ಒಂದು ಅದ್ಬುತ ಸಿನಿಮಾ ಬಗ್ಗೆ ಬರೆಯಬೇಕೆನಿಸಿದೆ. ಇಂದಿನ ಪ್ರಸ್ತುತ ಬಾಂಬ್ ಬ್ಲಾಸ್ಟ್, ಟೆರರಿಷ್ಟ್ ಆಟ್ಯಾಕ್, ರಾಜಕೀಯದವರ ಮೋಸ, ಸೋಗಲಾಡಿತನದ ಹಿನ್ನೆಲೆಯಲ್ಲಿ, ಎಲ್ಲರೂ ಅದರ ಬಗ್ಗೆ ಮಾತಾಡುವುದು, ಓದುವುದು, ನೋಡುವುದು, ಬರೆಯುವುದು ನಡೆದಿರುವ ಇಂಥ ಸಮಯದಲ್ಲಿ ಒಂದು ಹೃದಯಸ್ಪರ್ಶಿ, ಮನಕಲಕುವ, ನೋಡುತ್ತಾ, ನೋಡುತ್ತಾ ನಾವೇ ಪಾತ್ರವಾಗಿಬಿಡುವ, ನೋಡಿದ ನಂತರವೂ ಬಹುದಿನ ಕಾಡುವಂತ ಒಂದು ಇರಾನಿ ಸಿನಿಮಾ ಬಗ್ಗೆ ಬರೆಯಬೇಕು ಅನ್ನಿಸಿದೆ.
ಆ ಸಿನಿಮಾ ಹೆಸರೇ " Children of Heavan"
ಆಲಿ ಎನ್ನುವ ೧೨ ವರ್ಷದ ಹುಡುಗ ತನ್ನ ತಂಗಿಯ ಕಿತ್ತುಹೋದ ಶೂವನ್ನು ರಿಪೇರಿ ಮಾಡಿಸಿಕೊಂಡು ಬರುವಾಗ ದಾರಿಯಲ್ಲಿ ಅದನ್ನು ಕಳೆದುಕೊಳ್ಳುತ್ತಾನೆ. ಅವರ ತಂದೆ ತಾಯಿಗಳಿಗಂತೂ ಮಕ್ಕಳಿಗೆ ಒಂದು ಜೊತೆ ಷೂ ಕೊಡಿಸಲಾಗದಷ್ಟು ಬಡತನ. ಆಷ್ಟು ಚಿಕ್ಕ ವಯಸ್ಸಿನಲ್ಲೇ ಅಪ್ಪ ಅಮ್ಮನ ಕಷ್ಟವನ್ನಿರಿತ ಆ ಇಬ್ಬರು ಮಕ್ಕಳು ತಂದೆ ತಾಯಿಯರಿಗೆ ತಿಳಿಯದಂತೆ ಒಂದು ಉಪಾಯ ಮಾಡುತ್ತಾರೆ. ಅದೇನೆಂದರೆ ಜಹೀರಾ ಸ್ಕೂಲು ಬೆಳಗಿನ ಸಮಯವಿರುವುದರಿಂದ ಇರುವ ಒಂದು ಜೊತೆ ಆಣ್ಣನ ಷೂವನ್ನು ಮೊದಲು ಆವಳು ಹಾಕಿಕೊಂಡು ಹೋಗುವುದು. ನಂತರ ಓಡಿಬಂದು ಅದೇ ಷೂವನ್ನು ಅಣ್ಣ ಆಲಿಗೆ ಕೊಟ್ಟರೆ ಆಲಿ ಹಾಕಿಕೊಂಡು ತನ್ನ ಮದ್ಯಾಹ್ನದ ಸ್ಕೂಲಿಗೆ ಹೋಗುವುದು. ಈ ರೀತಿ ನಡೆಯುವಾಗ ಇಬ್ಬರು ಮಕ್ಕಳಲ್ಲಿ ಆಗುವ ದಿಗಿಲು, ಭಯ, ಆತಂಕ, ಕುತೂಹಲ, ಆಸೆ, ಅಣ್ಣನ ಮೇಲಿನ ಜಹೀರಾಳ ಪ್ರೀತಿ, ಆಲಿಗೆ ತಂಗಿಯ ಮೇಲಿನ ಜವಾಬ್ದಾರಿ, ವಾತ್ಸಲ್ಯ, ಎಲ್ಲವೂ ಸ್ಪಟಿಕ ಶುಭ್ರ ತಿಳಿನೀರಿನಂತೆ ನಿಮ್ಮ ಮುಂದೆ ಅಭಿವ್ಯಕ್ತವಾಗುತ್ತಾ ಹೋಗುತ್ತದೆ.
ಇಂಥಹ ಪರಿಸ್ಥಿತಿಯಲ್ಲೇ ಇಬ್ಬರೂ ಚೆನ್ನಾಗಿ ಓದುವುದು ಕ್ಲಾಸಿಗೆ ಮೊದಲ ಬರುವುದು ನಡೆಯುತ್ತದೆ. ಕೊನೆಗೆ ಅಂತರ ಶಾಲಾ ಓಟದ ಸ್ಪರ್ಧೆಯಲ್ಲಿ ಬಹುಮಾನವಾಗಿ ಮೊದಲು ಮತ್ತು ಎರಡನೆ ಬಹುಮಾನವಾಗಿ ಟ್ರೋಫಿ, ಮತ್ತು ಮೂರನೆ ಬಹುಮಾನವಾಗಿ ಒಂದು ಜೊತೆ ಹೊಸ ಷೂಗಳನ್ನು ಇಟ್ಟಿರುತ್ತಾರೆ.
ಆಲಿ ತನ್ನ ತಂಗಿಗಾಗಿ ಷೂ ಗೆಲ್ಲುವ ಒಂದೇ ಒಂದು ಆಸೆಯಿಂದ ಆ ಸ್ಪರ್ಧೆಗೆ ಸೇರುತ್ತಾನೆ. ರೇಸಿನಲ್ಲಿ ತನ್ನ ಪ್ರೀತಿಯ ತಂಗಿಗಾಗಿ ಷೂ ಗೆಲ್ಲುತ್ತಾನ ಎನ್ನುವುದು ಕತೆಯ ಕ್ಲೈಮಾಕ್ಸ್. ಅದನ್ನು ನೀವು ಸಿನಿಮಾ ನೋಡಿಯೇ ತಿಳಿಯಬೇಕು.
ಕತೆ ಇಷ್ಟು ಸರಳವಾಗಿದ್ದರೂ ಇಡೀ ಚಿತ್ರದ ಚೌಕಟ್ಟನ್ನು "ಮಾಜಿದ್ ಮಾಜಿದಿ" ಎನ್ನುವ ಇರಾನಿ ನಿರ್ಧೇಶಕ ಕಲ್ಪಿಸಿಕೊಂಡಿರುವ ರೀತಿಯೇ ಒಂದು ಅದ್ಬುತ. ಒಂದೊಂದು ಫ್ರೇಮು ದೃಶ್ಯಕಾವ್ಯವೆನ್ನುವಂತೆ ಚಿತ್ರಿಸಿದ್ದಾರೆ. ಯಾವುದೇ ಒಂದು ದೃಶ್ಯವೂ ಇಲ್ಲಿ ತೆಗೆದುಹಾಕುವಂತಿಲ್ಲ. ನೀವು ಸಿನಿಮಾ ನೋಡಲು ಶುರುಮಾಡಿದರೆ ಯಾವೊಂದು ಸನ್ನಿವೇಶವನ್ನೂ ಕಳೆದುಕೊಳ್ಳಲು ಇಷ್ಟಪಡದೆ ತನ್ಮಯರಾಗಿ ನೋಡಿಸುವಂತ ಅದ್ಭುತ ಚಿತ್ರಕತೆ ಇದೆ.
ಅಂದಮಾತ್ರಕ್ಕೆ ಇದೊಂದು ಅದ್ಬುತ ತಾಂತ್ರಿಕ ಹಿನ್ನೆಲೆಯುಳ್ಳ ಬಾಲಿವುಡ್, ಹಾಲಿವುಡ್ ರೀತಿಯ ಚಿತ್ರವಲ್ಲ. ಕೇವಲ ೧ ಲಕ್ಷ ೮೦ ಸಾವಿರ ಡಾಲರ್ ಖರ್ಚಿನಲ್ಲಿ ತಯಾರಾದ ಚಿತ್ರ. ಚಿತ್ರಕ್ಕಾಗಿ ಬಳಸಿರುವ ಸಣ್ಣ ಸಣ್ಣ ಕಾಲೋನಿಗಳು, ಓಣಿಗಳು, ಮನೆಗಳು, ಸಹಜವಾದ ಜನರಿರುವ ಪೂರಕ ವಾತಾವರಣ, ಒಂದು ಪಕ್ಕಾ ಸಾಂಪ್ರದಾಯಿಕ ಚೌಕಟ್ಟಿನ ಹಿನ್ನೆಲೆಯಲ್ಲಿ ಒಂದು ಸರಳವಾದ ಹಿತವಾದ, ಹದವಾದ ಸಾಫ್ಟ್ ಲೈಟಿನಲ್ಲಿ ಚಿತ್ರದ ಛಾಯಾಗ್ರಹಣ ಮಾಡಿರುವುದರಿಂದ ಇಡಿ ಚಿತ್ರವು ನಿಮ್ಮನ್ನು ಆವರಿಸಿಕೊಳ್ಳುತ್ತದೆ.
ಇವೆಲ್ಲಕ್ಕೂ ಕಿರೀಟವಿಟ್ಟಂತೆ ಆಲಿ ಪಾತ್ರವಹಿಸಿರುವ ಮೊಹಮದ್ ಅಮೀರ್ ನಾಜಿ ಎನ್ನುವ ಪುಟ್ಟ ಹುಡುಗ ಮತ್ತು ಜಹೀರಾ ಪಾತ್ರ ಮಾಡಿರುವ ಅಮೀರ್ ಫರೋಕ್ ಹಷೀಮಿಯಾ ಎನ್ನುವ ಪುಟ್ಟ ಹುಡುಗಿಯ ಮರೆಯಲಾಗದ ನಟನೆಯಿದೆ. ನೀವು ಸಿನಿಮಾ ನೋಡಿದ ಮೇಲೆ ಬಹುದಿನಗಳ ಕಾಲ ನಿಮಗೆ ತಮ್ಮ ತಂಗಿಯಾಗಿ, ಅಥವಾ ಮಗ ಮತ್ತು ಮಗಳಾಗಿ, ಮಕ್ಕಳಿಗೆ ಗೆಳೆಯರಾಗಿ ಕಾಡದಿದ್ದರೆ ಕೇಳಿ.
ಅವರು ಸಿನಿಮಾದಲ್ಲಿ ನಟಿಸಿಲ್ಲ. ಆ ಪಾತ್ರಗಳಲ್ಲಿ ಜೀವಿಸಿದ್ದಾರೆ. ಅದಕ್ಕಾಗಿ ಕೆಲವು ದೃಶ್ಯಗಳನ್ನು ನಾನು ಹೇಳಲು ಪ್ರಯತ್ನಿಸುತ್ತೇನೆ.
ದೃಶ್ಯ ೧. ಕಳೆದು ಹೋದ ಷೂ ವಿಚಾರ ಮನೆಯವರಿಗೆ ಗೊತ್ತಾಗದ ಹಾಗೆ ಆದರೆ ಅಪ್ಪ-ಅಮ್ಮನ ಸಮ್ಮುಖದಲ್ಲೇ ಆಣ್ಣ ಆಲಿ ತಂಗಿ ಜಹೀರಾಗೆ ಹೇಳುವಾಗ ಇಬ್ಬರೂ ತಮ್ಮ ಪುಸ್ತಕದಲ್ಲಿ ಬರೆದು ಹೇಳುವ ರೀತಿ, ಆಗ ಅಲ್ಲಿ ಹೊರಹೊಮ್ಮಿರುವ ತಂಗಿಯ ಹುಸಿಮುನಿಸು, ತುಸುಕೋಪ, ಅದಕ್ಕೆ ತಕ್ಕಂತೆ ಅಣ್ಣನ ದಿಗಿಲು, ಸಾಂತ್ವಾನ ಎಲ್ಲವೂ ಕೇವಲ ಮುಖಭಾವದಲ್ಲಿ ಮೂಡಿಸುವಾಗ ನೋಡುತ್ತಿರುವ ನೀವು ನಿಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತೀರಿ..
ದೃಶ್ಯ ೨. ಟಿ.ವಿ ಯಲ್ಲಿ ಬರುವ ಷೂ ಜಾಹಿರಾತನ್ನು ನೋಡಿ ಆಸೆ ಪಡುವ ಇಬ್ಬರೂ ಮರುಕ್ಷಣವೇ ಅಂತಹುದು ಪಡೆಯುವ ಅದೃಷ್ಟ ನಮಗಿಲ್ಲವೆಂದು ಅರಿವಾದಾಗ ಆಗುವ ನಿರಾಸೆಗಳು,
ದೃಶ್ಯ ೩. ಜಹೀರಾ ಸ್ಕೂಲು ಮುಗಿಸಿ ಮನೆಗೆ ಬರುವಾಗ ಅಂಗಡಿಯಲ್ಲಿಟ್ಟ ಹೊಸ ಹೊಸ ಷೂಗಳನ್ನು ಆಸೆಯ ಕಣ್ಣುಗಳಿಂದ ನೋಡುವುದು.
ದೃಶ್ಯ ೪. ಪರೀಕ್ಷೆ ಬರೆಯುವಾಗ ಬೆರೆಯುವುದಕ್ಕಿಂತ ಮುಖ್ಯವಾಗಿ ತಾನು ಹಾಕಿಕೊಂಡ ಷೂವನ್ನು ಅಣ್ಣನಿಗೆ ಕೊಡಬೇಕೆಂದು ಬೇಗ ಮುಗಿಸಿ ಓಡಿಬರುವಾಗ ಒಂದು ಕಾಲಿನ ಷೂ ಕಳಚಿ ನೀರು ಹರಿಯುತ್ತಿರುವ ಚರಂಡಿಯೊಳಗೆ ಬೀಳುತ್ತದೆ. ಅಯ್ಯೋ ಇದ್ದ ಒಂದು ಷೂ ಕೂಡ ಹೋಯ್ತಲ್ಲ ಅಂತ ಹರಿಯುವ ಚರಂಡಿ ನೀರಿನಲ್ಲಿ ತೇಲಿ ಹೋಗುತ್ತಿದ್ದ ಅದನ್ನು ಹಿಡಿಯಲು ಜಹೀರಾ ಓಡುವ ಪರಿ, ಕೊನೆಗೆ ಸಿಗದೆ, ಇದ್ದ ಕಾಲಿನ ಷೂ ಹೋಯ್ತಲ್ಲ ಎಂದು ಖಚಿತವಾಗಿ ಅವಳಿಗೆ ಆಳು ಬಂದುಬಿಡುತ್ತದೆ. ಆಗ ಯಾರೋ ಒಬ್ಬರು ಬಂದು ಚರಂಡಿಯಲ್ಲಿ ಸಿಕ್ಕಿಕೊಂಡ ಷೂ ಎತ್ತಿಕೊಡುತ್ತಾರೆ ಕಳೆದೇ ಹೋಯ್ತು ಅಂದುಕೊಂಡಿದ್ದು ಮತ್ತೆ ಸಿಕ್ಕಾಗ ಜಹೀರ ಮುಖದಲ್ಲಿ ಸಾವಿರ ಮಿಂಚು. ಈ ಪೂರ್ತಿ ಸನ್ನಿವೇಶ ನಿಮ್ಮನ್ನು ಯಾವ ರೀತಿ ಅವರಿಸಿಕೊಳ್ಳುತ್ತದೆಂದರೆ ನೀವೆನಾದ್ರು ಈ ಸಿನಿಮಾ ನೋಡುತ್ತಿದ್ದರೇ ಅದನ್ನು ಮರೆತು ನೀವೇ ಒಂದು ಪಾತ್ರವಾಗಿ ಚರಂಡಿಯಲ್ಲಿ ಬಿದ್ದ ಜಹೀರಾಳ ಷೂ ಎತ್ತಿಕೊಡಲು ಮುಂದಾಗುವಷ್ಟು.!
ದೃಶ್ಯ ೫. ಇರುವ ಒಂದೇ ಜೊತೆ ಷೂಗಳನ್ನು ಬದಲಾಯಿಸಿಕೊಳ್ಳುವುದು, ಅದರಿಂದ ಅಲಿ ಲೇಟಾಗಿ ಸ್ಕೂಲಿಗೆ ಹೋಗಿ ಅವರ ಮೇಷ್ಟ್ರ ರಿಂದ ಬೈಸಿಕೊಳ್ಳುವುದು ಆ ಸಮಯದಲ್ಲಿ ಈ ಪುಟ್ಟ ಮಕ್ಕಳ ಅಬಿನಯ ಮತ್ತು ಅಲ್ಲಿನ ವಸ್ತು ಸ್ಥಿತಿ, ಬಡತನವನ್ನು ಪರೋಕ್ಷವಾಗಿ ನಮಗೆ ಅರ್ಥೈಸಿ ಮನಕಲಕುವಂತೆ ಮಾಡುತ್ತದೆ.
ಪೂರ್ತಿ ಚಿತ್ರ ನೋಡಿ ಬಂದಾಗ ಅಲಲ್ಲಿ ಜಹೀರಾಳಲ್ಲಿನ ಮುಗ್ದತೆ, ತನ್ನ ಕೈಗೆಟುಕದ ವಸ್ತುವಿಗಾಗಿ ಕಾತರಿಸುವ ಕಣ್ಣುಗಳು,. ಅದು ತನಗೆ ಸಿಗದು ಎಂದು ಮರುಕ್ಷಣ ಅರಿವಾದಾಗ ಆಗುವ ನಿರಾಸೆ, ಪುಟ್ಟ ತಂಗಿಯಾಗಿ ಆಣ್ಣನ ಬಗೆಗಿನ ಕಾಳಜಿ , ನೊರೆಗುಳ್ಳೆ ಬಿಡುವಾಗ ಕಣ್ಣುಗಳಲ್ಲಿನ ಸಂಬ್ರಮ. ಅವಳಿಗೆ ಸರಿಸಮವಾಗಿ ಆಲಿ ತಂಗಿಯ ಮೇಲಿನ ಅತಿಯಾದ ಪ್ರೀತಿ, ಕಾಳಜಿ, ಆ ವಯಸ್ಸಿಗೆ ತನ್ನ ಪರಿಸ್ಥಿತಿ ಅರಿತು ಯೋಗ್ಯತೆಗೆ ಮೀರಿದ ಜವಾಬ್ದಾರಿಯನ್ನು ಹೊತ್ತು ಅಪ್ಪನಿಗೆ ಸಹಾಯಕನಾಗುವುದು ಇಂಥ ಮಿಂಚುಗಳು ಬಹುಕಾಲ ನಮ್ಮನ್ನು ಕಾಡುತ್ತವೆ.
ಜಹೀರಾ ಮತ್ತು ಆಲಿ ಇಡೀ ಚಿತ್ರದಲ್ಲಿ ಮಕ್ಕಳಾಗಿ ಪುಟ್ಟ ಪುಟ್ಟ ಆಣ್ಣ ತಂಗಿಯಾಗಿ, ಅಪ್ಪ ಅಮ್ಮ ಮತ್ತು ಮನೆಯ ಪರಿಸ್ಥಿತಿ ಅರಿತ ಬುದ್ಧಿವಂತರಾಗಿ ತಮ್ಮದೇ ಲೋಕದಲ್ಲಿ ಕಷ್ಟ, ಸುಖ, ಪ್ರೀತಿ ವಾತ್ಸಲ್ಯ, ಆಸೆ, ನಿರಾಸೆ ದುಃಖ ಎಲ್ಲವನ್ನು ನಿಮ್ಮ ಮುಂದೆ ತೆರೆದಿಡುತ್ತಾ ನಿಮ್ಮನ್ನು ಮಕ್ಕಳಾಗಿಸುತ್ತಾರೆ.
ಇವರಿಬ್ಬರ ಜೊತೆ ಒಂದು ಮುಖ್ಯ ಪಾತ್ರವೇ ಆಗಿ ಅಲ್ಲಲ್ಲಿ ಕಂಡು ಬರುವ ಶೂಗಳು, ಪೋಷಕ ಪಾತ್ರದಾರಿಗಳು, ಆಲಿ ಮತ್ತು ಜಹೀರಾಳ ಗೆಳೆಯ ಗೆಳತಿ ಬಳಗ, ಸ್ಕೂಲ್ ಮೇಷ್ಟ್ರು, ಕತೆಯ ಮದ್ಯದಲ್ಲಿ ಬರುವ ಒಬ್ಬ ಕಣ್ಣು ಕಾಣದ ಕುರುಡು ವ್ಯಾಪಾರಿಗಳೆಲ್ಲಾ ನಮ್ಮ ಮನದಲ್ಲಿ ಆಚ್ಚಳಿಯದೆ ಉಳಿಯುತ್ತಾರೆ. ಸಿನಿಮಾದ ಕೊನೆಯಲ್ಲಿ ಬರುವ ದೃಶ್ಯವಂತೂ ನಿಮ್ಮ ಕಣ್ಣನ್ನು ಒದ್ದೆಯಾಗಿಸುತ್ತದೆ. ಹೃದಯವನ್ನು ಭಾರವಾಗಿಸುತ್ತದೆ.
ಇಷ್ಟು ಸಾಕೆನಿಸುತ್ತದೆ. ಇದುವರೆಗೂ ನಾನು ಹೇಳಿದ್ದು ಸಿನಿಮಾದ ಕೆಲವು ತುಣುಕುಗಳಷ್ಟೇ.
ಕೊನೆ ಮಾತು. ಕಾಲಿಗೆ ಹಾಕುವ ಒಂದು ಷೂನಂತ ವಸ್ತುವನ್ನು ಬಳಸಿಕೊಂಡು ತೆಗೆದಿರುವ ಈ ಚಿತ್ರವನ್ನು ನೋಡದಿದ್ದರೆ ಜೀವನದಲ್ಲಿ ಏನೋ ಕಳೆದುಕೊಂಡ ಭಾವನೆ ಉಂಟಾಗುತ್ತದೆ.
೧೯೯೭ ರಲ್ಲಿ ಕೊನೆಯ ಅಂತಿಮ ಘಟ್ಟದಲ್ಲಿ ಅತ್ಯುತ್ತಮ ವಿದೇಶಿ ಚಿತ್ರ ಎನ್ನುವ ಆಸ್ಕರ್ ಪ್ರಶಸ್ತಿಯನ್ನು ಮತ್ತೊಂದು ಇಟಲಿಯ ಚಿತ್ರದಿಂದಾಗಿ ತಪ್ಪಿಸಿಕೊಂಡ ಈ ಚಿತ್ರ ಇಂದಿಗೂ ಮಾಸ್ಟರ್ ಫೀಸ್ ಎನಿಸಿಕೊಂಡಿದೆ. ಇಂಥ ಮಾಸ್ಟರ್ ಪೀಸ್ ಆಗಿರುವ ಚಿತ್ರವನ್ನೇ ಸೋಲಿಸಿ ಆಸ್ಕರ್ ಗೆದ್ದ ಇಟಲಿಯ "Life is beautiful " ಎನ್ನುವ ಮತ್ತೊಂದು ಮಾಸ್ಟರ್ ಪೀಸ್ ಚಿತ್ರದ ಬಗ್ಗೆ ಮುಂದೆಂದಾದರೂ ಬರೆಯುತ್ತೇನೆ.
ಶಿವು.
51 comments:
.... ಬದುಕನ್ನ ನೈಜವಾಗಿ ಚಿತ್ರಿಸುವ ಅವರ ಚಿತ್ರಗಳಿಗೆ ದೇಶ ಭಾಷೆಗಳ ಎಲ್ಲೆ ಇಲ್ಲ.... ಅವನ ಈ ಚಿತ್ರಗಳನ್ನು ನೋಡಿ...
http://www.imdb.com/title/tt0233841/
http://www.imdb.com/title/tt0191043/
http://www.imdb.com/title/tt0117315/
ಅಮರ ಸಾರ್,
ನಿಮ್ಮ ಮಾತು ಸತ್ಯ. ನೀವು ಕೊಟ್ಟ ಲಿಂಕಿನಿಂದಾಗಿ ಅವುಗಳನ್ನು ಸಾಧ್ಯವಾದಷ್ಟ್ಯು ಬೇಗ ನೋಡುತ್ತೇನೆ.
ಶಿವಣ್ಣ..
ಏನು ಹೇಳಬೇಕು? ಚೆನ್ನಾಗಿ ಬರೆದಿದ್ದೀರಿ. ನಂಗೂ ಒಬ್ಬ ಅಣ್ಣ ನನ್ ಜೊತೆ ಹುಟ್ತಾ ಇದ್ರೆ ಅಂತ ಅನಿಸ್ತು..ಆದರೆ ತಂಗೀನ ತುಂಬಾ ಪ್ರೀತಿಸುವ ಒಳ್ಳೇ ಅಣ್ಣಂದಿರು ನಂಗೆ ಸಿಕ್ಕಿದ್ದಾರೆ. ಕೇಳಿದ್ದನ್ನು ಕೊಡಿಸ್ತಾರೆ. ಪ್ರೀತಿ ಮಾಡ್ತಾರೆ. ಅತ್ತಾಗ, ನಕ್ಕಾಗ ನನ್ ಖುಷಿಯಲ್ಲಿ ಅವರಿರ್ತಾರೆ. ಅಮ್ಮನಂತೆ ನೋಡಿಕೊಳ್ತಾರೆ. ಅದೇ ಖುಷಿ..ನಿಜ ಹೇಳಬೇಕಂದ್ರೆ ಎಲ್ಲ ಪ್ರೀತಿಗಿಂತಲೂ ಸಹೋದರರ ಪ್ರೀತಿ ಖುಷಿ ಕೊಡುತ್ತೆ..ಹೀಗೇ ಇದ್ರೆ ಬದುಕೇ ಚೆನ್ನ ಅಲ್ವಾ?
.ತುಂಬುಪ್ರೀತಿ,
ಚಿತ್ರಾ
ಶಿವು,
ಒಂದು ಸುಂದರ ಚಿತ್ರ ನೋಡಿ ಅದರ ಸಾರಾಂಶ ಮನ ಮುಟ್ಟುವಂತೆ ಚಿತ್ರಿಸಿದ್ದೀರಿ. ನಿಮ್ಮ ಛಾಯಾಚಿತ್ರಗಳಂತೆಯೇ ನುಡಿಯೂ ಕೂಡ ಸರಳವಾಗಿ ಸುಂದರವಾಗಿದೆ. ೪ನೆಯ ದೃಶ್ಯ ತುಂಬಾನೆ ಮನ ಕಲುಕಿತು.. ಖಂಡಿತ ಈ ಚಿತ್ರ ನೋಡ್ತೀನಿ
ಧನ್ಯವಾದ
ಪಾಲ
ಶಿವು,
ಅಮರ ಅವರ ಕೃಪೆಯಿಂದ ನಾನು Children of Heaven ಹಾಗೂ Life is beautiful ಈ ಎರಡೂ ಚಿತ್ರಗಳನ್ನು ನೋಡಲು ಸಾಧ್ಯವಾಯಿತು.ಅಮರ ಅವರು ನನಗೆ ಕಳುಹಿಸಿದ Colours of Paradise
ಕೂಡ ಅದ್ಭುತ ಚಿತ್ರ.
ಶಿವು ಸರ್...
ಮಲ್ಲಿಕಾರ್ಜುನ್ ಈ ಫ಼ಿಲ್ಮ್ ನನಗೆ ಉಡುಗೊರೆಯಾಗಿ ಕೊಟ್ಟಿದ್ದರು..
ನಾನೂ ಕೂಡ ನನ್ನ ಹಲವಾರು ಸ್ನೇಹಿತರಿಗೆ ಇದನ್ನೇ ಉಡುಗೊರೆಯಾಗಿ ಕೊಡುತ್ತಿದ್ದೇನೆ..
ನಿಮ್ಮ ಲೇಖನ ಮತ್ತೊಮ್ಮೆ ಸಿನೇಮಾ ನೋಡಿದ ಹಾಗೆ ಇತ್ತು..
ಸರಳ,, ಸುಂದರವಾದ ಬರವಣಿಗೆ...
ಅಭಿನಂದನೆಗಳು...
ಚಿತ್ರಾ ....
ನಿನ್ನ ಪ್ರತಿಕ್ರಿಯೆಗೆ ನಾನೇನು ಹೇಳಲಾರೆ.....ಕಾರಣ ನನ್ನಲ್ಲಿ ಮಾತಿಲ್ಲ.....
ಪಾಲ ಚಂದ್ರ,
ಪ್ರತಿಕ್ರಿಯಿಸಿದ್ದಕ್ಕೆ thanks. ನೀವೇಳಿದಂತೆ ನಾನು ಪ್ರತಿ ದೃಶ್ಯಗಳನ್ನು ಅನುಭವಿಸಿದ್ದೇನೆ.
ಸುನಾಥ್ ಸಾರ್,
ಪ್ರತಿಕ್ರಿಯಿಸಿದ್ದಕ್ಕೆ thanks. ಮೊದಲೆರಡು ಚಿತ್ರಗಳು ನನ್ನ ಫೇವರೇಟ್. ಮೂರನೆ ಚಿತ್ರದ [colour of paradise] ಡಿವಿಡಿ ನನ್ನ ಬಳಿ ಇದೆ. ಆದರೆ ಅದು ಸರಿಯಾಗಿ ಪ್ಲೇ ಆಗುತ್ತಿಲ್ಲವಾದ್ದ ಕಾರಣ ನೋಡಲಾಗುತ್ತಿಲ್ಲ.
ಅದನ್ನು ಹೇಗಾದರೂ ಮಾಡಿ ಕಲೆಕ್ಟ್ ಮಾಡಿ ನೋಡುತ್ತೇನೆ.
ಪ್ರಕಾಶ್ ಸಾರ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...
ನಿಮಗೆ ಈ ಸಿನಿಮಾದಿಂದ ಅಣ್ಣ ತಂಗಿಯ ಭಾಂಧವ್ಯದ ಅನುಭವವನ್ನು feel ಮಾಡಿದ್ದೀರಿ..
ಸಾಧ್ಯವಾದರೆ ಅಪ್ಪಮಗನ ಸಂಭಂದವಾದ "Life is beautiful" ಸಿನಿಮಾವನ್ನು ನೋಡಿ....
ನನಗೆ ಇದೆಲ್ಲವನ್ನು ಹಂಚಿಕೊಂಡಷ್ಟು ಅದಕ್ಕಿಂತ ಹೆಚ್ಚಿನದನ್ನು ಪಡೆದೆನೇನೊ ಅನ್ನಿಸುತ್ತಿದೆ. ಅದಕ್ಕೆ ಹೇಳೋದು "Life is beautiful and we are the children of Heavan"........
ನೀವು ಬರೆದ ಮೇಲೆ ಸಿನೆಮಾ ನೋಡಲೇಬೇಕು ಅನ್ನಿಸುತ್ತೆ
ಹರೀಶ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಆಸೆ ಈಡೇರಲಿ...
ಶಿವು, ನಿಮ್ಮ ಬರಹ ಓದಿದ ಮೇಲೆ ಆ ಚಿತ್ರಗಳನ್ನು ನೋಡಲೇಬೇಕು ಅಂತ ಆಸೆಯಾಗುತ್ತಿದೆ. ಆದಷ್ಟು ಬೇಗ ನೋಡುತ್ತೇನೆ. ಸದ್ಯಕ್ಕೆ ಈಗೊಂದು thanx ಇಟ್ಟುಕೊಂಡಿರಿ. ನೋಡಿ ಆದ ನಂತರ ಮತ್ತೊಮ್ಮೆ ಹೇಳುವೆ :)
ವಿಕಾಶ್ ಹೆಗಡೆಯವರೆ,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್. ಬೇಗ ಆ ಸಿನಿಮಾಗಳನ್ನು ನೋಡಿ....
ಹೇ ನಾನು ಅರ್ಧ ಮಾತ್ರ ಓದಿದೆ. ಉಳಿದದ್ದನ್ನು ಸಿನಿಮಾ ನೋಡಿದ ಮೇಲೆ ಓದುತ್ತೇನೆ :)
ಶಿವಣ್ಣ,
ಲೇಖನ ತುಂಬಾ ಚೆನ್ನಾಗಿದೆ. ಕೆಲವು ದೃಶ್ಯವನ್ನು ಹೇಳಿದ್ದರೂ ಕೂಡ ತುಂಬಾ ಸೊಗಸಾಗಿ ವರ್ಣಿಸಿದ್ದೀರ.
ಇದು ನೋಡಲೇ ಬೇಕಾದ ಸಿನಿಮ.
ಮುತ್ತುಮಣಿ ಮೇಡಮ್,
ಪೂರ್ತಿ ಓದಿಬಿಡಿ. ನಂತರ ಸಿನಿಮಾ ನೋಡಿ. ತುಂಬಾ enjoy ಮಾಡ್ತೀರಿ....
ಜಯಶಂಕರ್,
ನನ್ನ ಬ್ಲಾಗಿನಲ್ಲಿ ಈ ಸಿನಿಮಾದ ತುಣುಕು ಓದಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ...
ಹೆಡ್ಡಿಂಗು ನೋಡಿ, ಯಾವುದೋ ಹೊಸಾ ಕನ್ನಡ ಫಿಲಂ ನೋಡು ಅಂತಾ ಹೇಳಿರಬೇಕು ದೇವರೇ ಏನಪ್ಪಾ ಗತಿ ಅನ್ಕೊಂಡಿದ್ದೆ! ಈಗ ಓದಿದ ಮೇಲೆ ಬದುಕಿದೆ. ಈ ವೀಕೆಂಡ್
ಫಿಲಂ ನೋಡಿ ಹೇಗಿತ್ತು ಅಂತ ಹೇಳ್ತೀನಿ.
ಗಿರಿಜಕ್ಕಾ,
ಈ ಸಿನಿಮಾ ನೋಡಿದಾಗ ತುಂಬಾ ಕಾಡುತ್ತಿತ್ತು. ಒಂದು ಒಳ್ಳೆಯ ವಿಚಾರವನ್ನು ಹಂಚಿಕೊಳ್ಳುವುದರಲ್ಲಿ ಸಿಗುವ ಆನಂದವೇ ಬೇರೆ. ನೀವು ಕುಟುಂಬಸಮೇತರಾಗಿ ನೋಡಿ. ನೋಡಿ ಆನಂದಿಸಿ....ಅನುಭವಿಸಿ....
ನಾನು ಚಿತ್ರ ನೋಡಿದ್ದೀನಿ.. ಚಿತ್ರ ತುಂಬಾ ಚೆನ್ನಾಗಿದೆ.. ಒಂದು ಸಲಿ ಆಕೆಯ ಶೂ.. ಚರಂಡಿಯಲ್ಲಿ ಬಿದ್ದು.. ಅದನ್ನ ಹುಡುಕುತ್ತಾ ಹೋಗ್ತಾಳಲ್ಲ.. ಅದು ತುಂಬಾ ಹಿಡಿಸಿತು ನನಗೆ.
-ವೀರು
ವೀರೇಶ್ ಸಾರ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಇಡೀ ಚಿತ್ರದಲ್ಲಿ ಆ ದೃಶ್ಯ ಮನಕಲಕುವಂತದು.
ಹಮ್ಮ್.... ಸಾಧ್ಯವಾದಾಗ ಈ ಚಿತ್ರ ನೋಡ್ಬೇಕು ಕಣ್ರೀ.....
ಪ್ರಕವಿಗಳೇ ,
ಸಾಧ್ಯವಾದಷ್ಟು ಬೇಗ ನೋಡಿ.....ಒಳ್ಳೆಯದಾಗಲಿ...
ನಾನು ಈ ಚಿತ್ರವನ್ನ ಸ್ಟಾರ್ ಮೂವೀಸ್ ನಲ್ಲಿ ನೋಡಿದ್ದೆ. ನಾನು ನೋಡಿದ ಅದ್ಭುತ ಚಿತ್ರಗಳಲ್ಲಿ ಅದೂ ಕೂಡ ಒಂದು. ನಾನು ನಿನ್ನೆ ರಾತ್ರಿ ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯನ್ ಪನೊರಮಾ ಫಿಲ್ಮ್ ಫೆಸ್ಟಿವಲ್ ನಲ್ಲಿ ತಮಿಳಿನ ''ಕಾಂಜೀವರಂ'' ಚಿತ್ರ ನೋಡಿದೆ. ಪ್ರಕಾಶ್ ರೈ ನಟನೆ ಬಗ್ಗೆ ಎರಡು ಮಾತಿಲ್ಲ.
ಕಾಂಜೀವರಂನಲ್ಲಿದ್ದ ನೇಯ್ಗೆದಾರರ ಜೀವನ ಸುತ್ತ ಹೆಣೆದ ಚಿತ್ರದ ಛಾಯಾಗ್ರಹಣವಂತೂ ರಮ್ಯಾದ್ಭುತ.
ಒಮ್ಮೆ ನೋಡಿ.
ರಾಘವರವರೆ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಪ್ರಕಾಶ್ ರೈನ ಕಾಂಜಿವರಂ ಚಿತ್ರವನ್ನು ನೋಡುತ್ತೇನೆ.
ಶಿವು ಸರ್...
ನಿನ್ನೆ ನನ್ನ ಅಮ್ಮ ನಿಮ್ಮನ್ನು ಕೇಳಿದರು..
ಅವರು ನಿಮ್ಮ ಮತ್ತು ಮಲ್ಲಿಕಾರ್ಜುನರವರನ್ನು ಹೇಗೆ ನೆನಪಿನಲ್ಲಿಟ್ಟುಕೊಂಡಿದ್ದಾರೆ ಗೊತ್ತೆ...?
"ಮಕ್ಕಳ ಸಿನೇಮಾದವರು" ಅಂತ..
ಬೇಜಾರಾಗಬೇಡಿ..( ಅವರಿಗೆ ಓದು ಗೊತ್ತಿಲ್ಲ..ಮುಗ್ಧರು..)
ಅವರಿಗೆ ಈ ಸಿನೇಮಾ ತುಂಬಾ ಇಷ್ಟವಾಯಿತು..
ಅದರಲ್ಲೂ..ಹುಡುಗ ಫಸ್ಟ್ ಬಂದರೂ ಅಳುವದನ್ನೂ ನೋಡಿ ಅಮ್ಮನೂ ಅತ್ತುಬಿಟ್ಟಿದ್ದರು..
ಆಮೇಲೆ ಎರಡು ಬಾರಿ ಇದನ್ನು ನೋಡಿದ್ದಾರೆ..
ನಿಮಗೆ, ಮಲ್ಲಿಕಾರ್ಜುನ್ ಇಬ್ಬರಿಗೂ ಆಶೀರ್ವಾದ ತಿಳಿಸಿದ್ದಾರೆ..
ಚಿತ್ರ ಕಣ್ಮುಂದೆ ನಡೆಯುತ್ತಿರುವಂತೇ ನಿರೂಪಿಸಿರುವಿರಿ.
ನೀವು ಕಡೆಯಲ್ಲಿ ಪ್ರಸ್ತಾಪಿಸಿರುವ Life is Beautiful ಬಹುಶಃ ಜಗುತ್ತಿನ ಅತ್ಯುತ್ತಮ ಚಿತ್ರಗಳಲ್ಲೊಂದು. ತಂದೆ - ಮಕ್ಕಳ ಬಾಂಧವ್ಯವನ್ನು ಸಾಮಾನ್ಯ ಸಂದರ್ಭಗಳಲ್ಲಿ ಕಷ್ಟಪಟ್ಟು ಸುಂದರಗೊಳಿಸಿಕೊಳ್ಳಬಹುದು.ಆದರೆ ಜರ್ಮನಿಯಲ್ಲಿ ನಡೆಯುವ ಯಹೂದಿಗಳ ನರಮೇಧದ ಹಿನ್ನೆಲೆಯಲ್ಲಿ, ತಂದೆ ಮಗನ ಬಾಂಧವ್ಯ ಅತ್ಯದ್ಭುತವಾಗಿ ಮೂಡಿರುವುದೇ ಈ ಚಿತ್ರದ ವೈಶಿಷ್ಟ್ಯ.
ಇದೆ ಸಾಲಿಗೆ ಸೇರಿಸಬಹುದಾದ ಮಹಾನ್ ಚಿತ್ರ ನಲವತ್ತರ ದಶಕದಲ್ಲಿ ಬಿಡುಗಡೆಯಾದ ಇಟಾಲಿಯನ್ ಭಾಷೆಯ ‘Tha Bicycle Thief'
ಚಂದ್ರಕಾಂತ್,
ನನ್ನ ಬ್ಲಾಗಿಗೆ ಬಂದಿದ್ದಕ್ಕೆ ಧನ್ಯವಾದಗಳು. ನಿಮ್ಮ ಅಭಿಪ್ರಾಯದಂತೆ life is beautiful ಕೂಡ ಒಂದು ಅತ್ಯುತ್ತಮ ಚಿತ್ರ. ನೀವು ಹೇಳುವ bicycle thief ಚಿತ್ರವನ್ನು ನೋಡಿದ್ದೇನೆ. ಅದರ ಬಗ್ಗೆ ಎಂದಾದರೂ ಬರೆಯಬೇಕಿದೆ.[ಆದರೆ ಚಂದ್ರಕಾಂತ್ ಅದು ಇಟಾಲಿಯನ್ ಭಾಷೆಯಲ್ಲ ಪರ್ಷಿಯನ್ ಭಾಷೆಯ ಇರಾನಿ ಸಿನಿಮಾ]
ಶಿವುರವರೆ,
ನಿಮ್ಮ ಬ್ಲಾಗ್ಗೆ ಭೇಟಿ ನೀಡಿದ್ದೆ, ಕಮೆನ್ಟಿಸಿರಲಿಲ್ಲ:(. ಚೆನ್ನಾಗಿರುವ ಫೋಟೋ ಗಳಿಗೆ ಚೆನ್ನಾಗಿ ಬರೆಯುತ್ತೀರ ಕೂಡಾ.
ಅಂದಹಾಗೆ ನೀವು "ಚಂದ್ರಕಾಂತ್" ಅಂತ ಹಾಕಿದ್ದೀರ. ಅವರು "ಚಂದ್ರಕಾಂತ್" ಖಂಡಿತ ಅಲ್ಲ.ಚಂದ್ರಕಾಂತ:).
ಭಾರ್ಗವಿ ಮೇಡಮ್,
ಮತ್ತೆ ನೀವು ನನ್ನ ಬ್ಲಾಗಿಗೆ ಬಂದಿದ್ದಕ್ಕೆ thanks. ಹೀಗೆ ಬರುತ್ತಿರಿ....
ಶಿವು, ಮತ್ತೊಮ್ಮೆ ಚಿತ್ರ ನೋಡಿದಂತಹ ಅನುಭವ, ನಿಮ್ಮ ಬರವಣಿಗೆಯಿಂದಾಗಿ. ತುಂಬಾ ಚೆನ್ನಾಗಿ ಬರೆದಿದ್ದೀರ. ಕಳಿದುಹೋದ ತನ್ನ ಶೂ ಮತ್ತೊಬ್ಬ ತನ್ನ ಸಹಪಾಠಿಯ ಕಾಲಲ್ಲಿ ಕಂಡು ಆ ಹುಡುಗಿ ತನ್ನ ಅಣ್ಣನೊಂದಿಗೆ ಆ ಹುಡುಗಿಯ ಮನೆಗೆ ಹಿಂಬಾಲಿಸಿ ಹೋಗುವುದು, ಅಲ್ಲಿನ ಬಡತನ ಮತ್ತು ಕಣ್ಣಿಲ್ಲದ ಆ ಹುಡುಗಿ ತಂದೆಯನ್ನು ಕಂಡು ಇವರಿಬ್ಬರೂ ಕಣ್ಣಲ್ಲೇ ಸಂಭಾಷಿಸುವುದು ನಿಜಕ್ಕೂ ಅಮೋಘ. ಈ ಚಿತ್ರ ನಾವಿಬ್ಬರೂ ನೋಡಲು ಕಾರಣರಾದ ಸೌಮ್ಯರಿಗೆ ನಿಜಕ್ಕೂ ಥ್ಯಾಂಕ್ಸ್ ಹೇಳಬೇಕು ಅಲ್ಲವೇ ಶಿವು?
ನಿಜ .. Children of Heaven ಒಂದು ಅದ್ಬುತವಾದ ಚಿತ್ರ ... ನಿಮ್ಮ ಬರಹ ಕೂಡ ತುಂಬಾ ಚೆನ್ನಾಗಿದೆ
ಚಂದ್ರಕಾಂತ ಸಾರ್,
ಕ್ಷಮಿಸಿ, ನಾನು ನೀವು ಹೇಳಿದ ಇಟಾಲಿಯನ್ ಭಾಷೆಯ bicycle thief ಚಿತ್ರವನ್ನು ಕನ್ಫ್ಯೂಸ್ ಮಾಡಿಕೊಂಡು ಪರ್ಷಿಯನ್ ಬಾಷೆ ಎಂದು ಹೇಳಿದ್ದೆ. ಇಂದು ಮತ್ತೆ ಆ ಸಿನಿಮಾವನ್ನು ನೋಡಿದೆ. ನೀವು ಹೇಳಿದಂತೆ ಅದು ಇಟಾಲಿಯನ್ ಭಾಷೆಯ ಸಿನಿಮಾ.
ಸಂತೋಷ್,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.
ಮಲ್ಲಿಕಾರ್ಜುನ್,
ಈ ಚಿತ್ರದಲ್ಲಿ ನೀವು ಹೇಳಿದಂತ ದೃಶ್ಯವೂ ಕೂಡ ಮನಕಲಕುವಂಥದು. ನಮಗೆ ಮೊದಲಿಗೆ ಈ ಸಿನಿಮಾ ನೋಡಲು ಸಹಾಯ ಮಾಡಿದ ಸೌಮ್ಯರವರಿಗೆ ಫೋನ್ ಮಾಡಿ ಥ್ಯಾಂಕ್ಸ್ ಹೇಳಿದೆ. ಅವರಿಂದಾಗಿಯೇ ಇದೆಲ್ಲಾ ಸಾಧ್ಯವಾಗಿದೆ.
ನಾನು ಆದಷ್ಟು ಬೇಗ ಈ ಚಿತ್ರವನ್ನು ನೋಡಲು ಪ್ರಯತ್ನ ಮಾಡುತ್ತೇನೆ.
ಲಕ್ಷ್ಮಿ ಮೇಡಮ್,
ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದ್ದಕ್ಕೆ thanks.
ಹಾಯ್ ಶಿವೂ,
ನೀವು ಹೇಳಿರುವ ಚಿತ್ರವನ್ನು ಸ್ಟಾರ್ ಮೂವೀಸ್ ನಲ್ಲಿ ನಾನು ಒಮ್ಮೆ ನೋಡಿದ್ದೇ, ಮೊದಲು ಚಿತ್ರದ ಹೆಸರು ಗೊತ್ತಿರಲಿಲ್ಲ, ಸುಮ್ನೆ ಹಾಗೆ ನೋಡ್ತಾ ಇರಬೇಕಾದ್ರೆ ಈ ಪುಟ್ಟ ಹುಡುಗಿಯ ಅಭಿನಯ ನನ್ನನು ಪೂರ್ತಿ ಚಿತ್ರ ನೋಡುವ ಹಾಗೆ ಮಾಡಿತು,, ನಿಜವಾಗ್ಲೂ ತುಂಬ ಚೆನ್ನಾಗಿದೆ , ಮತ್ತೊಮ್ಮೆ ತಮ್ಮ ನವಿರಾದ ಬರಹದಲ್ಲಿ ಚಿತ್ರವನ್ನು ನೆನಪಿಸಿ ಕೊಟ್ಟಿದಕ್ಕೆ ಧನ್ಯವಾದಗಳು...
ಗುರು
ಗುರುರವರೆ,
ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್. ಹೀಗೆ ಬರುತ್ತಿರಿ..
Amar mattu Shivanna avarige vandanegalu...
Hrudayasparshi ankana..
ನವೀನ್,
ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದ್ದಕ್ಕೆ thanks.
ಹೀಗೆ ಬರುತ್ತಿರಿ....
ನೀವು ಅದನ್ನು ಪರ್ಷಿಯನ್ ಸಿನಿಮಾ ಅಂದಾಗ ನನ್ನ ಬಗ್ಗೆ ನನಗೇ ಅನುಮಾನ ಬಂದಿತ್ತು. ಯಾವುದೋ ಪರಭಾಷೆಯಾದ್ದರಿಂದ ನಾನು ನೋಡಿದ್ದು ಪರ್ಷಿಯನ್ನೋ ಅಥವಾ ಇಟಾಲಿಯನ್ನೋ ಎಂಬ ಅನುಮಾನವಿತ್ತು. ನಂತರ googleನಲ್ಲಿ search ಮಾಡಿದ ಮೇಲೆ ಅದು ಇಟಾಲಿಯನ್ ಎಂದು ಖಚಿತವಾಗಿ ಪ್ರತಿಕ್ರಿಯಿಸುವಷ್ಟರಲ್ಲಿ ನೀವೇ ಅದನ್ನು ತಿಳಿಸಿರುವಿರಿ
ಎಷ್ಟೊಂದು ಕಾಮೆಂಟುಗಳು!ಇದೆಲ್ಲಾ ಓದಿದ ಮೇಲೆ ಸಿನಿಮಾ ಖಂಡಿತಾ ನೋಡ್ತೇನೆ.
ವಾರಕ್ಕೊಂದು ಬರಹ ಬರಲಿ ಸಾರ್.
ಅಶೋಕ ಉಚ್ಚಂಗಿ.
http://mysoremallige01.blogspot.com/
ವೈಪಿಎಸ್ ಅರ್ಜಿ ಸಿಗಲಿಲ್ಲ,ದಯಮಾಡಿ ಇ ಮೈಲ್ ಮಾಡಿ.
ಶಿವೂ ಸರ್,
ಮೊದಲು DVD ತಗೊಂಡು ಬಂದು ಕುಳಿತಿದ್ದೇನೆ, ಇದನ್ನ ನೋಡುವ ಕಿಚ್ಚು ಹಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು, ಚಿತ್ರದ ಕತೆಯ ಎಳೆಯನ್ನು ನೀವಾಗಲೇ ನಮ್ಮೆದುರು ನಿರೂಪಿಸಿದ್ದೀರಿ, ಆದರು ನೋಡಲೇ ಬೇಕೆಂಬ ಹಂಬಲ ನನಗೀಗ, ನೋಡಿದ ಮೇಲೆ ಖಂಡಿತ ಮತ್ತೆ ಬರೆಯುತ್ತೇನೆ.
-ರಾಜೇಶ್ ಮಂಜುನಾಥ್
ಆಶೋಕ್,
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...ವಾರಕ್ಕೊಂದು ಬರಹ ಖಂಡಿತ ಕೊಡುತ್ತೇನೆ. ನಿಮಗೆ ವೈಪಿಎಸ್ ಅರ್ಜಿ ನಾಳೆ ಕಳುಹಿಸುತ್ತೇನೆ.
ರಾಜೇಶ್ ಮಂಜುನಾಥ್,
ಸಿನಿಮಾ ನೋಡಿ enjoy ಮಾಡಿ !
ಶಿವೂ ಸರ್,
DVD play ಆಗ್ಲಿಲ್ಲ, ಏನೇನೋ ಸರ್ಕಸ್ ಮಾಡಿದೆ, ಊಹೂ ಆಗಲೇ ಇಲ್ಲ, ನಾಳೆ CD Parlor ಗೆ ಹಿಂತಿರುಗಿಸಿ, ಬೈದು ಬರಬೇಕೆಂದು ಕೊಂಡಿದ್ದೇನೆ. ಇನ್ನೊಮ್ಮೆ ನಿಮ್ಮ ಬ್ಲಾಗ್ ಓದಿದೇ, ಇಷ್ಟವಾಯ್ತು, ಸಿನೆಮಾ ನೋಡಲೇಬೇಕೆಂಬ ಹಠ ಶುರುವಾಗಿದೆ.
-ರಾಜೇಶ್ ಮಂಜುನಾಥ್
ರಾಜೇಶ್ ಮಂಜುನಾಥ್,
ನಿಮಗೆ ಸಿನಿಮಾ ನೋಡಲಾಗದಿದ್ದುದ್ದಕ್ಕೆ ವಿಷಾದಿಸುತ್ತೇನೆ. ಮತ್ತೆ ಪ್ರಯತ್ನಿಸಿ. ಸಿಗದಿದ್ದಲ್ಲಿ ನಾನು ಕೊಡುತ್ತೇನೆ.
ಚಿಲ್ದ್ರೆನ್ಸ್ ಆಫ್ ಹೆವನ್ಸ್ ಬಗ್ಗೆ ಸುಪ್ರೀತ್ ಬರೆದಿದ್ದು ಓದಿ ಆಸೆಯಾಗಿತ್ತು,ನಂತರ ಹಾಗೆ ಮರೆತಿದ್ದೆ.
ಊರಿಗೆ ಬಂದಾಗ ಯಾವ ಯಾವ ಸಿನೆಮಾ ನೋಡಬೇಕೆಂದು ಮಾಡುವ ಲಿಸ್ಟ್ ನಲ್ಲಿ ಇದನ್ನೂ ಸೇರಿಸಿಕೊಳ್ಳುತ್ತಿದ್ದೇನೆ.
ಬರಹ ಕೂಡ ಚಂದ ಇದೆ.
ರಂಜಿತ್ ಸಾರ್,
ಈ ಸಿನಿಮಾ ನೋಡಲಿಕ್ಕೆ ನೀವೊಬ್ಬರು ಬಂದಿರಲಿಲ್ಲವೆಂದುಕೊಂಡಿದ್ದೆ. ನೀವು ನೋಡುವ ಸಿನಿಮಾ ಲಿಷ್ಟಿನಲ್ಲಿ ಇದು ಮೊದಲನೆಯದಾಗಿರಲಿ !
ಬ್ಲಾಗಿಗೆ ಬಂದಿದ್ದಕ್ಕೆ ಥ್ಯಾಂಕ್ಸ್....ಬರುತ್ತಿರಿ.
ಬಹಳ ಚೆನ್ನಾಗಿ ವಿಷ್ಲೇಶಿಸಿದ್ದೀರ ಸಾರ್, ಪ್ರತಿಯೊಂದು ಸನ್ನಿವೇಷವನ್ನು ವಿವರಿಸಿದ್ದೂ, ಹಾಗೆ ತಾಂತ್ರಿಕ ವಿವರಗಳನ್ನೂ ಕೊಟ್ಟಿದ್ದು ಬಹಳ ಚೆನ್ನಾಗಿದೆ... ನೀವು ನನ್ನ ಬ್ಲಾಗಿನಲ್ಲಿ ಈ ಲೇಖನದ ಬಗ್ಗೆ ಹೇಳಿದ್ದಕ್ಕೆ ತುಮ್ಬಾ ಧನ್ಯವಾದಗಳು... ಈ ಚಿತ್ರ ನೋಡಬೇಕೆನ್ನುವ ಹಂಬಲ್ ಇನ್ನೂ ತುಸು ಜಾಸ್ತಿ ಆಯಿತು ಈವಾಗ... ಚಿತ್ರ ನೋಡಿದ ಮೇಲೆ ಮತ್ತಷ್ಟು ಬರೆಯುತ್ತೇನೆ... ನಿಮ್ಮ ಬ್ಲಾಗ ನಿಜವಾಗಲೂ ಮಾಹಿತಿಯ ಕಣಜ...
ಪ್ರಭು,
ಈ ಸಿನಿಮಾ ನನ್ನ ಫೇವರೇಟ್. ಇದರ ಬಗ್ಗೆ ಎಷ್ಟು ಬರೆದರೂ ಕಡಿಮೇಯೇ....ಲೇಖನ ಮೆಚ್ಚ್ಚಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ....
Post a Comment