಥ್ಯಾಂಕ್ಸ್.

shivu.k said...

ವಿ.ಅರ್.ಭಟ್ಟರೆ,

ನೀವು ನನಗೆ ಪ್ರತಿಕ್ರಿಯಿಸಿದ ರೀತಿಯಿಂದ ನನಗೆ ಬೇಸರವಾಗಿಲ್ಲ. ಬದಲಾಗಿ ಖುಷಿಯಾಗಿದೆ. ಏಕೆಂದರೆ ನಾನು ಬರೆದ ಲೇಖನವನ್ನು ಅತುರದಲ್ಲಿ ಬ್ಲಾಗಿಗೆ ಹಾಕುವುದರಿಂದ ಇವೆಲ್ಲ ತಪ್ಪುಗಳಾಗಿವೆ. ನಿಮ್ಮ ಮಾತಿನಂತೆ ಇನ್ನು ಮುಂದೆ ನಾನು ನಿದಾನವಾಗಿ ಎಲ್ಲವನ್ನು ಗಮನಿಸಿ ಬ್ಲಾಗಿಗೆ ಹಾಕುತ್ತೇನೆ. ಸಾಧ್ಯವಾದಷ್ಟು ತಪ್ಪುಗಳನ್ನು ಕಡಿಮೆಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ.

ಮತ್ತೆ ನಿಮ್ಮ ಮಾತಿನಿಂದಾಗಿ ನಿಮ್ಮ ಬಗೆಗಿನ ಭಾವನೆ ನನಗೆ ಬದಲಾಗಿಲ್ಲ. ಅದರ ಬದಲಾಗಿ ಗೌರವ ಹೆಚ್ಚಾಗುತ್ತದೆ. ಏಕೆಂದರೆ ನೀವು ಹಿರಿಯರಾಗಿ ಇಂಥವನ್ನು ಗುರುತಿಸಿ ತಿದ್ದುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಖಂಡಿತ ನಾವೆಲ್ಲಾ ಬ್ಲಾಗಿಗರು ನಾಳೆಗಳನ್ನು ಕಟ್ಟುವವರು ನಾವು ಸರಿಯಾಗಿ ಮುನ್ನಡೆಯಬೇಕು ಎನ್ನುವ ನಿಮ್ಮ ಮಾತನ್ನು ಖಂಡಿತ ಒಪ್ಪುತ್ತೇನೆ.
ಎಲ್ಲವನ್ನು ಗುರುತಿಸುವುದರ ಜೊತೆಗೆ ಲೇಖನವನ್ನು ಓದಿ ಖುಷಿಪಟ್ಟಿದ್ದಕ್ಕೆ ಥ್ಯಾಂಕ್ಸ್..

shivu.k said...

ಪ್ರಸಾದ್ ಶೆಟ್ಟಿ ಸರ್,

ಕಾಫಿ ಪುರಾಣವನ್ನು ಇಷ್ಟಪಡುವುದಲ್ಲದೇ ನಿಮಗು ಕಾಫಿ ಗೀಳು ಚೆನ್ನಾಗೇ ಇರುವುದು ಮತ್ತು ಗಾಜಿನ ಲೋಟಗಳ ಕಲೆಹಾಕುವ ವಿಭಿನ್ನ ಹವ್ಯಾಸವನ್ನು ಹೊಂದಿರುವುದು ನಿಜಕ್ಕೂ ಖುಷಿ ವಿಚಾರ.
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

kaafi puraana chennaagide