ನಿನ್ನೆ ಬಿಡುಗಡೆಯಾದ ನಮ್ಮ ಮೂರು ಪುಸ್ತಕಗಳಿಗೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆ ಸೇರಿದ್ದ ಗಣ್ಯರು, ಬ್ಲಾಗ್ ಗೆಳೆಯರು, ಬಂಧುಮಿತ್ರರು, ವೃತ್ತಿಭಾಂದವರು, ಪುಟ್ಟಮಕ್ಕಳು, ಅವರಿಂದ ಬಂದ ಹಾರೈಕೆಗಳು! ಇವೆಲ್ಲಾ ನಡೆಯುತ್ತಿದೆಯಾ! ಅನ್ನುವ ಭ್ರಮೆಯಲ್ಲಿಯೇ ನಾನಿದ್ದೆ. ಇದೊಂದು ನಿರೀಕ್ಷೆ ಮೀರಿ ಯಶಸ್ವಿಯಾದ ಕಾರ್ಯಕ್ರಮ ನಾನು ಎಂದಿನಂತೆ ಅನೇಕ ಪುಸ್ತಕ ಕಾರ್ಯಕ್ರಮಗಳಿಗೆ ಹೋಗಿದ್ದಾಗ ಹೊಸಬರ ಪುಸ್ತಕಗಳಿಗೆ ನೂರಕ್ಕಿಂತ ಕಡಿಮೆ ಜನರು ಸೇರಿರುತ್ತಿದ್ದರು. ಇಲ್ಲಿ ನಾನು ಮತ್ತುಪ್ರಕಾಶ್ ಹೆಗಡೆಯವರಿಬ್ಬರಿಗೂ ಇದು ಚೊಚ್ಚಲ ಪುಸ್ತಕ ಸಂಭ್ರಮ. ಕೆಲ ಕಾರ್ಯಕ್ರಮಗಳಲ್ಲಂತೂ ಮುವತ್ತು, ನಲವತ್ತು, ಐವತ್ತು ದಾಟುತ್ತಿರಲಿಲ್ಲ. ನಾವು ನಮ್ಮ ಪುಸ್ತಕಗಳ ಬಿಡುಗಡೆಗೆ ನಮ್ಮ ಮೂರು ಜನರಿಂದ ಸೇರಿ ಒಟ್ಟಾರೆ ನೂರರಿಂದ ನೂರೈವತ್ತು ಗೆಳೆಯರು ಬರಬಹುದು ಅಂದುಕೊಂಡಿದ್ದೆವು. ಮತ್ತು ಪುಸ್ತಕಗಳು ಅಲ್ಲೇ ಏನೇ ಡಿಸ್ಕೌಂಟ್ ಕೊಟ್ಟರೂ ಒಬ್ಬೊಬ್ಬರದೂ ಐವತ್ತು ಮೀರಿ ಮಾರಲಾಗದು ಅಂದುಕೊಂಡಿದ್ದೆವು. ನಮ್ಮ ಪ್ರಕಾಶಕರಾದ ಸೀತಾರಾಮ ಹೆಗಡೆಯವರು ಅಷ್ಟು ಮಾರಾಟವಾದರೆ ಅಡ್ಡಿಯಿಲ್ಲ ಒಬ್ಬೊಬ್ಬರದು ನೂರು ಮಾರಾಟವಾದರೆ ನನಗದು ಬಂಪರ್ ಅಂದಷ್ಟೇ ಹೇಳಿದ್ದರು.
ಬೆಳಿಗ್ಗೆ ನಾನು ಸ್ವಲ್ಪ ತಡವಾಗಿ ಬಂದೆನಾದರೂ ದಿವಾಕರ್ ಹೆಗಡೆ ಮತ್ತು ಪ್ರಕಾಶ್ ಹೆಗಡೆ, ಮತ್ತು ಬಂಧುಗಳು ಮೊದಲೇ ಬಂದು ಕೆಲವು ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿದ್ದರು.
ನಂತರ ಮುಖ್ಯ ಅತಿಥಿಗಳು, ಗೆಳೆಯರು ಬರಲಾರಂಭಿಸಿದರು. ಕಾರ್ಯಕ್ರಮ ಶುರುವಾಯಿತು. ಅದರ ವಿವರಗಳನ್ನು ಬರೆಯಲು ನಾನು ಇಷ್ಟಪಡುವುದಿಲ್ಲ. ಅದೆಲ್ಲ ಬರೆದರೆ ಅದು ವರದಿಯಾಗಿಬಿಡುತ್ತದೆ. ಅದೆಲ್ಲಾ ಬಿಟ್ಟು ಬೇರೆ ಕೆಲವೊಂದು ವಿಚಾರಗಳನ್ನು ಹೇಳಲಿಚ್ಚಿಸುತ್ತೇನೆ.
ಮೊದಲಿಗೆ ನಾನು ದಿವಾಕರ್ ಹೆಗಡೆ, ಪ್ರಕಾಶ್ ಹೆಗಡೆ ಮೂವರು ವೇದಿಕೆ ಮೇಲೆ ಕೂರಬಾರದು ಅಂತ ತೀರ್ಮಾನಿಸಿದ್ದೆವು. ಮತ್ತು ಮೂರು ಜನರ ಪರವಾಗಿ ದಿವಾಕರ ಹೆಗಡೆ ಚುಟುಕಾಗಿ ಮಾತಾಡಬೇಕೆಂದು ಹೇಳಿದ್ದರಿಂದ ಅವರಷ್ಟೇ ಮಾಡಿದ್ದು. ಮತ್ತೆ ನಮ್ಮ ಪುಸ್ತಕಗಳು ಎಂದಿನ ಸಂಪ್ರಧಾಯದಂತೆ ಒಟ್ಟಿಗೆ ಬಿಡುಗಡೆಯಾದವು. ಬಿಡುಗಡೆಯ ಸಮಯದಲ್ಲಿ ನಾಗೇಶ್ ಹೆಗಡೆಯವರು ಅವರಿಗಿಂತ ಸ್ವಲ್ಪ ದೂರ ನಿಂತಿದ್ದ ನನಗೆ ನನ್ನ ವೆಂಡರ್ ಕಣ್ಣು ಪುಸ್ತಕವನ್ನು "ಶಿವು ಕ್ಯಾಚ್" ಅಂದು ಪಟ್ಟಂತ ಎಸೆದೇ ಬಿಟ್ಟರು. ನನಗೆ ಅನಿರೀಕ್ಷಿತವಾಗಿ ಬಂದ ಅವರ ಮಾತು ಕೇಳುವಷ್ಟರಲ್ಲಿ ನನ್ನ ಪುಸ್ತಕ ನನ್ನೆಡೆಗೆ ಹಾರಿಬಂತು. ತಕ್ಷಣ ನಾನು ಅಷ್ಟೇ ವೇಗವಾಗಿ ಅದನ್ನು ಕ್ಯಾಚ್ ಹಿಡಿದಿದ್ದೆ.[ನಾನು ಹೈಸ್ಕೂಲ್ ಮತ್ತು ಕಾಲೇಜಿನಲ್ಲಿ ಒಳ್ಳೆ ಕ್ರಿಕೆಟರು ಆಗಿದ್ದರಿಂದ]. ಅದನ್ನು ವೇದಿಕೆಯಲ್ಲಿದ್ದ ಎಲ್ಲರು ಸಿನಿಮಾ ದೃಶ್ಯದಂತೆ ನೋಡುತ್ತಿರುವುದನ್ನು ಮಲ್ಲಿಕಾರ್ಜುನ್ ಕ್ಯಾಮೆರಾದಲ್ಲಿ ಸೆರೆಹಿಡಿದೇ ಬಿಟ್ಟಿದ್ದರು. ನಂತರ "ಶಿವು ನೀವು ನಿತ್ಯ ದಿನಪತ್ರಿಕೆಗಳನ್ನು ಮಹಡಿ ಮನೆಗಳಿಗೆ ಎಸೆದು ಬಿಡುಗಡೆ ನ್ಯೂಸುಗಳನ್ನು ಬಿಡುಗಡೆ ಮಾಡುತ್ತೀರಲ್ವ. ಹಾಗೆ ನಾನು ನಿಮ್ಮ ವೆಂಡರ್ ಕಣ್ಣು ಪುಸ್ತಕವನ್ನು ಹಾಗೆ ಸಾಂಕೇತಿಕವಾಗಿ ಎಸೆದು ಲೋಕಾರ್ಪಣೆ ಮಾಡಿದೆ ಅಂದರು.
ನಡುವೆ ದೂರದ ಲಿಬಿಯದಿಂದ ಬಿಸಿಲಹನಿ ಬ್ಲಾಗಿನ ಉದಯ್ ಸರ್ ಫೋನ್ ಮಾಡಿ ನನಗೂ ಮತ್ತು ಪ್ರಕಾಶ್ ಹೆಗಡೆಯವರಿಗೂ ಅಭಿನಂದಿಸಿದ್ದು ಮರೆಯಲಾಗದ ಕ್ಷಣಗಳು. ಇದರ ನಡುವೆ ನನ್ನಕಡೆಯಿಂದ ದಿನಪತ್ರಿಕೆ ಕೊಳ್ಳುವ ಗ್ರ್‍ಆಹಕರೂ ನನ್ನ ಮೇಲಿನ ಪ್ರೀತಿಯಿಂದಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಸ್ತಕಗಳನ್ನು ಖರೀದಿಸಿದರೂ ನಡುವೆ ಗುಜರಾತಿ ಗ್ರ್‍ಆಹಕನೊಬ್ಬ ನನ್ನ ನಾನು ಬರೆದ ವೆಂಡರ್ ಕಣ್ಣು ಪುಸ್ತಕವನ್ನು ಖರೀದಿಸಲು ಬಂದಿದ್ದು ವಿಶೇಷ. ಆತನನ್ನು ಅನೇಕರಿಗೆ ಪರಿಚಯಿಸಿದಾಗ ಆತ ಕನ್ನಡವನ್ನು ಒಂದೊಂದೆ ಆಕ್ಷರವನ್ನು ಕೂಡಿಸಿ ಓದುತ್ತೇನೆ ಅರ್ಥಮಾಡಿಕೊಳ್ಳುತ್ತೇನೆ. ಶಿವುರವರ ಬ್ಲಾಗಿನ ಲೇಖನಗಳನ್ನು ಓದಿ ಅರ್ಥಮಾಡಿಕೊಳ್ಳುತ್ತೇನೆ. ಓದುವಾಗ ತುಂಬಾ ನಗುಬರುತ್ತದೆ ಅಂದಾಗ ನನಗಂತೂ ತುಂಬಾ ಖುಷಿಯಾಗಿತ್ತು. ಒಬ್ಬ ಗುಜರಾತಿ ಗ್ರಾಹಕ ಕನ್ನಡ ಬ್ಲಾಗ್ ಲೇಖನಗಳನ್ನು ಓದಿ ಇಷ್ಟಪಟ್ಟು ಕನ್ನಡ ಪುಸ್ತಕವನ್ನು ಖರೀದಿಸಲು ಬಂದಿದ್ದು ನಮ್ಮ ಕಾರ್ಯಕ್ರಮದ ವಿಶೇಷವೇ ಸರಿ.
ಇನ್ನೂರು ಜನಕ್ಕೆ ತಿಂಡಿಯ ವ್ಯವಸ್ಥೆಯಾಗಿದ್ದರೂ ನಮ್ಮೂರ ಹೋಟಲಿನವರು ೨೨೫ ಪ್ಲೇಟ್ ತಂದಿದ್ದರಂತೆ. ಅಷ್ಟು ಪ್ಲೇಟುಗಳು ಹನ್ನೊಂದು ಮುವತ್ತರ ಹೊತ್ತಿಗೆ ಕಾಲಿಯಾಗಿಬಿಟ್ಟವಂತೆ. ಅದರ ನಂತರ ಸುಮಾರು ಜನರು ಬಂದರು ಬಾಗಿಲಲ್ಲೇ ನಿಂತು ಕಾರ್ಯಕ್ರಮವನ್ನು ಪೂರ್ತಿಯಾಗಿ ವೀಕ್ಷಿಸಿದರು. ಕೊನೆಯಲ್ಲಿ ದೂರದ ಗದಗದಿಂದ ಬ್ಲಾಗ್ ಗೆಳೆಯ ಶಿವಶಂಕರ ಯಳವತ್ತಿ ಬರುವ ಹೊತ್ತಿಗೆ ಸಮಯ ಒಂದುಗಂಟೆ ಇಪ್ಪತ್ತು ನಿಮಿಷ. ಅವರು ಫೋನ್ ಮಾಡಿದಾಗ ಅಷ್ಟು ದೂರದಿಂದ ನಮ್ಮ ಪುಸ್ತಕ ಕಾರ್ಯಕ್ರಮಕ್ಕೆ ಬಂದಿರುವುದು, ದೂರದ ಸಿರಸಿ ಸಿದ್ಧಾಪುರ, ಧಾರವಾಡದಿಂದ ಪುಸ್ತಕಪ್ರೇಮಿಗಳು ಬಂದಿದ್ದನ್ನು ನೋಡಿ ನನಗಾದ ಆನಂದವನ್ನು ಪದಗಳಲ್ಲಿ ವರ್ಣಿಸಲಾರೆ. ಒಟ್ಟಾರೆ ನಾನೂರಕ್ಕೂ ಹೆಚ್ಚು ಪುಸ್ತಕಪ್ರ್‍ಏಮಿಗಳು ಹೊಸಬರ ಪುಸ್ತಕ ಬಿಡುಗಡೆ ಸಂಭ್ರಮದಲ್ಲಿ ಭಾಗಿಯಾಗಿದ್ದಂತೂ ನನಗೆ ಅಚ್ಚರಿ ಉಂಟು ಮಾಡಿತ್ತು.
ದಿವಾಕರ್ ಹೆಗಡೆಯವರ "ಉದ್ಧಾರ ಮತ್ತು ಸಂತೆ’ ನೂರೈವತ್ತಕ್ಕೂ ಹೆಚ್ಚು ಮಾರಾಟವಾಗಿತ್ತು. ಪ್ರಕಾಶ್ ಹೆಗಡೆಯವರ ಇನ್ನೂರೈವತ್ತಕ್ಕೂ ಹೆಚ್ಚು ಪುಸ್ತಕಗಳು ಬಿಸಿದೋಸೆಯಂತೆ ಮಾರಾಟವಾಗಿದ್ದು ಮತ್ತೆ ಅವರ ಬಂದ ಈಮೇಲ್ ಪ್ರಕಾರ ನೂರ ಎಪ್ಪತೈದು ಪುಸ್ತಕಗಳು ಬೇರೆ ಊರಿನವರಿಗೆ ಬೇಕಿವೆಯೆಂದು ಹೇಳಿದ್ದಾರೆ. ಮತ್ತೆ ನನ್ನ "ವೆಂಡರ್ ಕಣ್ಣು" ಕೂಡ ಇನ್ನೂರ ಎಂಬತ್ತು ಪುಸ್ತಕಗಳು ಅಲ್ಲೇ ಮಾರಾಟವಾಗಿದೆಯೆಂತೆ. ಅದಲ್ಲದೇ ಇವತ್ತು ಬೆಳಿಗ್ಗೆಯಿಂದ ಈ ಲೇಖನ ಬರೆಯುವವರೆಗೆ ನನ್ನ ವೃತ್ತಿಭಾಂದವರು, ಗ್ರಾಹಕರು, ಗೆಳೆಯರು ಇಷ್ಟಪಟ್ಟು ಖರೀದಿಸಿರುವುದರಿಂದ ಇದುವರೆಗೆ ಮುನ್ನೂರ ಮುವತ್ತು "ವೆಂಡರ್ ಕಣ್ಣು" ಪ್ರತಿಗಳು ಮಾರಾಟವಾಗಿಬಿಟ್ಟಿವೆ. ಮತ್ತೆ ನನಗೆ ಮೇಲ್ ಮಾಡಿ ವಿಳಾಸ ಕೊಟ್ಟ ಹೊರ ಊರಿನವರಿಗೆ ಕಳಿಸಬೇಕಾದ ಪ್ರತಿಗಳು ಸದ್ಯ ೨೦ ದಾಟಿದೆ.
ನಮ್ಮ ಪುಟ್ಟಕಾರ್ಯಕ್ರಮ ಯಶಸ್ವಿಯಾಗಲು ಕಾರಣಕರ್ತರಾದ ಪ್ರಕಾಶಕರಾದ ಸೀತಾರಾಮ್ ಹೆಗಡೆಯವರಿಗೂ, ನಮ್ಮೂರ ಹೋಟಲ್ ಮಾಲೀಕರಾದ ಕೃಷ್ಣ ಹೆಗಡೆಯವರಿಗೂ, ಕಾರ್ಯಕ್ರಮದ ಪ್ರಾಯೋಜಕರಾದ ಸತ್ಯಹೆಗಡೆಯವರಿಗೂ, ನನಗಿಂತ ಮೊದಲೇ ಬಂದು ಫೋಟೊಗಳನ್ನು ತೆಗೆಯಲಾರಂಭಿಸಿ ಇಡೀ ಕಾರ್ಯಕ್ರಮದಲ್ಲಿ ಯಾರು ತಪ್ಪಿಸಕೊಳ್ಳದಂತೆ ಕ್ಯಾಮೆರಾದಲ್ಲಿ ಸೆರೆಯಿಡಿದ ಮಲ್ಲಿಕಾರ್ಜುನ್‍ಗೂ, ಸೊಗಸಾಗಿ ನಿರೂಪಣೆ ಮಾಡಿದ ಭಾರತಿಹೆಗಡೆಯವರಿಗೂ, ಅಚ್ಚುಕಟ್ಟಾದ ದ್ವನಿವ್ಯವಸ್ಥೆ ಮಾಡಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇಷ್ಟು ಚೆನ್ನಾದ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಟ್ಟ ಕಾರ್ಯಕತ್ರರಿಗೂ, ಮತ್ತು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಪುಸ್ತಕಪ್ರೇಮಿಗಳಿಗೆ ನನ್ನ ಅನಂತಾನಂತ ಧನ್ಯವಾದಗಳು.
ಇಲ್ಲಿ ಕೆಲವು ಫೋಟೊಗಳನ್ನು ಮಾತ್ರ ಹಾಕಿದ್ದೇವೆ. ಮತ್ತಷ್ಟು ಫೋಟೊಗಳನ್ನು ಪ್ರಕಾಶ ಹೆಗಡೆಯವರು ಅವರ ಇಟ್ಟಿಗೆ ಸಿಮೆಂಟು ಬ್ಲಾಗಿನಲ್ಲಿ ಹಾಕುತ್ತಾರೆ.
ನೀವು ಒಳಗೆ ಕೂತು ಬರೆದು ಪ್ರಿಂಟ್ ಮಾಡಿ ಕಳಿಸಿದ್ದನ್ನು ನಾನು ಹೊರಗೆಲ್ಲಾ ಹಂಚುತ್ತೇವೆ. ನನ್ನ ದಿನಪತ್ರಿಕೆ ವಿತರಕರ ಜೊತೆ ಶ್ರೀದೇವಿ ಕಳಸದ.
ಪರಂಜಪೆ ಮತ್ತು ಡಾ.ಬಿ.ವಿ.ರಾಜಾರಾಂ ಪುಸ್ತಕಗಳ ಲೋಕದಲ್ಲಿಪ್ರಕಾಶ್ ಹೆಗಡೆಯವರ ಜೊತೆ ಕ್ಷಣಚಿಂತನೆ ಚಂದ್ರು ಸರ್, ನವೀನ್.
ಬ್ಲಾಗ್ ಗೆಳೆಯರಾದ ಡಾ. ಸತ್ಯನಾರಯಣ ರಾವ್ ಗೆಳೆಯರೊಂದಿಗೆ
ಗಣ್ಯರ ನಡುವಿನ ಮಾತುಕತೆ.
ಬ್ಲಾಗ್ ಗೆಳೆಯರ ಜೊತೆ ಫೋಟೊಗ್ರಫಿ ಗೆಳೆಯರು.
ವಸುದೇಂಧ್ರರವರ ಜೊತೆ ನಾನು ಮತ್ತು ಪ್ರಕಾಶ್ ಹೆಗಡೆ.
"ಶಿವು, ನಿನ್ನ ವೆಂಡರ್ ಕಣ್ಣು ಕ್ಯಾಚ್"
ಹೆಸರೇ...ಬೇಡ ಮತ್ತು ಉದ್ಧಾರ ಮತ್ತು ಸಂತೆ ಪುಸ್ತಕಗಳಿಗೆ ಸುಂದರವಾದ ಮುಖಪುಟಗಳನ್ನು ರಚಿಸಿಕೊಟ್ಟ ಅಪಾರರವರಿಗೆ ಸನ್ಮಾನ.
ನನ್ನ ವೆಂಡರ್ ಕಣ್ಣಿನ ಕೆಲವು ಚಿತ್ರಗಳು ಮತ್ತು ಪ್ರಕಾಶ್ ಹೆಗಡೆಯವರ ಹೆಸರೇ ಬೇಡ ಪುಸ್ತಕಕ್ಕೆ ತನ್ನದೇ ಶೈಲಿಯ ಚಿತ್ರಗಳನ್ನು ಬರೆದುಕೊಟ್ಟ ಅಜಿತ್ ಕೌಂಡಿನ್ಯಗೆ ಸನ್ಮಾನ.
ನನ್ನ ವೆಂಡರ್ ಕಣ್ಣು ಚಿತ್ರಕ್ಕೆ ಮುಖಪುಟ ಚಿತ್ರದ ಜೊತೆಗೆ ಒಳಚಿತ್ರಗಳನ್ನು ರಚಿಸಿದ ಪಿ.ಟಿ.ಪ್ರಮೋದ್‍ರಿಗೆ ಸನ್ಮಾನ.
ಪ್ರಕಾಶ ಹೆಗಡೆಯವರ ಹೆಸರೇ..ಬೇಡ ಪುಸ್ತಕದ ಬಗ್ಗೆ ಮಾತಾಡುತ್ತಿರುವ ಜಿ.ಎನ್.ಮೋಹನ್. ಫೋಟೊ ತೆಗೆಯುತ್ತಲೇ ಅತಿಥಿಗಳ ಮಾತು ಕೇಳಲು ಕುಳಿತ ಮಲ್ಲಿಕಾರ್ಜುನ್.
ಒಂದೂ ಸೀಟು ಖಾಲಿಯಿಲ್ಲ!
ದಿವಾಕರ ಹೆಗಡೆಯವರ ಮಾತುಗಾರಿಕೆ.
ಯಶವಂತ್ ಸರದೇಶ್ ಪಾಂಡೆಯವರ ಮಾತಿನ ಶೈಲಿ.
ಸೀತಾರಾಂ ಹೆಗಡೆಯವರಿಂದ ಸ್ವಾಗತ ಭಾಷಣ. ಪ್ರಕಾಶಕರಾದ ಸೀತಾರಾಮ ಹೆಗಡೆಯವರಿಂದ ಡಾ.ಬಿ.ವಿ ರಾಜರಾಂರವರಿಗೆ ಸನ್ಮಾನ.
ಪ್ರಕಾಶ್ ಹೆಗಡೆಯವರ ಪರಿವಾರ.
ಈಗ ಸದ್ಯ ನಮ್ಮ ಪುಸ್ತಕಗಳು ನವಕರ್ನಾಟಕದ ಎಲ್ಲಾ ಮಳಿಗೆಗಳಲ್ಲಿ ಸಿಗುತ್ತವೆ. ನಂತರ ಮೇಪ್ಲವರ್ ಮೀಡಿಯಾ ಹೌಸ್‍ನಲ್ಲಿ ಕೂಡ ನಾಳೆಯಿಂದ ಸಿಗುತ್ತವೆ.
ಚಿತ್ರಗಳು ಮಲ್ಲಿಕಾರ್ಜುನ್.
ಲೇಖನ. ಶಿವು.ಕೆ