ಒಳಗೆ ಕಾಲಿಟ್ಟು ಒಮ್ಮೆ ಸುತ್ತ ನೋಡಿದ ತಕ್ಷಣ ಕಡಿಮೆಯಾಗಿದ್ದು ನನ್ನಲ್ಲಿನ ಆಹಂಕಾರ.ಇದು ನನಗೆ ಮಾತ್ರವಲ್ಲ ಅಲ್ಲಿಗೆ ಬಂದವರ ಪ್ರತಿಯೊಬ್ಬರ ಆಹಂಕಾರವೂ ತಾನೇ ತಾನಾಗಿ ಮಣ್ಣಾಗುತ್ತದೆ.
ಪುಸ್ತಕದ ಮುಂದೆ ಕುಬ್ಜರಾಗುವುದು ಹೀಗೇನಾ...
ನಿದಾನವಾಗಿ ಒಮ್ಮೆ ಸುತ್ತಲೂ ನೋಡಿದೆ.ಅದೊಂದು ದೊಡ್ಡ ಮದುವೆ ಮಂಟಪದಂತಿದೆ. ಆದ್ರೆ ಅಲ್ಲಿ ಜನರಿಲ್ಲ.ಬದಲಾಗಿ ಎಲ್ಲಿ ನೋಡಿದರೂ ಪುಸ್ತಕಗಳು. ಎಣಿಸಲು ಲೆಕ್ಕವೆಲ್ಲದಷ್ಟು ಪುಸ್ತಕಗಳು. ನಮ್ಮ ಎಂಟು ದಿಕ್ಕುಗಳಷ್ಟೇ ಅಲ್ಲದೇ ನೆಲದ ಮೇಲು ಸಾವಿರಾರು ಪುಸ್ತಕಗಳು. ಯಾವ ಪುಸ್ತಕವನ್ನು ನೋಡುವುದು, ಯಾವುದನ್ನು ಬಿಡುವುದು.ಯಾವ ಕಡೆ ಕೈ ಚಾಚಿದರೂ ಒಂದು ಕಾದಂಬರಿಯೋ, ಕತೆಯೋ ಕವನವೋ, ಪಠ್ಯಪುಸ್ತಕವೋ ಸಿಕ್ಕೇ ಸಿಗುತ್ತದೆ ಒಂದನೇ ತರಗತಿಯಿಂದ ಡಾಕ್ಟರೇಟ್ ಪಿ.ಎಚ್‍ಡಿ ಪಡೆಯುವರೆಗೆ....ಹೀಗೆ ನನ್ನದೇ ಯೋಚನೆಯಲ್ಲಿದ್ದವನಿಗೆ ನಮ್ಮ ಜೊತೆಯಲ್ಲಿಯೇ ಬಂದಿದ್ದ ಮೂರು ಪುಟ್ಟ ಮಕ್ಕಳು ಆಷ್ಟೋಂದು ಸಾವಿರಾರು ಪುಸ್ತಕಗಳ ನಡುವೆ ಓಡಾಡಿ ತಮಗೆ ಬೇಕಾದುದನ್ನು ಕೈಗೆತ್ತಿಕೊಂಡು ಸಂಭ್ರಮಿಸುತ್ತಿರುವುದನ್ನು ನೋಡಿ ಕನಸಿನ ಲೋಕದಿಂದ ಹೊರಬಂದೆ. ಇತ್ತ ನೋಡಿದರೆ ಒಟ್ಟಾಗಿ ಬಂದ ನಮ್ಮ ಬ್ಲಾಗ್ ಗೆಳೆಯರೆಲ್ಲಾ ಬೇರೆ ಬೇರೆಯಾಗಿ ಕುತೂಹಲದಿಂದ ಕೈಗೆ ಸಿಕ್ಕ ಪುಸ್ತಕಗಳನ್ನು ನೋಡುತ್ತಿದ್ದಾರೆ.
ಸ್ಕೂಲ್ ಓದುತ್ತಿರುವ ಮಕ್ಕಳಿಗೂ ಕೂಡ ಆಸಕ್ತಿ ಕೆರಳಿಸುವಂತ ಪಠ್ಯ ಪುಸ್ತಕಗಳು
ಪುಸ್ತಕಗಳನ್ನು ನೋಡಿ ಸಂಭ್ರಮಿಸಿದವರು ನಮ್ಮ ಈ ಬ್ಲಾಗರುಗಳು.
ಪ್ರಪಂಚವನ್ನೇ ಮರೆತು ತಮಗಿಷ್ಟವಾದ ಪುಸ್ತಕಗಳನ್ನು ನೋಡುತ್ತಿರುವ ಬ್ಲಾಗರುಗಳು.
ಇಷ್ಟೆಲ್ಲ ವಿವರಿಸಿದ ಮೇಲೆ ನಾವು ಹೋಗಿದ್ದು ಎಲ್ಲಿ ಅಂತ ನಿಮಗೆ ಹೇಳಲಿಲ್ಲ ಅಲ್ವಾ...ಕಳೆದ ಶನಿವಾರ ಬ್ಲಾಗ್ ಗೆಳೆಯರೆಲ್ಲಾ ಒಂದು ದಿನದ ಪ್ರವಾಸವೆಂದು ಹೊರಟಿದ್ದು ಪಾಂಡವಪುರದ ರೈಲುನಿಲ್ದಾಣದಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವ ಅಂಕೇಗೌಡರ ಪುಸ್ತಕದ ಅರಮನೆಗೆ.
ಇಲ್ಲಿ ನಿಜಕ್ಕೂ ಸರಸ್ವತಿ ಕಾಲು ಮುರಿದುಕೊಂಡು ಬಿದ್ದಿದ್ದಾಳೆ ಎಂದೇ ಹೇಳಬಹುದು. ನಾವೆಲ್ಲಾ ಹೀಗೆ ಮೈಮರೆತು ಅಲ್ಲಿನ ಹಳೆಯ ಪುಸ್ತಕಗಳನ್ನು ನೋಡುತ್ತಿದ್ದರೆ ನಿದಾನವಾಗಿ ನಮ್ಮತ್ತ ಬಂದರು ಅಂಕೇಗೌಡರು. ಅವರನ್ನು ನೋಡಿದ ಮೇಲೆ ಅಂಕೇಗೌಡರು ಇವರೇನಾ ಅನ್ನಿಸಿತ್ತು. ಒಂದು ಹಳೆಯ ಅಂಗಿ ಪ್ಯಾಂಟು ಧರಿಸಿಕೊಂಡು ತೀರ ಸಾದ ಸೀದ ಹಳ್ಳಿ ರೈತನಂತೆ ನಮ್ಮ ಮುಂದೆ ನಿಂತ ಅವರನ್ನುಕಂಡು ನಮಗೆಲ್ಲಾ ಆಶ್ಚರ್ಯವಾಯಿತು.
ಪುಸ್ತಕದ ದೇಗುಲದ ಭಕ್ತ
ತಮ್ಮ ಜೀವನವನ್ನೇ ಈ ರೀತಿ ಪುಸ್ತಕಗಳನ್ನು ಕಲೆಹಾಕುವ ಹವ್ಯಾಸಕ್ಕೆ ತೊಡಗಿಸಿಕೊಂಡ ಧೀಮಂತ ವ್ಯಕ್ತಿ ಹೀಗೆ ಇಷ್ಟು ಸರಳವಾಗಿರುವುದು ನೋಡಿ ನಮಗಂತೂ ಬೆರಗು. ನಮ್ಮನ್ನೆಲ್ಲಾ ಪ್ರೀತಿಯಿಂದ ಮಾತಾಡಿಸುವ ಹೊತ್ತಿಗೆ ಅವರ ಶ್ರೀಮತಿಯವರು ಬಂದರು. ಎಲ್ಲರ ಪರಿಚಯಗಳು ಆದ ಮೇಲೆ ಇಡೀ ಪುಸ್ತಕಮನೆಯನ್ನೆಲ್ಲ ತೋರಿಸಿದರು ಅಪರೂಪದ ನೂರೈವತ್ತನಾಲ್ಕು ವರ್ಷಗಳ ಹಿಂದಿನ ಪುಸ್ತಕ "ಐವತ್ತು ಜಗತ್ತಿನ ಅದ್ಬುತಗಳು ಎನ್ನುವ ಫೋಟೊಗ್ರಫಿ ಪುಸ್ತಕ,
ಜಗತ್ತಿನ ಐವತ್ತು ಅದ್ಬುತಗಳು ಫೋಟೊಗ್ರಫಿ ಪುಸ್ತಕ
ನೂರು ವರ್ಷಗಳ ಹಿಂದಿನ ಮೈಸೂರಿನ ಕತೆಯನ್ನು ಹೇಳುವ ಛಾಯಚಿತ್ರಸಹಿತ ಪುಸ್ತಕ, ಹೀಗೆ ಅನೇಕ ಅಪರೂಪದ ಪುಸ್ತಕಗಳನ್ನು ನಮಗೆಲ್ಲಾ ತೋರಿಸಿದರು.
ಅವರ ಶ್ರೀಮತಿಯವರು ನಮಗೆಲ್ಲಾ ಕಾಫಿಮಾಡಿಕೊಂಡು ತಂದರು. ನಾವು ಮೊದಲಿಗೆ ಅಂತ ಅದ್ಬುತ ಸ್ಥಳವನ್ನು ಬೇಟಿನೀಡುವ ಉದ್ದೇಶ ಮೊದಲಾಗಿದ್ದರೂ ಇಂಥ ಅಭಿರುಚಿ ಮತ್ತು ಹವ್ಯಾಸವುಳ್ಳ ಅಂಕೇಗೌಡರು ಮತ್ತು ಅದಕ್ಕೆ ಸಂಪೂರ್ಣ ಬೆನ್ನೆಲುಬಾಗಿ ನಿಂತು ಜೀವನ ಪೂರ್ತಿ ಸಹಕರಿಸುತ್ತಿರುವ ಅವರ ಶ್ರೀಮತಿಯವರನ್ನು ಪುಟ್ಟ ಸನ್ಮಾನದ ಮೂಲಕ ನಮ್ಮ ಅಭಿನಂದನೆಗಳನ್ನು ಸಲ್ಲಿಸುವುದು ನಮ್ಮ ಮುಖ್ಯ ಉದ್ದೇಶವಾಗಿತ್ತು.
ಅಂಕೇಗೌಡರ ಶ್ರೀಮತಿಯವರು
ಪುಟ್ಟ ಕಾರ್ಯಕ್ರಮದಲ್ಲಿ ಅವರ ಅದ್ಬುತ ಸಾಧನೆ ಬಗ್ಗೆ ಪ್ರಸ್ತಾಪಮಾಡಿದ ಬಾಲು ಸರ್, ಅವರ ಪೂರ್ತಿಪರಿಚಯವನ್ನು ಮಾಡಿಕೊಟ್ಟರು.
ನಂತರ ನಮ್ಮೊಂದಿಗೆ ತಮ್ಮ ಬದುಕಿನ ಸಂಪೂರ್ಣ ಅನುಭವ, ಈ ಪುಸ್ತಕಗಳನ್ನು ಕಲೆಹಾಕುವ ಹವ್ಯಾಸ ಅವುಗಳ ಮೇಲಿನ ಪ್ರೀತಿ, ತಮ್ಮ ಬದುಕಿನುದ್ದಕ್ಕೂ ಸರ್ಕಾರಿ ಕೆಲಸದಲ್ಲಿದ್ದೂ ಎಲ್ಲೂ ಒಂದೂ ರೂಪಾಯಿಗೆ ಕೈಚಾಚದೆ ಪ್ರಾಮಾಣಿಕರಾಗಿ ಬದುಕಿದ್ದು, ಅದಕ್ಕೆ ಸಿಕ್ಕ ಅಡೆತಡೆಗಳು...ಅದಕ್ಕೂ ಮೊದಲು ಪ್ರಾರಂಭದಲ್ಲಿ ಬಸ್ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಾ...ಎಲ್ಲಾ ಕಂಡಕ್ಟರುಗಳು ದಿನಕ್ಕೆ ಮುನ್ನೂರು ರೂಪಾಯಿಯನ್ನು ಕಟ್ಟುತ್ತಿದ್ದರೆ ಇವರು ಮೊದಲ ದಿನವೇ ಏಳುನೂರು ರೂಪಾಯಿಯನ್ನು ಕಟ್ಟಿ ಇತರ ಕಂಡಕ್ಟರುಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಅವರ ಪ್ರಾಮಾಣಿಕತೆಯನ್ನು ಮೆಚ್ಚಿ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಅವರನ್ನು ಸನ್ಮಾನಿಸಿದ್ದು ಹೀಗೆ ಅನೇಕ ವಿಚಾರಗಳನ್ನು ನಮ್ಮೊಂದಿಗೆ ಹಂಚಿಕೊಂಡರು.
ಅಂಕೇಗೌಡರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು
ಆವರೊಬ್ಬ ಭಾವಜೀವಿ. ಬದುಕಿನಲ್ಲಿ ನಡೆದ ಅನೇಕ ಘಟನೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವಾಗ ಅವರ ಮಾತುಗಳು ನಮ್ಮನ್ನು ಯಾವ ರೀತಿ ಮಂತ್ರ ಮುಗ್ದರನ್ನಾಗಿಸಿದವೆಂದರೆ ಅಲ್ಲಿದ್ದ ಪ್ರತಿಯೊಬ್ಬ ಬ್ಲಾಗಿಗನೂ ಮೂಕಪ್ರೇಕ್ಷಕರಾಗಿಬಿಟ್ಟಿದ್ದರು. ಅಲ್ಲಿನ ಬಗ್ಗೆ ನಾನು ಹೆಚ್ಚಾಗಿ ಬರೆಯದೆ ನಮ್ಮ ಬ್ಲಾಗಿಗರ ಅಲ್ಲಿದ್ದ ಹೊತ್ತು ಹೇಗಿದ್ದರು ಎನ್ನುವುದನ್ನು ಚಿತ್ರಗಳ ಮೂಲಕ ವಿವರಿಸಲು ಪ್ರಯತ್ನಿಸುತ್ತೇನೆ.
ಅಂಕೇಗೌಡರ ಅನುಭವದ ಮಾತುಗಳನ್ನು ಕೇಳುತ್ತಿರುವ ನಮ್ಮ ಬ್ಲಾಗಿಗರು..
ಎಂಟನೇ ತರಗತಿಯನ್ನು ಓದುತ್ತಿರುವ ಪುಟ್ಟ ಹುಡುಗಿ ಕೂಡ ತನ್ಮಯತೆಯಿಂದ ಅಂಕೇ ಗೌಡರ ಅನುಭವವನ್ನು ಕೇಳುತಿದ್ದಾಳೆ
ನಡುವೆ ಅವರ ಅನುಭವಗಳ ಮೆಲುಕಾಟದಲ್ಲಿ ಅವರು ಕಣ್ತುಂಬಿಬಂದಿದ್ದು ಹೀಗೆ.
ನಂತರ ಅವರಿಗೆ ಬ್ಲಾಗಿಗರ ಪರವಾಗಿ ಅಜಾದ್‍ರಿಂದ ಸನ್ಮಾನ ಕಾರ್ಯಕ್ರಮ.
ಕೊನೆಯಲ್ಲಿ ಅಲ್ಲಿಗೆ ಹೋಗಿದ್ದ ಬ್ಲಾಗಿಗರೆಲ್ಲರೂ ಒಬ್ಬೊಬ್ಬರಾಗಿ ಅಲ್ಲಿನ ಅನುಭವದ ಬಗ್ಗೆ ತಮ್ಮ ಅನಿಸಿಕೆಗಳನ್ನು ಅಂಚಿಕೊಂಡು ತಾವು ಬರೆದ ಪುಸ್ತಕಗಳನ್ನು ಅಂಕೆಗೌಡರ ಪುಸ್ತಕ ಮನೆಗೆ ಉಡುಗೊರೆಯಗಿ ಕೊಟ್ಟರು.
ಬ್ಲಾಗಿಗರ ಜೊತೆ ಅಂಕೇಗೌಡರ ಕುಟುಂಬ ಮತ್ತು ಅವರ ಗೆಳೆಯರ ಜೊತೆ ಒಂದು ಗ್ರೂಪ್ ಫೋಟೊ ಕ್ಲಿಕ್ಕಿಸಿದ್ದು ಆಯ್ತು.
ಅಲ್ಲಿ ಕಳೆದ ಎರಡೂವರೆ ಗಂಟೆಯಷ್ಟರಲ್ಲೇ ಅಂಕೆಗೌಡರಿಗೂ ನಮಗೂ ವಿವರಿಸಲಾಗದ ಒಂದು ಅವಿನಾಭಾವ ಸಂಭಂದ ಮೂಡಿತ್ತು. ಅಂಕೇಗೌಡರ ಪುಸ್ತಕ ಪ್ರೇಮ, ಹವ್ಯಾಸ ಮತ್ತು ಸಾಧನೆಯ ನೂರನೇ ಒಂದಂಶವಾದರೂ ನಮ್ಮೊಳಗೆ ಮೂಡಿ ಅಷ್ಟರ ಮಟ್ಟಿನ ಪ್ರಯತ್ನ ನಮ್ಮ ಕಡೆಯಿಂದ ಆದರೆ ಇದುವರೆಗೆ ನಾವು ಮಾಡಿರುವ ಪಾಪಗಳನ್ನೆಲ್ಲ ಕಳೆದುಕೊಂಡೆವೇನೋ..ಎನ್ನಿಸತೊಡಗಿತ್ತು. ಕೊನೇ ಪಕ್ಷ ಇಂಥ ಒಂದು ಸ್ಥಳವಿದೆ, ಅಲ್ಲಿ ಒಬ್ಬ ಇಂಥ ಮಹಾನ್ ಸಾಧಕರಿದ್ದಾರೆ ಅಂತ ನಮ್ಮ ಗೆಳೆಯರಿಗೆ, ನಮ್ಮ ಮಕ್ಕಳಿಗೆ ತಿಳಿಸಿ ಅದರ ಬಗೆಗೆ ತಿಳುವಳಿಕೆ ಮೂಡಿಸುವ ಸಂಕಲ್ಪ ಮಾಡಿಕೊಂಡು
ದೇಶವೇ ಹೆಮ್ಮೆ ಪಡುವಂತ ಕೆಲಸವನ್ನು ಮಾಡುತ್ತಿರುವ ಅಂಕೇಗೌಡರು ಮತ್ತು ಅವರ ಪುಸ್ತಕಮನೆಯನ್ನು ಬಿಟ್ಟು ಹೊರಬರುವಾಗ ನಮ್ಮ ಕಣ್ಣಾಲಿಗಳಲ್ಲಿ ನೀರು ಇಣುಕಿತ್ತು.
ನಾವು ಎಲ್ಲಿಗೋ ಒಂದು ಪ್ರವಾಸ, ಪಿಕ್‍ನಿಕ್ ಅಂತ ಬೆಟ್ಟ, ಗುಡ್ಡ, ನದಿ, ಹೊಳೆ, ದೇವಸ್ಥಾನ ಇತ್ಯಾದಿಗಳಿಗೆ ಹೋಗಿ ಬರುತ್ತೇವಲ್ಲ...ಅದರ ಬದಲು ಇಂಥ ಒಂದು ಸ್ಥಳಕ್ಕೆ ಪ್ರವಾಸಕ್ಕೆ ಹೋಗಿಬಂದರೆ ನಮ್ಮ ಬದುಕು ಸಾರ್ಥಕ ಎಂದೆನಿಸಿತ್ತು. ಇಂಥ ಒಂದು ಸ್ಥಳಕ್ಕೆ ಬೇಟಿಕೊಡಲು ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಿದ್ದ ಮೈಸೂರಿನ ಬಾಲು ಸರ್ [ನಮ್ಮೊಳಗೊಬ್ಬ ಬಾಲು]ರವರಿಗೆ ಮತ್ತು ನಮ್ಮ ಬ್ಲಾಗಿಗರನ್ನು ಒಟ್ಟುಗೂಡಿಸಿ ಇಂಥ ವಿಶೇಷ ಅನುಭವ ನೀಡುವ ಕಾರ್ಯಕ್ರಮವನ್ನು ರೂಪಿಸಿದ ಪ್ರಕಾಶ್ ಹೆಗಡೆಯವರಿಗೆ ಸಾವಿರ ವಂದನೆಗಳು. ನನ್ನ ಬದುಕಿನಲ್ಲಿ ಹತ್ತಾರು ಫೋಟೊಗ್ರಫಿ ಮತ್ತು ಇತರ ಪ್ರವಾಸಗಳನ್ನು ಮಾಡಿದ್ದೇನೆ. ಅದೆಲ್ಲ ಒಂದು ತೂಕವಾದರೆ ಈ ಪುಸ್ತಕದರಮನೆಯ ಪ್ರವಾಸವೇ ಬೇರೆ ತೂಕದ್ದು ದಯವಿಟ್ಟು ಎಲ್ಲಾ ಪುಸ್ತಕ ಪ್ರೇಮಿಗಳು ಒಮ್ಮೆಯಾದರೂ ಹೋಗಿಬನ್ನಿ.
ನಾಡಿನ ಹಿರಿಮೆ ಸಾರಲು ಹೋರಾಟ ನಡೆಸಿರುವ ವ್ಯಕ್ತಿಗೆ ಸಹಾಯ ಮಾಡಲು ನಿಮಗೆ ಇಷ್ಟ
ವಿದ್ದಲ್ಲಿ ಅವರನ್ನೇ ನೇರವಾಗಿ ಸಂಪರ್ಕಿಸಿ ಸಹಾಯ ಮಾಡ ಬಹುದು. ಅವರ ವಿಳಾಸ. ಶ್ರೀ ಅಂಕೆ
ಗೌಡ ,ಪುಸ್ತಕದ ಮನೆ ಶ್ರೀ ಅಂಕೆ ಗೌಡ ಜ್ಞಾನ ಪ್ರತಿಷ್ಠಾನ [ರಿ] ಹರಳ ಹಳ್ಳಿ
ಪಾಂಡವಪುರ ತಾಲೂಕ್ ,ಮಂಡ್ಯ ಜಿಲ್ಲೆ.571434 ಮೊಬೈಲ್ ನಂಬರ್ ;9242844934
,9242844206 ಗಳನ್ನೂ ಸಂಪರ್ಕಿಸಬಹುದು .ಪುಸ್ತಕ ಪ್ರಕಟಣೆ ಮಾಡುವವರು ತಮ್ಮ ಒಂದು
ಪ್ರತಿಯನ್ನು ಇಲ್ಲಿಗೆ ಉಚಿತವಾಗಿ ಕಳುಹಿಸಿದರೆ ಅದೂ ಸಹ ಒಂದು ಉತ್ತಮ ಕಾರ್ಯ
ವಾಗುತ್ತದೆ. ನೀವು ಒಮ್ಮೆ ಮೈಸೂರಿಗೆ ಬಂದರೆ ಮರೆಯದೆ ಇಲ್ಲಿಗೆ ಹೋಗಿಬನ್ನಿ ನಿಮ್ಮ
ಗೆಳೆಯರಿಗೂ ತೋರಿಸಿ.ಒಂದು ಉತ್ತಮ ಹವ್ಯಾಸಿಯ ಕಾರ್ಯಕ್ಕೆ ನಾವೆಲ್ಲಾ ಬೆಂಬಲ ನೀಡೋಣ.........!!11
ಲೇಖನ : ಶಿವು.ಕೆ
ಚಿತ್ರಗಳು. ಶಿವು.ಕೆ ಮತ್ತು ನವೀನ್.