Saturday, November 28, 2009

ಜೀವನೋತ್ಸಾಹವೆಂದರೆ ಹೀಗಿರಬೇಕು.

ಪುಸ್ತಕ ಬಿಡುಗಡೆಯಾದ ಖುಷಿಯಲ್ಲಿ, ಮಾರಾಟ ಉತ್ತಮಗೊಳ್ಳುತ್ತಿರುವ ಆನಂದದಲ್ಲಿ ತೇಲುತ್ತಿದ್ದ ನನಗೆ ಇವತ್ತಿಗೆ ಸರಿಯಾಗಿ[ಕಳೆದ ಶನಿವಾರ]ಒಂದು ವಾರದ ಹಿಂದೆ ಜ್ವರವೆಂಬ ಜ್ವರ ನನ್ನನ್ನು ಆಕ್ರಮಿಸಿ ಹಾಸಿಗೆ ಬಿಟ್ಟು ಏಳದಂತೆ ಮಾಡಿತ್ತು. ಸದಾ ಮೈಮೇಲೆ ರಾಶಿ ಕೆಲಸವನ್ನು ಏರಿಕೊಂಡು ಓಡಾಡುತ್ತಿರುವ ನನಗೆ ಒಮ್ಮೇಲೆ ಗರಬಡಿದಂತಾಗಿತ್ತು. ಹೊರಗಿನ ವೇಗದ ಪ್ರಪಂಚದ ನಡುವೆ ನನ್ನನ್ನು ಕೈಕಾಲು ಕಟ್ಟಿಹಾಕಿದಂತೆ ಆಗಿತ್ತು. ಮನಸ್ಸು ಏನೆಲ್ಲಾ ಮಾಡಬೇಕು ಅಂದರೂ ದೇಹ ಮಾತ್ರ ನನ್ನ ಮಾತು ಕೇಳುತ್ತಿಲ್ಲ. ನನ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದ ಗೆಳೆಯರಾದ ಡಾ.ದೇವರಾಜ್ " ಶಿವು, ಕಳೆದೊಂದು ತಿಂಗಳಿಂದ ಸಿಕ್ಕಾಪಟ್ಟೆ ಓಡಾಡಿ ಸುಸ್ತಾಗಿದ್ದೀರಿ, ನಿಮ್ಮ ಮನಸ್ಸು ಉತ್ಸಾಹದಿಂದಿದ್ದರೂ ದೇಹಕ್ಕೆ ನಿಮ್ಮ ಮಾತನ್ನು ಕೇಳುತ್ತಿಲ್ಲ. ನಾಲ್ಕೈದು ದಿನ ರೆಸ್ಟ್ ತೆಗೆದುಕೊಂಡು ಬಿಡಿ ಅಂದಾಗ ನಾನು ಮರುಮಾತಾಡದೇ ಅವರು ಹೇಳಿದಂತೆ ಮಾಡಿದ್ದೆ.


ಈ ರೆಸ್ಟ್ ಅನ್ನುವುದರ ನಡುವೆ ಒಂದೆರಡು ಪುಸ್ತಕಗಳನ್ನು ಓದಿ ಮುಗಿಸಿದೆ. ನಾಲ್ಕು ದಿನ ಕಳೆಯುವಷ್ಟರಲ್ಲಿ ಇದು ನನಗೆ ಆಗಿಬರುವುದಿಲ್ಲ. ನಾನು ಹೀಗೆ ಬೆಡ್‍ರೂಮಿನಲ್ಲಿ ಬಿದ್ದಿದ್ದರೇ ಕಳೆದುಹೋಗುತ್ತೇನೆ ಅನ್ನಿಸಲಾರಂಭಿಸಿತ್ತು. ಕೊನೆಗೆ ಮೊನ್ನೆ ಸ್ವಲ್ಪ ಸುಸ್ತು ಇದ್ದರೂ ಹೊರಗೆಲ್ಲಾದರೂ ಹೋಗೋಣ ಎನ್ನಿಸಿದಾಗ ಕಣ್ಣಿಗೆ ಬಿದ್ದಿದ್ದು ಅಂತರಾಷ್ಟ್ರೀಯ ಅಂಗವಿಕಲರ ಕ್ರೀಡಾಕೂಟ. ದೇವರಾಜ್ ನಾನು ಸ್ವಲ್ಪ ಹುಷಾರಾಗಿದ್ದೇನೆ. ನಾನು ಸ್ವಲ್ಪ ಈ ಕ್ರೀಡಾಕೂಟವನ್ನು ನೋಡಿ ಬರಲೇ ಅಂದೆ. ಅದಕ್ಕೆ ಅವರು "ನಿಮ್ಮ ಕಣ್ಣಿಗೆ ಅದು ಬಿದ್ದಿದೆಯೆಂದಮೇಲೆ ಮುಗೀತು. ನಾನು ಬೇಡವೆಂದರೂ ನಿಮ್ಮ ಮನಸ್ಸು ಬೇಡವೆನ್ನುತ್ತಾ, ಹೋಗಿಬನ್ನಿ ಎಂದರು. ಅಷ್ಟು ಸಾಕಿತ್ತು ನನಗೆ.


ಕ್ರೀಡಾಕೂಟಕ್ಕೆ ಹೋದಾಗ ಅಲ್ಲಿನ ವಾತವರಣ ನನಗೆ ಹಿತಕರವೆನಿಸಿತ್ತು. ಅಲ್ಲಿ ಭಾಗವಹಿಸಿದ್ದ ಕ್ರೀಡಾ ಭಾಂದವರೆಲ್ಲರ ಸ್ಪೂರ್ತಿಯನ್ನು ನೋಡಿದಾಗ, ಅವರ ಬದುಕಿನಲ್ಲಿ ಅವರಿಗೆ ಆಗಿರುವ ಅಂಗವೈಕಲ್ಯತೆಯನ್ನು ಮೀರಿ ಅವರ ಜೀವನೋತ್ಸಾಹವನ್ನು ಗಮನಿಸಿದಾಗ ಅವರಿಂದ ನಾವು ಕಲಿಯಬೇಕಾದ್ದು ತುಂಬಾ ಎನಿಸಿತ್ತು. ಅವರ ಬಗ್ಗೆ ಬರೆಯುವುದಕ್ಕಿಂತ ಅವರ ಜೀವನೋತ್ಸಾಹವನ್ನು, ಕ್ರೀಡಯಲ್ಲಿ ಮತ್ತು ಬದುಕಿನಲ್ಲಿ ಗೆಲ್ಲಬೇಕೆನ್ನುವ ಚಲ, ಇತ್ಯಾದಿಗಳನ್ನು ಫೋಟೊಗಳ ಮೂಲಕ ಸೆರೆಯಿಡಿಯಲು ಪ್ರಯತ್ನಿಸಿದ್ದೇನೆ. ನೀವು ಒಮ್ಮೆ ನೋಡಿಬಿಡಿ.

ನೀನು ಗೆದ್ದೆಯಲ್ಲಾ! ಇರು ನಿನ್ನದೊಂದು ಫೋಟೊ ತೆಗೆಯುತ್ತೇನೆ!


ನಾರ್ವೆಯ ಈ ಜಾವೆಲಿನ್ ಆಟಗಾರ ಓಡಿಬಂದು ಜಾವೆಲಿನ್ ಎಸೆಯುವ ಪರಿಯನ್ನು ನೋಡುವುದೇ ಒಂದು ಸಂಭ್ರಮ!

ಆಟಗಾರರನ್ನು ಇವರು ಹುರಿದುಂಬಿಸುತ್ತಾ, ಸಂಭ್ರಮಿಸುವ ಪರಿ ನೋಡಿ!

ಢಂ ಢಂ....ಬಡಿಯುತ್ತಾ ಎಲ್ಲಾ ದೇಶದ ಆಟಗಾರರನ್ನು ಪ್ರೋತ್ಸಾಹಿಸುತ್ತಿರುವ ಥೈಲ್ಯಾಂಡ್ ಪ್ರಜೆ.

ನೋಡು ನೀನು ಹೀಗೆ ಬ್ಯಾಲೆನ್ಸ್ ಮಾಡಬೇಕು ಗೊತ್ತಾ![ಬ್ರೆಜಿಲ್ ರಗ್ಬಿ ಆಟಗಾರರ ತಯಾರಿ]

ನಾನು ಕೈಯಿಲ್ಲದಿದ್ದರೂ ಚೆನ್ನಾಗಿ ಟೇಬಲ್ ಟೆನ್ನಿಸ್ ಆಡಬಲ್ಲೆ![ಪಿಲಿಫೈನ್ಸ್ ಆಟಗಾರ್ತಿ]

ನಾನು ಕಾಲಿಲ್ಲದಿದ್ದರೂ ಇನ್ನೂ ಚೆನ್ನಾಗಿ ಟೇಬಲ್ ಟೆನ್ನಿಸ್ ಆಡಬಲ್ಲೆ![ಥೈಲ್ಯಾಂಡ್ ಆಟಗಾರ್ತಿ]

ಹಲೋ! ಕೊರಿಯಾದಿಂದ ಯಾರು ಮಾತಾಡುತ್ತಿರುವುದು! ನಮ್ಮ ಹುಡುಗ ಚಿನ್ನದ ಪದಕ ಗೆದ್ದಿದ್ದಾನೆ! ಈ ಕೊರಿಯಾ ಹುಡುಗಿ ಅವರ ದೇಶಕ್ಕೆ ಫೋನ್ ಹಚ್ಚಿರಬಹುದೇ!

ನಗಬೇಕೆನ್ನುವ ಮನಸ್ಸಿದ್ದರೆ ಸಾಕು ಈ ರೀತಿ ನಕ್ಕುಬಿಡಬಹುದು. ನಗುವಿಗೆ ಬಣ್ಣ ಅಕಾರಗಳುಂಟೆ!

ಈ ಮುಖಾರವಿಂದದಲ್ಲಿ ಅದೆಷ್ಟು ಮುಗ್ಧತೆಯುಂಟು ಅಲ್ವಾ!

ಆಟದ ನಡುವೆಯೂ ಒಂದಷ್ಟು ವಿರಾಮ, ಓದು.

ಓಟದ ಟ್ರ್ಯಾಕಿನಲ್ಲಿ ಓಡಲು ಎಲ್ಲರೂ ಸಿದ್ಧರಾಗಿರುವಾಗ ಈ ಕುಳ್ಳ ಹೀಗೆ ನಡೆದಾಡುತ್ತಿರುವುದೇಕೆ ಅನ್ನಿಸಿತೆ! ಆತ ನಡೆದಾಡುತ್ತಿರುವುದು ನಿಜವಾದರೂ ಆ ಓಟದ ಟ್ರ್ಯಾಕ್ ನಿಜವಲ್ಲ. ಅದು ದೂರದರ್ಶನದ ದೊಡ್ಡ ಟಿ.ವಿ. ಪರದೆ!

ಒಂದು ಕೈಯಿಲ್ಲದಿದ್ದರೂ ನಾನು ಹೀಗೆ ದೂರ ಹಾರಿ ನೆಗೆಯಬಲ್ಲೆ!

ನನಗೊಂದು ಕಾಲಿಲ್ಲದಿದ್ದರೂ ನಿಮ್ಮಂತೆ ಓಡಬಲ್ಲೆ, ಹಾರಬಲ್ಲೆ, ನೆಗೆಯಬಲ್ಲೆ, ಪದಕ ಗೆಲ್ಲಬಲ್ಲೆ!
ಲಾಂಗ್ ಜಂಪ್‍ನಲ್ಲಿ ನಾನೇ ಚಾಂಪಿಯನ್ ಗೊತ್ತಾ![ಜರ್ಮನಿಯ ಈ ಆಟಗಾರ್ತಿಗೆ ಎರಡೂ ಕಾಲಿಲ್ಲ]

ನೂರು ಮೀಟರ್ ಓಟದಲ್ಲಿ ಜರ್ಮನಿಯ ಈ ಆಟಗಾರ[ಒಂದು ಕಾಲಿಲ್ಲ] ಗೆಲ್ಲಬೇಕೆಂಬ ಗುರಿಯಿಂದ ಅಂತಿಮ ಗೆರೆಯ ಬಳಿ ಬಿದ್ದರೂ ಚಿನ್ನದ ಪದಕ ಗೆದ್ದುಬಿಟ್ಟ! ಆತನ ಛಲಕ್ಕೆ ಮತ್ತು ಬದುಕಿಗೆ ಒಂದು ಸಲಾಂ!

ಎರಡು ಕಾಲಿಲ್ಲದಿದ್ದರೇನಂತೆ, ಗಂಟೆಗೆ ೬೦ ಕಿಲೋಮೀಟರ್ ವೇಗದಲ್ಲಿ ಇವರ ಚಲನೆ ನೋಡುಗರನ್ನು ಖಂಡಿತ ಬೆರಗುಗೊಳಿಸುತ್ತದೆ!

ಜಪಾನಿ ಆಟಗಾರರು ಈ ಆಟದಲ್ಲೂ ಮುಂದು. ಈತ ಎರಡು ಚಿನ್ನದ ಪದಕ ಗೆದ್ದುಬಿಟ್ಟ.

ಬ್ರೆಜಿಲ್ ದೇಶದ ಈ ಆಟಗಾರನ ಹುರುಪು ಮತ್ತು ಗೆಲ್ಲಬೇಕೆನ್ನುವ ಛಲ ನೋಡಿ!

ಚಿತ್ರಗಳು ಮತ್ತು ಲೇಖನ.
ಶಿವು.ಕೆ

92 comments:

Ashok Uchangi said...

ಪ್ರಿಯ ಶಿವು

ವ್ವಾವ್...!

ಅಂಗವಿಕಲರ ಕ್ರೀಡಾಕೂಟದ ಹೈಲೈಟ್ಸ್ ಅನ್ನು ಸೊಗಸಾಗಿ ಸೆರೆಹಿಡಿದಿದ್ದೀರಿ.

ಅವರ ಜೀವ್ನೋತ್ಸಾಹವನ್ನು ಓದುಗರಿಗೆ ನೀವು ಪರಿಚಯಿಸುವಲ್ಲಿ ತೋರಿಸಿದ ಉತ್ಸಾಹವೂ ತುಂಬಾ ಮೆಚ್ಚತಕ್ಕದ್ದೇ

ಅಶೋಕ ಉಚ್ಚಂಗಿ
ಮೈಸೂರು.

ನನ್ನ ಬ್ಲಾಗ್ ಸಧ್ಯದಲ್ಲೇ ಅಪ್ ಡೇಟ್ ಆಗುತ್ತಿದೆ....ತಿಳಿಸುತ್ತೇನೆ

ತೇಜಸ್ವಿನಿ ಹೆಗಡೆ- said...

ಶಿವು ಅವರೆ,

ಅದ್ಭುತ! ಮಾತಿಗೆ ನಿಲುಕ ಭಾವ ಮನಸೆಲ್ಲಾ ತುಂಬಿತು. ಸ್ಪೂರ್ತಿಯನ್ನು ಹೆಚ್ಚಿಸುವ, ಬದುಕನ್ನು ಜೀವಿಸಲು ಕಲಿಸುವ ಇವರಿಗೆಲ್ಲಾ ನನ್ನ ಅನಂತ ನಮನ.

ಪ್ರೇರಣೆ ನೀಡುವ ಚಿತ್ರಗಳಿಗಾಗಿ ತುಂಬಾ ಧನ್ಯವಾದಗಳು.

ಹಾಗೆಯೇ....Get Well Soon.

ದಿನಕರ ಮೊಗೇರ.. said...

ಶಿವೂ ಸರ್,
ವಾವ್ ..... ಸೂಪರ್ ಸರ್, ಎಂಥಾ ಫೋಟೋ...... ಸ್ಪೆಷಲ್ persons ಫೋಟೋ ತುಂಬಾ ಚೆನ್ನಾಗಿ ತೆಗೆದಿದ್ದೀರಾ...... ಅವರೆಲ್ಲಾ ತಮ್ಮ ನ್ಯುನ್ಯತೆಯನ್ನು ಮರೆತು ಬದುಕಿನೆಡೆಗೆ ಪ್ರೀತಿ ಬೆಳೆಸಿಕೊಂಡ ಬಗೆಯನ್ನ ನಮಗೆ ತೋರಿಸಿದ್ದೀರಾ....... ತುಂಬಾ ತುಂಬಾ ಧನ್ಯವಾದಗಳು,............... ಯಾರಾದರು, ಯಾಕೆ ದೇವರು ನನಗೆ ಇಷ್ಟು ಕಷ್ಟ ಕೊಡುತ್ತಿದ್ದಾನೆ ಎಂದುಕೊಳ್ತಾಇದ್ದರೋ , ಖಂಡಿತಾ ಈ ಫೋಟೋ ನೋಡಿ, ಅಂಥವರಿಗೆ ತೋರಿಸಿ....... ಜೀವನೋತ್ಸಾಹ ತುಂಬಿಕೊಳ್ಳಿ.....

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಮನೆಯಲ್ಲಿ ಮಲಗಿದ್ದ ನಿಮ್ಮಲ್ಲಿ ಜೀವನೋತ್ಸಾಹ ಮೂಡಿಸಿದ ಇಂತಹ ಕ್ರೀಡಾಕೂಟದ ಚಿತ್ರಗಳಿಂದ ನೋಡುಗರಿಗೂ ಜೀವನೋತ್ಸಾಹ ಮೂಡಿಸಿದ್ದೀರ.

ಜಲನಯನ said...

ಜೀವನವನ್ನು ನೋಡುವ ಶೈಲಿ, ಅದರ ಚಾಲನೆಗೆ ಬೇಕಾದ ಛಲ, ಮನೋ ಸ್ಥೈರ್ಯ, ಬುದ್ಧಿ ತೀಕ್ಷ್ಣತೆ, ಎಲ್ಲವನ್ನೂ ಎದುರಿಸಿ ನಿಲ್ಲಬಲ್ಲೆ ಎನ್ನುವ ಎದೆಗಾರಿಕೆ ಹೀಗೆ ಇವರಲ್ಲಿ ಅಂಗ ಊನ ಎಂಬ (ನಮ್ಮ ಮಟ್ಟಿಗೆ ,,,ಅವರಿಗಲ್ಲ) ಮಾತು ಬಿಟ್ಟರೆ ಎಲ್ಲವೂ ಪಾಸಿಟಿವ್ ಇವರಲ್ಲಿ...ಅದಕ್ಕೇ ..ಸಾಧಿಸುವುದು ಸಾಧ್ಯ....ಛಲ ಹುಟ್ಟಿದರೆ ಸ್ಥೈರ್ಯ ಬರುಉತ್ತೆ ಎನ್ನುತ್ತಾರೆ..ಅದಕ್ಕೆ ತಕ್ಕ ಬುದ್ಧಿ ತೀಕ್ಷ್ಣತೆ ಬಂದರೆ...ಅಜೇಯರು.......ಶಿವು ನಿಮ್ಮ ಹಲವು ದಿನದ ಕೊರತೆಯನ್ನು ಒಂದೇ ಪ್ರಯತ್ನ ದಲ್ಲಿ ಚುಕ್ತಾ ಮಾಡಿದಿರಿ

ಆನಂದ said...

ಜೀವನಕ್ಕೆ ಸಾವಿರ ಸಬೂಬು ಕೊಡುತ್ತ ಬದುಕೋ ಕೆಲವರಿಗೂ, ಇರೋ ಕಷ್ಟದ ಮಧ್ಯೆನೂ ಉತ್ಸಾಹದಿಂದ ಬದುಕೋ ಇವರಿಗೂ ಅದೆಷ್ಟು ವ್ಯತ್ಯಾಸ!
ಫೋಟೋಗಳು ಚೆನ್ನಾಗಿವೆ.

ಲೋದ್ಯಾಶಿ said...

ಆತ್ಮೀಯ ಶಿವೂರವ್ರೆ

ಇಂತಹ ಚಿತ್ರಗಳನ್ನ ತೋರ್ಸಿ, ನಮಗೆ ಮತ್ತಷ್ಟು ಜೀವನೋತ್ಸಾಹ ತುಂಬಿದ್ದೀರ. ಧನ್ಯವಾದಗಳು.
ಮತ್ತೊಮ್ಮೆ ನಿಮ್ಮ ಪುಸ್ಕಕಕ್ಕೆ ನನ್ನ ಅಭಿನಂದನೆಗಳು.

Divya Hegde said...

ಶಿವು ಅವರೇ ,
ತುಂಬ ಹಿಡಿಸಿತು ನಿಮ್ಮ ಈ ಲೇಖನ ...
ಚೆಂದದ ( content + photos ) ಗೆ ಧನ್ಯವಾದಗಳು...:)

ಸುಮ said...

ಇವರ ಛಲ, ಆತ್ಮವಿಶ್ವಾಸಕ್ಕೊಂದು ಸಲಾಂ.ಅದನ್ನು ಸೆರೆಹಿಡಿದು ನಮ್ಮಲ್ಲೂ ಸ್ಫೂರ್ತಿ ತುಂಬಿದ ನಿಮಗೂ ಥ್ಯಾಂಕ್ಸ್.

shivu said...

ಆಶೋಕ್,

ತುಂಬಾ ದಿನಗಳ ನಂತರ ಮತ್ತೆ ಬ್ಲಾಗ್ ಲೋಕಕ್ಕೆ ಮರಳಿದ್ದೀರಿ. ಕ್ರೀಡಾಕೂಟದ ಚಿತ್ರಗಳನ್ನು ಮೆಚ್ಚಿ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದೀರಿ.

ನಿಮ್ಮ ಬ್ಲಾಗ್ ಅಪ್‍ಡೇಟ್ ಆಗುವುದನ್ನು ಕಾಯುತ್ತಿದ್ದೇನೆ.
ಧನ್ಯವಾದಗಳು.

shivu said...

ತೇಜಸ್ವಿನಿ ಮೇಡಮ್,

ನಾನು ಕಳೆದ ಒಂದು ವಾರದಿಂದ ಮನೆಯಲ್ಲಿ ಮಲಗಿದ್ದರಿಂದ ಜಡ್ಡು ಹಿಡಿದಂತೆ ಆಗಿಬಿಟ್ಟಿತ್ತು. ಒಮ್ಮೆ ಅವರನ್ನೆಲ್ಲಾ ನೋಡಿದ ಮೇಲೆ ನನಗೂ ಹೊಸ ಹುರುಪು ಬಂದಂತೆ ಆಗಿತ್ತು. ಅವರಿಂದ ಕಲಿಯುವುದು ತುಂಬಾ ಇದೆ ಅನ್ನಿಸಿತ್ತು.

ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕೆ ಮತ್ತು
ನನ್ನ ಆರೋಗ್ಯದ ಬಗ್ಗೆ ನಿಮ್ಮ ಕಾಳಜಿಗೆ ಥ್ಯಾಂಕ್ಸ್...

shivu said...

ದಿನಕರ್ ಸರ್,

ಬದುಕಿನಲ್ಲಿ ನ್ಯೂನ್ಯತೆಗಳನ್ನು ಹುಡುಕಿಕೊಂಡರೆ ಸಾವಿರಾರು. ಹುಡುಕುವ ಗೋಜಿಗೆ ಹೋಗದೆ, ದೇವರು ಕೊಟ್ಟ ಈ ಒಂದೇ ಬದುಕನ್ನು ಬದುಕುವ ರೀತಿಯನ್ನು ಇವರಿಂದ ನೋಡಿ ಕಲಿಯಬೇಕೆನ್ನಿಸುತ್ತೆ ಅಲ್ಲವೇ. ಫೋಟೊಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಮತ್ತು ಪುಸ್ತಕವನ್ನು ಓದಿ ನಿಮ್ಮ ಪ್ರತಿಕ್ರಿಯೆ ನೀಡಿದ್ದೀರಿ. ಈ ಪುಸ್ತಕವನ್ನು ಎಲ್ಲರೂ ಓದಬೇಕು ಅಂತಲೂ ಹೇಳಿದ್ದೀರಿ. ಅದಕ್ಕಾಗಿ ಧನ್ಯವಾದಗಳು.

shivu said...

ಮಲ್ಲಿಕಾರ್ಜುನ್,

ನಿಜಕ್ಕೂ ನನ್ನ ಅನಾರೋಗ್ಯ ಹೋಗಲಾಡಿಸಲಿಕ್ಕೆ ಈ ಕ್ರೀಡಾಪಟುಗಳ ಒಂದು ರೀತಿ ಕಾರಣವೆನ್ನಬಹುದು.

ಧನ್ಯವಾದಗಳು.

shivu said...

ಅಜಾದ್ ಸರ್,

ಬದುಕಿನ ಬಗ್ಗೆ ಇವರಿಗೆ ಇರುವ ಸ್ಥೈರ್ಯ ನಿಜಕ್ಕೂ ಮೆಚ್ಚುವಂತದ್ದು. ನಿಮ್ಮ ಅಭಿಪ್ರಾಯವೂ ಕೂಡ ಸರಿಯಾಗಿಯೇ ಇದೆ. ಪಾಸಿಟೀವ್ ಅಂಶಗಳನ್ನು ಕೂಡಿಸಿಕೊಂಡು ಬದುಕುವ ಇವರ ಆಟವೆನ್ನೊಮ್ಮೆ ನೋಡಿ ಆನಂದಿಸಬೇಕೆನ್ನಿಸುತ್ತದೆ.

ಮತ್ತೆ ಕಳೆದ ಹತ್ತು ದಿನದಿಂದ ನಾನು ಕಾಣೆಯಾಗಿದ್ದು ನನಗೆ ಬೇಸರವಾಗಿಬಿಟ್ಟಿತ್ತು. ಸದ್ಯ ಹೊಸ ಪೋಸ್ಟಿನಿಂದ ಆಗಮಿಸಿರುವುದು ನಿಮಗೆ ಖುಷಿ ತಂದಿದ್ದಕ್ಕೆ ಧನ್ಯವಾದಗಳು.

shivu said...

ಆನಂದ್,

ನನ್ನ ಬ್ಲಾಗಿಗೆ ಸ್ವಾಗತ. ಫೋಟೊಗಳನ್ನು ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೀರಿ. ಧನ್ಯವಾದಗಳು.

ಹೀಗೆ ಬರುತ್ತಿರಿ.

shivu said...

ಲೋದ್ಯಾಶಿ ಸರ್,

ನಿಮ್ಮ ಮಾತು ಸರಿ. ಇವೆರೆಲ್ಲಾ ನಮಗೆ ಸೂರ್ತಿಧಾಯಕರೇ ಸರಿ. ಫೋಟೊಗಳನ್ನು ನೋಡಿ ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu said...

ದಿವ್ಯಾ ಮೇಡಮ್,

ನನ್ನ ಬ್ಲಾಗಿಗೆ ಸ್ವಾಗತ.

ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ಹೀಗೆ ಬರುತ್ತಿರಿ.

shivu said...

ಸುಮಾ ಮೇಡಮ್,

ಇವರು ನಿಮಗೆ ಮಾತ್ರವಲ್ಲ, ನನಗೂ ಸ್ಪೂರ್ತಿಯನ್ನು ನೀಡಿದವರು ಅಂತಲೇ ಹೇಳಬೇಕು. ಫೋಟೊಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

ಚಿತ್ರಾ said...

ಶಿವೂ,
ಮೊತ್ತ ಮೊದಲು , ಜ್ವರದಿಂದ ಚೇತರಿಸಿ ಕೊಳ್ಳುತ್ತಿರುವಾಗಲೇ ಕ್ರೀಡಾಕೂಟಕ್ಕೆ ಹೋಗಿ ಕ್ರೀಡಾಳುಗಳ ಸಂಭ್ರಮದ ಕ್ಷಣಗಳನ್ನು ಸೆರೆಹಿಡಿದ ನಿಮ್ಮನ್ನು ಅಭಿನಂದಿಸಲೇ ಬೇಕು !
ಛಾಯಾಚಿತ್ರಗಳನ್ನು ನೋಡುವಾಗ ನನಗಂತೂ ಗಂಟಲುಬ್ಬಿ ಬಂತು . ಮೊದಲ ಚಿತ್ರವೇ ಮನ ತಟ್ಟಿತು !
ತಮ್ಮ ವೈಕಲ್ಯಗಳನ್ನು ಬದಿಗಿಟ್ಟು ಅತ್ಯಂತ ಸಹಜವಾಗಿ ಉತ್ಸಾಹದಿಂದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಇವರ ಜೀವನೋತ್ಸಾಹ , ಸಾಧಿಸುವ ಛಲಕ್ಕೆ, ಆತ್ಮವಿಶ್ವಾಸಕ್ಕೆ ತಲೆಬಾಗುತ್ತೇನೆ .
ಎಲ್ಲ ಸರಿ ಇದ್ದೂ ಸೋಮಾರಿಗಳಂತೆ ಭಿಕ್ಷೆ ಬೇಡುವ ಎಷ್ಟು ಜನರಿಲ್ಲ ? ಅಂಥವರು ಇವರಿಂದ ಏನನ್ನಾದರೂ ಕಲಿಯಬಹುದೇ? ನಮಗೂ ಈ ಕ್ರೀಡಾಳುಗಳ ಪರಿಚಯ ಮಾಡಿಕೊಟ್ಟಿದ್ದಕ್ಕೆ , ನಿಮಗೆ ಆಭಾರಿಯಾಗಿದ್ದೇನೆ.

ರಾಜೀವ said...

ನಿಮ್ಮ ಫೋಟೋಗಳು ಚೆನ್ನಗಿದ್ದರೂ, ಅದನ್ನು ನೋಡುವುದಕ್ಕೆ ಬೇಸರವಾಗುತ್ತದೆ. ಮನ ಕಲಕುತ್ತದೆ.
ಮೇಲ್ನೋಟಕ್ಕೆ ನಗುಮುಖವನ್ನು ತೋರಿಸಿದರೂ, ಒಳಗೆ ಅದೆಷ್ಟು ನರಳುತಿದ್ದಾರೆಯೋ!!
ಎಲ್ಲ ಅಂಗಗಳೂ ಸೆರಿಯಾಗಿದ್ದೂ, ತಮ್ಮ ಸ್ವಾರ್ಥದ ಜೀವನವನ್ನು ನಡೆಸುತ್ತಿದ್ದಾರಲ್ಲಾ, ಅವರು ನಿಜವಾಗಿಯೂ ಅಂಗವಿಕಲರು.

ಜ್ವರದಿಂದ ಬೇಗ ಪೂರ್ಣವಾಗಿ ಚೇತರಿಸಿಕೊಳ್ಳಿ.

ಚುಕ್ಕಿಚಿತ್ತಾರ said...

ಅ೦ಗವಿಕಲತೆ ಅನ್ನುವುದು ದೇಹಕ್ಕೇ ಹೊರತೂ ಮನಸ್ಸಿಗಲ್ಲ ... ಅನ್ನುವುದು ನಿಮ್ಮ ಲೇಖನ ಮತ್ತು ಫೊಟೋಗಳಿ೦ದ ಸ್ಪಷ್ಟವಾಗುತ್ತದೆ ಶಿವು ಸರ್..
ವ೦ದನೆಗಳು

ಸವಿಗನಸು said...

ಶಿವು ಸರ್,
ತುಂಬ ಚೆನ್ನಾಗಿದೆ ನಿಮ್ಮ ಈ ಲೇಖನ ...
ಚೆಂದದ ಫೋಟೋಗಳಿಗೆ ಧನ್ಯವಾದಗಳು...:)

L'Etranger said...

ಮನಮುಟ್ಟುವಂತಹ ಚಿತ್ರಗಳಿಗಾಗಿ ಧನ್ಯವಾದಗಳು!

ಇವರು ಖಂಡಿತಾ ವಿಕಲರಲ್ಲ. ಇವರಿಗೆ ಅಂಗಾಂಗಗಳಲ್ಲಿ ನ್ಯೂನತೆ ಇರಬಹುದು, ಆದರೆ ಎಲ್ಲವೂ ಇದ್ದರೂ ಸಹ ಜೀವನೋತ್ಸಾಹವಿರದಿರುವುದೇ ನಿಜವಾದ ವಿಕಲತೆ.

ಪ್ರವೀಣ ಚಂದ್ರ said...

..........................................................................
........................................................................
........................bareyoke padagale sigta illa

Chamaraj Savadi said...

ಅದ್ಭುತ ಚಿತ್ರಗಳಿಗೆ ಅತ್ಯದ್ಭುತ ಶೀರ್ಷಿಕೆಗಳು ಶಿವು. ಎರಡೂ ಸೇರಿ ನೀಡಿದ ಪ್ರೇರಣೆ ಅಪಾರ. ತುಂಬಾ ಥ್ಯಾಂಕ್ಸ್‌.

ಸಂದೀಪ್ ಕಾಮತ್ said...

Tumba olleya lekhana.

-Sandeep Kamath

AntharangadaMaathugalu said...

ಶಿವು ಸಾರ್...

ಬೇಗ ಹುಷಾರಾಗಿ.... ನಿಮ್ಮ ಈ ಚಿತ್ರಗಳು ನಿಜಕ್ಕೂ ನಮ್ಮನ್ನು ತಟ್ಟಿ ಎಬ್ಬಿಸುವಂತಿದ್ದವು... ಎಲ್ಲಾ ಅಂಗಗಳೂ ಸರಿಯಾಗಿದ್ದರೂ, ನಾವೇನನ್ನೂ ಸಾಧಿಸದೆ... ನಮ್ಮ ಚಿಕ್ಕ ಪುಟ್ಟ ನೋವುಗಳನ್ನೇ ಬೃಹದಾಕಾರವಾಗಿ ಮಾಡಿಕೊಂಡು ನರಳುತ್ತಿರುವ ನಾವು ಇವರುಗಳನ್ನು ನೋಡಿ ಕಲಿಯಬೇಕಾದದ್ದು ತುಂಬಾ ಇದೆ. ನಿಮ್ಮ ಅನಾರೋಗ್ಯದಲ್ಲೂ ತೆಗೆದ ಈ ಚಿತ್ರಗಳು ನನ್ನನ್ನು ಹುರಿದುಂಬಿಸಿದೆ. ಧನ್ಯವಾದಗಳು.......
ಶ್ಯಾಮಲ

Anonymous said...

ಅಂಗವಿಕಲರ ಕ್ರೀಡಾಕೂಟವನ್ನ ಇಷ್ಟು ಚೆನ್ನಾಗಿ ನಮ್ಮ ಕಣ್ಣ ಮುಂದೆ ತಂದಿದ್ದಕ್ಕೆ ಧನ್ಯವಾದಗಳು ಶಿವು.
ಒಬ್ಬೊಬ್ಬರನ್ನ ನೋಡ್ತಾ ಇದ್ರೆ...ಎಲ್ಲ ಇರುವ ನಾವು ಎಷ್ಟು ನಿಷ್ಪ್ರಯೋಜಕರು ಅನ್ನಿಸುತ್ತೆ.
ಅವರ ಉತ್ಸಾಹ, ಮುನ್ನಡೆಯ ಬೇಕೆನ್ನುವ ಆಸೆ ನಮಗೂ ಬರಲೆಂಬ ಹಾರೈಕೆ ನನ್ನದು!

Naveen...ಹಳ್ಳಿ ಹುಡುಗ said...

Shivanna..

addakke avaranna "Specially Abled" annodu...

Hats off...

Endinanthe Photogalu chennagive...

umesh desai said...

ಶಿವು ಅದ್ಭುತ ಫೋಟೋಗಳು ನಿಮ್ಮ ಚಿತ್ರಗಳು ಛಳಿಹುಟ್ಟಿಸಿದ ಜಡತೆ ನೀಗಿದವು

ಸುಧೇಶ್ ಶೆಟ್ಟಿ said...

ತು೦ಬಾ ತು೦ಬಾ ಸ್ಫೂರ್ತಿ ತು೦ಬುವ೦ತದ್ದು ಶಿವಣ್ಣ... ಬದುಕಿನ ಬಗ್ಗೆ ಕ೦ಪ್ಲೇ೦ಟ್ ಇರುವವರು ಇದನ್ನು ಒ೦ದು ಸಲ ನೋಡಿಬಿಟ್ಟರೂ ಸಾಕು...

ಶಿವಪ್ರಕಾಶ್ said...

All i can say is 'Hats off to all'.
great photos with excellent timing shivu...

Keshav Kulkarni said...

shivu,

great work. You will life in photos!

Keshav

ಸುಧಾಕಿರಣ್ ಅಧಿಕಶ್ರೇಣಿ said...

ನಲ್ಮೆಯ ಶಿವು, ನನ್ನ ಮಾತು ಇವು
ಅಂಗವಿಕಲರ ಕ್ರೀಡೋತ್ಸಾಹದ ಛಾಯಾಚಿತ್ರ
ನೋಡಿ , ದಂಗಾದೆನು ಬ್ಲಾಗ್ ಮಿತ್ರ
ವೈಕಲ್ಯವಿದ್ದರೂ ಉತ್ಸಾಹದಲಿ ಮುಂದೆ
ಎಲ್ಲವೂ ಇದ್ದ ನಾವು ಎಲ್ಲದರಲೂ ಹಿಂದೆ
ಕ್ರೀಡಾಕೂಟ ,ನಿಮ್ಮ ಚಿತ್ರ ಮಾಟ, ಕಲಿಸಿತೆಮಗೆ ಪಾಠ.

ವಿನುತ said...

ಶಿವು,

ನಾನೂ ಈ ಕ್ರೀಡಾಕೂಟಕ್ಕೆಸ್ವಸಹಾಯಕಿಯಾಗಿ ಹೋಗಿದ್ದೆ, ಕಳೆದೆರಡು ದಿನ. ಬದುಕೆನೆಡೆಗೆ ಅವರಿಗಿರುವ ಛಾತಿ ನಿಜಕ್ಕೂ ಎಂತಹವರಿಗೂ ಸ್ಪೂರ್ತಿ. ಕಾರ್ಯಕ್ರಮದ ಆಯೋಜಕರು, ಅವರ ವೆಬ್ ಸೈಟಿನಲ್ಲಿ ಹಾಕಲು (ಸೂಕ್ತ credits ನೊಂದಿಗೆ, ofcourse) ಒಳ್ಳೆಯ ಫೋಟೋಗಳ ಹುಡುಕಾಟದಲ್ಲಿದ್ದರು. ನನ್ನಂತ amateur ಗಳ ಫೋಟೋಗಳೀಗಿಂತ ನಿಮ್ಮಂತಹ professional ಫೋಟೋಗಳು ಹೆಚ್ಚು ಸಹಕಾರಿಯಾಗಬಹುದು. ನೀವು ಕಳುಹಿಸುವಿರಾದಲ್ಲಿ, ನನಗೊಂದು ಮಿಂಚೆಯನ್ನು ಕಳುಹಿಸಿ. ಅವರ ವಿಳಾಸವನ್ನು ಕೊಡುತ್ತೇನೆ.

-ವಿನುತ

Dr. B.R. Satynarayana said...

ಅದ್ಭುತ ಶಿವು, ಇವೆಲ್ಲವನ್ನೂ ನೋಡಿದ ಮೇಲೂ ನಾವು ಸೋಮಾರಿಗಳಾಗಿ ಉಳಿದರೆ ಬದುಕಿಗೇನಿದೆ ಅರ್ಥ!
ಈ ಕ್ರೀಡಾ ಕೂಟದಲ್ಲಿ ಭಾಗವಹಿಸಿರುವ ಾಟಗಾರರ ಮನಸ್ಸಿನಲ್ಲೇನಿದೆ. ಸೋಮಾರಿಗಳನ್ನು ನೋಡಿದರೆ ಅವರಿಗೇನನ್ನಿಸುತ್ತದೆ? ನನಗೇನಾದರೂ ಪರಮನಪ್ರವೇಶ ಶಕ್ತಿಯಿದ್ದಿದ್ದರೇ ಈ ತರದ ನೂರಾರು ಪ್ರಶ್ನೆಗಳಿಗೆ ಉತ್ತರ ಹುಡುಕಬಯಸುತ್ತಿದ್ದೆ!

ಸೀತಾರಾಮ. ಕೆ. said...

ಅದ್ಭುತ ಚಿತ್ರಗಳು. ಬದುಕಿಗೆ ಸ್ಫೂರ್ಥಿ ನೀಡುವ ಚಿತ್ರಗಳು. ಅ೦ಗ ವೈಕಲ್ಯವಿದ್ದರೂ ಬದುಕಿನ ಹೋರಾಟವನ್ನು ಆಟೋಠಗಳಲ್ಲಿ ತೋಡಗಿಸಿದವರ ಮನೋಸ್ಥೈರ್ಯವನ್ನ ಚೆನ್ನಗಿ ಚಿತ್ರಗಳು ಸೆರೆ ಹಿಡಿದಿವೆ. ತಮ್ಮ "ಹುಡುಕಾಟದ ಅದ್ಭುತ ಕಣ್ಣು"ಗಳಿಗೆ ವ೦ದನೆಗಳು.

UMESH VASHIST H K. said...

ಅವರಿಗಿರೋ ಜೀವನೋತ್ಸಾಹ ನೋಡಿದ್ರೆ ನಮಗೆ ನಾಚಿಕೆಯಾಗುತ್ತೆ, ದಿನದ ಕಷ್ಟ ಕೊಟಲೆಗಳಲ್ಲೇ ನಮ್ಮನ್ನ ನಾವು ಕಳೆದುಕೊಂದುಬಿಡ್ತೇವೆ,

Guru's world said...

ಅದ್ಬುತ ಚಿತ್ರ ಹಾಗು ಲೇಖನ,,, " ಕೈಲಾಗದು ಎಂದು ಕೈಕಟ್ಟಿ ಕುಳಿತರೆ,,,,ಆಗದು ಕೆಲಸವೂ ಎಂದು,,," ಛಲ ವೊಂದಿದ್ದರೆ ಅಂಗವೈಕಲ್ಯ ಕೂಡ ಏನು ಇಲ್ಲ ಅಲ್ವ....
ಗುರು

ರವಿಕಾಂತ ಗೋರೆ said...

ಅದ್ಭುತ.... ಈ ಕ್ರೀಡಾಪಟುಗಳನ್ನು ನೋಡಿದ್ರೆ ನನ್ನ ಮೇಲೆ ನನಗೆ ನಾಚಿಕೆಯಾಗುತ್ತೆ... ನೀವು ಹೇಳಿದ್ದು ನಿಜ.. ಜೀವನೋತ್ಸಾಹ ಅಂದ್ರೆ ಇದು... ಈ ಸಾಧಕರನ್ನು ನೋಡಿ ನಾನು ಕಲಿಯಬೇಕಾದ್ದು ತುಂಬಾ ಇದೆ... ಉತ್ತಮ ಚಿತ್ರ ಬರಹದ ಜೊತೆ ನನ್ನನ್ನು ಎಚ್ಚರಿಸಿದ್ದಕ್ಕೆ ಧನ್ಯವಾದಗಳು...

ಬಿಸಿಲ ಹನಿ said...

ಅಸಾಮಾನ್ಯರ ಫೋಟೊಗಳನ್ನು ತೋರಿಸಿ ಅದ್ಭುತ ಜೀವನೋತ್ಸಾಹವನ್ನು ಹೆಚ್ಚಿಸಿದ್ದಿರಿ. ಥ್ಯಾಂಕ್ಸ್! ಶಿರ್ಷಿಕೆಗಳು ಸಹ ಚನ್ನಾಗಿವೆ.

ಸಾಗರದಾಚೆಯ ಇಂಚರ said...

ಶಿವೂ ಸರ್
ಅದ್ಭುತ ಬರಹ
ಆ ಫೋಟೋ ಗಳಂತೂ ತುಂಬಾನೇ ಚೆನ್ನಾಗಿವೆ
ಆದರೆ ಆ ಸಾಧಕರ ಸಾಧನೆ ಮನ ಮುಟ್ಟುವಂತೆ ಬರೆದಿದ್ದಿರಾ
ಎಂದಿನಂತೆ ಒಳ್ಳೆಯ ಬರಹ

Vinu said...

ಶಿವೂ ಅವರೇ,
ಬಹಳ ಸೊಗಸಾದ ಲೇಖನ . ಚಿತ್ರಗಳು ಯಾರಿಗೂ ಸ್ಪೂರ್ತಿ ನೀಡಿ ಜೀವನೋತ್ಸಾಹ ತುಂಬುವಂತೆ ಇದೆ.

Vinod

ಮನಸು said...

ತುಂಬಾ ಚೆನ್ನಾಗಿದೆ..ಸೊಗಸಾದ ಚಿತ್ರಗಳು ಅದಕೆ ತಕ್ಕಂತ ಕಿರುನುಡಿ ಚೆನ್ನಾಗಿದೆ, ನಮಗೆ ಸ್ಪೂರ್ತಿದಾಯಕವಾಗಿವೆ.
ಧನ್ಯವಾದಗಳು

ಕ್ಷಣ... ಚಿಂತನೆ... bhchandru said...

ಶಿವು ಸರ್‍,
ಲೇಖನದ ಶೀರ್ಷಿಕೆ ಮತ್ತು ಮೊದಲ ಚಿತ್ರ ನೋಡುತ್ತಲೇ ತುಂಬಾ ಖುಷಿಯಾಯಿತು. ಜೊತೆಗೆ ಒಂದೆರಡು ಚಿತ್ರಗಳನ್ನು ನೋಡುತ್ತಿದ್ದಂತೆ ಏನೋ ಹೇಳಿಕೊಳ್ಳಲಾಗದ ವೇದನೆ, ಸಂತಸ ಎಲ್ಲ ಒಮ್ಮಿದೊಮ್ಮೆಲೇ ಬಂದಿತು.

ಈ ಫೋಟೋಗಳನ್ನು ನೋಡಿತ್ತಿದ್ದರೆ ಜೀವನೋತ್ಸಾಹ ಇವರುಗಳಿಂದಲೇ ಕಲಿಯಬೇಕು ಎನ್ನಿಸುತ್ತದೆ. ಅದ್ಭುತ ಚಿತ್ರಗಳು ಮತ್ತು ಅಡಿಬರಹ. ನಿಜಕ್ಕೂ ನೀವು ಕೊಟ್ಟ ಚಿತ್ರ ಲೇಖನ ಎಂತಹವರಿಗೂ ಉತ್ಸಾಹ ತುಂಬುವಂತಹದ್ದು.

ಸ್ನೇಹದಿಂದ,

ಯಜ್ಞೇಶ್ (yajnesh) said...

ನೀವು ತೆಗೆದ ಚಿತ್ರಗಳು ಮಾತಾಡುತ್ತವೆ ಶಿವು.

ಜೀವನವೆಂದರೇನು ಮತ್ತು ಅದನ್ನು ಹೇಗೆ ಎದುರಿಸಬೇಕು ಎನ್ನುವುದು ಈ ಚಿತ್ರಗಳಿಂದ ತಿಳಿಯೊತ್ತೆ.. ಗ್ರೇಟ್ ವರ್ಕ್ ಸರ್

Pramod P T said...

ಸೂಪರ್!
ಥ್ಯಾಂಕ್ಯೂ ಶೀವು.

shivu said...

ಚಿತ್ರ ಮೇಡಮ್,

ನನ್ನ ಆರೋಗ್ಯದ ಬಗೆಗಿನ ಕಾಳಜಿಗೆ ತುಂಬಾ ಥ್ಯಾಂಕ್ಸ್. ಈ ಪೋಟೊಗಳನ್ನು ಕ್ಲಿಕ್ಕಿಸುವಾಗ ಜ್ವರವಿತ್ತು. ಈಗ ನಿಮ್ಮ ಕಾಮೆಂಟಿಗೆ ಉತ್ತರಿಸುವ ಸಮಯದಲ್ಲಿ ಜ್ವರ ಮಾಯವಾಗಿ ಎಂದಿನ ಲವಲವಿಕೆ ಬಂದಿದೆ.

ನಾನು ಕ್ರೀಡಾಂಗಣದಲ್ಲಿ ಅವರ ಚಿತ್ರಗಳನ್ನು ಕ್ಲಿಕ್ಕಿಸುವ ಮೊದಲು ಅವರು ಒಂದು ಕೈಯಲ್ಲಿ ತಮ್ಮ ಷೂಗಳ ಲೇಸ್ ಕಟ್ಟಿಕೊಳ್ಳುವುದು, ಎರಡು ಕೈಗಳಿಲ್ಲದವರು ಬಾಟಲಿ ನೀರನ್ನು ಕುಡಿಯಲ್ಲಿ ಕಷ್ಟಪಡುವುದು, ಇತ್ಯಾದಿಗಳನ್ನು ನೋಡುವಾಗ ನನಗೂ ಗಂಟಲುಬ್ಬಿ ಬಂದಿತ್ತು. ಒಂದು ಕ್ಷಣ ಕಣ್ಣಂಚಲ್ಲಿ ನೀರು ಇಣುಕಿತ್ತು. ನಾನೇ ಭಾವೊದ್ವೇಗಕ್ಕೊಳಗಾಗಿ ಅದೆನ್ನೆಲ್ಲಾ ಕ್ಲಿಕ್ಕಿಸುವುದು ಮರೆತುಬಿಟ್ಟೆ.

ಒಟ್ಟಾರೆ ಅವರಿಂದ ನಾವು ಕಲಿಯುವುದು ತುಂಬಾ ಇದೆ ಅನ್ನಿಸಿತ್ತು. ಮುಖ್ಯವಾಗಿ ಅವರು ಸಂತೋಷವಾಗಿರುವುದು ನನಗೆ ತುಂಬಾ ಇಷ್ಟವಾಯಿತು.

ಮತ್ತೆ ಇವತ್ತು ನಿಮಗೆ ವೆಂಡರ್ ಕಣ್ಣು ಪುಸ್ತಕವನ್ನು ನಿಮಗೆ ಕೊರಿಯರ್ ಮಾಡಿದ್ದೇನೆ. ಒಂದೆರಡು ದಿನದಲ್ಲಿ ಸಿಗಬಹುದು.
ಪೋಟೊಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu said...

ರಾಜೀವ್ ಸರ್,

ನೀವು ಹೇಳಿದ್ದು ಸರಿ. ಮೇಲ್ನೋಟಕ್ಕೆ ಅವರು ನಗುಮುಖವಿದ್ದರೂ ಒಂಟಿಯಾಗಿದ್ದಾಗ ಅವರ ಮುಖದ ಭಾವನೆಗಳನ್ನು ಗುರುತಿಸಲು ಪ್ರಯತ್ನಿಸಿದೆ ಆಗಲಿಲ್ಲ. ಏನೋ ಕೊರಗು ಇದ್ದರೂ ಅವರು ಅದನ್ನೆಲ್ಲಾ ಮೀರಿ ಇಂಥದ್ದರಲ್ಲಿ ಭಾಗವಹಿಸುತ್ತಾ ಎಲ್ಲವನ್ನು ಮರೆಯುತ್ತಾರಲ್ಲ ಅದು ನಿಜಕ್ಕೂ ನಮಗೆಲ್ಲಾ ಸ್ಫೂರ್ತಿ ಎನ್ನಬಹುದು.
ಚಿತ್ರ ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu said...

ಚಿಕ್ಕಿಚಿತ್ತಾರ,

ನೀವು ಹೇಳುವುದು ಸರಿಯಾಗಿದೆ. ಪೋಟೊಗಳನ್ನು ಮತ್ತು ಲೇಖನವನ್ನು ಮೆಚ್ಚಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.

shivu said...

ಸವಿಗನಸು ಮಹೇಶ್ ಸರ್,

ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಕುವೈಟಿನಿಂದಲೂ ಆಟಗಾರರು ಇದ್ದರು ಸರ್.

shivu said...

E.Etranger ಸರ್,

ನನ್ನ ಬ್ಲಾಗಿಗೆ ಸ್ವಾಗತ.

ನಿಮ್ಮ ಕಾಮೆಂಟಿಗೆ ಧನ್ಯವಾದಗಳು. ನಿಮ್ಮ ಬ್ಲಾಗನ್ನು ನೋಡಿದೆ. ಫೋಟೊಗಳನ್ನು ನೀವು ಇಷ್ಟಪಡುತ್ತೀರಿ ಅನ್ನಿಸುತ್ತೆ. ಬಿಡುವು ಮಾಡಿಕೊಂಡು ನಿಮ್ಮ ಬ್ಲಾಗಿನ ಎಲ್ಲಾ ಫೋಟೊಗಳನ್ನು ನೋಡುತ್ತೇನೆ.

ಧನ್ಯವಾದಗಳು.

shivu said...

ಪ್ರವೀಣ್ ಚಂದ್ರ,

ನನ್ನ ಬ್ಲಾಗಿಗೆ ಸ್ವಾಗತ.
............................................................................................................ಥ್ಯಾಂಕ್ಸ್....

shivu said...

ಚಾಮರಾಜ ಸಾವಡಿ ಸರ್,

ಚಿತ್ರಗಳು ಮತ್ತು ಶೀರ್ಷಿಕೆಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ನಿಮ್ಮಂತೆ ನನಗೇ ಅನೇಕ ಪ್ರೇರಣೆಗಳನ್ನು ಈ ಚಿತ್ರಗಳು ನೀಡಿವೆ ಸರ್..

ಧನ್ಯವಾದಗಳು.

shivu said...

ಸಂದೀಪ್ ಕಾಮತ್,

ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್...

shivu said...

ಶ್ಯಾಮಲ ಮೇಡಮ್,

ನಿಮ್ಮ ಪ್ರತಿಕ್ರಿಯೆಗೆ ಉತ್ತರಿಸುವ ಈ ಸಮಯದಲ್ಲಿ ನಾನು ಈಗ ಪೂರ್ತಿ ಲವಲವಿಕೆಯಿಂದ ಇದ್ದಾನೆ. ನನ್ನ ಆರೋಗ್ಯದ ಬಗೆಗಿನ ಕಾಳಜಿಗೆ ಥ್ಯಾಂಕ್ಸ್..

ಇವರ ನೋವುಗಳನ್ನು ನಾನು ಚಿತ್ರಗಳಲ್ಲಿ ತೋರಿಸಲು ಹೋಗಲಿಲ್ಲ. ನಮಗೆ ಸ್ಫೂರ್ತಿ ನೀಡುವಂತವು ಬೇಕೆಂದು ಇಂಥ ಚಿತ್ರಗಳನ್ನು ಕೊಟ್ಟಿದ್ದೇನೆ. ಇವರನ್ನು ನೋಡಿ ನಾನು ಮಾನಸಿಕವಾಗಿ ಬೇಗನೆ ನಾನು ಚೇತರಿಸಿಕೊಂಡಿದ್ದೇನೆ.
ಫೋಟೊಗಳನ್ನು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu said...

ಸುಮನಾ ಮೇಡಮ್,

ಫೋಟೊಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಇವರು ನಿಜಕ್ಕೂ ನಮಗೆಲ್ಲರಿಗೂ ಸ್ಫ್ರೂರ್ತಿ ಎನ್ನುವುದು ಖಂಡಿತ ನಿಜ.

shivu said...

ನವೀನ್,

ಇವರು ಮಾನಸಿಕವಾಗಿ ನಮಗಿಂತ ಉತ್ತಮಸ್ಥಿತಿಯಲ್ಲಿರುತ್ತಾರೆ ಅಲ್ವಾ....ಫೋಟೊಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu said...

ಉಮೇಶ್ ದೇಸಾಯ್ ಸರ್,

ಪೋಟೊಗಳು ನಿಮ್ಮ ಚಳಿಯನ್ನು ಹೋಗಲಾಡಿಸಿದವೇ! ಅದಕ್ಕೆ ಅವರಿಗೆ ನಿಮ್ಮ ಥ್ಯಾಂಕ್ಸ್ ತಲುಪಲಿ...
ಧನ್ಯವಾದಗಳು.

sunaath said...

ಶಿವು,
ಇವು ಸಂಗ್ರಹಯೋಗ್ಯ ಚಿತ್ರಗಳು. ತುಂಬ ಚೆನ್ನಾಗಿ ತೆಗೆದಿದ್ದೀರಿ ಹಾಗು ಅಡಿಬರಹ ಕೊಟ್ಟಿದ್ದಿರಿ. ಇವುಗಳನ್ನು ನಾನು save ಮಾಡಿಕೊಳ್ಳುತ್ತೇನೆ.

shivu said...

ಸುಧೇಶ್,

ಕ್ರೀಡೆಯನ್ನು ನೋಡಲು ಬಂದಿರುವ ಅನೇಕರು ನೀವು ಹೇಳಿದಂತೆ ಬದುಕಿನ ವಿಚಾರದಲ್ಲಿ ಎಚ್ಚೆತ್ತುಕೊಂಡಿರಬಹುದು. ಅನ್ನಿಸುತ್ತೆ. ಪೋಟೊಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu said...

ಶಿವಪ್ರಕಾಶ್,

ನಿಮ್ಮ ಅಭಿನಂದನೆಗಳನ್ನು ಅವರಿಗೆ ತಿಳಿಸುತ್ತೇನೆ. ಬಹುಶಃ ವಿನುತಾ ನನ್ನ ಬ್ಲಾಗಿನಲ್ಲಿ ನಿಮ್ಮ ಕಾಮೆಂಟು ನೋಡಿದರೆ ಅವರು ಅಲ್ಲಿನ ಆಟಗಾರರಿಗೆ ಈ ವಿಚಾರವನ್ನು ತಲುಪಿಸಬಹುದು.

ನನ್ನ ಪೋಟೊಗ್ರಫಿಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu said...

ಕುಲಕರ್ಣಿ ಸರ್,

ಫೋಟೊದಲ್ಲಿ ನನ್ನನ್ನು ಗುರುತಿಸಿದ್ದಕ್ಕೆ ಥ್ಯಾಂಕ್ಸ್...

shivu said...

ಸುಧಾಕಿರಣ್ ಸರ್,

ನನ್ನ ಬ್ಲಾಗಿಗೆ ಸ್ವಾಗತ. ನೀವು ನನ್ನೊಂದಿಗೆ ಪೋನಿನಲ್ಲಿ ಮಾತಾಡಿದ್ದೀರಿ. ನಿಮ್ಮ ಬ್ಲಾಗಿನ ಕವಿತೆಗಳನ್ನು ಬಿಡುವು ಮಾಡಿಕೊಂಡು ಓದುತ್ತೇನೆ.

ನಿಮ್ಮ ಪ್ರತಿಕ್ರಿಯೆಯನ್ನು ಕ್ರೀಡಾಪಟುಗಳ ಬಗ್ಗೆ ಮೆಚ್ಚುಗೆಯನ್ನು ಒಂದು ಪುಟ್ಟ ಕವಿತೆ ಮೂಲಕವೆ ಹೇಳಿದ್ದೀರಿ.

ಧನ್ಯವಾದಗಳು. ಹೀಗೆ ಬರುತ್ತಿರಿ...

shivu said...

ವಿನುತಾ,

ಕ್ರೀಡಾಕೂಟದಲ್ಲಿ ನಾನು ಶುಕ್ರವಾರ ಮತ್ತು ಭಾನುವಾರ ಹೋಗಿದ್ದೆ. ನಿಮ್ಮ ಮುಖ ಪರಿಚಯವಿಲ್ಲದ್ದರಿಂದ ನನಗೆ ನೀವು ಯಾರು ಅಂತ ಗೊತ್ತಾಗಲಿಲ್ಲ. ನೀವು ನಿಮ್ಮ ಕೆಲಸದ ನಡುವೆ ಇಂಥ ಕ್ರೀಡಾಪಟುಗಳ ಸೇವೆಗಾಗಿ ಕೆಲವು ದಿನ ಮೀಸಲಿಟ್ಟಿದ್ದು ನಿಜಕ್ಕೂ ಅಭಿನಂದನೀಯ. ನಿಮ್ಮ ಮನಸ್ಸು ಕೂಡ ದೊಡ್ಡದು.

ಮತ್ತೆ ನೀವು ಹೇಳಿದಂತೆ ನಾನು ತೆಗೆದ ಪೋಟೊಗಳನ್ನು ಅವರ ವೆಬ್‍ಸೈಟಿನಲ್ಲಿ ಬಳಸಿಕೊಳ್ಳಲು ನಾನು ಕೊಡುತ್ತೇನೆ. ಅವರಿಗೆ ನನ್ನ ಲಿಂಕ್ ತಲುಪಿಸಿದ್ದಕ್ಕೆ ಥ್ಯಾಂಕ್ಸ್...

shivu said...

ಡಾ.ಸತ್ಯನಾರಾಯಣ ಸರ್,

ನೀವು ಆಸೆಪಟ್ಟಂತೆ ನಾನು ಅಲ್ಲಿ ಪ್ರಯತ್ನಿಸಿದೆ. ನನಗನ್ನಿಸಿದಂತೆ ಕೆಲವೊಂದು ಸಣ್ಣಪುಟ್ಟ ಭಾವನೆಗಳನ್ನು ಬಿಟ್ಟರೆ ಅವರು ನೆಗೆಟೀವ್ ಆಗಿ ನನಗೆ ಕಂಡಿದ್ದು ಕಡಿಮೆ. ಅವರ ಕೆಲವು ನಡುವಳಿಕೆಗಳು ನಮಗೆ ನಿಜಕ್ಕೂ ಅನುಕರಣೀಯವೆನಿಸುತ್ತದೆ..
ಚಿತ್ರಗಳನ್ನು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳೂ.

shivu said...

ಸೀತಾರಾಮ್ ಸರ್,

ಕ್ರೀಡಾಪಟುಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದೀರಿ.
ಚಿತ್ರಗಳನ್ನು ಮೆಚ್ಚುತ್ತಾ ನನ್ನ ಕ್ಯಾಮೆರಾಗೆ ಹುಡುಕಾಟದ ಕಣ್ಣು ಅಂದಿದ್ದೀರಿ...ಅದಕ್ಕೆ ಥ್ಯಾಂಕ್ಸ್...
ಹೀಗೆ ಬರುತ್ತಿರಿ...

shivu said...

ಉಮೇಶ್ ವಶಿಷ್ಟ ಸರ್,

ಕ್ರೀಡಾಳುಗಳನ್ನು ಮೆಚ್ಚಿ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.

shivu said...

ಗುರು,

ಕೈಲಾಗದು ಎಂದು ಎನ್ನುವುದು ಇವರನ್ನು ನೋಡಿಯೂ ಖಂಡಿತ ಹೇಳಬಹುದು...

ಚಿತ್ರ ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu said...

ರವಿಕಾಂತ್ ಸರ್,

ನೀವು ಹೇಳಿದ್ದು ನಿಜ. ನಿಜಕ್ಕೂ ಇವರನ್ನು ನೋಡಿದಾಗ ಕೆಲವು ವಿಚಾರದಲ್ಲಿ ನನಗೂ ಆ ಕ್ಷಣದಲ್ಲಿ ನಾಚಿಕೆಯೆನಿಸಿದ್ದು ನಿಜ. ಅವರನ್ನು ನೋಡಿ ನಾವು ಬೇಕಾದಷ್ಟು ಕಲಿಯಬಹುದು. ಒಟ್ಟಾರೆ ಅವರಲ್ಲಿ ಒಮ್ಮೆಯೂ ಕೀಳರಿಮೆ ಭಾವನೆಯನ್ನು ನಾನು ನೋಡಲಾಗದಿದ್ದುದು ನಿಜಕ್ಕೂ ಖುಷಿಯ ವಿಚಾರ..

ಫೋಟೊಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu said...

ಉದಯ ಸರ್,

ನೋಡಲು ಇವರು ಸಾಮಾನ್ಯರಲ್ಲಿ ಸಾಮಾನ್ಯರೇ ಆದರೂ ನಿಜಕ್ಕೂ ಇವರು ಅಸಮಾನ್ಯರೇ ಸರಿ...

ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್...ಸರ್.

shivu said...

ಡಾ.ಗುರುಮೂರ್ತಿ ಹೆಗಡೆ ಸರ್,

ಪೋಟೊಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ...

shivu said...

ವಿನು,

ನನ್ನ ಬ್ಲಾಗಿಗೆ ಸ್ವಾಗತ. ಪೋಟೊಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ..

shivu said...

ಮನಸು ಮೇಡಮ್,

ಚಿತ್ರಗಳು ಮತ್ತು ಲೇಖನ ನಿಮಗೆ ಸ್ಫೂರ್ತಿ ನೀಡಿದೆಯೆಂದಿರಿ...ನಿಮ್ಮ ಮೆಚ್ಚಿಗೆಗೆ ಧನ್ಯವಾದಗಳು.

Ranjita said...

ಶಿವೂ ಸರ್ ,
ಜೀವನದಲ್ಲಿ ಉತ್ಸಾಹ ಹೇಗಿರಬೇಕು ಅನ್ನೋದನ್ನ ಅವರನ್ನ ನೋಡಿ ತಿಳಿಬೇಕು ..

Savitha.B.C said...

ಸರ್ ಲೇಖನ ತುಂಬ ಚೆನ್ನಾಗಿದೆ ದೇಹದ ಎಲ್ಲಾ ಬಾಗಗಳು ಸರಿಯಾಗಿದ್ದು ನಾವು ಮಾಡೋ ಕೆಲಸಗಳಿಗಿಂತ ಇಂಥವರು ಪಡೋ ಕಷ್ಟ ತುಂಬ ದೊಡ್ಡದು ಇಂಥವರನ್ನ ನಾವು ಅಂಗವಿಕಲರು ಅಂತ ಕರೆಯೋಕೆ ನಾವು ನಾಚಿಕೆ ಪದಬೇಕು ಅಲ್ಲವೇ?.....

ಸಿಮೆಂಟು ಮರಳಿನ ಮಧ್ಯೆ said...

ಶಿವು ಸರ್...

ಫೋಟೊಗಳು..
ನಿಮ್ಮ ಮಾತುಗಳು ಎಲ್ಲವೂ ಸ್ಪೂರ್ತಿದಾಯಕವಾಗಿವೆ...

ಎಲ್ಲದಕ್ಕೂ ನಮ್ಮ ಮನಸ್ಸು ಕಾರಣ

ಅದು ಸರಿಯಿದ್ದರೆ ಏನು ಬೇಕಾದರೂ ಸಾಧಿಸಬಹುದು. ಅಲ್ಲವೆ?

ಅಭಿನಂದನೆಗಳು ಸೊಗಸಾದ ಫೋಟೊಗಳಿಗೆ..
ಸುಂದರ ಲೇಖನಕ್ಕೆ...

ಬಾಲು said...

ಹೌದು,

ಅ ಕ್ರೀಡಾಳುಗಳ ಜೀವನೋತ್ಸಾಹಕ್ಕೆ, ಅವರ ಕ್ರೀಡಾ ಸ್ಪೂರ್ತಿಗೆ ಹ್ಯಾಟ್ಸ್ ಅಪ್. ನೀವು ಅದನ್ನು ಚೆನ್ನಾಗಿ ಫೋಟೋ ಗಳಲ್ಲಿ ಸೆರೆ ಹಿಡಿದಿರುವಿರಿ.

ಆಮೇಲೆ ನನಗೆ ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಬರಲು ಆಗಲಿಲ್ಲ, ಕಡೆಯ ಕ್ಷಣಗಳಲ್ಲಿ ಬಂದ ತುರ್ತು ಕರೆಯಯಿಂದ ಮಿಸ್ ಮಾಡಿಕೊಬೇಕಾಯಿತು.

shivu said...

ಕ್ಷಣ ಚಿಂತನೆ ಚಂದ್ರು ಸರ್,

ಈ ಕ್ರೀಡಾಳುಗಳ ಫೋಟೊಗಳನ್ನು ನೋಡಿ ನಿಮ್ಮ ಮನದ ಭಾವನೆಗಳನ್ನು ವ್ಯಕ್ತಪಡಿಸಿಕೊಂಡಿದ್ದೀರಿ. ನೀವು ಹೇಳಿದಂತೆ ಇವರಿಂದ ನಾವು ಕಲಿಯೋದು ತುಂಬಾ ಇದೆ. ಮತ್ತೆ ಅವರಿಂದ ಜೀವನೋತ್ಸಹ ಪಡೆದುಕೊಳ್ಳುವ ನಾವು ನಾಳೆ[ದಿನಾಂಕ 3-12-2009 ರಂದು ವಿಶ್ವ ಅಂಗವಿಕಲರ ದಿನ]ಅವರ ದಿನವನ್ನು ನಮ್ಮ ದಿನವೆಂದು ಆಚರಿಸೋಣ ಅಲ್ವಾ...

ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

shivu said...

ಯಜ್ಞೇಶ್ ಸರ್,

ಈ ಕ್ರೀಡಾಪಟುಗಳ ಫೋಟೊಗಳನ್ನು ನೋಡಿ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೀರಿ...ಧನ್ಯವಾದಗಳು.

shivu said...

ಪ್ರಮೋದ್,

ಥ್ಯಾಂಕ್ಸ್...

shivu said...

ರಂಜಿತಾ,

ನಿಮ್ಮ ಮಾತಿನಂತೆ ಇವರು ನಿಜಕ್ಕೂ ನಮಗೆ ಜೀವನೋತ್ಸಹವನ್ನು ಕೊಡುವವರೇ ಸರಿ....

ಧನ್ಯವಾದಗಳು.

shivu said...

ಸವಿತಾ ಮೇಡಮ್,

ನನ್ನ ಬ್ಲಾಗಿಗೆ ಸ್ವಾಗತ. ನಮ್ಮೆಲ್ಲಾ ಅಂಗಗಳು ಸರಿಯಿದ್ದು ನಾವು ಎಷ್ಟು ಸೋಮಾರಿಗಳು ಅನ್ನುವುದು ಇವರನ್ನು ನೋಡಿದಾಗ ನಮಗನ್ನಿಸುತ್ತೆ ಅಲ್ವಾ....ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು ಹೀಗೆ ಬರುತ್ತಿರಿ...

shivu said...

ಪ್ರಕಾಶ್ ಸರ್,

ಈ ಲೇಖನದಲ್ಲಿ ನನ್ನ ಮಾತುಗಳಿಗಿಂತ ಅವರ ಪೋಟೊಗಳನ್ನು ನೋಡಿದಾಗ ನಿಜಕ್ಕೂ ನಮ್ಮ ಮನಸ್ಸಿಗೆ ಸ್ಫೂರ್ತಿ ಉಂಟಾಗುವುದು ಸಹಜ.

ಪೋಟೊಗಳನ್ನು ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.

shivu said...

ಬಾಲು ಸರ್,

ತುಂಬಾ ದಿನದ ನಂತರ ನನ್ನ ಬ್ಲಾಗಿಗೆ ಬರುತ್ತಿದ್ದೀರಿ...ಪೋಟೊಗಳನ್ನು ನಿಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು. ಪುಸ್ತಕ ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು. ಅನಿವಾರ್ಯ ಕಾರಣಗಳು ಬಂದಾಗ ಹೀಗೆ ತಪ್ಪಿಸಿಕೊಳ್ಳುವುದು ಸಹಜ. ತೊಂದರೆಯಿಲ್ಲ. ಪುಸ್ತಕವನ್ನು ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ..

ಧನ್ಯವಾದಗಳು.

Chaithrika said...

ಇದ್ದದ್ದಲ್ಲೆಲ್ಲಾ ತೊಂದರೆಗಳನ್ನೇ ಕಾಣುತ್ತಾ, ಜಗತ್ತಿನ ಕಷ್ಟಗಳೆಲ್ಲಾ ತಮಗೆ ಮಾತ್ರ ಬಂದಿದೆ ಅಂದುಕೊಳ್ಳುವ ಅನೇಕರಿದ್ದಾರೆ. ಅವರಿಗೆ ಈ ಫೋಟೋ ತೋರಿಸಬೇಕು.

Snow White said...

ನಿಜಕ್ಕೂ ಚೆನ್ನಾಗಿದೆ ನಿಮ್ಮ ಲೇಖನ..ಫೋಟೋಗಳು ಸಹ ಚೆನ್ನಾಗಿವೆ.. :) ನಿಜ ಇವರಿಗಿರುವ ಈ ಜೀವನೋತ್ಸಾಹ ಯಾವಾಗಲು ಹೀಗೆಯೇ ಇರಲಿ , ನಮ್ಮಲು ಅದು ಪ್ರಜ್ವಲಿಸಲಿ ಎಂದು ಆಶಿಸುವೆ :)

PARAANJAPE K.N. said...

ವಿಕಲಚೇತನರ ಕ್ರೀಡಾಕೂಟ ಪ್ರಚಾರವಿಲ್ಲದೆ ಸೊರಗಿತ್ತು
ಎ೦ದು ಪತ್ರಿಕೆಗಳಲ್ಲಿ ಓದಿದ್ದೆ. ನೀವು ಬಹಳ ಚೆನ್ನಾಗಿ ವಿವರಿಸಿ, ಅಪರೂಪದ ಚಿತ್ರಗಳನ್ನು ಕೊಟ್ಟಿದ್ದೀರಿ. ನಿಮ್ಮ ಎ೦ದಿನ ಲವಲವಿಕೆ ಈ ಬರಹದಲ್ಲೂ ಇದೆ.

shivu said...

ಚೈತ್ರಿಕಾ,

ನನ್ನ ಬ್ಲಾಗಿಗೆ ಸ್ವಾಗತ. ಕ್ರೀಡಾಪಟುಗಳ ಫೋಟೋಗಳನ್ನು ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೀರಿ...
ಧನ್ಯವಾದಗಳು.

shivu said...

ಸ್ನೋವೈಟ್,

ನಿಮ್ಮ ಈ ಹೆಸರು ತುಂಬಾ ಚೆನ್ನಾಗಿದೆ. ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu said...

ಪರಂಜಪೆ ಸರ್,

ನೀವು ಹೇಳಿದಂತೆ ಇಡೀ ಕಾರ್ಯಕ್ರಮದಲ್ಲಿ ಪತ್ರಿಕಾವಲಯದ ಛಾಯಗ್ರಾಹಕರು ತುಂಬಿದ್ದರೂ ಪತ್ರಿಕೆಯಲ್ಲಿ ಅದಕ್ಕೆ ತಕ್ಕಂತೆ ಸರಿಯಾದ ಫೋಟೊಗಳಾಗಲಿ, ಅವರನ್ನು ಹುರಿದುಂಬಿಸುವ ಲೇಖನವಾಗಲಿ ಬರಲೇ ಇಲ್ಲ. ಅದೇ ಕಾರಣಕ್ಕೆ ನಾನು ಬ್ಲಾಗಿನಲ್ಲಿ ಹಾಕಿದ್ದು. ಅಲ್ಲಿನ ವ್ಯವಸ್ಥಾಪಕರು ಈ ವಿಚಾರದಲ್ಲಿ ಪರದಾಡುತ್ತಿದ್ದುದ್ದು ನಿಜ. ನಾನು ಕೆಲವು ಪತ್ರಿಕೆಗೆ ಪೋಟೊಗಳನ್ನು ಕೊಟ್ಟರೆ ಅವರು ಮೊದಲೇ ರಿಜೆಕ್ಟ್ ಮಾಡುತ್ತಾರೆ. ಅದರದೊಂದು ದೊಡ್ಡ ಕತೆಯೇ ಇದೆ.
ಮುಂದೆ ಎಂದಾದರೂ ಈ ವಿಚಾರದಲ್ಲಿ ಅವರ ಜನ್ಮ ಜಾಲಾಡಬೇಕೆನ್ನುವ ಆಸೆಯೂ ಇದೆ...ಈ ವಿಚಾರದಲ್ಲಿ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

ಕೃಷಿಕನ ಕಣ್ಣು said...

A "touching" article indeed!,.. that's all I can say!.
ಶಿವು,
ಆ ದಿನ ಸಂಜೆ ಪಾರ್ಸೆಲ್ ಸಿಕ್ಕಾಗ, ರಾತ್ರಿನೇ ಎಲ್ರೂ CD ನೋಡಿ,
ಮಾರನೇ ದಿನ ಬೆಳಿಗ್ಗೆಯೇ ಪುಸ್ತಕ ಓದಿ ಮುಗಿಸಿದ್ದೆ.
Net problem ನಿಂದಾಗಿ ಉತ್ತರಿಸಲು ತಡವಾಯ್ತು.
ನಮ್ಮೆಲ್ಲರ ನಿದ್ದೆಯ ನಡುವೆಯೇ ತೆರೆದು, ಮುಚ್ಚಿಕೊಂಡುಬಿಡುವ ಹೊಸಲೋಕ(ನಮಗೆ!)ದ,
ವಿಶಿಷ್ಟ ವೃತ್ತಿಯ ಕಷ್ಟ , ಸುಖಗಳ ಬಗ್ಗೆ ವಿವರಗಳನ್ನು ನಿಮ್ಮ ಪುಸ್ತಕವು ಚೆನ್ನಾಗಿ ಕಟ್ಟಿಕೊಟ್ಟಿದೆ.
ಮಳೆ, ಛಳಿಗಳ ನಡುವೆಯೂ ಮುಂಜಾನೆ ಕಣ್ತೆರೆಯುವುದರೊಳಗಾಗಿ ಮನೆಬಾಗಿಲಿಗೆ ಮಾಹಿತಿ, ಜ್ನಾನ,
ಮನರಂಜನೆಗಳನ್ನು ತಂದುಕೊಡುವ ನಿಮ್ಮಂಥವರಿಗೆ...,ಕನೀಷ್ಠಮಟ್ಟದ ಬಿಲ್ ಹಣ ಕೊಡುವಾಗಲೂ
ಮುಚ್ಚಿದ ಬಾಗಿಲ ಹೊರಗೆ ನಿಲ್ಲಿಸಿ...,ಆತ್ಮಗೌರವಕ್ಕೆ ಪೆಟ್ಟಾಗುವಂತೆ ಮಾತನಾಡಿ ಸತಾಯಿಸುವ ಗ್ರಾಹಕರ ಬಗ್ಗೆ
ಕೆಡುಕೆನಿಸಿತು. ಆದರೂ, ಮನೆ ಬದಲಾಯಿಸುವಾಗ ಕರೆದು ಬಿಲ್ ಹಣ ಕೊಟ್ಟು ಉತ್ಸಾಹ ತುಂಬುವ
ಗ್ರಾಹಕರ ಬಗ್ಗೆ ಓದಿದಾಗ ಸಮಾಧಾನವೆನಿಸಿತು.
ಆದರೆ ನನಗೆ ಪೀಕಲಾಟಕ್ಕಿಟ್ಟ ವಿಷಯವೇ ಬೇರೆ!. ಇವೆಲ್ಲ ಕೋಟಲೆಗಳ ನಡುವೆಯೇ ಈಗಲೂ ಮುಂಜಾನೆ
ನಾಲ್ಕಕ್ಕೇ ಹಾಸಿಗೆ ಬಿಟ್ಟೇಳುತ್ತ...,ವೃತ್ತಿಯನ್ನು ಶಿಸ್ತಾಗಿ ನಡೆಸುತ್ತಲೇ...,ನಿಮ್ಮ ಹವ್ಯಾಸವಾದ ಛಾಯಾಗ್ರಹಣ
ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಪ್ರಶಸ್ತಿಯ ಮಟ್ಟಕ್ಕೇರಿದ ನಿಮ್ಮ ಸಾಧನೆ ಇದೆಯಲ್ಲ, ಅದು ನನಗೆ ಅತ್ಯಾಶ್ಚರ್ಯ ತಂದಿಟ್ಟಿದೆ!.
ಪ್ರಾಮಾಣಿಕವಾಗಿ ಹೇಳ್ತಿದೀನಿ, ನಿಮ್ಮ ಹಿನ್ನೆಲೆಯನ್ನು ಹಾಗೂ ಈಗಿನ ನಿಮ್ಮ ಸಾಧನೆಯ ಎತ್ತರವನ್ನು....,Oh!,
ಹೋಲಿಸಲಿಕ್ಕೇ ಸಾಧ್ಯವಿಲ್ಲ ಬಿಡಿ!. " Zero" ದಿಂದ ಹೊರಟು ಈಗಿನೆತ್ತರಕ್ಕೆ ಏರಿದ್ದಿದೆಯಲ್ಲ...,
ಅದು ನಿಜವಾದ "ಹೋರಾಟದ" ಸಾಧನೆ. (ಹೊಗಳಿಕೆಗಾಗಿ ಖಂಡಿತ ಹೇಳ್ತಾ ಇಲ್ಲ.)
Hats off ಶಿವು ,Hats off !.
"ನನಗೆ ಶಿವುನಂತಹ ಸ್ನೇಹಿತನಿದ್ದಾನೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ " ಎಂದು ಪತ್ನಿಗೆ ಹೇಳುತ್ತ ,
ಪುಸ್ತಕ ಓದಲು ಕಾಯುತ್ತಿದ್ದ ಆಕೆಗೆ ಹಸ್ತಾಂತರಿಸಿದ್ದೆ.
ನಿಮ್ಮ ಏರುದಾರಿಯ ಚಾರಣ ಹೀಗೆಯೇ ಮುಂದುವರಿಯಲೆಂದು ಹಾರೈಸುತ್ತ ,
ಅಭಿನಂದನೆಗಳೊಂದಿಗೆ,
ನಾಗೇಂದ್ರ .