ಆ ಮನೆಯಲ್ಲಿದ್ದಷ್ಟು ದಿನ ನನ್ನ ಟೆರಸನ್ನು ಅನುಭವಿಸಿದ್ದೇನೆ.... ನಿಮಗಿದು ತಮಾಷೆಯೆನಿಸಬಹುದು.ನನ್ನ ಪ್ರಕಾರ ಅದು ನಾನು ಅಲ್ಲಿದ್ದಷ್ಟು ದಿನ ಅತ್ಯುತ್ತಮ ರಿಲಾಕ್ಸಿಂಗ್ ಪ್ಲೇಸ್.......
ಒಂದು ರೀತಿಯ ಸ್ವಾಭಾವಿಕ ಸ್ಟುಡಿಯೋ....ಇಂಥದ್ದು ಇನ್ನೆಲ್ಲು ಸಿಗದು ಅಂತ ನನ್ನ ಅನಿಸಿಕೆ....ಮೇಲಿನಿಂದ ನೋಡಿದರೆ ಬಲಬಾಗದಲ್ಲಿ ಒಂದು ಗಣೇಶ ಗುಡಿ...ಮನೆ ಎದುರು ಬೋರ್ ವೆಲ್....ಎಡಬಾಗದಲ್ಲಿ ದೊಡ್ಡ ಆಲದ ಮತ್ತು ಬೇವಿನ ಮರದ ಅಶ್ವತ್ಥಕಟ್ಟೆ.
ನಂತರ ಅಲ್ಲಿ ಒಂದಷ್ಟು ಸೋಮಾರಿಗಳ ಗುಂಪು ಸೇರುತ್ತದೆ....ಮದ್ಯಾಹ್ನದ ಊಟದ ಸಮಯದವರೆಗೂ ಹರಟೆ ಬೀಡಿ, ಸಿಗರೇಟು, ತಾರಕ್ಕೇರುವ ಮಾತುಗಳು.....ಅವರಲ್ಲಿಂದ ಕದಲುತ್ತಿದ್ದಂತೆ ಹತ್ತಿರದ ಸರಸ್ವತಿ ಶಾಲೆಯಲ್ಲೇ ನರ್ಸ್ ಟ್ರೈನಿಂಗ್ ಪಡೆಯಲು ಬರುವ ಮಲೆಯಾಳಿ ನೇಪಾಳಿ, ಟೆಬೆಟ್ ಹುಡುಗಿಯರು ಮಿನಿ ಬಸ್ಸಲ್ಲಿ ಬರುವ ಹೋಗುವ ದೃಶ್ಯವಳಿಗಳು ನನ್ನ ಮನ ಸಂತೋಷಪಡಿಸುತ್ತವೆ.
ಆಷ್ಟರಲ್ಲೇ ನನ್ನಾಕೆ ನೋಡಿದ್ದು ಸಾಕು ಬನ್ನಿ ಊಟ ಮಾಡೋಣ ಅಂದಾಗ ಸರಿಯಾಗಿ ೨ ಗಂಟೆ. ಮತ್ತೆ ನನ್ನ ಫೋಟೊ ಸಂಕಲನ, ಬರವಣಿಗೆ........ಸಂಜೆ ಐದು ಗಂಟೆ. ಒಂದು ರೌಂಡು ಕಾಫಿ ಕುಡಿದು.... ಮತ್ತೆ ಟೆರಸ್ಸಿನ ಮೇಲೆ ನಮ್ಮಿಬ್ಬರ ಆಡ್ಡ. ಎಡಭಾಗದ ಮನೆ ಮುಂಬಾಗ ಮಕ್ಕಳಾಟ ನೋಡುತ್ತಾ.... ಒಂದು ಅರ್ಧ ಗಂಟೆ ಕಾಲ ಕಳೆಯುವಷ್ಟರಲ್ಲಿ ಬಸುರಿ ಹೊಟ್ಟೆ ಕಸ ಗುಡಿಸಲು ಬರುವುದರಿಂದ ಅದನ್ನು ದಿನನಿತ್ಯ ನೋಡಲು ಬೇಸರವಾಗಿ ನಾವು ಹೊರಡುತ್ತೇವೆ ಮಲ್ಲೇಶ್ವರಂ ರೈಲ್ವೇ ಸ್ಟೇಷನ್‌ಗೆ. ಅಲ್ಲಿ ವಾಕು-ಟಾಕು ಮುಗಿದು ಮತ್ತೆ ವಾಪಸ್ಸು ಬರುವಷ್ಟರಲ್ಲಿ ಎದುರು ಮನೆಯ ನಾಲ್ಕು ವರ್ಷದ ಹುಡುಗಿ ಅಂಕಲ್, ಅಂತ ಕರೆಯುವಷ್ಟರಲ್ಲಿ ಸಂಜೆ ಏಳು ಗಂಟೆ. ಮತ್ತೆ ನಮ್ಮ ಊಟ. ನಿದ್ರೆ. ಇದು ನಮ್ಮ ನಿತ್ಯ ಸತ್ಯದ ಸಂಗತಿಯಾಗಿತ್ತು....
ಇದು ನಿತ್ಯ ದೃಶ್ಯವಳಿಗಳಾದರೆ........ಇನ್ನೂ ವಾರಕ್ಕೊಮ್ಮೆ ನಮ್ಮ ಸುತ್ತಲ್ಲ ಯಾವುದಾದರೂ ಮನೆಯಲ್ಲಿ ಶನಿ ಮಹಾತ್ಮನ ಕತೆ ಪೂಜೆ, ಶನಿವಾರ ರಾತ್ರಿ ಪ್ರಾರಂಬವಾಗಿ ಭಾನುವಾರ ಬೆಳಿಗ್ಗೆವರೆಗೆ ನಡೆಯುತ್ತಿರುತ್ತದೆ..........ಆದೇ ಸಮಯಕ್ಕೆ ಕುರಿಗಳು ಭಾನುವಾರದ ಬಲಿಪಶುಗಳಾಗಿ......ಅದರ ದೇಹವೆಲ್ಲಾ ಪಾಲು ಪಾಲು.........ಸ್ವಲ್ಪ ಹೊತ್ತಿನಲ್ಲೇ ಬೆಳಗಿನ ಟಿಫನ್‌ಗಾಗಿ ಹೆಂಗಸರ ಬ್ಯಾಸ್ಕೆಟ್ಟಿನಲ್ಲಿ...ಇದಲ್ಲದೆ ವಾರಕ್ಕೊಮ್ಮೆ ನ್ಯಾಯಬೆಲೆ ಅಂಗಡಿಯಲ್ಲಿ ಕೊಡುವ ಸೀಮೆಯೆಣ್ಣೆಗಾಗಿ ಕ್ಯೂ.....ಕೂಗಾಟ....ಗದ್ದಲ.....
ಮತ್ತೆ ಸೆಪ್ಟಂಬರ್- ಅಕ್ಟೋಬರ್ ಬಂತೆಂದರೆ ಸಾಕು ನಮ್ಮ ರಸ್ತೆ-ಕಮ್ ಮೈದಾನದ ಸುತ್ತಮುತ್ತ ಪ್ರತಿವಾರ ಗಣೇಶ.........ಚಂದಾ ವಸೂಲಿ......ಹೊಡಿಮಗ ಹೊಡಿ ಮಗ.. ಜಿಂಕೆ ಮರೀನ.ನೀ ಜಿಂಕೆ ಮರೀನ.....ಡ್ಯಾನ್ಸು............ಚಿಗ್ಗಿನಕ್ಕ ನಕ್ಕ ನಕ್ಕ ಚೆಗ್ಗಿನಕ್ಕ ನಕ್ಕ ನಕ್ಕ............ಇವುಗಳ ಗಲಾಟೆಗೆ ನಮ್ಮ ಮನೆಯ ಎಫ್ ಎಮ್ ರೇಡಿಯೋ, ಟಿ.ವಿ.ಗಳ ಜೊತೆ ನಮ್ಮ ಮಾತು ಕತೆಗಳು ಬಂಧ್.
ಆಷ್ಟರಲ್ಲಾಗಲೇ ಬಂತಲ್ಲ ದಸರ......ಎದುರಿನ ಬೋರ್‌ವೆಲ್ ನೀರಿನಿಂದ ಎಲ್ಲಾ ಕಾರು, ಬೈಕು, ಸೈಕಲ್ಲುಗಳಿಗೆ ವರ್ಷಕ್ಕೊಮ್ಮೆ ಭರ್ಜರಿ ಸ್ನಾನ, ಅಲಂಕಾರ, ಪೂಜೆ, ಕಡ್ಲೇಪುರಿ..ಪ್ರಸಾದ.........
ಟೆರಸ್‌ಗೆ ಹೋಗುವುದಕ್ಕೆ ಮೆಟ್ಟಿಲಾಗಿರುವ ಮೆಟ್ಟಿಲುಗಳನ್ನು ಮರೆಯುವುದುಂಟೇ! ನನ್ನ ಅನೇಕ ಬೇಸಿಗೆಯ ಬರವಣಿಗೆಗಳು ಇದೇ ಮೆಟ್ಟಿಲುಗಳು ಮತ್ತು ಮೆಟ್ಟಿಲ ನಡುವಿನ ಮೂರು ಚದರ ಅಡಿ ಜಾಗದಲ್ಲಿ ಅರಳಿವೆ.
ಇದೇ ಮೆಟ್ಟಿಲುಗಳ ಮೇಲೆ ನಾನು ನನ್ನಾಕೆ ಇಬ್ಬರು ಕುಳಿತು ಕೆಳಗೆ ಓಡಾಡುವ ಜನರ, ಹಾವಭಾವಗಳನ್ನು ಅಣಕಿಸುತ್ತ ಕಳೆದ ಸಮಯಗಳನ್ನು ಮರೆಯುವುದುಂಟೆ....
ಮತ್ತೊಂದು ವಿಶೇಷವೆಂದರೆ ಪಾರಿವಾಳಗಳ ಕತೆ. ಜೋಡಿ ಪಾರಿವಾಳ ತಮ್ಮ ಸಂಸಾರ ಮಾಡಿ ಹೋಗಿಲ್ಲ, ಆಷ್ಟರಲ್ಲೇ ಮತ್ತೊಂದು. ಅದಾದ ಮೇಲೆ ಇನ್ನೊಂದು, ಇದಾದ ಮೇಲೇ ಮಗದೊಂದು. ಹೀಗೆ ಪ್ರತಿ ಎರಡು ತಿಂಗಳಿಗೊಂದು ಜೋಡಿಯಂತೆ ಸತತ ನಾಲ್ಕನೇ ಜೋಡಿಗೆ ಸಂಸಾರ ಮಾಡಲು ಜಾಗ ಕೊಟ್ಟಿರುವುದು ಇದೇ ಟೆರಸ್ಸಿನ ಸಜ್ಜೆ. ಪಾರಿವಳಗಳ ಪಾಲಿಗೆ ಇದು ಪಕ್ಕಾ ವಾಸ್ತು ಇರುವ ಸ್ಥಳವೆನಿಸಿರಬೇಕು. ಇದೆಲ್ಲಾವನ್ನು ನಾನು ಮುಂದೆ ಖಂಡಿತ ಮಿಸ್ ಮಾಡಿಕೊಳ್ಳುತ್ತೇನೆ.
ಇನ್ನೂ ಕೂಗಳತೆ ದೂರದಲ್ಲಿ ಏನುಂಟು ಏನಿಲ್ಲ.! ಎರಡು ಗಂಡಸರ, ನಾಲ್ಕು ಹೆಂಗಸರ ಟೈಲರ್ ಆಂಗಡಿಗಳು. ಪಕ್ಕದಲ್ಲೇ ಬಟ್ಟೆ ಅಂಗಡಿ, ಸ್ಪರ್ದೆಗೆ ಬಿದ್ದಂತೆ ಒಂದೆರಡು ರೂಪಾಯಿ ಕಡಿಮೆ ಮಾರುವ ಐದಾರು ದಿನಸಿ ಅಂಗಡಿಗಳು ಮೂರು ಹೇರ್ ಕಟ್ ಸೆಲೂನ್‌ಗಳು, ಮೂರು ತರಕಾರಿ ಅಂಗಡಿಗಳು ಆರೋಗ್ಯಕ್ಕೆ ಮೂರು ಡಾಕ್ಟರ್ ಶಾಪುಗಳು, ಜೊತೆಗೆ ಎರಡು ಮೆಡಿಕಲ್ಸ್ ದುಖಾನು, ಬಾಡಿಗೆ, ಬೋಗ್ಯ ಮಾರಾಟ ಅಂತ ಆರು ಬೋಕರ್ ಅಫೀಸುಗಳು, ಒಂದು ಫ್ಲೋರ್ ಮಿಲ್ಲು, ಒಂದು ಐಸ್ ಕ್ರೀಮ್ ಅಂಗಡಿ, ಮತ್ತೊಂದು ಹಾಸಿಗೆ ಅಂಗಡಿ, ಸದಾ ತೆರೆದಿರುವ ಟೀ, ಕಾಫಿ, ಬೀಡಿ, ಸಿಗರೇಟು. ಇತ್ಯಾದಿ ಕೊಡುವ ಮೂರು ಚಿಲ್ಲರೆ ಅಂಗಡಿಗಳು, ಒಂದು ಕುರಿ ಮಟನ್ ಶಾಪ್ ಒಂದು ಚಿಕನ್ ಶಾಪ್, ಪಕ್ಕದಲ್ಲೇ ನನ್ನ ಗೆಳೆಯನ ಫೋಟೊಗ್ರಫಿ ಆಫೀಸ್, ಒಂದು ಹೋಲ್ ಸೇಲ್ ಬ್ರಾ ಕಾಚಗಳ ದೊಡ್ಡ ಆಫೀಸ್, ಮೊಬೈಲ್ ರಿಚಾರ್ಚುಗಳ ಕರೆನ್ಸಿ ಅಂಗಡಿ, ಒಂದು ಲೇಡಿಸ್ ಬ್ಯಾಂಗಲ್ಸ್ ಸ್ಟೋರ್, ಒಬ್ಬ ಚಪ್ಪಲಿ ಹೊಲಿಯುವ ಮುದುಕ.
ಎದುರು ಬದಿಯಲ್ಲಿ ಸಂಜೆ ಬಜ್ಜಿ ಬೋಂಡ ಮಾರುವ ಬಾಲ್ಡಿ , ಒಂದು ಸಿನಿಮಾ ಡಿವಿಡಿಗಳ ಲೈಬ್ರರಿ, ಒಬ್ಬ ಚಿನ್ನದ ಆಚಾರಿ, ಒಂದು ದೊಡ್ಡ ಎಸ್ ವಿ ಎನ್ ಮಿಡ್ಲ್ ಸ್ಕೂಲು, ಒಂದು ತಟ್ಟೆ ಇಡ್ಲಿಗಾಗಿ, ಮತ್ತೊಂದು ದಾವಣಗೆರೆ ಬೆಣ್ಣೆ ದೋಸೆಗಾಗಿ ಇರುವ ಎರಡು ಹೋಟಲುಗಳು, ಒಂದು ರದ್ದಿ ಅಂಗಡಿ, ಒಂದು ಸ್ಕೂಟರ್ ಗ್ಯಾರೇಜು, ರೇಡಿಯೋ ಟಿ.ವಿ ರೆಪೇರಿ ಮಾಡುವ ಅಂಗಡಿಯೊಂದು, ಒಂದು ನಂದಿನಿ ಮಿಲ್ಕ್ ಭೂತ್, ಜೊತೆಗೆ ಬೆಳಿಗ್ಗೆ ಸಂಜೆ ಕರೆದ ಹಸುವಿನ ಹಾಲು ಮಾರುವ ಹೆಂಗಸರು........ಒಂದೇ ಎರಡೇ...!......ಊಫ್! ಇದೆಲ್ಲಾವೂ ನಮ್ಮ ಮನೆಯಿಂದ ಕೇವಲ ೨೦೦ ಅಡಿ ದೂರದಲ್ಲಿರುವ ಅಂಗಡಿಗಳು. ಇದಿಷ್ಟು ಲಿಷ್ಟನ್ನು ಹೇಮಾಶ್ರಿ ಕೊಡದಿದ್ದಲ್ಲಿ ನನಗೆ ಗೊತ್ತೇ ಆಗುತ್ತಿರಲಿಲ್ಲ...
ನಮ್ಮ ಬದುಕನ್ನು ಮತ್ತಷ್ಟು ಸುಂದರಗೊಳಿಸಲು ಸಹಕರಿಸಿದ ಮತ್ತು ಬರುವ ಹೊಸಬರಿಗೂ ಸಹಕರಿಸಲು ಕಾದಿರುವ ಟೆರಸ್, ಮೆಟ್ಟಿಲುಗಳು, ಈ ಪುಟ್ಟ ಮೈದಾನ, ಆ ಕೂಗಳತೆಯ ಅಂಗಡಿಗಳನ್ನು ಮರೆಯಲಾದಿತೆ !!
ಇರಲಿ ಬಿಡಿ., ಅವುಗಳೆಡೆಗೆ, ಅವುಗಳ ನೆನಪುಗಳೆಡೆಗೆ ಒಂದು ಕೃತಜ್ಞತೆಯನ್ನು ಅರ್ಪಿಸುತ್ತಾ............ಈಗ ಹೋಗಿರುವ ಹೊಸ ಮನೆಯಲ್ಲಿ ಕನಸಿನ ಬಾಗಿಲುಗಳನ್ನು ತಟ್ಟುತ್ತಿದ್ದೇನೆ..............
ಹೋಗಿ ಒಂದು ವಾರ ಮಾತ್ರ ಆಗಿದೆ.....ಆಗಲೇ ಮೂರುವರ್ಷದ ಪ್ರೇರಿತ್, ಐದುವರ್ಷದ ಅವನ ಅಣ್ಣ ಚಿರಂತ್, ನಮ್ಮ ಓನರ್ ಮಗನಾದ ಐದು ವರ್ಷದ ದರ್ಶನ್, ಅವನಕ್ಕ ಯಶಸ್ವಿನಿ, ಆಕೆಯ ಗೆಳತಿಯರಾದ ಸ್ಪೂರ್ತಿ, ಚಿತ್ರಾ, ಮೇಘನಾ, ಅಕ್ಕಪಕ್ಕದ ಮನೆಗಳ ಅಲೋಕ್, ಗಣೇಶ್, ಅರ್ಪಿತ್, ಉದಯ್, ಇವರಲ್ಲಿ ಕೆಲವರು ಹತ್ತಕ್ಕೂ ಕಡಿಮೆ ವಯಸ್ಸಿನವರೇ !! .......ಮತ್ತು ನನಗಿಂತ ಕೇವಲ ಮುವತ್ತೇಳು ವರ್ಷ ಮಾತ್ರ ದೊಡ್ಡವರಾದ ಮಗು ಮನಸ್ಸಿನ, [ದರ್ಶನ್ ತಾತ]ಶಿವಲಿಂಗಯ್ಯ ಗೆಳೆಯರಾಗಿಬಿಟ್ಟಿದಾರೆ.
ಅಲ್ಲಿನ ಮೈದಾನದಷ್ಟಿಲ್ಲದಿದ್ದರೂ ಮನೆ ಎದುರಿರುವ ಪುಟ್ಟ ರಸ್ತೆಯಲ್ಲಿ ಯಶಸ್ವಿನಿ ಮತ್ತು ಗೆಳತಿಯರ ಕುಂಟೇಬಿಲ್ಲೆ, ಬ್ಯಾಡ್‌ಮಿಂಟನ್, ಪ್ರೇರಿತ್, ಚಿರಂತರ ಮೂರು ಚಕ್ರದ ಸೈಕಲ್ ತುಳಿದಾಟ, ಉದಯ ಮತ್ತು ಅವನ ಚಡ್ಡಿ ದೋಸ್ತುಗಳ.....ತೊದಲು ಮಾತುಗಳು ನನ್ನ ಕುತೂಹಲ ಕೆರಳಿಸಿವೆ. ಹಾಯ್ ಪ್ರೆಂಡ್ಸ್ ಅಂದರೆ ಸಾಕು ಓಡಿ ಬಂದು ಕಾಲಿಗೆ ಸುತ್ತಿಕೊಳ್ಳುವ ಈ ಪುಟಾಣಿ ಗೆಳೆಯರ ತುಂಟತನಕ್ಕೆ ನಾನಿನ್ನು ಹೊಂದಿಕೊಳ್ಳಬೇಕಿದೆ.
ಶಿವರಾತ್ರಿಯ ಹಿಂದಿನ ದಿನ ಹತ್ತಿರದಲ್ಲೇ ಇರುವ ಅಂಕಾಳ ಪರಮೇಶ್ವರಿ ದೇವಸ್ಥಾನಕ್ಕೆ ಹಾಲಿನ ಅಭಿಶೇಕ ಮಾಡಲು ತಲೆಯ ಮೇಲೆ ಹಾಲಿನ ಕೊಡ ಹೊತ್ತ ಸಾವಿರಕ್ಕೂ ಆಧಿಕ ಮಹಿಳೆಯರ ಮೆರವಣಿಗೆ ನಮ್ಮ ಹೊಸ ಮನೆಯ ರಸ್ತೆಯಲ್ಲೇ ಸಾಗಿದೆ...
ಅಲ್ಲಿ ಸಂಕಷ್ಟಿ, ಹಬ್ಬ ಹರಿದಿನಗಳಿಗೆ ಗುಡಿಯಲ್ಲಿನ ಯುವ ಗಣೇಶ ಗೆಳೆಯನಾಗಿದ್ದ. ಅದ್ರೆ ಇಲ್ಲಿ ನಮಗೆ ಆತನಿಗಿಂತ ಹಿರಿಯರಾದ ಕರುಮಾರ್‍ಇಯಮ್ಮ, ಮತ್ತು ಸಾಯಿಬಾಬ ಸಿಕ್ಕಿದ್ದಾರೆ. ಅವರ ಗೆಳೆತನವನ್ನು ಇನ್ನಷ್ಟೇ ಮಾಡಿಕೊಳ್ಳಬೇಕು.
ಒಟ್ಟಾರೆ ಹಳೆಮನೆಯಲ್ಲಿ ದಿನನಿತ್ಯ ಕಾಣುವ ದೃಶ್ಯಾವಳಿಗಳನ್ನು ಸಿನಿಮಾದ ಹೊರಗೆ ನಿಂತು ನೋಡಿ ಅನುಭವಿಸಿದ ಹಾಗೆ ಇದ್ದರೆ ಇಲ್ಲಾಗಲೇ ನಾನೇ ಪ್ರತಿದಿನ ನಡೆಯವ ಸಿನಿಮಾದ ಒಂದು ಪಾತ್ರವಾಗುವ ಲಕ್ಷಣಗಳು ಕಂಡುಬರುತ್ತಿವೆ...... ಸದ್ಯಕ್ಕೆ ಇಷ್ಟು ಸಾಕು.
ಚಿತ್ರ ಮತ್ತು ಲೇಖನ.
ಶಿವು..