Sunday, July 26, 2009
ಇವು ಎಲ್ಲಿ ಕಾಣಿಸಿದ್ರೂ ನಾಯಿಗಳು ಅಲ್ಲೇ ಕಾಲೆತ್ತಿಬಿಡುತ್ತವೆ ಸರ್.....
ಆತ ನನ್ನ ಮಾತಿಗೆ ಏನು ಉತ್ತರ ಕೊಡಲಿಲ್ಲ. ಸುಮ್ಮನೇ ಮುಖ ನೋಡುತ್ತಾ ಯಾವ ಕಡೆ ಹೋಗಲಿ ಅಂತ ಮತ್ತಷ್ಟು ಭಯಮಿಶ್ರಿತ ಗೊಂದಲದಲ್ಲಿದ್ದ.
ಇಂದು ಬೆಳಿಗ್ಗೆ ಬೇಗನೆ ದಿನಪತ್ರಿಕೆ ಕೆಲಸ ಮುಗಿದಿದ್ದರಿಂದ ಮನೆಕಡೆ ಬರುತ್ತಿದ್ದೆ. ಇನ್ನೇನು ನನ್ನ ಟೂವೀಲರನ್ನು ರಸ್ತೆಯಿಂದ ನಮ್ಮ ಮನೆಯ ಕಾಂಪೊಂಡಿನ ಕಡೆ ತಿರುಗಿಸಬೇಕೆನ್ನಿವಷ್ಟರಲ್ಲಿ ಆ ವ್ಯಕ್ತಿ ನನ್ನ ಸ್ಕೂಟಿಗೆ ಅಡ್ಡ ಬಂದು ಈ ರೀತಿ ಅವನು ಕನ್‌ಪ್ಯೂಸ್ ಆಗಿ ನನ್ನನ್ನು ಗೊಂದಲಕ್ಕೀಡುಮಾಡಿದ್ದ.
ಗಾಡಿ ನಿಲ್ಲಿಸಿ ಕಾಂಪೊಂಡ್ ಗೇಟ್ ತೆಗೆಯಬೇಕು, ಅಷ್ಟರಲ್ಲಿ "ಸಾರ್" ದ್ವನಿಯೊಂದು ಕೇಳಿತು.
ನಾನು ಹಿಂದೆ ತಿರುಗಿ ನೋಡಿದೆ. ಅವನೇ ಕರೆದಿದ್ದು. "ಏನ್ರೀ" ಕೇಳಿದೆ.
"ಸರ್ ನಿಮ್ಮ ಗಾಡಿಯ ನಂಬರ್ ಪ್ಲೇಟಿನ ನಂಬರುಗಳೆಲ್ಲಾ ಹೋಗಿಬಿಟ್ಟಿದೆಯಲ್ಲ, ಹೊಸದಾಗಿ ಬರೆದುಕೊಡ್ಲ..." ಕೇಳಿದ.
ಅವನ ಮುಖವನ್ನು ನೋಡಿದೆ. ವಯಸ್ಸು ೪೦ ದಾಟಿದೆ. ಕೃಶದೇಹ, ಸುಕ್ಕುಗಟ್ಟಿದ ಮುಖ, ಪ್ರಪಂಚದ ಎಲ್ಲಾ ನೋವುಗಳು ತನ್ನವೇ ಏನೋ ಅನ್ನುವಂತ ಪ್ರೇತಕಳೆ, ಸ್ನಾನಮಾಡಿ ಎಷ್ಟೋ ದಿನವಾಗಿದೆ ಅನ್ನಿಸುವಂತೆ ಕೆದರಿದ ಕೂದಲು, ಹಳೇ ಪ್ಯಾಂಟು, ಶರ್ಟಿನ ಮೇಲೆ ದೊಗಳೆ ಜಾಕೆಟ್ ಹಾಕಿದ್ದಾನೆ.ಹೆಗಲಿಗೆ ನೇತುಬಿದ್ದ ಟ್ರಾವಲ್ ಬ್ಯಾಗು, ಕಾಲಿಗೆ ಮಾತ್ರ ಪಾಲಿಶ್ ಮಾಡಿದ ಶೂಗಳನ್ನು ಧರಿಸಿದ್ದಾನೆ.
ಸಮಯ ನೋಡಿದೆ, ಇನ್ನೂ ೭-೩೦ ಇಷ್ಟು ಬೆಳಿಗ್ಗೆ ಇವನ್ಯಾವನಪ್ಪ ಗಂಟುಬಿದ್ದ ಅನಿಸಿತು. ನನ್ನ ಗಾಡಿಯನ್ನೊಮ್ಮೆ ನೋಡಿದೆ. ಹಿಂದೆ ಮುಂದೆ ಎರಡು ಕಡೆ ನಂಬರುಗಳು ಅಳಿಸಿಹೋಗಿವೆ. ಒಮ್ಮೆ ಟ್ರಾಫಿಕ್ ಪೋಲಿಸಪ್ಪ ಕೈ ತೋರಿ ನಿಲ್ಲಿಸಿ ದಂಡ ಕಟ್ಟಲು ಕಾರಣಗಳು ಸಿಕ್ಕದೇ ಅಳಿಸಿಹೋದ ನಂಬರುಗಳನ್ನು ನೋಡಿ ದಂಡ ಹಾಕಿದ್ದ. ಆ ನಂತರವೂ ನಾನು ಆ ವಿಚಾರದಲ್ಲಿ ಸೋಮಾರಿಯಾಗಿ ಹೊಸದಾಗಿ ನಂಬರ್ ಬರೆಸಿರಲಿಲ್ಲ. ಈಗ ಇವನ್ಯಾವನೋ ತಾನಾಗೆ ನಂಬರ್ ಬರೆಯುತ್ತೇನೆ ಅನ್ನುತ್ತಿದ್ದಾನೆ ಬರೆಸಿಬಿಡೋಣವೆನ್ನಿಸಿ "ಎಷ್ಟಾಗುತ್ತೆ" ಅಂದೆ.
"ಸರ್, ಬಿಳಿಬಣ್ಣವನ್ನು ಹೊಡೆದು, ಹೊಸದಾಗಿ ಬರೆದರೆ ೮೦ ರೂಪಾಯಿ, ಈಗ ಇರುವುದನ್ನೇ ರಿ ಟಚ್ ಮಾಡಿದರೇ ೪೦ ರೂಪಾಯಿ" ಅಂದ.
ಅವನು ಹೇಳಿದ ರೇಟು ಬೇರೆ ಕಡೆ ಹೋಲಿಸಿದರೇ ಹೆಚ್ಚೆನಿಸಲಿಲ್ಲ, ಅದಕ್ಕೆ ಚೌಕಾಸಿ ಮಾಡಬೇಕೆನಿಸಲಿಲ್ಲ. "ಆಯ್ತು ನನಗೇ ರೀ ಟಚ್ ಮಾಡಿಕೊಡಿ" ಸಾಕು ಅಂದೆ.
ನನ್ನ ಮಾತು ಕೇಳಿದ್ದೆ ತಡ ಖುಷಿಯಿಂದ ಹೆಗಲ ಮೇಲಿದ್ದ ಬ್ಯಾಗನ್ನು ಕೆಳಗಿಳಿಸಿ ಅದರೊಳಗಿಂದ ಸಣ್ಣ ಕಪ್ಪು ಬಣ್ಣದ ಪೇಂಟ್ ಡಬ್ಬ, ಒಂದು ಬ್ರಶ್,ತಿನ್ನರ್ ಬಾಟಲ್ ಎಲ್ಲವನ್ನೂ ನೆಲದಮೇಲೆ ಇಡತೊಡಗಿದ.
" ಧೂಳು ತುಂಬಿದೆ ಅದರ ಮೇಲೆ ಬರೆಯಬೇಡ್ರಿ ಅದನ್ನು ಚೆನ್ನಾಗಿ ಒರಸಿ" ಅಂದೆ
"ಇಲ್ಲ ಸರ್, ಮೊದಲು ಚೆನ್ನಾಗಿ ಸಾಪ್ ಮಾಡಿ ಅಮೇಲೆ ಬರೆಯುತ್ತೇನೆ" ಅಂದ.
ನನ್ನ ಗಾಡಿಯನ್ನು ಪುಟ್‌ಪಾತಿನ ಒಂದು ಕಡೆ ನಿಲ್ಲಿಸಿ, ಮನೆಗೆ ಹೋಗಿ ನನ್ನ ಬ್ಯಾಗುಗಳನ್ನೆಲ್ಲಾ ಇಟ್ಟು ಬರುವ ಹೊತ್ತಿಗೆ ಆತ ಅಚ್ಚುಕಟ್ಟಾಗಿ ಫುಟ್‍ಪಾತ್ ಮೇಲೆ ಕುಳಿತು ತನ್ನ ಕೆಲಸ ಶುರು ಹಚ್ಚಿಕೊಂಡಿದ್ದ. ಆತನ ಬಟ್ಟೆ, ಇನ್ನಿತರ ಅವತಾರಗಳೇನೇ ಇದ್ದರೂ ಅವನೊಳಗಿನ ಕಲಾವಿದ ಕ್ರಿಯಾಶೀಲನಾಗಿದ್ದು ಅವನ ಕೈಚಳಕವನ್ನು ನೋಡಿದಾಗಲೇ.
ನಾವು ಹೊಸದಾಗಿ ವಾಹನಗಳನ್ನು ಕೊಂಡುಕೊಂಡಾಗ ಕಂಪನಿಯವರೇ ನಂಬರ್ ಬರೆಸಿಕೊಡುತ್ತಾರೆ. ಅಮೇಲೆ ಕೆಲವು ದಿನಗಳ ನಂತರ ಅಳಿಸಿಹೋದರೇ ನಂಬರ್ ಬರೆಯುವ ಅಂಗಡಿಗಳನ್ನಿಟ್ಟುಕೊಂಡ ಕಲಾವಿದರಿರುತ್ತಾರೆ ಅವರ ಬಳಿ ಹೋದರೆ ನೂರು ಇನ್ನೂರು ಕೊಟ್ಟು ಬರೆಸಬೇಕು. ಆದ್ರೆ ಈತ ಊರೂರು ಅಲೆಯುತ್ತಾ ರಸ್ತೆಗಳಲ್ಲಿ ಸಿಕ್ಕ ವಾಹನಗಳಿಗೆ ನಂಬರ್ ಬರೆದುಕೊಟ್ಟು ಜೀವನ ಸಾಗಿಸುತ್ತಾನಲ್ಲ, ಇವನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಆಸೆಯಾಯಿತು.
"ನೀವು ಈ ರೀತಿ ಬರೆಯುವ ಬದಲು ಯಾವುದಾದರೂ ಅಂಗಡಿ ಸೇರಬಹುದಲ್ವ"
"ನನಗೆ ಯಾರ ಕೈಕೆಳಗೂ ಕೆಲಸ ಮಾಡಲು ಇಷ್ಟವಿಲ್ಲ ಸರ್, ಹೀಗೆ ಸ್ವತಂತ್ರವಾಗಿವಾಗಿರಲು ಇಷ್ಟ., ಒಮ್ಮೆ ಬರೆದುಕೊಟ್ಟ ನಂತರ ಅವರ ವಿಸಿಟಿಂಗ್ ಕಾರ್ಡ್ ತೆಗೆದುಕೊಳ್ಳುತ್ತೇನೆ. ಆರು ತಿಂಗಳು-ಒಂದು ವರ್ಷದ ನಂತರ ಅವರ ಮನೆ, ಅಥವ ಅಫೀಸಿನ ಕಡೆ ಹೋದರೆ ಮತ್ತೆ ಅಷ್ಟು ಹೊತ್ತಿಗೆ ಮೊದಲು ಬರೆದ ಬಣ್ಣ ಅಳಿಸಿಹೋಗಿರುತ್ತದಲ್ವಾ ಸರ್, ಆಗ ಅವರನ್ನು ಕೇಳಿದರೆ ಮತ್ತೆ ಖಂಡಿತ ಬರೆಸುತ್ತಾರೆ."
"ಹಾಗಾದರೆ ನೀವು ಬರೆದು ಕೊಟ್ಟ ನಂಬರುಗಳ ಆಯುಸ್ಸು ಅರೇ ತಿಂಗಳು ಅನ್ನಿ"
"ನಾನು ಬರೆದುಕೊಟ್ಟಿದ್ದು ಮಾತ್ರವಲ್ಲ ಸಾರ್, ಕಂಪನಿಯಿಂದ ತಂದ ಹೊಸಗಾಡಿಯ ನಂಬರುಗಳೂ ಒಂದು ವರ್ಷದಲ್ಲಿ ಅಳಿಸಿಹೋಗುತ್ತವೆ ಸರ್,"
"ಅದ್ಯಾಗ್ರಿ ಹೇಳ್ತೀರಿ"
"ನೋಡಿ ಈ ಬೀದಿ ನಾಯಿಗಳಿರುವವರೆಗೂ ನಮಗೆ ಈ ಕೆಲಸ ಆಗಾಗ ಸಿಕ್ಕೇ ಸಿಕ್ಕುತ್ತೆ ಸರ್,"
ಅರೆರೆ..ಬೀದಿನಾಯಿಗೂ ಈತನ ಕೆಲಸಕ್ಕೂ ಏನು ಸಂಬಂಧ." ನನ್ನ ಕಿವಿ ನೆಟ್ಟಗಾಯಿತು.
"ಸರ್ ಈ ನಂಬರ್ ಪ್ಲೇಟುಗಳಿಗೂ ಬೀದಿನಾಯಿಗಳಿಗೂ ಒಂಥರ ಆಟ್ಯಾಚ್‍ಮೆಂಟು ಸರ್, ಅವು ಬೆಳಿಗ್ಗಿನ ಹೊತ್ತು ಯಾವುದೇ ಟೂ ವೀಲರ್ ನಿಂತಿದ್ರೂ ಹುಡುಕಿಕೊಂಡು ಹೋಗಿ ತನ್ನ ಕಾಲನ್ನೆತ್ತಿ ಸರಿಯಾಗಿ ನಂಬರ್ ಪ್ಲೇಟಿನ ಮೇಲೆ ಉಚ್ಚೇ ಹುಯ್ದುಬಿಡ್ತವೆ, ದೊಡ್ಡನಾಯಿಗಳಾದರೇ ಮುಂದಿನ ನಂಬರ್ ಪ್ಲೇಟಿನ ಮೇಲೆ ಉಚ್ಚೆ ಹುಯ್ದುಬಿಡ್ತವೆ ಸರ್, ಕೆಲವೊಮ್ಮೆ ಕಾರಿನ ನಂಬರ್ ಪ್ಲೇಟಿಗೂ ಇದೇ ಗತಿ, ಈ ನಾಯಿ ಉಚ್ಚೆ ಅನ್ನೋದು ಬಾರಿ ಡೇಂಜರ್ ಸರ್, ಅದರ ಕೆಮಿಕಲ್ ರೆಯಾಕ್ಷನ್‌ನಿಂದಾಗಿ ಎಂಥ ದೊಡ್ಡ ನಂಬರಿದ್ರೂ ಅಳಿಸಿಹೋಗಿಬಿಡ್ತದೆ."
ಅತನ ಮಾತನ್ನು ಕೇಳಿ ನನಗೆ ನಗು ತಡೆಯಲಾಗಲಿಲ್ಲ. ಬೆಟ್ಟದ ನೆಲ್ಲಿಕಾಯಿಗೂ ಸಮುದ್ರದ ಉಪ್ಪಿಗೂ ಸಂಭಂದ ಕಲ್ಪಿಸುವ ಹಾಗೆ, ಇಲ್ಲಿ ಈತನ ಕಲೆಗೂ ನಾಯಿಗಳ ಮೂತ್ರಕ್ಕೂ ದೇವರು ಎಂಥ ಸಂಭಂದವನ್ನು ಕಲ್ಪಿಸಿದ್ದಾನೆ ಅನ್ನಿಸಿತು.
"ಇದೊಂದರಿಂದಲೇ ನಿಮ್ಮ ಜೀವನ ನಡೆಯುತ್ತೋ ಅಥವ ಬೇರೇನಾದ್ರು ಮಾಡುತ್ತೀರೋ..."
"ಇಲ್ನೋಡಿ ಸರ್ ಇದು ನಮಗೆ ಪಾರ್ಟ್ ಟೈಮ್ ಕೆಲಸ, ದೇವಯ್ಯ ಪಾರ್ಕಿನಿಂದ ನವರಂಗ್ ವರೆಗೆ ಮೆಟ್ರೋ ಕೆಲಸಕ್ಕಾಗಿ ಬಿಲ್ಡಿಂಗ್ ಹೊಡದಿದ್ದಾರಲ್ವ, ಅಲ್ಲಿ ಮೆಟ್ರೋ ಬಂದಮೇಲೆ ಮತ್ತೆ ರಸ್ತೆಯುದ್ದಕ್ಕೂ ಅಂಗಡಿಗಳು ಬರುತ್ತಿರುತ್ತವೆ. ನಾವು ಅಲ್ಲಿಗೆ ಹೋಗಿ ಅವರ ನೇಮ್ ಬೋರ್ಡುಗಳನ್ನು ಬರೆದುಕೊಡುತ್ತೇವೆ."
"ನೀವು ಅವರನ್ನು ಕೇಳಿದ ತಕ್ಷಣ ಕರೆದು ಕೆಲಸ ಕೊಡುತ್ತಾರಾ?"
"ಖಂಡಿತ ಸರ್, ಯಾಕಂದ್ರೆ ಅವರಿರುವ ಜಾಗಕ್ಕೆ ಹೋಗಿ ಅವರಿಗೆ ಬೇಕಾದ ಹಾಗೆ ಚೆನ್ನಾಗಿ ಬರೆದುಕೊಡುತ್ತೇವಲ್ವ, ಮತ್ತೆ ನಮ್ಮ ರೇಟು ಕಡಿಮೆಯಿರುತ್ತೆ ನೋಡಿ. ಅವರಿಗೆ ಬೋರ್ಡನ್ನು ಎಲ್ಲಿಗೋ ಎತ್ತಿಕೊಂಡು ಹೋಗಿ ಬರೆಸಿಕೊಂಡು ತರುವ ತಲೆನೋವು ತಪ್ಪಿಸುತ್ತೇವಲ್ಲ".
"ಅದು ಮುಗಿದು ಹೋದಮೇಲೆ ಏನುಮಾಡ್ತೀರಿ."
"ಇದೇನ್ ಸರ್, ನೀವು ಹೀಗೆ ಹೇಳ್ತೀರಿ, ಬೆಂಗಳೂರು ಬೆಳೀತಾನೆ ಇರೋದ್ರಿಂದ ಈ ರಸ್ತೆ ಮುಗೀತು ಅಂದ್ರೆ ಮತ್ತೊಂದು ರಸ್ತೆ ಅಗಲ ಮಾಡ್ತಾರೆ, ಅಂಗಡಿಗಳನ್ನು ಬೀಳಿಸುತ್ತಾರೆ. ಹೀಗೆ ಒಂದಲ್ಲ ಒಂದು ನಡೀತಾನೆ ಇರುತ್ತೆ, ಅದರಿಂದ ನಮಗೆ ಕೆಲಸ ಸಿಕ್ಕೇ ಸಿಗುತ್ತೇ. ಜೊತೆಗೆ ಈ ರೀತಿ ಹಳಿಸಿಹೋದ ನಂಬರ್ ಪ್ಲೇಟಿನ ಕೆಲಸ ದಿನಕ್ಕೆ ಒಂದೆರಡಾದ್ರು ಸಿಕ್ಕೇ ಸಿಗುತ್ತೆ. ಇಷ್ಟಕ್ಕೂ ಹುಟ್ಟಿಸಿದ ದೇವರು ಹುಲ್ಲು ಮೇಯುಸುತ್ತಾನ ಹೇಳಿ"
ಆತನ ಆತ್ಮವಿಶ್ವಾಸದ ಮಾತಿಗೆ ನನ್ನಲ್ಲಿ ಉತ್ತರವಿರಲಿಲ್ಲ.
"ಸರ್ ನಿಮ್ಮ ಕಾರ್ಡ್ ಕೊಡಿ"
"ಯಾಕ್ರಿ...ಮತ್ತೆ ಆರು ತಿಂಗಳು ನಂತರ ಬರಲಿಕ್ಕಾ, ನಿಮ್ಮ ಕಲೆಯ ಬೆಲೆ ಅಷ್ಟೇನಾ?"
"ಸರ್, ನನ್ನ ಕಲೆಯ ಅಯಸ್ಸು ನಿಮ್ಮ ಬೀದಿನಾಯಿಗಳ ಮೇಲೆ ಆಧಾರವಾಗಿದೆ" ಎಂದು ನಗುತ್ತಾ ನನ್ನಿಂದ ವಿಸಿಟಿಂಗ್ ಕಾರ್ಡು, ಹಣ ಪಡೆದುಕೊಂಡು ಹೋದ.
ಲೇಖನ: ಶಿವು.ಕೆ ARPS.
Tuesday, July 21, 2009
ಆಕಾಶವಾಣಿ ರೇಡಿಯೋದಲ್ಲಿ ARPS ಬಗ್ಗೆ ಸಂದರ್ಶನ.
ಆತ್ಮೀಯ ಬ್ಲಾಗ್ ಗೆಳೆಯರೆ,
ಲಂಡನ್ನಿನ ರಾಯಲ್ ಫೋಟೋಗ್ರಫಿ ಸೊಸೈಟಿಯ ಅಂತರರಾಷ್ಟ್ರೀಯ ಮನ್ನಣೆ ವಿಚಾರವಾಗಿ ಬೆಂಗಳೂರಿನ ಆಕಾಶವಾಣಿಯ ಯುವವಾಣಿ ಕಾರ್ಯಕ್ರಮದಲ್ಲಿ ಸುಮಂಗಲ ಮುಮ್ಮಿಗಟ್ಟಿ ಅವರು ನನ್ನನ್ನು ಸಂದರ್ಶಿಸಿದರು ಈ ರೇಡಿಯೋ ಸಂದರ್ಶನವನ್ನು ನಿಮ್ಮೊಂದಿಗೆ ಹಂಚಿಕೊಳ್ಳವ ಆಸೆ. ಸಂದರ್ಶನವನ್ನು download ಮಾಡಿಕೊಂಡು ಕೇಳಲು ಈ ಕೆಳಗಿನ ಲಿಂಕನ್ನು ಕ್ಲಿಕ್ಕಿಸಿ.
http://rapidshare.com/files/258304806/Shivu__Radio_interview_.mp3.html
ನಾನು ಕಳಿಸಿಕೊಟ್ಟ ಆಡಿಯೋ ಪೈಲನ್ನು ಅಂತರಜಾಲದಲ್ಲಿ ನಮಗೆಲ್ಲರಿಗೂ ತಲುಪುವಂತೆ ಕೆಲವು ಬದಲಾವಣೆಗಳನ್ನು ಮಾಡಿಕೊಟ್ಟ ಗೆಳೆಯ ರಾಜೇಶ್ ಮಂಜುನಾಥ್‌ಗೆ ಈ ಮೂಲಕ ಧನ್ಯವಾದಗಳನ್ನು ತಿಳಿಸುತ್ತೇನೆ.
ಇದೇ ಸಂದರ್ಶನವನ್ನು ನೇರವಾಗಿ ಕೇಳಲು ಈ ಕೆಳಗಿನ [shivu_radio_interview]ಲಿಂಕ್ ಕ್ಲಿಕ್ಕಿಸಿ
Title: shivu_radio_interview
Artist: shivu
Description: - Interview for ARPS Distinction
Tags: Audio
Rating Played: ( 4 ) Duration: ( 18-00 ) Uploaded: 22-07-09
ಹೀಗೆ ನೇರವಾಗಿ ಕೇಳಲು ಲಿಂಕ್ ಒದಗಿಸಿಕೊಟ್ಟ ರೂಪಶ್ರೀಯವರಿಗೆ ಧನ್ಯವಾದಗಳು.
ಸಂದರ್ಶನ ಕೇಳಿದ ನಂತರ ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ಪ್ರತಿಕ್ರಿಯಿಸಿ...
ಶಿವು.ಕೆ ARPS.
Tuesday, July 14, 2009
ಮಳೆಯಲ್ಲಿ ಫೋಟೊ ತೆಗೆಯಲಿಕ್ಕೆ ಹೋದರೆ ಹಿಂಗೆಲ್ಲಾ ಆಗುತ್ತಾ!
೧. ಹಿಂಬಾಗದಲ್ಲಿ ಹಸಿರು ಮತ್ತು ಕೆಂಪು ಬಣ್ಣದ ಬಸ್ಸಿನ ಪಕ್ಕದಲ್ಲೇ ವೇಗವಾಗಿ ತೂರಿ ಬಂದ ಬೈಕ್ ಸವಾರನ ಎದುರು ಕೆಂಪು ಬಣ್ಣದ ಕಾರು ವೇಗವಾಗಿ ಅವನ ಮೇಲೆ ಹರಿಯಬೇಕೆ.! ವೇಗವಾಗಿ ಬರುತ್ತಿರುವ ಕಾರಿನೊಳಗೆ ಅವನೇ ಬೈಕಿನ ಸಮೇತ ಸೇರಿಕೊಳ್ಳುತ್ತಿದ್ದಾನೋ...ಅಥವ ಕಾರೇ ವೇಗವಾಗಿ ಆಕ್ಟೋಪಸ್‌ನಂತೆ ಅವನನ್ನು ತನ್ನ ಬಣ್ಣದೊಳಗೆ ಸೆಳೆದುಕೊಳ್ಳುತ್ತಿದೆಯೋ....ಚಿತ್ರವನ್ನು ನೋಡಿದರೆ, "ಎಲ್ಲರೊಳಗೊಂದಾಗು ಮಂಕುತಿಮ್ಮ" ಎನ್ನುವ ಡಿವಿಜಿ ಯವರ ಮಾತು ನೆನಪಾಗುತ್ತದಲ್ಲವೆ!
೨. ಆಹಾ! ಈ ಚಿತ್ರವನ್ನು ನೋಡಿ. "ಬಾ ಮುತ್ತುಕೊಡುವೆ ಗೆಳೆಯನೆ ನನ್ನ ಮುದ್ದು ರಾಜ" ಅಂತ ಒಬ್ಬರಿಗೊಬ್ಬರು ಹಾಡಿಕೊಳ್ಳುತ್ತಾ ಎರಡು ಹೆಲ್ಮೆಟ್ ತಲೆಗಳು ಒಬ್ಬರಿಗೊಬ್ಬರು ಮುಖಾಮುಖಿ ಎಷ್ಟೊಂದು ಹತ್ತಿರ ಬಂದಿದ್ದಾರೆ ಅನ್ನಿಸುತ್ತೆ ಅಲ್ಲವೇ...ಎದುರು ಬದುರಾಗಿ ಅವರು ಬಂದಿರುವ ವೇಗಕ್ಕೆ ಅವರು ಕುಳಿತಿರುವ ಬೈಕುಗಳೇ ಮಾಯಾವಾಗಿಬಿಟ್ಟಿವೆ.!
೩. ಈ ಚಿತ್ರದಲಂತೂ ಒಂದು ಹಸುವು ತನ್ನ ಹಿಂಬಾಗಕ್ಕೆ ಇಬ್ಬರು ಸವಾರರಿರುವ ಆಕ್ಟಿವ್ ಹೋಂಡ ದ್ವಿಚಕ್ರವಾಹನವನ್ನು ವೆಲ್ಡ್ ಮಾಡಿಕೊಂಡು ವೇಗವಾಗಿ ಎಳೆದುಕೊಂಡು ಹೋಗುತ್ತಿರುವಂತೆ ಕಾಣುತ್ತದೆ. ಮುಂದಿನ ದಿನಗಳಲ್ಲಿ ಪೆಟ್ರೋಲ್ ಕಾಲಿಯಾದಾಗ ಈ ರೀತಿ ಎಳೆದುಕೊಂಡು ಹೋಗುವಂತ ಪರಿಸ್ಥಿತಿಯ ಮುನ್ಸೂಚನೆಯೇ?!
೪. ಈ ಚಿತ್ರವನ್ನು ನೋಡಿದರೆ "ಎಂಥ ಮರುಳಯ್ಯ ಇದು ಎಂಥ ಮರುಳು....... ಅನಂತನಾಗ್ ಹಾಡು ನೆನಪಾಗುವುದಿಲ್ಲವೇ!. ಇಲ್ಲಿ ಮಳೆಯಲ್ಲಿ ಕೊಡೆಯಿಡಿದು ನಡೆಯುತ್ತಿರುವ ಹುಡುಗಿಯರಿಗೆ ಕಾಲುಗಳೇ ಇಲ್ಲವಲ್ಲ...ಕಾಲಿಲ್ಲದ ಭೂತಗಳು ನೆನಪಾದರೇ ನನ್ನ ತಪ್ಪಲ್ಲ.!
೫. ಆರೆರೆ...! ಚಿತ್ರದಲ್ಲಿ ತಲೆಯ ಮೇಲೆ ಮಂಕ್ರಿ ಹೊತ್ತು ನಡೆಯುತ್ತಿರುವ ಮೂರು ಜನ ಹಳ್ಳಿ ಹುಡುಗಿಯರಿಗೆ ಕಾಲುಗಳ ಜೊತೆಗೆ ಎದೆಮಟ್ಟದವರೆಗೆ ದೇಹವೂ ಇಲ್ಲವಲ್ಲ...! ಆಣೆ ಮಾಡಿ ಹೇಳುತ್ತೇನೆ ಇದರಲ್ಲಿ ನನ್ನ ಕೈವಾಡವೇನು ಇಲ್ಲ. ನಿಮ್ಮ ಹೊಗಳಿಕೆ ತೆಗೆಳಿಕೆ ವಿಚಾರಣೆಯೆಲ್ಲಾ ನನ್ನ ಕ್ಯಾಮೆರಾ ಕಡೆಗೆ....!
೮. ತುಂತುರು ಮಳೆಯಲ್ಲಿ ಬೆಂಗಳೂರಿನ ಪ್ಯಾಲೆಸ್ ರಸ್ತೆಯಲ್ಲಿ ವೇಗವಾಗಿ ಸಾಗುತ್ತಿರುವ ಕೆಂಪು ಕಾರು
೧೦. ಹೆಸರು ಘಟ್ಟ ರಸ್ತೆಯಲ್ಲಿ ಸೋನೆಮಳೆಯಲ್ಲಿ ಜೋರಾಗಿ ಸಾಗುತ್ತಿರುವ ಸ್ಕಾರ್ಪಿಯೋ ಕಾರು...
೧೨. ಹೆಸರುಘಟ್ಟ ರಸ್ತೆಯಲ್ಲಿ ಜಿಟಿಜಿಟಿಮಳೆಯಲ್ಲಿ ಈ ಬೈಕ್ ಸವಾರ....
೧೪. ಚಿಕ್ಕಮಗಳೂರಿನ ರಸ್ತೆಯಲ್ಲಿ ಮದ್ಯಾಹ್ನ ಕಾಲೇಜು ಹುಡುಗಿಯರ ಗುಂಪು ಜೋರುಮಳೆಯಲ್ಲಿ ಸಾಗಿಹೋಗಿದ್ದು ಹೀಗೆ....
ಮುಂದಿನ ಲೇಖನದಲ್ಲಿ ಇನ್ನಷ್ಟು ಮಳೆ ಚಿತ್ರಗಳೊಂದಿಗೆ ಯಾರು ನಿರೀಕ್ಷಿಸದ ರೀತಿಯಲ್ಲಿ ಮಳೆ ಮಾಡಿದ ಅನಾಹುತದ ಸತ್ಯಘಟನೆಯನ್ನು ಹೇಳುತ್ತೇನೆ. ಅಲ್ಲಿಯವರೆಗೆ ಈ ಮಳೆಯಲ್ಲಿ ನೆನೆಯುತ್ತಿರಿ....
ಚಿತ್ರ ಮತ್ತು ಲೇಖನ
ಶಿವು.ಕೆ ARPS.
Thursday, July 2, 2009
ಬಾಲ್ಡಿ ತಲೆ ಮನುಷ್ಯನಿಗಾಗದೇ ಪ್ರಾಣಿ, ಪಕ್ಷಿ, ಮರಗಳಿಗೆ ಆಗುತ್ತಾ....!
ಆತ ತಲೆಕೂದಲಿಗೆ ಸ್ವಲ್ಪ ನೀರು ಚಿಮುಕಿಸಿ, ಕೈಯಲ್ಲೊಮ್ಮೆ ನೀಟಾಗಿ ನೀವಿ, ತಲೆಯ ಮೇಲೆ ಕಚ್ ಕಚ್ ಕಚ್ ಕಚ್ ಕಚಕ್....ಅಂತ ಒಂದೆರಡು ಬಾರಿ ಅನ್ನುವಷ್ಟರಲ್ಲಿ ಅದ್ಯಾವ ಮಾಯೆಯಲ್ಲಿ ನಿದ್ರೆ ಆವರಿಸುತ್ತೋ ನಾ ಕಾಣೇ. ಒಂದು ಹತ್ತು ನಿಮಿಷ ಕೋಳಿನಿದ್ರೆ. ಅದರ ಆನಂದವೇ ಬೇರೆ. ಎಲ್ಲೋ ದೂರದ ಆಕಾಶದಲ್ಲಿ ತೇಲಿದಂತೆ. ಯಾವಾಗಲೂ ಅದೇ ಪುಟ್ಟಕನಸು ಬೀಳುತ್ತದೆ. ಮತ್ತೆ ಮದ್ಯದಲ್ಲೆಲ್ಲೊ ಅವನು ನನ್ನ ಕತ್ತನ್ನು ಹಿತವಾಗಿ ತಿರುಗಿಸಿ ಮತ್ತೊಂದು ಕಡೆ ಕಚ ಕಚ ಕಚ ಕಚ ಕಚಕ್...ಅನ್ನುತ್ತಿದ್ದರೂ ನನಗೆ ಗೊತ್ತಾಗುವುದಿಲ್ಲ....ಆ ಮಟ್ಟಿನ ಸುಖನಿದ್ರೆ. ಇಷ್ಜಕ್ಕೂ ಕಳೆದ ನಾಲ್ಕು ವರ್ಷಗಳಿಂದ ನನಗೆ ಯಾವರೀತಿ ಇರಬೇಕು ತಲೆ[ಕಟಿಂಗ್] ಅನ್ನುವುದು ಅವನಿಗೆ ಚೆನ್ನಾಗಿ ಗೊತ್ತಿದೆಯಾದ್ದರಿಂದ ಅಲ್ಲಿ ನಮ್ಮ ನಡುವೆ ಮಾತಿನ ಅವಶ್ಯಕತೆಯಿರುತ್ತಿರಲಿಲ್ಲ.
ಕಟಿಂಗ್ ಮುಗಿಸಿದ ಮೇಲೆ ಆಣ್ಣಾ ಆಯ್ತು ನೋಡಿ ಅಂತ ನನ್ನನ್ನು ಅಲುಗಿಸುತ್ತಿದ್ದ. ನಾನು ತಕ್ಷಣ ಆ ಕೋಳಿನಿದ್ರೆಯಿಂದ ಎಚ್ಚರವಾಗುತ್ತಿದ್ದೆ. ಅವನು ಶೇವಿಂಗ್‌ಗಾಗಿ ಕ್ರೀಮು ಬ್ಲೇಡು ಸಿದ್ದಮಾಡಿಕೊಳ್ಳುತ್ತಿದ್ದ.
ಅವತ್ತು ನಿದ್ದೇ ಹೋಗಬೇಕೆಂದರೂ ಮಾಡಲಾಗಲಿಲ್ಲ...ಕಾರಣ ಕಟಿಂಗ್ ಮಾಡುವವನ ಬಾಲ್ಡಿ ತಲೆ. ಇಷ್ಟು ದಿನ ಅದು ನನ್ನ ತಿಳುವಳಿಕೆಗೆ ಬರದಿದ್ದುದೇ ಆಶ್ಚರ್ಯ. ಬಹುಶಃ ಈಗ ನಾನು ಸದಾ ಭೂಪಟಗಳ ಹುಡುಕಾಟದಲ್ಲಿರುವುದಕ್ಕೆ ಆತನ ಬಾಲ್ಡಿ ತಲೆ ಗಮನಕ್ಕೆ ಬಂದಿರಬೇಕು. ವಯಸ್ಸು ಐವತ್ತು ದಾಟಿದರೂ ಎಲ್ಲರನ್ನೂ ಬಾರಣ್ಣ ಹೋಗಣ್ಣ ಅಂತಲೇ ಮಾತಾಡಿಸುವಷ್ಟು ಸೌಜನ್ಯ ಆತನಲ್ಲಿತ್ತು. ಅಂದು ಸ್ವಲ್ಪ ಟೆನ್ಷನ್‌ನಲ್ಲಿದ್ದನೆನಿಸುತ್ತೆ. ಮತ್ತೊಬ್ಬ ಕೆಲಸಗಾರ ಹುಡುಗ ಬಂದಿರಲಿಲ್ಲವಾದ್ದರಿಂದ ಗೊಣಗುತ್ತಿದ್ದ.
"ಯಾಕಣ್ಣ ಇವತ್ತು ಇಷ್ಟೊಂದು ಟೆನ್ಷನಲ್ಲಿದ್ದೀಯಾ"
"ಹೂ ಕಣಣ್ಣ..ಏನ್ ಮಾಡೋದು ಬಡ್ಡಿಮಕ್ಕಳು ಸರಿಯಾಗಿ ಕೆಲಸಕ್ಕೆ ಬರೋಲ್ಲ. ಅದಕ್ಕೆ ತಲೆಯೆಲ್ಲಾ ಕೆಟ್ಟುಹೋಗುತ್ತೆ...."
"ಹೋಗ್ಲಿಬಿಡಣ್ಣ ಅದಕ್ಯಾಕೆ ಟೆನ್ಷನ್ ಮಾಡಿಕೊಳ್ಳುತ್ತೀಯಾ...ಸಮಾಧಾನ ಮಾಡ್ಕೋ...ಯಾಕಂದ್ರೆ ನೀನು ಕಟಿಂಗ್ ಮಾಡುವಾಗ ನಿನ್ನ ಮೇಲಿನ ನಂಬಿಕೆಯಿಂದ ನಾನು ನಿದ್ರೆ ಹೋಗಿಬಿಡ್ತೀನಿ...ಆ ಸಮಯದಲ್ಲಿ ಈ ಟೆನ್ಷನ್ ಎಫೆಕ್ಟ್ ಆಗಬಾರದಲ್ವ.?"
"ಛೇ..ಛೇ..ಎಲ್ಲಾದ್ರೂ ಉಂಟೇ.....ಅಂಗೇನು ಆಗಕ್ಕಿಲ್ಲ ಬುಡಿ. ಅಂದವನ್ನು ಸ್ವಲ್ಪ ತಡೆದು ನೋಡಣ್ಣ ಈ ಮನೇಲಿ ಸಂಸಾರ, ಮಕ್ಕಳು ಮನೆ, ಅಂಗಡಿ ಬಾಡಿಗೆ ಸಾಲ, ಇತ್ಯಾದಿ ಅಂತ ಒಂದು ಕಡೆ ಟೆನ್ಷನ್ ಮತ್ತೊಂದುಕಡೆ ಈ ಕೆಲಸದ ಹುಡುಗರ ಬರಲಿಲ್ಲವಲ್ಲ ಅನ್ನೋ ಟೆನ್ಷನಾಗೆ ನನ್ನ ತಲೆಕೂದಲೆಲ್ಲಾ ಉದುರಿಹೋಯ್ತು..."
ಕೂದಲು ಉದುರಿಹೋಯ್ತು ಅಂದಾಕ್ಷಣ ನನ್ನ ನಿದ್ರೆಯೂ ಹಾರಿಹೋಗಿತ್ತು.
"ಅಲ್ಲಣ್ಣ ಟೆನ್ಷನ್ ಮಾಡಿಕೊಂಡ್ರೆ ಕೂದಲು ಉದುರುತ್ತಾ..." ಕೇಳಿದೆ.
"ಇಲ್ವಾ ಮತ್ತೆ ಎಲ್ಲಾ ತಾಪತ್ರಯಗಳು ಒಟ್ಟಿಗೆ ನಮ್ಮನ್ನು ಅಮರಿಕೊಂಡುಬಿಟ್ಟರೆ...ಟೆನ್ಷನ್ ಜಾಸ್ತಿಯಾಗಿಬಿಡುತ್ತೆ ಕಣಣ್ಣ..."
"ಆದ್ರೆ ನನಗೂ ನಿನ್ನಂಗೆ ಟೆನ್ಷನ್ ಆಗುತ್ತೆ ಆದ್ರೂ ನನ್ನ ಕೂದಲು ಉದುರಿಲ್ಲವಲ್ಲಣ್ಣ"
"ನಿನಗ್ಯಾಕೆ ಉದುರಿಲ್ಲ ಅಂತ ಹೇಳ್ತೀನಿ ಕೇಳು, ನೀನು ಮನಸ್ಸಿನಲ್ಲಿ ಗುಣಾಕಾರ ಮಾಡೋಲ್ಲ ಅದಕ್ಕೆ ನಿನ್ನ ಕೂದಲು ಉದುರಿಲ್ಲ."
"ಗುಣಾಕಾರ" ಅನ್ನುವ ಲೆಕ್ಕಾಚಾರದ ಪದವೇ ನನಗೆ ಕುತೂಹಲ ಕೆರಳಿಸಿತ್ತು.
"ಅದು ಹೇಗೆ ಅಂತ ಸ್ವಲ್ಪ ಬಿಡಿಸಿ ಹೇಳಣ್ಣ"
"ನಿನಗಿನ್ನೂ ವಯಸ್ಸು ಚಿಕ್ಕದು ಯಾವುದೇ ಟೆನ್ಷನ್ ಇಲ್ಲ. ನಮ್ಮದೂ ಆಗಲ್ಲವಲ್ಲಣ್ಣ..ಯಾವಾಗಲೂ ಮನಸ್ಸಿನಲ್ಲೇ ಗುಣಾಕಾರ ಮಾಡುತ್ತಿರುತ್ತೇವೆ...ಮನೆಬಾಡಿಗೆ, ಮಕ್ಕಳ ಸ್ಕೂಲ್ ಫೀಜು, ಬಟ್ಟೆ ಬರೆ, ಎಲ್ಲಾ ನಮ್ಮ ದುಡಿಮೆಗಿಂತ ಹೆಚ್ಚಾಗಿ ಖರ್ಚು ಬರೋದ್ರಿಂದ ಪ್ರತಿದಿನ ಎಷ್ಟು ದುಡಿಬೇಕು ಅಂತ ಗುಣಾಕಾರ ಮಾಡುತ್ತಿರುತ್ತೇವೆ. ಆ ಸಮಯದಲ್ಲಿ ಈ ಹುಡುಗರು ಕೈಕೊಟ್ಟಾಗ ನಮ್ಮ ಲೆಕ್ಕಾಚಾರ ತಪ್ಪಾಗಿ ಟೆನ್ಷನ್ ಆಗಿ ತಲೆಕೂದಲೆಲ್ಲಾ ಉದುರಿಹೋಗುತ್ತೆ." ಒಂದು ವಾದ ಮಂಡಿಸಿದ.
ಕೇವಲ ಗುಣಾಕಾರದಲ್ಲೇ ಇಷ್ಟೆಲ್ಲಾ ಇದೆಯೆಂದಮೇಲೆ ಇನ್ನೂ ಬೇರೆ ಆಕಾರಗಳಗೆ ಅವನ ಮನಸ್ಸಿನಲ್ಲಿ ಏನಿರಬಹುದು ಅಂತ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಯಿತು.
ನಡುವೆ ಕತ್ತರಿಯ ಕಚ್ ಕಚ್ ಕಚ್ ಕಚಕ್....ಕಚ್............ಸರಾಗವಾಗಿ ನಡೆಯುತ್ತಿತ್ತು.
"ಅಲ್ಲಣ್ಣ ಕೇವಲ ಗುಣಾಕಾರಕ್ಕೆ ಈ ರೀತಿ ಕೂದಲು ಉದುರಿದ್ರೆ ಇನ್ನೂ ಭಾಗಾಕಾರ, ಕೂಡೋದು, ಕಳೆಯೋದು ಮಾಡಿದ್ರೆ ಯಾವ ಯಾವ ತರ ಕೂದಲು ಉದುರಬಹುದು ಅಂತೀನಿ...."
"ನೋಡಣ್ಣ ನಾನು ಈ ಲೈನಿಗೆ ಬಂದು ನಲವತ್ತು ವರ್ಷವಾಯ್ತು. ನನಗೆ ೨೦-೩೦-೪೦ ವರ್ಷಗಳ ಗಿರಾಕಿಗಳು ಇದ್ದಾರೆ. ಅವರ ಕಷ್ಟ ಸುಖಗಳು ನಮಗೂ ಗೊತ್ತಾಗುತ್ತೆ....ಅದರ ಅನುಭವದ ಪ್ರಕಾರ ಹೇಳುವುದಾದರೆ......" ಸ್ವಲ್ಪ ತಡೆದು...
"ದುಡಿದ ಹಣವನ್ನೆಲ್ಲಾ ಜೀವನ ಫೂರ್ತಿ ಕೂಡಿಡುವ ಜಿಪುಣ, ನಿಪುಣ, ಬುದ್ಧಿವಂತ ಜನರ ಮೆದುಳಿನ ಮುಂಭಾಗದ ನರಗಳಿಗೆ ಇವರ ಟೆನ್ಷನ್‌ನಿಂದಾಗಿ ಓವರ್ ಟೈಮ್ ಕೆಲಸ ಬಂದುಬಿಡುತ್ತೆ. ಆವು ಎಷ್ಟು ಅಂತ ಕೆಲಸ ಮಾಡ್ತವೆ. ಅವಕ್ಕೂ ಸುಸ್ತಾಗಿ ಮಲಕ್ಕೊಂಡಾಗೆಲ್ಲಾ ಹಣೆಯ ಕಡೆಯಿಂದ ಕೂದಲು ಉದುರಿ ಬಾಲ್ಡಿಯಾಗುತ್ತವೆ. "
ಆದೇ ಕ್ಷಣಕ್ಕೆ ನನಗೆ ಶ್ರೀಲಂಕಾ, ಬಾರ್ಬಡೋಸ್, ದಕ್ಷಿಣಾ ಅಮೇರಿಕಾ ನಕಾಶೆಗಳು ನೆನಪಾದವು.
"ಮತ್ತೆ ಅವತ್ತು ದುಡಿದಿದ್ದು ಸಾಲದೇ ಪ್ರತಿದಿನ ಸಾಲಮಾಡಿ ತೀರಸೋಕೆ ಮತ್ತೊಂದು ಸಾಲ, ಅದನ್ನು ತೀರಿಸೋಕ್ಕೆ ಮಗದೊಂದು ಸಾಲ ಹೀಗೆ ಸಾಲದಲ್ಲಿ ಸಿಕ್ಕಿಹಾಕಿಕೊಂಡ ಟೆನ್ಷನ್ನಿಗೆ ಮೆದುಳಿನ ನೆತ್ತಿಯ ಕಡೆ ಅಡ್ಡಡ್ಡ ಮಲಗಿರೊ ಸೋಮಾರಿ ನರಗಳಿಗೆ ಜಾಮರಿವಷ್ಟು ಕೆಲಸ ಬಿದ್ದುಬಿಡುತ್ತೆ. ಆಗ ನೋಡು ತಲೆಯ ನೆತ್ತಿಯ ಭಾಗದಿಂದ ಕೂದಲು ಉದುರಲು ಶುರುವಾಗಿ ನೆತ್ತಿ ದೊಡ್ಡ ಕೆರೆಯಂತೆ ಗುಂಡಗಾಗಿಬಿಡುತ್ತದೆ. ನೋಡು ನನ್ನ ತಲೆ ತರ"... ತೋರಿಸಿದ. ಆ ಕ್ಷಣದಲ್ಲಿ ನನಗೆ ನೆನಪಾದದ್ದು ಭೂತಾನ್, ಆಷ್ಟ್ರೇಲಿಯಾ, ಸೌತ್ ಕೊರಿಯಾ, ಇತಿಯೋಫಿಯಾ.
"ಓಹ್ !.....ಬಾಲ್ಡಿಯಾಗೊದ್ರಲ್ಲಿ ಇಷ್ಟೆಲ್ಲಾ ವೈರೈಟಿಗಳಿರುತ್ತಾ.."
"ಮತ್ತೆ ಸುಮ್ಮನೇ ಅಂದುಕೊಂಡೆಯೇನಣ್ಣ.....ಇಷ್ಟು ವರ್ಷದ ಅನುಭವದಲ್ಲಿ ಅವರನ್ನು ಗಮನಿಸಿ ಆದ ಅನುಭವದಲ್ಲಿ ಇದೆಲ್ಲಾ ಹೇಳ್ತೀದ್ದೀನಿ..."
ಆಷ್ಟರಲ್ಲಿ ನನ್ನ ಕಟಿಂಗ್, ಶೇವಿಂಗ್ ಮುಗಿದಿತ್ತು.
" ಮತ್ತೆ ಜೀವನ ಪೂರ್ತಿ ಬಾಲ್ಡಿಯಾಗದೇ ಇರುವವರು ಯಾವ ಲೆಕ್ಕಾಚಾರಕ್ಕೆ ಸೇರುತ್ತಾರೆ". ಅವನಿಗೆ ದುಡ್ಡು ಕೊಡುತ್ತಾ ಕೇಳಿದೆ.
"ಹೇ ಹೋಗಣ್ಣ ಅಂಗೆಲ್ಲಾದ್ರು ಉಂಟಾ...! ಪ್ರತಿಯೊಬ್ಬರ ಜೀವನದಲ್ಲೂ ಟೆನ್ಷನ್ ಬರಲೇ ಬೇಕು. ಬಾಲ್ಡಿಯಾಗಲೇಬೇಕು. ಟೆನ್ಷನ್ ಮನಷ್ಯನಿಗೆ ಬರೆದೇ ಮರಕ್ಕೆ, ಪ್ರಾಣಿಗೆ ಪಕ್ಷಿಗಳಿಗೆ ಬರುತ್ತಾ....ಹಾಗೇ ಬಾಲ್ಡಿ ತಲೆ ಮನುಷ್ಯನಿಗಾಗದೇ ಪ್ರಾಣಿ, ಪಕ್ಷಿ, ಮರಗಳಿಗೆ ಆಗುತ್ತಾ"....!
ನಿತ್ಯ ಅನುಭವಗಳ ಜೊತೆ ವಿಜ್ಞಾನವನ್ನು ಲಿಂಕಿಸಿಕೊಂಡು ಮಂಡಿಸುತ್ತಿದ್ದ ಅವನ ಮಾತುಗಳು ನನಗೆ ಗೊಂದಲವನ್ನುಂಟುಮಾಡಿದರೂ ಅವನ ಕೊನೆಯ ಮಾತಿಗೆ ಉತ್ತರಿಸಲಾಗದೆ.....ನಕ್ಕು ಹೊರಬಂದಿದ್ದೆ.
ಈ ಲೇಖನದ ಜೊತೆಗೆ ಒಂದಷ್ಟು ಭೂಪಟಗಳನ್ನು ನಿಮಗೆ ತೋರಿಸಲಿಚ್ಛಿಸುತ್ತೇನೆ...
ಯುನೈಟೆಡ್ ಸ್ಟೇಟ್ಸ್ ಆಪ್ ಅಮೇರಿಕಾ...
ಅಮೇರಿಕಾ ಬಗ್ಗೆ ಒಂದಷ್ಟು ವಿವರವನ್ನು ಕೊಡೋಣವೆಂದುಕೊಂಡರೇ....ಬೇಡವೆನಿಸಿತು...ಇಪ್ಪತ್ತು ವರ್ಷಗಳ ಹಿಂದೆ ಆಗಿದ್ದರೇ ಅದು ಭೂಲೋಕ ಸ್ವರ್ಗ...ಅಲ್ಲಿಗೆ ಹೋಗುವುದೇ ಜೀವನದ ಸಾರ್ಥಕತೆ ಎನ್ನುವಷ್ಟರ ಭೂಲೋಕ ಸ್ವರ್ಗವೆನಿಸಿತ್ತು. ಈಗ ಅದೇ ಈ ಲೋಕದ ನರಕವೆನಿಸಿರುವುದರಿಂದ ಅದರ ಬಗ್ಗೆ ಬರೆಯುವುದೇ ಬೇಡವೆನಿಸಿತ್ತು...
--------- ----------- ------------
ಪೋರ್ಟೋರಿಕೋ....
ವೆಸ್ಟ್ ಇಂಡೀಸ್ ದ್ವೀಪ ಸಮೂಹ ರಾಷ್ಟ್ರಗಳಲ್ಲಿ ಸ್ವತಂತ್ರ ರಾಷ್ಟ್ರ ಪೋರ್ಟೋರಿಕೋ
ಏರಿಯಾ ವಿಸ್ತೀರ್ಣ: 13,791 ಚ. ಕಿಲೋಮೀಟರ್. ಜನಸಂಖ್ಯೆ: 38,58,000.
ರಾಜಧಾನಿ : ಸ್ಯಾನ್ ಜುವಾನ್.
ಕಾಮನ್ ವೆಲ್ತ್ ಸದಸ್ಯ ರಾಷ್ಟ್ರ. ಸಾಕ್ಷರತೆ ಪ್ರಮಾಣ: ೯೦%. ಮಾತಾಡುವ ಭಾಷೆಗಳು: ಸ್ಪ್ಯಾನಿಷ್, ಇಂಗ್ಲೀಷ್.
ಕರೆನ್ಸಿ: ಯುಎಸ್ ಡಾಲರ್. ಕೈಗಾರಿಕೋದ್ಯಮ ಮುಖ್ಯ ಉದ್ಯಮ. ಸುಂದರವಾದ ಬೀಚ್‌ಗಳು, ಕಣ್ತಣಿಸುವ ಬೆಟ್ಟಗುಡ್ಡಗಳಿಂದ ಕೂಡಿದ್ದು ಪ್ರವಾಸೋದ್ಯಮವೂ ಮುಖ್ಯ ಉದ್ಯೋಗವಾಗಿದೆ.
--------- -------- ---------
ಕರ್ನಾಟಕ ರಾಜ್ಯ. ಭೂಪಟದ ಮೇಲು ಬಳ್ಳಾರಿ ಗಣಿದಣಿಗಳ ಎಫೆಕ್ಟ್ ಆಗಿದೆಯೇ? ಬಾಲ್ಡಿ ತಲೆಯಲ್ಲಿ ಗಾಯದ ಕಲೆಗಳು ಅದನ್ನೇ ಸೂಚಿಸುವಂತಿದೆಯಲ್ಲಾ....!
ಚಿತ್ರ ಮತ್ತು ಲೇಖನ