Wednesday, August 4, 2010

ಈಗಚಿರತೆ ಬಂದುಬಿಟ್ಟರೆ ನಮ್ಮ ಗತಿ!-ನಾಗರಹೊಳೆ ಪ್ರವಾಸ -೨

       ಜೀಪು ಎರಡು ಬಾರಿ ಜರ್ಕ್ ಹೊಡೆದು ಆಪ್ ಆಗಿಬಿಟ್ಟಿತು. ಸಂಜೆ ಆರು ಗಂಟೆಯ ಸಮಯ ಸುತ್ತ ಮೋಡ ಕವಿದು ಯಾವುದೇ ಕ್ಷಣದಲ್ಲಿ ಜೋರು ಮಳೆ ಬಂದುಬಿಡುವ ಸೂಚನೆ. ಮೇ ತಿಂಗಳು ಮಳೆಗಾಲವಲ್ಲದಿದ್ದರೂ ನಾಗರಹೊಳೆ ಕಾಡಿನಲ್ಲಿ ಮೇ ತಿಂಗಳು ಅಕಾಲಿಕ ಮಳೆ ಹೆಚ್ಚು. ನಾವು ಸಂಜೆ ಸಫಾರಿ ಮುಗಿಸುವುದು ಇನ್ನೂ ಅರ್ಧಗಂಟೆ ಇರುವಾಗಲೇ ಜೀಪು ಹೀಗೆ ಆಫ್ ಆಗಿಬಿಟ್ಟರೆ ಗತಿಯೇನು? ನಾವು ವಿಶೇಷ ವಿ.ಐ.ಪಿಗಳು ಎಂದುಕೊಂಡು ನಮಗಾಗಿ ಒಂದು ಜೀಪನ್ನು ಅದಕ್ಕೆ ತಕ್ಕಂತೆ ಡ್ರೈವರನ್ನು ನಮಗಾಗಿ ಕೊಟ್ಟಿದ್ದ ಅರಣ್ಯ ಇಲಾಖೆ, ಫೋಟೊಗ್ರಫಿಗಾಗಿ ಪ್ರವಾಸಿಗರಿಗೆ ತೋರಿಸಲಾಗದಂತ ದಟ್ಟ ಕಾಡುಗಳಿಗೆ ಕರೆದುಕೊಂಡು ಹೋಗಿದ್ದರು. ನಮ್ಮ ಸಫಾರಿ ಡ್ರೈವರ್ ಕೆಳಗಿಳಿದು ಸ್ವಲ್ಪ ರಿಪೇರಿ ಮಾಡತೊಡಗಿದ.

ಬಾನೆಟ್ ತೆಗೆದು ನೀರು ಸರಿಯಾಗಿದೆಯಾ, ಆಯಿಲ್ ಸರಿಯಾಗಿದೆಯಾ? ಸ್ಪಾರ್ಕ್ ಪ್ಲೆಗ್ ಸರಿಯಾಗಿದೆಯಾ ಹೀಗೆ ಏನೇನೋ ರಿಪೇರಿ ಮಾಡಿ, ಮತ್ತೆ ಜೀಪ್ ಸ್ಪಾರ್ಟ್ ಮಾಡಿಲೆತ್ನಿಸಿದ ಆಗಲಿಲ್ಲ. ನಾವೆಲ್ಲಾ ಇಳಿದು ನಮ್ಮ ಕ್ಯಾಮೆರಗಳನ್ನೆಲ್ಲಾ ಸೀಟಿನ ಮೇಲಿಟ್ಟು ಗಾಡಿಯನ್ನು ತಳ್ಳತೊಡಗಿದೆವು. ನಾಲ್ವರು ಸೇರಿ ಒಂದಿಪ್ಪತ್ತು ಅಡಿ ನೂಕಿದರೂ ಸ್ಟಾರ್ಟ್ ಆಗಲಿಲ್ಲ. ಈ ಸಮಯದಲ್ಲಿ ಎಲ್ಲಾ ಪ್ರಾಣಿಗಳೂ ಕಾಡಿನಿಂದ ಹೊರಗೆ ಬರುವ ಸಮಯ, ಅದರಲ್ಲೂ ಹುಲಿ ಹೊರಬರುವುದು ಇದೇ ಸಮಯ. ಉಳಿದೆಲ್ಲಾ ಪ್ರಾಣಿಗಳೂ ಕಾಣಿಸಿಕೊಳ್ಳುವುದು ಈಗಲೇ. ಜೀಪು ಅಥವ ಸಫಾರಿ ವ್ಯಾನಿನ ಒಳಗೆ ಕುಳಿದು ದೊಡ್ಡ ದೊಡ್ಡ ಕ್ಯಾಮೆರ, ಲೆನ್ಸಿನಿಂದ ಹೊರಗೆ ಆಡ್ಡಾಡುವ ಹುಲಿ, ಆನೆ, ಕಾಡುಕೋಣ, ಇತ್ಯಾದಿ ಪ್ರಾಣಿಗಳನ್ನು ಖುಷಿಯಿಂದ ಕ್ಲಿಕ್ಕಿಸುವುದು ಒಂಥರ ಆನಂದ ಮಜ. ಆದ್ರೆ ದಟ್ಟ ಕಾಡಿನ ನಡುವೆ ಜೀಪು ಕೊಟ್ಟು ನಿಂತು ನಾವು ನೆಲದ ಮೇಲೆ ನಿಂತಿರುವಾಗ ಕಾಡುಕೋಣ, ಜಿರತೆ ಬಂದುಬಿಟ್ಟರೆ ನಮ್ಮ ಗತಿ? ಆನೆ ಬಂದುಬಿಟ್ಟರಂತೂ ನಾವು ತಪ್ಪಿಸಿಕೊಳ್ಳಲಾಗುವುದೇ ಇಲ್ಲ. ಆನೆ ಕಾಡಿನಲ್ಲಿ ನಮಗಿಂತ ವೇಗವಾಗಿ ಓಡುತ್ತಾ ಆಟ್ಟಿಸಿಕೊಂಡುಬರುತ್ತದೆ. ಹುಲಿಬಂದರಂತೂ ನಮಗೆ ದೇವರೇ ಗತಿ? ಫೋಟೊಗ್ರಫಿಯ ನೆಪದಲ್ಲಿ ಕಾಡಿನ ನಡುವೆ ಸಿಕ್ಕಿಕೊಂಡ ನಮಗೆಲ್ಲಾ ನಮ್ಮ ಮನೆಮಠ, ಹೆಂಡತಿ, ಮಕ್ಕಳು ಬಂಧುಭಾಂದವರೆಲ್ಲಾ ಒಟ್ಟೊಟ್ಟೊಗೆ ನೆನಪಾಗತೊಡಗಿದರು. ಅಷ್ಟರಲ್ಲಿ ಒಂದು ಐಡಿಯ ಬಂತು. ನಾವು ನಾಗರಹೊಳೆ ಕೇಂದ್ರಕ್ಕೆ ಫೋನ್ ಮಾಡಿ ಬೇರೆ ವಾಹನವನ್ನು ಕಳಿಸಿಕೊಡಲು ಹೇಳಿದರೆ ಹೇಗೆ?


"ಸಾರ್ ನಾಗರಹೊಳೆ ಪ್ರವಾಸಿ ಕೇಂದ್ರಕ್ಕೆ ಫೋನ್ ಮಾಡಿ ಈಗ ಆಗಿರುವ ತೊಂದರೆಯನ್ನು ಹೇಳಿ ಅವರಿಗೆ ಮತ್ತೊಂದು ವಾಹನ ಕಳಿಸಿಕೊಡಲು ಹೇಳಿದರೆ ಹೇಗೆ?" ನನ್ನ ಐಡಿಯ ಹೇಳಿದೆ.


"ಹೌದು ಶಿವು ಹಾಗೇ ಮಾಡಬೇಕು." ಅಂದವರೆ ತಮ್ಮ ಮೊಬೈಲ್ ಫೋನ್ ತೆಗೆದರು. ಸಿಗ್ನಲ್ ಇರಲಿಲ್ಲ. ರಾಜೇಂದ್ರ ಮತ್ತು ದೇವರಾಜ್ ಫೋನುಗಳದ್ದೂ ಅದೇ ಕತೆ. ನನ್ನ ಫೋನಿಗಾಗಿ ಜೇಬಿಗೆ ಕೈ ಹಾಕಿದೆ. ಜೇಬಿನಲ್ಲಿ ಫೋನ್ ಇರಲಿಲ್ಲ. ಅದನ್ನು ರಮಾಕಾಂತ್ ಕೈಗೆ ಕೊಟ್ಟಿದ್ದು ನೆನಪಾಯಿತು. ನಮಗೆ ಜೀಪು ಕಳಿಸಿಕೊಡಲು ಅರಣ್ಯಕೇಂದ್ರದ ಜೊತೆ ಮಾತಾಡಲು ಅವರು ನನ್ನ ಮೊಬೈಲ್ ಫೋನನ್ನೇ ತೆಗೆದುಕೊಂಡಿದ್ದು ನೆನಪಾಯಿತು.


"ಸರ್, ನನ್ನ ಫೋನ್ ನಿಮ್ಮ ಬಳಿಯೇ ಇದೆ. ಅದರಲ್ಲಿ ಒಮ್ಮೆ ಪ್ರಯತ್ನಿಸಿ" ಹೇಳಿದೆ.

ಅವರು ಸಹಜವಾಗಿ ತಮ್ಮ ಜೇಬಿಗೆ ಕೈಹಾಕಿ ನೋಡಿದರು. ಅಲ್ಲಿಯೂ ನನ್ನ ಫೋನ್ ಇರಲಿಲ್ಲ. "ಶಿವು, ನಿಮಗೆ ಅಲ್ಲಿಯೇ ಕೊಟ್ಟೆನಲ್ಲಾ" ಅಂದರು.


"ಇಲ್ಲ ಸರ್, ನೀವು ಕೊಟ್ಟಿದ್ದರೇ ನನ್ನ ಬಳೀ ಇರಬೇಕಿತ್ತು. ನೀವು ಮರೆತು ಯಾರ ಕೈಗೆ ಕೊಟ್ಟಿದ್ರಿ ನೆನಪಿಸಿಕೊಳ್ಳಿ" ಅಂದೆ.


ಅವರೊಮ್ಮೆ ಯೋಚಿಸಿ, ನೋಡಿ ಶಿವು, ನಾನು ಫಾರೆಸ್ಟ್ ಆರ್ ಎಫ್ ಓ ಜೊತೆ ಮಾತಾಡಿದ ಮೇಲೆ ಸ್ವಲ್ಪ ಹೊತ್ತಿನ ನಂತರ ಅವರ ಜೀಪು ಬಂತು. ನಾನು ಜೀಪು ಹತ್ತಿ ಕುಳಿತೆ. ನೀವು ಜೊತೆಯಲ್ಲಿ ಬಂದಾಗ ನೀವು ಇನ್ನೂ ಜೀಪು ಹತ್ತಿರಲಿಲ್ಲ. ಆಗ ನಿಮಗೆ ಕೊಟ್ಟೆ. ನೀವು ಮೊದಲು ಫೋನನ್ನು ಜೇಬಿನಲ್ಲಿ ಹಾಕಿಕೊಂಡು ನಂತರ ನಿಮ್ಮ ಕ್ಯಾಮೆರಾಬ್ಯಾಗನ್ನು ಜೀಪಿಗೆ ಹಾಕಿ ನೀವು ಹತ್ತಿಕೊಂಡಿರಿ. ಒಮ್ಮೆ ಸರಿಯಾಗಿ ನೋಡಿ" ಅಂದರು. ಅವರ ಮಾತನ್ನು ಉಳಿದಿಬ್ಬರೂ ಹೌದು ಹೌದು ಎಂದು ಸಮರ್ಥಿಸಿದರು.


ನಾನು ಮತ್ತೊಮ್ಮೆ ನೆನಪಿಸಿಕೊಂಡೆ. ಅವರು ಕೊಟ್ಟಿದ್ದು ನೆನಪಾಯಿತು. ಆದ್ರೆ ಜೇಬಿಗೆ ಇಟ್ಟುಕೊಂಡಿದ್ದು ನೆನಪಾಗುತ್ತಿಲ್ಲ. ಅಷ್ಟರಲ್ಲಿ,


"ಶಿವು, ನೀವು ಜೀಪು ಹತ್ತುವಾಗ ನಿಮ್ಮ ಹಿಂದೆ ಯಾರೋ ಒಬ್ಬ ನಿಮ್ಮನ್ನೇನೋ ಕೇಳಿಕೊಂಡು ಬಂದ. ಅವನ ಪ್ರಶ್ನೆಗೆ ಉತ್ತರಿಸಿ ನೀವು ಜೀಪು ಹತ್ತಿದರೂ ಅವನು ಅಲ್ಲೇ ನಿಂತಿದ್ದ. ಬಹುಶಃ ನೀವು ಫೋನ್ ಜೇಬಿಗೆ ಹಾಕಿಕೊಳ್ಳುವ ಬದಲು ಹಾಗೆ ಕೆಳಗೆ ಬೀಳಿಸಿರಬೇಕು. ಹುಲ್ಲು ಇದ್ದಿದ್ದರಿಂದ ಶಬ್ದವಾಗಲಿಲ್ಲವೆನಿಸುತ್ತೆ. ಕೆಳಗೆ ಬಿದ್ದಿದ್ದನ್ನು ಅವನು ನೋಡಿಕೊಂಡು ನಮ್ಮ ಜೀಪು ಕಾಡಿನ ಕಡೆಗೆ ಬಂದಮೇಲೆ ಅವನು ಎತ್ತಿಕೊಂಡಿರಬೇಕು" ರಾಜೇಂದ್ರ ಹೇಳಿದರು.


ನಾನು ಒಮ್ಮೆ ನೆನಪಿಸಿಕೊಂಡೆ. ಹಾಗೆ ಆಗಿರಲಾಗದು. ಆತ ತನ್ನ ಕುಟುಂಬ ಸಮೇತ ಕಾರಿನಲ್ಲಿ ಬಂದಿದ್ದ. ನಮ್ಮ ಕ್ಯಾಮೆರಾಗಳನ್ನು ನೋಡಿ ಫೋಟೊಗ್ರಫಿ ಬಗ್ಗೆ ತಿಳಿದುಕೊಳ್ಳಲು ಬಂದಿದ್ದ. ಸಂಸ್ಕಾರವಂತನಂತೆ ಕಾಣುತ್ತಿದ್ದ. ಅವನಿಗೆ ನನ್ನ ಮೊಬೈಲ್ ಎತ್ತಿಕೊಳ್ಳುವ ಮನಸ್ಸು ಖಂಡಿತ ಇಲ್ಲವೆನಿಸುತ್ತದೆ. ಅಂದುಕೊಂಡೆನಾದ್ರೂ ರಾಜೇಂದ್ರ ಹೇಳಿದ ಮಾತು ಆ ಸಮಯದಲ್ಲಿ ಸರಿಯೆನಿಸಿತ್ತು. ದೇವರಾಜ್ ಮತ್ತು ರಮಾಕಾಂತ್ ಇಬ್ಬರೂ ಸಮರ್ಥಿಸಿದಾಗ ಅವರ ಮಾತು ಸರಿಯೆನಿಸಿತ್ತು.


ಈಗೇನು ಮಾಡುವುದು? ಅದು ನನ್ನ ಮೆಚ್ಚಿನ ಮೊಬೈಲ್. ನಾಲ್ಕು ವರ್ಷಗಳ ಹಿಂದೆ ರವಿಬೆಳೆಗೆರೆ ನಿತ್ಯ ಎಫ್ ಎಮ್ ರೈನ್‍ಬೋ ರೇಡಿಯೋ ಕಾರ್ಯಕ್ರಮವನ್ನು ನಡೆಸಿಕೊಡಲು ಬರುವಾಗ ಆತನ ಮಾತು ಕೇಳಲು ಆಗಿನ ಮಟ್ಟಿಗೆ ಸ್ವಲ್ಪ ದುಬಾರಿಯೆನಿಸಿದ್ದ[ಹದಿಮೂರು ಸಾವಿರ ರೂಪಾಯಿಗಳು. ನನ್ನ ಮಟ್ಟಿಗೆ ಅದು ದುಬಾರಿಯೇ ಸರಿ]ಈ ಮೊಬೈಲ್ ಕೊಂಡುಕೊಂಡಿದ್ದೆ. ಅದರ ಮುಖ್ಯ ಗುಣಲಕ್ಷಣವೆಂದರೆ ಅದರಲ್ಲಿ ಸಾವಿರಾರು ಫೋಟೊಗಳನ್ನು ಹಾಕಿಕೊಳ್ಳಬಹುದು ಮತ್ತು ಅದು ತುಂಬಾ ಚೆನ್ನಾಗಿ ಆ ಮೊಬೈಲಿನಲ್ಲಿ ಕಾಣುತ್ತದೆ ಕೂಡ. ಅದಕ್ಕಾಗಿ ಅದನ್ನು ಇಷ್ಟಪಟ್ಟು ಕೊಂಡುಕೊಂಡಿದ್ದೆ. ಈಗ ಅದೆಲ್ಲಾ ಹೋಗೇ ಬಿಟ್ಟಿತಲ್ಲ! ಏನು ಮಾಡುವುದು? ಮತ್ತೆ ಅದಕ್ಕಿಂತ ಹೆಚ್ಚಾಗಿ ನನ್ನ ಗೆಳೆಯರು, ದಿನಪತ್ರಿಕೆ ಗ್ರಾಹಕರು, ಫೋಟೊಗ್ರಫಿ ಗೆಳೆಯರು, ಫೋಟೊಗ್ರಫಿ ಆರ್ಡರು ಕೊಡುವ ಗ್ರಾಹಕರು, ಹೀಗೆ ಸಾವಿರಾರು ಫೋನ್ ನಂಬರುಗಳಿದ್ದವು. ಅದೆಲ್ಲಾ ಈಗ ಇಲ್ಲವಾಗಿಬಿಟ್ಟಿತಲ್ಲ! ಮುಂದೇನು ಗತಿ? ಚಿಂತೆ ಕಾಡತೊಡಗಿತ್ತು.


ನನ್ನ ಮೊಬೈಲ್ ಯೋಚನೆಯಲ್ಲಿ ನಾನಿದ್ದರೇ ಅತ್ತ ಜೀಪಿನ ರಿಪೇರಿ ನಡೆದಿತ್ತು. ಸುತ್ತ ನೋಡಿದೆ ಆಗಲೇ ಸಮಯ ಸಂಜೆ ಆರುವರೆಯಾಗಿ ಕತ್ತಲೆಯಾಗುತ್ತಿತ್ತು. ಪ್ರಾರಂಭದಲ್ಲಿ ಕಾಡಿನ ಪ್ರಾಣಿಗಳು ಬಂದು ನಮ್ಮ ಮೇಲೆ ಆಕ್ರಮಣ ಮಾಡಿದರೆ ಎನ್ನುವ ಭಯವಿತ್ತಲ್ಲ ಅದು ಈ ಮೊಬೈಲು ಕಳೆದುಹೋದ ಚಿಂತೆಯಲ್ಲಿ ಸಣ್ಣದೆನಿಸಿತ್ತು. ಸುತ್ತಲು ನೋಡಿದರೆ ಏನು ಅನ್ನಿಸುತ್ತಿಲ್ಲ. ನಮ್ಮ ಇಷ್ಟಕಷ್ಟಗಳನ್ನು ಮೀರಿ ಒಂದು ದಿಗಿಲನ್ನು ಮರೆಯಲು ಮತ್ತೊಂದು ಆಲೋಚನೆ ಅಥವ ಚಿಂತೆ ಆವರಿಸಿಕೊಳ್ಳುವುದು ಹೀಗೆ ಅಲ್ಲವೆ? ಇತ್ತ ನೋಡಿದರೆ ದಟ್ಟ ಕಾಡಿನ ನಡುವೆ ಹೀಗೆ ಸಿಕ್ಕಿಹಾಕಿಕೊಂಡಿದ್ದೇವೆ. ನಡೆದುಹೋದರು ಕಡಿಮೆಯೆಂದರೂ ಹತ್ತು ಕಿಲೋಮೀಟರ್ ದೂರವಿದ್ದೇವೆ. ಕಾಡಿನ ಹುಲಿ, ಆನೆ, ಚಿರತೆ ಇತ್ಯಾದಿ ಕ್ರೂರಮೃಗಗಳನ್ನು ಎದುರಿಸಿ ನಡೆಯುತ್ತೇವೆಂದರೆ ನಾಳೆ ಬೆಳಿಗ್ಗೆ ನಾಗರಹೊಳೆ ತಲುಪಬಹುದು. ಒಂದು ರೀತಿಯಲ್ಲಿ ಕಾಡಿನ ಪ್ರಾಣಿಗಳ ನಡುವೆ ನಾವು ಕೂಡ ಕಾಡುಪ್ರಾಣಿಗಳಾಗಿಬಿಟ್ಟಿದ್ದೆವು. ಏನು ಮಾಡುವುದು ಎನ್ನುವ ಚಿಂತೆಗೊಳಗಾಗಿದ್ದಾಗಲೇ ಜೀಪು ಸ್ಟಾರ್ಟ್ ಆಗಿಬಿಟ್ಟಿತ್ತು. ಕರ್ಕಶವೆನಿಸುವ ಆ ಜೀಪು ಶಬ್ದ ಆ ಸಮಯದಲ್ಲಿ ಒಂದು ರೀತಿ ಮಧುರಾತಿಮಧುರವೆನಿಸಿ ಅಪ್ಯಾಯಮಾನವೆನಿಸಿತ್ತು. ಎಲ್ಲರೂ ಬದುಕಿದೆಯಾ ಬಡಜೀವವೇ ಅಂದುಕೊಳ್ಳುತ್ತಾ ಜೀಪು ಹತ್ತಿದೆವು.


"ಜೀಪು ಏನಾಗಿತ್ತು.? ರಮಾಕಾಂತ್ ಕೇಳಿದರು.


" ಇದು ಪೂರ ಕಂಡಮ್ ಆಗಿರೋ ಜೀಫು ಸಾರ್. ಬಹುಶಃ ನಿಮ್ಮದೇ ಕಡೇ ಟ್ರಿಪ್ ಎನ್ನಿಸುತ್ತದೆ. ನಾಳೆ ಬಹುಶಃ ಇದು ಗುಝರಿ ಸೇರಿಬಹುದು. ಸದ್ಯ ಈಗ ಒಂದೇ ಗೇರಿನಲ್ಲಿ ಬ್ಯಾಲೆನ್ಸ್ ಮಾಡಿ ಓಡಿಸುತ್ತಿದ್ದೇನೆ. ತೊಂದರೆಯಿಲ್ಲ ಹೇಗಾದರೂ ನಾಗರಹೊಳೆ ತಲುಪಬಹುದು" ಅಂತ ನಮಗೆಲ್ಲಾ ದೈರ್ಯ ತುಂಬುವ ಪ್ರಯತ್ನ ಮಾಡಿದ.


"ಇಂಥ ಜೀಪು ನಮಗಾಗಿ ಕಳಿಸಿದ್ದಾರಲ್ಲ, ಅವರಿಗಾದರೂ ಗೊತ್ತಾಗಬೇಡವಾ? ಎಂದು ನಾವೆಲ್ಲಾ ಬೈದುಕೊಂಡೆವು. ಈಗ ರಜಾ ಸಮಯ್ ವಾದ್ದರಿಂದ ಪ್ರವಾಸಿಗರು ಹೆಚ್ಚು. ಎಲ್ಲಾ ಜೀಪುಗಳು, ವ್ಯಾನುಗಳು ಅವರಿಗೆ ಎಂಗೇಜ್ ಆಗಿಬಿಟ್ಟಿರುತ್ತವೆ ಸರ್., ಕೊನೆಗೆ ಉಳಿದಿದ್ದು ಇದೊಂದು ಅದನ್ನೇ ನಿಮಗೆ ಕಳಿಸಿದ್ದಾರೆ" ಅಂದ ಆತ.


ಕೊನೆಗೂ ಆಗು ಹೀಗೂ ಐದು ಕಿಲೋಮೀಟರ್ ಸಾಗಿತ್ತು ನಮ್ಮ ಜೀಪು. ಇಷ್ಟು ದೂರ ಬಂದಮೇಲೆ ಇನ್ನರ್ಧ ದಾರಿ ಖಂಡಿತ ತಲುಪುತ್ತೇವೆಂದು ನಮಗೆ ನಂಬಿಕೆ ಬಂತು. ಯಾವಾಗ ಒಂದು ಚಿಂತೆ ಮರೆಯಾಯಿತೋ ಅವರಿಗೆಲ್ಲಾ ನೆಮ್ಮದಿ ಅವರಿಸಿದರೂ ನನಗೆ ಮತ್ತೆ ಮೊಬೈಲ್ ಚಿಂತೆ ಕಾಡತೊಡಗಿತ್ತು. ಮತ್ತೆ ಅದು ನೆನಪಾಗಲು ಕಾರಣ, ನಾವು ಬೆಂಗಳೂರು ತಲುಪಿದ ಮೂರು ದಿನಗಳ ನಂತರ ತಿರುಪತಿಯಲ್ಲಿ ನಮ್ಮ ಬ್ಲಾಗ್ ಗೆಳೆಯರೊಬ್ಬರ ಮದುವೆ ಫೋಟೊ ಮತ್ತು ವಿಡಿಯೋ ಕವರೇಜ್ ಮಾಡಿಸಲು ಒಪ್ಪಿಕೊಂಡಿದ್ದೆ. ಅವರ ಫೋನ್ ನಂಬರ್ ಇಲ್ಲವಾಯಿತಲ್ಲ ಎನ್ನುವ ಚಿಂತೆ ಆವರಿಸಿತು. ನನ್ನ ಎದುರಿದ್ದ ದೇವರಾಜ್, ರಾಜೇಂದ್ರ ಫೋಟೊಗ್ರಫಿ ಬಗ್ಗೆ ಮಾತಾಡುತ್ತಿದ್ದರು. ರಮಾಕಾಂತ್ ಡ್ರೈವರ್ ಜೊತೆ ಮಾತಿಗಿಳಿದ್ದಿದ್ದರು. ನಾನೊಬ್ಬನೇ ಏಕೆ ಸುಮ್ಮನೇ ಚಿಂತೆಗೊಳಗಾಗಬೇಕು. ಮೊಬೈಲ್ ಹೋದರೆ ಹೋಯಿತು. ಮತ್ತೆ ಹೊಸದು ಕೊಳ್ಳಬಹುದು. ಇಂಥ ವಾತವರಣದಲ್ಲಿ ಅವರೆಲ್ಲಾ ಸಂತೋಷದಿಂದಿರುವಾಗ ನಾನೊಬ್ಬನೇ ಏಕೆ ಹೀಗಿರಬೇಕು ಅಂದುಕೊಂಡು ಅವರ ಜೊತೆ ಮಾತಿಗಿಳಿದೆ. ಮತ್ತದೇ ಫೋಟೊಗ್ರಫಿ, ಖಂಡಮ್ ಜೀಪು, ನಗು...ಸಾಗುತ್ತಲೇ ಇತ್ತು. ಇಂಥ ಕಾಡಿನ ನಡುವಿನ ವಾತಾವರಣದಲ್ಲಿ ಖುಷಿಯಾಗಿರುವುದು ಬಿಟ್ಟು ಯಾವುದೋ ಚಿಂತೆಗೆ ಏಕೆ ಒಳಗಾಗಬೇಕು? ಅನ್ನಿಸಿತ್ತು.

"ಮೊಬೈಲ್ ಕಳೆದುಹೋದ ವಿಚಾರವನ್ನು ಏನು ಮಾಡಿದ್ರಿ?" ರಮಾಕಾಂತ್ ಕೇಳಿದರು.


"ಸರ್, ಅದನ್ನು ಚಿಂತಿಸಿದ್ರೆ ಏನು ಪ್ರಯೋಜನ? ನೀವೆಲ್ಲಾ ಹೀಗೆ ಖುಷಿಯಾಗಿ ಕಾಡಿನ ವಾತವರಣವನ್ನು ಆನಂದಿಸುತ್ತಿರುವಾಗ ನಾನು ಮೊಬೈಲ್ ಬಗ್ಗೆ ಯೋಚಿಸಿದರೆ ಅದು ಇಲ್ಲಿ ಸಿಗುತ್ತದೆಯೇ? ಇಲ್ಲವಲ್ಲ. ಹೋಗಲಿಬಿಡಿ. ನನಗಿಷ್ಟು ಅದು ಸೇವೆ ಸಲ್ಲಿಸಿದ್ದು ಸಾಕು ಅನ್ನಿಸಿರಬೇಕು ಅದಕ್ಕೆ ಕಳೆದುಹೋಗಿದೆ. ಹೋಗಲಿಬಿಡಿ. ಅದರ ಋಣ ತೀರಿತು ಅಂದುಕೊಳ್ಳುತ್ತೇನೆ. ಮತ್ತೆ ಫೋನ್ ನಂಬರುಗಳ ವಿಚಾರದ ಬಗ್ಗೆ ಚಿಂತೆಯಿಲ್ಲ. ಏಕೆಂದರೆ ಆರುತಿಂಗಳುಗಳ ಮೊಬೈಲ್ ಬಿಲ್‍ಗಳನ್ನು ಕಂಪ್ಯೂಟರಿನಲ್ಲಿ ಸೇವ್ ಮಾಡಿದ್ದೇನೆ. ಅದರಲ್ಲಿ ನಾನು ಮಾಡಿದ ಫೋನ್ ನಂಬರ್, ನನಗೆ ಬಂದ ಫೋನುಗಳು......ಎಲ್ಲದರ ವಿವರಗಳು ಇದೆ. ಅದರಲ್ಲಿ ಫೋನ್ ನಂಬರ ಸಿಕ್ಕೇ ಸಿಕ್ಕುತ್ತದಲ್ವಾ? ಅದಕ್ಕೆ ಸ್ವಲ್ಪ ಸಮಾಧಾನವಾಯಿತು. ಅಷ್ಟಾದ ಮೇಲೆ ಮತ್ತೇಕೆ ಚಿಂತೆ ಮಾಡಲಿ ಹೇಳಿ?"


ನನ್ನ ಮಾತು ಕೇಳಿ ಅವರಿಗೂ ಅಶ್ಚರ್ಯವಾಯಿತು. "ಎಷ್ಟು ಬೇಗ ಅದನ್ನು ಮರೆತು ಖುಷಿಯಾಗಿಬಿಟ್ಟಿರಿ? ಇದಪ್ಪ ನಿಜವಾದ ಸಮಯೋಜಿತ ಸ್ಪೂರ್ತಿ" ಅಂದರು ರಮಾಕಾಂತ್.


.   ನನ್ನ ಮನದಲ್ಲಿ ಮೂಡಿದ ಅಲೋಚನೆಯನ್ನು ಅವರಿಗೆ ವಿವರಿಸಿದೆ.


  "ಶಿವು, ಇದ್ದರೆ ನಿಮ್ಮಂತೆ ಇರಬೇಕು. ಮೊಬೈಲ್ ಕಳೆದುಹೋದ ಚಿಂತೆಯನ್ನು ಮರೆಯಲಿಕ್ಕೆ ನೀವು ಕೊಟ್ಟ ಕಾರಣ ಕೇಳಿ ನನಗೂ ಖುಷಿಯಾಯ್ತು. ನಿಮ್ಮ ನಿರ್ಧಾರ ಸರಿಯಾಗಿದೆ. ಇರುವ ಪರಿಸ್ಥಿತಿಗೆ ಚೆನ್ನಾಗಿ ಹೊಂದಿಕೊಳ್ಳುತ್ತೀರಿ" ಅಂದರು. ಮತ್ತೆ ಎಲ್ಲರೂ ಕಾಡಿನಲ್ಲಿ ಸಿಕ್ಕ ಫೋಟೊಗಳ ಬಗ್ಗೆ, ಪ್ರಾಣಿಗಳ ಬಗ್ಗೆ, ಕಾಡಿನ ಬಗ್ಗೆ ಖುಷಿಯಿಂದ ಚರ್ಚಿಸಿದೆವು. ಸಮಯ ಆಗಲೇ ಆರುಗಂಟೆ ನಲವತೈದು ನಿಮಿಷ ಧಾಟಿದ್ದರೂ ಬೇಸಿಗೆಯಾದ್ದರಿಂದ ಕತ್ತಲಾಗಿರಲಿಲ್ಲ. ನಾಗರಹೊಳೆ ಪ್ರವಾಸಿ ಕೇಂದ್ರ ಬಂತು. ಇನ್ನೇನು ಜೀಪಿನಿಂದ ಎಲ್ಲರೂ ಇಳಿಯಬೇಕು ಅಷ್ಟರಲ್ಲಿ ರಾಜೇಂದ್ರ ಒಂದು ಸಲಹೆ ಕೊಟ್ಟರು.

"ಶಿವು ನನ್ನ ಮೊಬೈಲ್ ಸಿಗ್ನಲ್ ಬಂದಿದೆ, ನಿಮ್ಮ ಮೊಬೈಲ್ ತೆಗೆದುಕೊಂಡವನು ಸ್ವಿಚ್ ಆಪ್ ಮಾಡಿರದಿದ್ರೆ ರಿಂಗ್ ಆಗಬಹುದು," ಅಂತ ಹೇಳಿ ರಿಂಗ್ ಕೊಟ್ಟರು.


ಎಲ್ಲರಿಗೂ ಆಶ್ಚರ್ಯ! ಜೀಪಿನಲ್ಲೇ ನನ್ನ ಮೊಬೈಲ್ ರಿಂಗ್ ಟೋನ್ ಕೇಳಿಸುತ್ತಿದೆ!. ಎಲ್ಲರೂ ಸುತ್ತಮುತ್ತ ನೋಡಿದರು. ತಮ್ಮ ಕಾಲಕೆಳಗೆ ನೋಡಿದರು. ಮೊಬೈಲ್ ಮಾತ್ರ ಕಾಣುತ್ತಿಲ್ಲ ಆದ್ರೆ ರಿಂಗ್ ಟೋನ್ ಶಬ್ದ ಮಾತ್ರ ಬರುತ್ತಿದೆ! ನನ್ನ ಮೊಬೈಲ್ ಇಲ್ಲೇ ಎಲ್ಲೋ ಇರುವುದು ಗೊತ್ತಾಗಿ ನನಗಂತೂ ಖುಷಿಯಿಂದ ಕುಣಿದಾಡುವಂತಾಗಿತ್ತು.


"ಎಲ್ಲರ ಕ್ಯಾಮೆರಾ ಬ್ಯಾಗುಗಳನ್ನು ಚೆಕ್ ಮಾಡಿದರೆ ಯಾವುದರಲ್ಲಿ ಶಿವು ಮೊಬೈಲ್ ಇದೆ ಅಂತ ಗೊತ್ತಾಗುತ್ತೆ!" ದೇವರಾಜ್ ಹೇಳಿದಾಗ ನಾವೆಲ್ಲಾ ನಮ್ಮ ನಮ್ಮ ಬ್ಯಾಗುಗಳನ್ನೆಲ್ಲಾ ಚೆಕ್ ಮಾಡಿದೆವು. ಕೊನೆಗೆ ರಮಾಕಾಂತ್‍ರವರ ಕ್ಯಾಮೆರಾ ಬ್ಯಾಗಿನಲ್ಲಿ ನನ್ನ ಮೊಬೈಲ್ ಇದ್ದು ಇನ್ನೂ ರಿಂಗಾಗುತ್ತಿತ್ತು!" ಅದನ್ನು ಪ್ರೀತಿಯಿಂದ ಎತ್ತಿ ಜೇಬಿನಲ್ಲಿಟ್ಟುಕೊಂಡೆ.


"ಅರೆರೆ ಇದು ಹೇಗೆ ನನ್ನ ಬ್ಯಾಗಿನಲ್ಲಿ ಬಂತು!  ಕೇಳಿದರು  ರಮಾಕಾಂತ್. ನಾನು ನಿದಾನವಾಗಿ ಎಲ್ಲವನ್ನು ಯೋಚಿಸಿದೆ. ಅವರು ನನ್ನ ಮೊಬೈಲಿಂದ ಅರಣ್ಯ ಅಧಿಕಾರಿಗಳಿಗೆ ಫೋನ್ ಮಾಡಿದ್ದು ನಂತರ ಅವರು ಜೀಪು ಕಳಿಸಿದ್ದು ನಡುವೆ ಪ್ರವಾಸಿಗನೊಬ್ಬ ನನ್ನ ಬಳಿ ಏನೋ ವಿಚಾರವನ್ನು ಕೇಳಲು ಬಂದಿದ್ದು, ನಾವು ಹೊರಡುವಷ್ಟರಲ್ಲಿ ನೀವು ಮೊಬೈಲ್ ನನಗೆ ಕೊಡುವುದನ್ನು ಮರೆತು ನಿಮ್ಮ ಬ್ಯಾಗಿನಲ್ಲಿ ಹಾಕಿ ಜಿಪ್ ಹಾಕಿಬಿಟ್ರಿ. ನಂತರ ಕಾಡಿನ ನಡುವೆ ನನಗೆ ಮೊಬೈಲ್ ಯೋಚನೆ ಬಂದಾಗ ನೋಡಿಕೊಂಡೆ ಜೇಬಿನಲ್ಲಿರಲಿಲ್ಲ. ಅದಕ್ಕೆ ಅಲ್ಲಿ ಸಿಗ್ನಲ್ ಇರಲಿಲ್ಲ. ಅದಕ್ಕೆ ತಕ್ಕಂತೆ ಆ ಪ್ರವಾಸಿಗನೂ ಅಲ್ಲಿಗೆ ಬಂದಿದ್ದರಿಂದ ಅವನು ಮೊಬೈಲ್ ತೆಗೆದುಕೊಂಡಿದ್ದಾನೆ ಅಂದುಕೊಂಡೆವು. ಕಾಡಿನ ನಡುವೆ ಜೀಪು ಕೂಡ ಕೆಟ್ಟು ಹೋಗಿದ್ದರಿಂದ ನಮ್ಮ ಆಲೋಚನೆಗಳೆಲ್ಲಾ ಅಡ್ಡದಾರಿಹಿಡಿದಿದ್ದವು ಅಲ್ವಾ ಸರ್? ಅಂದೆ.

"ಹೌದು ಶಿವು. ಯು ಆರ್ ರೈಟ್! ಅಂದವರೆ ಜೀಪಿನಿಂದ ಇಳಿದರು.


ಇಂಥ ಪರಿಸ್ಥಿತಿಯಲ್ಲೂ ನಮ್ಮನ್ನೂ ಸುರಕ್ಷಿತವಾಗಿ ಕರೆತಂದಿದ್ದಕ್ಕೆ ಆ ಜೀಪ್ ಡ್ರೈವರಿಗೆ ಧನ್ಯವಾದ ಹೇಳಿ ಟಿಪ್ಸ್ ಕೊಟ್ಟು ನಮ್ಮ ಕಾರಿನತ್ತ ಹೆಜ್ಜೆ ಹಾಕಿದೆವು. ಮತ್ತೆ ಅಲ್ಲಿಂದ ನಮ್ಮ ಪ್ರಯಾಣ ಸಾಗಿತು ಅದೇ ಕರೆಂಟ್ ಇಲ್ಲದ ಕಲ್ಲಹಳ್ಳ ಅರಣ್ಯ ಇಲಾಖೆ ಅತಿಥಿ ಗೃಹದ ಕಡೆಗೆ.


ನಾಗರ ಹೊಳೆ ಪ್ರವಾಸದಲ್ಲಿ ನಮಗೆ ಸಿಕ್ಕ ಕೆಲವು ಕಾಡುಪ್ರಾಣಿಗಳು ಮತ್ತು ಜನರ ಪೋಟೊಗಳು.

ಅಲ್ಲಿನ ಬುಡಕಟ್ಟು ಜನಾಂಗದ ಪುಟ್ಟ ಹುಡುಗಿಯಾದ ಇವಳು ಸದಾ ಹೀಗೆ ನಗುತ್ತಿರುತ್ತಾಳೆ


ನಮಗೆ ಫೋಸು ಕೊಡುತ್ತಿರುವ ಲಂಗೂರ್

ಕಾಡು ನಾಯಿ.



ನಾನು ಮತ್ತು ದೇವರಾಜ್ ಮಲಬಾರ್ ಅಳಿಲು ಫೋಟೊ ತೆಗೆಯುತ್ತಿರುವುದನ್ನು ರಾಜೇಂದ್ರ ಹೀಗೆ ನಮ್ಮ ಫೋಟೊ ಕ್ಲಿಕ್ಕಿಸಿದರು.

ನಾಗರಹೊಳೆ ಪ್ರವಾಸಿ ಧಾಮದಲ್ಲಿ ನಮ್ಮ ಕ್ಯಾಮೆರಾಗೆ ನಟ ಕೋಮಲ್ ಹೀಗೆ ಸೆರೆಸಿಕ್ಕರು



ನೀಲಕಂಠ ಹಕ್ಕಿ


ನಾವು ಉಳಿದುಕೊಂಡಿದ್ದ ಕಲ್ಲಹಳ್ಳ ಅರಣ್ಯ ಇಲಾಖೆ ಅತಿಥಿಗೃಹ



ಕಾಡು ರಸ್ತೆ ದಾಟುತ್ತಿರುವ ಒಂಟಿ ಸಲಗ


ಮಲಬಾರ್ ಅಳಿಲು

ಮಾರ್ಷ ಹ್ಯಾರಿಯರ್ ಹದ್ದು


ಡ್ರ್ಯಾಂಗೋ



ಸರ್‍ಪೆಂಟ್ ಈಗಲ್


ನೀರಕ್ಕಿ



ಚಿತ್ರಗಳು ಮತ್ತು ಲೇಖನ.

ಶಿವು.ಕೆ

59 comments:

ಚುಕ್ಕಿಚಿತ್ತಾರ said...

ಓಹ್ .. ಸಧ್ಯ ಜೀಪ್ ಸರಿಯಾಯ್ತಲ್ಲ...!!
ನಿಮ್ಮ ಫೋಟೋಗಳ ಜೊತೆಗೆ ನಿಮ್ಮ ಅನುಭವಗಳೂ ರೋಮಾ೦ಚಕವಾಗಿವೆ.
ಧನ್ಯವಾದಗಳು.

shivu.k said...

ಚುಕ್ಕಿ ಚಿತ್ತಾರ,

ನನ್ನ ನಾಗರಹೊಳೆ ಅನುಭವ ನಿಜಕ್ಕೂ ರೋಮಾಂಚನವೇ ಸರಿ..
ಧನ್ಯವಾದಗಳು.

Dileep Hegde said...

ಅನುಭವ ಬರಹ ಮತ್ತು ಚಿತ್ರಗಳು ಅದ್ಭುತವಾಗಿವೆ..

shivu.k said...

ದಿಲೀಪ್,

ಥ್ಯಾಂಕ್ಸ್...

ಮನಸಿನ ಮಾತುಗಳು said...

photos tumba chennaagive.... ishta aaytu.. :-)

balasubramanya said...

ಶಿವೂ ಬರಹ ಚೆನ್ನಾಗಿದೆ.ಕಾಡಿನಲ್ಲಿ ಮೊಬೈಲ್ ಫೋನ್ ಕಳೆದುಕೊಂಡ ಪರದಾಟ ನನಗೂ ಅನುಭವ ವಾಗಿದೆ.ಫೋಟೋಗಳು ಚೆನ್ನಾಗಿ ಮೂಡಿಬಂದಿದೆ.ನನಗೆ ಅನ್ನಿಸುತ್ತೆ ನಿಮ್ಮ ಕಾಡಿನ ಅನುಭವ ಇನ್ನೂ ಇದ್ದು ಅದನ್ನು ಪೂರ್ಣವಾಗಿ ಬರೆದಿಲ್ಲವೆಂದು ಹೌದಾ ??ನೀವು ಸಾಮಾನ್ಯವಾಗಿ ಯಾವ ಸಣ್ಣ ವಿಚಾರಗಳನ್ನು ಬಿಡದೆ ಬರೆದಿರುತ್ತೀರಿ ಅಲ್ವ ಅದಕ್ಕೆ ಕೇಳ್ದೆ.ಆದರೂ ಚೆನ್ನಾಗಿದೆ.

jithendra hindumane said...

Realy super...!

shivu.k said...

ದಿವ್ಯರವೆರೆ,

ಫೋಟೊಗಳನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

shivu.k said...

Jithendra sir,

thanks..

shivu.k said...

ನಮ್ಮೊಳಗೊಬ್ಬ ಬಾಲು ಸರ್,

ಫೋಟೊಗಳು ಮತ್ತು ಬರಹಗಳನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..
ನೀವು ಹೇಳಿದಂತೆ ಬರೆಯುವುದು ಇನ್ನೂ ಇತ್ತು. ಇರ್ಪು ಜಲಪಾತ, ರಸ್ತೆಗಳು, ಅಲ್ಲಿನ ಬುಡಕಟ್ಟು ಜನಗಳ ಫೋಟೊಗ್ರಫಿ...
ಆದ್ರೆ ಅವೆಲ್ಲವನ್ನು ಮುಂದೆ ಎಂದಾದರೂ ಬರೆಯುತ್ತೇನೆ. ಸದ್ಯ ನನ್ನ ಹೊಸ ಪುಸ್ತಕದ ಕೆಲಸದಲ್ಲಿ ತೊಡಗಿರುವುದರಿಂದ ಈ ಲೇಖನದ ಬರಹ ಇಷ್ಟಕ್ಕೆ ನಿಲ್ಲಿಸಿದ್ದೇನೆ.
ಫೋಟೊಗಳು ಮತ್ತು ಬರಹಗಳನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

shridhar said...

Shivu sir ..
Anubhava Lekhana matti photogalu cehnnagive ..

ಕ್ಷಣ... ಚಿಂತನೆ... said...

ಶಿವು ಅವರೆ,
ಒಂದೊಂದು ಚಿತ್ರವೂ ನಮ್ಮನ್ನು ನಾಗರಹೊಳೆಗೆ ಹೋಗುವಂತೆ ಮಾಡುತ್ತಿದೆ. ಸುಂದರ ಚಿತ್ರ ನಿಮ್ಮ ಕಾಡಿನ ಅನುಭವಗಳ ಬರಹ ಅದರೊಂದಿಗೆ ನಟ ಕೋಮಲ್‌ರವರ 'ಕನ್ನಡಿ'ಯಲ್ಲಿ ಸೆರೆಸಿಕ್ಕಿದ್ದು ಎಲ್ಲ ರೋಮಾಂಚಕವಾಗಿವೆ.

ಸ್ನೇಹದಿಂದ,

ದಿನಕರ ಮೊಗೇರ said...

tumbaa sundara chitragalu.... tumbaa ishta aaytu sir..... mobil kaLedukondu bareda vivarane kooda chennaagittu....

ಭಾಶೇ said...

ನಾನೇ ಕಾಡಿನ ಮಧ್ಯ ಸಿಲುಕಿಕೊಂಡಂತೆ ಅನ್ನಿಸಿತು! ತುಂಬಾ ರಸವತ್ತಾಗಿ ಬರೆದಿದ್ದೀರ

shivu.k said...

ಶ್ರೀಧರ್ ಸರ್,

ಕಾಡಿನ ಅನುಭವವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..ಹೀಗೆ ಬರುತ್ತಿರಿ..

shivu.k said...

ಚಂದ್ರು ಸರ್,

ಸಮಯಾಭಾವದಿಂದ ಇಲ್ಲಿ ನಟ ಕೋಮಲ್ ಬಗ್ಗೆ ಈ ಲೇಖನವನ್ನು ಬರೆಯಲಾಗಿಲ್ಲ. ನಾಗರಹೊಳೆ ಫೋಟೊಗಳನ್ನು ಮೆಚ್ಚಿದ್ದೀರಿ. ನೀವು ಬಿಡುವು ಮಾಡಿಕೊಂಡು ಒಮ್ಮೆ ಹೋಗಿ ನೋಡಿ ಬನ್ನಿ.

ಚಿತ್ರಗಳು ಮತ್ತು ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

shivu.k said...

ದಿನಕರ್ ಸರ್,

ಮೊಬೈಲ್ ಕಳೆದುಕೊಂಡ ಮೇಲೆ ಸ್ವಲ್ಪ ಹೊತ್ತು ಕಾಡಿನ ಅನುಭವವನ್ನು ಅನಂದಿಸಲಾಗಿರಲಿಲ್ಲ. ಕಾಡಿನ ಚಿತ್ರಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಭಾಶೇ,

ನೀವೇ ಕಾಡಿನಲ್ಲಿ ಸಿಕ್ಕಿಕೊಂಡಿರಾ! ನನ್ನ ಬರಹ ಸಾರ್ಥಕವಾಯಿತು...ಧನ್ಯವಾದಗಳು.

ಮನಸು said...

tumba chennagide sir article... foto;s antu sooper...

ವೆಂಕಟೇಶ್ ಹೆಗಡೆ said...

its very nice photography sir.

Subrahmanya said...

ನೀಲಕಂಠ ಪಕ್ಷಿಯ ಚಿತ್ರವಂತೂ ತುಂಬ ಚೆನ್ನಾಗಿದೆ. ನಿಮ್ಮ ಅನುಭವ ಮತ್ತು ಚಿತ್ರಗಳನ್ನು ಓದ್ತಾ ಇದ್ರೆ, ಅಲ್ಲಿಗೆ ಹೋಗಿ ಬಂದ ಅನುಭವವಾಗುತ್ತೆ .

PARAANJAPE K.N. said...

ಬರಹದಲ್ಲಿ ರೋಚಕತೆ, ಛಾಯಾಚಿತ್ರಗಳಲ್ಲಿ ಕೈಚಳಕ ಎದ್ದು ಕಾಣುತ್ತಿದೆ, ಚೆನ್ನಾಗಿದೆ

AntharangadaMaathugalu said...

ಫೋಟೋಗಳು ತುಂಬಾ ಚೆನ್ನಾಗಿವೆ... ನಿಮ್ಮ ರೋಚಕ ಅನುಭವ ಓದುತ್ತ ಸ್ವಲ್ಪ ಆತಂಕ ಆಗಿದ್ದಂತೂ ನಿಜ. ಇವುಗಳನ್ನು ನಮಗೂ ತಿಳಿಸುತ್ತಿರುವ ನಿಮಗೆ ಧನ್ಯವಾದಗಳು ಶಿವು ಸಾರ್......

ಶ್ಯಾಮಲ

Prasad Shetty said...

ನಿಮ್ಮ ಪ್ರವಾಸ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಫೋಟೊ ಸಹಿತ. 'photography' ಗಾಗಿ ಹೋಗೊದಾದ್ರೆ ಏನಾದ್ರು special permissions ತಗೊಬೇಕಾ?

sunaath said...

ಶಿವು,
ಭಯಾನಕ ಅನುಭವದಿಂದ ಪಾರಾಗಿ ಬಂದಿರಿ. ನೀವು ಕ್ಲಿಕ್ಕಿಸಿದ ಚಿತ್ರಗಳು ತುಂಬ ಸೊಗಸಾಗಿವೆ. ಈ ವನ್ಯಜೀವಿಗಳನ್ನು ನೋಡುವ ಅವಕಾಶ ನನಗೂ ಸಿಕ್ಕಿದಂತಾಯಿತು.

ವನಿತಾ / Vanitha said...

wow..ಫಸ್ಟ್ ಟೈಮ್ ಮಲಬಾರ್ ಅಳಿಲು ನ ಫೋಟೋ ನೋಡಿದ್ದು..ಅದ್ಭುತ ಬರಹ ಮತ್ತು ಚಿತ್ರಗಳು:-)

Shashi jois said...

ತುಂಬಾ ಚೆನ್ನಾಗಿದೆ ಲೇಖನ ..ನಾನೇ ಹೋಗಿದ್ದೇನಾ ಅಂತ ಅನಿಸಿತು..ಸುಂದರ ಚಿತ್ರಣ ದೊಂದಿಗೆ ಅದರ ವಿವರಣೆ ಚೆನ್ನಾಗಿತ್ತು...ನಿಮ್ಮ ಅನುಭವ ರೋಮಾಂಚಕವಾಗಿದೆ.

Unknown said...

baraha mattu chitr eradu chennagide sir :)

shivu.k said...

ಮನಸು ಮೇಡಮ್.

ಚಿತ್ರಗಳು ಮತ್ತು ಬರಹವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ನನ್ನೊಳಗಿನ ಕನಸು ವೆಂಕಟೇಶ್ ಹೆಗಡೆ ಸರ್,

ನನ್ನ ಬ್ಲಾಗಿಗೆ ಸ್ವಾಗತ. ಪೋಟೊಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ಸುಬ್ರಮಣ್ಯ ಸರ್,

ನೀಲಕಂಠ ಹಕ್ಕಿ ಬಲು ಸುಂದರವಾದುದು. ಅದು ನಮ್ಮ ರಾಜ್ಯಪಕ್ಷಿಯೂ ಕೂಡ. ನೀವು ಬರಹವನ್ನು ಓದಿ ನಾಗರಹೊಳೆಗೆ ನಮ್ಮ ಜೊತೆ ಪ್ರವಾಸ ಮಾಡಿದಂತೆ ಅನ್ನಿಸಿದ್ದಕ್ಕೆ ಥ್ಯಾಂಕ್ಸ್.

shivu.k said...

ಪರಂಜಪೆ ಸರ್,

ಛಾಯಾಚಿತ್ರಗಳು ಮತ್ತು ಬರಹದಲ್ಲಿನ ರೋಚಕತೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ಶ್ಯಾಮಲ ಮೇಡಮ್,

ಬರಹದಲ್ಲಿನ ರೋಚಕತೆ ಜೊತೆಗೆ ಅತಂಕ ನಿಮಗಾದಂತೆ ನಮಗೂ ಆಗಿತ್ತು. ಹೇಗೋ ಎಲ್ಲಾ ಸರಿಹೋಯಿತು. ಫೋಟೊಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ಪ್ರಸಾದ್ ಶೆಟ್ಟಿ ಸರ್‍,

ಪ್ರವಾಸ ಕಥನ ಮತ್ತು ಫೋಟೊಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ಮತ್ತೆ ಫೋಟೊಗ್ರಫಿಗಾಗಿ ಅಲ್ಲಿ ಅನುಮತಿ ಪಡೆಯಬೇಕಿಲ್ಲ. ಆದ್ರೆ ಕ್ಯಾಮೆರಾ ಶುಲ್ಕವನ್ನು ಕಟ್ಟಬೇಕು.
ನನ್ನ ಬ್ಲಾಗಿಗೆ ಬಂದಿದ್ದಕ್ಕೆ ಥ್ಯಾಂಕ್ಸ್..

shivu.k said...

ಸುನಾಥ್ ಸರ್,

ನಾಗರಹೊಳೆ ಪ್ರವಾಸದ ಅನೇಕ ಘಟನೆಗಳಲ್ಲಿ ಇದು ಒಂದು ನೀವು ಅದನ್ನು ಅನುಭವಿಸಿದ್ದಕ್ಕೆ ಮತ್ತು ನಾನು ಕ್ಲಿಕ್ಕಿಸಿದ ಫೋಟೊಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

ಸಾಗರದಾಚೆಯ ಇಂಚರ said...

ಶಿವೂ ಸರ್

ತುಂಬಾ ಚೆನ್ನಾಗಿದೆ ವಿವರಣೆ

ನಿನ್ನೇನೆ ಓದಿ ಕಾಮೆನ್ಟಿಸಿದೆ ಆದರೆ ಹೋಗ್ತಾ ಇರಲಿಲ್ಲ

ತುಂಬಾ ಚೆಂದದ ಫೋಟೋಗಳು ಸಹ

shivu.k said...

ವನಿತಾ,

ನಾನು ಮೊದಲ ಬಾರಿ ಮಲಬಾರ್ ಅಳಿಲು ಫೋಟೋಗಳನ್ನು ಕ್ಲಿಕ್ಕಿಸಿದ್ದು. ಮತ್ತೊಂದು ವಿಚಾರ ಗೊತ್ತಾ! ಇದೇ ಲೇಖನದ ಚಿತ್ರದಲ್ಲಿರುವ ಸರ್ಪೆಂಟ್ ಈಗಲ್ ಮಲಬಾರ್ ಅಳಿಲನ್ನು ಬೇಟೆಯಾಟಿ ದೇಹವನ್ನು ಸಿಗಿದು ನಿದಾನವಾಗಿ ತಿನ್ನುತ್ತದಂತೆ! ಎರಡರ ಚಿತ್ರಗಳು ನನಗೆ ಸಿಕ್ಕಿದ್ದು ನನ್ನ ಅದೃಷ್ಟವೇ ಸರಿ..
ಚಿತ್ರಗಳು ಮತ್ತು ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

shivu.k said...

ಶಶಿ ಮೇಡಮ್,

ಈ ಬಾರಿ ನಾಗರಹೊಳೆಯ ಅನುಭವ ನೀವೆಲ್ಲಾ ಹೇಳಿದಂತೆ ರೋಚಕವಾಗಿದ್ದು ನಿಜ. ಬರಹವನ್ನು ಓದಿ ನಮ್ಮ ಜೊತೆ ಕಾಡಿಗೆ ಬಂದ ಅನುಭವ ಆಗಿದ್ದು ನನ್ನ ಬರಹ ಸಾರ್ಥಕವಾಗಿದೆ ಎಂದುಕೊಳ್ಳುತ್ತೇನೆ..
ಧನ್ಯವಾದಗಳು.

shivu.k said...

Arya for you,

ಬರಹ ಮತ್ತು ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ಗುರುಮೂರ್ತಿ ಹೆಗಡೆ ಸರ್,

ನಿಮಗಾದ ತೊಂದರೆ ಅನೇಕರಿಗೆ ಆಗಿದೆ. ಬರಹ ಮತ್ತು ಚಿತ್ರಗಳನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

b.saleem said...

ಶಿವು ಸರ್,
ನಾಗರಹೊಳೆಯ ಅನುಭವ ನಿಜಕ್ಕೂ ರೊಚಕತೆಯಿಂದ
ಕೂಡಿದೆ,ಆದ್ರೆ ಚಿರತೆ ಬಂದಿದ್ರೆ ಇನ್ನು ಮಾಜಾ ಸಿಗ್ತಿತ್ತು.
ಫೊಟೊಗಳು ಚನ್ನಾಗಿವೆ.

ಮನಸಿನಮನೆಯವನು said...

ಬಚಾವ್ ಅನ್ನಿ..

ಚೆನ್ನಾಗಿವೆ ಫೋಟೋಗಳು.. ಆಕೆ ನಗುವಿಗೊಂದು ಅರ್ಥ ಕೊಟ್ಟಿದ್ದಾಳೆ..

shivu.k said...

ಸಲೀಂ,

ಚಿರತೆ ಬಂದಿದ್ದರೆ..ಆ ಕ್ಷಣದಲ್ಲಿ ಏನು ಐಡಿಯ ಹೊಳೆಯುತ್ತಿತ್ತೋ ಹಾಗೆ ಮಾಡುತ್ತಿದ್ದೆವು. ಒಟ್ಟಾರೆ ನಮ್ಮ ನಾಗರಹೊಳೆ ಪ್ರವಾಸ ರೋಚಕವಾಗಿದ್ದಂತೂ ಸರಿ..

ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಕತ್ತಲೆ ಮನೆ,

ಖಂಡಿತ ಬಚಾವ್! ಕಾಡುಪ್ರಾಣಿಗಳ ನಡುವೆ ಆ ಮಗುವಿನ ಫೋಟೊ ಸಿಕ್ಕಿದ್ದು ನನಗೂ ಖುಷಿ.

ಮನದಾಳದಿಂದ............ said...

ಅಂತೂ ಹೀಗೆಲ್ಲಾ ಆಗಿ ಮನೆ ಸೇರಿದ್ರಲ್ಲಾ?
ಫೋನು ಕೂಡ ಸಿಕ್ಕಿದ್ದು ಸಂತೋಷ ತಂತು.
ಚನ್ನಾಗಿತ್ತು ನಿಮ್ಮ ಅನುಭವದ ಬರಹ........
ಫೋಟೋಗಳು ಸೂಪರ್ರು.

ವಿ ಡಿ ಭಟ್ ಸುಗಾವಿ said...

ನಾನೂ ನಿಮ್ಮೊಂದಿಗಿದ್ದೇನೋ ಅನ್ನಿಸುವಂತಿದೆ, ಶಿವು.

shivu.k said...

ಮನದಾಳ ಪ್ರವೀಣ್ ಸರ್,

ನನ್ನ ಪ್ರವಾಸ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ವಿಡಿ ಭಟ್,

ನೀವು ಮುಂದಿನ ಬಾರಿ ನಮ್ಮೊಂದಿಗೆ ಬನ್ನಿ...

ಚಿತ್ರಾ said...

ಶಿವೂ,
ಬಹಳ ದಿನಗಳಿಂದ ನಿಮ್ಮ ಬ್ಲಾಗಿಗೆ ಹೆಜ್ಜೆ ಇಡಲಾಗಿರಲಿಲ್ಲ . ನಿಮ್ಮ ಸ್ವಿಮ್ಮಿಂಗ್ ಸಾಹಸವನ್ನು ಓದೋದರೂ ಕಾಮೆಂಟ್ ಹಾಕಲು ಆಗಿರಲಿಲ್ಲ. ದಯವಿಟ್ಟು ಕ್ಷಮಿಸಿ.
ಇಂದು ಸ್ವಲ್ಪ ಬಿಡುವಾಗಿ ಅವೆಲ್ಲವನ್ನೂ ಓದಿದೆ. ನಿಮ್ಮ ನಾಗರಹೊಳೆ ಪ್ರವಾಸವಂತೂ ಮೈ ಜುಮ್ಮೆನಿಸುತ್ತದೆ. ಸುಂದರವಾದ ಚಿತ್ರಗಳು .
ಎಂದಿನಂತೆ ಲವಲವಿಕೆಯ ಬರಹ ! ಚೆನ್ನಾಗಿವೆ. ತಡವಾಗಿದ್ದಕ್ಕೆ ಕ್ಷಮಿಸಿ.

shivu.k said...

ಚಿತ್ರ ಮೇಡಮ್,

ಪರ್ವಾಗಿಲ್ಲ ಬಿಡಿ. ನಾನು ಕೂಡ ನಮ್ಮ ಮುಂದಿನ ಪುಸ್ತಕಗಳ ವಿಚಾರದಲ್ಲಿ ಬ್ಯುಸಿಯಾಗಿರುವುದರಿಂದ ಯಾರ ಬ್ಲಾಗಿಗೂ ಹೋಗಲಾಗುತ್ತಿಲ್ಲ. ನಾಗರಹೊಳೆಯ ಪ್ರವಾಸ ಕಥನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ಮುಂದಿನ ಭಾಗದಲ್ಲಿ ನನ್ನ ಎರಡನೇ ಹೊಸ ಪುಸ್ತಕ ಮತ್ತು ಡಾ.ಆಜಾದ್‍ರ ಹೊಸ ಪುಸ್ತಕದ ಮುಖಪುಟಗಳನ್ನು ಬ್ಲಾಗಿಗೆ ಹಾಕುತ್ತೇನೆ. ಹೇಗಿದೆ ಅಂತ ನಿಮ್ಮ ಅಭಿಪ್ರಾಯ ತಿಳಿಸಿ.

prabhamani nagaraja said...

ನಿಮ್ಮ ಅನುಭವವನ್ನು ಓದುವವರು ತಮ್ಮದೇ ಎ೦ದುಕೊಳ್ಳುವಷ್ಟು ಸಹಜವಾಗಿ ಬರೆದಿದ್ದೀರಿ. ಫೋಟೋಗಳು ಬಹಳ ಚೆನ್ನಾಗಿವೆ. ಧನ್ಯವಾದಗಳು. ನೀವು ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ನೀಡಿ.

shivu.k said...

ಪ್ರಭಾಮಣಿಯವರೆ,

ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಬಿಡುವು ಮಾಡಿಕೊಂಡು ನಿಮ್ಮ ಬ್ಲಾಗಿಗೂ ಬರುತ್ತೇನೆ.
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

ranjith said...

ಗುಬ್ಬಿ ಎಂಜಲು ಮುಖಪುಟ ತುಂಬ ಸೊಗಸಾಗಿದೆ.

ಅದರಲ್ಲಿನ ಬರಹಗಳು ಬ್ಲಾಗಿನದ್ದೇನ ಅಥವ ಹೊಸತೂ ಇವೆಯಾ?

ಈ ಬರಹದ ಫೋಟೋಗಳೂ ಮುದ್ದಾಗಿವೆ!

ರ‍ಂಜಿತ್

ಸೀತಾರಾಮ. ಕೆ. / SITARAM.K said...

ಛಾಯಾಚಿತ್ರಗಳು ಅದ್ಭುತವಾಗಿವೆ. ತಮ್ಮ ಪ್ರವಾಸ ಕಥನವು ರೋಚಕವಾಗಿದೆ. ತಮ್ಮ ಫೋನ್ ಸುರಕ್ಷಿತವಾಗಿ ಸಿಕ್ಕದ್ದು ಕೊನೆಗೆ ಖುಷಿಯಾಯಿತು.

Prashanth Arasikere said...

Hi shivu,


Nimma nagarahole anubava jothe photo saha tumba chennagide..

ಸುಧೇಶ್ ಶೆಟ್ಟಿ said...

ತು೦ಬಾ ತಡವಾಗಿ ಓದಿದ್ದೇನೆ... ತು೦ಬಾ ಇಷ್ಟ ಆಯಿತು... ಏನೆಲ್ಲಾ ಸಾಹಸಗಳನ್ನು ಮಾಡುತ್ತೀರಿ ಮಾರಾಯ್ರೆ :)

Lahari said...
This comment has been removed by the author.
Lahari said...

ನಿಮ್ಮ ಬಳಗಕ್ಕೆ ನನ್ನ ಧನ್ಯವಾದಗಳು. ನಿಮ್ಮ ಪೋಟೋಗಳು, ಅನುಭವಗಳು ಈಗ ತಿಳಿಯಲು ಪ್ರಾರಂಭಿಸಿದ್ದೇನೆ ನನಗೆ ತುಂಭಾ ಇಷ್ಟವಾದದ್ದು ಏನೆಂದರೆ ಬರವಣಿಗೆಯ ಶೈಲಿ,ಅದರ ವಿನ್ಯಾಸ ತುಂಭಾ ಥ್ಯಾಂಕ್ಸ್............

Clark said...

ಸಲೀಂ, ಚಿರತೆ ಬಂದಿದ್ದರೆ..ಆ ಕ್ಷಣದಲ್ಲಿ ಏನು ಐಡಿಯ ಹೊಳೆಯುತ್ತಿತ್ತೋ ಹಾಗೆ ಮಾಡುತ್ತಿದ್ದೆವು. ಒಟ್ಟಾರೆ ನಮ್ಮ ನಾಗರಹೊಳೆ ಪ್ರವಾಸ ರೋಚಕವಾಗಿದ್ದಂತೂ ಸರಿ.. ಪ್ರತಿಕ್ರಿಯೆಗೆ ಧನ್ಯವಾದಗಳು.