Monday, December 14, 2009

ಬೆಂಗಳೂರಲ್ಲಿ ಬಣ್ಣದ ಚಿಟ್ಟೆಗಳಿಲ್ವಾ?

ಯಾಕಿಲ್ಲ? ಬೆಂಗಳೂರಿನಲ್ಲಿ ಬಣ್ಣ ಬಣ್ಣದ ತರಾವರಿ ಧಿರಿಸುಗಳನ್ನು ಹಾಕಿಕೊಂಡು ಓಡಾಡುವ ಬಣ್ಣದ ಚಿಟ್ಟೆಗಳು ಕಾಲೇಜು, ಆಫೀಸು, ರಸ್ತೆ ರಸ್ತೆಗಳು, ಮಾಲಾಮಾಲುಗಳು ಎಲ್ಲಾ ಕಡೆ ಇವೆಯಲ್ರೀ ಅಂತೀರಾ!

ಹೌದು ನೀವು ಹೇಳೋದು ಸರಿ ಖಂಡಿತವಾಗಿ ನಮ್ಮ ಬೆಂಗಳೂರಿನಲ್ಲಿ ಅದರಲ್ಲೂ ಈ ಚಳಿಗಾಲದಲ್ಲಿ ಪ್ರೆಶ್ಶಾಗಿ ಲವಲವಿಕೆಯಿಂದ ಓಡಾಡುವ ಹುಡುಗಿಯರಿಗೇನು ಕಡಿಮೇಯೇ? ಪ್ರತಿಯೊಬ್ಬರೂ ಬಣ್ಣಬಣ್ಣದ ಬಟ್ಟೆಗಳನ್ನು ಹಾಕಿಕೊಂಡು ಓಡಾಡುತ್ತಾ, ಬಸ್ ಸ್ಟಾಪಿನಲ್ಲಿ ಕಾಯುತ್ತಾ, ಆಫೀಸಿನಲ್ಲಿ ಕಾಯಕಮಾಡುತ್ತಾ ಅವರವರದೇ ಲೋಕದಲ್ಲಿರುತ್ತಾರೆ. ಆ ವಿಚಾರ ಬಿಡಿ, ನಾನು ಹೇಳುತ್ತಿರುವುದು ನಿಜವಾದ ಚಿಟ್ಟೆಗಳ, ನಾವು ಕಾಣದ ಲೋಕದ ಬಗ್ಗೆ. ಹೌದು ಕಣ್ರೀ, ಬೆಂಗಳೂರಲ್ಲಿನ್ನು ಚಿಟ್ಟೆಗಳಿವೆ. ಸಾವಿರಾರು ಮರಗಳನ್ನು ಕಡಿದು ರಸ್ತೆಗಳನ್ನು ಮಾಡುತ್ತಿದ್ದರೂ, ಅವುಗಳ ಸೂರುಗಳನ್ನು ಕಿತ್ತುಕೊಂಡಿದ್ದರೂ, ಕೆಲವು ಚಿಟ್ಟೆಗಳು, ಪತಂಗಗಳು ನಮ್ಮ ಅಕ್ಕಪಕ್ಕದಲ್ಲೇ ನಮಗೆ ಕಾಣದಂತೆ ದಂಪತಿಗಳಾಗುತ್ತವೆ, ಮೊಟ್ಟೆಯಿಡುತ್ತವೆ, ಹುಳುವಾಗಿ ಹೊರಬಂದು, ಬೆಳೆದು ಪ್ಯೂಪಗಳಾಗಿ ತದ ನಂತರ ಸುಂದರ ಚಿಟ್ಟೆಯಾಗಿ ಬರುತ್ತವೆ, ಹಾರಾಡುತ್ತವೆ, ನಮಗೆ ಕಂಡೂ ಕಾಣದಂತೆ. ಎಲೆಮರೆಕಾಯಿಯಂತೆ. ಈ ವಿಚಾರದಲ್ಲಿ ಇತ್ತೀಚೆಗೆ ಆದ ಅನುಭವ, ಅದರ ಹಿಂದೆ ಬಿದ್ದು ನನಗಾದ ಗೊಂದಲ, ಭಯ, ಕಾಳಜಿ, ನಂತರ ಕ್ಲಿಕ್ಕಿಸಿದ ಚಿತ್ರಗಳು. ಇವುಗಳನ್ನೆಲ್ಲಾ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿದೆ.

ಕಳೆದ ವಾರ ಹಿಂದು ದಿನಪತ್ರಿಕೆ ಕಛೇರಿಯ ಪಕ್ಕದಲ್ಲಿರುವ ವಾರ್ತಾ ಇಲಾಖೆಗೆ[ಇನ್‍ಫೆಂಟ್ರಿ ರಸ್ತೆ]ಕೆಲಸ ನಿಮಿತ್ತ ಹೋಗಿದ್ದೆ. ಹೊರಬಂದಾಗ ಎರಡು ಬದಿಯಲ್ಲಿ ಹಾಕಿದ್ದ ಪಾಮ್ ಟ್ರಿ ಗಿಡಗಳು ಕಂಡು ಬಂದವು. ನಾನು ಬೆಂಗಳೂರಿನ ಯಾವುದೇ ಕಚೇರಿಗೆ ಹೋದರೂ ಅಲ್ಲಿ ಕಟ್ಟಿರುವ ಸುಂದರ ವಿನ್ಯಾಸದ ಕಟ್ಟಡದ ಜೊತೆಗೆ ಕೆಲವು ಗಿಡಗಳಿಗೆ ಜಾಗವಿದೆಯಾ? ಅವುಗಳನ್ನು ಬೆಳೆಸಿದ್ದಾರಾ? ಇತ್ಯಾದಿಗಳನ್ನು ನೋಡುತ್ತೇನೆ. ಇದ್ದ ಮರಗಳನ್ನು ಕಡಿದು ಅದೇ ಜಾಗದಲ್ಲಿ ಬಿಲ್ಡಿಂಗ್ ಹಬ್ಬಿಸಿದ್ದರೂ ಪರಿಹಾರವಾಗಿ ಕೆಲವು ಗಿಡಗಳನ್ನು ಹಾಕಬಹುದಲ್ವಾ ಅನ್ನೋದು ನನ್ನ ಆಸೆ. ಮುಂಭಾಗ ಅಥವ ಹಿಂಬಾಗ ಜಾಗ ಬಿಟ್ಟಿದ್ದರೆ ಅದು ವಾಹನಗಳ ನಿಲುಗಡೆಗೆ ಮೀಸಲಾಗಿರುತ್ತದೆಯೋ ಹೊರತು ಗಿಡಗಳಿಗೆ ಜಾಗವಿಲ್ಲ. ನನಗೆ ಹೆಚ್ಚಾಗಿ ಈ ವಿಚಾರದಲ್ಲಿ ನಿರಾಸೆಯೇ ಆಗುತ್ತದೆ. ಆದರೂ ಕೆಲವು ಕಡೆ ಅಲಂಕಾರಿಕ ಗಿಡಗಳನ್ನು ಬೆಳೆಸಿರುತ್ತಾರೆ. ಅವು ಬೆಳೆಸಿದವರಿಗೆ ಖುಷಿ ಕೊಡಬಹುದು. ನನಗಾಗುವುದಿಲ್ಲ. ಮನೆಯಲ್ಲಿ ಅಥವ ಹೊರಗೆಲ್ಲೂ ಕೆಲಸ ಕಾರ್ಯ ಮಾಡದೇ ಸದಾ ಮೇಕಪ್ ಮಾಡಿಕೊಳ್ಳುತ್ತಾ, ಕೃತಕ ಫೋಸು ಕೊಡುತ್ತಾ, ಹೆತ್ತವರಿಗೂ, ಭೂಮಿಗೂ ಭಾರವಾಗಿರುವ ಒಂಥರ ಬೆಡಗಿನ ಬಿನ್ನಾಣಗಿತ್ತಿ ಹುಡುಗಿಯರ ಹಾಗೆ.

ಇರಲಿ ಈ ಪಾಮ್ ಟ್ರೀ ಗಿಡಗಳು ಅದೇ ರೀತಿ ಅಲಂಕಾರಿಕವಾದರೂ ಇತ್ತೀಚೆಗೆ ಉಪಯೋಗಕ್ಕೆ ಬರುತ್ತಿವೆ. ಹೇಗೆಂದರೇ ಒಂದು ಜಾತಿಯ ಚಿಟ್ಟೆಗಳಿಗೆ ವರ್ಷಪೂರ್ತಿ ಅತಿಥೇಯರಾಗಿ[Host plant] ಆಶ್ರಯ ಕೊಡುತ್ತವೆ. ಇಂಡಿಯನ್ ಜೈಂಟ್ ರೆಡ್ ಹೈ ಎನ್ನುವ ಬಣ್ಣದ ಚಿಟ್ಟೆಗಳು ಎಲ್ಲೆಲ್ಲೋ ಹನಿಮೂನ್ ಮಾಡಿದರೂ ಇದೇ ಗಿಡದ ಮೇಲೆ ಕುಳಿತು ಮೊಟ್ಟೆ ಇಡುತ್ತವೆ. ಕೆಲವು ದಿನಗಳ ನಂತರ ಮೊಟ್ಟೆಯೊಡೆದು ದೇಹ ಪೂರ್ತಿ ಫ್ರಿಲ್ಲುಗಳೇ ತುಂಬಿರುವ ಬಿಳಿ ವಸ್ತ್ರ ಧರಿಸಿದಂತೆ ಸುಂದರ ಹುಳು ಹೊರಬರುತ್ತದೆ.
ಬಿಳಿದಾರದಿಂದ ಸುತ್ತಿದ ಬಟ್ಟೆ ಧರಿಸಿದ ಜೈಂಟ್ ರೆಡ್ ಹೈ ಹುಳು.

ಇಲ್ಲೊಂದು ವಿಚಾರವನ್ನು ನಾನು ಹೇಳಲೇಬೇಕು. ನಮ್ಮಲ್ಲಿ[ಮನುಷ್ಯರಲ್ಲಿ]ಮಕ್ಕಳು ಹುಟ್ಟಿದ ಮೇಲೆ ಅವುಗಳನ್ನು ಪೋಷಿಸಿ, ಬೆಳೆಸಿ, ಓದಿಸಿ, ಸುಸಂಶ್ಕೃತರನ್ನಾಗಿ[೧೮-೨೦ ವರ್ಷಗಳವರೆಗೆ] ಮಾಡಿ ನಿನ್ನ ಬದುಕು ನೀನು ನೋಡಿಕೊ ಅನ್ನುತ್ತೇವೆ. ಪ್ರಾಣಿ-ಪಕ್ಷಿಗಳಲ್ಲಿ ನಮ್ಮಷ್ಟಿಲ್ಲದಿದ್ದರೂ ಇದೇ ಮಟ್ಟದ ಲಾಲನೆ ಪಾಲನೆ ಇದ್ದೇ ಇರುತ್ತದೆ. ಆದ್ರೆ ಈ ಚಿಟ್ಟೆಗಳ ಲೋಕದಲ್ಲಿ ಇದೆಲ್ಲಾ ಇರುವುದಿಲ್ಲ. ಹನಿಮೂನ್ ಮುಗಿಸಿದ ಮೇಲೆ ಸರಿಯಾದ ಗಿಡದ ಮೇಲೆ ಮೊಟ್ಟೆ ಇಟ್ಟುಬಿಟ್ಟರೆ ಅವುಗಳ ಜವಾಬ್ದಾರಿ ಮುಗಿಯಿತು. ನಂತರ ಮೊಟ್ಟೆಯೊಡೆದು ಹೊರಬರುವ ಹುಳುವೇ ತನ್ನ ಆಹಾರವನ್ನು ಹುಡುಕಿಕೊಂಡು ತಿಂದುಂಡು ಬೆಳೆದು ತನಗೊಂದು ತಾತ್ಕಾಲಿಕ ಗೂಡನ್ನು ಕಟ್ಟಿಕೊಂಡು[ಪ್ಯೂಪ], ಅದರೊಳಗೆ ತನ್ನ ದೇಹಪರಿವರ್ತನೆಯಾಗಿ ಹೊರಬರುವಾಗ ಸುಂದರ ಚಿಟ್ಟೆಯಾಗಿರುತ್ತದೆ.


ಜೈಂಟ್ ರೆಡ್ ಹೈ[joint red eye] ಚಿಟ್ಟೆ ಆಗ ತಾನೆ ತನ್ನ ಪ್ಯೂಪದಿಂದ ಹೊರಬಂದು ಕುಳಿತಿದೆ.


ನೀವು ಈ ಲೇಖನವನ್ನು ಓದಿದ ಮೇಲೆ ನಿಮ್ಮ ಮನೆ, ಕಛೇರಿ ಎಲ್ಲೇ ಆಗಲಿ ನೀವೊಮ್ಮೆ ಪಾಮ್ ಟ್ರೀ ಕಡೆ ಗಮನವಿಟ್ಟು ಕಣ್ಣಾಯಿಸಿ. ನಿಮಗೆ ಇಂಥ ಹುಳು ಅಥವ ಪ್ಯೂಪ ಕಂಡುಬರುತ್ತದೆ. ಆ ಹುಳು, ತೆಂಗಿನ ಗರಿಯಂತಿದ್ದರೂ ಅದಕ್ಕಿಂತ ಚಿಕ್ಕದಾಗಿರುವ ಇದರ ಎಲೆಗಳನ್ನು ತಿಂದು ಬೆಳೆದು ನಂತರ ಅದೇ ಎಲೆಗಳ ನಡುವೆ ತನ್ನ ದೇಹದಿಂದಲೇ ಸ್ರವಿಸಿದ ಅಂಟು ಮತ್ತು ದಾರದಿಂದ ಹೆಣೆದು ಮಳೆ, ಗಾಳಿ, ಬಿಸಿಲು ಯಾವುದರಿಂದಲೂ ತೊಂದರೆಯಾಗದಂತ ಕೊನೆಗೆ ಪಕ್ಷಿಗಳ ಕಣ್ಣಿಗೂ ಕಾಣದಂತೆ ತಲೆಕೆಳಕಾಗಿ ತೋರು ಬೆರಳು ಗಾತ್ರದ ಗೂಡನ್ನು ಕಟ್ಟಿಕೊಳ್ಳುತ್ತದೆ. ಅದರೊಳಗೆ ಸೇರಿಕೊಂಡು ಪ್ಯೂಪವಾಗಿಬಿಡುತ್ತದೆ. ಸುಮಾರು ಹದಿನೈದು ದಿನಗಳ ನಂತರ ಪ್ಯೂಪದಿಂದ ಕಂದು ಮಿಶ್ರಿತ ಬಣ್ಣದ ಪತಂಗವಾಗಿ ಹೊರಬರುತ್ತದೆ. ಇದನ್ನೆಲ್ಲಾ ಗಮನಿಸಿ ಅದರ ಹಿಂದೆ ಬಿದ್ದು ಇದರ ಎಲ್ಲಾ ಚಿತ್ರಗಳನ್ನು ಕ್ಲಿಕ್ಕಿಸಿದ್ದರಿಂದ ಈ ಆಲಂಕಾರಿಕ ಗಿಡ ಈ ಚಿಟ್ಟೆಗಳಿಗೆ [Host plant]ಅತಿಥೇಯವಾಗಿದೆಯಲ್ಲ ಅಂತ ಖುಷಿಯಾಗಿತ್ತು.

ಇದೇ ರೀತಿ ನಾನು ವಾರ್ತಾ ಇಲಾಖೆಯ ಎರಡು ಬದಿಯ ಗಿಡಗಳನ್ನು ನೋಡಿದಾಗ ಹೊಸದೊಂದು ಆಶ್ಚರ್ಯ ಕಾದಿತ್ತು. ಇಲ್ಲಿ ಜೈಂಟ್ ರೆಡ್ ಹೈ ಚಿಟ್ಟೆಗಳ ಬದಲಿಗೆ ಬೇರೆ ಪ್ಯೂಪಗಳು ಕಾಣಿಸಬೇಕೆ.! ನನ್ನ ಆನಂದಕ್ಕೆ ಪಾರವೇ ಇಲ್ಲ. ಇದು ಹೇಗೆ ಸಾಧ್ಯ? ಒಂದು ಚಿಟ್ಟೆಗೆ ಅತಿಥೇಯವಾಗಿದ್ದು ಮತ್ತೊಂದು ಬೇರೆ ಜಾತಿಯ ಹುಳುವಿಗೂ ಜಾಗ ಮತ್ತು ಆಹಾರ ಕೊಡುವ ಸಾಧ್ಯತೇ ಇದೆಯಾ ಅಂತ ಮೊದಲು ಅನ್ನಿಸಿದರೂ ಕಾಗೆ ಗೂಡಿನಲ್ಲಿ ಕೋಗಿಲೆ ಮೊಟ್ಟೆ ಇಟ್ಟಂತೆ, ನಾವು ಮನೆ, ಅಪಾರ್ಟ್‍ಮೆಂಟ್ ಕಟ್ಟಿಸಿ ಬೇರೆಯವರಿಗೆ ಬಾಡಿಗೆಗೆ ಕೊಡುವಂತೆ ಇಲ್ಲಿಯೂ ಜೈಂಡ್ ರೆಡ್ ಹೈ ಚಿಟ್ಟೆಗಳು ಈ ಹೊಸ ಹುಳುಗಳಿಗೆ ಆ ರೀತಿ ಬಾಡಿಗೆ ಕೊಟ್ಟಿರಬಹುದೇ ಅನ್ನಿಸಿತು. ಇರಲಿ ಹೇಗೂ ಪ್ಯೂಪ ಕಾಣಿಸಿದೆ, ಅದರಲ್ಲಿ ಯಾವ ರೀತಿಯ ಚಿಟ್ಟೆಯೋ ಅಥವ ಪತಂಗವೋ ಹೊರಬರುವುದಂತೂ ಖಂಡಿತ. ಅದನ್ನು ನೋಡಿಯೇ ಬಿಡೋಣ ಅಂದುಕೊಂಡು ಒಂದು ಪ್ಯೂಪವಿರುವ ಎಲೆಯನ್ನು[ನನ್ನ ಜೇಬಿನಲ್ಲಿ ಒಂದು ಸಣ್ಣ ಕಟ್ಟರ್ ಇದ್ದೇ ಇರುತ್ತದೆ]ಕಟ್ ಮಾಡಿಕೊಂಡೆ.

ಪ್ಯೂಪವಿರುವ ಎಲೆಯನ್ನು ತೆಗೆದುಕೊಂಡ ಮೇಲೆ ಅದನ್ನು ಸುರಕ್ಷಿತವಾಗಿ ನಮ್ಮ ಮನೆಗೆ ತರಬೇಕಲ್ವ. ಅದು ಒಂಥರ ಭಯ ಭಕ್ತಿಯ ಕೆಲಸ. ಹೇಗೆಂದರೆ ಏಳು ತಿಂಗಳ ಬಸುರಿಯನ್ನು ನಿದಾನವಾಗಿ ಸುರಕ್ಷಿತವಾಗಿ ಆಸ್ಪತ್ರೆಗೆ ಕರೆದೊಯ್ಯುವಂತೆ. ಇಂಥವು ಸಿಗುತ್ತವೆ ಎಂದು ನನಗೆ ಗೊತ್ತಿರುವುದರಿಂದ ನನ್ನ ಸ್ಕೂಟಿಯ ಡಿಕ್ಕಿಯಲ್ಲಿ ಅದಕ್ಕಾಗಿ ಪುಟ್ಟ ಜಾಗ ಮಾಡಿರುತ್ತೇನೆ. ಗಿಡದಲ್ಲಿ ಯಾವ ಸ್ಥಿತಿಯಲ್ಲಿ ಇರುತ್ತದೋ ಅದೇ ಸ್ಥಿತಿಯಲ್ಲಿಯೇ ನನ್ನ ಡಿಕ್ಕಿಯಲ್ಲಿಟ್ಟುಕೊಳ್ಳಬೇಕು.[ಬಸುರಿಯನ್ನು ತಲೆಕೆಳಕಾಗಿ ಮಲಗಿಸಿ ಆಟೋ ಅಥವ ಕಾರಿನಲ್ಲಿ ಕರೆದೊಯ್ಯಲು ಸಾಧ್ಯವೇ?]. ಇದೆಲ್ಲಾ ಮುಗಿದ ನಂತರ ನನ್ನ ಇನ್ನುಳಿದ ಕೆಲಸವನ್ನೆಲ್ಲಾ ನಿಲ್ಲಿಸಿ ತುರ್ತುಪರಿಸ್ಥಿತಿಯ ವಾಹನದಂತೆ ಮನಸ್ಸಿನಲ್ಲೇ ಅಲಾರಾಂ ಬಾರಿಸಿಕೊಂಡು ನಿದಾನವಾಗಿ ನನ್ನ ಸ್ಕೂಟಿಯನ್ನು ಓಡಿಸಿಕೊಂಡು ಬರುತ್ತೇನೆ. ಈ ಸಮಯದಲ್ಲಿ ಯಾವುದಾದರೂ ಹಂಪ್ಸ್ ಮೇಲೆ ಜಗ್ಗಿದಾಗ, ಹಳ್ಳದೊಳಗೆ ಕುಲುಕಿದಾಗ ನಾನೇ ಪ್ಯೂಪ ಸ್ಥಿತಿಯಲ್ಲಿದ್ದಂತೆ ಭಾಸವಾಗಿ ಮನಸ್ಸಿನಲ್ಲೇ ನಲುಗಿಬಿಡುತ್ತೇನೆ.

ಕೊನೆಗೂ ಮನೆಗೆ ಸುರಕ್ಷಿತವಾಗಿ ತಲುಪಿ ಆ ಪ್ಯೂಪವಿರುವ ಎಲೆಗಳನ್ನು ಅದೇ ಸ್ಥಿತಿಯಲ್ಲಿ ಒಂದು ಹೂಕುಂಡದ ಮೇಲೆ ಇಟ್ಟುಬಿಟ್ಟರೆ ಅಲ್ಲಿಗೆ ದೊಡ್ಡ ಸಾಧನೆ ಮಾಡಿದಂತೆ.

ಇಂಡಿಯನ್ ಪಾಮ್ ಬಾಬ್ ಚಿಟ್ಟೆಯ ಪ್ಯೂಪ


ಈ ವಿಚಾರದಲ್ಲಿ ನನ್ನ ಮನೆ ಒಂದು ರೀತಿ ಆಸ್ಪತ್ರೆಯಿದ್ದಂತೆ. ಹೊರಗಿನ ಜಾಗಕ್ಕಿಂತ ಹೆಚ್ಚು ಸುರಕ್ಷಿತ. ಹೇಗೆಂದರೆ ಹೊರಗೆ ಪ್ರಕೃತಿಯ ಜೊತೆಗಿದ್ದರೂ ಇವುಗಳು ಪಕ್ಷಿಗಳಿಗೆ, ಕೆಲವು ಜೇಡಗಳಿಗೆ, ಅಥವ ಪ್ರೈಯಿಂಗ್ ಮಾಂಟಿಸ್, ಕ್ರಿಕೆಟ್ ಇತ್ಯಾದಿ ಹುಳುಗಳಿಗೆ ಆಹಾರವಾಗುವುದೇ ಹೆಚ್ಚು. ನೂರಕ್ಕೆ ಐದರಷ್ಟು ಪ್ಯೂಪಗಳು ಮಾತ್ರ ಸುರಕ್ಷಿತವಾದ ಚಿಟ್ಟೆಗಳಾಗಿ ಹೊರಬರುತ್ತವೆ. ನಮ್ಮ ಮನೆಯಲ್ಲಿ ಇವ್ಯಾವುದರ ಕಾಟವಿಲ್ಲ. ಮತ್ತೆ ಜಿರಲೆಗಳಿಲ್ಲ[ಅದಕ್ಕಾಗಿ ಜಿರಲೆ ಕತೆ ಓದಿ] ಹಲ್ಲಿಗಳಂತೂ ಇಲ್ಲವೇ ಇಲ್ಲವಾದ್ದರಿಂದ ಖಂಡಿತ ಪ್ರತಿಯೊಂದು ಚಿಟ್ಟೆಗಳು ನಮ್ಮ ಮನೆಯಲ್ಲಿ ಸುರಕ್ಷಿತವಾಗಿ ಸಂದರವಾಗಿಯೇ ಹುಟ್ಟುತ್ತವೆ. [ಈವರೆಗೆ ಈ ರೀತಿ ಹದಿಮೂರು ಜಾತಿಯ ಚಿಟ್ಟೆಗಳು ಮತ್ತು ಪತಂಗಗಳು ಹುಟ್ಟಿವೆ ಅವುಗಳಲ್ಲಿ ಮೂರನ್ನು ನನ್ನ ಬ್ಲಾಗಿನಲ್ಲಿ ಆಗಲೇ ಬರೆದಿದ್ದೇನೆ.]

ಇರಲಿ ಮತ್ತೆ ಈ ಪ್ಯೂಪ ವಿಚಾರಕ್ಕೆ ಬರೋಣ. ಈ ಪ್ಯೂಪದಿಂದ ಯಾವ ಚಿಟ್ಟೆ ಹೊರಬರಬಹುದು. ಇಷ್ಟಕ್ಕೂ ಈ ಪ್ಯೂಪ ಚಿತ್ರ ನನ್ನಲ್ಲಿರುವ ಚಿಟ್ಟೆಗಳ ಪುಸ್ತಕದಲ್ಲಿದೆಯಾ ಅಂತ ಹುಡುಕಿದೆ. ಅಲ್ಲೆಲ್ಲೂ ಕಾಣಸಿಗಲಿಲ್ಲ. ಪ್ರತಿದಿನ ಬೆಳಿಗ್ಗೆ ಮಧ್ಯಾಹ್ನ, ಸಂಜೆ ಇದನ್ನು ಗಮನಿಸುತ್ತಿದ್ದೆ. ರಾತ್ರಿ ಸಮಯದಲ್ಲಿ ಚಿಟ್ಟೆಗಳು ಪ್ಯೂಪದಿಂದ ಹೊರಬರುವುದಿಲ್ಲ. ಏಕೆಂದರೆ ಹೊರಬಂದ ತಕ್ಷಣ ಅವುಗಳ ರೆಕ್ಕೆಗಳಿಗೆ ಸೂರ್ಯನ ಕಿರಣದ ಶಾಖದಿಂದ ಶಕ್ತಿ ಬರುತ್ತದೆಯಾದ್ದರಿಂದ ಅವು ಬೆಳಗಿನ ಜಾವ ಮಾತ್ರ ಹೊರಬಂದು ಸೂರ್ಯನಿಗಾಗಿ ಕಾಯುತ್ತಿರುತ್ತವೆ. ಆದ್ರೆ ಎಲ್ಲಾ ಚಿಟ್ಟೆಗಳು ಹೀಗಾಲ್ಲ, ಕೆಲವು ಆಡ್ನಾಡಿ ಬುದ್ಧಿಯ ಚಿಟ್ಟೆಗಳು ರಾತ್ರಿಯೇ ಹೊರಬಂದು ಒದ್ದಾಡಿ ಮನೆಯಲ್ಲೆಲ್ಲಾ ಹಾರಾಡಿ, ಮುಂಜಾನೆ ಬಾಗಿಲು ತೆಗೆಯುತ್ತಿದ್ದಂತೆ ಹಾರಿ ಹೋಗಿದ್ದು ಉಂಟು. ಇಷ್ಟೆಲ್ಲಾ ಮಾಡಿ ಆ ಚಿಟ್ಟೆಯ ಫೋಟೋ ತೆಗೆಯಲಾಗಲ್ಲಿಲ್ಲವಲ್ಲ ಅಂತ ನಿರಾಸೆಯಾಗಿದ್ದು ಉಂಟು.

ಹತ್ತನೇ ದಿನ ಸಂಜೆ ಈ ಪ್ಯೂಪದ ಬಣ್ಣ ಬದಲಾಗತೊಡಗಿತು. ಅಂದರೆ ನಾಳೆ ಬೆಳಿಗ್ಗೆ ಖಂಡಿತ ಹೊರಬರುತ್ತದೆ ಅನ್ನುವ ಸೂಚನೆ. ಮರುದಿನ ಬೆಳಿಗ್ಗೆ ಬೇಗ ದಿನಪತ್ರಿಕೆ ಕೆಲಸ ಮುಗಿಸಿ ಮನೆಗೆ ಓಡಿಬಂದೆ. ರಾತ್ರಿಯೇ ಕ್ಯಾಮೆರವನ್ನು ಸ್ಟ್ಯಾಂಡಿಗೆ ಹಾಕಿ ಸೆಟ್ ಮಾಡಿದ್ದೆ. ಆದರೂ ನಾನು ಬರುವ ಹೊತ್ತಿಗೆ ಹೊರಬಂದು ಅದೇ ಪ್ಯೂಪವನ್ನು ಹಿಡಿದು ಕೂತಿದೆ. ಅದನ್ನು ನಮ್ಮ ಟೆರಸ್ಸಿನ ಮೇಲೆ ಒಯ್ದು ಸೂರ್ಯನ ಶಾಖಕ್ಕೆ ಅಭಿಮುಖವಾಗಿ ಪ್ಯೂಪ ಮತ್ತು ಚಿಟ್ಟೆಯಿರುವ ಪಾಮ್ ಟ್ರೀ ಎಲೆಯನ್ನು ಮತ್ತೊಂದು ಗಿಡಕ್ಕೆ ಕೂರಿಸಿ ನನಗೆ ಬೇಕಾದ ರೀತಿಯಲ್ಲಿ ಫೋಟೊಗಳನ್ನು ಕ್ಲಿಕ್ಕಿಸತೊಡಗಿದೆ. ಈ ಚಿಟ್ಟೆ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಪ್ಲೇನ್ ಟೈಗರ್ ಚಿಟ್ಟೆಯಷ್ಟೆ ದೊಡ್ಡದಾಗಿದ್ದರೂ ರೆಕ್ಕೆಗಳ ಬಣ್ಣ ಬೇರೆಯಾಗಿತ್ತು. ಎಂಟು ಗಂಟೆಯ ಹೊತ್ತಿಗೆ ಒಂದೆರಡು ಬಾರಿ ರೆಕ್ಕೆ ಬಡಿದು ಹೊಸ ಜೀವನವನ್ನು ಅರಸುತ್ತಾ ಹಾರಿಹೋಯಿತು. ತೆಗೆದ ಚಿತ್ರವನ್ನು ಕಂಪ್ಯೂಟರಿಗೆ ಹಾಕಿ ನೋಡಿದಾಗ ಗೊತ್ತಾಯಿತು. ಇದರ ಹೆಸರು ಇಂಡಿಯನ್ ಪಾಮ್ ಬಾಬ್ ಅಂತ.

ಆಗತಾನೆ ಹೊರಬಂದು ತನ್ನದೇ ಪ್ಯೂಪವನ್ನು ಹಿಡಿದು ಬಿಸಿಲು ಕಾಯಿಸಿಕೊಳ್ಳುತ್ತಿರುವ ಇಂಡಿಯನ್ ಪಾಮ್ ಬಾಬ್[Indian pom bob] ಚಿಟ್ಟೆ.

ಆಲಂಕಾರಿಕ ಗಿಡವಾದರೂ ಎರಡು ಚಿಟ್ಟೆಗಳಿಗೆ ಆಹಾರ ಮತ್ತೆ ಮನೆ ಮನೆಯಾಗಿದೆಯೆಲ್ಲಾ ಅಂತ ಪಾಮ್ ಟ್ರೀ ಬಗ್ಗೆ ಹೆಮ್ಮೆಯೆನಿಸಿತ್ತು.

ಚಿತ್ರಗಳು ಮತ್ತು ಲೇಖನ.

ಶಿವು.ಕೆ


42 comments:

PARAANJAPE K.N. said...

ಶಿವೂ, ನಿಮಗೆ, ನಿಮ್ಮ ಕ್ಯಾಮರಾ ಕಣ್ಣಿಗೆ ಇ೦ತಹ ವಸ್ತು ವಿಷಯಗಳು ಗೋಚರಿಸುವುದು, ಅವುಗಳ ಬಗ್ಗೆ ನೀವು ಸಾದ್ಯ೦ತ ಬರೆಯುವುದು ಖುಷಿ ಕೊಡುತ್ತದೆ. ನಿಮ್ಮ ಚಿತ್ರ-ಲೇಖನ ಎರಡೂ ಸೂಪರ್.

shivu said...

ಪರಂಜಪೆ ಸರ್,

ಲೇಖನವನ್ನು ಹಾಕಿದ ತಕ್ಷಣ ಪ್ರತಿಕ್ರಿಯಿಸಿದ್ದೀರಿ...

ಅದೇನೊ ಗೊತ್ತಿಲ್ಲ ಸಾರ್, ನಾನು ಎಲ್ಲಿ ಹೋದರೂ ಇಂಥವು ಹುಡುಕಾಟ ನಡೆದಿರುತ್ತದೆ. ಇಂಥದ್ದರಲ್ಲಿ ತುಂಬಾ ಖುಷಿ ಇರುತ್ತೆ ಸರ್. ಅದಕ್ಕೆ ಇವುಗಳನ್ನೆಲ್ಲಾ ಮಾಡುತ್ತೇನೆ...

ಧನ್ಯವಾದಗಳು.

ಕ್ಷಣ... ಚಿಂತನೆ... bhchandru said...

ಶಿವು ಅವರೆ,
ಫೋಟೋ ಮತ್ತು ಬರಹ ತುಂಬಾ ಚೆನ್ನಾಗಿದೆ. ಮೊದಲನೆಯ ಫೋಟೋ ಮಾತ್ರ ಕಾಣುತ್ತಿಲ್ಲ. ಕೇವಲ ಖಾಲಿ ಜಾಗದ ಲಿಂಕ್‌ ಕಾಣುತ್ತದೆ. ಚಿತ್ರ ಬರುತ್ತಿಲ್ಲ.

ನಿಮ್ಮ ಕ್ಯಾಮೆರ ಮತ್ತು ನಿಮ್ಮ ಕಣ್ಣುಗಳು ಯಾವಾಗಲೂ ವಿಶೇಷವಾಗಿ ಹುಡುಕುವ ಪರಿ ಕಂಡು ಅಚ್ಚರಿಯಾಗುತ್ತದೆ.

ಇನ್ನಷ್ಟು ಫೋಟೋ ಬರಹಗಳು ನಿಮ್ಮಿಂದ ಬರಲಿ. ಎಷ್ಟೋ ವಿಷಯಗಳು ನಿಮ್ಮಿಂದ ನಮಗೆ ತಿಳಿಯುತ್ತಿದೆ. ಹಾಗೆಯೇ ಬೇರೆಯವರಿಗೂ ತಿಳಿಸುವ ಆಸಕ್ತಿ ಮೂಡಿಸಿದೆ.

ಸ್ನೇಹದಿಂದ,

ರವಿಕಾಂತ ಗೋರೆ said...

Wonderful..ತುಂಬಾ ಚಂದದ ಫೋಟೋ ಮತ್ತು ಬರಹ... ಇದೆಲ್ಲಾ ಎಲ್ಲಿ ಸಿಗುತ್ತೆ ನಿಮಗೆ??? ಅದ್ಭುತ!!!... ನಿಮ್ಮ ಬ್ಲಾಗ್ನಿಂದ ತುಂಬಾ ವಿಷಯಗಳು ಗೊತ್ತಾಗುತ್ವೆ... ಈಗೀಗ ಯಾವ್ದಾದ್ರು ಹೊಸ ಚಿಟ್ಟೆ, ಹಕ್ಕಿ ನೋಡಿದ್ರೆ ನಿಮ್ದೆ ನೆನಪಾಗುತ್ತೆ... ಹೀಗೆ ಬರೆಯುತ್ತಿರಿ...

ಸೀತಾರಾಮ. ಕೆ. said...

tamma adhyayanasheelate haagU vruttiparate amogha mattu prashanshaarha.
ollE mahiti lekhana su0dara chitradoDaNe.

Dr. B.R. Satynarayana said...

ಶಿವು ಸೂಪರ್! ಅದ್ಭುತವಾಗಿದೆ. ಚಿತ್ರಗಳ ಜೊತೆಜೊತೆಯಲ್ಲೇ ನೀವು ಕೊಡುವ ವಿವರಗಳ ವೇಗ ಗಮನ ಸೆಳೆಯುತ್ತದೆ. ತುಂಬಿದ ಅಣೆಕಟ್ಟೆ ಬಾಗಿಲು ತೆಗೆದಾಗ ಹೊರ ನುಗ್ಗುವ ನೀರಿನ ವೇಗ!

ಸವಿಗನಸು said...

ಶಿವು ಸರ್,
ನಿಮ್ಮ ಹುಡುಕಾಟಕ್ಕೆ ನಮ್ಮ ಸಲಾಮ್....ನಿಮ್ಮ ಕ್ಯಾಮೆರಾಗೆ ಇಂತವು ಬೀಳೊದು....
ಫೋಟೋ ಮತ್ತು ಬರಹ ಎರಡು ತುಂಬಾ ಚೆನ್ನಾಗಿದೆ....

ರಾಜೀವ said...

ಸೂಪರ್. ನಿಮ್ಮ ತಾಳ್ಮೆ ಪ್ರಶಂಸನೀಯ.
ಪ್ರಾಣಿ, ಪಕ್ಷಿ, ಕ್ರಿಮಿ, ಕೀಟ, ಮರ, ಗಿಡಗಳಲ್ಲಿ ಒಂದೊಂದು ರೀತಿಯ ವ್ಯವಸ್ಥೆ ಇದೆ. ಆದರೆ ಈ ಮನುಷ್ಯಜೀವಿ ವ್ಯವಸ್ಥೆಯ ಹಾದಿಯನ್ನು ಬಿಟ್ಟು ಹೋಗುತ್ತಿದ್ದಾನೆ ಅನ್ಸತ್ತೆ.

ಸಾಗರದಾಚೆಯ ಇಂಚರ said...

ಶಿವೂ ಸರ್
ಲೇಖನ ಸೂಪರ್, ನಿಮ್ಮ ಕ್ಯಾಮೆರಾ ಕಣ್ಣಿಗೆ
ಬಹಳಷ್ಟು ಆಸಕ್ತಿಕರ ವಿಷಯಗಳು ಸಿಗುತ್ತವೆ.
ನಿಮ್ಮ ಫೋಟೋಗಳೂ ಹಾಗೂ ಅದರೊಳಗಿನ ಹೂರಣ ನಿಜಕ್ಕೂ ಅದ್ಭುತ
ನಿಮ್ಮ ಸಂಶೋಧನೆ ಹೀಗೆಯೇ ಮುಂದುವರೆಯಲಿ
ಹೊಸ ಹೊಸತು ನಿಮ್ಮಿಂದ ನಮಗೆ ತಿಳಿಯಲಿ

sunaath said...

ಶಿವು,
ನಿಸರ್ಗದ ಬಗೆಗೆ ನಿಮಗಿರುವ ಶ್ರದ್ಧೆ,ತಾಳ್ಮೆ ಹಾಗು ಅಧ್ಯಯನಶೀಲತೆ ಸೂಪರ್ ಆಗಿವೆ. ನಿಮ್ಮಿಂದ ನಮಗೆಲ್ಲ ಎಷ್ಟೆಷ್ಟೋ ಹೊಸ ವಿಷಯಗಳು ತಿಳಿಯುತ್ತಾ ಇವೆ.ಧನ್ಯವಾದಗಳು.

manamukta said...

ಚಿಟ್ಟೆಗಳ ಕುರಿತು ಚಿತ್ರ ಸಹಿತ ಸವಿಸ್ತಾರ ಮಾಹಿತಿ...

ತು೦ಬೆಲ್ಲಾ ನಿಸರ್ಗಪ್ರೇಮದ ಕಸೂತಿ....

ಮತ್ತಷ್ಟು ಬರಹಕ್ಕಾಗಿ ವಿನ೦ತಿ....

ಧನ್ಯವಾದಗಳು..

AntharangadaMaathugalu said...

ಶಿವು ಸಾರ್

ಚಿಟ್ಟೆಗಳ ಕುರಿತು ಚಿತ್ರ ಸಹಿತ ನಿಮ್ಮ ಮಾಹಿತಿ ಪೂರ್ಣ ಲೇಖನ ತುಂಬಾ ಚೆನ್ನಾಗಿದೆ........

pradeep said...

ತುಂಬಾ ಚೆನ್ನಾಗಿವೆ ಸಾರ್! ತುಂಬಾ ಸಮಯದ ನಂತರ ಬ್ಲಾಗಿಗೆ ಬರ್ತಾ ಇದ್ದೀನಿ.. ಕೆಲಸ ಕಾರ್ಯಗಳ ಒತ್ತಡದಲ್ಲಿ online ಬರಲಾಗುತ್ತಿಲ.. ಅಂದ ಹಾಗೆ ನಿಮ್ಮೆ ಶೀರ್ಷಿಕೆ ನೋಡಿ ಬೇರೆಯೇ "ಚಿಟ್ಟೆ"ಗಳು ಅಂದ್ಕೊಂಡೆ ;-)

shivu said...

ಚಂದ್ರು ಸರ್,

ಮೊದಲನೆ ಫೋಟೊ ಬೇರೆಯವರಿಗೆ ಕಾಣುತ್ತಿದೆ. ನೀವು ಮತ್ತೊಮ್ಮೆ ಪ್ರಯತ್ನಿಸಿ.

ನನ್ನ ಕ್ಯಾಮೆರವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..
ಈ ವಿಚಾರದಲ್ಲಿ ಮತ್ತಷ್ಟು ವಿಚಾರಗಳಿವೆ. ನಿಮಗೆ ಬೇಸರವಾಗಿಬಿಡಬಹುದು ಅಂತ ಬ್ಲಾಗಿಗೆ ಹಾಕುತ್ತಿಲ್ಲ. ಮಾಹಿತಿಯುಕ್ತ ಮತ್ತು ವಿಭಿನ್ನವೆನಿಸಿದರೆ ನಾನೇ ಬ್ಲಾಗಿಗೆ ಹಾಕುತ್ತೇನೆ...

ನೀವು ಖಂಡಿತ ನಿಮ್ಮ ಗೆಳೆಯರಿಗೆ ಮಕ್ಕಳಿಗೆ ಈ ವಿಚಾರ ತಿಳಿಸಬಹುದು. ಅದಕ್ಕೆ ನನ್ನ ಸಹಕಾರ ಇದ್ದೇ ಇದೆ.

ಧನ್ಯವಾದಗಳು.

shivu said...

ರವಿಕಾಂತ್ ಸರ್,

ಯಾವುದೇ ಚಿಟ್ಟೆ, ಹಕ್ಕಿ ನೋಡಿದ್ರೂ ನನ್ನ ನೆನಪು ಮಾಡಿಕೊಳ್ಳುತ್ತಿದ್ದೀರಿ..ಥ್ಯಾಂಕ್ಸ್.

ಮತ್ತೆ ನನಗೆ ಕೆಲಸದ ಒತ್ತಡದಿಂದ ಬೆಂಗಳೂರು ಬಿಟ್ಟು ಹೊರಗೆ ಹೋಗಿಲ್ಲವಾದ್ದರಿಂದ ಇವೆಲ್ಲವನ್ನು ಬೆಂಗಳೂರಲ್ಲೇ ಕ್ಲಿಕ್ಕಿಸಿದ್ದೇನೆ...ನಾವು ಸ್ವಲ್ಪ ನನ್ನ ನೋಡುವಂತೆ ನೀವು ನೋಡಿದರೆ ಖಂಡಿತ ನಿಮಗೆಲ್ಲಾ ಸಿಗುತ್ತದೆ...ಪ್ರಯತ್ನಿಸಿ..

ಧನ್ಯವಾದಗಳು.

shivu said...

ಸೀತಾರಾಂ ಸರ್,

ಚಿಟ್ಟೆಗಳನ್ನು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...
ಇದರಲ್ಲಿ ನೀವು ಹೇಳಿದಂತೆ ಅದ್ಯಯನವೇನು ಇಲ್ಲ ಸರ್. ಸುಮ್ಮನೇ ಗಮನಿಸುತ್ತೇನೆ. ಸಿಕ್ಕಾಗ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳುತ್ತೇನೆ..ಇದರಲ್ಲಿ ನನ್ನ ಸಾಧನೆಯೇನು ಇಲ್ಲ ಸರ್.

ಹೀಗೆ ಬರುತ್ತಿರಿ...

shivu said...

ಸತ್ಯನಾರಾಯಣ ಸರ್,

ಇಂಥ ವಿಚಾರಗಳಲ್ಲಿ ನನಗಾದ ಅನುಭವವನ್ನು ನೇರವಾಗಿ ಹಾಗೇ ಹೇಳುತ್ತೇನೆ. ಇದೆಲ್ಲ ನೈಜವಾಗಿ ನಡೆದಿರುವ ಘಟನೆಗಳು. ನಾನು ಆ ರೀತಿ ತೊಡಗಿಸಿಕೊಂಡಾಗ ನಿಮಗೆ ಹಾಗೆ ಅನ್ನಿಸಿರಬಹುದು. ಇನ್ನು ಬರವಣಿಗೆ ವಿಚಾರದಲ್ಲಿ ಅನ್ನಿಸಿದ್ದನ್ನು ನೇರವಾಗಿ ಬರೆಯುವುದರಿಂದ ವೇಗ ಬಂದಿರಬಹುದು...

ಚಿತ್ರ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu said...

ಮಹೇಶ್[ಸವಿಗನಸು]ಸರ್,

ಚಿತ್ರ ಲೇಖನವನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿದ್ದೀರಿ..ಥ್ಯಾಂಕ್ಸ್...

ನೀವು ಅಂದುಕೊಂಡಂತೆ ಇವೆಲ್ಲಾ ನನ್ನ ಕಣ್ಣಿಗೆ ಮಾತ್ರ ಬೀಳುವುದಿಲ್ಲ. ಎಲ್ಲರಿಗೂ ಸಹಜವಾಗಿ ಕಾಣುತ್ತವೆ. ನಮ್ಮ ಆಸಕ್ತಿಕರ ವಿಚಾರ ಹೀಗಿದ್ದರೆ ಸಾಕು ಎಲ್ಲರಿಗೂ ಕಾಣುತ್ತದೆ. ಅದರಲ್ಲೇನು ವಿಶೇಷವಿಲ್ಲ.

ಧನ್ಯವಾದಗಳು.

shivu said...

ರಾಜೀವ್,

ನೀವು ಹೇಳಿದಂತೆ ಇಂಥ ವಿಚಾರಗಳಲ್ಲಿ ತಾಳ್ಮೆ ಖಂಡಿತ ಬೇಕು. ಮತ್ತೆ ಪ್ರಕೃತಿಯಲ್ಲಿರುವ ವ್ಯವಸ್ಥೆಯನ್ನು ನೋಡಿ ನಾವು ಕಲಿಯುವುದು ತುಂಬಾ ಇದೆ ಅಲ್ವಾ...

ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu said...

ಡಾ.ಗುರುಮೂರ್ತಿ ಸರ್,

ಚಿತ್ರ ಲೇಖನವನ್ನು ಮೆಚ್ಚಿದ್ದೀರಿ...

ಇಲ್ಲಿ ನನ್ನ ಕ್ಯಾಮೆರಾವಾಗಲಿ, ಅಥವ ನಾನಾಗಲಿ ವಿಶೇಷವಲ್ಲ. ಇದು ಎಲ್ಲರಿಗೂ ಕಾಣುತ್ತದೆ. ಆದ್ರೆ ನನಗೇಕೋ ಇಂಥ ವಿಚಾರಗಳಲ್ಲಿ ಆಸಕ್ತಿ ಹೆಚ್ಚು ಅದಕ್ಕೆ ಇವು ನನಗೆ ಕಾಣಬಹುದು. ನನಗೆ ಕಾಣುವ ಚಿಟ್ಟೆಗಳು ಬೇರೆಯವರಿಗೂ ಕಾಣಿಸುತ್ತವೆ ಅಲ್ವಾ...

ಎಲ್ಲರಿಗೂ ಈ ವಿಚಾರದಲ್ಲಿ ಒಂದು ಆಸಕ್ತಿ ಮೂಡಿಸುವ ಪ್ರಯತ್ನವಷ್ಟೇ ಈ ಲೇಖನ.

ಧನ್ಯವಾದಗಳು.

shivu said...

ಸುನಾಥ್ ಸರ್,

ಪ್ರಕೃತಿಯ ಬಗೆಗಿನ ನನ್ನ ಪ್ರಯತ್ನವನ್ನು ಗುರುತಿಸಿದ್ದಕ್ಕೆ ಥ್ಯಾಂಕ್ಸ್..ಇಲ್ಲಿ ನನಗಾದ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ...ಅದನ್ನು ನೀವೆಲ್ಲಾ ಸ್ವೀಕರಿಸುತ್ತಿರುವುದು ನನಗೆ ಖುಷಿಯ ವಿಚಾರ.

ಹರೀಶ ಮಾಂಬಾಡಿ said...

ಮತ್ತೊಂದು ಮಾಹಿತಿಪೂರ್ಣ ಬರೆಹ.

L'Etranger said...

ತುಂಬಾ ಒಳ್ಳೆಯ ವಿಷಯದ ಬಗ್ಗೆ ಸುಂದರವಾಗಿ ಬರೆದಿದ್ದೀರಿ. ಕಾಳಜಿಯಿದ್ದು ಕಣ್ತೆರೆದು ನೋಡಿದರೆ ನಮ್ಮ ಸುತ್ತಲಿನ ಬೆರಗುಗಳು ಎಲ್ಲರಿಗೂ ಕಾಣುವುದಷ್ಟೇ ಅಲ್ಲ, ಅವನ್ನು ಆಸ್ವಾದಿಸಲೂ ಸಾಧ್ಯ ಅನ್ನುವುದನ್ನು ತೋರಿಸುತ್ತದೆ ನಿಮ್ಮ ಬರಹ ಮತ್ತು ಉತ್ಸಾಹ.

ಚಿಟ್ಟೆಗಳ ಹುಟ್ಟಿನ ಬಗ್ಗೆ ಓದುವಾಗ ಒಂದು ಸಣ್ಣ ಕಥೆ ನೆನಪಾಯ್ತು - ಸಮಯ ಸಿಕ್ಕಾಗ ನೋಡಿ.

Pramod P T said...

ಶಿವು,
ನಿಮ್ಮ ಬರಹ ಮತ್ತು ಚಿತ್ರಗಳೆರಡೂ ಸೂಪರ್.
ಈ ಸಲ introduction ತುಂಬಾ different ಆಗಿದೆ :).

ಚುಕ್ಕಿಚಿತ್ತಾರ said...

ಚಿಟ್ಟೆಗಳ ಬಗ್ಗೆ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ. ಚಿತ್ರ ಸಹಿತ. ನಾನೊಮ್ಮೆ ಚಿಟ್ಟೆಗಳ ಮೊಟ್ಟೆಗಳಿರುವ ಎಲೆಯೊ೦ದನ್ನು ಕತ್ತರಿಸಿ ತ೦ದು ಬಾಲ್ಕನಿಯ ಕು೦ಡದೊಳಗಿಟ್ಟಿದ್ದೆ. ಚಿಟ್ಟೆಗಳ ಬಗ್ಗೆ ಮಕ್ಕಳಿಗೆ ತಿಳಿಸಲು.
ಒ೦ದೆರಡು ದಿನಗಳಾದ ಮೇಲೆ ಕು೦ಡವೆಲ್ಲಾ ಕ೦ಬಳಿಹುಳುಗಳಿ೦ದ ತು೦ಬಿ ಹೋಗಿತ್ತು. ಭಯವಾಗಿ [ಕಡಿತದ]ಅವುಗಳಿಗೆಲ್ಲಾ ಒ೦ದು ಗತಿ ಕಾಣಿಸಿದೆ. ಅಲ್ಲಿ೦ದ ಈ ಪ್ರಯೋಗ ಮಾಡುವುದನ್ನು ಬಿಟ್ಟಿದ್ದೇನೆ ನೋಡಿ.
ವ೦ದನೆಗಳು.

ಶಿವಪ್ರಕಾಶ್ said...

ಶಿವು ಅವರೇ,
ನಿಮಗೆ ಇವೆಲ್ಲ ಎಲ್ಲೆಲ್ಲಿ ಸಿಗುತ್ತೆ..
ನಮಗೆ ಚಿಟ್ಟೆಗಳು ಸಿಗುತ್ತವೆ... ಆದರೆ ನೀವು ಹೇಳಿದ ಚಿಟ್ಟೆಗಳಲ್ಲ...
ಹ್ಹಾ ಹ್ಹಾ ಹ್ಹಾ.....
ಮಾಹಿತಿಯುಕ್ತ ಚಿತ್ರಲೇಖನಕ್ಕೆ ಧನ್ಯವಾದಗಳು

ವನಿತಾ / Vanitha said...

wonderfull!!
ಒಳ್ಳೆಯ ಮಾಹಿತಿಪೂರ್ಣ ಬರಹ..ನಿಮ್ಮ ತಾಳ್ಮೆಗೆ ಮೆಚ್ಚ ಬೇಕು..ಪ್ಯುಪವನ್ನು ಮನೆಗೆ ತರುವ ಬಗೆಗಿನ ಹೋಲಿಕೆ ಹಾಗು ಮನೆಯಲ್ಲಿ ಅದರ ಆರೈಕೆ ತುಂಬಾ ಹಿಡಿಸಿತು..Hats off to u:)

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಅದ್ಭುತವಾಗಿದೆ. Palm Tree ಎಲೆಯನ್ನು ಆಹಾರಮಾಡಿಕೊಂಡಿರುವ ಎರಡು ವಿಧದ ಚಿಟ್ಟೆಗಳ ಜೀವನಚಿತ್ರವನ್ನು ಕೊಟ್ಟಿದ್ದೀರ. ಈ ಪ್ರಕೃತಿಯಲ್ಲಿ ನಮಗೆ ಪ್ರತಿಕ್ಷಣವೂ ಅನ್ವೇಶಣೆಯೇ. ತುಂಬಾ ಚೆನ್ನಾಗಿದೆ.

ಸುಧೇಶ್ ಶೆಟ್ಟಿ said...

ಅಧ್ಬುತವಾಗಿತ್ತು ಶಿವಣ್ಣ ಚಿಟ್ಟೆಯ ಜನ್ಮ ಚರಿತ್ರೆ.... ನಿಮ್ಮ ತಾಳ್ಮೆಗೆ ಮತ್ತು ಕುತೂಹಲದ ಮನೋಭಾವಕ್ಕೊ೦ದು ಸಲಾಮ್ :)

ಬಿಸಿಲ ಹನಿ said...

ಬೆಂಗಳೂರಿನಂಥ ಬಿಜಿ ಬದುಕಲ್ಲೂ ಇಂಥ ಸಂಗತಿಗಳನ್ನು ಹುಡುಕಿಕೊಂಡು ಹೋಗುತ್ತಿರಲ್ಲ ನಿಮ್ಮ ತಾಳ್ಮೆಗೆ ಮತ್ತು ಶ್ರದ್ಧೆಗೆ ನಮೋ ನಮೋಃ

shivu said...

manamukta,

ನನ್ನ ಬ್ಲಾಗಿಗೆ ಸ್ವಾಗತ.

ನೀವು ಹೇಳಿದಂತೆ "ನಿಸರ್ಗದ ಪ್ರೇಮದ ಕಸೂತಿ"

ಎಷ್ಟು ಸತ್ಯ ಅಲ್ವಾ...ಅದನ್ನು ಎಲ್ಲರೂ ಆಸ್ವಾಧಿಸಿಲಿ ಅನ್ನುವುದು ನನ್ನ ಬಯಕೆ.

shivu said...

ಶ್ಯಾಮಲ ಮೇಡಮ್,

ಚಿಟ್ಟೆಗಳ ಲೇಖನ ಮತ್ತು ಚಿಟ್ಟೇಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu said...

ಪ್ರದೀಪ್,

ತುಂಬಾ ದಿನಗಳ ನಂತರ ನನ್ನ ಬ್ಲಾಗಿಗೆ ಸ್ವಾಗತ. ಈಗ ಎಲ್ಲರೂ ಬ್ಯುಸಿಯಾಗಿರುವುದರಿಂದ[ನಾನು ಕೂಡ] ಬ್ಲಾಗಿಗೆ ಬರುವುದು ಸಾಧ್ಯವಾಗುತ್ತಿಲ್ಲ. ಚಿತ್ರ ಲೇಖನವನ್ನು ಮೆಚ್ಚಿದ್ದೀರಿ.
ನನ್ನ ಬ್ಲಾಗಿನಲ್ಲಿ ನೀವು ನಿರೀಕ್ಷಿಸಿದ ಚಿಟ್ಟೆಗಳು ಸದ್ಯದಲ್ಲೇ ಬರಬಹುದು...ಕಾಯುತ್ತಿರಿ..

shivu said...

ಹರೀಷ್ ಮಾಂಬಾಡಿ.

ಥ್ಯಾಂಕ್ಸ್..

shivu said...

L,Entranger,

ನನ್ನ ಲೇಖನದ ವಿಚಾರ ಇಷ್ಟವಾಗಿದ್ದಕ್ಕೆ ಧನ್ಯವಾದಗಳು. ನೀವು ಹೇಳಿದಂತೆ ನಮ್ಮ ಸುತ್ತಮುತ್ತ ಕಣ್ತೆರೆದು ನೋಡಿದರೆ ಅನೇಕ ವಿಸ್ಮಯಗಳು ಖಂಡಿತ ಕಾಣಸಿಗುತ್ತವೆ...

ಹೀಗೆ ಬರುತ್ತಿರಿ...

shivu said...

ಪ್ರಮೋದ್,

ಚಿತ್ರ ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು. ಬರಹದ ಪ್ರಾರಂಭ ಮತ್ತು ಆಂತ್ಯ ನಿಜವಾಗಿ ನಡೆದಿದ್ದಲ್ಲವೇ...ಅದನ್ನು ನೇರವಾಗಿ ಬರೆದಿದ್ದೇನೆ...

ಹೀಗೆ ಬರುತ್ತಿರಿ...

shivu said...

ಚುಕ್ಕಿಚಿತ್ತಾರ,

ನೀವು ಚಿಟ್ಟೆಗಳ ಬಗ್ಗೆ ಪ್ರಯೋಗ ಮಾಡುವ ಮೊದಲು ಅದು ಯಾವ ಚಿಟ್ಟೆ ಎನ್ನುವುದನ್ನು ತಿಳಿದುಕೊಳ್ಳಲು ಪುಸ್ತಕದ ಮೊರೆ ಹೋಗಬೇಕು. ಅದಕ್ಕಾಗಿ ಈಗ ಕನ್ನಡದಲ್ಲಿ ಚಿಟ್ಟೆಗಳು ಅಂತ ಒಂದು ತುಂಬಾ ಸುಂದರವಾದ ಚಿತ್ರ ಸಹಿತ ಪುಸ್ತಕ ಬಂದಿದೆ. ಮತ್ತು ಆಂಗ್ಲ ಭಾಷೆಯಲ್ಲಿ south indian butterflies ಅಂತ ಪುಸ್ತಕವಿದೆ. ಅವೆರಡರಲ್ಲಿ ಯಾವುದಿದ್ದರೂ ಸಾಕು.
ಕೆಲವು ಹುಳುಗಳು ಕಂಬಳಿ ಹುಳುಗಳಂತೆ ಇದ್ದರೂ ಅವು ಏನು ತೊಂದರೆ ಮಾಡುವುದಿಲ್ಲ. ನೀವು ಸುಮ್ಮನೆ ಭಯಪಟ್ಟಿದ್ದೀರಿ ಅಷ್ಟೇ. ಅದರೂ ಇರುವೆ, ಜಿರಲೆ, ಹಲ್ಲಿಗಳಿಂದ ದೂರವಿರಿಸಿದರೆ ಏನು ತೊಂದರೆಯಾಗುವುದಿಲ್ಲ.

ನನ್ನ ಚಿತ್ರ ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu said...

ಶಿವಪ್ರಕಾಶ್,

ನಾನು ಪ್ರಯೋಗ ಮಾಡಿದ, ವಿವರಿಸಿದ ಚಿಟ್ಟೆಗಳೆಲ್ಲಾ ನೀವು ಬಯಸಿದ ಚಿಟ್ಟೆಗಳ ಪಕ್ಕದಲ್ಲೇ ಹಾರಾಡುತ್ತಿರುತ್ತವೆ. ನಿಮ್ಮ ಕಣ್ಣು ಅತ್ತ ಹರಿಯಬೇಕಷ್ಟೇ.

ಧನ್ಯವಾದಗಳು.

shivu said...

ವನಿತಾ,

ತುಂಬಾ ದಿನಗಳ ನಂತರ ಬ್ಲಾಗಿಗೆ ಬರುತ್ತಿದ್ದೀರಿ...
ಚಿಟ್ಟೆಗಳಿಗೂ ಒಂದು ಜೀವ, ಆತ್ಮವಿದೆ ಅಲ್ಲವೇ. ಅದನ್ನು ಕಾಪಾಡಬೇಕಾದ್ದು ನಮ್ಮ ಜವಾಬ್ದಾರಿ ಮತ್ತು ಕರ್ತವ್ಯವಾದ್ದರಿಂದ ನಾನು ಆ ರೀತಿ ಕಾಳಜಿ ವಹಿಸಬೇಕಾಯಿತು.

ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu said...

ಮಲ್ಲಿಕಾರ್ಜುನ್,

palm tree ಬಗ್ಗೆ ನನಗಿದ್ದ ಕುತೂಹಲ ಈಗ ತಣಿದಿದೆ. ಸದ್ಯ ಬೇರೆ ಗಿಡಗಳ ಬಗ್ಗೆ ನನ್ನ ಕಣ್ಣು ಬಿದ್ದಿದೆ. ನೋಡೋಣ..

shivu said...

ಸುಧೇಶ್,

ನನ್ನ ತಾಳ್ಮೆಯೇನು ವಿಶೇಷವಲ್ಲ. ನೀವು ಇದನೆಲ್ಲಾ ಮಾಡಬಹುದು. ಅದಕ್ಕಾಗಿ ನಿಮ್ಮ ಸಮಯವನ್ನು ಮೀಸಲಿಡಬೇಕಷ್ಟೆ.

ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu said...

ಉದಯ ಸರ್,

ಬೆಂಗಳೂರಿನಲ್ಲಿ ಇನ್ನೂ ಅನೇಕ ವಿಚಾರಗಳಿವೆ. ಅವುಗಳ ಹಿಂದೆ ಇನ್ನೂ ಬೀಳಬೇಕಷ್ಟೆ. ಹೀಗೆ ಬಿದ್ದಾಗ ಆಗುವ ಖುಷಿಯೇ ಬೇರೆ...ಒಂಥರ ಥ್ರಿಲ್ ಅನ್ನಿಸುತ್ತೆ...

ನಿಮ್ಮ ಅನಿಸಿಕೆಗೆ ಧನ್ಯವಾದಗಳು.