ಒಂದು ಅದ್ಬುತ ಸಿನಿಮಾ ಬಗ್ಗೆ ಬರೆಯಬೇಕೆನಿಸಿದೆ. ಇಂದಿನ ಪ್ರಸ್ತುತ ಬಾಂಬ್ ಬ್ಲಾಸ್ಟ್, ಟೆರರಿಷ್ಟ್ ಆಟ್ಯಾಕ್, ರಾಜಕೀಯದವರ ಮೋಸ, ಸೋಗಲಾಡಿತನದ ಹಿನ್ನೆಲೆಯಲ್ಲಿ, ಎಲ್ಲರೂ ಅದರ ಬಗ್ಗೆ ಮಾತಾಡುವುದು, ಓದುವುದು, ನೋಡುವುದು, ಬರೆಯುವುದು ನಡೆದಿರುವ ಇಂಥ ಸಮಯದಲ್ಲಿ ಒಂದು ಹೃದಯಸ್ಪರ್ಶಿ, ಮನಕಲಕುವ, ನೋಡುತ್ತಾ, ನೋಡುತ್ತಾ ನಾವೇ ಪಾತ್ರವಾಗಿಬಿಡುವ, ನೋಡಿದ ನಂತರವೂ ಬಹುದಿನ ಕಾಡುವಂತ ಒಂದು ಇರಾನಿ ಸಿನಿಮಾ ಬಗ್ಗೆ ಬರೆಯಬೇಕು ಅನ್ನಿಸಿದೆ.
ಆ ಸಿನಿಮಾ ಹೆಸರೇ " Children of Heavan"

ಆಲಿ ಎನ್ನುವ ೧೨ ವರ್ಷದ ಹುಡುಗ ತನ್ನ ತಂಗಿಯ ಕಿತ್ತುಹೋದ ಶೂವನ್ನು ರಿಪೇರಿ ಮಾಡಿಸಿಕೊಂಡು ಬರುವಾಗ ದಾರಿಯಲ್ಲಿ ಅದನ್ನು ಕಳೆದುಕೊಳ್ಳುತ್ತಾನೆ. ಅವರ ತಂದೆ ತಾಯಿಗಳಿಗಂತೂ ಮಕ್ಕಳಿಗೆ ಒಂದು ಜೊತೆ ಷೂ ಕೊಡಿಸಲಾಗದಷ್ಟು ಬಡತನ. ಆಷ್ಟು ಚಿಕ್ಕ ವಯಸ್ಸಿನಲ್ಲೇ ಅಪ್ಪ ಅಮ್ಮನ ಕಷ್ಟವನ್ನಿರಿತ ಆ ಇಬ್ಬರು ಮಕ್ಕಳು ತಂದೆ ತಾಯಿಯರಿಗೆ ತಿಳಿಯದಂತೆ ಒಂದು ಉಪಾಯ ಮಾಡುತ್ತಾರೆ. ಅದೇನೆಂದರೆ ಜಹೀರಾ ಸ್ಕೂಲು ಬೆಳಗಿನ ಸಮಯವಿರುವುದರಿಂದ ಇರುವ ಒಂದು ಜೊತೆ ಆಣ್ಣನ ಷೂವನ್ನು ಮೊದಲು ಆವಳು ಹಾಕಿಕೊಂಡು ಹೋಗುವುದು. ನಂತರ ಓಡಿಬಂದು ಅದೇ ಷೂವನ್ನು ಅಣ್ಣ ಆಲಿಗೆ ಕೊಟ್ಟರೆ ಆಲಿ ಹಾಕಿಕೊಂಡು ತನ್ನ ಮದ್ಯಾಹ್ನದ ಸ್ಕೂಲಿಗೆ ಹೋಗುವುದು. ಈ ರೀತಿ ನಡೆಯುವಾಗ ಇಬ್ಬರು ಮಕ್ಕಳಲ್ಲಿ ಆಗುವ ದಿಗಿಲು, ಭಯ, ಆತಂಕ, ಕುತೂಹಲ, ಆಸೆ, ಅಣ್ಣನ ಮೇಲಿನ ಜಹೀರಾಳ ಪ್ರೀತಿ, ಆಲಿಗೆ ತಂಗಿಯ ಮೇಲಿನ ಜವಾಬ್ದಾರಿ, ವಾತ್ಸಲ್ಯ, ಎಲ್ಲವೂ ಸ್ಪಟಿಕ ಶುಭ್ರ ತಿಳಿನೀರಿನಂತೆ ನಿಮ್ಮ ಮುಂದೆ ಅಭಿವ್ಯಕ್ತವಾಗುತ್ತಾ ಹೋಗುತ್ತದೆ.
ಇಂಥಹ ಪರಿಸ್ಥಿತಿಯಲ್ಲೇ ಇಬ್ಬರೂ ಚೆನ್ನಾಗಿ ಓದುವುದು ಕ್ಲಾಸಿಗೆ ಮೊದಲ ಬರುವುದು ನಡೆಯುತ್ತದೆ. ಕೊನೆಗೆ ಅಂತರ ಶಾಲಾ ಓಟದ ಸ್ಪರ್ಧೆಯಲ್ಲಿ ಬಹುಮಾನವಾಗಿ ಮೊದಲು ಮತ್ತು ಎರಡನೆ ಬಹುಮಾನವಾಗಿ ಟ್ರೋಫಿ, ಮತ್ತು ಮೂರನೆ ಬಹುಮಾನವಾಗಿ ಒಂದು ಜೊತೆ ಹೊಸ ಷೂಗಳನ್ನು ಇಟ್ಟಿರುತ್ತಾರೆ.
ಆಲಿ ತನ್ನ ತಂಗಿಗಾಗಿ ಷೂ ಗೆಲ್ಲುವ ಒಂದೇ ಒಂದು ಆಸೆಯಿಂದ ಆ ಸ್ಪರ್ಧೆಗೆ ಸೇರುತ್ತಾನೆ. ರೇಸಿನಲ್ಲಿ ತನ್ನ ಪ್ರೀತಿಯ ತಂಗಿಗಾಗಿ ಷೂ ಗೆಲ್ಲುತ್ತಾನ ಎನ್ನುವುದು ಕತೆಯ ಕ್ಲೈಮಾಕ್ಸ್. ಅದನ್ನು ನೀವು ಸಿನಿಮಾ ನೋಡಿಯೇ ತಿಳಿಯಬೇಕು.
ಕತೆ ಇಷ್ಟು ಸರಳವಾಗಿದ್ದರೂ ಇಡೀ ಚಿತ್ರದ ಚೌಕಟ್ಟನ್ನು "ಮಾಜಿದ್ ಮಾಜಿದಿ" ಎನ್ನುವ ಇರಾನಿ ನಿರ್ಧೇಶಕ ಕಲ್ಪಿಸಿಕೊಂಡಿರುವ ರೀತಿಯೇ ಒಂದು ಅದ್ಬುತ. ಒಂದೊಂದು ಫ್ರೇಮು ದೃಶ್ಯಕಾವ್ಯವೆನ್ನುವಂತೆ ಚಿತ್ರಿಸಿದ್ದಾರೆ. ಯಾವುದೇ ಒಂದು ದೃಶ್ಯವೂ ಇಲ್ಲಿ ತೆಗೆದುಹಾಕುವಂತಿಲ್ಲ. ನೀವು ಸಿನಿಮಾ ನೋಡಲು ಶುರುಮಾಡಿದರೆ ಯಾವೊಂದು ಸನ್ನಿವೇಶವನ್ನೂ ಕಳೆದುಕೊಳ್ಳಲು ಇಷ್ಟಪಡದೆ ತನ್ಮಯರಾಗಿ ನೋಡಿಸುವಂತ ಅದ್ಭುತ ಚಿತ್ರಕತೆ ಇದೆ.
ಅಂದಮಾತ್ರಕ್ಕೆ ಇದೊಂದು ಅದ್ಬುತ ತಾಂತ್ರಿಕ ಹಿನ್ನೆಲೆಯುಳ್ಳ ಬಾಲಿವುಡ್, ಹಾಲಿವುಡ್ ರೀತಿಯ ಚಿತ್ರವಲ್ಲ. ಕೇವಲ ೧ ಲಕ್ಷ ೮೦ ಸಾವಿರ ಡಾಲರ್ ಖರ್ಚಿನಲ್ಲಿ ತಯಾರಾದ ಚಿತ್ರ. ಚಿತ್ರಕ್ಕಾಗಿ ಬಳಸಿರುವ ಸಣ್ಣ ಸಣ್ಣ ಕಾಲೋನಿಗಳು, ಓಣಿಗಳು, ಮನೆಗಳು, ಸಹಜವಾದ ಜನರಿರುವ ಪೂರಕ ವಾತಾವರಣ, ಒಂದು ಪಕ್ಕಾ ಸಾಂಪ್ರದಾಯಿಕ ಚೌಕಟ್ಟಿನ ಹಿನ್ನೆಲೆಯಲ್ಲಿ ಒಂದು ಸರಳವಾದ ಹಿತವಾದ, ಹದವಾದ ಸಾಫ್ಟ್ ಲೈಟಿನಲ್ಲಿ ಚಿತ್ರದ ಛಾಯಾಗ್ರಹಣ ಮಾಡಿರುವುದರಿಂದ ಇಡಿ ಚಿತ್ರವು ನಿಮ್ಮನ್ನು ಆವರಿಸಿಕೊಳ್ಳುತ್ತದೆ.
ಇವೆಲ್ಲಕ್ಕೂ ಕಿರೀಟವಿಟ್ಟಂತೆ ಆಲಿ ಪಾತ್ರವಹಿಸಿರುವ ಮೊಹಮದ್ ಅಮೀರ್ ನಾಜಿ ಎನ್ನುವ ಪುಟ್ಟ ಹುಡುಗ ಮತ್ತು ಜಹೀರಾ ಪಾತ್ರ ಮಾಡಿರುವ ಅಮೀರ್ ಫರೋಕ್ ಹಷೀಮಿಯಾ ಎನ್ನುವ ಪುಟ್ಟ ಹುಡುಗಿಯ ಮರೆಯಲಾಗದ ನಟನೆಯಿದೆ. ನೀವು ಸಿನಿಮಾ ನೋಡಿದ ಮೇಲೆ ಬಹುದಿನಗಳ ಕಾಲ ನಿಮಗೆ ತಮ್ಮ ತಂಗಿಯಾಗಿ, ಅಥವಾ ಮಗ ಮತ್ತು ಮಗಳಾಗಿ, ಮಕ್ಕಳಿಗೆ ಗೆಳೆಯರಾಗಿ ಕಾಡದಿದ್ದರೆ ಕೇಳಿ.
ಅವರು ಸಿನಿಮಾದಲ್ಲಿ ನಟಿಸಿಲ್ಲ. ಆ ಪಾತ್ರಗಳಲ್ಲಿ ಜೀವಿಸಿದ್ದಾರೆ. ಅದಕ್ಕಾಗಿ ಕೆಲವು ದೃಶ್ಯಗಳನ್ನು ನಾನು ಹೇಳಲು ಪ್ರಯತ್ನಿಸುತ್ತೇನೆ.
ದೃಶ್ಯ ೧. ಕಳೆದು ಹೋದ ಷೂ ವಿಚಾರ ಮನೆಯವರಿಗೆ ಗೊತ್ತಾಗದ ಹಾಗೆ ಆದರೆ ಅಪ್ಪ-ಅಮ್ಮನ ಸಮ್ಮುಖದಲ್ಲೇ ಆಣ್ಣ ಆಲಿ ತಂಗಿ ಜಹೀರಾಗೆ ಹೇಳುವಾಗ ಇಬ್ಬರೂ ತಮ್ಮ ಪುಸ್ತಕದಲ್ಲಿ ಬರೆದು ಹೇಳುವ ರೀತಿ, ಆಗ ಅಲ್ಲಿ ಹೊರಹೊಮ್ಮಿರುವ ತಂಗಿಯ ಹುಸಿಮುನಿಸು, ತುಸುಕೋಪ, ಅದಕ್ಕೆ ತಕ್ಕಂತೆ ಅಣ್ಣನ ದಿಗಿಲು, ಸಾಂತ್ವಾನ ಎಲ್ಲವೂ ಕೇವಲ ಮುಖಭಾವದಲ್ಲಿ ಮೂಡಿಸುವಾಗ ನೋಡುತ್ತಿರುವ ನೀವು ನಿಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತೀರಿ..
ದೃಶ್ಯ ೨. ಟಿ.ವಿ ಯಲ್ಲಿ ಬರುವ ಷೂ ಜಾಹಿರಾತನ್ನು ನೋಡಿ ಆಸೆ ಪಡುವ ಇಬ್ಬರೂ ಮರುಕ್ಷಣವೇ ಅಂತಹುದು ಪಡೆಯುವ ಅದೃಷ್ಟ ನಮಗಿಲ್ಲವೆಂದು ಅರಿವಾದಾಗ ಆಗುವ ನಿರಾಸೆಗಳು,
ದೃಶ್ಯ ೩. ಜಹೀರಾ ಸ್ಕೂಲು ಮುಗಿಸಿ ಮನೆಗೆ ಬರುವಾಗ ಅಂಗಡಿಯಲ್ಲಿಟ್ಟ ಹೊಸ ಹೊಸ ಷೂಗಳನ್ನು ಆಸೆಯ ಕಣ್ಣುಗಳಿಂದ ನೋಡುವುದು.
ದೃಶ್ಯ ೪. ಪರೀಕ್ಷೆ ಬರೆಯುವಾಗ ಬೆರೆಯುವುದಕ್ಕಿಂತ ಮುಖ್ಯವಾಗಿ ತಾನು ಹಾಕಿಕೊಂಡ ಷೂವನ್ನು ಅಣ್ಣನಿಗೆ ಕೊಡಬೇಕೆಂದು ಬೇಗ ಮುಗಿಸಿ ಓಡಿಬರುವಾಗ ಒಂದು ಕಾಲಿನ ಷೂ ಕಳಚಿ ನೀರು ಹರಿಯುತ್ತಿರುವ ಚರಂಡಿಯೊಳಗೆ ಬೀಳುತ್ತದೆ. ಅಯ್ಯೋ ಇದ್ದ ಒಂದು ಷೂ ಕೂಡ ಹೋಯ್ತಲ್ಲ ಅಂತ ಹರಿಯುವ ಚರಂಡಿ ನೀರಿನಲ್ಲಿ ತೇಲಿ ಹೋಗುತ್ತಿದ್ದ ಅದನ್ನು ಹಿಡಿಯಲು ಜಹೀರಾ ಓಡುವ ಪರಿ, ಕೊನೆಗೆ ಸಿಗದೆ, ಇದ್ದ ಕಾಲಿನ ಷೂ ಹೋಯ್ತಲ್ಲ ಎಂದು ಖಚಿತವಾಗಿ ಅವಳಿಗೆ ಆಳು ಬಂದುಬಿಡುತ್ತದೆ. ಆಗ ಯಾರೋ ಒಬ್ಬರು ಬಂದು ಚರಂಡಿಯಲ್ಲಿ ಸಿಕ್ಕಿಕೊಂಡ ಷೂ ಎತ್ತಿಕೊಡುತ್ತಾರೆ ಕಳೆದೇ ಹೋಯ್ತು ಅಂದುಕೊಂಡಿದ್ದು ಮತ್ತೆ ಸಿಕ್ಕಾಗ ಜಹೀರ ಮುಖದಲ್ಲಿ ಸಾವಿರ ಮಿಂಚು. ಈ ಪೂರ್ತಿ ಸನ್ನಿವೇಶ ನಿಮ್ಮನ್ನು ಯಾವ ರೀತಿ ಅವರಿಸಿಕೊಳ್ಳುತ್ತದೆಂದರೆ ನೀವೆನಾದ್ರು ಈ ಸಿನಿಮಾ ನೋಡುತ್ತಿದ್ದರೇ ಅದನ್ನು ಮರೆತು ನೀವೇ ಒಂದು ಪಾತ್ರವಾಗಿ ಚರಂಡಿಯಲ್ಲಿ ಬಿದ್ದ ಜಹೀರಾಳ ಷೂ ಎತ್ತಿಕೊಡಲು ಮುಂದಾಗುವಷ್ಟು.!
ದೃಶ್ಯ ೫. ಇರುವ ಒಂದೇ ಜೊತೆ ಷೂಗಳನ್ನು ಬದಲಾಯಿಸಿಕೊಳ್ಳುವುದು, ಅದರಿಂದ ಅಲಿ ಲೇಟಾಗಿ ಸ್ಕೂಲಿಗೆ ಹೋಗಿ ಅವರ ಮೇಷ್ಟ್ರ ರಿಂದ ಬೈಸಿಕೊಳ್ಳುವುದು ಆ ಸಮಯದಲ್ಲಿ ಈ ಪುಟ್ಟ ಮಕ್ಕಳ ಅಬಿನಯ ಮತ್ತು ಅಲ್ಲಿನ ವಸ್ತು ಸ್ಥಿತಿ, ಬಡತನವನ್ನು ಪರೋಕ್ಷವಾಗಿ ನಮಗೆ ಅರ್ಥೈಸಿ ಮನಕಲಕುವಂತೆ ಮಾಡುತ್ತದೆ.
ಪೂರ್ತಿ ಚಿತ್ರ ನೋಡಿ ಬಂದಾಗ ಅಲಲ್ಲಿ ಜಹೀರಾಳಲ್ಲಿನ ಮುಗ್ದತೆ, ತನ್ನ ಕೈಗೆಟುಕದ ವಸ್ತುವಿಗಾಗಿ ಕಾತರಿಸುವ ಕಣ್ಣುಗಳು,. ಅದು ತನಗೆ ಸಿಗದು ಎಂದು ಮರುಕ್ಷಣ ಅರಿವಾದಾಗ ಆಗುವ ನಿರಾಸೆ, ಪುಟ್ಟ ತಂಗಿಯಾಗಿ ಆಣ್ಣನ ಬಗೆಗಿನ ಕಾಳಜಿ , ನೊರೆಗುಳ್ಳೆ ಬಿಡುವಾಗ ಕಣ್ಣುಗಳಲ್ಲಿನ ಸಂಬ್ರಮ. ಅವಳಿಗೆ ಸರಿಸಮವಾಗಿ ಆಲಿ ತಂಗಿಯ ಮೇಲಿನ ಅತಿಯಾದ ಪ್ರೀತಿ, ಕಾಳಜಿ, ಆ ವಯಸ್ಸಿಗೆ ತನ್ನ ಪರಿಸ್ಥಿತಿ ಅರಿತು ಯೋಗ್ಯತೆಗೆ ಮೀರಿದ ಜವಾಬ್ದಾರಿಯನ್ನು ಹೊತ್ತು ಅಪ್ಪನಿಗೆ ಸಹಾಯಕನಾಗುವುದು ಇಂಥ ಮಿಂಚುಗಳು ಬಹುಕಾಲ ನಮ್ಮನ್ನು ಕಾಡುತ್ತವೆ.
ಜಹೀರಾ ಮತ್ತು ಆಲಿ ಇಡೀ ಚಿತ್ರದಲ್ಲಿ ಮಕ್ಕಳಾಗಿ ಪುಟ್ಟ ಪುಟ್ಟ ಆಣ್ಣ ತಂಗಿಯಾಗಿ, ಅಪ್ಪ ಅಮ್ಮ ಮತ್ತು ಮನೆಯ ಪರಿಸ್ಥಿತಿ ಅರಿತ ಬುದ್ಧಿವಂತರಾಗಿ ತಮ್ಮದೇ ಲೋಕದಲ್ಲಿ ಕಷ್ಟ, ಸುಖ, ಪ್ರೀತಿ ವಾತ್ಸಲ್ಯ, ಆಸೆ, ನಿರಾಸೆ ದುಃಖ ಎಲ್ಲವನ್ನು ನಿಮ್ಮ ಮುಂದೆ ತೆರೆದಿಡುತ್ತಾ ನಿಮ್ಮನ್ನು ಮಕ್ಕಳಾಗಿಸುತ್ತಾರೆ.

ಇವರಿಬ್ಬರ ಜೊತೆ ಒಂದು ಮುಖ್ಯ ಪಾತ್ರವೇ ಆಗಿ ಅಲ್ಲಲ್ಲಿ ಕಂಡು ಬರುವ ಶೂಗಳು, ಪೋಷಕ ಪಾತ್ರದಾರಿಗಳು, ಆಲಿ ಮತ್ತು ಜಹೀರಾಳ ಗೆಳೆಯ ಗೆಳತಿ ಬಳಗ, ಸ್ಕೂಲ್ ಮೇಷ್ಟ್ರು, ಕತೆಯ ಮದ್ಯದಲ್ಲಿ ಬರುವ ಒಬ್ಬ ಕಣ್ಣು ಕಾಣದ ಕುರುಡು ವ್ಯಾಪಾರಿಗಳೆಲ್ಲಾ ನಮ್ಮ ಮನದಲ್ಲಿ ಆಚ್ಚಳಿಯದೆ ಉಳಿಯುತ್ತಾರೆ. ಸಿನಿಮಾದ ಕೊನೆಯಲ್ಲಿ ಬರುವ ದೃಶ್ಯವಂತೂ ನಿಮ್ಮ ಕಣ್ಣನ್ನು ಒದ್ದೆಯಾಗಿಸುತ್ತದೆ. ಹೃದಯವನ್ನು ಭಾರವಾಗಿಸುತ್ತದೆ.
ಇಷ್ಟು ಸಾಕೆನಿಸುತ್ತದೆ. ಇದುವರೆಗೂ ನಾನು ಹೇಳಿದ್ದು ಸಿನಿಮಾದ ಕೆಲವು ತುಣುಕುಗಳಷ್ಟೇ.
ಕೊನೆ ಮಾತು. ಕಾಲಿಗೆ ಹಾಕುವ ಒಂದು ಷೂನಂತ ವಸ್ತುವನ್ನು ಬಳಸಿಕೊಂಡು ತೆಗೆದಿರುವ ಈ ಚಿತ್ರವನ್ನು ನೋಡದಿದ್ದರೆ ಜೀವನದಲ್ಲಿ ಏನೋ ಕಳೆದುಕೊಂಡ ಭಾವನೆ ಉಂಟಾಗುತ್ತದೆ.
೧೯೯೭ ರಲ್ಲಿ ಕೊನೆಯ ಅಂತಿಮ ಘಟ್ಟದಲ್ಲಿ ಅತ್ಯುತ್ತಮ ವಿದೇಶಿ ಚಿತ್ರ ಎನ್ನುವ ಆಸ್ಕರ್ ಪ್ರಶಸ್ತಿಯನ್ನು ಮತ್ತೊಂದು ಇಟಲಿಯ ಚಿತ್ರದಿಂದಾಗಿ ತಪ್ಪಿಸಿಕೊಂಡ ಈ ಚಿತ್ರ ಇಂದಿಗೂ ಮಾಸ್ಟರ್ ಫೀಸ್ ಎನಿಸಿಕೊಂಡಿದೆ. ಇಂಥ ಮಾಸ್ಟರ್ ಪೀಸ್ ಆಗಿರುವ ಚಿತ್ರವನ್ನೇ ಸೋಲಿಸಿ ಆಸ್ಕರ್ ಗೆದ್ದ ಇಟಲಿಯ "Life is beautiful " ಎನ್ನುವ ಮತ್ತೊಂದು ಮಾಸ್ಟರ್ ಪೀಸ್ ಚಿತ್ರದ ಬಗ್ಗೆ ಮುಂದೆಂದಾದರೂ ಬರೆಯುತ್ತೇನೆ.
ಶಿವು.